ಗಾಂಧಿ ಸ್ಮಾರಕ ನಿಧಿಯ ಪ್ರಕಟನೆ- ‘ಸ್ವಚ್ಛ ಭಾರತಿ’ ಒಂದು ವಿಶ್ಲೇಷಣೆ

Update: 2020-11-15 05:05 GMT

ಕುಂದಾಪುರ ಸಮೀಪದ ಕೋಟ ವಿವೇಕ ಪದವಿ ಪೂರ್ವ ಕಾಲೇಜಿನ ನಿವೃತ್ತ ಉಪನ್ಯಾಸಕಿ ಕೆ. ವನಜಾಕ್ಷಿ ಅವರು ಇತ್ತೀಚೆಗೆ ಬರೆದ ಕಿರು ಕಾದಂಬರಿ ಸ್ವಚ್ಛ ಭಾರತಿ ತನ್ನ ಶೀರ್ಷಿಕೆ ಸಹಿತ ಕಥಾವಸ್ತುವಿನಿಂದಲೇ ಮನಸೆಳೆಯುವಂತಿದೆ. ವೈದ್ಯೆ ಡಾಕ್ಟರ್ ರಮಾ ಹಾಗೂ ಅವಳ ಸ್ನೇಹಿತೆ ಶಿಕ್ಷಕಿಯಾಗಿರುವ ಭಾರತಿ ಇವರಿಬ್ಬರೂ ಕೆಂಚಾರು ಗ್ರಾಮದಲ್ಲಿ ಗಾಂಧೀಜಿ ಪ್ರಣೀತ ಸ್ವಚ್ಛಭಾರತ ಪರಿಕಲ್ಪನೆಯನ್ನು ಕಾರ್ಯರೂಪಕ್ಕೆ ತಂದು ಜನರಲ್ಲಿ ಆ ಕುರಿತು ಜಾಗೃತಿ ಮೂಡಿಸಿದ ಕಾರಣ ಅವರಿಬ್ಬರೂ ಸರಕಾರ ನೀಡುವ ಸ್ವಚ್ಛ ಪರಿಸರ ಪ್ರಶಸ್ತಿಗೆ ಭಾಜನರಾಗುತ್ತಾರೆ. ಆನಂತರ ಕತೆ ಸಾಗುವುದು ಕೆಂಚಾರು ಗ್ರಾಮದ ರಸ್ತೆಯಲ್ಲಿ ಅಲ್ಲಿ ಇಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿದ್ದ ಗಂಡಸರ ಮೇಲೆ ಪಿಚಕಾರಿಯಿಂದ ಬಣ್ಣದ ನೀರೆರಚಿ ಓಡುವ ಮಾನಸಿಕ ಅಸ್ವಸ್ಥೆಯೊಬ್ಬಳ ಚಿತ್ರಣದ ಮೂಲಕ. ನಂತರ ವಿಚಾರಿಸಿದಾಗ ಆಕೆ ಕೆಂಚಾರಿನ ಸದ್ಗಹಸ್ಥ ಗೋಪಾಲ ಪ್ರಭುಗಳ ಪತ್ನಿ ಭಾರತಿ ಎಂದೂ ಕಾರಣಾಂತರಗಳಿಂದ ಆಕೆ ಮಾನಸಿಕ ಅಸ್ವಸ್ಥೆಯಾಗಿದ್ದಾಳೆಂದು ತಿಳಿದು ಬರುತ್ತದೆ.

