ಬ್ರಿಟಿಷರೇ ‘ಭಾರತ ಬಿಟ್ಟು ತೊಲಗಿ’ ಚಳವಳಿಯ ಇಂದಿನ ಮಹತ್ವವೇನು?

Update: 2020-08-15 05:49 GMT

ಜನಸಾಮಾನ್ಯರು ತಮ್ಮ ದೇಶ ಹಾಗೂ ಹಕ್ಕುಗಳಿಗಾಗಿ ಚಿತ್ರಹಿಂಸೆ, ಕಗ್ಗೊಲೆಗಳಿಗೆ ಈಡಾಗುತ್ತಾ ಅಪಾರ ತ್ಯಾಗ, ಬಲಿದಾನಗಳನ್ನು ಮಾಡುತ್ತಾ ಬರಬೇಕಾಯಿತು. ಇದು ಇಂದಿನವರೆಗೂ ಏರುಗತಿಯಲ್ಲೇ ಸಾಗುತ್ತಾ ಈಗದು ಪರಾಕಾಷ್ಠೆಯತ್ತ ಸಾಗಿದೆ. ಇಂದು ಈ ದೇಶದ ಜನಸಾಮಾನ್ಯರು ತಮ್ಮ ಬದುಕುವ ಹಕ್ಕುಗಳನ್ನೇ ಕಳೆದುಕೊಳ್ಳುವ ಹಂತ ತಲುಪಿದ್ದಾರೆ. ಸೂರು, ಭೂಮಿ, ಬದುಕು, ಭವಿಷ್ಯಗಳಿಗೆ ಯಾವುದೇ ಖಾತರಿಯೂ ಇಲ್ಲದಂತಹ ಸ್ಥಿತಿ ಎದುರಾಗಿದೆ.

ನಂದಕುಮಾರ್ ಕೆ. ಎನ್.

1942ರಲ್ಲಿ ನಡೆಯಿತೆಂದು ಬಿಂಬಿತವಾದ ‘ಕ್ವಿಟ್ ಇಂಡಿಯಾ’ ಚಳವಳಿ ಬ್ರಿಟಿಷ್ ವಸಾಹತುಶಾಹಿಗೆ ಇನ್ನು ಮುಂದೆ ತಮ್ಮ ನೇರ ಆಡಳಿತ ಮುಂದುವರಿಸಿ ಕೊಂಡು ಹೋಗಲು ಸಾಧ್ಯವಾಗದು ಎಂಬ ಸ್ಪಷ್ಟ ಸಂದೇಶವನ್ನು ರವಾನಿಸಿತ್ತು. ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಪಕ್ಷದ ನಾಯಕ ಮೋಹನದಾಸ ಕರಮಚಂದ ಗಾಂಧಿ ಅನಿವಾರ್ಯವಾಗಿ ಈ ಕರೆಯನ್ನು ನೀಡಬೇಕಾದ ಪರಿಸ್ಥಿತಿಯನ್ನು ತಂದಿಕ್ಕಿತು. ಅವರು ಅದಕ್ಕೆ ‘ಮಾಡು ಇಲ್ಲವೆ ಮಡಿ’ ಎಂದು ಸೇರಿಸಿದರು.

ವಾಸ್ತವದಲ್ಲಿ ಬ್ರಿಟಿಷ್ ವಿರೋಧಿ ಹೋರಾಟದಲ್ಲಿದ್ದ ಜನಸಾಮಾನ್ಯರ ಮೂಲ ಆಶಯ ಮೊದಲಿನಿಂದಲೂ ಇದೇ ಆಗಿತ್ತು. ಬ್ರಿಟಿಷ್ ಆಡಳಿತವನ್ನು ಹೊರಗಟ್ಟಿ ಬಹುಸಂಖ್ಯಾತ ಜನಸಾಮಾನ್ಯರಿಗೆ ನೈಜವಾದ ಸ್ವಾತಂತ್ರ್ಯ, ನೈಜವಾದ ಸಮಾನತೆ, ನೈಜವಾದ ಸಹೋದರತೆಯನ್ನು ಒಳಗೊಂಡಂತಹ ಆಶೋತ್ತರಗಳೊಂದಿಗೆ ಈ ದೇಶದ ರೈತಾಪಿಗಳು, ಆದಿವಾಸಿಗಳು ಬ್ರಿಟಿಷರ ವಿರುದ್ಧ ಸಮರದಲ್ಲಿ ತೊಡಗಿದ್ದರು.

