ಚೀರ್ನಾಬ್ ಜಾಮೀನಿಗೆ 12 ಕಾರಣಗಳು!
ಚೀರ್ನಾಬ್ ಬೂಸಾಮಿಗೆ ನ್ಯಾಯಾಲಯ ತುರ್ತಾಗಿ ಜಾಮೀನು ನೀಡಲು ಕಾರಣವೇನು? ಪತ್ರಕರ್ತ ಎಂಜಲು ಕಾಸಿ ಭೀಕರ ಸಂಶೋಧನೆಯೊಂದನ್ನು ನಡೆಸಿ, ಒಂದು ಸಂಶೋಧನಾ ವರದಿಯನ್ನು ತಮ್ಮ ಸಂಪಾದಕರ ಮುಂದಿಟ್ಟ. ಅವನು ಕಂಡು ಹಿಡಿದ ಕಾರಣಗಳು ಕೆಳಗಿನಂತಿವೆೆ.
1. ಅವನಿಂದಾಗಿ ಜೈಲಿನಲ್ಲಿರುವ ಇತರೆಲ್ಲ ಅಪರಾಧಿಗಳು ಕೆಟ್ಟು ಹೋಗುವ ಅಪಾಯವಿತ್ತು. ಆದುದರಿಂದ, ಜೈಲಿನ ಸದ್‌ವಾತಾವರಣ ಉಳಿಸಿಕೊಳ್ಳುವುದು ಅತ್ಯಗತ್ಯವಾಗಿತ್ತು.
2. ‘ಮುಜೇ ಡ್ರಗ್ಸ್ ದೇ...ಮುಜೇ ಡ್ರಗ್ಸ್ ದೇ’ ಎಂಬ ಅವನ ಅರಚಾಟಗಳನ್ನು ಕೇಳಿ ಅಭ್ಯಾಸವಾಗಿದ್ದ ಒಂದಿಷ್ಟು ವೀಕ್ಷಕರು ಆತನ ಟಿವಿ ಚಾನೆಲ್ ಬಂದಾಗಿರುವುದರಿಂದ ಏಕಾಏಕಿ ಡ್ರಗ್ಸ್‌ನಿಂದ ವಂಚಿತರಾದವರಂತೆ ಆಡತೊಡಗಿದರು. ಆತನ ಬೊಬ್ಬೆ ಕೇಳಿ ಕೇಳಿ ಅಭ್ಯಾಸವಾಗಿದ್ದ ಜನರು, ದೇಶಾದ್ಯಂತ ಕವಿದಿರುವ ವೌನದಿಂದ ತೀವ್ರ ಆತಂಕಿತರಾಗಿ ಖಿನ್ನತೆಗೆ ಒಳಗಾಗಿದ್ದರು. ಆದುದರಿಂದ ಆತನನ್ನು ಬಿಡುಗಡೆಗೊಳಿಸಲಾಯಿತು.
3. ಜೈಲಿನಲ್ಲಿ ಆತನ ಅರಚಾಟಗಳಿಂದ ಹಲವು ಪೊಲೀಸರ ಕಿವಿಯಲ್ಲಿ ರಕ್ತ ಸೋರತೊಡಗಿರುವುದರಿಂದ, ಕೈದಿಗಳು ತೀವ್ರ ಅಸ್ವಸ್ಥರಾದುದರಿಂದ ಪೊಲೀಸ್ ಸಿಬ್ಬಂದಿಯ ಹಿತರಕ್ಷಣೆಗಾಗಿ ಆತನನ್ನು ಬಿಡುಗಡೆಗೊಳಿಸುವುದು ಅನಿವಾರ್ಯವಾಯಿತು.
4. ನನಗೆ ಹೊಡೆದರು, ನನಗೆ ಹೊಡೆದರು....ಎಂದು ಕಂಡ ಕಂಡ ಕೈದಿಗಳ ಮುಂದೆಲ್ಲ ಗೋಗರೆಯುತ್ತಿದ್ದುದರಿಂದ, ಎಲ್ಲ ಕೈದಿಗಳು ಸೇರಿ ಪೊಲೀಸರಿಗೆ ಒತ್ತಡ ಹಾಕಿದ್ದುದರಿಂದ ಪೊಲೀಸರು ಕರುಣೆ ತೋರಿಸಿದರು.
