ಚೌಕೀದಾರ್ ಪರಿಹಾರ ನಿಧಿಯಿಂದ ಡೊಲಾಂಡ್‌ಗೆ ನೆರವು!

Update: 2020-11-07 19:30 GMT

ಚೌಕೀದಾರರು ತುಂಬಾ ಬೇಜಾರಿನಲ್ಲಿದ್ದರು. ಅಂಬಾನಿಯವರು ಚೌಕೀದಾರ ಕೆಲಸದಿಂದ ತೆಗೆದು ಹಾಕಿದರೇನೋ ಎಂದು ಪತ್ರಕರ್ತ ಎಂಜಲು ಕಾಸಿಗೆ ಶಂಕೆಯಾಯಿತು.

‘‘ಚೌಕೀದಾರರೇ ಕೆಲಸ ಹೋಯಿತೆ?’’ ಕಾಸಿ ಕೇಳಿದ.
‘‘ನನ್ನ ಫೇಸ್‌ಬುಕ್ ಫ್ರೆಂಡ್ ಡೊಲಾಂಡ್‌ನ ಅಕೌಂಟ್ ಹ್ಯಾಕ್ ಆಗಿದೆ...’’ ಕಾಸಿಯನ್ನು ಕಂಡದ್ದೇ ಚೌಕೀದಾರರು ಗಳಗಳನೆ ಅಳತೊಡಗಿದರು.
‘‘ಅದಕ್ಯಾಕೆ ಅಳುತ್ತೀರಿ ಚೌಕೀದಾರರೇ...ಇಲ್ಲಿ ಭಾರತದ ಜನರ ಬ್ಯಾಂಕ್ ಪಾಸ್‌ಬುಕ್ ಅಂಕೌಂಟೇ ಹ್ಯಾಕ್ ಆಗಿವೆ...’’

‘‘ನಾನು ಇನ್ಯಾರ ಜೊತೆಗೆ ಸೇರಿ ಇಸ್ಪೀಟು ಆಟ ಆಡಲಿ, ಯಾರ ಜೊತೆಗೆ ಕಷ್ಟ ಸುಖ ಹಂಚಿಕೊಳ್ಳಲಿ...ಯಾರ ಜೊತೆಗೆ ಸೇರಿ ಭಾರತದ ಆರ್ಥಿಕತೆಯನ್ನು ನಾಶ ಮಾಡಲಿ...ಯಾರ ಜೊತೆ ಸೇರಿ ಸರ್ಜಿಕಲ್ ಸ್ಟ್ರೈಕ್ ಮಾಡಲಿ...ಯಾರ ಜೊತೆಗೆ ಸೇರಿ ಕೊರೋನ ನಮಸ್ತೆ ಕಾರ್ಯಕ್ರಮ ಮಾಡಲಿ...ಯಾರ ಜೊತೆ ಸೇರಿ ದೇಶಕ್ಕೆ ಲಾಕ್‌ಡೌನ್ ಮಾಡಲಿ...’’ ಎನ್ನುತ್ತಾ ತನ್ನ ಕಷ್ಟವನ್ನು ಹೇಳತೊಡಗಿದರು. ‘‘ದೇಶವನ್ನು ಸರ್ವನಾಶ ಮಾಡಿ ಆಗಿದೆಯಲ್ಲ ಚೌಕೀದಾರರೇ...ಇನ್ನು ಆ ಚಿಂತೆ ಬಿಡಿ. ನೀವೂ ನಿಮ್ಮ ಫೇಸ್‌ಬುಕ್ ಡಿ ಆ್ಯಕ್ಟೀವ್ ಮಾಡಿ ಬಿಡಿ...’’ ಕಾಸಿ ಸಮಾಧಾನ ಮಾಡಿದರು. ‘‘ಡೊಲಾಂಡ್ ನನ್ನ ಮಾತನ್ನು ಯಥಾವತ್ ಪಾಲಿಸಿದ್ದರೆ ಇವತ್ತು ಅವರಿಗೆ ಈ ಸ್ಥಿತಿ ಬರುತ್ತಿರಲಿಲ್ಲ....’’

