ಪ್ರಬಲ ನಾಯಕತ್ವದ ಮಾದರಿ ಏಂಜೆಲಾ ಮರ್ಕೆಲ್

Update: 2020-08-08 19:30 GMT

ತಮ್ಮನ್ನು ರಕ್ಷಿಸಿದ ಏಂಜೆಲಾ ಕುರಿತು ಜರ್ಮನರಲ್ಲಿ ಇರುವ ಪ್ರೀತಿ ಮತ್ತು ಗೌರವ ಹೇಗಿದೆ ಎಂದರೆ, 2021ರಲ್ಲಿ ನಡೆಯಲಿರುವ ಚುನಾವಣೆಯೇ ಬೇಡ. ಏಂಜೆಲಾರೇ ದೇಶದ ಚಾನ್ಸಲರಾಗಿ ಮುಂದುವರಿಯಲಿ ಎನ್ನುವ ಚಳವಳಿ ಅಲ್ಲಿ ಆರಂಭಗೊಂಡಿದೆ! ಕೊರೋನ ಕಾರಣದಿಂದ ತೀವ್ರ ಆರ್ಥಿಕ ಸಮಸ್ಯೆಯನ್ನು ಎದುರಿಸುತ್ತಿರುವ ಒಕ್ಕೂಟದ ದೇಶಗಳು ಸಹಾಯಕ್ಕಾಗಿ ಏಂಜೆಲಾರೆಡೆಗೆ ನೋಡುತ್ತಿವೆ. ಎಲ್ಲರ ಹಿತಕಾಯಲು ಸದಾ ಮುಂದಿರುವ ಏಂಜೆಲಾ 500 ಬಿಲಿಯನ್ ಯೂರೋ ಮೌಲ್ಯದ ಸಹಾಯನಿಧಿಯ ಸ್ಥಾಪನೆಗಾಗಿ ಫ್ರಾನ್ಸ್‌ನ ಅಧ್ಯಕ್ಷ ಮ್ಯಾಕ್ರಾನ್ ಅವರ ಬೆಂಬಲದೊಂದಿಗೆ ಕಾರ್ಯಾಚರಣೆಗಿಳಿದಿದ್ದಾರೆ.


