ಅರ್ಹರಿಗೆ ಅವಕಾಶ ಕೊಟ್ಟ ಅರಸು -ಡಾ.ಡಿ.ತಿಮ್ಮಯ್ಯ

Update: 2020-08-20 19:30 GMT

ಭಾಗ-2

ಮಾರನೇ ದಿನ ಬೆಳಗ್ಗೆ 9ಕ್ಕೆ ಹೋದೆ. ಹೋಗ್ತಿದ್ದಹಾಗೆ ಅಲ್ಲಿದ್ದ ಚೌಕಿದಾರ, ‘‘ಹುಣಸೂರು ಡಾಕ್ಟ್ರು ಹುಡುಗ ಅಲ್ವೇ, ಸಾಹೇಬ್ರು ಆಗಲೇ ಕೇಳಿದ್ರು’’ ಎಂದ. ಒಳಕ್ಕೆ ಹೋಗ್ತಿದ್ದಹಾಗೆ ‘‘ಹೋ ಬಂದೆಯಾ, ಬಹಳ ಸಂತೋಷ, ಬಾ...’’ ಎಂದು ಕರೆದು ಕೂರಿಸಿಕೊಂಡು ಎಲ್ಲವನ್ನು ವಿಚಾರಿಸಿಕೊಂಡರು. ನಂತರ ವಿಧಾನಸೌಧಕ್ಕೆ ಹೊರಡಲು ಎದ್ದು, ‘‘ಬಾ... ಕೂತ್ಕೋ ಕಾರಲ್ಲಿ’’ ಎಂದರು. ನಾನು ಕಕ್ಕಾಬಿಕ್ಕಿಯಾಗಿ ಎಲ್ಲಿ ಕೂರಬೇಕೆಂದು ತಿಳಿಯದೆ ನಿಂತಿದ್ದಾಗ ‘‘ಬಾರಪ್ಪಆ ಕಡೆಯಿಂದ ಬಂದು ನನ್ನ ಪಕ್ಕ ಕೂತ್ಕೋ’’ ಎಂದರು. ಬಾಲಬ್ರೂಯಿಯಿಂದ ವಿಧಾನಸೌಧಕ್ಕೆ ತಮ್ಮದೆ ಕಾರಿನಲ್ಲಿ(ಬೆಂಜ್ 777) ಕರೆದುಕೊಂಡು ಹೋದರು. ಮುಂದೆ ಅವರ ಸಹಾಯಕರಾದ ಗೋಪಾಲಶಾಸ್ತ್ರಿಯವರು, ಹಿಂದೆ ಅರಸರು, ಅವರ ಪಕ್ಕದಲ್ಲಿ ನಾನು. ಮೊದಲ ಬಾರಿಗೆ, ಒಬ್ಬ ಮುಖ್ಯಮಂತ್ರಿಯೊಂದಿಗೆ, ಅವರದೇ ಕಾರಿನಲ್ಲಿ ಕೂತು ವಿಧಾನಸೌಧಕ್ಕೆ ಹೋದದ್ದು, ಇವತ್ತಿಗೂ ಕಣ್ಣಿಗೆ ಕಟ್ಟಿದಂತಿದೆ. ಒಬ್ಬ ಪರಿಶಿಷ್ಟ ಜಾತಿಯ ಹುಡುಗನನ್ನು ಹೀಗೆ ಮುಖ್ಯಮಂತ್ರಿಗಳೇ ತಮ್ಮ ಕಾರಿನಲ್ಲಿ ವಿಧಾನಸೌಧಕ್ಕೆ ಕರೆದುಕೊಂಡ ಹೋದ ಉದಾಹರಣೆಯನ್ನು ನಾನು ಇಲ್ಲಿಯವರೆಗೆ ಕಂಡಿಲ್ಲ, ಕೇಳಿಲ್ಲ. ಇದನ್ನು ನನ್ನ ಪಾಲಿನ ಸೌಭಾಗ್ಯ ಎಂದೇ ಭಾವಿಸುವೆ. ಇದೇ ನಿಜವಾದ ಪ್ರಜಾಪ್ರಭುತ್ವ ಎನ್ನುವೆ.

