‘ಕಂಡಷ್ಟು ಕಡೆದಷ್ಟು’: ವಿಷಾದವೇ ಬಿಕ್ಕುವಷ್ಟು ಆರ್ತವಾಗಿ ಕಟ್ಟಿಕೊಟ್ಟ ಪಾತ್ರಗಳು

Update: 2020-07-18 19:30 GMT

 ಕೆ.ಪಿ ಸುರೇಶ ಅವರ ‘ಕಂಡಷ್ಟು ಕಡೆದಷ್ಟು’ ಎಂಬ ಕಾವ್ಯರೂಪಿ ಪ್ರಬಂಧಗಳ ಕೃತಿ ಪ್ರಕಟವಾಗಿದ್ದು ಈ ಕೃತಿಯಲ್ಲಿ ಅನಾಮಿಕ ಸಜೀವ ವ್ಯಕ್ತಿಗಳ ನೆನಪುಗತೆಗಳಿವೆ. ಈ ಪುಸ್ತಕದ ಅರ್ಪಣೆ ‘‘ಜೀವ ಪ್ರೀತಿಯ ಪಾಠ ಹೇಳುವ ಗ್ರಾಮ ಭಾರತದ ನನ್ನ ಸಹಜೀವಿಗಳಿಗೆ’’ ಎಂದಿದೆ. ಸಂಕಥನದ ಕವಿ ರಾಜೇಂದ್ರ ಪ್ರಸಾದ್ ಇದನ್ನು ಪ್ರಕಟಿಸಿದ್ದಾರೆ.
 
 ಕೆ.ಪಿ ಸುರೇಶ ನಮ್ಮ ಕಾಲದ ಸೂಕ್ಷ್ಮ ಮನಸ್ಸಿನ ಕನ್ನಡಿ. ಈ ಕನ್ನಡಿಯ ಹಿಡಿತದಿಂದ ಯಾರೂ, ಯಾವುದೂ ತಪ್ಪಿಸಿಕೊಳ್ಳಲಾಗದು. ಪಂಪನಿಂದ ದೇವನೂರರವರೆಗೆ ಅನೇಕರು ನಾಡಿನ ಕನ್ನಡಿಗಳಂತೆ ಕೆಲಸ ಮಾಡಿದ್ದಾರೆ. ಇಂಥ ಅಪಾರ ಶಕ್ತಿಯಿರುವ ಕೆ.ಪಿ. ಸುರೇಶರು ಕನ್ನಡಿಯಲ್ಲಿ ಕರಗಿದ್ದನ್ನು ಅಚ್ಚುಹಾಕಿ ಇನ್ನೂ ದೊಡ್ಡದಾದುದನ್ನು ಸೃಷ್ಟಿಸಬೇಕು. ಬದುಕಿನ ಸವಾಲುಗಳಿಗೆ ಮೈ ತೆತ್ತುಕೊಂಡು ಹೊಡೆತಗಳಿಗೆ ಸಿಲುಕಿ ಹೈರಾಣಾಗಿರುವುದರಿಂದಲೋ ಏನೋ ಆ ಸಾಹಸ ಮಾಡುತ್ತಿಲ್ಲ. ಇದರಿಂದಾಗಿ ನಾಡನ್ನು ಬಿಂಬಿಸಬಹುದಾದ ದೊಡ್ಡ ಸಾಧ್ಯತೆ ತಪ್ಪಿಸಿಕೊಂಡು ಹೋಗುತ್ತಿದೆ ಎಂಬ ಅರ್ಥದಲ್ಲಿ ರಹಮತ್ ತರೀಕೆರೆಯವರು ಮುನ್ನುಡಿಯಲ್ಲಿ ಪ್ರಸ್ತಾಪಿಸಿದ್ದಾರೆ.