1893ರಲ್ಲಿ ಸಂಶೋಧಕ ಎಡಿಸಿನ್ ಬೌದ್ಧಿಕ ಯುದ್ಧವೊಂದರಲ್ಲಿ ತೊಡಗಿದ್ದ. ತನ್ನೆಲ್ಲ ಹಣ ಮತ್ತು ಜನಬೆಂಬಲಗಳನ್ನು ಇದಕ್ಕಾಗಿ ಅವನು ಮೀಸಲಿಟ್ಟಿದ್ದ. ವಿಷಯ ಇಷ್ಟೆ: ಡೈರೆಕ್ಟ್‌ಕರೆಂಟ್ (ಡಿ.ಸಿ) ಸುರಕ್ಷಿತವಾದ ವಿದ್ಯುತ್ ಮೂಲವೆನ್ನುವುದು ಎಡಿಸನ್ ಪ್ರತಿಪಾದನೆಯಾದರೆ, ಆಲ್ಟರ್‌ನೇಟಿವ್‌ಕರೆಂಟ್(ಎ.ಸಿ) ಸುರಕ್ಷಿತವಷ್ಟೇ ಅಲ್ಲದೆ, ವಿತರಣೆಗೂ ಸುಲಭ ಎನ್ನುವುದು ಮತ್ತೋರ್ವ ವಿಜ್ಞಾನಿ ಟೆಸ್ಲಾನ ವಾದವಾಗಿತ್ತು. ದೂರದ ಸರ್ಬಿಯಾದಿಂದ ಅಮೆರಿಕಕ್ಕೆ ವಲಸೆ ಬಂದಿದ್ದ ಯುವವಿಜ್ಞಾನಿ ಟೆಸ್ಲಾ ಅಪಾರ ಖ್ಯಾತಿಯ ಎಡಿಸನ್ ಮುಂದೆ ಮಂಕಾಗಿದ್ದ. ಎಡಿಸನ್‌ಗೆ ತಾನು ಸೋಲಬಾರದು ಎನ್ನುವ ಹಠವಿದ್ದರೆ, ಟೆಸ್ಲಾಗೆ ಜನರ ಶ್ರಮ ಕಡಿಮೆಯಾಗಬೇಕೆಂಬ ಉದ್ದೇಶವಿತ್ತು. ಅಮೆರಿಕದ ಅನೇಕ ನಗರಗಳಲ್ಲಿ ಡಿಸಿ ಕರೆಂಟ್ ಉತ್ಪಾದನೆಯ ಸ್ಥಾವರಗಳನ್ನು ಸ್ಥಾಪಿಸಿದ್ದ ಎಡಿಸನ್‌ಗೆ ತನ್ನ ಕಂಪೆನಿ ಗಳಿಸುತ್ತಿದ್ದ ಲಾಭವನ್ನು ಕಳೆದುಕೊಳ್ಳಬಾರದೆಂಬ ಒತ್ತಾಸೆಯೂ ಇತ್ತು. ಇಲ್ಲೊಂದು ಸೂಕ್ಷ್ಮವಿತ್ತು. ಡಿಸಿ ಕರೆಂಟನ್ನು ಉತ್ಪಾದನಾ ಸ್ಥಾವರದಿಂದ ಒಂದು ಕಿಲೋಮೀಟರ್‌ದೂರದವರೆಗೆ ಮಾತ್ರ ಸಾಗಿಸಲು ಅವಕಾಶವಿರುತಿತ್ತು. ಆದರೆ ಎಸಿ ಕರೆಂಟನ್ನು ನೂರಾರು ಮೈಲಿ ದೂರ ಸಾಗಿಸುವುದಷ್ಟೇ ಅಲ್ಲದೆ, ಪ್ರವರ್ತಕಗಳನ್ನು ಬಳಸಿಕೊಂಡು ಅದರ ಶಕ್ತಿಯನ್ನು ಹೆಚ್ಚಿಸುವ ಇಲ್ಲವೇ ಕುಗ್ಗಿಸುವ ಅವಕಾಶವಿತ್ತು. ಟೆಸ್ಲಾ ಇದರ ಉತ್ಪಾದನೆ ಹಾಗೂ ವಿತರಣೆಯ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವುದರ ಜೊತೆಗೆ ಇದನ್ನು ಬಳಸಿಕೊಳ್ಳುವ ಮೋಟಾರ್ ಕೂಡ ಕಂಡುಹಿಡಿದಿದ್ದನು. ಬಹುಉಪಯೋಗಿ ಅವಕಾಶವನ್ನು ಹೊಂದಿದ್ದ ಟೆಸ್ಲಾನ ಎಸಿ ಮೋಟಾರು ಎಡಿಸನ್ ಪ್ರಭಾವದ ಕಾರಣದಿಂದ ಮಾರುಕಟ್ಟೆಯಲ್ಲಿ ಸ್ಥಾನ ಪಡೆಯಲು ಪರದಾಡುತಿತ್ತು. ಕೊನೆಗೆ ಟೆಸ್ಲಾ ಇದರ ತಂತ್ರಜ್ಞಾನವನ್ನು ಬಳಸಿಕೊಳ್ಳಲು ಕಂಪೆನಿಯೊಂದಕ್ಕೆ ಯಾವುದೇ ಷರತ್ತುಗಳಿಲ್ಲದೆ ನೀಡಿಬಿಟ್ಟ. ಇದರಿಂದ ಅವನು ಬಡವನಾದ, ಆದರೆ ಮಾನವ ಜನಾಂಗ ಶ್ರೀಮಂತವಾಯಿತು. ಅವನ ಕೊನೆಯ ದಿನಗಳು ಬಡತನದಲ್ಲಿ ಕಳೆದುಹೋದರೆ, ಅವನ ಮೋಟಾರುಗಳು ಮನುಷ್ಯ ಸಮಾಜವನ್ನು ಇನ್ನಷ್ಟು ಉನ್ನತಿಗೆ ಸಾಗಿಸಿದವು.