ಮನೆಯಿಂದ ವಿಧಾನಸೌಧಕ್ಕೆ ಹೋದ ನಂತರ, ಮೂರನೇ ಮಹಡಿಯಲ್ಲಿ ಅವರ ಕಚೇರಿಯಲ್ಲಿ ಕುಳಿತುಕೊಳ್ಳಲು ಹೇಳಿ ಹೊರ ನಡೆದ ಬುದ್ಧಿಯವರು ಸ್ವಲ್ಪಸಮಯದ ನಂತರ ಬಂದು ‘‘ಮಾರ್ಕ್ಸ್‌ಕಾರ್ಡ್ ತಂದಿದ್ದೀಯೇನಪ್ಪಾ’’ ಎಂದು ಕೇಳಿದರು. ‘‘ಬುದ್ಧಿ ತಂದಿದ್ದೀನಿ’’ ಎಂದು ಅದನ್ನು ಕೊಟ್ಟೆ. ಮುಖ್ಯಮಂತ್ರಿಗಳ ಕಾರ್ಯದರ್ಶಿಗಳಾದ ಜೆ.ಸಿ.ಲಿನ್‌ರನ್ನು ಕರೆಸಿಕೊಂಡ ಅರಸರು, ‘‘ಈತ ನಮ್ಮ ಹುಡುಗ, ಇವರಪ್ಪನನ್ನ ಸ್ನೇಹಿತರು, ಅವನಿಗೆ ಕೆಲಸ ಕೊಡಬೇಕು’’ ಎಂದರು. ಲಿನ್ ಸಾಹೇಬರು ನನ್ನನ್ನು ಅವರ ಚೇಂಬರ್‌ಗೆ ಕರೆದುಕೊಂಡು ಹೋದರು. ನನ್ನ ಸರ್ಟಿಫಿಕೇಟ್‌ಗಳನ್ನೆಲ್ಲ ಪರಿಶೀಲಿಸಿದರು. ನಂತರ ಅಲ್ಲಿಗೇ ಹೆಲ್ತ್ ಸೆಕ್ರೆಟರಿಯನ್ನು ಕರೆಸಿಕೊಂಡು, ಮುಖ್ಯಮಂತ್ರಿ ದೇವರಾಜ ಅರಸರು ಹೇಳಿದ್ದನ್ನು ಅವರಿಗೆ ತಿಳಿಸಿದರು. ಅವರು, ‘‘ಸರ್, ಇದು ಗೆಜೆಟೆಡ್ ಪೋಸ್ಟ್, ಕೆಪಿಎಸ್‌ಸಿ ಕಡೆಯಿಂದ ಆಗಬೇಕಾದ್ದು, ಕಾಂಪ್ಲಿಕೇಟೆಡ್ ಆಗಬಹುದು, ಹೆಲ್ತ್ ಮಿನಿಸ್ಟರ್ ಸಿದ್ದವೀರಪ್ಪನವರಿಗೆ ಒಂದು ಮಾತು ಹೇಳಿಬಿಡಿ’’ ಎಂದರು. ನಡುವೆ ಲಿನ್ ಸಾಹೇಬರು, ‘‘ಏನಾದ್ರು ತಿಂಡಿ ತಿಂದಿದ್ದೀರಾ ಡಾಕ್ಟ್ರೆ’’ ಎಂದು ಕೇಳಿ, ತಿಂಡಿ ತರಿಸಿಕೊಟ್ಟರು. ಹೆಲ್ತ್ ಮಿನಿಸ್ಟರ್, ಸೆಕ್ರೆಟರಿ ಮತ್ತು ಲಿನ್ ಸಾಹೇಬರು ಅದೇನು ಮಾತನಾಡಿಕೊಂಡರೋ, ಮಧ್ಯಾಹ್ನ ಮೂರು ಗಂಟೆಯ ಹೊತ್ತಿಗೆ ನನ್ನ ಕೈಯಲ್ಲಿ ನೇಮಕಾತಿ ಪತ್ರ ಇತ್ತು. ಅದನ್ನು ನನ್ನ ಕೈಗೆ ಕೊಟ್ಟ ಅರಸರು, ‘‘ತಗೋ ಅಪಾಯಿಂಟ್‌ಮೆಂಟ್ ಲೆಟರ್, ಒಳ್ಳೆ ಕಡೆ ಪೋಸ್ಟಿಂಗ್ ಮಾಡೋಕೆ ಡೈರೆಕ್ಟರ್‌ಗೆ ಹೇಳಿದೀನಿ, ಹೋಗು’’ ಎಂದು ಹೇಳಿದರು.