 1955ರಲ್ಲಿ ಕಣ್ವಪುರದ ಸಂತೆ ಮಾರುಕಟ್ಟೆಯಲ್ಲಿ ಸಿಕ್ಕ ಹೆಣ್ಣು ಶಿಶುವನ್ನು ಪೊಲೀಸರು ಚಿಕಿತ್ಸೆ ಕೊಡಿಸಿ ಅಲ್ಲಿನ ಬಾಲಮಂದಿರಕ್ಕೆ ಸೇರಿಸುತ್ತಾರೆ. ಐದಾರು ವರ್ಷಗಳ ನಂತರ ಅಲ್ಲಿಂದ ರಾಜ್ಯ ಮಹಿಳಾ ನಿಲಯಕ್ಕೆ ವರ್ಗಾಯಿಸಲ್ಪಟ್ಟ ಈ ಬಾಲಕಿ ಶಾಲಾ ಶಿಕ್ಷಣ ಪಡೆದು ಮುಂದೆ ಹೈಸ್ಕೂಲಿಗೂ ಸೇರ್ಪಡೆಯಾಗುತ್ತಾಳೆ. ಅಲ್ಲಿ ಅವಳಿಗೆ ಚಂದ್ರ ಮಾಸ್ತರರ ಮಗಳು ರಮಾ ಸ್ನೇಹಿತೆಯಾಗುತ್ತಾಳೆ. ಮುಂದೆ ಇಬ್ಬರೂ ಪಿಯುಸಿ ಮುಗಿಸುವ ಸಂದರ್ಭದಲ್ಲಿ ರಮಾ ತಂದೆಗೆ ಮೈಸೂರಿಗೆ ವರ್ಗವಾದ ಕಾರಣ ರಮಾ ಮೈಸೂರಿಗೆ ಹೋಗುತ್ತಾಳೆ. ರಮಾ ಪಿಯುಸಿಯಲ್ಲಿ ರ್ಯಾಂಕ್ ಗಳಿಸಿ ವೈದ್ಯಕೀಯ ಕಾಲೇಜಿಗೆ ಸೇರ್ಪಡೆಗೊಂಡು ವೈದ್ಯೆಯಾದರೆ ಭಾರತಿ ಸ್ವಲ್ಪವೇ ಕಡಿಮೆ ಅಂಕ ಗಳಿಸಿದ ಕಾರಣ ವೈದ್ಯೆಯಾಗುವ ಕನಸು ಬಿಟ್ಟು ಶಿಕ್ಷಕಿಯಾಗುತ್ತಾಳೆ. ಕುಗ್ರಾಮವಾದ ಕೆಂಚಾರಿನ ಏಕೋಪಾಧ್ಯಾಯ ಶಾಲೆಗೆ ಅವಳು ನೇಮಕಗೊಂಡು ಬಂದಾಗ ಅವಳಿಗೆ ಅನೇಕ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಶಾಲೆಗೆ ಬೇಕಾದ ಪರಿಕರಗಳು ಹಾಗೂ ವಿದ್ಯಾರ್ಥಿಗಳು ಇಲ್ಲದಿರುವುದು ಒಂದು ಸವಾಲಾದರೆ ಅಲ್ಲಿನ ಪರಿಸರವನ್ನು ಸ್ವಚ್ಛವಾಗಿರಿಸಿಕೊಳ್ಳುವುದು ಇನ್ನೊಂದು ಕಷ್ಟಕರವಾದ ಸವಾಲು.