ಹಠಮಾರಿ ಎಡಿಸನ್‌ನ ಡಿಸಿ ಕರೆಂಟ್ ಸೋಲನ್ನು ಕಂಡರೆ, ಟೆಸ್ಲಾನ ಎಸಿ ಕರೆಂಟ್‌ಗೆಲುವಿನ ಹಾದಿ ಹಿಡಿಯಿತು. 1943ರಲ್ಲಿ ಟೆಸ್ಲಾ ತೀರಿಹೋದನು. ಜಗತ್ತು ಅವನನ್ನು ಮರೆತುಬಿಟ್ಟಿತು. ಪ್ರಭಾವಿ ಎಡಿಸನ್ ಶಾಲೆಗಳ ಪಾಠದಲ್ಲಿ ಉಳಿದುಕೊಂಡರೆ, ಟೆಸ್ಲಾನ ಎಸಿ ಮೋಟಾರುಗಳು ಅದೇ ಶಾಲೆಯ ನೀರಿನ ತೊಟ್ಟಿಗಳಿಗೆ ನೀರು ತುಂಬುತ್ತಿದ್ದವು! ವಿಜ್ಞಾನಿ ಟೆಸ್ಲಾಗೆ ಭವಿಷ್ಯದ ಕುರಿತು ಸ್ಪಷ್ಟತೆಯಿದ್ದರೆ, ಹಠಮಾರಿ ಎಡಿಸನ್‌ಗೆ ತನ್ನ ವೈಯಕ್ತಿಕ ಅಹಂ ಮಾತ್ರವಷ್ಟೇ ಮುಖ್ಯವಾಗಿತ್ತು. ಇಂತಹುದೇ ಯುದ್ಧದಲ್ಲಿ ಮತ್ತೋರ್ವ ವಿಜ್ಞಾನಿ ಇಂದು ಭಾಗಿಯಾಗಿದ್ದಾರೆ. ಅವರ ಹೆಸರು ಏಂಜೆಲಾ ಮರ್ಕೆಲ್. ಜರ್ಮನಿಯ ಚಾನ್ಸಲರ್. ಜೊತೆಗೆ ಯೂರೋಪಿಯನ್ ಒಕ್ಕೂಟದ ಈಗಿನ ಅಧ್ಯಕ್ಷರೂ ಹೌದು. ಇವರು ಮೂಲತಃ ರಾಸಾಯನಿಕ ವಿಜ್ಞಾನಿ. 1989ರಲ್ಲಿ ರಾಜಕೀಯ ಪ್ರವೇಶಿಸಿದವರು. ಮುಂದೆ 2005ರಲ್ಲಿ ಮೂರು ಪಕ್ಷಗಳ ಸಮ್ಮಿಶ್ರ ಸರಕಾರದಲ್ಲಿ ಚಾನ್ಸಲರಾಗಿ ಚುನಾಯಿತರಾದರು. ಅಲ್ಲಿಂದ ಇಲ್ಲಿಯವರೆಗೆ ಈಕೆ ಜರ್ಮನಿಯ ಜೊತೆಗೆ ಯುರೋಪಿಯನ್ ಒಕ್ಕೂಟದ ಪ್ರಬಲ ಶಕ್ತಿಯಾಗಿದ್ದಾರೆ. ಎರಡು ಮಹಾಯುದ್ಧಗಳನ್ನು ಮಾಡಿದ ಯೂರೋಪಿನ ರಾಷ್ಟ್ರಗಳು ಕಟ್ಟಿಕೊಂಡಿರುವ ಒಕ್ಕೂಟದ ಹಿತವನ್ನು ಕಾಯುವುದರಲ್ಲಿ ಏಂಜೆಲಾ ಯಾವಾಗಲೂ ಮುಂದೆ. ಇದರಿಂದಾಗಿ, ತಮ್ಮ ದೇಶದವರ ವಿರೋಧ ಎದುರಿಸಿರುವುದಿದೆ. ಸಮಸ್ಟಿಯ ಹಿತವನ್ನು ಕಾಯಲು ಕೆಲವು ಸಣ್ಣಪುಟ್ಟ ನಷ್ಟವನ್ನು ಅನುಭವಿಸುವುದು ಅನಿವಾರ್ಯವೆನ್ನುವ ಸತ್ಯವನ್ನು ಎಲ್ಲರಿಗೂ ಬಿಡಿಸಿ ಹೇಳುವುದರಲ್ಲಿ ಇವರು ಯಾವಾಗಲೂ ಮುಂದು. ಸಮ್ಮಿಶ್ರ ಸರಕಾರದ ಹೊಣೆಯಿದ್ದರೂ, ಬಹುಸಂಖ್ಯಾತರ ಒಳಿತಿಗಾಗಿ ಎಂತಹುದೇ ವಿರೋಧವನ್ನು ಕಟ್ಟಿಕೊಳ್ಳಲು ಹೆದರದ ಗಟ್ಟಿಗಿತ್ತಿ ಈಕೆ. ಅನೇಕ ವೇಳೆ ದೇಶದ ಸಂಸತ್ತಿನಲ್ಲಿ ಸೋಲು ಉಂಟಾದರೂ, ಮತ್ತೆ ಮತ್ತೆ ವಿಷಯವನ್ನು ಬೇಸರವಿಲ್ಲದೆ ಎಲ್ಲರಿಗೂ ವಿವರಿಸುವ ತಾಳ್ಮೆಯಿರುವವರು.

