ನೆನಪಿನಂಗಳದಲ್ಲಿ ನಾಡೋಜ ಗೀತಾ ನಾಗಭೂಷಣ

Update: 2020-07-01 05:49 GMT

ಸಮಾಜದ ಕಟ್ಟಕಡೆಯ ಜನ ಮೇಲೇರಲು ಪ್ರಜಾಪ್ರಭುತ್ವ ಅವಕಾಶಗಳನ್ನು ಕಲ್ಪಿಸುತ್ತದೆ. ಶಿಕ್ಷಣವೆಂಬುದು ಮಾನವನ ಅಭ್ಯು ದಯದ ಸೋಪಾನವಾಗಿದೆ. ಅದರ ಜೊತೆಗೆ ಸಾಹಿತ್ಯ ಮತ್ತು ಕಲಾಪ್ರತಿಭೆ ಇದ್ದರಂತೂ ಯಾವ ಅಡೆತಡೆಗಳಿಲ್ಲದೆ ಮಾನವ ಔನತ್ಯವನ್ನು ಸಾಧಿಸುತ್ತಾನೆ. ಗೀತಾ ಅವರು ಪ್ರಜಾಪ್ರಭುತ್ವದ ವಾತಾವರಣದಲ್ಲಿ ಬೆಳೆದರು. ಶಿಕ್ಷಣ ಪಡೆದರು. ಪ್ರತಿಭಾವಂತರಾಗಿದ್ದು ಸಾಹಿತ್ಯ ರಚನೆ ಮಾಡಿದರು. ಔನತ್ಯವನ್ನು ಸಾಧಿಸಿದರು. ಬಡತನ, ವೈಯಕ್ತಿಕ ಬದುಕಿನಲ್ಲಿ ಆದ ನೋವು ಮತ್ತು ಜಾತಿವ್ಯವಸ್ಥೆಯ ಅಡೆತಡೆಗಳನ್ನು ದಾಟಿ ಅವರು ಮುನ್ನಡೆದರು. ಅವರು ಎಂಥ ಹಿನ್ನೆಲೆಯೊಂದಿಗೆ ಸೆಣಸುತ್ತ ಮುನ್ನಡೆದರು ಎಂಬುದನ್ನು ಅರಿಯುವುದು ನಾಗರಿಕ ಸಮಾಜದಲ್ಲಿ ನಂಬಿಕೆ ಇರುವವರಿಗೆ ಅವಶ್ಯವಾಗಿದೆ.

 ತಂದೆ ಶಾಂತಪ್ಪ(67) ಅವರು ಗುಲ್ಬರ್ಗಾ ತಾಲೂಕಿನ ಸಾವಳಗಿಯವರು. ತಾಯಿ ಶರಣಮ್ಮನ (84) ತವರುಮನೆ ಗುಲ್ಬರ್ಗಾ ತಾಲೂಕಿನ ಭೀಮಳ್ಳಿ. ಗೀತಾ ಅವರು 1942ನೇ ಮಾರ್ಚ್ 25ರಂದು ಭೀಮಳ್ಳಿಯಲ್ಲಿ ಜನಿಸಿದರು. ಅವರ ಮೊದಲ ಹೆಸರು ಶಾಂತಾ ಸಾವಳಗಿ. ತಂದೆ ಶಾಂತಪ್ಪನವರು ಗುಲ್ಬರ್ಗದ ಎಂಎಸ್‌ಕೆ ಮಿಲ್‌ನಲ್ಲಿ ಕಾರ್ಮಿಕರಾಗಿದ್ದರು. ಗೀತಾಳ ತಾಯಿ ಕಷ್ಟಪಟ್ಟು ಮನೆ ನಡೆಸುತ್ತಿದ್ದರು. ಅವರಿಗೆ ಓದಲು ಪುಸ್ತಕಗಳಿರಲಿಲ್ಲ. ಗೆಳತಿಯ ಪುಸ್ತಕಗಳೇ ಆಸರೆಯಾಗಿದ್ದವು. ರಾತ್ರಿ ಓದಬೇಕೆಂದರೆ ಕಂದೀಲು ಕೂಡ ಇರಲಿಲ್ಲ. ಹೊಗೆ ತುಂಬಿದ ಮನೆಯಲ್ಲಿ ಚಿಮಣಿ ಬೆಳಕಲ್ಲೇ ಓದಬೇಕಿತ್ತು.