ಕೆ.ಪಿ ಸುರೇಶ ಈ ಬರಹದ ಹಿಂದಿನ ಒತ್ತಾಯವನ್ನು ‘‘ಈ ಜೀವನಕ್ಕೊಂದು ಅರ್ಥ ದೊರಕುವುದು ನಿರಂತರ ಅನುಕಂಪೆಯ ಸ್ಪಂದನೆಯಲ್ಲಿ. ನಾಳೆ ತಟಕ್ಕನೆ ಸತ್ತೇ ಹೋದೆನೆಂದುಕೊಳ್ಳಿ... ದುಃಖವೊಂದಕ್ಕೆ ಸ್ಪಂದಿಸದೇ ಹೋದೆ ಎಂಬ ಪಾಪ ಪ್ರಜ್ಞೆ ಕಾಡಬಾರದು..! ತುಂಬಾ ದೇಶ- ಪ್ರದೇಶ ಸುತ್ತಬೇಕೆಂದು ನನಗೆ ಅನ್ನಿಸಿದ್ದಿಲ್ಲ. ಪ್ರವಾಸಿ ತಾಣಗಳೂ ನನ್ನನ್ನು ವಿಶೇಷ ಆಕರ್ಷಿಸಿದ್ದಿಲ್ಲ. ಆದರೆ ನಮ್ಮ ಹಳ್ಳಿಗಳೇ ಅಪರಿಚಿತ ವಿದೇಶವೆಂದು ಅನ್ನಿಸಿ ಚುಚ್ಚಿದ್ದಿದೆ... ಈ ಲೋಕವನ್ನು ನೆನಪಿಸಿಕೊಂಡಾಗ ಅಯಾಚಿತವಾಗಿ ಕಣ್ಣೀರು ಜಿನುಗುವುದಿದೆ’’ ಎಂದು ದಾಖಲಿಸಿದ್ದಾರೆ. ಕುರುಕ್ಷೇತ್ರ ಯುದ್ಧದ ಹಿಂದೆ ಖಡ್ಗಗಳಿಗೆ ಸಾಣೆ ಹಿಡಿದವರು, ಬಟ್ಟೆ ತೊಳೆದವರು, ನೀರು ಹೊತ್ತವರು, ಕೂಳು ಬೇಯಿಸಿದವರು, ಚರ್ಮದ ಕವಚ ಮಾಡಿದವರು, ರಥದ ಚಕ್ರಗಳಿಗೆ ಕಡಾಣಿ ಮಾಡಿದವರು ದಾಖಲಾಗುವುದಿಲ್ಲ.

ಮಹಾಕಾವ್ಯಗಳ ಕ್ಯಾನ್ವಾಸಿನಲ್ಲಿ ದಾಖಲಾಗುವುದು ಸಾಮಾನ್ಯವಾಗಿ ದೊಡ್ಡ ಮನುಷ್ಯರೆನ್ನಿಸಿಕೊಂಡವರೇ! ಕೆಲವು ಕಡೆ ಅಪವಾದಗಳಿಲ್ಲವೆಂತಲ್ಲ. ಇತಿಹಾಸಕಾರರ ಕಣ್ಣೂ ಸಹ ಬಹುಪಾಲು ಸಾರಿ ಆಳುವವರ ಮೇಲೇ ನೆಟ್ಟಿರುತ್ತದೆ. ಇದನ್ನು ಮುರಿಯುವ ಕೆಲಸವನ್ನು ಸಾಹಿತ್ಯವು ಮಾಡಿದೆ. ಬೆವರ ಮೂಲದ ವಚನಕಾರರು ಬೆಳ್ಗೊಡೆ, ರತ್ನಖಚಿತ ಸಿಂಹಾಸನಗಳ ವರ್ಣನೆಗಳಿಂದ ಆಚೆ ಬಂದರು. ನಂತರ ಇದೊಂದು ಪರಂಪರೆಯಾಯಿತು. ಕೆ.ಪಿ. ಸುರೇಶ ಇದನ್ನು ಇನ್ನಷ್ಟು ತೀವ್ರಗೊಳಿಸಲು ಪ್ರಯತ್ನಿಸಿದ್ದಾರೆ. ಸಾಮಾನ್ಯರ ಬದುಕಿನ ದುರಂತಗಳ ಕುರಿತು ವಿಷಾದವೇ ಬಿಕ್ಕುವಷ್ಟು ಆರ್ತವಾಗಿ ಪಾತ್ರಗಳನ್ನು ಕಟ್ಟಿ ಬೆಳೆಸಿದ್ದಾರೆ.