ಬಹಳ ತಣ್ಣಗಿನ ಸ್ವಭಾವದ ಈಕೆ, ಅತ್ಯಂತ ಪ್ರಬಲವಾದ ನಾಯಕಿ ಎನ್ನುವುದನ್ನು ತಜ್ಞರು ಒಪ್ಪುತ್ತಾರೆ. ಏಂಜೆಲಾರ ನಾಯಕತ್ವದ ಶೈಲಿ ವಿಶಿಷ್ಟವಾದುದು. ಇಲ್ಲಿ ರಾಜಕೀಯ ಎದುರಾಳಿಗಳನ್ನು ಸೋಲಿಸುವ ಯತ್ನಕ್ಕಿಂತ ಒಲಿಸಿಕೊಳ್ಳುವ ಗುರಿಯಿರುತ್ತದೆ. ಸಾವಿರಾರು ಸಂಖ್ಯೆಯಲ್ಲಿ ಯುರೋಪನ್ನು ಅಕ್ರಮವಾಗಿ ಪ್ರವೇಶಿಸುತ್ತಿದ್ದ ವಲಸಿಗರ ವಿರುದ್ಧ ಕೆಲವು ವರ್ಷಗಳ ಹಿಂದೆ ಕಠಿಣ ಕ್ರಮಗಳನ್ನು ಜರುಗಿಸಬೇಕೆಂಬ ಕೂಗು ಬಲವಾಗಿತ್ತು. ಕೆಲವು ದೇಶಗಳಂತೂ ತಮ್ಮ ಗಡಿಯುದ್ದಕ್ಕೂ ತಂತಿಬೇಲಿಯನ್ನು ಹೆಣೆದು ಕುಳಿತವು. ಆಗ ಏಂಜೆಲಾ ತಮ್ಮ ಜನರೊಂದಿಗೆ ಮಾತಿಗಿಳಿದರು. ನೊಂದು ಬಂದಿರುವವರನ್ನು ಸಲಹುವುದು ಮನುಷ್ಯತ್ವ ಅಲ್ಲವೇ ಎನ್ನುವ ಪ್ರಶ್ನೆಯನ್ನು ಮುಂದಿಟ್ಟರು. ಜೊತೆಗೆ ಇತರ ದೇಶಗಳ ಜನರನ್ನು ಭೇಟಿಯಾಗಿ ಅವರ ಮನವೊಲಿಸುವ ಯತ್ನ ಮಾಡಿದರು. ಏಂಜೆಲಾರ ಸತತ ಪ್ರಯತ್ನದ ಪರಿಣಾಮ, ಪ್ರತಿವರ್ಷ ಇಂತಿಷ್ಟು ಸಂಖ್ಯೆಯಲ್ಲಿ ವಲಸಿಗರನ್ನು ಸ್ವೀಕರಿಸುವ ಒಪ್ಪಂದಕ್ಕೆ ಯೂರೋಪಿನ ಒಕ್ಕೂಟದ ದೇಶಗಳು ಬಂದವು. ಹಾಗೇ ನೋಡಿದರೆ, ಏಂಜೆಲಾ ಎಲ್ಲದರಲ್ಲೂ ಗೆಲುವನ್ನು ಕಂಡಿಲ್ಲ. ಅವರದ್ದೇ ಸಮ್ಮಿಶ್ರ ಸರಕಾರದ ಪಕ್ಷಗಳು ಅಲ್ಲಿನ ಸಂಸತ್ತಿನಲ್ಲಿ ಅವರ ಕೆಲವು ಕ್ರಮಗಳನ್ನು ಸೋಲಿಸಿದ ಉದಾಹರಣೆಗಳಿವೆ. ಯೂರೋಪಿನ ಒಕ್ಕೂಟದ ಸಂಸತ್ತಿನಲ್ಲೂ ಇವರನ್ನು ಸೋಲಿಸಲಾಗಿದೆ. ಆದರೆ ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ಏಂಜೆಲಾ ತಮ್ಮ ಯತ್ನವನ್ನು ಮರು ಆರಂಭಿಸುವುದನ್ನಂತೂ ಬಿಡುವುದಿಲ್ಲ.

