ರೋಷನ್ ಬೇಗ್ ಪ್ರಕರಣ: ರಾಜಕಾರಣಿಗಳಿಗೆ ಪಾಠವಾಗಬಲ್ಲದೇ?
ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರಕಾರವಿದೆ. ಹಿಂದುತ್ವ ಮುನ್ನೆಲೆಗೆ ಬಂದಿದೆ. ಮುಸ್ಲಿಮರನ್ನು ದೇಶದ್ರೋಹಿಗಳಂತೆ ನೋಡಲಾಗುತ್ತಿದೆ. ಮಾಧ್ಯಮಗಳು ಮಾರಾಟವಾಗಿವೆ. ಇಂತಹ ದುರಿತ ಕಾಲದಲ್ಲಿ ಮುಸ್ಲಿಂ ಸಮುದಾಯಕ್ಕೆ ಸೇರಿದ ರೋಷನ್ ಬೇಗ್ ಮೈ ಎಲ್ಲ ಕಣ್ಣಾಗಿರಬೇಕಿತ್ತು. ಬದಲಿಗೆ ನಕಲಿ ಛಾಪಾಕಾಗದ ಹಗರಣ, ಅಮಾನತ್ ಕೋ-ಆಪರೇಟಿವ್ ಬ್ಯಾಂಕ್ ದಿವಾಳಿ ಪ್ರಕರಣ, ವಕ್ಫ್ ಆಸ್ತಿ ಅವ್ಯವಹಾರಗಳನ್ನೇ ಮುಚ್ಚಿ ಮಣ್ಣು ಮಾಡಿದ್ದೇನೆ, ಇನ್ನು ಐಎಂಎ ಏನು ಮಹಾ ಎಂಬ ಉಡಾಫೆಯಲ್ಲಿ ಓಲಾಡಿದರು. ಆದರೆ ಕತ್ತಿ ಹಿಡಿದವನು ಕತ್ತಿಯಿಂದಲೇ ಕೊನೆಯಾಗುತ್ತಾನೆನ್ನುವ ಮಾತಿನಂತೆ, ಹಗರಣಗಳ ಆರೋಪ ಹೊತ್ತ ವೀರ ಬೇಗ್ ಕೂಡ ಹಗರಣದ ಮೂಲಕವೇ ಇಂದು ಕಂಬಿ ಹಿಂದೆ ಕೂತಿದ್ದಾರೆ. ಒಬ್ಬಂಟಿಯಾಗಿದ್ದಾರೆ.
ನಾಲ್ಕು ದಶಕಗಳ ರಾಜಕಾರಣದಲ್ಲಿ ಏಳು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ; ಗೃಹ ಖಾತೆಯೂ ಸೇರಿದಂತೆ ಹತ್ತಾರು ಸಚಿವ ಸ್ಥಾನಗಳನ್ನು ಅಲಂಕರಿಸಿ ಗೌರವಾನ್ವಿತ ವ್ಯಕ್ತಿಗಳ ಸಾಲಿಗೆ ಸೇರಿದ್ದ; ಮುಸ್ಲಿಂ ಸಮುದಾಯದ ಪ್ರಭಾವಿ ನಾಯಕರಾಗಿದ್ದ 67 ವರ್ಷಗಳ ವಯಸ್ಸಿನ ಹಿರಿಯ ರಾಜಕಾರಣಿ ರೋಷನ್ ಬೇಗ್, ಇಂದು ಜೈಲಿನಲ್ಲಿದ್ದಾರೆ. ಐ ಮಾನಿಟರಿ ಅಡ್ವೈಸರಿ(ಐಎಂಎ) ಸಂಸ್ಥೆಯ ಬಹುಕೋಟಿ ವಂಚನೆ ಪ್ರಕರಣ ಸಂಬಂಧ ನ.22ರಂದು ಸಿಬಿಐ ಬೇಗ್‌ರನ್ನು ವಶಕ್ಕೆ ಪಡೆದು, ವಿಚಾರಣೆ ನಡೆಸಿ, ನ್ಯಾಯಾಂಗ ಬಂಧನಕ್ಕೊಪ್ಪಿಸಿದೆ. ಅಷ್ಟೇ ಅಲ್ಲ, ರೋಷನ್ ಬೇಗ್ ಮನೆ ಮೇಲೆ ದಾಳಿ ಮಾಡಿ, ಹೆಂಡತಿ-ಮಕ್ಕಳನ್ನು ವಿಚಾರಣೆಗೊಳಪಡಿಸಿ ದಾಖಲೆಪತ್ರಗಳನ್ನು ವಶಕ್ಕೆ ಪಡೆದಿದೆ.
ಜನರ ನಡುವಿನಿಂದ ಎದ್ದುಬಂದ ಜನಪ್ರಿಯ ನಾಯಕನೊಬ್ಬನಾಗಿ ನಾಲ್ಕು ದಶಕಗಳ ಕಾಲ ನಿರಂತರವಾಗಿ ಸಕಲ ಸರಕಾರಿ ಸವಲತ್ತುಗಳನ್ನು ಸವಿದು; ಅಧಿಕಾರ, ಜನಪ್ರಿಯತೆ ಗಳಿಸಿ, ಹೆಂಡತಿ-ಮಕ್ಕಳೊಂದಿಗಿನ ಸಂತೃಪ್ತ ಬದುಕನ್ನು ಕಂಡುಂಡ ಬೇಗ್ ಇಂದು ಒಬ್ಬಂಟಿಯಾಗಿ ಕತ್ತಲ ಕೋಣೆಯಲ್ಲಿ ಕೂತಿದ್ದಾರೆ. ಸಾರ್ವಜನಿಕ ಬದುಕಿನ ಬಹುಪರಾಕ್, ಹಣ-ಆಸ್ತಿ, ಘನತೆ-ಗೌರವ, ಪ್ರತಿಷ್ಠೆ-ಪ್ರಭಾವಗಳ ಸೌಧ ಕುಸಿದು ಬಿದ್ದಿದೆ. ಈ ಪ್ರಕರಣ ಇದೇ ಹಾದಿಯಲ್ಲಿರುವ ರಾಜಕೀಯ ನಾಯಕರಿಗೆ ಪಾಠವಾಗಬಲ್ಲದೇ?