ಆಧುನಿಕತೆಯ ಅಬ್ಬರದಲ್ಲಿ ಮರಗಳಿಲ್ಲದೆ ನೆಲೆ ತಪ್ಪಿ ಹೋದ ದೆವ್ವಗಳೂ ಸೇರಿದಂತೆ ಎಲ್ಲ ಪಾತ್ರಗಳೂ ಓದುಗರನ್ನು ಹಿಂಡುತ್ತವೆ. ಆಧುನಿಕತೆಗೆ ಎದುರಾಗಿ ಪರಂಪರೆಯನ್ನೇನೂ ಇವರು ನಿಲ್ಲಿಸುವುದಿಲ್ಲ. ನೋಸ್ಟಾಲ್ಜಿಯಾವನ್ನು ಆತ್ಮವಂಚನೆ ಎಂದು ಭಾವಿಸಿ ಬರವಣಿಗೆ ಮಾಡಿದ ಪೈಕಿ ಕೆ.ಪಿ. ಸುರೇಶ ಕೂಡ ಒಬ್ಬರು. ತೇಜಸ್ವಿ, ದೇವನೂರರು ಸಹ ನೆನಪುಗಳನ್ನು ಹೀಗೆ ಭಾವಿಸಿದ್ದಾರೆ.

ಮನುಷ್ಯನ ಚರಿತ್ರೆಯಲ್ಲಿ ಪರಿಸರದ ನೆನಪುಗಳು ಮಾತ್ರ ಹೆಚ್ಚು ಸೆಕ್ಯುಲರ್ ಆದವು. ಮನುಷ್ಯನೊಳಗೆ ವಿವೇಕದ ಬೆಳಕು ಹಚ್ಚಲು ಬೇಕಾದ ಎಣ್ಣೆ ಅದು. ನಿಸರ್ಗದ ನೆನಪುಗಳು ಸುಳ್ಳು ಎನ್ನಿಸುವುದಿಲ್ಲ. ವಿನಾಶಕರ ವಾಸ್ತವದ ಹಾದಿಯ ಕುರಿತು ತೀವ್ರ ತಕರಾರು ಮಂಡಿಸಲು ಜನ ನೆನಪುಗಳ ಮೊರೆ ಹೋಗುತ್ತಾರೆ. ಈ ಕೃತಿಯ ಶಿವಯ್ಯನೆಂಬ ತೋರುಗಾಣಿಕೆಯ ಬ್ರಾಹ್ಮಣ ಬೇಟೆಗಾರ ಹೇಳುವ ಈ ಮಾತುಗಳು ನಮ್ಮವೂ ಹೌದಾಗುವುದು ಇದೇ ಕಾರಣಕ್ಕೆ.