  ಅವರು ಶಾಲೆಗೆ ಹೋಗುವ ಕಾಲಕ್ಕೆ ಅವರ ತಳವಾರ ಜಾತಿಯ ಗಂಡು ಮಕ್ಕಳು ಕೂಡ ಶಾಲೆಗೆ ಹೋಗುವುದು ಕಠಿಣಸಾಧ್ಯವಾಗಿತ್ತು. ತಂದೆಯ ಗೆಳೆಯ ವೀರಣ್ಣ ಎಂಬ ರಸ್ತೆಯಲ್ಲಿ ಭಜಿ ಮಾರುವ ವ್ಯಕ್ತಿ ಗೀತಾ ಪಾಲಿಗೆ ವೀರಣ್ಣ ಮಾಮಾ ಆಗಿದ್ದ. ಆತ ಒಬ್ಬಂಟಿಯಾಗಿದ್ದ. ಗೀತಾ ಚೆನ್ನಾಗಿ ಓದಬೇಕೆಂಬ ಬಯಕೆ ಆತನದಾಗಿತ್ತು. ಪುಸ್ತಕಗಳನ್ನು ಕೊಡಿಸಿ ಹುರಿದುಂಬಿಸುತ್ತಿದ್ದ. ಗೀತಾ ಆ ವೀರಣ್ಣ ಮಾಮಾನನ್ನು ಹೃದಯತುಂಬಿ ನೆನಪು ಮಾಡಿಕೊಳ್ಳುತ್ತಾರೆ. ನೋವು, ಉದ್ವೇಗ ಮತ್ತು ಒಂಟಿತನದಲ್ಲಿ ಬಹುಪಾಲು ಬದುಕನ್ನು ಕಳೆದ ಗೀತಾ ನಾಗಭೂಷಣ ಅವರು ತಮ್ಮ ಕೃತಿಗಳ ಮೂಲಕ ಸಹೃದಯರಿಗೆ ಸುಖವನ್ನೇ ಹಂಚಿದ್ದಾರೆ. ಗೀತಾ ಇನ್ನೂ ಮಗುವಾಗಿದ್ದಾಗಲೇ ಶಾಂತಪ್ಪನವರು ಹನುಮಂತರಾವ್ ದೇಸಾಯಿ ಮುಂತಾದ ಸ್ವಾತಂತ್ರ್ಯ ಹೋರಾಟಗಾರರ ಪ್ರಭಾವಕ್ಕೆ ಒಳಗಾದರು. ಚಳವಳಿಯಲ್ಲಿ ಧುಮುಕಿದರು. ಸ್ವಾತಂತ್ರ್ಯಕ್ಕಾಗಿ ಹೋರಾಡಿ ಜೈಲು ಸೇರಿದರು. ಆರು ತಿಂಗಳವರೆಗೆ ಜೈಲಿನಲ್ಲಿದ್ದಾಗ ಇತರ ಸ್ವಾತಂತ್ರ್ಯ ಹೋರಾಟಗಾರರು ದೇಶದ ಇತಿಹಾಸ ಮತ್ತು ರಾಮಾಯಣ, ಮಹಾಭಾರತದಂಥ ಮಹಾಕಾವ್ಯಗಳ ಕುರಿತು ಮಾಡುತ್ತಿದ್ದ ಚರ್ಚೆ ಅವರ ಮೇಲೆ ಆಳವಾದ ಪರಿಣಾಮ ಬೀರಿತು. ತಮ್ಮನ್ನು ಮೊದಲುಮಾಡಿ ತಮ್ಮ ಮನೆತನದ ಇತಿಹಾಸದಲ್ಲೇ ಯಾರೊಬ್ಬರೂ ಶಿಕ್ಷಣ ಪಡೆಯದೆ ಇದ್ದುದಕ್ಕೆ ಬೇಸರ ಮಾಡಿಕೊಂಡರು. ಮಗಳು ಗೀತಾಳಿಗೆ ಶಾಲೆಗೆ ಕಳುಹಿಸುವ ನಿರ್ಧಾರ ಮಾಡಿದರು.