ಕೆಲಸ ಸಿಕ್ಕಿದ ಖುಷಿಗೆ ಭಾವುಕನಾಗಿ, ಅರಸರ ಕಾಲಿಗೆ ನಮಸ್ಕರಿಸಲು ಬಗ್ಗಿದೆ. ನನ್ನ ತೋಳು ಹಿಡಿದು ಎತ್ತಿ ನಿಲ್ಲಿಸಿದ ಅರಸರು, ‘‘ನನ್ನದೇನಿಲ್ಲ, ನಿನ್ನ ತಂದೆಯ ಋಣ ತೀರಿಸಿದ್ದೀನಿ, ಅಷ್ಟೆ’’ ಎಂದರು. ದೀನ ದಲಿತರ ಬಗೆಗಿನ ಅವರ ಕಾಳಜಿ ಕಂಡು ಮಾತು ಬಾರದ ಮೂಕನಾಗಿದ್ದೆ. ನೇಮಕಾತಿ ಪತ್ರ ಹಿಡಿದುಕೊಂಡು ಆನಂದರಾವ್ ಸರ್ಕಲ್‌ನಲ್ಲಿರುವ ಆರೋಗ್ಯ ಇಲಾಖೆಯ ನಿರ್ದೇಶಕರ ಕಚೇರಿಗೆ ಹೋದೆ. ಪತ್ರ ತೋರಿಸಿದೆ. ಅವರು ನಂಬಲಿಕ್ಕೇ ಸಿದ್ಧರಿಲ್ಲ. ಜೊತೆಗೆ ನನ್ನನ್ನು ಇದ್ಯಾವುದೋ ಫ್ರಾಡ್ ಗಿರಾಕಿ ಇರಬೇಕೆಂಬ ಅನುಮಾನದಲ್ಲಿ ನೋಡಿದರು. ಕೊನೆಗೆ ವಿಧಾನಸೌಧಕ್ಕೆ ಫೋನ್ ಮಾಡಿದಾಗ ಮುಖ್ಯಮಂತ್ರಿಯವರ ಕ್ಯಾಂಡಿಡೇಟ್ ಎನ್ನುವುದು ತಿಳಿಯಿತು. ಆಗ ಅವರ ಟ್ರೀಟ್‌ಮೆಂಟೇ ಬೇರೆಯಾಗಿತ್ತು. ‘‘ಮುಖ್ಯಮಂತ್ರಿಗಳ ಕ್ಯಾಂಡಿಡೇಟ್ ಅಂತ ಮೊದಲೇ ಹೇಳಬಾರದೆ’’ ಎಂದು ನಾನು ಕೇಳಿದ ಕಡೆ-ನಂಜನಗೂಡು ಸಾರ್ವಜನಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಯಾಗಿ- ಪೋಸ್ಟಿಂಗ್ ಮಾಡಿಕೊಟ್ಟರು. ವೈದ್ಯಕೀಯ ಪದವಿ ಮುಗಿಸಿದ ನನ್ನ ಜೊತೆಯ ಸ್ನೇಹಿತರಿಗೆ ನನಗೆ ಕೆಲಸ ಸಿಕ್ಕಿದ್ದು ಶಾಕಿಂಗ್ ನ್ಯೂಸ್ ಆಗಿತ್ತು. ಹಾಗೆಯೇ ವಿಧಾನಸಭೆಯಲ್ಲಿ ಚರ್ಚೆಗೆ ಬಂದು, ವಿರೋಧ ಪಕ್ಷದ ನಾಯಕರೊಂದಿಗೆ ದೊಡ್ಡ ಮಟ್ಟದ ವಾಗ್ವಾದವೇ ನಡೆದುಹೋಗಿತ್ತು. ಆಗ ದೇವರಾಜ ಅರಸರು, ‘‘ನೋಡಿ, ನನ್ನ ಮಕ್ಕಳಿಗೆ-ಸಂಬಂಧಿಕರಿಗೆ ಕೆಲಸ ಕೊಟ್ಟಿಲ್ಲ, ಒಬ್ಬ ಪರಿಶಿಷ್ಟ ಜಾತಿಯಲ್ಲಿ ಹುಟ್ಟಿ, ಕಷ್ಟಪಟ್ಟು ಓದಿ ಉತ್ತಮ ಅಂಕ ಪಡೆದು ಪಾಸಾದ ಪ್ರತಿಭಾವಂತನಿಗೆ, ತಂದೆ ಇಲ್ಲದ ಹುಡುಗನಿಗೆ ಕೊಟ್ಟಿದ್ದೇನೆ. ನನ್ನ ತಾಲೂಕಿನ ಮೊದಲ ಎಂಬಿಬಿಎಸ್ ಪದವಿ ಪಡೆದ ದಲಿತ ಹುಡುಗ ಎಂಬ ಕಾರಣಕ್ಕಾಗಿ ಕೊಟ್ಟಿದ್ದೇನೆ, ನನ್ನ ವಿವೇಚನೆಗೆ ಸರಿ ಅನ್ನಿಸಿದ್ದನ್ನು ಮಾಡಿದ್ದೇನೆ. ತಪ್ಪಾಗಿದ್ದಲ್ಲಿ ಹೇಳಿ. ಅಧಿಕಾರ ದುರುಪಯೋಗ ಮಾಡಿಲ್ಲ..’’ ಎಂದು ಸಮರ್ಥಿಸಿಕೊಂಡಿದ್ದರಂತೆ. ಇದು ಮಾಧ್ಯಮಗಳಲ್ಲೂ ದೊಡ್ಡ ಸುದ್ದಿಯಾಗಿತ್ತು. ನೋಡಿದ್ದೆ.