ಆದರೆ ಇಂಡಿಯನ್ ರಾಷ್ಟ್ರೀಯ ಕಾಂಗ್ರೆಸ್ 1942ರವರೆಗೂ ಜನಸಾಮಾನ್ಯರ ಈ ಆಶೋತ್ತರಗಳನ್ನು ಪ್ರತಿನಿಧಿಸುವಂತಹ ಯಾವುದೇ ಹಕ್ಕೊತ್ತಾಯಗಳನ್ನಾಗಲೀ ಮಂಡಿಸಿರಲಿಲ್ಲ. ಆ ಬಗ್ಗೆ ಹೋರಾಟವನ್ನೂ ಸಂಘಟಿಸಿರಲಿಲ್ಲ. ಬದಲಿಗೆ ಜನಸಾಮಾನ್ಯರ ಆಶೋತ್ತರಗಳನ್ನು ದಿಕ್ಕು ತಪ್ಪಿಸುವ ಬೇಡಿಕೆಗಳನ್ನು ಬ್ರಿಟಿಷ್ ಆಡಳಿತದ ಮುಂದೆ ಇಡುತ್ತಾ ಅವರ ಆಡಳಿತದಡಿ ತಮಗೊಂದಿಷ್ಟು ಅಲ್ಪಅವಕಾಶಕ್ಕಾಗಿ ಪ್ರಯತ್ನಿಸುತ್ತಾ ಬಂದಿತ್ತು. ಆದರೆ 1942ರ ವೇಳೆಗೆ ಈ ಆಟ ಮುಂದುವರಿಸಲು ಸಾಧ್ಯವಾಗದಂತಹ ಪರಿಸ್ಥಿತಿ ಏರ್ಪಟ್ಟಿತ್ತು. ಜನರು ಬ್ರಿಟಿಷ್ ವಸಾಹತುಶಾಹಿ ಆಡಳಿತವನ್ನು ಸಂಪೂರ್ಣವಾಗಿ ಕೊನೆಗೊಳಿಸಿ ನೈಜ ಪ್ರಜಾಪ್ರಭುತ್ವ ಸ್ಥಾಪನೆಯಾಗಬೇಕೆಂಬ ಕೆಚ್ಚಿನಿಂದ ವೀರಾವೇಶದಲ್ಲಿ ಹೋರಾಟಗಳನ್ನು ನಡೆಸುತ್ತಿದ್ದರು. ಜನಸಾಮಾನ್ಯರ ಹತ್ತಾರು ರೂಪಗಳ ಸಮರಶೀಲ ಹೋರಾಟಗಳಲ್ಲಿ ತೊಡಗಿದ್ದರು. ಈ ದೇಶದ ಭೂಮಿ ಹಾಗೂ ಇನ್ನಿತರ ಸಂಪನ್ಮೂಲಗಳು, ರಾಜಕೀಯ ಅಧಿಕಾರದ ಮೇಲಿನ ಹಿಡಿತ ಈ ದೇಶದ ಜನಸಾಮಾನ್ಯರದ್ದಾಗಬೇಕೆಂಬ ಸ್ಪಷ್ಟ ನಿಲುವು ಹೋರಾಟದಲ್ಲಿದ್ದ ಬಹುಸಂಖ್ಯಾತ ಜನಸಾಮಾನ್ಯರದ್ದಾಗಿತ್ತು. ಈ ಸ್ಪಷ್ಟತೆಯೊಂದಿಗೆ ಭಗತ್ ಸಿಂಗ್ ಮತ್ತವರ ಸಂಗಾತಿಗಳಂತಹವರು ಜನರನ್ನು ಸಂಘಟಿಸಿ ಹೋರಾಡಿದ್ದರು. ಅವರು ಮನುಷ್ಯ ಮನುಷ್ಯನನ್ನು ಶೋಷಣೆ ನಡೆಸಲಾಗದಂತಹ ವ್ಯವಸ್ಥೆಯನ್ನು ರೂಪುಗೊಳಿಸಲು, ಜಾತಿಮತ ಭೇದವಿಲ್ಲದ ಆಡಳಿತ ವ್ಯವಸ್ಥೆ ರಚಿಸಬೇಕೆಂದು ಬಯಸಿದ್ದರು. ಅದಕ್ಕಾಗಿಯೇ ಇವರು ಪ್ರಾಣತ್ಯಾಗವನ್ನೂ ಮಾಡಿದ್ದರು.

1942ರ ವೇಳೆಗಾಗಲೇ ಬ್ರಿಟಿಷ್ ವಸಾಹತುಶಾಹಿ ವಿರೋಧಿ ಹೋರಾಟಗಳು ಮುಗಿಲು ಮುಟ್ಟಿದ್ದವು. ರೈತಾಪಿಗಳು, ಆದಿವಾಸಿ ಬುಡಕಟ್ಟು ಸಮುದಾಯಗಳು ಸಶಸ್ತ್ರ ಸಮರದಲ್ಲಿ ತೊಡಗಿದ್ದರು. ದೇಶಾದ್ಯಂತ ಬ್ರಿಟಿಷರಿಗೆ ಬಹಿರಂಗವಾಗಿ ಕಾಣಿಸಿಕೊಳ್ಳಲಾಗದಂತಹ ಸ್ಥಿತಿ ಏರ್ಪಟ್ಟಿತ್ತು. ಎಲ್ಲಿ ನೋಡಿದರೂ ದಾಳಿಗಳು, ಪ್ರತಿಭಟನೆ ಘೇರಾವ್, ಮೊವಣಿಗೆಗಳಲ್ಲಿ ಸಾವಿರ ಸಾವಿರ ಸಂಖ್ಯೆಯಲ್ಲಿ ಜನರು ಭಾಗವಹಿಸಲಾರಂಭಿಸಿದ್ದರು.

ಬ್ರಿಟಿಷ್ ವಸಾಹತುಶಾಹಿ ಪಡೆಗಳು ಹೋರಾಡುತ್ತಿದ್ದ ಜನರ ಮೇಲೆ ಇನ್ನಿಲ್ಲದ ದಮನಕಾಂಡ ನಡೆಸತೊಡಗಿದರು. ಒಂದು ಅಂದಾಜಿನ ಪ್ರಕಾರ ‘ಕ್ವಿಟ್ ಇಂಡಿಯಾ’ ಚಳವಳಿಯಲ್ಲಿ ಭಾಗವಹಿದ್ದರೆಂದು ಸುಮಾರು 50,000 ಜನರನ್ನು ಬ್ರಿಟಿಷ್ ಪಡೆಗಳು ಕೊಂದು ಹಾಕಿದ್ದವು. ಬಯೋನೆಟ್ ತಿವಿತ, ಲಾಠಿ ಏಟು, ಬೂಟಿನೇಟು ಚಿತ್ರಹಿಂಸೆಗಳಿಂದಾಗಿ ಗಂಭೀರವಾಗಿ ಗಾಯಗೊಂಡು ಅಂಗವೈಕಲ್ಯ ಹೊಂದಿದವರು ಸಾವಿರಾರು ಜನರಿದ್ದರು. ಸಾವಿರಾರು ಜನರನ್ನು ಸೆರೆಮನೆಗೆ ದೂಡಿದರು. ಈ ಪಡೆಯ ಭಾಗವಾಗಿ ಇಂಡಿಯಾ ಮೂಲದವರು ಸಾಕಷ್ಟು ಸಂಖ್ಯೆಯಲ್ಲಿದ್ದರು ಎನ್ನುವುದನ್ನು ಗುರುತಿಸಬೇಕು.

