ಪೊಲೀಸ್ ಸ್ಟೇಶನ್ ನಲ್ಲೇ ಕೊರೋನ ಪರೀಕ್ಷೆ.....!

Update: 2020-07-04 18:16 GMT

‘‘ಕರ್ಫ್ಯೂ ಹೊತ್ತಿನಲ್ಲಿ ಸುತ್ತಾಡಬಾರದು ಅಂತ ತಾನೆ ಸರಕಾರ ಆದೇಶ ಮಾಡಿರುವುದು...?’’ ಸಾಹೇಬರು ಜೋರಾಗಿ ಕೇಳಿದರು.

‘‘ಅದು ಮನುಷ್ಯರಿಗೆ ಸಾರ್...ನನಗಲ್ಲ....’’

‘‘ನಿನಗಲ್ಲ ಅಂದ್ರೆ....ಏನು ನಿನ್ನ ಹೆಸರು...ನಿನ್ನ ಊರು ಯಾವುದು...?’’ ಸಾಹೇಬರು ಈಗ ಸಿಟ್ಟಾಗಿ ಕೇಳಿದರು.

ರಾತ್ರಿ ಹತ್ತು ಗಂಟೆಯ ಹೊತ್ತಿಗೆ ನಗರದ ರಸ್ತೆಯಲ್ಲಿ ಒಬ್ಬಂಟಿಯಾಗಿ ತಿರುಗಾಡುತ್ತಿದ್ದ ದಡೂತಿಯನ್ನು ಕಂಡದ್ದೇ ಪೊಲೀಸಪ್ಪನಿಗೆ ಸಿಟ್ಟು ಎದ್ದೆದ್ದು ಕುಣಿಯಿತು. ಲಾಠಿ ತಕದಿಮಿ ಎಂದು ನರ್ತಿಸತೊಡಗಿತು. ‘‘ನಡಿ ಪೊಲೀಸ್ ಸ್ಟೇಶನ್‌ಗೆ....’’ ಎಂದು ದಡೂತಿಯನ್ನು ದರದರನೇ ಸ್ಟೇಶನ್‌ಗೆ ಎಳೆದೊಯ್ದ.

ಅಲ್ಲಿ ಸಾಹೇಬರು ಸಾಮಾಜಿಕ ಅಂತರ ಕಾಯ್ದುಕೊಂಡೇ, ಒಬ್ಬನಿಗೆ ಏರೋಪ್ಲೇನ್ ಎತ್ತುತ್ತಿದ್ದರು.

‘‘ಸಾರ್...ಈತ ಕರ್ಫ್ಯೂ ಇದ್ದರೂ ನಗರದಲ್ಲಿ ರಾತ್ರಿ ಒಬ್ಬನೇ ನಡೆದುಕೊಂಡು ಹೋಗುತ್ತಿದ್ದ....’’ ಪೊಲೀಸಪ್ಪ ಕೂಗಿ ಹೇಳಿದ.

ಸಾಹೇಬರು ಏರೋಪ್ಲೇನ್‌ನಿಂದ ಕೆಳಗಿಳಿದು ಬಂದು, ಪೊಲೀಸಪ್ಪನ ಪಕ್ಕ ನಿಂತ ದಡೂತಿಯನ್ನು ಮೇಲೆ ಕೆಳಗೆ ನೋಡಿ ಕೇಳಿದರು ‘‘ಮಾಸ್ಕ್ ಎಲ್ಲಿ....’’

‘‘ಯಾವ ಮಾಸ್ಕ್ ಸಾರ್?’’ ದಡೂತಿ ಕೇಳಿದ.

ಯಾವುದೇ ಅನ್ಯಗ್ರಹದ ಜೀವಿ ಇರಬಹುದೇ? ಎಂದು ಸಾಹೇಬರು ‘‘ಏನೋ...ತಮಾಷೆ ಮಾಡುತ್ತೀಯ?’’ ಎಂದು ಲಾಠಿ ಬೀಸಿದರು.