 ಜೈಲಿನಿಂದ ಹೊರಬಂದಾಗ ಅವರು ಎಂಎಸ್‌ಕೆ ಮಿಲ್ಲಿನ ಕಾರ್ಮಿಕ ಕೆಲಸ ಕಳೆದುಕೊಂಡಿದ್ದರು. ಸ್ವಾತಂತ್ರ್ಯಕ್ಕಾಗಿ ಜೈಲುವಾಸ ಅನುಭವಿಸಿದ್ದಕ್ಕಾಗಿ ಅವರಿಗೆ ಈ ಸಂಕಟ ಕಾದಿತ್ತು. ಆ ವೇಳೆಗೆ ಗೀತಾಳಿಗೆ ತಂಗಿ ಜನಿಸಿದ್ದಳು. ಬಾಣಂತಿ ತಾಯಿ ಅಸಹಾಯಕಳಾಗಿದ್ದಳು. ಗುಲ್ಬರ್ಗ ನಗರದ ಮಿಲನ್ ಚೌಕ್ ಬಳಿಯ ಮನಸಬದಾರ್ ವಾಡೆಯಲ್ಲಿ ಕುದುರೆ ಕಟ್ಟುವ ಕೋಣೆಯೊಂದನ್ನು ಬಾಡಿಗೆಗೆ ಹಿಡಿದಿದ್ದರು. ಒಂದೇ ಕೋಣೆಯ ಈ ಮನೆಯಲ್ಲಿ ಗೋಣಿ ಚೀಲದಿಂದ ಪಾರ್ಟಿಷನ್ ಮಾಡಲಾಗಿತ್ತು. ಒಂದೇ ಚಿಮಣಿ ಬೆಳಕಿನಲ್ಲಿ ಮನೆಯ ಎಲ್ಲ ಕೆಲಸಗಳೊಂದಿಗೆ ಓದು ಬರಹವೂ ನಡೆಯಬೇಕಿತ್ತು. ಹೀಗೆ ಕಿತ್ತುತಿನ್ನುವ ಬಡತನದಲ್ಲಿ ಗೀತಾಳ ಶಿಕ್ಷಣಗಾಥೆ ಆರಂಭವಾಯಿತು. ತಂದೆ ಗೌಂಡಿ ಕೆಲಸಕ್ಕೆ ಹೋಗತೊಡಗಿದರು. ಫರಸಿಕಲ್ಲುಗಳನ್ನು ಸಾಗಿಸುವ ಕೆಲಸ ಮಾಡುವಾಗ ಕಾಲಮೇಲೆ ಫರಸಿಕಲ್ಲು ಬಿದ್ದು ಕಾಲು ಮುರಿಯಿತು. ಅಮ್ಮ ತರಕಾರಿ ಮಾರುತ್ತ ಗೀತಾಳನ್ನು ಓದಿಸತೊಡಗಿದಳು. ತರಕಾರಿ ಮಾರಿ ಮನೆ ನಡೆಸುವುದು ಅಮ್ಮನಿಗೆ ಅನಿವಾರ್ಯವಾಗಿತ್ತು. ಗುಲ್ಬರ್ಗದ ಚಪ್ಪಲ್ ಬಜಾರ್‌ನಲ್ಲಿ ತರಕಾರಿ ಮಾರಲು ಹೋದ ದಿನ ಅಮ್ಮ ಶರಣಮ್ಮನಿಗೆ ತಕ್ಕಡಿ ಹಿಡಿಯುವುದೂ ಗೊತ್ತಿರಲಿಲ್ಲ ಹಾಗೂ ಹೀಗೂ ಜೀವನ ಸಾಗಿತು. ಗೀತಾ ಅವರು 1960ರಲ್ಲಿ ಮ್ಯಾಟ್ರಿಕ್ (ಎಚ್‌ಎಸ್‌ಸಿ) ಪಾಸಾದರು.