ಆದರೆ ಸಾರ್ವಜನಿಕ ಕ್ಷೇತ್ರದ ಸೇವೆಗೆ ಸಮರ್ಪಿಸಿಕೊಂಡ ರಾಜಕಾರಣಿಗಳು ಹೀಗೆ ಕಳಂಕ ಹೊತ್ತು ಜೈಲು ಪಾಲಾಗುವುದು, ಯಾವುದೋ ರಾಜಕೀಯ ಪಕ್ಷದ ಪ್ರಭಾವ ಬಳಸಿ ಜೈಲಿನಿಂದ ಹೊರಬರುವುದು- ದೇಶದ ರಾಜಕೀಯರಂಗದಲ್ಲಿ ದಿನಬೆಳಗಾದರೆ ನಡೆಯುತ್ತಿರುವ ನಾಟಕ. ಹಾಗೆಯೇ ಸುಲಭವಾಗಿ ಹಣ ಮಾಡಲು ಅಥವಾ ಅಕ್ರಮವಾಗಿ ಗಳಿಸಿದ ಹಣವನ್ನು ತನಿಖಾ ಸಂಸ್ಥೆಗಳ ದಾಳಿಗಳಿಂದ ಬಚಾವಾಗಲು, ಭದ್ರಪಡಿಸಿಕೊಳ್ಳಲು ರಾಜಕಾರಣವನ್ನು ಆಶ್ರಯಿಸುವುದೂ ಅನೂಚಾನವಾಗಿ ನಡೆದುಕೊಂಡೇ ಬರುತ್ತಿದೆ. ರೋಷನ್ ಬೇಗ್‌ರ ನಾಲ್ಕು ದಶಕಗಳ ರಾಜಕೀಯ ಬದುಕನ್ನು ಅವಲೋಕಿಸಿದರೆ, ಒಬ್ಬ ಜನನಾಯಕನಾಗಿ ರೂಪುಗೊಂಡ ಬಗೆಯಲ್ಲಿ ಸಾಕಷ್ಟು ಶ್ರಮವಿದೆ. ಶ್ರಮದಿಂದ ಸಿಕ್ಕ ಅಧಿಕಾರದಿಂದ ನಾಡಿಗೆ ಒಂದಷ್ಟು ಸೇವೆ ಸಲ್ಲಿಸಿದ್ದೂ ಇದೆ. ಅದಕ್ಕಿಂತಲೂ ಹೆಚ್ಚಾಗಿ ಅಧಿಕಾರ ದುರುಪಯೋಗ ಮತ್ತು ಸ್ವಾರ್ಥ ಸಾಧನೆ ಮೇಳೈಸಿದೆ. ಅಪಾರ ಅನುಭವ, ಹಿರಿತನ ಮಾಗಿ ಮನುಷ್ಯನನ್ನಾಗಿಸುವ ಬದಲು ಅಹಂಕಾರಿಯನ್ನಾಗಿಸಿದ ಕತೆಯಿದೆ. ದಶಕಗಟ್ಟಲೆ ತಮ್ಮನ್ನು ಪೊರೆದ, ಪೋಷಿಸಿದ ಜಾತ್ಯತೀತ ಪಕ್ಷಗಳನ್ನು ತೀರಾ ತುಚ್ಛವಾಗಿ ಕಂಡಿದ್ದು, ಕೇಂದ್ರ ಮತ್ತು ರಾಜ್ಯಗಳಲ್ಲಿ ಅಧಿಕಾರದಲ್ಲಿರುವ ಭಾರತೀಯ ಜನತಾ ಪಕ್ಷವನ್ನು ಅಪ್ಪಿಕೊಳ್ಳಲು ಯತ್ನಿಸಿದ್ದು ದುರಂತಕ್ಕೆಳೆಸಿದೆ.
ವಿದ್ಯಾರ್ಥಿ ನಾಯಕ
ಜುಲೈ 15, 1953ರಲ್ಲಿ ಬೆಂಗಳೂರಿನಲ್ಲಿ, ಮಧ್ಯಮ ವರ್ಗದ ಕುಟುಂಬದಲ್ಲಿ ಹುಟ್ಟಿ ಬೆಳೆದ ರೋಷನ್ ಬೇಗ್‌ರ ಬಾಲ್ಯ ಅಷ್ಟೇನೂ ಸುಖಕರವಾಗಿರಲಿಲ್ಲ. ತಂದೆ ವಿಧಾನಸೌಧದಲ್ಲಿ ಕೆಳಹಂತದ ಕ್ಲರಿಕಲ್ ಕೆಲಸದಿಂದ ಡೆಪ್ಯೂಟಿ ಸೆಕ್ರೆಟರಿವರೆಗೆ ಸೇವೆ ಸಲ್ಲಿಸಿ, ನಿವೃತ್ತರಾದವರು. ರೋಷನ್ ಬೇಗ್ ಉತ್ತಮ ವಿದ್ಯಾರ್ಥಿಯಾಗದಿದ್ದರೂ, ಕಾಲೇಜು ಮೆಟ್ಟಿಲು ಹತ್ತಿ ಪದವಿ ಪಡೆದರು. ಆರ್‌ಸಿ ಕಾಲೇಜಿನಲ್ಲಿ ಓದುತ್ತಿರುವಾಗಲೇ ವಿದ್ಯಾರ್ಥಿ ನಾಯಕನಾಗಿ ಗುರುತಿಸಿಕೊಂಡರು. ನಂತರ ಸರಕಾರಿ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿ ಪಡೆಯುವಷ್ಟರ ವೇಳೆಗೆ, ಅಂದಿನ ವಿದ್ಯಾರ್ಥಿ ನಾಯಕರಾದ ಎಂ.ರಘುಪತಿಯವರ ಗುಂಪಿನಲ್ಲಿ ಗುರುತಿಸಿಕೊಂಡರು.