ದಡೂತಿ ಅಯ್ಯಯ್ಯೋ ಎನ್ನುತ್ತಾ ‘‘ಸಾರ್...ನನಗೆ ಮಾಸ್ಕ್ ಕಟ್ಕೊಳ್ಳೋ ಅಭ್ಯಾಸ ಇಲ್ಲ ...’’ ಎಂದು ಬಿಟ್ಟ.

‘‘ಸರಿ, ಠಾಣೆ ಒಳಗೆ ಬರೋವಾಗ ಸ್ಯಾನಿಟೈಸರ್ ಹಚ್ಕೊಂಡಿದ್ದೀಯಾ?’’ ಸಾಹೇಬರು ಕೇಳಿದರು.

‘‘ಯಾರೂ ಕೊಡಲೇ ಇಲ್ಲ....ಸ್ಯಾನಿಟೈಸರ್...’’ ದಡೂತಿ ಉತ್ತರಿಸಿದ.

‘‘ಸ್ಯಾನಿಟೈಸರ್‌ನ್ನು ನೀವೇ ನಿನ್ನೆ ವಿಸ್ಕಿಗೆ ಮಿಕ್ಸ್ ಮಾಡಿ ಕುಡಿದು ಬಿಟ್ರಲ್ಲ ಸಾರ್....’’ ಪೊಲೀಸಪ್ಪ ಸಾಹೇಬರಿಗೆ ನೆನಪಿಸಿದ.

ಸಾಹೇಬರು ಗಡ್ಡ ತುರಿಸುತ್ತಾ ‘‘ರಾತ್ರಿ ಎಂಟು ಗಂಟೆ ಬಳಿಕ ನಗರದಲ್ಲಿ ಸುತ್ತಾಡಬಾರದು ಎನ್ನುವುದು ಗೊತ್ತಿಲ್ವಾ?’’

‘‘ಯಾಕೆ ಸಾರ್ ಸುತ್ತಾಡಬಾರದು?’’

‘‘ರಾತ್ರಿ ಕರ್ಫ್ಯೂ ವಿಧಿಸಿದ್ದಾರೆ....’’

‘‘ಯಾಕೆ ಸಾರ್? ಕೋಮುಗಲಭೆನಾ ?’’ ದಡೂತಿ ಕೇಳಿದ.

‘‘ಕೊರೋನ ಕಣ್ರೀ...ಕೊರೋನ....’’ ಸಾಹೇಬರು ಜೋರಾಗಿ ಕೂಗಿ ಹೇಳಿದರು.

‘‘ಕರ್ಫ್ಯೂ ಘೋಷಿಸಿದರೆ ಕೊರೋನ ಬರಲ್ಲವಾ ಸಾರ್...’’ ದಡೂತಿ ಪ್ರಶ್ನಿಸಿದ.

‘‘ಕೊರೋನ ಮಾತ್ರ ಅಲ್ಲ ಅದರಪ್ಪಾನೂ ಬರಬಾರದು...’’

‘‘ನೀವು ಕರ್ಫ್ಯೂ ಘೋಷಿಸಿರೋದು ಕೊರೋನಕ್ಕೆ ಗೊತ್ತಾ ಸಾರ್?’’ ದಡೂತಿ ಮತ್ತೆ ಪ್ರಶ್ನೆ ಹಾಕಿದ.

‘‘ನಿಲ್ಲಿಸಿರಿ ನಿಮ್ಮ ತಲೆಹರಟೆ. ಯಾವುದ್ರಿ ನಿಮ್ಮ ಧರ್ಮ?’’ ಸಾಹೇಬರು ಕೇಳಿದರು.

‘‘ಧರ್ಮ ಯಾಕೆ ಸಾರ್?’’ ದಡೂತಿ ಅರ್ಥವಾಗದೆ ಕೇಳಿದ.