 ಆ ಕಾಲದಲ್ಲಿ ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಹೆಣ್ಣುಮಕ್ಕಳು ಸರಕಾರಿ ಕಚೇರಿಯಲ್ಲಿ ನೌಕರಿ ಮಾಡುತ್ತಿರಲಿಲ್ಲ. ಅದು ಅವರಿಗೆ ಅಪಮಾನದ ವಿಷಯವಾಗಿತ್ತು. ಗೀತಾ ನಾಗಭೂಷಣ ಅವರು ಗುಲ್ಬರ್ಗದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುಮಾಸ್ತೆಯಾಗಿ ನೌಕರಿ ಸೇರುವ ಮೂಲಕ ಈ ಭಾಗದಲ್ಲಿ ನೌಕರಿ ಮಾಡಿದ ಮೊದಲ ಮಹಿಳೆ ಇವರಾಗಿದ್ದಾರೆ.! ನೌಕರಿಗೆ ತೆಗೆದುಕೊಳ್ಳುವುದಕ್ಕಾಗಿ ನಡೆದ ಸಂದರ್ಶನದಲ್ಲಿ ಅವರಿಗೆ ಯಾವುದೇ ಪ್ರಶ್ನೆ ಕೇಳಲಿಲ್ಲ. ನೌಕರಿ ಸೇರಿದ ಮೇಲೆ ಅನೇಕ ಸಹೋದ್ಯೋಗಿಗಳು ಅವರನ್ನು ಕುಹಕತನದಿಂದ ನೋಡುತ್ತಿದ್ದರು. ಅವರು ಕಚೇರಿಗೆ ಹೋದ ಸಂದರ್ಭದಲ್ಲಿ ಹೊಸ ಬಟ್ಟೆಯೂ ಇರಲಿಲ್ಲ. ಕಾಲಲ್ಲಿ ಚಪ್ಪಲಿಯೂ ಇರಲಿಲ್ಲ. ಅಮ್ಮನ ಹಳೆಯ ಸೀರೆಯನ್ನೇ ಉಟ್ಟುಕೊಂಡು ಹೋಗಿದ್ದರು. ಮೊದಲ ಸಂಬಳವಾದ 80 ರೂಪಾಯಿಯ ಕನಸು ಕಾಣುತ್ತಿದ್ದರು. ಸಂಬಳ ಬಂದ ಕೂಡಲೇ ಸೀರೆ ಅಂಗಡಿಗೆ ಹೋಗಿ ಕೆಂಪು ಅಂಚಿನ ಬಿಳಿಸೀರೆ ಕೊಂಡರು. ಆದರೆ ಮೊದಲ ಒಗೆತಕ್ಕೇ ಅಂಚಿನ ಕೆಂಪು ಬಣ್ಣ ಬಿಟ್ಟು ಬಿಳಿ ಸೀರೆಗೆ ಅಂಟಿಕೊಂಡಿತು. ಅನಿವಾರ್ಯವಾಗಿ ಕಚೇರಿಗೆ ಹೋಗುವಾಗ ಅದೇ ಸೀರೆಯನ್ನು ಬಳಸಬೇಕಾಯಿತು. ಹರಕು ಪಾಠೀ ಚೀಲ ಮತ್ತು ಹರಕು ಪರಕಾರದಲ್ಲೇ ಮ್ಯಾಟ್ರಿಕ್ ಪಾಸಾದ ಗೀತಾ ಕಚೇರಿಯಲ್ಲಿ ಇನ್ನೊಂದು ರೀತಿಯ ಮುಜುಗರ ಅನುಭವಿಸಬೇಕಾಯಿತು. ಸಹೋದ್ಯೋಗಿಗಳ ಕುಹಕ ಮಾತುಗಳಿಗೆ ತಲೆಕೆಡಿಸಿಕೊಳ್ಳದೆ ಅವರು ತಮ್ಮ ಕಚೇರಿ ಕೆಲಸದಲ್ಲಿ ನಿರತರಾಗಿರುತ್ತಿದ್ದರು.

