ಸಾಹಿತ್ಯದಲ್ಲಿ ಕೊರೋನ ಸಂವೇದನೆಗಳು....!

Update: 2020-11-28 19:30 GMT

ಹಾವೇರಿಯಲ್ಲಿ ಬೃಹತ್ ‘ಕೊರೋನ ಸಮ್ಮೇಳನ’ ನಡೆಯುತ್ತಿದೆ ಎನ್ನುವುದನ್ನು ಕೇಳಿ ಪತ್ರಕರ್ತ ಎಂಜಲು ಕಾಸಿ ಬೆಚ್ಚಿಬಿದ್ದ. ಆಮೇಲೆ, ಕಸ-ಪಾ ಅಧ್ಯಕ್ಷರಾದ ಡಾ. ನಮೋ ಬರಿಗಾಲ್ ಅವರನ್ನು ವಿಚಾರಿಸಲಾಗಿ ಅದು ‘ವಿಶ್ವ ಕನ್ನಡ ಕೊರೋನಾಟಕ ಸಾಹಿತ್ಯ ಸಮ್ಮೇಳನ’ ಎನ್ನುವುದನ್ನು ಖಚಿತ ಪಡಿಸಿಕೊಂಡ. ಶಾಲೆಗಳು, ಮಾರುಕಟ್ಟೆಗಳು, ಚಿತ್ರಮಂದಿರಗಳು ಇನ್ನೂ ಸರಿಯಾಗಿ ತೆರೆಯದೇ ಇರುವ ಹೊತ್ತಿನಲ್ಲಿ ಈ ಸಾಹಿತ್ಯ ಸಮ್ಮೇಳನ ನಡೆಸುವುದರ ಕಾರಣವೇನಿರಬಹುದು? ಪತ್ರಕರ್ತ ಅವರು ಕಸ-ಪಾ ಮುಂದಿರುವ ಕಸದ ಬುಟ್ಟಿಯ ಮೇಲೆ ಆಸೀನರಾಗಿರುವ ಡಾ. ನಮೋ ಬರಿಗಾಲ್ ಮುಂದೆ ಬರಿಗಾಲಲ್ಲಿ ಹೋಗಿ ಸಂದರ್ಶನಕ್ಕೆ ನಿಂತ.

‘‘ಸಾರ್....ಕೊರೋನ ಕಾರಣವನ್ನು ಮುಂದೊಡ್ಡಿ ಶಾಲೆಗಳನ್ನು ಮುಚ್ಚಲಾಗಿದೆ. ಇಂತಹ ಸಂದರ್ಭದಲ್ಲಿ ಸಾಹಿತ್ಯ ಸಮ್ಮೇಳನ ಹಮ್ಮಿಕೊಳ್ಳುವುದು ಎಷ್ಟು ಸರಿ?’’ ಕಾಸಿ ಕೇಳಿದ.

ಡಾ. ನಮೋ ಬರಿಗಾಲ್ ಗಂಟಲು ಸರಿಪಡಿಸಿ ಮಾತಿಗೆ ತೊಡಗಿದರು. ‘‘ನೋಡಿ ಈ ಶಾಲೆಗಳು ಮುಚ್ಚಲ್ಪಟ್ಟಿರುವುದರಿಂದ ಸಾಹಿತ್ಯ ಸಮ್ಮೇಳನ ಇನ್ನಷ್ಟು ಯಶಸ್ಸು ಕಾಣಲಿದೆ. ನಿರುದ್ಯೋಗಿ ಶಿಕ್ಷಕರು, ವಿದ್ಯಾರ್ಥಿಗಳನ್ನೆಲ್ಲ ಲಾರಿಯಲ್ಲಿ ಕೂಡಿಸಿ ಸಮ್ಮೇಳನದಲ್ಲಿ ಸುರಿಯಲಿದ್ದೇವೆ....ಇದರಿಂದಾಗಿ ಈ ಬಾರಿ ಈ ಹಿಂದಿಗಿಂತ ಹೆಚ್ಚು ಕನ್ನಡಿಗರು ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ....’’