ಇಷ್ಟೆಲ್ಲಾ ದಮನ ದೌರ್ಜನ್ಯಗಳು, ಕಗ್ಗೊಲೆಗಳು, ಬಲಪ್ರಯೋಗಗಳನ್ನು ಬ್ರಿಟಿಷರು ನಡೆಸಿದ್ದರೂ ಜನಸಾಮಾನ್ಯರ ಹೋರಾಟದ ಕೆಚ್ಚನ್ನು ದಮನಿಸಲಾಗಲಿಲ್ಲ. ಜನರು ಇವೆಲ್ಲವನ್ನೂ ಎದುರಿಸುತ್ತಾ ಮತ್ತಷ್ಟು ಕಚ್ಚು ರೋಷಗಳಿಂದ ಹೋರಾಟಗಳಲ್ಲಿ ದುಮುಕುತ್ತಿದ್ದರು. ದೇಶಾದ್ಯಂತ ಹಲವಾರು ಗೆರಿಲ್ಲಾ ಮಾದರಿಯ ದಾಳಿಗಳನ್ನು ಬ್ರಿಟಿಷರ ಮೇಲೆ ರೈತಾಪಿಗಳು, ಬುಡಕಟ್ಟು ಸಮುದಾಯಗಳು ಮಾಡುತ್ತಿದ್ದವು.

ಇದು ಬ್ರಿಟಿಷರಿಗೆ ನುಂಗಿ ಅರಗಿಸಿಕೊಳ್ಳಲಾಗದ ತುತ್ತಾಗಿಬಿಟ್ಟಿತ್ತು. ಇದೆಲ್ಲದರಿಂದಾಗಿ 1947ರ ವೇಳೆಗೆ ಬ್ರಿಟಿಷರು ತಮ್ಮ ನೇರ ಆಡಳಿತ ಕೊನೆಗೊಳಿಸಬೇಕಾದ ಪರಿಸ್ಥಿತಿಯನ್ನು ಗ್ರಹಿಸಿದ್ದರು. ಅದರ ಭಾಗವಾಗಿಯೇ ಆಗಸ್ಟ್ ಹದಿನೈದರ ಮಧ್ಯರಾತ್ರಿ ಬ್ರಿಟಿಷ್ ವಸಾಹತುಶಾಹಿ ಆಡಳಿತ ಇಂಡಿಯಾದ ಶೋಷಕ ಪ್ರತಿನಿಧಿಗಳಿಗೆ ಅಧಿಕಾರ ಹಸ್ತಾಂತರ ಮಾಡಿ ಪರೋಕ್ಷ ಆಡಳಿತವನ್ನು ಹಲವು ವಿಧಗಳಲ್ಲಿ ಮುಂದುವರಿಸಿದರು.

ಇಷ್ಟೆಲ್ಲಾ ಮಹಾನ್ ತ್ಯಾಗಗಳು, ಬಲಿದಾನಗಳ ಫಲವಾಗಿ ಬ್ರಿಟಿಷ್ ವಸಾಹತುಶಾಹಿಗಳು ತಮ್ಮ ನೇರ ಆಡಳಿತವನ್ನು ಕೊನೆಗಾಣಿಸಬೇಕಾಗಿ ಬಂದರೂ ಮೊದಲಿನಿಂದಲೂ ಅವರೊಂದಿಗೆ ಇದ್ದ ಇಲ್ಲಿನ ರಾಜಶಾಹಿಗಳು, ಭಾರೀ ಭೂಮಾಲಿಕ ಆಸ್ತಿವಂತ ವರ್ಗಗಳನ್ನು ಒಳಗೊಂಡ ಶೋಷಕ ಶಕ್ತಿಗಳು ತಮ್ಮ ಬ್ರಿಟಿಷ್ ಸಖ್ಯವನ್ನು ಮುಂದುವರಿಸಿದರು. ಜೊತೆಗೆ ಅಮೆರಿಕ ಮೊದಲಾದ ದೇಶಗಳ ಭಾರೀ ಕಾರ್ಪೊರೇಟ್ ಶಕ್ತಿಗಳ ಸಖ್ಯವನ್ನು ಮುಂದುವರಿಸುತ್ತಾ, ವಿಸ್ತರಿಸುತ್ತಾ ಬಂದರು.

