ಕುಂದಾಪುರ: ಮನೆ ವಾತಾವರಣದಲ್ಲಿ ಕೊರೋನ ಪಾಸಿಟಿವ್ ಬಂದವರಿಗೆ ಚಿಕಿತ್ಸೆ

Update: 2020-07-25 12:41 GMT

ಉಡುಪಿ, ಜು.25: ಜಿಲ್ಲೆಯಲ್ಲಿ ಕೊರೋನ ವೈರಸ್ ಸೋಂಕಿಗೆ ಪಾಸಿಟಿವ್ ಕಂಡುಬರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿರುವಂತೆ ಅವರೆಲ್ಲರಿಗೂ ನೀಡಬೇಕಾದ ಅಗತ್ಯ ಚಿಕಿತ್ಸೆಗೆ ಜಿಲ್ಲೆಯ ಸರಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ನಿಗದಿಪಡಿಸಲಾದ ಬೆಡ್ ಗಳು ಸಾಲದಾಗುತ್ತಿದೆ. ಇದರ ಭೀಕರ ಪರಿಣಾಮಗಳನ್ನು ನಾವು ಮುಂಬಯಿ, ದಿಲ್ಲಿ ಹಾಗೂ ಬೆಂಗಳೂರಿನಲ್ಲಿ ಕಾಣುತ್ತಿದ್ದೇವೆ.

ಇದರಿಂದ ಕೊನೆಗೂ ಎಚ್ಚೆತ್ತಿರುವ ಜಿಲ್ಲಾಡಳಿತ, ಕೋವಿಡ್-19 ರೋಗಲಕ್ಷಣಗಳಿಲ್ಲದೇ ಪಾಸಿಟಿವ್ ಆಗಿರುವವರನ್ನು ಗುರುತಿಸಿ ಅವರಿಗೆ ಕೋವಿಡ್ ಮಾರ್ಗಸೂಚಿಗಳಂತೆಯೇ ಅವರವರ ಮನೆಗಳಲ್ಲೇ ‘ಹೋಮ್ ಐಸೋಲೇಷನ್’ಗಳನ್ನು ನಿರ್ಮಿಸಿ ಅಲ್ಲೇ ಚಿಕಿತ್ಸೆಗೆ ವ್ಯವಸ್ಥೆಗಳನ್ನು ಮಾಡುತ್ತಿದೆ. ಈಗಾಗಲೇ ಜಿಲ್ಲೆಯಲ್ಲಿ 490ಕ್ಕೂ ಅಧಿಕ ಮಂದಿ ಇಂಥ ಹೋಮ್ ಐಸೋಲೇಷನ್ಗಳಲ್ಲಿ ವೈದ್ಯರ ಕಣ್ಗಾವಲಿನ ಅಡಿಯಲ್ಲಿ ಹೀಗೆ ಚಿಕಿತ್ಸೆ ಪಡೆಯುತಿದ್ದಾರೆ.

ಆದರೆ ಕರಾವಳಿಯ ಜಿಲ್ಲೆಗಳಲ್ಲಿ, ಅದರಲ್ಲೂ ಗ್ರಾಮೀಣ ಪ್ರದೇಶಗಳ ಮನೆಗಳಲ್ಲಿ ಇಂಥ ಚಿಕಿತ್ಸೆಗೆ ಸೂಕ್ತ ಅವಕಾಶ ಹಾಗೂ ಸೌಲಭ್ಯಗಳು ಇರಲು ಸಾಧ್ಯವಿಲ್ಲ. ಕೇಂದ್ರ ಆರೋಗ್ಯ ಇಲಾಖೆ ಇಂಥ ಹೋಮ್ ಐಸೋಲೇಷನ್ ಚಿಕಿತ್ಸೆಗೆ ನಿಗದಿ ಪಡಿಸಿರುವ ಮಾರ್ಗಸೂಚಿಯಂತೆ ನಮ್ಮ ಹಳ್ಳಿ ಮನೆಗಳಲ್ಲಿ ಚಿಕಿತ್ಸೆ ಪಡೆಯಲು ಕಷ್ಟಸಾಧ್ಯ. ಈ ನಡುವೆ ಕಳೆದ ಮೂರ್ನಾಲ್ಕು ವಾರಗಳಿಂದ ಜಿಲ್ಲೆಯಲ್ಲಿ ಪಾಸಿಟಿವ್ ಬರುತ್ತಿರುವವರಲ್ಲಿ ಗ್ರಾಮಾಂತರ ಪ್ರದೇಶದ ಜನರೇ ಹೆಚ್ಚಿನ ಸಂಖ್ಯೆಯಲ್ಲಿರುವುದು ಜಿಲ್ಲಾಡಳಿತದ ಚಿಂತೆಯನ್ನು ಹೆಚ್ಚಿಸಿದೆ.

ಇದಕ್ಕೆ ಮಾರ್ಗೋಪಾಯವಾಗಿ ಜಿಲ್ಲಾಡಳಿತ, ಕೊರೋನ ರೋಗಲಕ್ಷಣಗಳಿಲ್ಲದ ಸೋಂಕಿತರಿಗೆ ಪ್ರತ್ಯೇಕವಾದ ಚಿಕಿತ್ಸೆ ಸಾಧ್ಯವಾಗುವಂತ ಚಿಕಿತ್ಸಾ ಕೇಂದ್ರಗಳನ್ನು ತೆರೆಯಲು ಸೂಚಿಸಿದ್ದು, ಇದೀಗ ಕುಂದಾಪುರ ತಾಲೂಕು ವೈದ್ಯಾಧಿಕಾರಿ ಡಾ.ನಾಗಭೂಷಣ ಉಡುಪ ಅವರು ಮನೆಗಳಲ್ಲಿ ಸೂಕ್ತ ಚಿಕಿತ್ಸೆ ಪಡೆಯಲು ವ್ಯವಸ್ಥೆ ಇಲ್ಲದ ಗ್ರಾಮೀಣ ಭಾಗಗಳ ಸೋಂಕಿತರಿಗಾಗಿ ಕುಂದಾಪುರ ದಲ್ಲಿ 75 ಹಾಸಿಗೆಗಳ ‘ಕೋವಿಡ್-19 ಹೋಮ್ ಕೇರ್ ಸೆಂಟರ್’ನ್ನು ಸಜ್ಜುಗೊಳಿಸಿದ್ದು, ಇದು ಇಂದಿನಿಂದ ಕಾರ್ಯಾರಂಭಗೊಂಡಿದೆ.

‘ಕುಂದಾಪುರದ ದೇವರಾಜ ಅರಸು ಹಿಂದುಳಿದ ವರ್ಗಗಳ ವಿದ್ಯಾರ್ಥಿ ನಿಲಯವನ್ನು ಇದೀಗ ತಾತ್ಕಾಲಿಕ ಕೋವಿಡ್-19 ಕೇರ್ ಸೆಂಟರ್ ಆಗಿ ಸಜ್ಜುಗೊಳಿಸಿದ್ದೇವೆ. ಇಲ್ಲಿ ಮನೆಯ ವಾತಾವರಣವೇ ಇರುವಂತೆ ನೋಡಿಕೊಳ್ಳಲಾಗುವುದು. ರೋಟರಿ ಹಾಗೂ ಇತರ ಸಂಘಸಂಸ್ಥೆಗಳ ಸಹಕಾರದಿಂದ ಸದ್ಯ 75 ಬೆಡ್ಗಳನ್ನು ಸಿದ್ಧಪಡಿಸಿದ್ದೇವೆ. ಇದರೊಂದಿಗೆ ಸೋಂಕಿತರಿಗೆ ಎಲ್ಲಾ ವ್ಯವಸ್ಥೆಯೂ ಇರುತ್ತದೆ. 24 ಗಂಟೆಗಳ ಕಾಲವೂ ಕುಡಿಯಲು ಬಿಸಿನೀರು, ಉಚಿತ ಊಟ-ಉಪಹಾರ, ಸ್ನಾನಕ್ಕೆ ಸೌರಶಕ್ತಿಯಿಂದ ಬಿಸಿನೀರು ಸಹ ಇರುತ್ತದೆ.’ ಎಂದು ಡಾ.ಉಡುಪ ತಿಳಿಸಿದರು.