1978ರಿಂದ 1983ರವರೆಗೆ ವಿದ್ಯಾರ್ಥಿ ನಾಯಕನಾಗಿ, ರಘುಪತಿಯವರ ಶಿಷ್ಯನಾಗಿ ಓಡಾಡಿಕೊಂಡಿದ್ದ ರೋಷನ್ ಬೇಗ್, 1983ರಲ್ಲಿ ಅಬ್ದುಲ್ ಸಮದ್ ಸಿದ್ದೀಕಿಯವರ ದೆಸೆಯಿಂದ ರಾಜಕೀಯಕ್ಕೆ ಧುಮುಕಿದರು. ರಘುಪತಿ ಸೂಚನೆಯ ಮೇರೆಗೆ ಜನತಾ ದಳಕ್ಕೆ ಸೇರ್ಪಡೆಯಾದರು. 1983ರಲ್ಲಿ ಶಿವಾಜಿನಗರ ವಿಧಾನಸಭಾ ಕ್ಷೇತ್ರದಿಂದ ಎಂ. ರಘುಪತಿ ಅಭ್ಯರ್ಥಿಯಾದಾಗ, ಅವರ ಗೆಲುವಿನ ರೂವಾರಿಯಾಗಿ ಹೊರಹೊಮ್ಮಿದರು. ಅದರ ಫಲವಾಗಿ 1985ರಲ್ಲಿ, ಶಿಷ್ಯನಿಗಾಗಿ ಶಿವಾಜಿನಗರ ಕ್ಷೇತ್ರವನ್ನು ರಘುಪತಿ ಬಿಟ್ಟುಕೊಟ್ಟರು. 1985ರಿಂದ ರೋಷನ್ ಬೇಗ್ ಸತತವಾಗಿ ಏಳು ಬಾರಿ- ಐದು ಬಾರಿ ಶಿವಾಜಿ ನಗರ ಮತ್ತು ಎರಡು ಬಾರಿ ಜಯಮಹಲ್ ಕ್ಷೇತ್ರಗಳ ಶಾಸಕರಾಗಿ ಆಯ್ಕೆಯಾದರು. ದಳಪತಿಗಳಾದ ಹೆಗಡೆ, ಗೌಡ, ಪಟೇಲರಿಗೆ ಆಪ್ತರಾದರು. ಪಟೇಲರು ಮುಖ್ಯಮಂತ್ರಿಯಾದಾಗ ಭಾರೀ ತೂಕದ ಗೃಹ ಖಾತೆ ಕೊಟ್ಟು, ಬೇಗ್ ರಾಜಕೀಯವಾಗಿ ಬೆಳೆಯಲು ಅನುಕೂಲ ಕಲ್ಪಿಸಿದರು. ಕೊಟ್ಟ ಖಾತೆಯಲ್ಲಿ ಕೆಲ ಬದಲಾವಣೆ ತರುವುದರ ಮೂಲಕ ಬೇಗ್ ಕೂಡ ದಕ್ಷತೆ ಪ್ರದರ್ಶಿಸಿದರು.
ತೆಲಗಿಯೊಂದಿಗೆ ಥಳಕು
ಈ ನಡುವೆ ರೋಷನ್ ಬೇಗ್ ಸಹೋದರ, ವಿದೇಶದಲ್ಲಿ ವೈದ್ಯರಾಗಿದ್ದ ರೆಹಾನ್ ಬೇಗ್, ಬೆಂಗಳೂರಿಗೆ ಬಂದರು. ಅಲ್ಲಿಂದ ದುಡಿದು ತಂದ ಹಣವನ್ನು ಆಗ ಸೀಮೆಎಣ್ಣೆ ವಹಿವಾಟು ನಡೆಸುತ್ತಿದ್ದ ಅಬ್ದುಲ್‌ಕರೀಮ್‌ತೆಲಗಿಯ ವ್ಯಾಪಾರಕ್ಕೆ ವಿನಿಯೋಗಿಸಿ ಪಾಲುದಾರರಾದರು. ಮುಂದೆ 20 ಸಾವಿರ ಕೋಟಿ ರೂ.ಗಳ ನಕಲಿ ಛಾಪಾಕಾಗದದ ಹಗರಣದಲ್ಲಿ ತೆಲಗಿ ಸಿಕ್ಕಿಬಿದ್ದಾಗ, ರೆಹಾನ್ ಬೇಗ್ ಹೆಸರು ಬಹಿರಂಗವಾಯಿತು. ಇದರಲ್ಲಿ ರೋಷನ್ ಬೇಗ್ ಹೆಸರು ಥಳಕು ಹಾಕಿಕೊಂಡಿತ್ತು. ಬೇಗ್ ಗೃಹ ಮಂತ್ರಿಯಾಗಿದ್ದ ಸಂದರ್ಭದಲ್ಲಿ, ತೆಲಗಿ ಅಕ್ರಮ ದಂಧೆಗೆ ಅಧಿಕಾರ ದುರುಪಯೋಗಪಡಿಸಿಕೊಂಡಿದ್ದರು, ಅದರಿಂದ ಬೇಗ್ ಫಲಾನುಭವಿಯಾಗಿದ್ದರು ಎಂಬ ಆರೋಪ ಕೇಳಿಬಂದು, ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು. ಹಾಗೆಯೇ 2000ದಲ್ಲಿ ಸಹೋದರ ರೆಹಾನ್ ಬೇಗ್ ಬಂಧನವಾಗಿ 9 ತಿಂಗಳ ಸೆರೆಮನೆ ಶಿಕ್ಷೆಯಾಯಿತು. ಕಾಲಾನಂತರ, ನಕಲಿ ಛಾಪಾ ಕಾಗದ ಕೇಸ್‌ನಲ್ಲಿ ರೋಷನ್ ಬೇಗ್ ಕೈವಾಡವಿಲ್ಲ ಎಂದು ಕಾನೂನು ಸಮರದಲ್ಲಿ ಗೆದ್ದು, ಹೊರಬಂದರು. ಹೊರಬಂದದ್ದು ಬುದ್ಧಿ ಕಲಿಸಬೇಕಾಗಿತ್ತು. ಬದಲಿಗೆ ಭಂಡ ಧೈರ್ಯ ಹೆಚ್ಚಿಸಿತು. ಹಣ-ಅಧಿಕಾರ ಅದಕ್ಕೆ ಕುಮ್ಮಕ್ಕು ಕೊಟ್ಟಿತು. ಮುಸ್ಲಿಂ ನಾಯಕ ಮುಸ್ಲಿಮರಿಗೆ ಮಾಡಿದ್ದೇನು?