‘‘ನೀವು ಅವರಿಗೆ ಯಾವ್ಯಾವ ಸಲಹೆ ನೀಡಿದ್ದಿರಿ ಚೌಕೀದಾರರೆ?’’ ಕಾಸಿ ಕುತೂಹಲದಿಂದ ಕೇಳಿದ.
‘‘ದೋಸ್ತ ಚುನಾವಣೆಯನ್ನೇ ಮಾಡಬೇಡ....ಸುಮ್ಮನೆ ಚೀನಾ, ರಶ್ಯ ಅಂತ ಹೇಳಿ ಚುನಾವಣೆಯನ್ನು ಮುಂದೂಡು ಎಂದು ಹೇಳಿದೆ. ಕೇಳಲಿಲ್ಲ, ಅನುಭವಿಸಿದ....’’ ಚೌಕೀದಾರರು ಮತ್ತೆ ಕಣ್ಣೀರಿಡತೊಡಗಿದರು.
‘‘ಆಮೇಲೆ...’’

‘‘ಆಮೇಲೆ ಏನು? ಬ್ಯಾಲೆಟ್ ಪೇಪರ್‌ನ್ನು ಸಂಪೂರ್ಣ ರದ್ದು ಮಾಡು. ಇವಿಎಂ ಮಶಿನ್ ಬಳಸು. ಬೇಕಾದರೆ ನಮ್ಮ ಗೋದಾಮಿನಲ್ಲಿ ಸಾಕಷ್ಟಿವೆ. ಅದನ್ನೇ ಚುನಾವಣೆಗೆ ಬಳಸು...ಯಾರು ಏನನ್ನು ಒತ್ತಿದರು ನಿನಗೆ ಮತ ಬಂದು ಬೀಳುತ್ತೆ ಎಂದೆ....ಅದನ್ನೂ ಕೇಳಲಿಲ್ಲ....’’

‘‘ಆಮೇಲೆ...’’

‘‘ಆಮೇಲೆ ಇನ್ನೇನು? ಎಲ್ಲ ಪತ್ರಕರ್ತರನ್ನು ದೇಶದ್ರೋಹದ ಮೇಲೆ ಜೈಲಿಗೆ ಕಳುಹಿಸು. ಭಾರತದ ಪತ್ರಿಕೆಗಳು ಮತ್ತು ಟಿವಿ ಚಾನೆಲ್‌ಗಳನ್ನು ಪ್ರಸಾರ ಮಾಡು. ಒಳ್ಳೆ ಜಾತಿ ನಾಯಿಗಳ ತರಹ ನಿಯತ್ತಾಗಿ ಚುನಾವಣೆಯಲ್ಲಿ ನಿನ್ನನ್ನು ಗೆಲ್ಲಿಸುತ್ತಾರೆ ಎಂದೆ....ಅದನ್ನೂ ಕೇಳಲಿಲ್ಲ...’’

‘‘ಆಮೇಲೆ...’’

‘‘ಆಮೇಲೆ ಮತ್ತೇನು? ಚೀನಾದ ಮೇಲೆ ಸರ್ಜಿಕಲ್ ಸ್ಟ್ರೈಕ್ ಮಾಡಿದ್ದೇವೆ ಎಂದು ಘೋಷಿಸು....ಒಂದೆರಡು ಸ್ಫೋಟಗಳನ್ನು ಮಾಡಿಸು...ಪಾಕಿಸ್ತಾನದ ನಿನ್ನ ಫ್ರೆಂಡ್‌ಗಳಿಗೆ ಹೇಳಿದ್ರೆ ಅದನ್ನು ಸಲೀಸಾಗಿ ಮಾಡುತ್ತಾರೆ....ಎಂದೆ...ಅದನ್ನೂ ಕೇಳಲಿಲ್ಲ...’’

‘‘ಚೌಕೀದಾರರೆ.....ಡೊಲಾಂಡ್ ಸೋತಿದ್ದರಿಂದ ಭಾರತಕ್ಕೇನಾದರೂ ನಷ್ಟವಿದೆಯೇ?’’ ಕಾಸಿ ಕೇಳಿದ.