ಚಿಕ್ಕರಸು ಬಂದ್ರಪ್ಪ...

ನನಗೆ ದೇವರಾಜ ಅರಸರು ಕೆಲಸ ಕೊಡಿಸಿದ್ದು ಹುಣಸೂರು ತಾಲೂಕಿನಾದ್ಯಂತ ಸುದ್ದಿಯಾಯಿತು. ಬುದ್ಧಿಯವರಿಗೆ ತೀರಾ ಹತ್ತಿರ ಎನ್ನುವುದೂ ಜನಜನಿತವಾಯಿತು. ನನ್ನ ಸಹಪಾಠಿಯೊಬ್ಬ, ಆತನ ಹೆಸರು ತಿಮ್ಮಯ್ಯ ಅಂತಲೇ, ನನಗೆ ಕೆಲಸ ಸಿಕ್ಕಿದ್ದು ಗೊತ್ತಾಗಿ, ಬುದ್ಧಿಯವರಿಗೆ ಹೇಳಿ ನನಗೊಂದು ಕೆಲಸ ಕೊಡಿಸು ಎಂದ. ದೇವರಾಜ ಅರಸರ ಬಳಿಗೆ ಕರೆದುಕೊಂಡು ಹೋದೆ. ಹೋಗ್ತಿದ್ದಹಾಗೆ, ‘‘ನಿನಗೆ ಕೆಲಸ ಕೊಟ್ಟಿದ್ದಕ್ಕೆ ದೊಡ್ಡ ರಂಪಾಟವೇ ನಡೆದುಹೋಯಿತು..’’ ಎಂದು ನಕ್ಕರು. ನನ್ನಿಂದ ಅವರಿಗೆ ಕಷ್ಟವಾಗಿದ್ದರೂ, ‘‘ಬುದ್ಧಿ, ಈತನ ಹೆಸರು ತಿಮ್ಮಯ್ಯ ಅಂತ, ನಮ್ಮ ತಂದೆಯೊಂದಿಗೆ ಅಪಘಾತದಲ್ಲಿ ಸಾವನ್ನಪ್ಪಿದವರ ಮಗ, ನನ್ನ ಸಹಪಾಠಿ, ಈತನಿಗೊಂದು ಕೆಲಸ..’’ ಎಂದು ರಾಗ ಎಳೆದೆ. ‘‘ನಿಮ್ಮ ತಂದೆ ಜೊತೆಗಿದ್ದವರ ಮಗನ, ಸರಿ ಬಿಡು’’ ಎಂದು ಸಹಾಯಕ ಗೋಪಾಲಶಾಸ್ತ್ರಿಯವರನ್ನು ಕರೆದು, ‘‘ಏನಾದ್ರು ಮಾಡಿ’’ ಎಂದರು. ಅವರು ಆ ತಕ್ಷಣವೇ ಬಿಬಿಎಂಪಿಯಲ್ಲಿ ಕಂದಾಯ ವಿಭಾಗದಲ್ಲಿ ಎಫ್‌ಡಿಸಿ ಹುದ್ದೆಗೆ ನೇರ ನೇಮಕಾತಿಯಾಗುವಂತೆ ನೋಡಿಕೊಂಡರು.