‘‘ಎಲ್ಲಾ ಮಾಯ ಮಾರಾಯ, ಮನೆವರೆಗೂ ಪೇಟೆ, ಹೆಜ್ಜೆ ಇಡ್ಲಿಕ್ಕೇ ಉದಾಸೀನ. ಬೈಕು, ಆಟೋ.. ಎಂತದೂ ಇಲ್ಲ, ಚಣಿಲು ಬಿಡು, ಮಂಗ ಕಾಣದೇ ಎಷ್ಟೋ ದಿನ ಆಯ್ತು. ಮಳೆಗಾಲದಲ್ಲಿ ಕೆಂಪೇಡಿಯೂ ಇಲ್ಲ. ಒಂದು ಕೇರೆ ಕಂಡರೆ ಪುಣ್ಯ. ಭಾರೀ ಬೇಜಾರಾಗೋದು ಅಂದ್ರೆ ಹಂದಿಯೂ ಇಲ್ಲ. ಆಟಿ ಕಳೆದು ಹಂದಿ ಗೊಬ್ಬರ ಕೆದಕಿ ರಂಪ ಮಾಡದಿದ್ರೆ ಅದೆಂತ ತೋಟ.. ಮನುಷ್ಯ ಮುಟ್ಟಿದ್ರೆ ಪ್ರಾಣಿದೂರ ಹೋಗ್ತವಂತೆ. ಎಲ್ಲಾ ಮೆಶೀನ್. ದನ ಹಾಲಿನ ಮೆಶಿನ್ನು, ಅಡಿಕೆ ಮರವೂ ಮೆಶಿನ್ನು.. ನೋಡ್ಲಿಕ್ಕೆ ಹಸಿರು. ಇಲ್ಲಿಂದ್ಲೇ ಗಾಳಿ ಮೂಸು, ಸಿಂಗಾರದ ಪರಿಮಳ ಉಂಟೋ.. ಜೇನೊಕ್ಕಲು ಹಾರೋದು ನೋಡಿ ವರ್ಷವೇ ಆಯ್ತು...’’ ಮೊದಲೇ ಹೇಳಿದ ಹಾಗೆ ಇವು ಕಾವ್ಯರೂಪಿ ಪ್ರಬಂಧಗಳು. ಲಲಿತ ಪ್ರಬಂಧಗಳ ಲಹರಿಗೆ ವಿರುದ್ಧವಾದ ಬರಹದ ಮಾದರಿ ಇದು. ಲಲಿತ ಪ್ರಬಂಧಗಳು ದಡದಾಟದೆ ವಿಶಾಲ ಬಯಲಿನಲ್ಲಿ ಹರಿವ ಗಂಗೆ, ಕೃಷ್ಣೆಯರ ಹಾಗೆ. ಕೆ.ಪಿ ಸುರೇಶರ ಪ್ರಬಂಧಗಳು ಮೇಕೆದಾಟಿನಲ್ಲಿ ಹರಿವ ಕಾವೇರಿಯ ಹಾಗೆ. ರಭಸ, ಒತ್ತಡ, ಸಂಕಟ ಎಲ್ಲವೂ ಹಾಗೆಯೇ. ಹನಿಯೊಂದು ಎಲೆಯಿಂದ ಹನಿಹನಿಯಾಗಿ ತೊಟ್ಟಿಕ್ಕುವಂಥ ವಿಷಾದ ಈ ಬರಹಗಳಲ್ಲಿದೆ. ಒಂದೊಂದೂ ಕತೆಯೂ ಭರವಸೆಯೇ ಕಾಣದ ವಿಷಾದದಿಂದಾಗಿ ನಡುಗಿಸುತ್ತವೆ. ‘‘ಒಂದು ನೆಂಪಿಟ್ಕೊ.. ನಾನು ಪರ್ದೇಶಿ, ನೀನೂ ಬಡವ. ನಾವು ಕೂತು ಮಾತಾಡ್ವಾಗ, ಶ್ರೀಮಂತ ಒಬ್ಬ ನಮ್ಮನ್ನು ನೋಡ್ತಾನೆ. ಆಗ ನಾವು ಕ್ಕೆಕ್ಕೆಕ್ಕೆ ಅಂತ ನೆಗೆ ಮಾಡ್ಬೇಕು. ಹರಟೆ ಹೊಡೀಬೇಕು.