‘‘ನೋಡ್ರಿ...ಆಯಾ ಜನರ ಧರ್ಮ ನೋಡಿ ನಿಮ್ಮಲ್ಲಿ ಕೊರೋನ ಇದೆಯಾ, ಇಲ್ಲವಾ ಎಂದು ಘೋಷಿಸಲಾಗುತ್ತದೆ....’’ ಸಾಹೇಬರು ವಿವರಿಸಿದರು. ‘‘ಕೊರೋನ ಇದೆಯಾ ಇಲ್ಲವೋ ಎನ್ನುವುದನ್ನು ಪರೀಕ್ಷೆ ಮಾಡುವುದು ಆಸ್ಪತ್ರೆಯಲ್ಲಿ ಅಲ್ವಾ ಸಾರ್?’’ ದಡೂತಿ ಕೇಳಿದ.

‘‘ಅದೆಲ್ಲ ಬೇರೆ ದೇಶಗಳಲ್ಲಿ. ನಮ್ಮ ದೇಶದಲ್ಲಿ ಕೊರೋನ ಪರೀಕ್ಷೆ ಮಾಡುವುದೇ ಪೊಲೀಸ್ ಸ್ಟೇಶನ್‌ನಲ್ಲಿ...’’ ಸಾಹೇಬರು ಹೇಳಿದರು.

‘‘ಅದಕ್ಕೆಲ್ಲ ಲ್ಯಾಬ್‌ಗಳು ಬೇಕಲ್ಲ ಸಾರ್?’’

‘‘ಅದೆಲ್ಲ ಬೇಕಾಗಿಲ್ಲ. ಏರೋಪ್ಲೇನ್ ಹತ್ತಿಸಿ ನಾಲ್ಕು ಬಾರಿ ತಿರುಗಿಸಿದರೆ ಆರೋಪಿ ತನಗೆ ಕೊರೋನ ಇದೆಯೋ ಇಲ್ಲವೋ ಎನ್ನುವುದನ್ನು ಒಪ್ಕೋತಾನೆ. ನೋಡಿ ಅಲ್ಲಿ...ಮೇಲೆ...ಮೊದಲು ಕೇಳಿದಾಗ ಕೊರೋನ ಇಲ್ಲ ಎಂದ. ಏರೋಪ್ಲೇನ್ ಹತ್ತಿಸಿದ ಬಳಿಕ ಕೊರೋನ ಮಾತ್ರ ಅಲ್ಲ, ಕ್ಯಾನ್ಸರ್, ಟಿಬಿ, ಮಲೇರಿಯಾ, ಡೆಂಗಿ ಎಲ್ಲ ಇದೆ ಎನ್ನುವುದನ್ನು ಒಪ್ಪಿಕೊಂಡಿದ್ದಾನೆ....ಹೇಳಿ ನಿಮ್ಮ ಧರ್ಮ ಯಾವುದು?’’ ಸಾಹೇಬರು ಕೇಳಿದರು.

‘‘ಮಾನವ ಧರ್ಮ ಸಾರ್’’ ದಡೂತಿ ಹೇಳಿದ.

‘‘ಅದ್ಯಾವುದ್ರೀ ಮಾನವ ಧರ್ಮ...’’ ಸಾಹೇಬರು ಅರ್ಥವಾಗದೆ ಪ್ರಶ್ನಿಸಿದರು.

‘‘ಉಳಿದ ಧರ್ಮಗಳಲ್ಲಿ ಮಾನ ಇಲ್ಲ ಸಾರ್. ಇದರಲ್ಲಿ ಮಾನ ಇದೆ...’’ ದಡೂತಿ ವಿವರಿಸಿದ.

‘‘ಏನ್ರೀ ಇವನದು ಮಾನವ ಧರ್ಮ ಅಂತೆ?’’ ಸಾಹೇಬರು ಅರ್ಥವಾಗದೆ ಪೊಲೀಸಪ್ಪನನ್ನು ನೋಡಿದರು.

‘‘ಬಹುಶಃ ನಗರ ನಕ್ಸಲ ಇರಬೇಕು ಸಾರ್...ಧರ್ಮದ ಬಗ್ಗೆ ವಿಚಾರಿಸಿದರೆ ಅವರೆಲ್ಲ ಹಿಂಗೇನೇ ಉತ್ತರಿಸುವುದು...’’ ಪೊಲೀಸಪ್ಪ ಸಾಹೇಬರಿಗೆ ಹೇಳಿದ.

