ಪರಂಪರಾವಾದಿ ಕಾರಂತ

Update: 2020-10-09 19:30 GMT

ಚೋಮನ ಮಗಳು ಬೆಳ್ಳಿ ಕ್ರೈಸ್ತ ಧರ್ಮಕ್ಕೆ ಮತಾಂತರಗೊಳ್ಳುತ್ತಾಳೆ. ಈ ಮತಾಂತರದ ಬಗ್ಗೆ ಕಾರಂತರು, ಸೋಲಿನ ಅಸಾಧ್ಯ ಸ್ಥಿತಿಗಳ ಒಂದು ಪರಿಣಾಮ ಎಂದು ಚಿತ್ರಿಸುತ್ತಾರೆ ವಿನಃ ಒಂದು ಒಳಸಂಚು ಎಂದು ಕಾಣುವುದಿಲ್ಲ.


ಸುಸಂಬದ್ಧತೆ ಸಾಹಿತ್ಯಕ್ಕೆ ಒಂದು ಅಗತ್ಯ ಅಲ್ಲ. ಓರೆಕೋರೆ, ಸೋಲು-ಗೆಲುವು ಸಾಹಿತ್ಯದಲ್ಲಿ ಮಾತ್ರ ಅಲ್ಲ, ಮನುಷ್ಯ ಬದುಕಿನಲ್ಲೂ ಅನಿವಾರ್ಯ. ಶಿವರಾಮ ಕಾರಂತರ ವೈಯಕ್ತಿಕ ನಿಲುವುಗಳು ಹಾಗೂ ಅವರ ರಾಜಕೀಯ ನಿಲುವುಗಳನ್ನು ವಿಶ್ಲೇಷಿಸುವುದು, ದ್ವಂದ್ವಗಳನ್ನು ಪರೀಕ್ಷಿಸುವ, ವಿರೋಧಾಭಾಸಗಳನ್ನು ಅರ್ಥ ಮಾಡಿಕೊಳ್ಳುವ ಒಂದು ಅಭ್ಯಾಸ.

ಕಾರಂತರು ವೈಯಕ್ತಿಕ ಬದುಕಿನಲ್ಲಿ ಸಂಪ್ರದಾಯವಾದಿ. ಪರಂಪರೆಯ ಸಾತಾತ್ಯವನ್ನು ಮುಂದುವರಿಸಲೇ ಬೇಕು ಎಂಬುದು ಅವರ ಛಲ. ಹಾಗಾಗಿ ಅವರು ತಮ್ಮ ಬದುಕಿನಲ್ಲಿ ಮಹಾ ವಿಚಾರವಾದಿ ಆಗಿದ್ದರೂ, ಸಮಷ್ಟಿ ಜೀವನದ ಮಟ್ಟಿಗೆ ಪರಂಪರಾವಾದಿ ಆಗಿದ್ದರು. ವಿಚಾರ ಮತ್ತು ಪರಂಪರೆಗಳ ನಡುವೆ ಅವರಿಗೆ ಬಿರುಕು ಕಾಣಲಿಲ್ಲ. ಅವನ್ನೆಲ್ಲ ಒಟ್ಟಿಗೆ ಒಯ್ಯಬೇಕು ಎಂಬುದು ಅವರ ಧೋರಣೆ. ‘ಚೋಮನ ದುಡಿ’ಯಲ್ಲಿ ಕಾರಂತರು ಜಾತಿ ವ್ಯವಸ್ಥೆಯನ್ನು ಅಂತ್ಯವೇ ಇಲ್ಲದ, ಹಿಂಸೆಯನ್ನೇ ಬದುಕಿನ ಒಂದು ವಿಧಾನ ಮಾಡುವ ಸೆರೆಮನೆ ಎಂದು ಚಿತ್ರಿಸುತ್ತಾ, ವರ್ಣಾಶ್ರಮವನ್ನು ಛಿದ್ರಗೊಳಿಸುತ್ತಾರೆ.