ಪೇಷಕರ್ (ವಿಭಾಗದ ಮುಖ್ಯಸ್ಥ) ಬಸವಲಿಂಗಪ್ಪ ಸಾತ್ವಿಕ ವ್ಯಕ್ತಿಯಾಗಿದ್ದರು. ಅವರು ಗೀತಾ ಅವರಿಗೆ ಆಸ್ಥೆಯಿಂದ ಕೆಲಸ ಕಲಿಸಿದರು. ಆಗ ಕಚೇರಿ ವ್ಯವಹಾರವೆಲ್ಲ ಇಂಗ್ಲಿಷ್‌ನಲ್ಲಿತ್ತು. ಕನ್ನಡ ಆಡಳಿತ ಭಾಷೆಯಾಗಬೇಕೆಂಬ ಕಲ್ಪನೆ ಕೂಡ ಈ ಭಾಗದವರಿಗೆ ಇದ್ದಿದ್ದಿಲ್ಲ. ಆ ಸಂದರ್ಭದಲ್ಲಿ ಗೀತಾ ಅವರು ಕನ್ನಡದಲ್ಲಿ ಕಚೇರಿ ಕೆಲಸಕ್ಕೆ ಸಂಬಂಧಿಸಿದ ಕರಡುಪ್ರತಿಯೊಂದನ್ನು ತಯಾರಿಸಿ ಜಿಲ್ಲಾಧಿಕಾರಿ ಐ.ಪಿ. ಮಲ್ಲಪ್ಪನವರಿಗೆ ಕಳುಹಿಸಿದರು. ಕನ್ನಡ ಪ್ರೇಮಿ ಮಲ್ಲಪ್ಪನವರು ಗೀತಾ ಅವರನ್ನು ಕರೆಸಿ ಶ್ಲಾಘಿಸಿದರು. ಈ ಶ್ಲಾಘನೆ ಗೀತಾ ಅವರ ಬದುಕಿನ ಸುಂದರ ಕ್ಷಣಗಳಲ್ಲೊಂದಾಗಿದೆ. ನೋವಿನ ಗಾಥೆ

