ಹಿಮ ಶಿಖರಗಳ ಸಾನ್ನಿಧ್ಯದಲ್ಲಿ ....

Update: 2020-10-24 19:30 GMT

ಡಾ.ಇಂದಿರಾ ಹೆಗ್ಗಡೆ ಕನ್ನಡದ ಮಹತ್ವದ ಲೇಖಕಿಯರಲ್ಲಿ ಒಬ್ಬರು. ಕಾದಂಬರಿ, ಸಣ್ಣಕಥೆ, ಕಾವ್ಯ, ಜೀವನಚರಿತ್ರೆ, ಸಂಶೋಧನೆ ಹೀಗೆ ಹಲವು ಪ್ರಕಾರಗಳಲ್ಲಿ ಕೈಯಾಡಿಸಿದವರು. ತುಳುನಾಡಿನ ಸಾಂಸ್ಕೃತಿಕ ಇತಿಹಾಸದೆಡೆಗೆ ಬೆಳಕು ಚೆಲ್ಲಿದ ಹಿರಿಮೆ ಇವರದು. ಇದೇ ಸಂದರ್ಭದಲ್ಲಿ ಪ್ರವಾಸವೂ ಅವರ ಹವ್ಯಾಸಗಳಲ್ಲಿ ಒಂದು. ಬಹುತ್ವ ಭಾರತದ , ಬಹುಮುಖೀ ಸಂಸ್ಕೃತಿಯ ಬೆನ್ನು ಹಿಡಿದು ದೇಶಾದ್ಯಂತ ಓಡಾಡಿದ್ದಾರೆ. ಆ ಅನುಭವಗಳನ್ನು ದಾಖಲಿಸಿದ್ದಾರೆ. ‘ಹಿಮಾಲಯ ಶಿಖರಗಳ ಸಾನ್ನಿಧ್ಯದಲ್ಲಿ ನಡೆದಾಟ’ ಇಂದಿರಾ ಹೆಗ್ಗಡೆಯವರ ಮೂರನೇ ಪ್ರವಾಸ ಕಥನ.

ಇದು ಕೇವಲ ಸ್ಥಳ ಪರಿಚಯವನ್ನು ಮಾಡಿಕೊಡುವ ಕೃತಿಯಲ್ಲ. ಅದರ ನೆಪದಲ್ಲಿ ಈ ನೆಲದ ಮೂಲ ಸಂಸ್ಕೃತಿಯ ಶೋಧನೆಯನ್ನು ನಡೆಸಲು ಪ್ರಯತ್ನ ಪಡುತ್ತದೆ. ಈಶಾನ್ಯ ಭಾರತದ ನೆಲದ ಸಂಸ್ಕೃತಿ ಯಾಗಿರುವ ‘ಲಿವಿಂಗ್ ಟುಗೆದರ್’ ಕುರಿತಂತೆ ಕುತೂಹಲಕಾರಿ ಮಾಹಿತಿ ನೀಡುತ್ತಾರೆ. ಆರ್ಯನರು, ರೋಮನರ ವಂಶವಾಹಿಗಳ ಕುರಿತಂತೆ ತಡಕಾಡುತ್ತಾರೆ. ಪ್ರವಾಸ ಕಥನದಲ್ಲಿ ನುಬ್ರಾ ವ್ಯಾಲಿ ಭಾಗದ ಆರ್ಯನರ ಬಗ್ಗೆ ಕೆಲವು ಮಾತುಗಳಿವೆ. ‘ಆರ್ಯನರು ಭಾರತಕ್ಕೆ ನುಬ್ರಾ ಮೂಲಕ ಬಂದಿದ್ದರು ಎನ್ನುವುದು. ಭಾರತ-ಪಾಕಿಸ್ತಾನ ಭಾಗದಲ್ಲಿ ಅಂದಿನ ಈ ವಲಸಿಗರ ವಂಶವಾಹಿಗಳನ್ನು ನಾವು ಈಗಲೂ ಕಾಣಬಹುದು. ಹಾಗೂ ಯೇಸುವನ್ನು ಹುಡುಕಿಕೊಂಡು ಬಂದ ರೋಮನರಲ್ಲಿ ಕೆಲವರು ಇಲ್ಲಿಯೇ ಉಳಿದರು. ಅವರ ಮುಖ ಚಹರೆಯಿಂದಲೂ ಅವರನ್ನು ಗ್ರೀಕ್ ಮೂಲದವರು ಎಂದು ಗುರುತಿಸಬಹುದು’ ಎನ್ನುವುದನ್ನು ಕೃತಿ ಪ್ರಸ್ತಾಪಿಸುತ್ತದೆ.

ಜಮ್ಮು ಕಾಶ್ಮೀರದ ಪ್ರಕೃತಿ, ಸರೋವರಗಳ ಜೊತೆಗೆ ಜಮ್ಮುವಿನ ಪುಣ್ಯ ಕ್ಷೇತ್ರಗಳ ಬಗ್ಗೆ ಕೃತಿಯಲ್ಲಿ ವಿವರಗಳಿವೆ. ಕಾಶ್ಮೀರವನ್ನಂತೂ ವಿಷದವಾಗಿ, ವಿಷಾದವಾಗಿ ಕಟ್ಟಿಕೊಟ್ಟಿದ್ದಾರೆ. ಅದರ ಸೌಂದರ್ಯವನ್ನು ಮಾತ್ರವಲ್ಲ, ಅಲ್ಲಿರುವ ಮನುಷ್ಯರ ದುಃಖಗಳನ್ನು ಹಿಡಿದಿಡುವ ಪ್ರಯತ್ನ ಮಾಡಿದ್ದಾರೆ. ಸಸ್ಯ ಶಾಮಲೆ ಸಿಮ್ಲಾ, ಸದ್ಯಕ್ಕೆ ಸುದ್ದಿಯಲ್ಲಿರುವ ಭಾರತದ ಮುಕುಟ ಲಡಾಖ್, ಚಾರ್‌ಧಾಮ ಹರಿದ್ವಾರ ಇವುಗಳ ಕುರಿತಂತೆ ಅಪಾರ ವಿವರಗಳಿವೆ. ಗಂಗೋತ್ರಿ, ಯಮುನೋತ್ರಿ, ಕೇದಾರ, ಬದರಿ, ಹರಿದ್ವಾರ, ಉತ್ತರ ಕಾಶಿಗಳಷ್ಟೇ ಅಲ್ಲ...ಅವುಗಳನ್ನು ಆವರಿಸಿಕೊಂಡಿರುವ ಪ್ರಕೃತಿಯ ಚೋದ್ಯಗಳನ್ನು ಕೂಡ ಕಟ್ಟಿಕೊಡುತ್ತಾರೆ.

ನವಕರ್ನಾಟಕ ಪ್ರಕಾಶನ ಹೊರತಂದಿರುವ ಈ ಕೃತಿಯ ಒಟ್ಟು ಪುಟಗಳು 120. ಮುಖಬೆಲೆ 140 ರೂಪಾಯಿ. ಆಸಕ್ತರು 080-22161900 ದೂರವಾಣಿಯನ್ನು ಸಂಪರ್ಕಿಸಬಹುದು.

Writer - -ಕಾರುಣ್ಯ

contributor

Editor - -ಕಾರುಣ್ಯ

contributor

Similar News