ಆದರೆ ಇಲ್ಲಿ ಫಲಾನುಭವಿಗಳು ತಮ್ಮ ಕೆಲಸಗಳಿಗೆ ಬೇರೆಯವರನ್ನು ಅವಲಂಬಿಸದೇ ತಾವೇ ಮಾಡಿಕೊಳ್ಳಬೇಕು. ಇಲ್ಲಿ ವೈದ್ಯರು ಹಾಗೂ ನರ್ಸ್ಗಳು ಸದಾ ಸೇವೆಗೆ ಲಭ್ಯವಿದ್ದರೂ, ಅವರವರ ಕೆಲಸ ಅವರೇ ಮಾಡಿಕೊಳ್ಳುವವರಿಗೆ ಇಲ್ಲಿ ಪ್ರವೇಶದ ವೇಳೆ ಆದ್ಯತೆ ನೀಡಲಾಗುವುದು. ಅವರು ಇಲ್ಲಿ ಚಿಕಿತ್ಸೆಗೆ ಇರುವ 10 ದಿನಗಳಲ್ಲಿ ತನ್ನ ಹಾಸಿಗೆ, ಬೆಡ್ಶೀಟ್ಗಳನ್ನು ತಾನೇ ನೀಟಾಗಿ ಇರಿಸಿಕೊಳ್ಳಬೇಕು. ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು. ಪ್ರತಿ ಮೂರು ಗಂಟೆಗೊಮ್ಮೆ ತಮ್ಮ ಆಮ್ಲಜನಕದ ಪ್ರಮಾಣ, ಪಲ್ಸ್ರೇಟ್ಗಳನ್ನು ನೋಡಿ ವಾಟ್ಸಪ್ ಮೂಲಕ ವೈದ್ಯರಿಗೆ ತಿಳಿಸುತ್ತಿರಬೇಕು. ಇಂಥ ನಿಬಂಧನೆಗಳನ್ನು ಇಲ್ಲಿ ಸೇರ್ಪಡೆಗೆ ಮೊದಲೇ ಅವರಿಗೆ ತಿಳಿಸಲಾಗುತ್ತದೆ. ಒಪ್ಪಿದವರಿಗೆ ಮಾತ್ರ ಇಲ್ಲಿಗೆ ಪ್ರವೇಶ ಸಿಗುತ್ತದೆ ಎಂದು ಡಾ.ನಾಗಭೂಷಣ ಉಡುಪ ತಿಳಿಸಿದರು.

ಕೊರೋನದ ಯಾವುದೇ ರೋಗಲಕ್ಷಣಗಳಿಲ್ಲದಿದ್ದರೂ ಪಾಸಿಟಿವ್ ಬಂದು ಮನೆಯಲ್ಲಿ ಚಿಕಿತ್ಸೆ ಪಡೆಯಲು ಅವಕಾಶ ಇಲ್ಲದ ಗ್ರಾಮಾಂತರ ಪ್ರದೇಶದ ವರನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ಕೇಂದ್ರವನ್ನು ತೆರೆಯಲಾಗಿದೆ. ಅವರಿಗೆ ಬೇಕಾದ ಎಲ್ಲಾ ಸೌಲಭ್ಯಗಳು ಇಲ್ಲಿ ದೊರೆಯುವಂತೆ ನೋಡಿಕೊಳ್ಳಲಾಗುವುದು. ಪ್ರತಿದಿನ ಆರೋಗ್ಯ ತಪಾಸಣೆ ನಡೆಯಲಿದ್ದು, ಹಠಾತ್ತನೆ ಅವರ ಆರೋಗ್ಯದಲ್ಲಿ ಏರುಪೇರಾದರೆ ತಕ್ಷಣ ಅವರನ್ನು ಕೋವಿಡ್ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲು ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದರು.

ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವ್ ಬರುವವರ ಸಂಖ್ಯೆ ಹೆಚ್ಚುತ್ತಿರುವುದರಿಂದ ರೋಗಲಕ್ಷಣಗಳಿಲ್ಲದ ಸೋಂಕಿತರಲ್ಲಿ, ಸಾಧ್ಯವಿದ್ದವರಿಗೆ ಅವರವರ ಮನೆಯಲ್ಲಿ ‘ಹೋಮ್ ಐಸೋಲೇಷನ್’ನಲ್ಲಿರಿಸಿ ಚಿಕಿತ್ಸೆ ನೀಡಲು ನಿರ್ಧರಿಸಲಾಗಿದೆ. ಆದರೆ ಇಂಥ ವ್ಯವಸ್ಥೆ ಸಾಧ್ಯವಿಲ್ಲದವರಿಗಾಗಿ ಕುಂದಾಪುರದಲ್ಲಿ 75 ಬೆಡ್ಗಳ ಕೋವಿಡ್ ಹೋಮ್ ಕೇರ್ ಸೆಂಟರ್ ಕಾರ್ಯಾರಂಭ ಮಾಡಿದೆ. ಇಲ್ಲಿ ಸೋಂಕಿತರಿಗೆ 10 ದಿನಗಳ ಕಾಲ, ಮನೆ ವಾತಾವರಣದಲ್ಲಿ ಎಲ್ಲಾ ಮೂಲ ಭೂತ ಸೌಕರ್ಯಗಳೊಂದಿಗೆ ಚಿಕಿತ್ಸೆ ಲಭಿಸುತ್ತದೆ.

-ಡಾ.ನಾಗಭೂಷಣ ಉಡುಪ, ತಾಲೂಕು ವೈದ್ಯಾಧಿಕಾರಿ ಕುಂದಾಪುರ.

Writer - ಬಿ.ಬಿ.ಶೆಟ್ಟಿಗಾರ್

contributor

Editor - ಬಿ.ಬಿ.ಶೆಟ್ಟಿಗಾರ್

contributor

Similar News