5. ದೇಶಾದ್ಯಂತ ಇರುವ ವಿವಿಧ ಡ್ರಗ್ಸ್ ಏಜೆಂಟರ್‌ಗಳೆಲ್ಲ ಒಟ್ಟು ಸೇರಿ ಸರಕಾರಕ್ಕೆ ಒತ್ತಡ ಹಾಕಿರುವುದು ಪರಿಣಾಮ ಬೀರಿತು. ಚೀರ್ನಾಬ್ ಇಲ್ಲದೆ ದೇಶದಲ್ಲಿ ಡ್ರಗ್ಸ್ ಮಾರಾಟ ತೀವ್ರ ಇಳಿಕೆಯಾಗಿರುವುದರಿಂದ ದೇಶದ ಆರ್ಥಿಕತೆಯ ಮೇಲೆ ದುಷ್ಪರಿಣಾಮ ಬೀರಿತು. ದೇಶದ ಡ್ರಗ್ಸ್ ಜಿಡಿಪಿ ಏರಿಸುವುದಕ್ಕಾಗಿಯೇ ಆತನನ್ನು ಅವಸರವಸರವಾಗಿ ಬಿಡುಗಡೆಗೊಳಿಸಲಾಯಿತು.
6. ದೀಪಾವಳಿ ಹತ್ತಿರ ಬರುತ್ತಿದೆ. ಪಟಾಕಿಯನ್ನು ನಿಷೇಧಿಸಲಾಗಿದೆ. ದೇಶಾದ್ಯಂತ ಪಟಾಕಿಯ ಕೊರತೆಯನ್ನು ತುಂಬಲು ರಿ-ಪಬ್-ಲಿಕ್ ಪಟಾಕಿ ಅಂಗಡಿಯನ್ನು ತೆರೆಯುವುದು ಅತ್ಯಗತ್ಯವಾಗಿತ್ತು. ಇಲ್ಲವಾದರೆ ಸದ್ದುಗಳ ಕೊರತೆಯಿಂದ ಜನರು ಹಬ್ಬಗಳನ್ನು ಆಚರಿಸದಂತಹ ಸ್ಥಿತಿ ನಿರ್ಮಾಣವಾಗುತ್ತಿತ್ತು. ದೀಪಾವಳಿಯನ್ನು ಯಶಸ್ವಿಗೊಳಿಸಲು ಚೀರ್ನಾಬ್‌ರನ್ನು ಬಿಡುಗಡೆಗೊಳಿಸ ಬೇಕಾಯಿತು.
7. ಇನ್ನೊಬ್ಬರಿಗೆ ಹಣ ಕೊಡಲು ಬಾಕಿ ಇದ್ದರೆ ಅದಕ್ಕಾಗಿ ಆತ್ಮಹತ್ಯೆ ಮಾಡಿಕೊಳ್ಳುವುದು ಅಪರಾಧ. ಈಗಾಗಲೇ ಮಲ್ಯ, ನೀರವ್ ಮೋದಿ ಮೊದಲಾದವರು ಬ್ಯಾಂಕ್‌ಗಳಿಗೆ ಕೋಟಿಗಟ್ಟಲೆ ಬಾಕಿ ಇಟ್ಟಿದ್ದಾರೆ. ಆದರೆ ಮಲ್ಯ, ಮೋದಿಯಾದಿಗಳು ಈವರೆಗೆ ಆತ್ಮಹತ್ಯೆ ಮಾಡಿಕೊಂಡಿಲ್ಲ. ಸಾಲ ಪಡೆದುಕೊಂಡವರು ಹಣ ಕೊಡಲಿಲ್ಲ ಎಂದು ಯಾವುದೇ ಬ್ಯಾಂಕ್ ಮ್ಯಾನೇಜರ್‌ಗಳು ಆತ್ಮಹತ್ಯೆ ಮಾಡಿಕೊಂಡಿಲ್ಲ. ಹೀಗಿರುವಾಗ, ಚೀರ್ನಾಬ್ ಹಣ ಕೊಟ್ಟಿಲ್ಲ ಎಂದು ಆತ್ಮಹತ್ಯೆ ಮಾಡಿಕೊಂಡರೆ ಚೀರ್ನಾಬ್ ಅವರದು ತಪ್ಪಲ್ಲ. ಆತ್ಮಹತ್ಯೆ ಕಾನೂನು ಪ್ರಕಾರ ಅಪರಾಧವಾಗಿರುವುದರಿಂದ, ಆತ್ಮಹತ್ಯೆಗೈದವರ ಕುಟುಂಬವನ್ನು ಜೈಲಿಗೆ ತಳ್ಳಿ, ಚೀರ್ನಾಬ್‌ನ್ನು ಬಿಡುಗಡೆಗೊಳಿಸಲು ತೀರ್ಮಾನ ಮಾಡಲಾಯಿತು. ಇದೇ ಸಂದರ್ಭದಲ್ಲಿ ಇನ್ನೊಬ್ಬರಿಗೆ ಹಣ ಕೊಡಲು ಬಾಕಿ ಇದ್ದರೂ, ಅದಕ್ಕಾಗಿ ಪಶ್ಚಾತ್ತಾಪ ಪಟ್ಟು, ಅವಮಾನದಿಂದ ಈವರೆಗೆ ಆತ್ಮಹತ್ಯೆ ಮಾಡಿಕೊಳ್ಳದ ಚೀರ್ನಾಬ್‌ಗೆ ‘ಶೌರ್ಯ ಪ್ರಶಸ್ತಿ’ ನೀಡಬೇಕಾಗಿದೆ. ವಂಚನೆಯೂ ಮೋದಿ ಅರ್ಥಶಾಸ್ತ್ರದ ಭಾಗವಾಗಿರುವುದರಿಂದ ಚೀರ್ನಾಬ್ ಅವರನ್ನು ಶಿಕ್ಷಿಸುವುದು ತಪ್ಪು.
8. ದೇಶಾದ್ಯಂತ ಆರ್ಥಿಕ ಕುಸಿತ ಹೆಚ್ಚಿರುವುದರಿಂದ, ಲಾಕ್‌ಡೌನ್ ಕಾರಣದಿಂದಲೇ ಚೀರ್ನಾಬ್ ಅವರಿಗೆ ಸಾಲ ಮರುಪಾವತಿ ಮಾಡಲು ಸಾಧ್ಯವಾಗಲಿಲ್ಲ. ಅವರು ಲಾಕ್‌ಡೌನ್ ಸಂತ್ರಸ್ತರು. ಆದುದರಿಂದ ಕೊರೋನ ಸಂತ್ರಸ್ತ ನಿಧಿಯಿಂದ ಹಣವನ್ನು ಚೀರ್ನಾಬ್ ಅವರಿಗೆ ನೀಡಬೇಕು. ಚೀರ್ನಾಬ್ ಸ್ಥಿತಿಗೆ ಕೊರೋನ ಮತ್ತು ಸರಕಾರ ಕಾರಣವಾಗಿರುವುದರಿಂದ ಅವರನ್ನು ಜೈಲಿಗೆ ತಳ್ಳಿರುವುದು ಅನ್ಯಾಯ. 9. ಇನ್ನೊಬ್ಬರಿಗೆ ವಂಚಿಸುವುದು, ಟಿಆರ್‌ಪಿ ವಂಚನೆ, ಇನ್ನೊಬ್ಬರನ್ನು ಅವಮಾನಿಸುವುದು ಪತ್ರಕರ್ತರ ಮೂಲಭೂತ ಹಕ್ಕಾಗಿರುವುದರಿಂದ ಅಭಿವ್ಯಕ್ತಿ ಸ್ವಾತಂತ್ರದ ದಮನವಾಗಬಾರದು ಎಂಬ ಕಾಳಜಿಯಿಂದ ಚೀರ್ನಾಬ್ ಅವರನ್ನು ಬಿಡುಗಡೆ ಮಾಡುವುದು ಅನಿವಾರ್ಯವಾಯಿತು. ಭವಿಷ್ಯದಲ್ಲಿ ಇವರನ್ನೇ ಆರ್ಥಿಕ ಸಚಿವರನ್ನಾಗಿಸಿ ವಿಶ್ವ ಬ್ಯಾಂಕ್‌ಗೆ ಹೇಗೆ ವಂಚಿಸಬೇಕು ಮತ್ತು ಆ ಬಳಿಕ ಹೇಗೆ ಚೀರಾಡಬೇಕು ಎನ್ನುವುದರ ಕುರಿತಂತೆ ಯೋಜನೆಗಳನ್ನು ರೂಪಿಸುವುದಕ್ಕೋಸ್ಕರ ಬಿಡುಗಡೆ ಮಾಡಲಾಯಿತು. 