ತನ್ನ ಕೆಲಸದ ಹಿಂದೆ ಸಮಷ್ಟಿಯ ಒಳಿತು ಅಡಗಿದೆ ಎಂದಾದರೆ, ಎಷ್ಟೇ ಸೋಲುಗಳಾದರೂ ಅವರು ಹಿಂದೆ ಸರಿಯುವುದಿಲ್ಲ. ಅವರ ವಿರೋಧಿಗಳು ತಮ್ಮ ಹಿತಾಸಕ್ತಿಗಳ ಕಾರಣದಿಂದ ಅವರನ್ನು ಸೋಲಿಸಿದರು, ಅವರ ಉದ್ದೇಶದ ಹಿಂದಿನ ಪ್ರಾಮಾಣಿಕತೆಯನ್ನು ಎಂದಿಗೂ ಪ್ರಶ್ನಿಸಿಲ್ಲ. ಇದುವೇ ಏಂಜೆಲಾ ಅವರ ನಾಯಕತ್ವದ ಗುಣವಾಗಿದೆ. ಏಂಜೆಲಾ ನಾಯಕತ್ವದಲ್ಲಿ ಎದ್ದುಕಾಣುವುದು ಕರ್ತವ್ಯ ನಿಷ್ಠೆ ಮತ್ತು ತಪ್ಪುಗಳನ್ನು ಒಪ್ಪಿಕೊಂಡು ತಿದ್ದಿಕೊಳ್ಳುವ ಗುಣ. ಹೀಗಾಗಿಯೇ, ಅವರ ವಿರೋಧಿಗಳು ಸಹ ಇವರ ಮೇಲೆ ವೈಯಕ್ತಿಕ ದಾಳಿ ಮಾಡಲು ಹಿಂದೆಮುಂದೆ ನೋಡಬೇಕಾದ ಪರಿಸ್ಥಿತಿಯಿರುತ್ತದೆ. ದೇಶವನ್ನು ಕಾಡಿದ ಕೊರೋನವನ್ನು ಅವರು ನಿಭಾಯಿಸಿದ್ದು ಸಹ ಒಂದು ವಿಶೇಷವೇ. ವಿಶ್ವ ಆರೋಗ್ಯ ಸಂಸ್ಥೆ ಕೊರೋನ ಸೋಂಕನ್ನು ‘ಮಹಾ ಸಾಂಕ್ರಾಮಿಕ’ ಎಂದು ಘೋಷಿಸಿದ ಕೂಡಲೇ ಅವರು ತಮ್ಮ ದೇಶದವರನ್ನು ಉದ್ದೇಶಿಸಿ ಮಾತನಾಡಿದರು. ‘‘ತಜ್ಞರು ಹೇಳುವ ಪ್ರಕಾರ ಇದೊಂದು ಅಪಾಯಕಾರಿ ಸೋಂಕಾಗಿರುತ್ತದೆ. ವಿವರಗಳನ್ನು ಕೇಳಿದ ಮೇಲೆ ನನ್ನಲ್ಲೂ ಭೀತಿ ಮೂಡಿದೆ. ನನಗೆ ನಿಮ್ಮೆಲ್ಲರ ಆರೋಗ್ಯದ ಕುರಿತು ಆತಂಕವಾಗುತ್ತಿದೆ. ಇದು ಹೊಸ ಕಾಯಿಲೆಯಾಗಿರುವ ಕಾರಣ, ವಿಜ್ಞಾನಿಗಳಿಗೆ ತಿಳಿದಿರುವುದು ಅಲ್ಪವಾಗಿರುತ್ತದೆ. ಹೀಗಿದ್ದರೂ, ಅವರ ತಿಳಿವಳಿಕೆಗೆ ಅನುಗುಣವಾಗಿ ಕೆಲವು ಸಲಹೆಗಳನ್ನು ನೀಡಿದ್ದಾರೆ. ಅವರು ಹೇಳಿದಂತೆ ನಾವೆಲ್ಲರೂ ನಡೆಯೋಣ. ದಯಮಾಡಿ ನಾವು ನೀಡುವ ಸೂಚನೆಗಳನ್ನು ಪಾಲಿಸಿರಿ.