ರೋಷನ್ ಬೇಗ್ ಜನತಾ ದಳದಲ್ಲಿರುವಾಗಲೇ ತಮಗಿಂತ ಹಿರಿಯರಾದ ಬಿ. ಎ. ಮೊಹಿದೀನ್, ಎನ್. ಬಿ. ನಬಿ ಮತ್ತು ಸಿ. ಎಂ. ಇಬ್ರಾಹೀಂರಿಂದ ಅಂತರ ಕಾಯ್ದುಕೊಂಡಿದ್ದರು. ದೇವೇಗೌಡ-ಪಟೇಲರ ನಡುವಿನ ಮೇಲಾಟವನ್ನು ಬಳಸಿಕೊಂಡು, ಬೇಗ್ ಬದುಕಿನ ದಾರಿ ಕಂಡು ಕೊಂಡಿದ್ದರು. ಏತನ್ಮಧ್ಯೆ, 1999ರಲ್ಲಿ ಬೇಗ್ ಜನತಾ ದಳ ತೊರೆದು ಕಾಂಗ್ರೆಸ್ ಪಕ್ಷ ಸೇರಿ ಎಸ್. ಎಂ. ಕೃಷ್ಣರ ಗುಂಪಿನಲ್ಲಿ ಗುರುತಿಸಿಕೊಂಡರು. ಅದು ಸಹಜವಾಗಿಯೇ ಕಾಂಗ್ರೆಸ್‌ನ ಹಿರಿಯ ಮುಸ್ಲಿಂ ನಾಯಕರಾದ ಸಿ. ಕೆ. ಜಾಫರ್ ಶರೀಫ್ ಮತ್ತು ರೆಹಮಾನ್‌ಖಾನ್‌ರ ಕೆಂಗಣ್ಣಿಗೆ ಗುರಿಯಾಯಿತು. ಅದೃಷ್ಟಕ್ಕೆ ಈ ಹಿರಿಯರು ಹಿಂದೆ ಸರಿದು, ಬೇಗ್ ದಾರಿ ಸುಗಮವಾಯಿತು. ಹಾಗೆಯೇ ತಮಗಿಂತ ಕಿರಿಯರಾದ ನಸೀರ್ ಅಹ್ಮದ್, ತನ್ವೀರ್ ಸೇಠ್, ಖಾದರ್, ಹಾರಿಸ್, ರಿಝ್ವೆನ್ ಅರ್ಷದ್, ಝಮೀರ್ ಅಹಮದ್ ಖಾನ್‌ರನ್ನು ದೂರವಿಟ್ಟು ಶಿವಾಜಿ ನಗರದ ಅನಭಿಷಿಕ್ತ ದೊರೆಯಂತೆ ಮೆರೆಯತೊಡಗಿದರು.
ಇಷ್ಟು ದೀರ್ಘ ಕಾಲ ಅಧಿಕಾರದಲ್ಲಿದ್ದರೂ ಸಮುದಾಯದ ಕೋಟಾದಲ್ಲೇ ಮತ್ತೆ ಮತ್ತೆ ಮಂತ್ರಿಗಿರಿ ಪಡೆದರೂ ಆ ಸಮುದಾಯಕ್ಕಾಗಿ ಬೇಗ್ ಮಾಡಿರುವ ಕೆಲಸಗಳ ಪಟ್ಟಿ ಮಾಡಲು ಹೊರಟರೆ ನಿರಾಶೆ ಕಟ್ಟಿಟ್ಟ ಬುತ್ತಿ. ಅಲ್ಲೊಂದು ಇಲ್ಲೊಂದು ಕೆಲಸ ಮಾಡಿದ್ದರಾದರೂ ತನಗೆ ಸಿಕ್ಕಿದ ಅಧಿಕಾರ ಹಾಗೂ ಪ್ರಭಾವಕ್ಕೆ ಹೋಲಿಸಿದರೆ ಅವು ಏನೇನೂ ಅಲ್ಲ. ಅದರ ಬದಲಿಗೆ ತನಗೆ ಬೇಕಾದಾಗಲೆಲ್ಲ ಬೇಗ್ ಸಮುದಾಯದ ಹೆಸರು ಹೇಳಿ ಪಕ್ಷದ ವರಿಷ್ಠರನ್ನು ಹೆದರಿಸಿದರು. ತನ್ನ ರಾಜಕೀಯ ಲಾಭಕ್ಕಾಗಿ ಭಾವನಾತ್ಮಕ ವಿಷಯಗಳಲ್ಲಿ ಮುಸ್ಲಿಮರನ್ನು ಪ್ರಚೋದಿಸಿದರು. ಹಿಂಸೆಗೆ ಕಾರಣರಾದರು. ಅಮಾಯಕರು ಜೈಲಿಗೆ ಸೇರಿದರು, ಪ್ರಾಣ ಕಳೆದುಕೊಂಡರು. ಬೇಗ್ ಮಾತ್ರ ರಾಜಕೀಯ ಏಣಿ ಹತ್ತುತ್ತಾ ಒಂದೊಂದೇ ಅಧಿಕಾರ ಪಡೆಯುತ್ತಾ ಮುಂದೆ ಹೋದರು. ತನ್ನ ವೈಯಕ್ತಿಕ ವರ್ಚಸ್ಸು ಹೆಚ್ಚಿಸಿಕೊಂಡರು, ಅಧಿಕಾರ ಪಡೆದುಕೊಂಡರು. ಅದಕ್ಕಾಗಿ ಸಮುದಾಯವನ್ನು ಯಥೇಚ್ಛವಾಗಿ ಬಳಸಿಕೊಂಡರು. ಇದು ಒಂದಿಬ್ಬ ರನ್ನು ಬಿಟ್ಟರೆ ಕಾಂಗ್ರೆಸ್‌ನ ಬಹುತೇಕ ಮುಸ್ಲಿಂ ನಾಯಕರ ಕತೆ ಎಂದರೆ ತಪ್ಪಲ್ಲ. ಆದರೂ ರೋಷನ್ ಬೇಗ್‌ರ ಜಾತ್ಯತೀತ ನಿಲುವು, ಕ್ಷೇತ್ರದ ಕೆಲಸಗಳು ಕೈ ಹಿಡಿದ ಕಾರಣ, ಚುನಾವಣೆಗಳಲ್ಲಿ ಸತತವಾಗಿ ಗೆಲ್ಲುತ್ತಲೇ ಬಂದರು.