‘‘ಡೊಲಾಂಡ್ ಗೆಲ್ಲುತ್ತಾರೆ ಎಂದು ಒಂದಿಷ್ಟು ಪಟಾಕಿ ತಂದಿಟ್ಟಿದ್ದೆವು. ಅದನ್ನೆಲ್ಲ ಈಗ ದೀಪಾವಳಿಯ ಸಂದರ್ಭದಲ್ಲಿ ರೇಷನ್ ಅಂಗಡಿಗಳಲ್ಲಿ ಅಕ್ಕಿಯ ಬದಲಿಗೆ ಹಂಚಬೇಕಾಗುತ್ತದೆ. ಹಾಗೆಯೇ...ನಮಸ್ತೆ ಡೊಲಾಂಡ್ ಕಾರ್ಯಕ್ರಮದ ಮೂಲಕ ನಾವು ಕೊರೋನ ಹಂಚಿದ ಹಾಗೆ...ಇನ್ನೂ ಬಗೆ ಬಗೆಯ ರೋಗಗಳನ್ನು ದೇಶಾದ್ಯಂತ ಹಂಚಿ, ಹತ್ತು ಹಲವು ಲಾಕ್‌ಡೌನ್‌ಗಳನ್ನು ವಿಧಿಸಿ ಜನರನ್ನು ಮನರಂಜಿಸಬೇಕೆಂದಿದ್ದೆವು. ಆ ಎಲ್ಲ ಕಾರ್ಯಕ್ರಮಗಳನ್ನು ರದ್ದು ಮಾಡಬೇಕಾಗಿದೆ...’’

‘‘ಈಗ ಮುಂದೇನು ಮಾಡಬೇಕು ಎಂದಿದ್ದೀರಿ...?’’ ‘‘ನನ್ನ ಭಾರತದ ಫ್ರೆಂಡ್ ಶಾ ಅವರನ್ನು ಕಳುಹಿಸಬೇಕೆಂದಿದ್ದೀನೆ. ವಿರೋಧ ಪಕ್ಷದ ಸಂಸದರನ್ನು ಕೆಲವು ಕೋಟಿ ಕೊಟ್ಟು ಖರೀದಿ ಮಾಡಿ ಡೊಲಾಂಡ್ ಅವರನ್ನು ಮತ್ತೆ ಅಮೆರಿಕದ ಅಧ್ಯಕ್ಷ ಮಾಡಬೇಕು ಎಂದು ಇದ್ದೇವೆ...ಆದರೆ ಅಲ್ಲಿ ದುಡ್ಡು ಡಾಲರ್ ಲೆಕ್ಕದಲ್ಲಿ ಕೊಡಬೇಕು....’’ ಚೌಕೀದಾರರು ತಲೆ ಕೆರೆದುಕೊಂಡರು. ‘‘ಅದಕ್ಕೆ ಸಾಕಷ್ಟು ಹಣ ಬೇಕಲ್ಲ ಸಾರ್?’’
‘‘ಚೌಕೀದಾರ್ ಪರಿಹಾರ ನಿಧಿಯಲ್ಲಿ ಸಂಗ್ರಹಿಸಿದ ಹಣವಿದೆಯಲ್ಲ...ಅದನ್ನು ಡೆಮಾಕ್ರಟಿಕ್ ಪಕ್ಷದ ಸಂಸದರನ್ನು ಖರೀದಿಸಲು ಬಳಸುವುದು ಎಂದು ಮಾಡಿದ್ದೇವೆ...’’ ಚೌಕೀದಾರರು ಪರಿಹಾರ ಹೇಳಿದರು.