ಆವಾಗ ಅವನಿಗೆ, ಇದು ಎಂತದಪ್ಪ, ಈ ಪರ್ದೇಶಿಗಳಿಗೆ ನಾಳೆಗೇ ಗಂಜಿಗೆ ತತ್ವಾರ.. ಆದ್ರೂ ನೆಗೆ ಮಾಡಿಕೊಂಡಿದ್ದಾರಲ್ಲ, ಇದೆಂತ ಕತೆ ಅವನಿಗೆ ಚಿಂತೆ ಹತ್ತುತ್ತದೆ, ತಲೆಕೆಡ್ತದೆ.. ನಮ್ಮ ಕೈಲಾಗೋದು ಅಷ್ಟೇ..’’ ಎಂದ. ಅವನ ಕಣ್ಣಲ್ಲಿ ನೀರುಜಿನುಗುತ್ತಿತ್ತು... ಬದುಕಿನ ಬವಣೆಗಾಗಿ ಹೆಂಡತಿಯ ತಾಳಿಯನ್ನೂ ಕಳೆದ ಹೆಸರೇ ಇಲ್ಲದ ಬ್ರಾಹ್ಮಣ ಪಾತ್ರವೊಂದು ನಿರೂಪಕನೊಂದಿಗೆ ನಡೆಸುವ ಈ ಸಂವಾದ ಧಸಕ್ಕನೆ ಎದೆಗೆ ಇರಿಯುತ್ತದೆ. ನಮ್ಮ ಹಿರಿಯರು ಬಡವನ ನಗುವಿನ ಶಕ್ತಿ ಎಂದು ಇಂಥದನ್ನು ಕರೆದರೆ? ಸುಳ್ಯದ ಪರಿಸರದ ಕೃಷಿ ಸಂಬಂಧಿತ ಚಟುವಟಿಕೆಗಳಲ್ಲಿ ತೊಡಗಿಕೊಂಡ ಈ ಎಲ್ಲ ಪಾತ್ರಗಳು ಬಿಡುಗಡೆಯೇ ಇಲ್ಲದ ದುರಂತ ಚಕ್ರದೊಳಗೆ ಸಿಕ್ಕಿಕೊಂಡಿರುವಂತೆ ಭಾಸವಾಗುತ್ತದೆ. ಹಾಗೆ ನೋಡಿದರೆ ಇದು ಭಾರತದ ಗ್ರಾಮೀಣ ಲೋಕದ ದುರಂತ ಕಥನ. ತೋಟದ ಒಡೆಯನ ಕಷ್ಟದ ಪರಿಧಿ ಒಂದು ರೀತಿಯದಾದರೆ ಆಳಿನ ದುಃಖ ಹೊಟ್ಟೆ ಬಟ್ಟೆಯದು. ಆಳುಗಳೆಲ್ಲರೂ ತಳಸ್ತರಕ್ಕೆ ಸೇರಿದವರೇ. ಇವರ ದೊಡ್ಡ ಕನಸು ಒಂದೆಕರೆ ಭೂಮಿಯ ಒಡೆಯರಾಗುವುದು, ಸಣ್ಣ ಮನೆಯನ್ನು ಕಟ್ಟುವುದು ಮತ್ತು ಹಸಿವು ನೀಗಿಸಿಕೊಳ್ಳುವುದು. ನಿರೂಪಕನಿಗೆ ಪೊಡಿಯ ಹೇಳುತ್ತಾನೆ, ‘‘ಅಯ್ಯೋ ನೀವು ಅನ್ನ ಹತ್ತಿಯ ಹಾಗೆ ಬೇಯಿಸೋರು, ಅದು ತಿಂದರೆ ಅರ್ಧ ಗಂಟೇಲಿ ಜೀರ್ಣ, ಆಮೇಲೆ ಪೂಂಪೂಂ ಅಂತ ರಾತ್ರಿ ಪೂರಾ ಹೂಸು ಬಿಟ್ಟುಕೊಂಡು ಇರಬೇಕಣ್ಣಾ, ಅನ್ನ ಕಲ್ಲಿನ ಹಾಗಿರಬೇಕು. ಅರ್ಧ ಒಲೇಲಿ, ಅರ್ಧ ಹೊಟ್ಟೇಲಿ ಬೇಯಬೇಕು...’’ ಇದು ಬಡವನ ಹಸಿವಿನ ದಾವಾನಲ.