‘‘ಓಹೋ ಅದಕ್ಕೆ....ಕರ್ಫ್ಯೂ ಉಲ್ಲಂಘಿಸಿ ಒಬ್ಬನೇ ಸುತ್ತಾಡುತ್ತಿರುವುದು....’’ ಸಾಹೇಬರು ಕಾಲಿನಿಂದ ಮೇಲಿನವರೆಗೆ ದಡೂತಿಯನ್ನು ದಿಟ್ಟಿಸಿದರು.

‘‘ಜಾತಿ ಮತ, ಧರ್ಮ ಮೀರಿದವರು ನಾವು ಸಾರ್....’’ ದಡೂತಿ ಹೇಳಿದ.

‘‘ಓಹೋ....ಅಂಗಾದ್ರೆ ಪ್ಯೂರ್ ನಕ್ಸಲ್ ಸಾರ್...ಕಾಡಿನಿಂದ ದಾರಿ ತಪ್ಪಿ ಬಂದಿದ್ದಾನೆ....’’ ಪೊಲೀಸಪ್ಪ ಆತಂಕದಿಂದ ಹೇಳಿದ.

‘‘ಹಾಗೇನಿಲ್ಲ ಸಾರ್....ಕರ್ಫ್ಯೂ ಸಮಯದಲ್ಲಿ ಮಾತ್ರ ಸುತ್ತಾಡಬೇಕು ಎಂದು ಸರಕಾರದ ಆದೇಶ ಇದೆ ಸಾರ್...ಅದಕ್ಕೆ ಎಂಟು ಗಂಟೆಯ ಬಳಿಕ ಓಡಾಡುತ್ತಿದ್ದೇನೆ....’’ ದಡೂತಿ ಹೇಳಿದ.

‘‘ಕರ್ಫ್ಯೂ ಹೊತ್ತಿನಲ್ಲಿ ಸುತ್ತಾಡಬಾರದು ಅಂತ ತಾನೆ ಸರಕಾರ ಆದೇಶ ಮಾಡಿರುವುದು...’’ ಸಾಹೇಬರು ಜೋರಾಗಿ ಕೇಳಿದರು.

‘‘ಅದು ಮನುಷ್ಯರಿಗೆ ಸಾರ್...ನನಗಲ್ಲ....’’

‘‘ನಿನಗಲ್ಲ ಅಂದ್ರೆ....ಏನು ನಿನ್ನ ಹೆಸರು...ನಿನ್ನ ಊರು ಯಾವುದು...?’’ ಸಾಹೇಬರು ಈಗ ಸಿಟ್ಟಾದರು.

‘‘ನನ್ನ ಊರು ಚೀನಾ ಸಾರ್...ಹೆಸರು ಕೊರೋನ ಸಾರ್...’’ ಎನ್ನುತ್ತಾ ದಡೂತಿ ಅಸಾಮಿ ತಟ್ಟನೆ ತನ್ನ ಮೈಯಲ್ಲಿರುವ ಮುಳ್ಳನ್ನೆಲ್ಲ ಹೊರಚಾಚಿ ಹಸಿರು ಹಲ್ಲನ್ನು ಕಿಸಿಯ ತೊಡಗಿದ.

ಸಾಹೇಬರು, ಪೊಲೀಸಪ್ಪ ಬಿದ್ದೆನೋ....ಸತ್ತೆನೋ ಎಂದು ಅಲ್ಲಿಂದ ಓಡ ತೊಡಗಿದರು. ದಡೂತಿ ಅಸಾಮಿ ‘‘ಸಾರ್...ನಿಲ್ಲಿ ಸಾರ್....ಶೇಕ್ ಹ್ಯಾಂಡ್ ಕೊಡಿ ಸಾರ್....’’ ಎನ್ನುತ್ತಾ ಅವರ ಹಿಂದೆ ಓಡತೊಡಗಿದ.

Writer - ಚೇಳಯ್ಯ

contributor

Editor - ಚೇಳಯ್ಯ

contributor

Similar News