 ಗೀತಾ ನಾಗಭೂಷಣ ಅವರು ನೌಕರಿ ಮಾಡುತ್ತಲೇ 1964ರಲ್ಲಿ ಕಾಲೇಜು ಶಿಕ್ಷಣ ಮುಗಿಸಿದರು. ಶರಣಬಸವೇಶ್ವರ ವಿದ್ಯಾಸಂಸ್ಥೆಯ ಮಹಾದೇವಿ ಕನ್ಯಾಶಾಲೆಯಲ್ಲಿ ಕನ್ನಡ ಶಿಕ್ಷಕಿಯಾಗಿ ಸೇರಿಕೊಂಡರು. 1966ರಲ್ಲಿ ಮ್ಯಾಟ್ರಿಕ್ ಫೇಲಾದ ಸ್ವಜಾತಿ ವ್ಯಕ್ತಿಯೊಬ್ಬನ ಜೊತೆ ಮದುವೆಯಾಯಿತು. 1969ರಲ್ಲಿ ವಿವಾಹ ವಿಚ್ಛೇದನವಾಯಿತು. ಈ ಇಜ್ಜೋಡಿನ ಬದುಕಿನಿಂದ ಬಿಡುಗಡೆಯಾಗುವುದು ಗೀತಾ ಅವರಿಗೆ ಅನಿವಾರ್ಯವಾಗಿತ್ತು. ಆದರೆ ಮನೆಯವರು ಇದಕ್ಕೆ ವಿರೋಧವಾಗಿದ್ದರು. ಕಥೆ ಬರೆಯುವವರ ಬದುಕು ಕಥೆಯಂತೆಯೆ ಆಗುವುದು ಎಂಬುದು ಅವರ ತಾಯಿಯ ಅಚಲ ನಂಬಿಕೆಯಾಗಿತ್ತು. ತಮ್ಮ ಕುಲದೇವತೆ ಮಾಪುರ ತಾಯಿಯ ವಿರುದ್ಧ ಬರೆದ ಕಾರಣದಿಂದಾಗಿಯೆ ಮಗಳು ಗೀತಾಳಿಗೆ ಇಂಥ ಸಂದರ್ಭ ಬಂದೊದಗಿತು ಎಂದು ತಾಯಿ ಶರಣಮ್ಮ ಹೇಳುತ್ತಿದ್ದರು. ನಮ್ಮ ತಳವಾರ ಜಾತಿಯಲ್ಲಿ ಕಲಿತವರು ಸಿಗುವುದಿಲ್ಲ. ಮಗಳಿಗೆ ಶಿಕ್ಷಣ ಬೇಡ ಎಂದು ತಾಯಿ ಎಷ್ಟೇ ಹೇಳುತ್ತಿದ್ದರೂ ತಂದೆ ಮಾತ್ರ ಮಗಳು ಕಲಿಯಬೇಕೆಂದು ಬಯಸುತ್ತಿದ್ದರು. ‘ಸಾಲಿ ಕಲಿಯಾಕ್ ನೀ ಎನ್ ಬ್ರಾಹ್ಮಣರಕಿ ಏನು’ ಎಂದು ತಾಯಿ ಪ್ರಶ್ನಿಸುತ್ತಿದ್ದಳು. ತಂದೆಯ ಪ್ರೊತ್ಸಾಹ ಮಾತ್ರ ಇದ್ದೇ ಇತ್ತು. ಗೀತಾ ಅವರು ಶಾಲಾ ಶಿಕ್ಷಕಿಯಾಗಿಯೇ ಬಿ.ಎಡ್. ಅನ್ನೂ ಮುಗಿಸಿದರು. ನಂತರ ಕನ್ನಡ ಎಂ.ಎ. ಪದವಿ ಗಳಿಸಿದರು. ಗುಲ್ಬರ್ಗದ ನಗರೇಶ್ವರ ಪದವಿಪೂರ್ವ ಕಾಲೇಜಿನಲ್ಲಿ ಪ್ರಿನ್ಸಿಪಾಲ್ ಆಗಿ ನಿವೃತ್ತರಾದರು. ಗೀತಾ ಅವರು ಬಾಲ್ಯದಿಂದಲೂ ಬದುಕಿನ ಬಹುಭಾಗವನ್ನು ಗುಲ್ಬರ್ಗದಲ್ಲೇ ಕಳೆದಿದ್ದಾರೆ.

 ಗೀತಾ ಅವರು ಹೆಣ್ಣಿನ ಶೋಷಣೆಯ ವಿರುದ್ಧ ಕಾದಂಬರಿ ಬರೆದಾಗಲೆಲ್ಲ ತಾಯಿ ಶರಣಮ್ಮ ಮಗಳ ತಪ್ಪು ಕ್ಷಮಿಸೆಂದು ಮಾಪುರ ತಾಯಿಗೆ ಹರಕೆ ಹೊರುತ್ತಿದ್ದಳು. ಮಗಳಿಗೆ ಏನೂ ಆಗಬಾರದೆಂದು ಉಪವಾಸ ವ್ರತ ಆಚರಿಸುತ್ತಿದ್ದಳು! ಆದರೆ ತಾಯಿಯ ತಂದೆ ಶಿವಪ್ಪ ಜಮಾದಾರಗೆ ಮೊಮ್ಮಗಳ ಬಗ್ಗೆ ಭಾರಿ ಅಭಿಮಾನವಿತ್ತು. ನಮ್ಮ ವಂಶದಲ್ಲೇ ಯಾರೂ ಶಾಲೆಗೆ ಹೋಗಿಲ್ಲ. ಮೊಮ್ಮಗಳು ಛಲೊ ಕಲೀಲಿ ಎಂದು ಹುರಿದುಂಬಿಸುತ್ತಿದ್ದ.

Writer - ರಂಜಾನ್ ದರ್ಗಾ

contributor

Editor - ರಂಜಾನ್ ದರ್ಗಾ

contributor

Similar News