10. ಜೈಲಿನಲ್ಲಿರುವ ಕಳ್ಳರೆಲ್ಲ ಚೀರ್ನಾಬ್‌ನ್ನು ತಮ್ಮ ಜೊತೆಗೆ ಇರಿಸಿದ್ದಕ್ಕೆ ಅವಮಾನಿತರಾಗಿ ಸಾಮೂಹಿಕ ಆತ್ಮಹತ್ಯೆಯ ಬೆದರಿಕೆ ಒಡ್ಡಿದ್ದರಿಂದ, ಕಳ್ಳರ ಘನತೆ, ಆತ್ಮಾಭಿಮಾನವನ್ನು ಕಾಪಾಡಲು ಚೀರ್ನಾಬ್‌ನ್ನು ಬಿಡುಗಡೆ ಮಾಡಲಾಯಿತು.
11. ಶಿವಸೇನೆಯ ಭಾರೀ ಸಂಖ್ಯೆಯ ಕಾರ್ಯಕರ್ತರು ಈಗಾಗಲೇ ವಿವಿಧ ಪ್ರಕರಣಗಳಲ್ಲಿ ಜೈಲಲ್ಲಿರುವುದರಿಂದ, ಚೀರ್ನಾಬ್ ಅವರ ಜೀವಕ್ಕೆ ಅವರಿಂದ ಅಪಾಯವಿದೆ. ಆದುದರಿಂದ ಚೀರ್ನಾಬ್ ಜೀವವನ್ನು ರಕ್ಷಿಸಲು ಅನಿವಾರ್ಯವಾಗಿ ಅವರಿಗೆ ಜಾಮೀನು ಕೊಡಬೇಕಾಯಿತು.
12. ಈಗಾಗಲೇ ದೇಶಾದ್ಯಂತ ಮಾನವ ಹಕ್ಕು ಹೋರಾಟಗಾರರು ಮತ್ತು ಪತ್ರಕರ್ತರಿಂದ ಜೈಲು ತುಂಬಿ ಹೋಗಿದೆ. ನಿಜವಾದ ಪತ್ರಕರ್ತರನ್ನಷ್ಟೇ ಜೈಲಿಗೆ ಹಾಕುವ ಅವಕಾಶವಿದೆ. ಆದರೆ ಚೀರ್ನಾಬ್‌ರನ್ನು ಯಾವ ದಿಕ್ಕಿನಿಂದ ನೋಡಿದರೂ ಪತ್ರಕರ್ತರಂತೆ ಕಾಣದೇ ಇರುವುದರಿಂದ ಅವರನ್ನು ಜೈಲಿಗೆ ಹಾಕುವುದರಿಂದ ಜೈಲಿನ ಊಟ ವ್ಯರ್ಥವಾಗುತ್ತದೆ ಎಂದು ಬಿಡುಗಡೆ ಮಾಡಲಾಯಿತು. ಹೀಗೆ ನೂರಾರು ಕಾರಣಗಳು ಇದ್ದುದರಿಂದ ಚೀರ್ನಾಬ್ ಅವರಿಗೆ ಜಾಮೀನು ನೀಡುವುದು ಸುಪ್ರೀಂಕೋರ್ಟ್‌ಗೆ ಅನಿವಾರ್ಯವಾಯಿತು ಎಂಬಲ್ಲಿಗೆ ಪತ್ರಕರ್ತ ಎಂಜಲು ಕಾಸಿಯ ಸಂಶೋಧನಾ ವರದಿ ಮುಗಿಯಿತು.