ಕೊರೋನೋತ್ತರ ಭವಿಷ್ಯಕ್ಕೆ ಇತಿಹಾಸದ ಪಾಠ
ಅಂದು ಆರ್ಥಿಕ ಹಿಂಜರಿತ ಒಡ್ಡಿದಂತಹ ಸವಾಲನ್ನು ಇಂದು ಕೊರೋನ ಸೋಂಕು ಒಡ್ಡುತ್ತಿದೆ. ಅಂದು ಮುಂದುವರಿದ ದೇಶಗಳು ಮಾತ್ರ ಸಂಕಟಕ್ಕೆ ಒಳಗಾಗಿದ್ದರೆ, ಇಂದು ವಿಶ್ವದ ಎಲ್ಲಾ ದೇಶಗಳು ಒಂದಲ್ಲ ಒಂದು ದೃಷ್ಟಿಯಿಂದ ತೀವ್ರವಾದ ಸಂಕಟಕ್ಕೆ ಸಿಲುಕಿಕೊಂಡಿದೆ. ಒಂದೆಡೆ ತೀವ್ರವಾದ ಆರ್ಥಿಕ ಹಿಂಜರಿತವನ್ನು ಅನುಭವಿಸುತ್ತಿದ್ದರೆ, ಇನ್ನೊಂದೆಡೆ ಭಯಾನಕ ಆರೋಗ್ಯದ ಸವಾಲನ್ನು ನಿಭಾಯಿಸುತ್ತಿದೆ. ದುಡಿಯುವ ಶಕ್ತಿಯಿದ್ದರೂ ಸೋಂಕು ಹರಡುವುದನ್ನು ತಪ್ಪಿಸುವ ದೃಷ್ಟಿಯಿಂದ ಮನೆಯೊಳಗೆ ಇರುವ ಸ್ಥಿತಿ ಇದೆ. ಇದರಿಂದ ದುಡಿಮೆ ಇಲ್ಲದ ಹೊತ್ತಿನಲ್ಲಿ ಅಗತ್ಯ ಬೇಡಿಕೆಗಳನ್ನು ಪೂರೈಸಿಕೊಳ್ಳುವ ಅನಿವಾರ್ಯವನ್ನು ಎದುರಿಸಬೇಕಾಗಿದೆ.
ಮಾನವನ ಇತಿಹಾಸದಲ್ಲಿ ಕೆಲವು ಘಟನೆಗಳು ತಮ್ಮ ಪರಿಣಾಮ ಮತ್ತು ವ್ಯಾಪ್ತಿಗಳ ಕಾರಣದಿಂದ ಮುಖ್ಯವಾಗುತ್ತವೆ. ಪ್ರಮುಖವಾದ ತಿರುವು ನೀಡುವ ಸಂದರ್ಭಗಳು ಇಲ್ಲಿ ನಿರ್ಮಾಣವಾಗುತ್ತವೆ. ಕೆಲವು ಘಟನೆಗಳ ಭೌತಿಕ ವ್ಯಾಪ್ತಿ ಕಡಿಮೆಯಾದರೂ, ಅವುಗಳ ಪರಿಣಾಮದ ವ್ಯಾಪ್ತಿ ವಿಶಾಲವಾಗಿರುತ್ತದೆ. ಉದಾಹರಣೆಗೆ, ನ್ಯೂಟನ್ ಯುವಕನಾಗಿದ್ದಾಗ ಲಂಡನ್ ನಗರವನ್ನು ಪ್ಲೇಗ್ ಆಕ್ರಮಿಸಿಕೊಂಡಿತ್ತು. ಹಾಗಾಗಿ, ಆತ ತನ್ನ ಮನೆಯ ತೋಟದಲ್ಲಿ ಕಾಲ ಕಳೆಯಲು ಓಡಾಡಿಕೊಂಡಿರುವಾಗ ಮರದಿಂದ ಸೇಬಿನಹಣ್ಣು ಕೆಳಗೆ ಬೀಳುವುದನ್ನು ಗಮನಿಸುತ್ತಾನೆ. ಆಗ ಅವನಿಗೊಂದು ಪ್ರಶ್ನೆ ಮೂಡುತ್ತದೆ: ಚಂದ್ರ ಏಕೆ ಸೇಬಿನ ಹಣ್ಣಿನ ರೀತಿಯಲ್ಲಿ ಆಕಾಶದಿಂದ ಕಳಚಿ ಬೀಳುವುದಿಲ್ಲ? ಇದೊಂದು ಸಣ್ಣ ಘಟನೆಯಾದರೂ, ಅದರ ಪರಿಣಾಮ ಮಾತ್ರ ವಿಶಾಲವಾಗಿತ್ತು. ಈ ಘಟನೆಯ ಕಾರಣದಿಂದ ಹುಟ್ಟಿಕೊಂಡ ಜ್ಞಾನವಾದ ‘ಗುರುತ್ವಾಕರ್ಷಣೆ ಪರಿಕಲ್ಪನೆ’ ಇಂದಿಗೂ ನಮ್ಮ ಬದುಕಿನಲ್ಲಿ ಮಹತ್ವದ ಪಾತ್ರವನ್ನು ನಿಭಾಯಿಸುತ್ತಿದೆ. ಇದಕ್ಕೆ ವಿರುದ್ಧವಾದ ಸನ್ನಿವೇಶಗಳು ಇತಿಹಾಸದಲ್ಲಿ ಘಟಿಸಿರುತ್ತವೆ. ಇಲ್ಲಿ ಘಟನೆ ಮತ್ತು ಅದರ ಪರಿಣಾಮ ಎರಡೂ ವಿಶಾಲವಾಗಿರುತ್ತವೆ. ಇಂತಹ ಒಂದು ಘಟನೆ 1929-1939ರ ನಡುವೆ ನಡೆದಿತ್ತು. ಇದನ್ನು ‘ದ ಗ್ರೇಟ್‌ಇಕಾನಮಿಕ್ ಡಿಪ್ರಷೆನ್(ಬೃಹತ್‌ಆರ್ಥಿಕ ಹಿಂಜರಿತ) ಎನ್ನುತ್ತಾರೆ.
ಈ ಕಾಲಘಟ್ಟದ ಬಹುತೇಕ ಮುಂದುವರಿದ ದೇಶಗಳು ಇದರ ಹಿಡಿತಕ್ಕೆ ಸಿಲುಕಿ ನಲುಗಿದವು. ಬೇಡಿಕೆ ಪೂರ್ಣವಾಗಿ ಕುಸಿತವನ್ನು ಕಂಡ ಕಾರಣ, ಕೈಗಾರಿಕೆಗಳು ಬಾಗಿಲು ಹಾಕುವ ಸ್ಥಿತಿಗೆ ಬಂದವು. ಇದರಿಂದ ನಿರುದ್ಯೋಗ ವ್ಯಾಪಕವಾಗಿ, ಮುಂದುವರಿದ ಸಮಾಜಗಳು ಸಾಕಷ್ಟು ಸಮಸ್ಯೆಗಳನ್ನು ಎದುರಿಸಿದವು. ಈ ಸಮಸ್ಯೆಯನ್ನು ದೇಶಗಳು ನಿಭಾಯಿಸಿದ ರೀತಿಯಲ್ಲಿ ಕೆಲವು ಕುತೂಹಲಕಾರಿ ಅಂಶಗಳನ್ನು ಇತಿಹಾಸಕಾರರು ಗುರುತಿಸುತ್ತಾರೆ. ತಾಂತ್ರಿಕವಾಗಿ ಸಾಕಷ್ಟು ಮುಂದುವರಿದಿದ್ದ ಜರ್ಮನಿ ದೇಶದಲ್ಲಿ ತೀವ್ರ ರಾಷ್ಟ್ರೀಯವಾದವಾದ ನಾಝೀ ವಾದ ರಾಜಕೀಯವಾಗಿ ಪ್ರಬಲವಾಗುತ್ತದೆ. ಜರ್ಮನಿಯ ಎಲ್ಲಾ ಸಂಕಟಗಳಿಗೂ ಯಹೂದಿಗಳೇ ಕಾರಣವೆಂಬ ಚಿಂತನೆಗೆ ಬಲ ದೊರೆಯುತ್ತದೆ. ಇದರೊಟ್ಟಿಗೆ ‘ಆರ್ಯ ಜನಾಂಗದ ಶ್ರೇಷ್ಠತೆಯನ್ನು ಎತ್ತಿಹಿಡಿಯುವ ಸಲುವಾಗಿ’ ಯುದ್ಧವನ್ನು ಸಾರುವ ಆಲೋಚನೆಗಳು ಪೋಷಿತವಾಗುತ್ತವೆ. ಜರ್ಮನಿ ದೇಶವನ್ನು ಮತ್ತೊಮ್ಮೆ ಶ್ರೇಷ್ಠ ದೇಶವಾಗಿ ನೋಡಬೇಕೆನ್ನುವ ಕನಸಿನ ಭಾಗವಾಗಿ ವಿಜ್ಞಾನಿಗಳು ಅಪಾಯಕಾರಿಯಾದ ರಾಸಾಯನಿಕಗಳು, ಪ್ರಬಲ ಕ್ಷಿಪಣಿಗಳು, ಏರೋಪ್ಲೇನ್‌ಗಳು, ಫಿರಂಗಿಗಳು ಮುಂತಾದವುಗಳ ತಯಾರಿಕೆಗೆ ದುಡಿಯುತ್ತಾರೆ. ಇದಕ್ಕೆ ವಿರುದ್ಧವಾದ ಚಲನೆ ಅಮೆರಿಕ ದೇಶದಲ್ಲಿ ಘಟಿಸುತ್ತದೆ. ತೀವ್ರ ಆರ್ಥಿಕ ಹಿಂಜರಿತದಿಂದ ಅಮೆರಿಕ ಸಂಯುಕ್ತ ಸಂಸ್ಥಾನ ಬಡತನವನ್ನು ಅನುಭವಿಸುತ್ತದೆ. ಸಾವಿರಾರು ಕಾರ್ಮಿಕರು ಬೀದಿಗೆ ಬೀಳುತ್ತಾರೆ. ಅಲ್ಲಿ ಸರಕಾರ ಕೈಗಾರಿಕೋದ್ಯಮಿಗಳೊಂದಿಗೆ ಕೈಜೋಡಿಸಿ ಆರ್ಥಿಕತೆಯನ್ನು ಮತ್ತೆ ಅಭಿವೃದ್ಧಿಯ ಪಥದಲ್ಲಿ ನಡೆಯುವಂತೆ ಮಾಡುವಲ್ಲಿ ನೆರವಾಗುತ್ತದೆ. ತನ್ನ ಕೇಂದ್ರ ಬ್ಯಾಂಕಿನ ಮೂಲಕ ಮಾರುಕಟ್ಟೆಯಲ್ಲಿ ಹಣ ಲಭ್ಯವಿರುವಂತೆ ನೋಡಿಕೊಳ್ಳುತ್ತದೆ.
ಕೆಲವು ವಿಶೇಷವಾದ ಕ್ರಮಗಳನ್ನು ಅದು ಕೈಗೊಳ್ಳುತ್ತದೆ. ಅಂತಹ ಒಂದು ಕ್ರಮ ‘ಸ್ವಚ್ಛತೆ ಮತ್ತು ನೈರ್ಮಲ್ಯ’ದ ಕುರಿತು ಜಾಗೃತಿ ಮೂಡಿಸುವುದಾಗಿರುತ್ತದೆ. ಇದರ ಹಿಂದೆ ಒಂದು ಆರ್ಥಿಕ ದೂರಾಲೋಚನೆ ಇರುತ್ತದೆ. ವೈಯಕ್ತಿಕ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವ ಸಲುವಾಗಿ ಸೋಪು, ಹಲ್ಲಿನಪುಡಿ, ಶೌಚಾಲಯ ಸ್ವಚ್ಛವಾಗಿ ಇಟ್ಟುಕೊಳ್ಳುವ ಸಲುವಾಗಿ ಟಾಯ್ಲೆಟ್ ಕ್ಲೀನರ್‌ಗಳನ್ನು ಬಳಸುವುದು ಮುಖ್ಯವೆಂದು ಪ್ರಚಾರ ಮಾಡಲಾಗುತ್ತದೆ. ಸಣ್ಣಸಣ್ಣ ಪೊಟ್ಟಣಗಳಲ್ಲಿ ಲಭ್ಯವಿರುವ ಇವನ್ನು ಕೊಳ್ಳಲು ಕಡಿಮೆ ಮೌಲ್ಯದ ಹಣ ಸಾಕಾಗುತ್ತದೆ. ಈ ವಸ್ತುಗಳು ದಿನನಿತ್ಯದ ಬಳಕೆಗೆ ಅನಿವಾರ್ಯವಾದ ಕಾರಣ, ಪ್ರತಿದಿನವೂ ಇವುಗಳಿಗೆ ಬೇಡಿಕೆ ಇದ್ದೇ ಇರುತ್ತದೆ. ಇಂತಹ ಉತ್ಪನ್ನಗಳನ್ನು ‘ಫಾಸ್ಟ್‌ಮೂವಿಂಗ್ ಕನ್‌ಸ್ಯೂಮರ್ ಗೂಡ್ಸ್’ ಎಂದು ಕರೆಯುತ್ತಾರೆ(ಎಫ್‌ಎಂಸಿಜಿ). ಅಮೆರಿಕ ದೇಶದ ಅರ್ಥವ್ಯವಸ್ಥೆಯನ್ನು ಈ ಎಫ್‌ಎಂಸಿಜಿಗಳು ಚೇತರಿಕೆಯ ಹಾದಿಯಲ್ಲಿ ಸಾಗಿಸುತ್ತವೆ. ಹೀಗೆ ಚೇತರಿಕೆಗೊಂಡ ಅಮೆರಿಕದ ಅರ್ಥವ್ಯವಸ್ಥೆ 1945ರ ನಂತರ ವಿಶ್ವದ ಸೂಪರ್‌ಪವರ್ ಆಗಿ ಹೊರಹೊಮ್ಮುತ್ತದೆ. ಸೂಕ್ಷ್ಮವಾಗಿ ಗಮನಿಸುವುದಾದರೆ, ಆರ್ಥಿಕ ಹಿಂಜರಿತಕ್ಕೆ ಪ್ರತಿಕ್ರಿಯೆಯಾಗಿ ಜರ್ಮನಿ ಎರಡನೇ ಮಹಾಯುದ್ಧವನ್ನು ಆರಂಭಿಸುವ ಮೂಲಕ ತನ್ನ ಪ್ರಜೆಗಳನ್ನು ದುರಂತಕ್ಕೆ ಈಡು ಮಾಡಿದರೆ, ಅಮೆರಿಕ ದೇಶ ತನ್ನ ಪ್ರಜೆಗಳನ್ನು ರಕ್ಷಿಸುವಂತಹ ಆಲೋಚನೆಗಳನ್ನು ಮಾಡಿತು. ಅಷ್ಟೇ ಅಲ್ಲ, ಮುಂದೆ ಜರ್ಮನಿ ಮತ್ತು ಜಪಾನನ್ನು ಸೋಲಿಸುವ ಮೂಲಕ ಎರಡನೇ ಮಹಾಯುದ್ಧವನ್ನು ಅಂತ್ಯಗೊಳಿಸಿತು. ಈಗ ಮಾನವ ಸಮಾಜ ಮತ್ತೆ ಇಂತಹ ಐತಿಹಾಸಿಕ ಪರಿಸ್ಥಿತಿಯ ಹೊಸ್ತಿಲಲ್ಲಿ ನಿಂತುಕೊಂಡಿದೆ.