ಹೊಸ ಮಾಹಿತಿ ಲಭ್ಯವಾದಂತೆ ನಿಮ್ಮಿಂದಿಗೆ ನಾನು ಹಂಚಿಕೊಳ್ಳುತ್ತೇನೆ. ಎಲ್ಲರೂ ಸಹಕರಿಸಿ’’ ಎಂದವರು ಕೇಳಿಕೊಂಡರು. ನಂತರದ ದಿನಗಳಲ್ಲಿ ಏಂಜೆಲಾ ನಡೆದುಕೊಂಡ ರೀತಿ ನಿಜಕ್ಕೂ ಆದರ್ಶವಾದುದು. ವಿಜ್ಞಾನಿಗಳ ಸಲಹೆಯ ಅನುಸಾರ ಕ್ರಮಗಳನ್ನು ಜರುಗಿಸಿದರು. ವೈದ್ಯರನ್ನು ಮತ್ತು ಆರೋಗ್ಯಸೇವೆಗಳನ್ನು ನೀಡುವವರನ್ನು ರಕ್ಷಿಸಲು ಬೇಕಾದ ಕ್ರಮಗಳನ್ನು ಜರುಗಿಸಿದರು. ಪ್ರತಿ ಸಾವಿರ ಮಂದಿಗೆ 27 ವೆಂಟಿಲೇಟರ್ ಸೇವೆ ಲಭ್ಯವಿರುವ ಹಾಸಿಗೆಗಳನ್ನು ಸ್ಥಾಪಿಸಿದರು. ಪ್ರಜೆಗಳಿಗೆ ಆಹಾರದ ವ್ಯವಸ್ಥೆ ಮಾಡಿದರು. ದೇಶದ ವಿವಿಧ ಪ್ರದೇಶಗಳಲ್ಲಿ ನೆಲೆಸಿರುವ ವಲಸಿಗರ ಯೋಗಕ್ಷೇಮಕ್ಕೆ ಮುಂದಾದರು. ಕೆಲವು ತೀವ್ರ ಕ್ರಮಗಳ ಕುರಿತು ಅಸಮಾಧಾನಗಳು ಎದ್ದಾಗ, ತಾವೇ ಮುಂದೆ ನಿಂತು ಅದರ ಹಿಂದಿನ ಕಾರಣಗಳನ್ನು ವಿವರಿಸಿದರು. ಅನೇಕ ವೇಳೆ, ಈ ಭೀಕರ ಸಾಂಕ್ರಾಮಿಕದ ಮುಂದೆ ತಾವೆಷ್ಟು ಅಸಹಾಯಕರಾಗಿದ್ದೇವೆ ಎನ್ನುವುದನ್ನು ಮುಕ್ತವಾಗಿ ಹಂಚಿಕೊಂಡರು. ಮಾಧ್ಯಮಗಳಲ್ಲಿ ತಮ್ಮ ಆತಂಕ ಹಾಗೂ ಭಯಗಳನ್ನು ಯಾವುದೇ ಎಗ್ಗಿಲ್ಲದೆ ಅಭಿವ್ಯಕ್ತಿಗೊಳಿಸಿದರು. ಜರ್ಮನರು ಏಂಜೆಲಾರ ಮಾತಿನಂತೆಯೇ ನಡೆದುಕೊಂಡರು. ಯೂರೋಪಿನಲ್ಲೇ ಅತ್ಯಂತ ಕನಿಷ್ಠ ಸಾವುಗಳನ್ನು ಕಂಡ ದೇಶ ಜರ್ಮನಿಯಾಗಿದೆ!