‘‘ಅದು ಕೊರೋನ ಸಂತ್ರಸ್ತರಿಗಾಗಿ ಸಂಗ್ರಹಿಸಿರುವ ನಿಧಿಯಲ್ಲವೇ?’’ ಕಾಸಿ ಆತಂಕದಿಂದ ಕೇಳಿದ.
 ‘‘ನೋಡ್ರೀ...ನನ್ನ ಫ್ರೆಂಡ್ ಡೊಲಾಂಡ್ ಅವರು ಕೊರೋನದಿಂದ ಸಂತ್ರಸ್ತರಾದ ಮುಖ್ಯ ವ್ಯಕ್ತಿ. ಆದುದರಿಂದ ಪರಿಹಾರ ನಿಧಿಯನ್ನು ಅವರಿಗಾಗಿ ವ್ಯಯಿಸಿದರೆ ಭಾರತಕ್ಕೆ ನಷ್ಟವೇನೂ ಇಲ್ಲ...’’

‘‘ಅವರು ಕೊರೋನದಿಂದ ಸಂತ್ರಸ್ತರೇ? ಅದು ಹೇಗೆ?’’ ಕಾಸಿ ಅರ್ಥವಾಗದೆ ಮರು ಪ್ರಶ್ನಿಸಿದ. ‘‘ಕೊರೋನದಿಂದ ಅಮೆರಿಕದಲ್ಲಿ ಅತ್ಯಧಿಕ ಜನ ಸತ್ತ ಕಾರಣದಿಂದ ಅಲ್ಲಿನ ಜನರು ಡೊಲಾಂಡ್‌ರನ್ನು ಸೋಲಿಸಿದರು. ಆದುದರಿಂದ ಅವರು ಕೂಡ ಕೊರೋನಾ ಸಂತ್ರಸ್ತರೇ ಆಗಿದ್ದಾರೆ. ಆದುದರಿಂದ ಚೌಕೀದಾರ್ ಪರಿಹಾರ ನಿಧಿಯನ್ನು ಅವರಿಗಾಗಿ ನಾವು ಬಳಸಲಿದ್ದೇವೆ...’’

‘‘ಆದರೆ ನಮಸ್ತೆ ಡೊಲಾಂಡ್ ಕಾರ್ಯಕ್ರಮದಿಂದಾಗಿ ವಿದೇಶಗಳಿಂದ ಕೊರೋನ ಭಾರತಕ್ಕೆ ಬಂತು ಎಂದು ಆರೋಪಗಳಿವೆಯಲ್ಲ....’’ ‘‘ನೋಡಿ ನನ್ನ ಫ್ರೆಂಡ್‌ಡೊಲಾಂಡ್‌ನಿಂದಾಗಿ ಕೊರೋನ ಭಾರತಕ್ಕೆ ಬಂತು ಎನ್ನುವುದು ಹೆಮ್ಮೆಯ ವಿಷಯ. ಚೀನಾ, ಇಟಲಿ, ಅಮೆರಿಕದಲ್ಲಿ ಬಂದ ಕೊರೋನ ಭಾರತಕ್ಕೂ ಬಂದ ಕಾರಣದಿಂದಾಗಿ ನಮ್ಮ ದೇಶವೂ ಅವುಗಳ ಜೊತೆಗೆ ಸಮಾನ ಸ್ಥಾನದಲ್ಲಿ ಗುರುತಿಸಲ್ಪಟ್ಟಿತು. ್ಲ ಆ ದೇಶಗಳ ಜೊತೆಗೆ ಭಾರತವೂ ವಿಶ್ವದಲ್ಲಿ ಗುರುತಿಸಲ್ಪಟ್ಟಿತು. ಇದು ಭಾರತ ವಿಶ್ವ ಗುರುವಾಗುವುದಕ್ಕೆ ಡೊಲಾಂಡ್ ನೀಡಿದ ಅಲ್ಪ ಕೊಡುಗೆ. ಇನ್ನಷ್ಟು ಕೊಡುಗೆ ನೀಡುವ ಹೊತ್ತಿನಲ್ಲೇ ಅವರನ್ನು ಅಮೆರಿಕದ ಜನರು ಸೋಲಿಸಿದರು....’’ ಚೌಕೀದಾರರು ವಿಷಾದದಿಂದ ಹೇಳಿದರು.