ಕೈ ಹಿಡಿದ ಮತದಾರರ ಔದಾರ್ಯವನ್ನು ಅರಿಯದ ಬೇಗ್, ಗೆದ್ದಾಗೆಲ್ಲ ಸಚಿವ ಸ್ಥಾನಕ್ಕೇರಿ ಸ್ವಪ್ರತಿಷ್ಠೆ ಬೆಳೆಸಿಕೊಂಡರು. ಅಲ್‌ಅಮೀನ್ ಎಜುಕೇಷನ್ ಸೊಸೈಟಿಯ ವೈಸ್ ಚೇರ್ಮನ್ ಆಗಿ ಸಾಮ್ರಾಜ್ಯವನ್ನು ವಿವಿಧ ಕ್ಷೇತ್ರಗಳಿಗೆ ವಿಸ್ತರಿಸಿಕೊಂಡರು. ತನ್ನ ರಾಜಕೀಯ ಬೆಳವಣಿಗೆಗೆ ಬೇಕೆಂದು ‘ಸಿಯಾಸತ್’ ಉರ್ದು ಪತ್ರಿಕೆಯನ್ನು ಪ್ರಾರಂಭಿಸಿದರು. ಮುಸ್ಲಿಂ ಸಮುದಾಯದ ಪ್ರಶ್ನಾತೀತ ನಾಯಕನೆಂದು ಹೂಂಕರಿಸಿದರು.
ಐಎಂಎ ಉರುಳು
2016ರಲ್ಲಿ, ಮನ್ಸೂರ್‌ಖಾನ್ ಎಂಬ ವ್ಯಕ್ತಿ ಬೆಂಗಳೂರು ನಗರದ ಜಯನಗರ ಮತ್ತು ರಿಚ್‌ಮಂಡ್‌ಟೌನ್‌ನಲ್ಲಿ ‘ಐಎಂಎ ಜ್ಯುವೆಲ್ಸ್’ ಎಂಬ ಭಾರೀ ದೊಡ್ಡ ಆಭರಣ ಮಳಿಗೆಗಳನ್ನು ಪ್ರಾರಂಭಿಸಿದರು. ಮುಸ್ಲಿಂ ಎಂಬ ಕಾರಣಕ್ಕೆ ಸ್ಥಳೀಯ ರೌಡಿಗಳು ರೋಲ್‌ಕಾಲ್‌ಗಾಗಿ ಕಿರುಕುಳ ಕೊಡತೊಡಗಿದರು. ಆಗ ಮನ್ಸೂರ್‌ಖಾನ್ ನೇರವಾಗಿ ಮುಸ್ಲಿಂ ನಾಯಕ ರೋಷನ್ ಬೇಗ್‌ರನ್ನು ಭೇಟಿ ಮಾಡಿ, ತನ್ನ ಕಷ್ಟ ಹೇಳಿಕೊಂಡರು. ಶಾಸಕರು, ಸಚಿವರೂ ಆಗಿದ್ದ ಬೇಗ್, ಸ್ಥಳೀಯ ರೌಡಿಗಳಿಂದ, ಪೊಲೀಸರಿಂದ ಮನ್ಸೂರ್‌ನನ್ನು ಪಾರು ಮಾಡಿದರು. ಜೊತೆಗೆ ಮನ್ಸೂರ್‌ಖಾನ್ ವ್ಯಾಪಾರ-ವಹಿವಾಟಿಗೆ ಬೆಂಬಲವಾಗಿ ನಿಂತರು. ಇದಕ್ಕೆ ಪ್ರತಿಯಾಗಿ ಮನ್ಸೂರ್‌ಖಾನ್ ಬೆಲೆಬಾಳುವ ಉಡುಗೊರೆಗಳನ್ನು, ದುಬಾರಿ ಕಾರುಗಳನ್ನು ಬೇಗ್‌ರಿಗೆ ಗಿಫ್ಟ್ ಆಗಿ ಕೊಟ್ಟರು. ಮನ್ಸೂರ್‌ಖಾನ್‌ನ ಇನ್ನಿತರ ವ್ಯವಹಾರಗಳಾದ ಫಾರ್ಮಾ, ಸೂಪರ್ ಮಾರ್ಕೆಟ್ಸ್, ಹೈಪರ್ ಮಾರ್ಕೆಟ್, ರಿಯಲ್ ಎಸ್ಟೇಟ್, ಪ್ರಿಂಟಿಂಗ್ ಮತ್ತು ಪಬ್ಲಿಷಿಂಗ್‌ಗಳಿಗೆ ಬೆಂಗಾವಲಾಗಿ ನಿಂತರು. ಇದಷ್ಟೇ ಅಲ್ಲದೆ, ಐಎಂ ಡಿಜಿಟಲ್, ಐಎಂ ಟ್ರೆಂಡ್ಸ್, ಐಎಂ ಎಂಟರ್‌ಟೈನ್‌ಮೆಂಟ್, ಐಎಂ ಝಾಯಿ, ಐಎಂಎಐಪಿ ಬುಲಿಯನ್ ಆ್ಯಂಡ್ ಟ್ರೇಡಿಂಗ್, ಎಂಎಂಕೆ ಇನ್‌ಸ್ಟಿಟ್ಯೂಟ್ ಆಫ್ ಎಜುಕೇಷನ್, ಐಎಂಎಡಬ್ಲ್ಯು ಜ್ಯುವೆಲ್ಲರಿ, ಐಎಂಎ ವುಮೆನ್ ಎಂಪವರ್‌ಮೆಂಟ್ ಬಿಝಿನೆಸ್ ಮಾಡ್ಯುಲ್.. ಹೀಗೆ ಹತ್ತು ಹಲವು ಸೀಮಿತ ಪಾಲುದಾರಿಕೆ ಕಂಪೆನಿಗಳನ್ನು ಶುರು ಮಾಡಲು ಅನುಕೂಲ ಕಲ್ಪಿಸಿಕೊಟ್ಟಿದ್ದರು.