 ದಲಿತನೊಬ್ಬ ನದಿಯಲ್ಲಿ ಮುಳುಗಿ ಸಾಯುತ್ತಿರುವಾಗಲೂ ದಡದಲ್ಲಿ ಮೇಲ್ಜಾತಿಯವರು ನಿಂತು ನೋಡುತ್ತಿರುತ್ತಾರೆ. ಆದರೆ ಆತನನ್ನು ಬಚಾವ್ ಮಾಡಲು ಯಾರೂ ಮುಂದಾಗುವುದಿಲ್ಲ. ಕಾದಂಬರಿಯಲ್ಲಿ ಇದೊಂದು ಹೃದಯ ಸ್ಪರ್ಶಿ ಸನ್ನಿವೇಶ. ಒಂದಲ್ಲ ಒಂದು ದಿನ ತಾನು ಬೇಸಾಯಗಾರನಾಗಬೇಕು ಎಂಬುದು ಚೋಮನ ಕನಸು. ಅದಕ್ಕೋಸ್ಕರ ಅವನು ಎರಡು ಕಡಸುಗಳನ್ನು ಸಾಕಿರುತ್ತಾನೆ. ಆದರೆ ಮೇಲ್ಜಾತಿಯ ಧಣಿ ಸಂಕಪ್ಪಯ್ಯ ಅವನ ಆಸೆಗೆ ಅಡ್ಡ ಬರುತ್ತಾರೆ. ಪಡಸಾಲೆಯ ಒಳಗಿಂದ ಸಂಕಪ್ಪಯ್ಯನ ತಾಯಿ ‘‘ಅಬ್ಬಾ ಹೊಲೆಯರಿಗೆ ಬಂದ ಸೊಕ್ಕೇ’’ ಎಂದು ಶಪಿಸುತ್ತಾಳೆ. ಕಾದಂಬರಿಯಲ್ಲಿ ಇದು ಇನ್ನೊಂದು ಮರ್ಮಬೇಧಕ ದೃಶ್ಯ. ಕೊನೆಗೂ ಚೋಮನ ಆಸೆ ಕೈಗೂಡುವುದಿಲ್ಲ. ಇದು ಈ ಸಮಾಜದಲ್ಲಿ ದಲಿತರ ಪಾಡು.