‘‘ಭಾರತ ಕೊಳಕು ದೇಶ ಎಂದು ಟ್ರಂಪ್ ಹೇಳಿರುವುದರಿಂದ ಭಾರತೀಯ ಅನಿವಾಸಿಗಳು ಅವರಿಗೆ ಮತ ಹಾಕಲಿಲ್ಲ ಎಂದು ಆರೋಪಗಳಿವೆಯಲ್ಲ....?’’ ಕಾಸಿ ಕೇಳಿದ.

‘‘ಸಿನೆಮಾಗಳಲ್ಲಿ ಭಾರತವನ್ನು ಕೊಳಕಾಗಿ ತೋರಿಸಿದರೆ ಅದಕ್ಕೆ ಅವಾರ್ಡ್ ಕೊಡುತ್ತಾರೆ. ಆದರೆ ನನ್ನ ಫ್ರೆಂಡ್ ಭಾರತವನ್ನು ಕೊಳಕು ಎಂದು ಹೇಳಿದರೆ ಅದು ಹೇಗೆ ತಪ್ಪಾಗುತ್ತದೆ?’’ ಚೌಕೀದಾರರು ಮರು ಪ್ರಶ್ನಿಸಿದರು.
‘‘ಡೊಲಾಂಡ್ ಅವರಿಗೆ ಪರಿಹಾರ ನಿಧಿಯಿಂದ ಏನೇನು ವ್ಯವಸ್ಥೆ ಮಾಡುತ್ತೀರಿ...?’’

‘‘ಡೊಲಾಂಡ್ ಅವರು ಗುಜರಾತಿಗೆ ಬಂದಾಗ ಕಟ್ಟಿದ ಗೋಡೆಯನ್ನು ಭಾರತದ ಪ್ರಾಚೀನ ಸ್ಮಾರಕ ಎಂದು ಘೋಷಿಸಲಿದ್ದೇವೆ. ಗೋಡೆಯಾಚೆಗಿರುವ ಎಲ್ಲ ಗುಡಿಸಲುಗಳನ್ನು ನೆಲ ಸಮ ಮಾಡಿ, ಅಲ್ಲಿ ಬೃಹತ್ ಡೊಲಾಂಡ್ ಪಾರ್ಕ್ ನಿರ್ಮಿಸಲಿದ್ದೇವೆ. ಹಾಗೆಯೇ ಅವರನ್ನು ಭಾರತಕ್ಕೆ ಕರೆಸಿ ಚುನಾವಣೆಯಲ್ಲಿ ನಿಲ್ಲಿಸಿ ಗೆಲ್ಲಿಸಿ ಅಮೆರಿಕನ್ನರ ವಿರುದ್ಧ ಸೇಡು ತೀರಿಸಲಿದ್ದೇವೆ.... ಇದಕ್ಕೆ ಬೇಕಾದ ಎಲ್ಲ ಇವಿಎಂ ಮಶಿನ್‌ಗಳನ್ನು ಈಗಾಗಲೇ ಸಿದ್ಧ ಪಡಿಸಲು ಆದೇಶ ನೀಡಲಾಗಿದೆ...’’

‘‘ಗೆದ್ದರೆ ಡೊಲಾಂಡ್‌ರನ್ನು ನಿಮ್ಮ ಸಂಪುಟದಲ್ಲಿ ಸೇರಿಸುವ ಉದ್ದೇಶವಿದೆಯೇ?’’
‘‘ಹೌದು...ಭವಿಷ್ಯದ ಅರ್ಥ ಸಚಿವರನ್ನಾಗಿ ಅವರನ್ನೇ ನೇಮಕ ಮಾಡಲಿದ್ದೇವೆ...’’ ಚೌಕೀದಾರರು ಹೇಳಿದರು.
ಕಾಸಿ ದೇಶದ ಭವಿಷ್ಯ ಅರ್ಥವಾದವನಂತೆ ‘‘ಜೈ ಚೌಕೀದಾರ್’’ ಎನ್ನುತ್ತಾ ಅಲ್ಲಿಂದ ಲಾರಿ ಹತ್ತಿ ಬೆಂಗಳೂರು ಸೇರಿದ.

chelayya@gmail.com

Writer - ಚೇಳಯ್ಯ

contributor

Editor - ಚೇಳಯ್ಯ

contributor

Similar News