ಇಷ್ಟೆಲ್ಲ ಬೃಹತ್ ವ್ಯಾಪಾರ-ವಹಿವಾಟಿಗೆ ಹಣದ ಹರಿವನ್ನು ಮನ್ಸೂರ್‌ಖಾನ್ ಅವಲಂಬಿಸಿದ್ದು- 2006ರಲ್ಲಿ ಆರಂಭಿಸಿದ ಐಎಂಎ ಹೂಡಿಕೆದಾರರ ಸಂಸ್ಥೆಯನ್ನು. ಈ ಸಂಸ್ಥೆಯಲ್ಲಿ 30 ಸಾವಿರ ಜನ ಹಣ ಹೂಡಿದ್ದರು. ಅವರಿಗೆ ಶೇ.7ರಿಂದ 8 ಬಡ್ಡಿ ಕೊಡುವುದಾಗಿ ಹೇಳಲಾಗಿದ್ದು, ಆರಂಭದ ಕೆಲ ವರ್ಷಗಳಲ್ಲಿ ಅದನ್ನು ಕೊಟ್ಟು ಜನರಲ್ಲಿ ನಂಬಿಕೆ ಹುಟ್ಟಿಸಲಾಗಿತ್ತು. ಈ 30 ಸಾವಿರ ಜನರಲ್ಲಿ ಹೆಚ್ಚಿನವರು ಬಡ ಮುಸ್ಲಿಮರು ಮತ್ತು ತಮಿಳರು. ಅವರೆಲ್ಲ ರೋಷನ್ ಬೇಗ್‌ರ ಶಿವಾಜಿನಗರ ವಿಧಾನಸಭಾ ಕ್ಷೇತ್ರದ ಮತದಾರರು. ಈ ಸಂಸ್ಥೆಯಲ್ಲಿ ಹಣ ಹೂಡಲು ಮನ್ಸೂರ್‌ಖಾನ್ ಧರ್ಮ ಮತ್ತು ಮೌಲ್ವಿಗಳನ್ನು ಬಳಸಿಕೊಂಡಿದ್ದನು. ಅದು ಬಡವರ ಬೆವರಿನ ಹಣದಿಂದ ಕಟ್ಟಲ್ಪಟ್ಟ ಪೋಂಝಿ ವಂಚಕ ಸಂಸ್ಥೆ ಎಂದು ಗೊತ್ತಿದ್ದೂ ರೋಷನ್ ಬೇಗ್ ಅದಕ್ಕೆ ಬೆಂಬಲವಾಗಿ ನಿಂತರು ಎಂಬುದು ಅವರ ಮೇಲಿನ ಗುರುತರ ಆರೋಪ. ಅಷ್ಟೇ ಅಲ್ಲದೆ, ರಾಜಕೀಯ ನಾಯಕರನ್ನು ಮತ್ತು ಉನ್ನತ ಮಟ್ಟದ ಐಎಎಸ್-ಐಪಿಎಸ್ ಅಧಿಕಾರಿಗಳನ್ನು ಮನ್ಸೂರ್‌ಖಾನ್‌ಗೆ ಭೇಟಿ ಮಾಡಿಸಿ, ಸಂಪರ್ಕ ಕಲ್ಪಿಸಿಕೊಟ್ಟಿದ್ದರು.