ಭೂಮಿಯ ಕನಸು ಕಾರಂತರ ಚೋಮನ ಕಾಲದ್ದಷ್ಟೆ ಅಲ್ಲ. ಈಗಲೂ ಅದು ಭಟ್ಯ, ಪೊಡಿಯ, ಕೂಸಪ್ಪನ ಕನಸೂ ಆಗಿ ಉಳಿದಿದೆ. ‘‘ಕೆಂಬಾವುಟದ ಸಂಘಟನೆ ಮಾಡಿಕೊಂಡಿದ್ದಾರೆ, ಭೂಮಿ ಬೇಕು ಅಂತ ಕೇಳುವಾ ಅಂತ ಹೇಳಿದ್ರೆ ದರ್ಕಾಸ್ತು ಕೇಳುವಾ ಅಂತಾರೆ ಭಟ್ರು.. ಸರಕಾರೀ ಜಾಗ. ಅದು ನೆಕ್ಕಿ ಮುಕ್ಕಿ ಉಳಿದ ಎಲುಬು ಅಲ್ವಾ, ಮಾಂಸ ಎಲ್ಲಿ ಉಂಟು? ಎಲ್ಲಾ ನಿಮ್ಮ ಕೈಲಿ. ನಡುತುಂಡು..’’ ಇದು ಪೊಡಿಯನಂಥವರಿಗೆ ಬಂದ ರಾಜಕೀಯ ಪ್ರಜ್ಞೆ. ಈ ಪ್ರಜ್ಞೆಯನ್ನು ಸಂವಿಧಾನ ಹಚ್ಚಿಸಿದೆ. ಪ್ರಜ್ಞೆಯ ಹೊರತಾಗಿ ಏನೂ ಇಲ್ಲ. ಭೂಮಿಯಿಲ್ಲ, ಮನೆಯೂ ಇಲ್ಲ. ಚೂರು ಗ್ರಾಂಟು ಸಿಕ್ಕರೂ ಚನಿಯ, ಕೂಸಪ್ಪರು ಮನೆ ಕಟ್ಟಲು ನಡೆಸುವ ಹೋರಾಟ ಮಾತ್ರ ಯಾವ ಆಫ್ರಿಕಾದ ಅಚಿಬೆ, ಗೂಗಿಯರ ಕಾದಂಬರಿಗಳಿಗೆ ಕಡಿಮೆ ಇಲ್ಲ. ಈ ಭಾಗಗಳು ಆಧುನಿಕ ಕನ್ನಡ ಸಾಹಿತ್ಯದ ಅಮೂಲ್ಯವಾದ ವಾಸ್ತವವಾದಿ ಬರಹಗಳು. ಘನತೆಯ ಬದುಕಿಗಾಗಿ ಒಕ್ಕಲಿಗರ ಜತ್ತಪ್ಪತಳವೊಡೆದ ಜೀಪಿನೊಂದಿಗೆ ನಡೆಸುವ ಹೋರಾಟ, ಭೂಮಿ ಕುರಿತಾದ ಆತನ ಕಕ್ಕುಲಾತಿಯಿಂದಾಗಿ ದೆವ್ವದ ಥರ ದುಡಿದು ನಲ್ವತ್ತು ವರ್ಷಕ್ಕೆ ಎದೆಯೊಡೆದು ಸಾಯುವ ಸನ್ನಿವೇಶ ಟಾಲ್‌ಸ್ಟಾಯ್‌ನ ‘ಮನುಷ್ಯನಿಗೆಷ್ಟು ಭೂಮಿ ಬೇಕು?’ ಕತೆಯನ್ನು ನೆನಪಿಸುತ್ತದೆ.