ಹಾಗಾಗಿಯೇ ಬ್ರಿಟಿಷರು ತಮ್ಮ ನೇರ ಆಡಳಿತವನ್ನು ಕೊನೆಗೊಳಿಸಿದ ಮೇಲೆ ಕೂಡ ಈ ದೇಶದ ಜನಸಾಮಾನ್ಯರು ಮೂಲಭೂತ ಹಕ್ಕುಗಳಿಗಾಗಿ, ಭಾಷೆ, ಸಂಸ್ಕೃತಿಗಳ ಉಳಿಕೆಗಾಗಿ ತೀವ್ರ ರಿತಿಯ ಹೋರಾಟಗಳನ್ನು ಮುಂದುವರಿಸ ಬೇಕಾಯಿತು. ಬ್ರಿಟಿಷ್ ವಸಾಹತುಶಾಹಿಗಳು ಮಾಡುತ್ತಿದ್ದ ದಮನಕಾಂಡಗಳನ್ನೇ ಇಂಡಿಯಾದ ಹೊಸ ಆಡಳಿತಗಾರರು ಮುಂದುವರಿಸುತ್ತಾ ಬಂದರು.

ಜನಸಾಮಾನ್ಯರು ತಮ್ಮ ದೇಶ ಹಾಗೂ ಹಕ್ಕುಗಳಿಗಾಗಿ ಚಿತ್ರಹಿಂಸೆ, ಕಗ್ಗೊಲೆಗಳಿಗೆ ಈಡಾಗುತ್ತಾ ಅಪಾರ ತ್ಯಾಗ, ಬಲಿದಾನಗಳನ್ನು ಮಾಡುತ್ತಾ ಬರಬೇಕಾಯಿತು. ಇದು ಇಂದಿನವರೆಗೂ ಏರುಗತಿಯಲ್ಲೇ ಸಾಗುತ್ತಾ ಈಗದು ಪರಾಕಾಷ್ಠೆಯತ್ತ ಸಾಗಿದೆ. ಇಂದು ಈ ದೇಶದ ಜನಸಾಮಾನ್ಯರು ತಮ್ಮ ಬದುಕುವ ಹಕ್ಕುಗಳನ್ನೇ ಕಳೆದುಕೊಳ್ಳುವ ಹಂತ ತಲುಪಿದ್ದಾರೆ. ಸೂರು, ಭೂಮಿ, ಬದುಕು, ಭವಿಷ್ಯಗಳಿಗೆ ಯಾವುದೇ ಖಾತರಿಯೂ ಇಲ್ಲದಂತಹ ಸ್ಥಿತಿ ಎದುರಾಗಿದೆ.

ಈ ದೇಶದ ಮೂಲನಿವಾಸಿಗಳು, ದಲಿತ, ದಮನಿತ, ಮಹಿಳಾ ಸಮುದಾಯಗಳು ತೀವ್ರ ದಾಳಿಗಳಿಗೆ ಈಡಾಗುತ್ತಿದ್ದಾರೆ. ಅಲ್ಪಸಂಖ್ಯಾತರಿಗೆ ಹೇಳಲೂ ಆಗದ ಹೇಳದಿರಲೂ ಆಗದ, ಬದುಕಲೂ ಆಗದ ಸ್ಥಿತಿ ನಿರ್ಮಿಸಿಡಲಾಗಿದೆ. ರೈತಾಪಿಗಳು, ವಿದ್ಯಾರ್ಥಿ ಯುವಜನರು, ಮಧ್ಯಮ, ಮೇಲ್ಮಧ್ಯಮ ವರ್ಗದ ಜನರು ಭಾರೀ ಸಂಕಷ್ಟಗಳಿಗೆ ಈಡಾಗಿದ್ದಾರೆ.