ತಮ್ಮನ್ನು ರಕ್ಷಿಸಿದ ಏಂಜೆಲಾ ಕುರಿತು ಜರ್ಮನರಲ್ಲಿ ಇರುವ ಪ್ರೀತಿ ಮತ್ತು ಗೌರವ ಹೇಗಿದೆ ಎಂದರೆ, 2021ರಲ್ಲಿ ನಡೆಯಲಿರುವ ಚುನಾವಣೆಯೇ ಬೇಡ. ಏಂಜೆಲಾರೇ ದೇಶದ ಚಾನ್ಸಲರಾಗಿ ಮುಂದುವರಿಯಲಿ ಎನ್ನುವ ಚಳವಳಿ ಅಲ್ಲಿ ಆರಂಭಗೊಂಡಿದೆ! ಕೊರೋನ ಕಾರಣದಿಂದ ತೀವ್ರ ಆರ್ಥಿಕ ಸಮಸ್ಯೆಯನ್ನು ಎದುರಿಸುತ್ತಿರುವ ಒಕ್ಕೂಟದ ದೇಶಗಳು ಸಹಾಯಕ್ಕಾಗಿ ಏಂಜೆಲಾರೆಡೆಗೆ ನೋಡುತ್ತಿವೆ. ಎಲ್ಲರ ಹಿತಕಾಯಲು ಸದಾ ಮುಂದಿರುವ ಏಂಜೆಲಾ 500 ಬಿಲಿಯನ್ ಯೂರೋ ಮೌಲ್ಯದ ಸಹಾಯನಿಧಿಯ ಸ್ಥಾಪನೆಗಾಗಿ ಫ್ರಾನ್ಸ್‌ನ ಅಧ್ಯಕ್ಷ ಮ್ಯಾಕ್ರಾನ್ ಅವರ ಬೆಂಬಲದೊಂದಿಗೆ ಕಾರ್ಯಾಚರಣೆಗಿಳಿದಿದ್ದಾರೆ. ಕೊರೋನ ಪಿಡುಗಿನ ಆರಂಭದಲ್ಲಿ ಏಂಜೆಲಾರು ಅಮೆರಿಕದ ಅಧ್ಯಕ್ಷ ಟ್ರಂಪ್‌ಗೊಂದು ಪಾಠ ಹೇಳಿದ್ದರು. ಜರ್ಮನಿಯ ಸಾರ್ವಜನಿಕ ವಿಶ್ವವಿದ್ಯಾನಿಲಯದ ಸಂಶೋಧಕರೊಬ್ಬರು ಸಂಶೋಧಿಸುತ್ತಿದ್ದ ಔಷಧಿಯು ಕೊರೋನಕ್ಕೆ ಸೂಕ್ತ ಪರಿಹಾರವಾಗಲಿದೆ ಎನ್ನುವ ಸುದ್ದಿಯನ್ನು ಕೇಳಿದ ಟ್ರಂಪ್ ಅವರು ಈ ವಿಜ್ಞಾನಿಗೆ ‘‘ಎಷ್ಟು ಹಣ ಬೇಕಾದರೂ ತೆಗೆದುಕೊಳ್ಳಿರಿ, ಔಷಧಿಯ ಹಕ್ಕನ್ನು ನಮಗೆ ನೀಡಿರಿ’’ ಎಂದು ಚೌಕಾಸಿಗಿಳಿದರು. ಇದನ್ನು ಕಟುವಾಗಿ ಖಂಡಿಸಿದ ಏಂಜೆಲಾರು, ‘‘ಜರ್ಮನಿಯ ವಿಜ್ಞಾನಿಯು ಸಂಶೋಧಿಸುವ ಔಷಧಿ ಸರಕಾರಗಳ ಮೂಲಕ ಎಲ್ಲಾ ದೇಶದ ಜನರಿಗೂ ತಲುಪಲಿದೆ’’ ಎಂದು ಘೋಷಿಸಿದರು! ದಿಟವಾದ ವಿಶ್ವನಾಯಕತ್ವ ಗುಣವಿದು. ವಿಶ್ವದ ಎಲ್ಲಾ ಸಮಾಜಗಳು ರಾಜಕೀಯ ನಾಯಕತ್ವದ ಮಾದರಿಗಾಗಿ ಒಮ್ಮೆ ನೋಡಲೇ ಬೇಕಿರುವ ವ್ಯಕ್ತಿತ್ವ ಏಂಜೆಲಾ ಮರ್ಕೆಲ್ ಅವರದ್ದಾಗಿದೆ.

Writer - ಸದಾನಂದ ಆರ್.

contributor

Editor - ಸದಾನಂದ ಆರ್.

contributor

Similar News