ಕೆ.ಪಿ. ಸುರೇಶರ ಈ ಕೃತಿ ವಾಸ್ತವವಾದಿ ದುರಂತ ಪ್ರಜ್ಞೆಯ ಮೂಲಕ ಕಟ್ಟಿದ ಪ್ರಬಂಧಗಳ ಮಾದರಿ ಕನ್ನಡಕ್ಕೆ ಹೊಸದೆನ್ನಿಸುತ್ತದೆ. ತುಸು ಮಟ್ಟಿಗೆ ತೇಜಸ್ವಿ, ದೇವನೂರರಲ್ಲೂ ಈ ರೀತಿಯ ಕುರುಹುಗಳಿವೆ. ತೇಜಸ್ವಿಯವರ ಅವನತಿ ಮುಂತಾದ ಕತೆಗಳು, ಚಿದಂಬರ ರಹಸ್ಯ ಕಾದಂಬರಿಯೂ ಇದಕ್ಕೆ ಉತ್ತಮ ಮಾದರಿಗಳು. ಪಶ್ಚಿಮದಲ್ಲಿ ಈ ರೀತಿಯ ಬರಹ ಪರಂಪರೆಯೇ ಇದೆ. ತುರ್ಗೆನೇವ್‌ನ ಬರಹಗಳಲ್ಲಿ ಮನುಷ್ಯನ ದುರಂತ ಪ್ರಜ್ಞೆ ಹೆಪ್ಪುಗಟ್ಟಿದಂತೆ ದಾಖಲಾಗುತ್ತದೆ. ಇದನ್ನು ‘ಟ್ರ್ಯಾಜಿಕ್ ರಿಯಲಿಸಂ’ ಎನ್ನುತ್ತಾರೆ.

‘ಚಿಕುನ್‌ಗುನ್ಯಾ’ ಕತೆಯಲ್ಲಿ ಮಾತ್ರ ದುರಂತದೊಳಗೂ ನವಿರಾದ ಹಾಸ್ಯವಿದೆ. ನವವಿವಾಹಿತನೊಬ್ಬನ ದೋಸ್ತಿ ಹೇಳುತ್ತಾನೆ, ‘‘ಎಂತ ಹೇಳ್ತೀರಿ ಮಾರಾಯ್ರೇ, ಅವನ ಕತೆ, ಸವರೋದು ಮಾತ್ರ...’’ ಇಂಥ ಹಗುರಗೊಳಿಸುವ ಮಾತುಗಳು ಇಡೀ ಕೃತಿಯಲ್ಲಿ ಬೆರಳೆಣಿಕೆ ಮಾತ್ರ. ಸಾಮಾನ್ಯವಾಗಿ ಭೌಗೋಳಿಕತೆಗೂ ಅಭಿವೃದ್ಧಿಗೂ ಸಂಬಂಧವಿದೆ. ಈ ಕುರಿತು ಪಶ್ಚಿಮದ ಅರ್ಥಶಾಸ್ತ್ರದಲ್ಲಿ ದೊಡ್ಡ ಥಿಯರಿಗಳೇ ಇವೆ. ಬೆಳ್ತಂಗಡಿ, ಕಾರ್ಕಳ, ಸುಳ್ಯದ ಅರ್ಧಭಾಗ ಮತ್ತು ಪುತ್ತೂರಿನ ಕಾಲು ಭಾಗ ದಕ್ಷಿಣಕನ್ನಡ, ಉಡುಪಿ ಜಿಲ್ಲೆಗಳಲ್ಲಿ ತುಸು ಹಿಂದುಳಿದ ಭಾಗಗಳು. ಘಟ್ಟ ಶುರುವಾಗುವ ಈ ಊರುಗಳಿಗೆ ಮಳೆಯೂ ಹೆಚ್ಚು. ಕೊಳೆರೋಗವೂ ತೀವ್ರ. ಪ್ರಾಣಿಗಳ ಹಾವಳಿಯೂ ಜಾಸ್ತಿ. ವಿಟ್ಲ, ಪುತ್ತೂರಿಗಿರುವ ಅನುಕೂಲಗಳೂ ಇಲ್ಲ. ಟೆಂಪಲ್‌ಟೂರಿಸಂ, ಶಿಕ್ಷಣ, ಆರೋಗ್ಯ ಕ್ಷೇತ್ರಗಳು ದ.ಕ.ದ ಮೂಲದ್ರವ್ಯ. ಬಂಟಮಲೆ, ಚಾರ್ಮಾಡಿ, ಚಾರ್ವಾಕದ ತಪ್ಪಲಲ್ಲಿರುವವರಿಗೆ ಆ ಸೌಲಭ್ಯಗಳಿಲ್ಲ.