ಚೋಮನ ಮಗಳು ಬೆಳ್ಳಿ ಕ್ರೈಸ್ತ ಧರ್ಮಕ್ಕೆ ಮತಾಂತರ ಗೊಳ್ಳುತ್ತಾಳೆ. ಈ ಮತಾಂತರದ ಬಗ್ಗೆ ಕಾರಂತರು, ಸೋಲಿನ ಅಸಾಧ್ಯ ಸ್ಥಿತಿಗಳ ಒಂದು ಪರಿಣಾಮ ಎಂದು ಚಿತ್ರಿಸುತ್ತಾರೆ ವಿನಃ ಒಂದು ಒಳಸಂಚು ಎಂದು ಕಾಣುವುದಿಲ್ಲ. ‘ಮರಳಿ ಮಣ್ಣಿಗೆ’ ಕಾರಂತರ ಮಹೋನ್ನತ ಕಾದಂಬರಿ. ಅದರಲ್ಲಿ ಕರ್ನಾಟಕ ರಾಜ್ಯದ, ಕೋಟ ಭಾಗದ ಸಮಸ್ತ ಬದುಕಿನ ಚಿತ್ರಣ ಮೂಡಿ ಬಂದಿದೆ. ಕೋಟದ ನಿತ್ಯ ಜೀವನ, ಅಲ್ಲಿಯ ಜನರ ಮನೆಗಳು ಇವೆಲ್ಲದರ ದರ್ಶನ ನಮಗೆ ಆಗುತ್ತದೆ. ಕಾದಂಬರಿಯ ನಾಯಕ ರಾಮ ಐತಾಳ ಮಹಾ ಹಠಮಾರಿ ಬ್ರಾಹ್ಮಣ. ಎಲ್ಲದರಲ್ಲೂ ತಾನು ಹೇಳಿದ್ದೇ ಆಗಬೇಕು. ಆದರೆ ಅಂತಹ ಹಠಮಾರಿಗೂ ಕೆಲವು ಕ್ಷಣಗಳಿವೆ. ತಾನು ಎಷ್ಟಾದರೂ ಶ್ರಾದ್ಧದ ದಕ್ಷಿಣೆ ಹಿಡಿಯುವ, ಮಡಿ ಪಂಚೆಗೋಸ್ಕರ ಕೈಯೊಡ್ಡುವ ಮಡಿ ಬ್ರಾಹ್ಮಣ ಎಂಬುವುದೇ ವ್ಯಥೆ ಅದು. ಅದರ ಎದುರು, ತನ್ನ ಮಕ್ಕಳ ಬೆಂಗಳೂರಿನ ಹೊಟೇಲಿನ ಸಂಪಾದನೆಯಿಂದ ಊರಲ್ಲಿ ಉಪ್ಪರಿಗೆ ಮನೆ ಮಾಡಿ, ಅದಕ್ಕೆ ಹಂಚು ಹೊದಿಸಿ ಮೆರೆಯುವ ಶೀನ ಮಯ್ಯ ಇದ್ದಾನೆ. ರಾಮ ಐತಾಳರಿಗೆ ಶೀನ ಮಯ್ಯನ ದುಡ್ಡಿನ ಮೋಹ; ಆದರೆ ಅದು ಅನ್ನ ಮಾರಿ ಬಂದ ದುಡ್ಡು ಎಂದು ತಿರಸ್ಕಾರ. ರಾಮ ಐತಾಳರಿಗೆ ಮಗನ ಮೋಹ. ಅದು ಅವನ ಎರಡನೆಯ ಮದುವೆಗೆ ಪ್ರೇರಿಸುತ್ತದೆ. ಅವರು ಪಡುಮುನ್ನೂರು ಹಳ್ಳಿಯ ಹೆಣ್ಣು ಸತ್ಯಭಾಮೆಯನ್ನು ಮದುವೆ ಮಾಡಿಕೊಂಡು ಮನೆಗೆ ಕರೆತರುತ್ತಾರೆ. ಪಾರೋತಿ, ಸರಸೋತಿ ಸತ್ಯಭಾಮೆಯ ಜೊತೆ ಸಾವರಿಸಿಕೊಂಡು ಹೋಗುತ್ತಾರೆ.