ಬಡವರು, ಕಷ್ಟದಲ್ಲಿರುವವರು ಎಂದರೆ ಅರಸರು ಕರಗಿ ನೀರಾಗಿಬಿಡುತ್ತಿದ್ದರು. ಮತ್ತೊಬ್ಬ ಸ್ನೇಹಿತ, ಪಿರಿಯಾಪಟ್ಟಣದ ಕೃಷ್ಣ. ಹುಟ್ಟಿನಿಂದಲೇ ತಂದೆ-ತಾಯಿ ಯಾರು ಎನ್ನುವುದು ಗೊತ್ತಿಲ್ಲದ ಅನಾಥ. ಬಡತನದಲ್ಲಿ ಕಷ್ಟಪಟ್ಟು ಓದಿ ಪದವಿ ಪಡೆದಿದ್ದ. ದೇವರಾಜ ಅರಸರಿಗೆ ನಾನು ಆಪ್ತ ಎನ್ನುವುದು ಗೊತ್ತಾಗಿ, ಊರಿಗೆ ಹೋದಾಗ ಬಂದು, ಕಷ್ಟ ಹೇಳಿಕೊಂಡ. ನಾನು ಯಥಾಪ್ರಕಾರ ಅವನನ್ನು ಕರೆದುಕೊಂಡು ಹೋಗಿ ಅರಸರ ಮುಂದೆ ನಿಲ್ಲಿಸಿದೆ. ‘‘ಈಗ ಇನ್ಯಾರನ್ನು ಕರೆದುಕೊಂಡು ಬಂದಿದ್ದೀಯೋ’’ ಎಂದು ಕಿಚಾಯಿಸಿದರು. ಕೃಷ್ಣನ ಕಥೆಯನ್ನು ಸೂಚ್ಯವಾಗಿ ಹೇಳಿದೆ. ಒಂದು ಕ್ಷಣ ಮೌನಕ್ಕೆ ಜಾರಿ ಧ್ಯಾನಸ್ಥರಾದರು. ಅದೇ ಸಮಯಕ್ಕೆ ಸರಿಯಾಗಿ, ದುಗ್ಗಪ್ಪನವರು ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯರಾಗಿ ನೇಮಕಗೊಂಡದ್ದನ್ನು ನೆಪವಾಗಿಟ್ಟುಕೊಂಡು ಮುಖ್ಯಮಂತ್ರಿಗಳನ್ನು ಅಭಿನಂದಿಸಲು ಬಾಲಬ್ರೂಯಿಗೆ ಬಂದಿದ್ದರು. ಇಬ್ಬರೂ ಕೂತು ಚಹಾ ಕುಡಿಯುವ ವೇಳೆಯಲ್ಲಿ ಅಲ್ಲಿಯೇ ಇದ್ದ ನನ್ನ ಕಡೆ ಕೈ ತೋರಿಸಿ, ‘‘ಇವನು ಡಾ. ತಿಮ್ಮಯ್ಯ, ನಮ್ಮ ಊರಿನವನೇ. ಇವರ ತಂದೆ ನಮಗೆ ಬಹಳ ಆಪ್ತರು. ಅವರು ದೈವಾಧೀನರಾದ ಮೇಲೆ ಕಷ್ಟಪಟ್ಟು ವ್ಯಾಸಂಗ ಮಾಡಿದ್ದರು. ಅವರ ತಂದೆ ಚುನಾವಣಾ ವೇಳೆಯಲ್ಲಿ ನನಗೆ ಸಹಾಯ ಮಾಡಿದ್ದ ಋಣ ತೀರಿಸಲು ನೇರ ನೇಮಕಾತಿಯಲ್ಲಿ ಇವರನ್ನು ವೈದ್ಯಾಧಿಕಾರಿಯಾಗಿ ನೇಮಕ ಮಾಡಿದ್ದೇನೆ’’ ಎಂದು ದುಗ್ಗಪ್ಪನವರಿಗೆ ಪರಿಚಯಿಸಿದ್ದನ್ನು ಇಂದಿಗೂ ಮರೆಯಲಾಗುತ್ತಿಲ್ಲ. ನಂತರ ‘‘ಒಳ್ಳೆಯ ಹುಡುಗ, ಆಗಾಗ್ಗೆ ಬಡ ಹುಡುಗರನ್ನು ಕರೆದುಕೊಂಡು ಬಂದು ಕೆಲ್ಸ ಕೊಡಿ ಅಂತ ಕೇಳ್ತಾ ಇರ್ತಾನೆ, ಈಗಲೂ ಯಾರನ್ನೋ ಕರೆದುಕೊಂಡು ಬಂದಿದ್ದಾನೆ, ನೋಡಿ ಸ್ವಲ್ಪ’’ ಎಂದು ಹೇಳಿದರು. ದುಗ್ಗಪ್ಪನವರು ಕಚೇರಿಗೆ ಬಂದು ಕಾಣಲು ಹೇಳಿದರು. ಹೋಗುತ್ತಿದ್ದ ಹಾಗೇ ‘‘ಚಿಕ್ಕರಸರು ಬನ್ನಿ, ನನ್ನಿಂದ ಏನು ಆಗಬೇಕು ಹೇಳಿ’’ ಎಂದು ವಿಶೇಷ ಗೌರವದಿಂದ ಕಂಡರು. ಕೃಷ್ಣ ಕಮರ್ಷಿಯಲ್ ಟ್ಯಾಕ್ಸ್ ಡಿಪಾರ್ಟ್‌ಮೆಂಟ್‌ನಲ್ಲಿ ಕ್ಲಾಸ್ ಒನ್ ಆಫೀಸರ್ ಆಗಿ ನೇಮಕವಾಗುವಂತೆ ನೋಡಿಕೊಂಡರು.