ಈ ಬರಹಗಳ ರಾಜಕೀಯ ಸಂವೇದನೆ ಕುರಿತು ರಹಮತ್ ತರೀಕೆರೆಯವರು ಮುನ್ನುಡಿಯಲ್ಲಿ ಬರೆದಿದ್ದಾರೆ. ಕೆಂಬಾವುಟದ ಕನಸು ಕಂಡ ಹರಿಯಪ್ಪನೆಂಬ ಕಾಮ್ರೇಡನಿಗೆ ‘‘ಜನರು ಮೀನು ಹತ್ತಿದ ಹಾಗೆ ಜನಸಂಘದವರ ಕೇಸರಿತೊಟ್ಟೆಗೆ ಬೀಳುತ್ತಿರುವುದನ್ನು’’ ಕಂಡು ಚಿಂತೆಯಾಗುತ್ತದೆ. ಕನ್ನಡಿಯಲ್ಲಿ ಕಂಡಾತನೂ ಸೇರಿ ಕೆಲವು ಪಾತ್ರಗಳಿಗೆ ಈ ರೀತಿಯ ಹತಾಶೆ ಇದೆ. ಇಂಥ ತೀಕ್ಷ್ಣ ವಿವರಗಳುಳ್ಳ ಪ್ರಬಂಧಗಳನ್ನು ಬರೆದ ಸುರೇಶ ಅವರು ಕನ್ನಡದಲ್ಲಿ ಹೊಸ ರೀತಿಯ ಪ್ರಯೋಗಕ್ಕೆ ಚಾಲನೆ ನೀಡಿದ್ದಾರೆ. ಈ ಪ್ರಬಂಧಗಳಲ್ಲಿ ಹೊಸದೇ ರೀತಿಯ ಕನ್ನಡ ಬಳಕೆಯಾಗಿದೆ, ‘‘ಭೇಸ್ ಜಾತ್ರೆ ಅಡ್ಕದ ಸೈಕಲ್ ಸವಾರಿ ಗಡದ್ದು ಬಂತು’’ ರೀತಿಯ ಮಾತುಗಳು ದ.ಕ ದ ಗ್ರಾಂಥಿಕ ಕನ್ನಡ ಎಂಬ ಐಡೆಂಟಿಟಿಗೆ ದೂರವಾದವು. ಈ ಬರಹಗಳಿಂದಾಗಿ ಹೊಸ ರೀತಿಯ ಕನ್ನಡ ಮತ್ತು ಹೊಸ ರೀತಿಯ ದರ್ಶನವೊಂದು ಸಾಹಿತ್ಯ ಲೋಕಕ್ಕೆ ಅನಾವರಣಗೊಂಡಿದೆ.

Writer - ನೆಲ್ಲುಕುಂಟೆ ವೆಂಕಟೇಶ್

contributor

Editor - ನೆಲ್ಲುಕುಂಟೆ ವೆಂಕಟೇಶ್

contributor

Similar News