ನಮ್ಮದು ಸಂವಿಧಾನಾತ್ಮಕ ಪ್ರಜಾತಾಂತ್ರಿಕ ದೇಶ ಎಂಬ ಮೇಲ್ಮಟ್ಟದ ಪರಿಕಲ್ಪನೆಗೆ ಕೂಡ ಇಂದು ತಾವಿಲ್ಲದಂತಾಗಿದೆ. ಕೆಲವೇ ಕಾರ್ಪೊರೇಟ್‌ಗಳ ಕೈಯಲ್ಲಿ ದೇಶದ ಆಡಳಿತ ಯಂತ್ರ, ಭೂಮಿ ಸಂಪನ್ಮೂಲಗಳು, ಸಂಪತ್ತು ಇತ್ಯಾದಿಗಳ ಹಿಡಿತವಿದೆ. ಬಹುಸಂಖ್ಯಾತ ಜನಸಾಮಾನ್ಯರ ದುಡಿಮೆಯೆಲ್ಲವೂ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಈ ಬೆರಳೆಣಿಕೆಯ ಭಾರೀ ಕಾರ್ಪೊರೇಟ್ ಲಾಬಿಗಳ ಕೈಗೆ ಹೋಗುವಂತೆ ಮಾಡಿಡಲಾಗಿದೆ. ನ್ಯಾಯಾಂಗ ಕೂಡ ಈ ಶಕ್ತಿಗಳ ಹಿಡಿತದಲ್ಲಿದೆ ಎನ್ನುವ ಅನುಭವಗಳು ಜನಸಾಮಾನ್ಯರಲ್ಲಿ ಹೆಚ್ಚಾಗತೊಡಗಿವೆ.

ಹಿಂದಿನ ಸರಕಾರಗಳು ಪಾಲಿಸುತ್ತಾ ಬಂದ ನೀತಿಗಳ ಪಾಲನೆಯ ಪರಾಕಾಷ್ಠತೆಯ ಹಂತ ತಲುಪಿದೆ. ಸಾರ್ವಜನಿಕ ಸಂಪತ್ತುಗಳನ್ನು ಈಗಿನ ಸರಕಾರ ಕಾರ್ಪೊರೇಟ್‌ಗಳಿಗೆ ಬಹಿರಂಗವಾಗಿಯೇ ದಾಟಿಸತೊಡಗಿದೆ. ಅದಕ್ಕೆ ನ್ಯಾಯವಂತಿಕೆಯ ಮೊಹರನ್ನು ಒತ್ತಲಾಗುತ್ತಿದೆ. ಬಹುತೇಕ ಮಾಧ್ಯಮಗಳು ಆಳುವವರ ಛೇಲಾಗಿರಿಯಲ್ಲಿ ಬಹಿರಂಗವಾಗಿಯೇ ತೊಡಗಿವೆ. ಸಾಂಕ್ರಾಮಿಕಗಳನ್ನೇ ಸಾಮಾಜಿಕ ದಮನದ ಪರಿಣಾಮಕಾರಿ ಅಸ್ತ್ರಗಳನ್ನಾಗಿ ಬಳಸಲು ಆಳುವ ಶಕ್ತಿಗಳು ತೊಡಗಿವೆ.