ಅಂದು ಆರ್ಥಿಕ ಹಿಂಜರಿತ ಒಡ್ಡಿದಂತಹ ಸವಾಲನ್ನು ಇಂದು ಕೊರೋನ ಸೋಂಕು ಒಡ್ಡುತ್ತಿದೆ. ಅಂದು ಮುಂದುವರಿದ ದೇಶಗಳು ಮಾತ್ರ ಸಂಕಟಕ್ಕೆ ಒಳಗಾಗಿದ್ದರೆ, ಇಂದು ವಿಶ್ವದ ಎಲ್ಲಾ ದೇಶಗಳು ಒಂದಲ್ಲ ಒಂದು ದೃಷ್ಟಿಯಿಂದ ತೀವ್ರವಾದ ಸಂಕಟಕ್ಕೆ ಸಿಲುಕಿಕೊಂಡಿವೆ. ಒಂದೆಡೆ ತೀವ್ರವಾದ ಆರ್ಥಿಕ ಹಿಂಜರಿತವನ್ನು ಅನುಭವಿಸುತ್ತಿದ್ದರೆ, ಇನ್ನೊಂದೆಡೆ ಭಯಾನಕ ಆರೋಗ್ಯದ ಸವಾಲನ್ನು ನಿಭಾಯಿಸುತ್ತಿದೆ. ದುಡಿಯುವ ಶಕ್ತಿಯಿದ್ದರೂ ಸೋಂಕು ಹರಡುವುದನ್ನು ತಪ್ಪಿಸುವ ದೃಷ್ಟಿಯಿಂದ ಮನೆಯೊಳಗೆ ಇರುವ ಸ್ಥಿತಿ ಇದೆ. ಇದರಿಂದ ದುಡಿಮೆ ಇಲ್ಲದ ಹೊತ್ತಿನಲ್ಲಿ ಅಗತ್ಯ ಬೇಡಿಕೆಗಳನ್ನು ಪೂರೈಸಿಕೊಳ್ಳುವ ಅನಿವಾರ್ಯವನ್ನು ಎದುರಿಸಬೇಕಾಗಿದೆ. ತಜ್ಞರ ಪ್ರಕಾರ ಮುಂದಿನ ಆರು ತಿಂಗಳಲ್ಲಿ ವಿವಿಧ ದೇಶಗಳು ಹೇಗೆ ವರ್ತಿಸುತ್ತವೆ ಎನ್ನುವುದನ್ನು ಆಧರಿಸಿ ಮಾನವ ಇತಿಹಾಸದ ಹೊಸ ಅಧ್ಯಾಯ ಆರಂಭಗೊಳ್ಳಲಿದೆ. ಭವಿಷ್ಯದ ಪಯಣ ಯಾವ ದಿಕ್ಕಿನಲ್ಲಿ ಸಾಗಬಹುದು ಎಂದು ಆಲೋಚಿಸಲು ಆರ್ಥಿಕ ಹಿಂಜರಿತವನ್ನು ನಿರ್ವಹಿಸಿದ ಉದಾಹರಣೆ ನಮಗೆ ಅನುಕೂಲಕ್ಕೆ ಬರುತ್ತದೆ. ಒಂದು ವೇಳೆ ವಿಶ್ವದ ಬಹುತೇಕ ದೇಶಗಳು ಜರ್ಮನಿ ದೇಶದ ರೀತಿಯಲ್ಲಿ ವರ್ತಿಸಿದಲ್ಲಿ ಭವಿಷ್ಯದ ದಿನಗಳು ಹೀಗಿರುತ್ತವೆ: ಪ್ರತಿ ದೇಶವು ತನ್ನ ಸದ್ಯದ ಪರಿಸ್ಥಿತಿಗೆ ಒಂದೊಂದು ಕಾರಣವನ್ನು ಗುರುತಿಸುತ್ತದೆ. ಜರ್ಮನಿಯ ಎಲ್ಲಾ ಕಷ್ಟಗಳಿಗೆ ಯಹೂದಿಗಳೇ ಕಾರಣ ಎಂದಂತೆ, ಈ ದೇಶಗಳಲ್ಲಿ ಯಾವುದಾದರೂ ಒಂದು ಧರ್ಮ, ಭಾಷೆ ಇಲ್ಲವೇ ಜಾತಿಯವರು ಕಾರಣವಾಗುತ್ತಾರೆ. ಇವರನ್ನು ನಿವಾರಿಸುವ ಯೋಜನೆ ಆರಂಭಗೊಳ್ಳುತ್ತದೆ. ಜೊತೆಗೆ, ತನ್ನ ಶ್ರೇಷ್ಠತೆಯನ್ನು ಪ್ರತಿಪಾದಿಸಲು ಯುದ್ಧದಂತಹ ಕ್ರಮಗಳು ಜಾರಿಯಾಗುತ್ತವೆ.