  ಭಾರತಿ ಎಲ್ಲವನ್ನೂ ನಿಭಾಯಿಸಿ ಮಕ್ಕಳಿಗೆ ಶ್ರದ್ಧೆಯಿಂದ ಪಾಠ ಕಲಿಸಿ ಊರಿನ ಮುಖಂಡರಾದ ಸ್ವಾತಂತ್ರ್ಯಯೋಧ ಹಿರಿಯ ವ್ಯಕ್ತಿ ದಾಮೋದರ ಪ್ರಭುಗಳ ಕುಟುಂಬದವರ ವಿಶ್ವಾಸ ಗಳಿಸುತ್ತಾಳೆ. ಭಾರತಿಯ ಎಲ್ಲಾ ಕೆಲಸಗಳಿಗೆ ಸಹಕಾರ ನೀಡುತ್ತಿದ್ದವಳು ದಾಮೋದರ ಪ್ರಭುಗಳ ತಮ್ಮ್ಮ ಮುಕುಂದ ಪ್ರಭುಗಳ ವಿಧವೆ ಮಗಳು ಹೆಚ್ಚುಕಡಿಮೆ ಭಾರತಿಯ ವಯಸ್ಸಿನವಳೇ ಆದ ವಿಮಲಾ. ಮುಂದೆ ಭಾರತಿಯ ಕುರಿತು ಮೆಚ್ಚುಗೆ ತಾಳಿದ ವಿಮಲೆಯ ತಮ್ಮ ಗೋಪಾಲ ಭಾರತಿಯನ್ನು ವರಿಸುತ್ತಾನೆ. ಸ್ವಂತ ಉದ್ದಿಮೆ ಹೊಂದಿದ ಗೋಪಾಲ ಯಕ್ಷಗಾನ ಭಾಗವತಿಕೆ ಮುಂತಾದ ಇನ್ನೂ ಕೆಲ ಉತ್ತಮ ಹವ್ಯಾಸಗಳನ್ನು ಹೊಂದಿದ್ದು, ಜೊತೆಗೆ ಹೆಂಡತಿ ಭಾರತಿ ಖಾಸಗಿಯಾಗಿ ಪದವಿ ಶಿಕ್ಷಣ ಮುಗಿಸಲು ತನ್ನಿಂದಾದ ನೆರವು ನೀಡಿ ಆಕೆ ಪದವೀಧರೆ ಆಗುವಂತೆ ಮಾಡುತ್ತಾನೆ. ನಂತರ ಕೆಂಚಾರು ಶಾಲೆಯ ಮುಖ್ಯಶಿಕ್ಷಕಿಯಾಗಿ ಒಳ್ಳೆಯ ಹೆಸರು ಗಳಿಸಿದ ಭಾರತಿಗೆ ರಾಜ್ಯ ಶಿಕ್ಷಕ ಪ್ರಶಸ್ತಿ ಸಿಗುತ್ತದೆ. ಇದಕ್ಕೂ ಮುನ್ನ ತಲೆಯ ಮೇಲೆ ಸ್ವಂತದ್ದೊಂದು ಸೂರು ಕಟ್ಟಿಕೊಂಡದ್ದಲ್ಲದೆ ಒಂದು ಪುಟ್ಟ ಹೆಣ್ಣು ಮಗುವಿನ ತಾಯಿಯೂ ಆದ ಧನ್ಯತೆ ಅವಳದ್ದಾಗಿರುತ್ತದೆ. ಮುಂದೆ ಅದೇ ಹೆಣ್ಣು ಮಗು ನಿರ್ಮಲೆ ಖ್ಯಾತ ದಂತ ವೈದ್ಯೆಯಾಗಿ ಹೆಸರು ಗಳಿಸುತ್ತಾಳೆ. ಮುಂದಿನದು ದುರಂತ. ಒಂದು ದಿನ ನಿರ್ಮಲೆ ಕಣ್ವಪುರದ ತನ್ನ ಕ್ಲಿನಿಕ್‌ನಿಂದ ಮನೆಗೆ ಬರುವಾಗ ದಾರಿಯಲ್ಲಿ ಮೂತ್ರಶಂಕೆ ತಡೆಯಲಾರದೆ ದಾರಿಮಧ್ಯದ ಮಹಿಷಮರ್ದಿನಿ ದೇವಾಲಯದ ಹಿಂಬದಿಯಲ್ಲಿ ಮೂತ್ರಶಂಕೆ ತೀರಿಸಿಕೊಳ್ಳಲು ಹೋದಾಗ ನಿರ್ಜನವಾಗಿದ್ದ ಅಲ್ಲಿ ಯಾರದೋ ಪಿಸುಮಾತುಗಳ ಸಂಭಾಷಣೆ ಕೇಳಿಸುತ್ತದೆ. ಸಂಜೆಗತ್ತಲು ಆವರಿಸಿದ್ದರಿಂದ ನಿಂತವರು ಯಾರೆಂದು ಆಕೆಗೆ ತಿಳಿಯುವುದಿಲ್ಲ. ಕತ್ತಲಾವರಿಸಿದ ನಿರ್ಜನ ಪ್ರದೇಶದಲ್ಲಿ ಯಾರದೋ ಧ್ವನಿ ಕೇಳಿಸಿಕೊಂಡ ಆಕೆಗೆ ತಾನಿನ್ನು ಭಯಪಡಬೇಕಾಗಿಲ್ಲ, ಇಲ್ಲಿ ಯಾರೋ ಇದ್ದಾರೆಂದೆನಿಸುತ್ತಿರುವ ಸಂದರ್ಭದಲ್ಲಿಯೇ ಆಕೆಯ ಮೇಲೆ ಅತ್ಯಾಚಾರವೆಸಗಿ ಕೊಲೆಯಾಗುತ್ತದೆ. ಮಗಳ ಅತ್ಯಾಚಾರವಾಗಿ ಕೊಲೆಯಾಗಿದ್ದನ್ನು ಕೇಳಿ ಆಘಾತಗೊಂಡ ಭಾರತಿ ದುಃಖ ತಾಳಲಾರದೆ ತೀವ್ರ ಮಾನಸಿಕ ಅಸ್ವಸ್ಥೆಯಾಗಿ ಯಥಾಸ್ಥಿತಿಗೆ ಬರಲಾರದ ಸ್ಥಿತಿಗೆ ತಲುಪುತ್ತಾಳೆ. ಆದರೆ ಪತಿ ಗೋಪಾಲ ಮತ್ತು ಗೆಳತಿ ರಮಾಳ ಸಹಾಯದಿಂದ ಸೂಕ್ತ ಚಿಕಿತ್ಸೆಗೊಳಗಾದ ಮೇಲೆ ಗುಣಮುಖಳಾಗುತ್ತಾಳೆ. ಸ್ನೇಹಿತೆ ರಮಾ ಮೈಸೂರಿನ ಹೊರವಲಯದಲ್ಲಿ ‘ಮಹಾತ್ಮಾಗಾಂಧಿ ಸ್ಮಾರಕ ಸೇವಾಶ್ರಮ’ ಎಂಬ ಸಂಸ್ಥೆಯನ್ನು ಸ್ಥಾಪಿಸಿ ಅದರ ಹೊಣೆಗಾರಿಕೆಯನ್ನು ಭಾರತಿಗೆ ವಹಿಸಿ ಕೊಡುತ್ತಾಳೆ. ಆ ಸಂಸ್ಥೆಯ ಮೂಲಕ ಸ್ವಚ್ಛ ಭಾರತ ಹೆಸರಿನಲ್ಲಿ ಸ್ವಚ್ಛತಾ ಕಾರ್ಯಕ್ರಮಗಳ ಸಹಿತ ಮಹಿಳೆಯರನ್ನು ಆರ್ಥಿಕ ಸ್ವಾವಲಂಬಿಯನ್ನಾಗಿ ಮಾಡುವಂತಹ ಸಣ್ಣಪುಟ್ಟ ಉದ್ದಿಮೆಗಳನ್ನು ಸ್ಥಾಪಿಸಿ ಸಬರಮತಿ ಆಶ್ರಮದ ಮಾದರಿಯಲ್ಲಿ ಮಹಿಳೆಯರ ಆತ್ಮಬಲ ಹೆಚ್ಚಿಸುವ ವಿದ್ಯಾಭ್ಯಾಸ ನೀಡುವುದು ಇತ್ಯಾದಿ ಸಹಿತ ಮಹಿಳಾ ಸಶಕ್ತೀಕರಣಕ್ಕೆ ಹೆಚ್ಚಿನ ಒತ್ತು ನೀಡುವಂತಹ ಅನೇಕ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲಾಗುತ್ತದೆ. ಇವರ ಈ ಸಂಸ್ಥೆಯ ಇಂತಹ ಮಹಿಳಾಪರ ಕಾರ್ಯಕ್ರಮಗಳಿಂದ ಇವರ ಕೀರ್ತಿ ಎಲ್ಲೆಡೆ ಹಬ್ಬಿ ಪ್ರಶಸ್ತಿಗಳ ಕಿರೀಟ ಇವರ ಮುಡಿಗೇರುತ್ತದೆ. ಇಲ್ಲಿಗೆ ಕತೆ ಮುಕ್ತಾಯವಾಗುತ್ತದೆ. ಭಾರತಿಯ ವ್ಯಕ್ತಿತ್ವದ ಮೂಲಕ ಲೇಖಕಿ ಶಿಕ್ಷಕ ಸಮುದಾಯದ ಘನತೆಯನ್ನು ಹೆಚ್ಚಿಸಿದ್ದಲ್ಲದೆ ಮನುಷ್ಯ ಸತ್ಪ್ರಜೆ ಎನಿಸಿಕೊಳ್ಳಲು ಆತನ ಹುಟ್ಟು ನಿರ್ಣಾಯಕ ಅಂಶವಲ್ಲ ಎಂಬುದನ್ನೂ ತೋರಿಸಿಕೊಟ್ಟಿದ್ದಾರೆ. ಕೃತಿಯ ಪೂರ್ತಿ ಗಾಂಧೀಜಿಯ ಚಿಂತನೆಗಳನ್ನು ನಿರೂಪಿಸುತ್ತಾ ಇದು ಎಲ್ಲರೂ ಓದಬೇಕಾದ ಕೃತಿಯೆಂದು ಲೇಖಕಿ ಸಾಬೀತುಪಡಿಸಿದ್ದಾರೆ. ಕೃತಿಯ ಕೊನೆಯ ಪುಟಗಳಲ್ಲಿ ಗಾಂಧೀಜಿಯ ಜೀವನದ ಪ್ರಮುಖ ಕಾಲಘಟ್ಟಗಳನ್ನು ನಿರೂಪಿಸಲಾಗಿದ್ದು, ಇದೊಂದು ಮಹತ್ವದ ಕೃತಿಯಾಗಿದೆ ಎನ್ನಲಡ್ಡಿಯಿಲ್ಲ. ಇದನ್ನು ಬೆಂಗಳೂರಿನ ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಇವರು ಪ್ರಕಟಿಸಿದ್ದು ಇದರ ಅಧ್ಯಕ್ಷ ಡಾ. ವೂಡೆ ಸಿ. ಕೃಷ್ಣ ಮತ್ತು ಗೌ. ಕಾರ್ಯದರ್ಶಿ ಇಂದಿರಾ ಕೃಷ್ಣಪ್ಪ ಕೃತಿಯ ಕುರಿತು ಸದಾಶಯದ ನುಡಿಗಳನ್ನಾಡಿ ಕೃತಿಯ ಮಹತ್ವವನ್ನು ಹೆಚ್ಚಿಸಿದ್ದಾರೆನ್ನಬಹುದು.

Writer - ಕೆ. ಶಾರದಾ ಭಟ್, ಉಡುಪಿ

contributor

Editor - ಕೆ. ಶಾರದಾ ಭಟ್, ಉಡುಪಿ

contributor

Similar News