ಅರಸರ ದೂರದೃಷ್ಟಿ ದೊಡ್ಡದು

ಸ್ನೇಹಿತನ ಮಗ ಎಂಬ ಕಾರಣಕ್ಕೆ ದೇವರಾಜ ಅರಸರು ನನ್ನ ಬಗ್ಗೆ ಇಟ್ಟಿದ್ದ ಪ್ರೀತಿ, ಕಾಳಜಿ ಮತ್ತು ಕಳಕಳಿ ಅಷ್ಟಿಷ್ಟಲ್ಲ. ತಂದೆಯ ಸ್ಥಾನದಲ್ಲಿ ನಿಂತು ನನ್ನ ಪ್ರತಿಯೊಂದು ನಡೆಯನ್ನು ಗಮನಿಸುತ್ತಿದ್ದರು. ನಾನೂ ಕೂಡ, ಎಲ್ಲವನ್ನು ಅವರ ಗಮನಕ್ಕೆ ತರುತ್ತಿದ್ದೆ. ಎಂಬಿಬಿಎಸ್ ಮುಗಿಸಿ ವೈದ್ಯಾಧಿಕಾರಿಯಾಗಿದ್ದು ಸಾಲದು, ಎಂಎಸ್ ಮಾಡಬೇಕೆಂದು ನಿರ್ಧರಿಸಿದೆ. ನನ್ನ ಸ್ನೇಹಿತರು, ಆ ಕಾಲಕ್ಕೆ ಬಹಳ ಬೇಡಿಕೆ ಇದ್ದ ಸರ್ಜಿಕಲ್, ಆರ್ಥೋಪೆಡಿಕ್, ಹಾರ್ಟ್ ಅಂತೆಲ್ಲ ಸಲಹೆ ನೀಡಿದರು. ನನಗೆ ಆಪ್ತಮಾಲಜಿ ಮಾಡಬೇಕೆಂಬ ಆಸೆ ಇತ್ತು. ಈ ಗೊಂದಲದಲ್ಲಿಯೇ ಅರಸರನ್ನು ಭೇಟಿ ಮಾಡಿದೆ. ಆಗ ಅರಸರು, ಏನು ಮಾಡಬೇಕಂತಿದ್ದೀಯಾ? ಎಂದರು. ನಾನು ನನ್ನ ಆಸಕ್ತಿ ವಿಷಯವನ್ನು ತಿಳಿಸಿದೆ. ಅದಕ್ಕೆ ಅರಸರು, ‘‘ಬೆಂಗಳೂರು ಮೆಡಿಕಲ್ ಕಾಲೇಜಿನಲ್ಲಿ ವೈ.ಪಿ.ರುದ್ರಪ್ಪಡೀನ್ ಆಗಿದ್ದಾರೆ, ನಮಗೆ ಬೇಕಾದವರು, ನಿಮ್ಮಂತಹವರು ಏನೇನೋ ಮಾಡದೆ, ಪಬ್ಲಿಕ್ ಹೆಲ್ತ್‌ಗೆ ಹೋಗೋದು ಒಳ್ಳೆಯದು’’ ಎಂದಷ್ಟೇ ಹೇಳಿ, ರುದ್ರಪ್ಪನವರಿಗೆ ಪರಿಚಯ ಮಾಡಿಕೊಟ್ಟರು. ನಾನು ಅರಸರ ನಿರ್ಧಾರಕ್ಕೆ ಎದುರು ಮಾತನಾಡಲಾರದೆ, ಕೊಂಚ ಅಸಮಾಧಾನದಿಂದಲೇ ಪಬ್ಲಿಕ್ ಹೆಲ್ತ್‌ಗೆ ಸೇರಿ ಪದವಿ ಪಡೆದೆ. ಪರಿಶಿಷ್ಟ ಜಾತಿಯವನಾದ್ದರಿಂದ, ಎಂಎಸ್ ಕೂಡ ಮಾಡಿದ್ದರಿಂದ, ಸೇವೆಗೆ ಸೇರಿ ಕೇವಲ 12 ವರ್ಷದಲ್ಲಿ ಡಿಸ್ಟ್ರಿಕ್ಟ್ ಹೆಲ್ತ್ ಆಫೀಸರ್ ಆಗಿ ಭಡ್ತಿ ಪಡೆದಿದ್ದೆ. ನನ್ನ ಸಹೋದ್ಯೋಗಿಗಳೆಲ್ಲ ಆ ಹುದ್ದೆಗೇರಬೇಕಾದರೆ ಕನಿಷ್ಠ 25 ವರ್ಷಗಳ ಸೇವೆ ಸಲ್ಲಿಸಿರಬೇಕಾಗಿತ್ತು. ನನಗದು 12 ವರ್ಷಗಳ ಸೇವೆಗೆ ಸಿಕ್ಕಿತ್ತು. ಅದಕ್ಕೆ ಕಾರಣ ದೇವರಾಜ ಅರಸರ ದೂರದೃಷ್ಟಿ. ಗ್ರಾಮೀಣ ಭಾಗದಿಂದ ಬಂದವನು, ಹಳ್ಳಿಗರ ಗೋಳು ಗೊತ್ತಿದ್ದವನು, ಪಬ್ಲಿಕ್ ಹೆಲ್ತ್ ಸರ್ವಿಸ್‌ಗೆ ಸೂಕ್ತ, ಸಮಾಜಕ್ಕೆ ಒಳಿತಾಗುತ್ತದೆ ಎಂಬುದು ಅರಸರ ಆಶಯವಾಗಿತ್ತು. ಅದವರ ವಿಷನ್. ಅವತ್ತೇನಾದರೂ ನಾನು ಪಬ್ಲಿಕ್ ಹೆಲ್ತ್ ಬೇಡ ಎಂದು ದುಡುಕಿದ್ದರೆ, ಇವತ್ತು ನಾನು ಇಂತಹ ಸ್ಥಿತಿಯಲ್ಲಿರುತ್ತಿರಲಿಲ್ಲ. ಸಮಾಜಕ್ಕೆ ಸೇವೆ ಸಲ್ಲಿಸುವ ಸೌಭಾಗ್ಯವೂ ಸಿಗುತ್ತಿರಲಿಲ್ಲ. ಸಂತೃಪ್ತಿಯೂ ನನ್ನದಾಗುತ್ತಿರಲಿಲ್ಲ.