ಹೀಗೆ ಜನಾಂಗೀಯವಾದ ಪ್ರೇರಿತ ಹಿಂಸಾಚಾರದಲ್ಲಿ ಮತ್ತು ರಾಜಕಾರಣದಲ್ಲಿ ದೇಶಗಳು ಮುಳುಗಿಹೋಗುತ್ತವೆ. ಒಂದು ವೇಳೆ ಅಮೆರಿಕದ ಹಾದಿಯಲ್ಲಿ ನಡೆಯುವುದಾದರೆ, ಜನರ ಆರ್ಥಿಕ ಸುಧಾರಣೆಗಾಗಿ ಸರಕಾರ ಅನೇಕ ಯೋಜನೆಗಳನ್ನು ಹಮ್ಮಿಕೊಂಡು, ಬಡಜನರಿಗೆ ಸೂಕ್ತ ಬೆಂಬಲ ನೀಡುವ ಕ್ರಮಗಳು ಜಾರಿಯಾಗುತ್ತವೆ. ಸಾಮಾನ್ಯ ಜನರ ಕೊಳ್ಳುವ ಶಕ್ತಿಯನ್ನು ಹೆಚ್ಚಿಸುವುದು, ಮಾರುಕಟ್ಟೆಯನ್ನು ಚೇತರಿಕೆ ಹಾದಿಯಲ್ಲಿ ಸಾಗಿಸಲು ಸೂಕ್ತಕ್ರಮಗಳು ಅಗತ್ಯವಾಗುತ್ತವೆ. ಆದರೆ ಈಗಿನ ಅಮೆರಿಕ ಸರಕಾರದ ಸದ್ಯದ ನಿಲುವುಗಳನ್ನು ಗಮನಿಸಿದರೆ, ಅದು ಹಿಟ್ಲರ್‌ನ ಹಾದಿಯನ್ನು ತುಳಿಯುವ ಲಕ್ಷಣಗಳು ಕಾಣುತ್ತಿವೆ. ಇಂದಿನ ಎಲ್ಲಾ ಸಮಸ್ಯೆಗಳಿಗೆ ಚೀನಾ ದೇಶವೇ ಕಾರಣ ಎನ್ನುವ ಆಲೋಚನೆಯನ್ನು ಅಲ್ಲಿ ಪೋಷಿಸಲಾಗುತ್ತಿದೆ; ಕೊರೋನ ವೈರಾಣುವನ್ನು ಅಲ್ಲಿನ ಅಧ್ಯಕ್ಷರಾದ ಟ್ರಂಪ್ ‘ಚೈನಾ ವೈರಸ್’ ಅಂತಲೇ ಅಧಿಕೃತವಾಗಿ ಕರೆಯುತ್ತಾರೆ. ಇನ್ನು ಆರೋಗ್ಯದ ಸವಾಲಿನ ನಿರ್ವಹಣೆ ಭವಿಷ್ಯದಲ್ಲಿ ಹೇಗೆ ರೂಪುಗೊಳ್ಳಲಿದೆ ಎನ್ನುವುದು ಕುತೂಹಲಕಾರಿ ಅಂಶವಾಗಿದೆ. ಕೊರೋನದ ಚಿಕಿತ್ಸೆಗೆ ಕ್ಲೋರೋಕ್ವಿನ್ ಮಾತ್ರೆಯನ್ನು ತನಗೆ ನೀಡದೇ ಹೋದರೆ ‘ಉಗ್ರ ಕ್ರಮವನ್ನು’ ಭಾರತದ ಮೇಲೆ ಜರುಗಿಸಲಾಗುವುದು ಎಂದಿದ್ದ ಅಮೆರಿಕದ ವರ್ತನೆಯನ್ನು ನಾವು ಗಮನಿಸಬಹುದು.
‘ರೆಮಿಡಿಸ್ವಿಯರ್’ ಅನ್ನುವ ಔಷಧಿ ಕೊರೋನ ನಿರ್ವಹಣೆಯಲ್ಲಿ ಪರಿಣಾಮಕಾರಿ ಔಷಧಿ ಎಂದು ಇತ್ತೀಚೆಗೆ ವಿಶ್ವಸಂಸ್ಥೆ ಘೋಷಿಸಿತು. ಇದರ ಬೆನ್ನಲ್ಲೇ ಅಮೆರಿಕ ಸರಕಾರ ಮಾರುಕಟ್ಟೆಯಲ್ಲಿ ಲಭ್ಯವಿದ್ದ ಶೇ. 90ರಷ್ಟು ರೆಮಿಡಿಸ್ವಿಯರ್ ಔಷಧಿಯನ್ನು ಖರೀದಿ ಮಾಡಿ ತನ್ನ ದಾಸ್ತಾನು ಕೋಠಿಗಳಲ್ಲಿ ಇಟ್ಟುಕೊಂಡಿತು. ಈಗ ಇತರ ದೇಶಗಳು ಈ ಔಷಧಿಗಾಗಿ ಅನೇಕ ತಿಂಗಳು ಕಾಯುವ ಪರಿಸ್ಥಿತಿ ನಿರ್ಮಾಣಗೊಂಡಿದೆ ಎನ್ನುವುದನ್ನು ತಜ್ಞರು ಗುರುತಿಸಿದ್ದಾರೆ. ಸದ್ಯದ ಸ್ಥಿತಿಯಲ್ಲಿ ಲಸಿಕೆಯೊಂದೇ ಕೊರೋನ ಸೋಂಕಿನ ಆರ್ಭಟವನ್ನು ತಡೆಯಲು ಸಾಧ್ಯ ಎಂದಾಗಿದೆ. ಲಸಿಕೆಯ ತಯಾರಿಯಲ್ಲಿ ಅನೇಕ ಕಂಪೆನಿಗಳು ತೊಡಗಿರುವುದು ಸತ್ಯವಾದರೂ, ಇಂಗ್ಲೆಂಡ್ ಹಾಗೂ ಅಮೆರಿಕ ದೇಶಗಳಿಗೆ ಸೇರಿದ ಕಂಪೆನಿಗಳು ಮುಂಚೂಣಿಯಲ್ಲಿವೆ. ಒಂದು ವೇಳೆ ತಯಾರಾದ ಲಸಿಕೆ ನಮಗೆ ಮೊದಲು, ಆಮೇಲೆ ಉಳಿದವರಿಗೆ ಅನ್ನುವ ನಿರ್ಧಾರಕ್ಕೇನಾದರೂ ಈ ದೇಶಗಳು ಬಂದಲ್ಲಿ ಅಪಾಯದ ಪ್ರಮಾಣ ಹೆಚ್ಚಾಗುತ್ತದೆ. ಆದರೆ ಇಲ್ಲೊಂದು ಅವಕಾಶವಿದೆ- ಕೊರೋನ ಲಸಿಕೆ ಸೂಕ್ತವಾಗಿ ಕಾರ್ಯ ನಿರ್ವಹಿಸಬೇಕಾದಲ್ಲಿ, ವಿಶ್ವದ ಎಲ್ಲರೂ ಲಸಿಕೆಯನ್ನು ತೆಗೆದುಕೊಳ್ಳಲೇಬೇಕಿರುತ್ತದೆ. ಯಾವುದೋ ಒಂದು ದೇಶದವರು ಮಾತ್ರ ತೆಗೆದುಕೊಂಡರೆ ಪ್ರಯೋಜನಕ್ಕೆ ಬರುವುದಿಲ್ಲ. ಹಾಗಾಗಿ, ಅನಿವಾರ್ಯವಾಗಿ ಎಲ್ಲರೂ ಎಲ್ಲರಿಗೂ ಲಸಿಕೆ ದೊರೆಯುವಂತೆ ನೋಡಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಇಂತಹ ಪರಿಸ್ಥಿತಿಗಳು ವಿಶ್ವವನ್ನು ಒಂದಾಗಿ ನಡೆಯುವಂತೆ ಮಾಡುವ ಅವಕಾಶವನ್ನು ಸೃಷ್ಟಿಸುವ ಸಾಧ್ಯತೆಗಳಿವೆ.