ಒಂದು ದಿನ ಶೀನ ಮಯ್ಯ ರಾಮ ಐತಾಳರ ಮನೆಗೆ ಊಟಕ್ಕೆ ಬರುತ್ತಾನೆ. ಸತ್ಯಭಾಮೆ ಶಿವಳ್ಳಿಯವಳು ಎಂದು, ಅಡುಗೆಯಲ್ಲಿ ಸಿಹಿಯುಂಟು ಎಂದು ಭಾವಿಸಿ ಸೊಂಟದಲ್ಲಿ ಮೆಣಸಿನಕಾಯಿ ಸಿಕ್ಕಿಸಿಕೊಂಡೇ ಬರುತ್ತಾನೆ. ಇದು ತಿಳಿದಿದ್ದ ಸತ್ಯಭಾಮೆ ಸಾರನ್ನು ಹೆಚ್ಚು ಖಾರ ಮಾಡುತ್ತಾಳೆ. ಆದರೆ ಶೀನ ಮಯ್ಯ ಪಟ್ಟು ಬಿಡದೆ ಮೆಣಸಿನಕಾಯಿ ಮುರಿದುಕೊಂಡೇ ಊಟ ಮಾಡಿ ಏಳುತ್ತಾನೆ. ಈಗ ಅಬ್ಬಾ ಬ್ರಾಹ್ಮಣನ ಹಠವೇ ಎಂದು ಆಶ್ಚರ್ಯ ಪಡುವ ಸರದಿ ಸತ್ಯಭಾಮೆಯದ್ದು. ಇನ್ನೊಂದು ದೃಶ್ಯ ಕಾದಂಬರಿಯಲ್ಲಿ ಮೂರನೇ ತಲೆಮಾರಿನ ರಾಮ ಕಡಲ ತೀರದಲ್ಲಿ ತನ್ನವಳು ನಾಗವೇಣಿಯಿಂದ ಪಿಟೀಲು ಕಲಿಯುವುದು. ನಾಗವೇಣಿ ಮಂಗಳೂರಿನ ನಾಗರಿಕ ಹಿನ್ನೆಲೆಯುಳ್ಳವಳು. ಆದರೆ ಅವಳು ಕೋಟದಲ್ಲಿ ತನ್ನ ಅತ್ತೆಯೊಂದಿಗೆ ಹೊಂದಿಕೊಂಡು ಬಾಳಲು ಕಲಿಯುತ್ತಾಳೆ. ಮಗನಿಗೆ ಕಡಲ ತೀರದಲ್ಲಿ ಪಿಟೀಲು ಕಲಿಸುತ್ತಾಳೆ. ಅದನ್ನು ನೋಡಿ ಶೂದ್ರ ಹೆಂಗಸರಿಗೆ ಆಶ್ಚರ್ಯ; ಕಡಲತೀರದಲ್ಲಿ ಪಿಟೀಲು ಕಲಿಯುವುದಾ ಎಂದು ಆಶ್ಚರ್ಯ ಪಡುತ್ತಾರೆ. ಮರಳಿ ಮಣ್ಣಿಗೆ ಕಾದಂಬರಿಯಲ್ಲಿ, ಪಾತ್ರಗಳು ದಿನ ನಿತ್ಯದ, ಬೇಸರಗೊಳಿಸುವ ವಿವರಗಳಿಂದ emancipation ಪಡೆಯುವ, ಸ್ವತಂತ್ರಗೊಳ್ಳುವ ಅಸಹಾಯಕ ಪ್ರಯತ್ನಗಳು, ವಿಶ್ವೈಕ ಹಂಬಲಗಳ ಒಂದು ವಿಸ್ತಾರದ ಚಿತ್ರಣ. ಈ ಕಾದಂಬರಿಯಲ್ಲಿ ಕೂಡ, ಪರಂಪರೆ ಒಂದು ಸೆರೆಮನೆ ಮಾತ್ರ ಅಲ್ಲ, ಒಂದು ಕಟಕಟೆ ಕೂಡ. ‘ಮರಳಿ ಮಣ್ಣಿಗೆ’ಯ ಹಾಗೆ ಕಾರಂತರ ಇನ್ನೊಂದು ಮಹೋನ್ನತ ಕಾದಂಬರಿ ಬೆಟ್ಟದ ಜೀವ. ಕಾದಂಬರಿಯ ನಾಯಕ ಗೋಪಾಲಯ್ಯ ಮಹಾ ಸಾಹಸಿ. ಬೆಟ್ಟವನ್ನು ಕಡಿದು ತಪ್ಪಲು ಮಾಡಿ ಕೃಷಿ ಬೆಳೆಯುವ ಮಹಾಸಾಹಸಿ. ಹಳ್ಳಿಯ ಶೂದ್ರರಿಗೆ ಅವರ ಸಾಹಸ ಬೆರಗು. ತಮ್ಮ ಕೈಯಲ್ಲಿ ಆಗದ್ದನ್ನು ಅವರು ಮಾಡಿದರಲ್ಲ ಎಂದು ಬೆರಗು, ಮೆಚ್ಚುಗೆ ತುಂಬಿದ ಮತ್ಸರ! ಈ ಕಾದಂಬರಿಯು ಜುಜುಬಿ ರಾಜಕೀಯಕ್ಕಿಂತ ಹೆಚ್ಚಾಗಿ universal anxietiesಗಳ ಒಂದು ಶೋಧನೆ. ಕಾರಂತರಿಗೆ ವಿಶ್ವಾತ್ಮಕ ಮಾನವೀಯತೆ ಮಾತ್ರ ಅಲ್ಲಾ, ವಿಜ್ಞಾನ ಕೂಡ ಒಂದು obsession. ವಿಜ್ಞಾನ ಸಂಪುಟದ ನಾಲ್ಕು ಭಾಗಗಳು ಕನ್ನಡಕ್ಕೆ ಒಂದು ಮಹತ್ವದ ಕೊಡುಗೆ. ಹೀಗೆ ಕಾರಂತರು ಕಾದಂಬರಿಕಾರರಾಗಿ ಹೆಸರು ಮಾಡಿದ್ದರೂ ತನ್ನ ವಿಜ್ಞಾನ ಸಂಪುಟಗಳ ಮುಖಾಂತರ ಸಮಗ್ರ ಜ್ಞಾನ ಲೋಕಕ್ಕೆ ಸಲ್ಲುವವರು. ಅವರ ಮಟ್ಟಿಗೆ ಮಾನವಿಕ ವೈಜ್ಞಾನಿಕ ಎಂಬ ಭೇದವಿಲ್ಲ. ಎಲ್ಲವೂ ಜ್ಞಾನವೇ ಎಲ್ಲವನ್ನೂ ತಾನು ತಿಳಿದುಕೊಳ್ಳುವ ಉತ್ಸಾಹ ಇರಬೇಕು ಎಂದು ಅವರ ಇರಾದೆ.