ಗ್ಯಾಟ್, ಡಂಕೆಲ್, ವಿಶ್ವ ವ್ಯಾಪಾರ ಸಂಘಟನೆ ಮೊದಲಾದವುಗಳ ಹಿಡಿತಗಳಿಗೆ ವ್ಯಾಪಾರ ಒಪ್ಪಂದಗಳು, ಸಹಕಾರ, ಅಭಿವೃದ್ಧಿ ಇತ್ಯಾದಿ ನೆಪಗಳಲ್ಲಿ ದೇಶವನ್ನು ಸಂಪೂರ್ಣವಾಗಿ ಒಪ್ಪಿಸುವ ಕಾರ್ಯ ಶುರುವಾಗಿ ಸುಮಾರು ಮೂರು ದಶಕಗಳಿಗೂ ಹೆಚ್ಚು ಕಾಲವಾಗಿದೆ. ಈಗದರ ಪರಾಕಾಷ್ಠತೆಯ ಹಂತ ತಲುಪತೊಡಗಿದೆ. ಕೆಲವೇ ಜಾಗತಿಕ ಕಾರ್ಪೊರೇಟುಗಳು ದೇಶದ ಎಲ್ಲಾ ಆಗುಹೋಗುಗಳನ್ನು ನಿಯಂತ್ರಿಸತೊಡಗಿವೆ. ಅದರ ಭಾಗವಾಗಿಯೇ ಹಿಂದಿದ್ದ ಕಾನೂನು, ನಿಯಮಗಳು, ಸಂಸತ್ತು ನಡಾವಳಿಗಳನ್ನು ಪಾಲಿಸುತ್ತಿಲ್ಲ. ಅವನ್ನೆಲ್ಲಾ ಬದಲಾಯಿಸುವ, ರದ್ದುಗೊಳಿಸುವ, ಸುಗ್ರೀವಾಜ್ಞೆ ಮೂಲಕ ಅಮಾನತುಗೊಳಿಸುವ, ಕಡೆಗಣಿಸುವ ಕಾರ್ಯಗಳು ಹೆಚ್ಚು ಹೆಚ್ಚು ಬಿರುಸಾಗತೊಡಗಿವೆ. ದೇಶದ ಸಂವಿಧಾನವನ್ನೂ ಕೂಡ ಬಹಿರಂಗವಾಗಿಯೇ ಕಡೆಗಣನೆ ಮಾಡಲಾಗುತ್ತಿದೆ. ಅದರಲ್ಲಿನ ಪ್ರಜಾತಾಂತ್ರಿಕ ಪದಗಳನ್ನೂ ಕೂಡ ಕಿತ್ತುಹಾಕುವ ಪ್ರಕ್ರಿಯೆ ಚುರುಕುಗೊಂಡಿದೆ.

ಸ್ವಾತಂತ್ರ್ಯ, ಸಮಾನತೆ, ಸಹೋದರತೆಗಳನ್ನು ಆಡಳಿತ ವ್ಯವಸ್ಥೆ ಕೇವಲ ಪದಗಳಾಗಿ ಕೂಡ ಉಪಯೋಗಿಸಲು ತಯಾರಿಲ್ಲದಂತಹ ವಾತಾವರಣ ನಿರ್ಮಿಸಲಾಗಿದೆ. ಶಾಲೆ ಆಸ್ಪತ್ರೆಗಳಲ್ಲ, ವಸತಿ, ನೀರುಗಳಲ್ಲ, ಗುಡಿ ಕಟ್ಟುವ ಕಾರ್ಯ ಆಡಳಿತ ಯಂತ್ರದ ಆಧ್ಯತೆಯಾಗಿದೆ. ಕಾಂಗ್ರೆಸ್ ಪಕ್ಷ ಗುಡಿ ಕಟ್ಟಲು ತಾನೆಷ್ಟು ಶ್ರಮಿಸುತ್ತಾ ಬಂದಿತ್ತು ಎಂದು ರುಜುವಾತು ಪಡಿಸಲು ಹೆಣಗುತ್ತಿದೆ. ಬಿಜೆಪಿ ತಾನು ಗುಡಿಗಳ ವಕ್ತಾರ ಆ ಪಟ್ಟವನ್ನು ಯಾರಿಗೂ ಬಿಟ್ಟುಕೊಡಲಾಗದು ಎಂದು ಬಲವಾಗಿಯೇ ಬೊಬ್ಬೆ ಹಾಕುತ್ತಲೇ ಅಧಿಕಾರದಲ್ಲಿ ಕುಳಿತಿದೆ.

ಇಂತಹ ಸಂಧರ್ಭದಲ್ಲಿ ಕ್ವಿಟ್ ಇಂಡಿಯಾ ಚಳವಳಿಯ ನೆನೆಪುಗಳು ಹರಿದಾಡುತ್ತಿವೆ. ಈಗ ಯಾರಿಗೆ ‘ಕ್ವಿಟ್ ಇಂಡಿಯಾ’ ಎಂದು ಹೇಳಬೇಕಾಗಿದೆ ಎನ್ನುವುದನ್ನು ಜನಸಾಮಾನ್ಯರು ಸಂಘಟಿತವಾಗಿ ನಿರ್ಧರಿಸಬೇಕಾಗಿದೆ.

Writer - ನಂದಕುಮಾರ್ ಕೆ. ಎನ್.

contributor

Editor - ನಂದಕುಮಾರ್ ಕೆ. ಎನ್.

contributor

Similar News