ಹಳ್ಳಿಗೆ ಬೋರ್‌ವೆಲ್   
ಹುಣಸೂರು ತಾಲೂಕು ಬೆಳಗಿರಿ ಗ್ರಾಮ ನಮ್ಮ ತಾಯಿಯ ಊರು. ಅಮ್ಮನನ್ನು ನೋಡಲು ಆ ಹಳ್ಳಿಗೆ ಹೋಗಿದ್ದೆ. ಅಲ್ಲಿ ಏಳೆಂಟು ಮಕ್ಕಳು ಪೋಲಿಯೋ ಪೀಡಿತರಾಗಿರುವುದು ಕಣ್ಣಿಗೆ ಬಿತ್ತು. ವಿಚಾರಿಸಿದಾಗ ಇಬ್ಬರು ಮಕ್ಕಳು ಸತ್ತಿರುವುದೂ ತಿಳಿಯಿತು. ಆ ಹಳ್ಳಿಗೆ ಕುಡಿಯುವ ನೀರಿಗಾಗಿ ಒಂದು ತೆರೆದ ಬಾವಿ ಇತ್ತು. ಆ ತೆರೆದ ಬಾವಿ ನೀರು ಕಲುಷಿತಗೊಂಡಿತ್ತು. ಕಸ ಕಡ್ಡಿಯಲ್ಲದೆ ಇನ್ನೂ ಏನೇನೋ ಬಿದ್ದು ಕುಡಿಯಲು ಯೋಗ್ಯವಲ್ಲದ ಸ್ಥಿತಿಯಲ್ಲಿತ್ತು. ಜನ ವಿಧಿಯಿಲ್ಲದೆ ಅದೇ ನೀರನ್ನು ಕುಡಿಯುತ್ತಿದ್ದರು. ತೆರೆದ ಬಾವಿಯ ಕೊಳಕು ನೀರು ಕುಡಿಯುತ್ತಿದ್ದ ಕಾರಣ ಹಳ್ಳಿಯಲ್ಲಿ ಪೋಲಿಯೋ ಬಂದಿದೆ ಎಂದು ದೇವರಾಜ ಅರಸರ ಬಳಿ ಹೇಳಿದಾಗ ಅವರು, ‘‘ಇದಕ್ಕೆ ಏನು ಮಾಡೋದಪ್ಪಾ, ಏನಾದರೂ ಔಷಧಿ ಕೊಡಿಸಬೇಕಾ, ನೀನು ಡಾಕ್ಟ್ರಲ್ಲವಾ, ಹೇಳು’’ ಎಂದು ಕೇಳಿದರು. ಔಷಧಿ ಕೊಡಿಸುವ ಮೊದಲು ಹಳ್ಳಿಗೆ ಕೊಳವೆ ಬಾವಿ ವ್ಯವಸ್ಥೆಯಾಗಬೇಕೆಂದು ತಿಳಿಸಿದೆ. ಅರಸರು ಮರು ಮಾತನಾಡದೆ, ಆ ತಕ್ಷಣವೇ ವ್ಯವಸ್ಥೆ ಮಾಡಿದರು. ಸುತ್ತಮುತ್ತಲ ಹಳ್ಳಿಗಳ ಪೈಕಿ ಆ ಹಳ್ಳಿಗೇ ಆ ಬೋರ್‌ವೆಲ್ ಮೊದಲನೆಯದಾಗಿತ್ತು. ಅಷ್ಟೇ ಅಲ್ಲ, ಆ ಮೂಲಕ ಹಲವು ಹಳ್ಳಿಗಳಿಗೆ ಕೊಳವೆ ಬಾವಿಗಳ ಸೌಲಭ್ಯ ದೊರಕಿತು.