ಇಷ್ಟೆಲ್ಲಾ ಅಗಾಧತೆಯನ್ನು ಪೂಜಿಸುತ್ತಿದ್ದ ಕಾರಂತರು, ತಮ್ಮ ವೈಯಕ್ತಿಕ ಬದುಕಿನಲ್ಲಿ ರಾಮಜನ್ಮಭೂಮಿ ಚಳವಳಿಗೆ ಬೆಂಬಲ ನೀಡಿದ್ದರು. ಎಲ್. ಕೆ. ಅಡ್ವಾಣಿಯವರ ರಥಯಾತ್ರೆಯ ಉದ್ದಕ್ಕೂ, ಉತ್ತರ ಭಾರತದ ಊರುಗಳಲ್ಲಿ ಮಾರಣ ಹೋಮಗಳೇ ನಡೆದವು. ಬಾಬರಿ ಮಸೀದಿ ಧ್ವಂಸದ ಜೊತೆಗೆ ಮುಂಬೈ ಗಲಭೆಯಲ್ಲಿ ಒಂದು ಸಾವಿರಕ್ಕಿಂತಲೂ ಹೆಚ್ಚು ಜನರು ಮೃತರಾದರು (ನ್ಯಾಯವಾದಿ ಶ್ರೀ ಕೃಷ್ಣ ಕಮಿಟಿ ವರದಿ ಪ್ರಕಾರ). ಅಂಕಿ ಅಂಶಗಳು ಬಿಡಿ, ಹಿಂದುತ್ವ ಮತ್ತಿನಲ್ಲಿ ಗಲಭೆಕೋರರು ಅಮಾಯಕ ಮುಸ್ಲಿಮರ ಮೇಲೆ ನಡೆಸಿದ ಕ್ರೌರ್ಯಗಳ ಉದಾಹರಣೆಗಳು ಆವಾಗಲೇ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದವು. ಹಾಗಾಗಿ, ಕಾರಂತರಿಗೆ ಇವೆಲ್ಲ ಗೊತ್ತಿರಲಿಲ್ಲ ಎನ್ನುವ ಮುಗ್ಧತೆಯ ನೆಪ ಇಲ್ಲ. ನನ್ನ ಪ್ರಕಾರ ಕ್ಷಮೆ ಕೂಡ ಇಲ್ಲ.

Writer - ಜಿ. ರಾಜಶೇಖರ್

contributor

Editor - ಜಿ. ರಾಜಶೇಖರ್

contributor

Similar News