ಹಾಗೆಯೇ ಸಮಾಜದ ಕಣ್ಣಿಗೆ ಮಣ್ಣೆರಚಲು ಮನ್ಸೂರ್‌ಖಾನ್‌ರಿಂದ ಸರಕಾರಿ ಶಾಲೆಯನ್ನು ದತ್ತು ಪಡೆದು ಅಭಿವೃದ್ಧಿಪಡಿಸುವುದು, ಬಡ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣಕ್ಕೆ ವ್ಯವಸ್ಥೆಮಾಡಿಸುವುದನ್ನೂ ರೋಷನ್ ಬೇಗ್ ಮುಂದೆ ನಿಂತು ಮಾಡಿದ್ದರು. ಹೀಗೆ ಎಲ್ಲವೂ ಸರಿ ಇದ್ದ ಸಮಯದಲ್ಲಿಯೇ, ಮನ್ಸೂರ್‌ಖಾನ್ ವ್ಯವಹಾರದಲ್ಲಿ ಹಣಕಾಸಿನ ಬಿಕ್ಕಟ್ಟು ಎದುರಾಯಿತು. ಐಎಂಎ ಸಂಸ್ಥೆಗೆ ಬೀಗ ಬಿತ್ತು. ಹೂಡಿಕೆದಾರರಿಗೆ ಕೈ ಎತ್ತಿ ಮನ್ಸೂರ್ ಕಣ್ಮರೆಯಾದ. ಅಷ್ಟು ಇಷ್ಟು ಕೂಡಿಟ್ಟು ಹಣ ಕಟ್ಟಿದ್ದ ಸಾವಿರಾರು ಬಡಜನ ಬೀದಿಗೆ ಬಿದ್ದು ಗೋಳಾಡಿದರು. ದೇಶಾದ್ಯಂತ ಸುದ್ದಿಯಾಯಿತು. ಸರಕಾರ ವಿಶೇಷ ತನಿಖಾ ದಳ ರಚಿಸಿ ತನಿಖೆಗೊಳಪಡಿಸಿತು. ಕಣ್ಮರೆಯಾಗಿದ್ದ ಮನ್ಸೂರ್ ಖಾನ್ ಅಜ್ಞಾತ ಸ್ಥಳದಿಂದ ಜೂನ್ 22, 2019ರಂದು, ‘‘ರೋಷನ್ ಬೇಗ್ ಅವರಿಗೆ 400 ಕೋಟಿ ರೂಪಾಯಿಗಳನ್ನು ನೀಡಿದ್ದೇನೆ, ನಾನು ಹೊರಗೆ ಬಂದರೆ ಜೀವಕ್ಕೆ ಅಪಾಯವಿದೆ’’ಎಂದು ವೀಡಿಯೊ ರೆಕಾರ್ಡ್ ಮಾಡಿ ಪೊಲೀಸ್ ಇಲಾಖೆಗೆ ಕಳುಹಿಸಿದ. ಆದರೆ ರೋಷನ್ ಬೇಗ್, ‘‘ನನಗೂ ಐಎಂಎ ಸಂಸ್ಥೆಗೂ ಸಂಬಂಧವಿಲ್ಲ, ಮನ್ಸೂರ್‌ಖಾನ್‌ನಿಂದ ಹಣಪಡೆದಿಲ್ಲ’’ ಎಂದು ಹಗರಣದಿಂದ ನುಣುಚಿಕೊಳ್ಳಲು ನೋಡಿದರು.
ಬಂಡಾಯ ಮತ್ತು ಬಿಜೆಪಿ
ಅಷ್ಟೇ ಅಲ್ಲ, ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರದ ಅವಕೃಪೆಗೊಳಗಾಗಿದ್ದ ರೋಷನ್ ಬೇಗ್, 2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋತು ನೆಲಕಚ್ಚಿದ ಸಂದರ್ಭವನ್ನು ಬಳಸಿಕೊಂಡು, ‘‘ದುರಹಂಕಾರಿ ಸಿದ್ದರಾಮಯ್ಯ, ಬಫೂನ್ ವೇಣುಗೋಪಾಲ್ ಮತ್ತು ಇಮ್ಮೆಚ್ಯೂರ್ ದಿನೇಶ್ ಗುಂಡೂರಾವ್‌ಗಳಿಂದ ಕಾಂಗ್ರೆಸ್‌ಗೆ ಈ ಸ್ಥಿತಿ ಬಂದಿದೆ’’ ಎಂದು ಟೀಕಿಸಿ ಬಂಡಾಯದ ಬಾವುಟ ಹಾರಿಸಿದರು. ಇದು ಪರೋಕ್ಷವಾಗಿ ಬಿಜೆಪಿ ಮತ್ತು ಮೋದಿ- ಯಡಿಯೂರಪ್ಪನವರ ಬಗೆಗಿನ ಒಲವು ಮತ್ತು ಓಲೈಕೆ ಯನ್ನು ಹೊರಹಾಕುವಂತಿತ್ತು. ಇಷ್ಟನ್ನೂ ಹೇಳಿಕೊಳ್ಳಲಾಗದೆ ಒದ್ದಾಟದಲ್ಲಿದ್ದ ಇನ್ನಷ್ಟು ಕಾಂಗ್ರೆಸ್-ಜೆಡಿಎಸ್ ಶಾಸಕರು ಪಕ್ಷದ ವಿರುದ್ಧ ಮಾತನಾಡಲು, ಬಂಡಾಯವೆದ್ದು ಹೊರಹೋಗಲು ಬೇಗ್‌ರ ಮಾತು ಸಹಕಾರಿಯಾಯಿತು. ಸಮ್ಮಿಶ್ರ ಸರಕಾರ ಬಿದ್ದು ಬಿಜೆಪಿ ಅಧಿಕಾರಕ್ಕೇರಲು ದಾರಿ ಸುಗಮವಾಯಿತು. ಕಾಂಗ್ರೆಸ್ ಜೂನ್ 18, 2019ರಂದು ರೋಷನ್ ಬೇಗ್‌ರನ್ನು ಪಕ್ಷ ವಿರೋಧಿ ಚಟುವಟಿಕೆಗಾಗಿ ಪಕ್ಷದಿಂದ ಹೊರಹಾಕಿತು. ಯಡಿಯೂರಪ್ಪಮುಖ್ಯಮಂತ್ರಿಯಾಗುತ್ತಿದ್ದಂತೆ, ಅವರನ್ನು ಭೇಟಿ ಮಾಡಿ ಬಿಜೆಪಿ ಸೇರಲು, ತಮ್ಮ ಮೇಲಿರುವ ಐಎಂಎ ಆರೋಪದಿಂದ ಬಚಾವಾಗಲು ಬೇಗ್ ಹವಣಿಸಿದರು.
ಆದರೆ ಮುಸ್ಲಿಮರನ್ನು ಪ್ರಜ್ಞಾಪೂರ್ವಕವಾಗಿ ದೂರವಿಟ್ಟಿರುವ ಬಿಜೆಪಿ, ರೋಷನ್ ಬೇಗ್‌ರನ್ನು ಪಕ್ಷಕ್ಕೆ ಸೇರಿಸಿಕೊಳ್ಳದೆ, ಅವಮಾನಿಸಿ ನಿರ್ಲಕ್ಷಿಸಿತು. ಯಾವ ಪಕ್ಷಕ್ಕೂ ಸೇರದ, ಮುಸ್ಲಿಂ ನಾಯಕರನ್ನು ನಿರ್ಲಕ್ಷಿಸಿದ, ಮತದಾರರನ್ನು ಮರೆತ, ಯಾವುದೇ ಹುದ್ದೆಯಲ್ಲೂ ಇಲ್ಲದ ಇಂತಹ ಸಮಯಕ್ಕಾಗಿ ಕಾಯುತ್ತಿದ್ದ ಸಿಬಿಐ ಚುರುಕಾಯಿತು. ರೋಷನ್ ಬೇಗ್ ಒಡೆತನದ ಡ್ಯಾನಿಷ್ ಪಬ್ಲಿಕೇಷನ್ ಮೂಲಕ ಪ್ರಕಟಿಸುತ್ತಿದ್ದ ‘ಸಿಯಾಸತ್’ ಉರ್ದು ಪತ್ರಿಕೆ ಬ್ಯಾಂಕ್‌ಗೆ ನೀಡಿದ ಐಎಂಎ ಪಾಲುದಾರ ಎಂಬ ಪತ್ರವೇ ಮನ್ಸೂರ್‌ಖಾನ್‌ಗೂ, ರೋಷನ್‌ಬೇಗ್‌ಗೂ ಸಂಬಂಧ ಸೃಷ್ಟಿಸಿತ್ತು. ಅದು ಪ್ರಮುಖ ಸಾಕ್ಷಿಯಾಗಿ ಸಿಬಿಐಗೆ ಸಿಕ್ಕಿತ್ತು. ಈ ಸಾಕ್ಷ ಮತ್ತು ಐಎಎಸ್‌ಅಧಿಕಾರಿ ಹರ್ಷ ಗುಪ್ತಾ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ನವೆಂಬರ್ 19ರಂದು ನೀಡಿರುವ ವರದಿ, ಬೇಗ್ ಕೊರಳಿಗೆ ಉರುಳಾಯಿತು. ಇದರ ಆಧಾರದ ಮೇಲೆ ಸಿಬಿಐ ನ.22ರಂದು ರೋಷನ್ ಬೇಗ್‌ರನ್ನು ವಿಚಾರಣೆಗೆ ಕರೆದು, ವಶಕ್ಕೆ ಪಡೆದು, ನ್ಯಾಯಾಂಗ ಕಸ್ಟಡಿಗೆ ನೀಡಿತು.
ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರಕಾರವಿದೆ. ಹಿಂದುತ್ವ ಮುನ್ನೆಲೆಗೆ ಬಂದಿದೆ. ಮುಸ್ಲಿಮರನ್ನು ದೇಶದ್ರೋಹಿಗಳಂತೆ ನೋಡಲಾಗುತ್ತಿದೆ.ಮಾಧ್ಯಮಗಳು ಮಾರಾಟವಾಗಿವೆ. ಇಂತಹ ದುರಿತ ಕಾಲದಲ್ಲಿ ಮುಸ್ಲಿಂ ಸಮುದಾಯಕ್ಕೆ ಸೇರಿದ ರೋಷನ್ ಬೇಗ್ ಮೈ ಎಲ್ಲ ಕಣ್ಣಾಗಿರಬೇಕಿತ್ತು. ಬದಲಿಗೆ ನಕಲಿ ಛಾಪಾಕಾಗದ ಹಗರಣ, ಅಮಾನತ್ ಕೋ-ಆಪರೇಟಿವ್ ಬ್ಯಾಂಕ್ ದಿವಾಳಿ ಪ್ರಕರಣ, ವಕ್ಫ್ ಆಸ್ತಿ ಅವ್ಯವಹಾರಗಳನ್ನೇ ಮುಚ್ಚಿ ಮಣ್ಣು ಮಾಡಿದ್ದೇನೆ, ಇನ್ನು ಐಎಂಎ ಏನು ಮಹಾ ಎಂಬ ಉಡಾಫೆಯಲ್ಲಿ ಓಲಾಡಿದರು. ಆದರೆ ಕತ್ತಿ ಹಿಡಿದವನು ಕತ್ತಿಯಿಂದಲೇ ಕೊನೆಯಾಗುತ್ತಾನೆನ್ನುವ ಮಾತಿನಂತೆ, ಹಗರಣಗಳ ಆರೋಪ ಹೊತ್ತ ವೀರ ಬೇಗ್ ಕೂಡ ಹಗರಣದ ಮೂಲಕವೇ ಇಂದು ಕಂಬಿ ಹಿಂದೆ ಕೂತಿದ್ದಾರೆ. ಒಬ್ಬಂಟಿಯಾಗಿದ್ದಾರೆ.
ರೋಷನ್ ಬೇಗ್, ತಾವು ಸವೆಸಿದ ದಾರಿಯನ್ನೊಮ್ಮೆ ಹಿಂದಿರುಗಿ ನೋಡಿದ್ದರೆ; ತಮ್ಮನ್ನು ಪೊರೆದ, ಪೋಷಿಸಿದ ಸಮುದಾಯದ ಸ್ಥಿತಿಯನ್ನು ಧ್ಯಾನಿಸಿದ್ದರೆ- ಮನುಷ್ಯರಾಗುತ್ತಿದ್ದರು. ಆದರೆ ಕೊರೋನ ಬಂದು ಊರೂರನ್ನೇ ಹೊತ್ತುಕೊಂಡು ಹೋಗುತ್ತಿರುವ ಈ ಹೊತ್ತಿನಲ್ಲೂ ಬುದ್ಧಿ ಕಲಿಯದ ಮನುಷ್ಯನಿಗೆ ಬುದ್ಧಿ ಹೇಳುವವರಾರು?