ದೇವರಾಜ ಅರಸರಿಗೆ ಬಡವರು, ನಿರ್ಗತಿಕರು, ಕೆಳಜಾತಿಯ ಜನರನ್ನು ಕಂಡರೆ ಆತುಕೊಳ್ಳುವಷ್ಟು ಅಕ್ಕರೆ. ಅವರ ಕಷ್ಟ ಕೇಳಿ ಕರಗುತ್ತಿದ್ದರು, ಮರುಗುತ್ತಿದ್ದರು. ಅವರು ಎಲ್ಲರಂತೆ ಸಮಾಜದಲ್ಲಿ ತಲೆ ಎತ್ತಿ ನಡೆಯುವಂತೆ ಮಾಡಬೇಕೆಂದು ಚಡಪಡಿಸುತ್ತಿದ್ದರು. ಅದು ಬರಿ ತೋರಿಕೆಯ ಚಡಪಡಿಕೆಯಲ್ಲ, ಮಾತಲ್ಲೇ ಮುಗಿಯುವ ಪರಿಹಾರವೂ ಅಲ್ಲ. ಯಾರಾದರೂ ಕಷ್ಟ ಅಂತ ಹೇಳಿಕೊಂಡು ಬಂದವರ ಸ್ಥಾನದಲ್ಲಿ ನಿಂತು, ಆ ನೋವನ್ನು ತಮ್ಮ ನೋವನ್ನಾಗಿಸಿಕೊಳ್ಳುತ್ತಿದ್ದರು. ಅದು ಅವರಲ್ಲಿ ನಾನು ಕಂಡ ವಿಶೇಷವಾದ ಗುಣ. ನಾನು ದೇವರನ್ನು ನೋಡಿಲ್ಲ, ದೇವರಿದ್ದಾನೋ ಇಲ್ಲವೋ ಗೊತ್ತಿಲ್ಲ. ಆದರೆ ನನ್ನ ಪಾಲಿಗೆ ಅವರೇ ದೇವರು. ಅವರು ಕೊಡಿಸಿದ ಕೆಲಸ, ಆ ಕೆಲಸದಿಂದ ಸಮಾಜದಲ್ಲಿ ಸಿಕ್ಕ ಸ್ಥಾನಮಾನ, ಅದರಿಂದ ನಾಲ್ಕು ಜನಕ್ಕಾದ ಸಹಾಯ-ಎಲ್ಲಕ್ಕೂ ಕಾರಣ ಅರಸು. ಹಾಗಾಗಿ, ಇಂದಿಗೂ ಅವರ ಫೋಟೊವನ್ನು ನಮ್ಮ ದೇವರ ಮನೆಯಲ್ಲಿ ಇಟ್ಟು ಪೂಜಿಸುತ್ತಿದ್ದೇನೆ.

Writer - ಬಸವರಾಜು ಮೇಗಲಕೇರಿ

contributor

Editor - ಬಸವರಾಜು ಮೇಗಲಕೇರಿ

contributor

Similar News