‘‘ಕೊರೋನ ಬಂದಿರುವಾಗ ಸಾಹಿತ್ಯ ಸಮ್ಮೇಳನ ಎಷ್ಟು ಸರಿ ಸಾರ್?’’ ಕಾಸಿ ಕೇಳಿದ.
‘‘ನೋಡಿ ಸಾಹಿತ್ಯದಲ್ಲಿ ದಲಿತ ಸಂವೇದನೆ, ಮುಸ್ಲಿಮ್ ಸಂವೇದನೆ ಇತ್ಯಾದಿಗಳು ಇರುವ ಹಾಗೆಯೇ ಇದು ಕೊರೋನ ಸಂವೇದನೆಯ ಕಾಲ. ಸಾಹಿತ್ಯದಲ್ಲಿ ಕೊರೋನ ಸಂವೇದನೆಗಳನ್ನಿಟ್ಟುಕೊಂಡು ನಾವು ಈ ಬಾರಿ ಸಾಹಿತ್ಯ ಸಮ್ಮೇಳನ ನಡೆಸುತ್ತಿದ್ದೇವೆ...’’

‘‘ಅದು ಹೇಗೆ ಸಾರ್?’’ ಕಾಸಿ ಈ ಹೊಸ ಸಂವೇದನೆಯ ಬಗ್ಗೆ ಅರ್ಥವಾಗದೆ ಕೇಳಿದ.

‘‘ನೋಡಿ...ಸಾಹಿತ್ಯದ ಮೇಲೆ ಕೊರೋನ ಬೀರಿರುವ ಪರಿಣಾಮಗಳನ್ನು ಈ ಬಾರಿ ಚರ್ಚಿಸಲಿದ್ದೇವೆ. ಈ ಬಾರಿ ಅದಕ್ಕಾಗಿಯೇ ವಿಶೇಷ ಗೋಷ್ಠಿಗಳನ್ನು ಹಮ್ಮಿಕೊಂಡಿದ್ದೇವೆ. ಮುಖ್ಯವಾಗಿ ‘ ಕನ್ನಡ ಸಾಹಿತ್ಯದ ಮೇಲೆ ಕೊರೋನ ಸೋಂಕಿನ ಪ್ರಭಾವ,’ ‘ಪ್ರಾಚೀನ ಸಾಹಿತ್ಯದಲ್ಲಿ ಕೊರೋನ’, ‘ಆಧುನಿಕ ಸಾಹಿತ್ಯದಲ್ಲಿ ಕೊರೋನ ಸಂವೇದನೆ,’ ‘ಕೊರೋನ ಯುವ ಕವಿಗೋಷ್ಠಿ’ ‘ಕೊರೋನಾ-ಪ್ಲೇಗ್ ತೌಲನಿಕ ಅಧ್ಯಯನ’ ‘ಲಾಕ್‌ಡೌನ್ ಕಾಲದಲ್ಲಿ ಸಾಹಿತ್ಯ ಸಂವಹನ’ ಹೀಗೆ....ಕೊರೋನದ ಬಗ್ಗೆ ಸಾಹಿತ್ಯ ಸಮ್ಮೇಳನ ಮಹತ್ವದ ಚರ್ಚೆಗಳನ್ನು ನಡೆಸಲಿದೆ. ಆದುದರಿಂದ ಈ ಸಮ್ಮೇಳನ ಕೊರೋನಕ್ಕೆ ಪೂರಕವಾಗಿದೆ.’’

‘‘ಆದರೆ ಡಾಕ್ಟರ್‌ಗಳೆಲ್ಲ ಕೊರೋನ ಸಂದರ್ಭದಲ್ಲಿ ಸಮಾವೇಶ ನಡೆಸಬಾರದು ಎನ್ನುತ್ತಾರಲ್ಲ’’ ಕಾಸಿ ಸಂಶಯವನ್ನು ಮುಂದಿಟ್ಟ.

‘‘ನೋಡೀ...ನಾನು ಕೂಡ ಡಾಕ್ಟರ್. ನನ್ನ ಹೆಸರಿನ ಹಿಂದೆ ಡಾ. ಇದೆ. ಹಾಗೆಯೇ ಸಾಹಿತ್ಯ ಸಮ್ಮೇಳನದಲ್ಲಿ ನೂರಾರು ಡಾಕ್ಟರ್ ಸಾಹಿತಿಗಳು ಭಾಗವಹಿಸುತ್ತಾರೆ. ಒಂದು ವೇಳೆ ಕೊರೋನದಿಂದ ಸಮಸ್ಯೆಯಾಗುತ್ತದೆ ಎಂದರೆ ಈ ಡಾಕ್ಟರ್‌ಗಳು ಭಾಗವಹಿಸುತ್ತಿದ್ದರೇ?’’ ಡಾ. ನಮೋ ಬರಿಗಾಲ್ ಪ್ರಶ್ನಿಸಿದರು.
‘‘ಆದ್ರೆ ನೀವೆಲ್ಲ ಮದ್ದು ಕೊಡುವ ಡಾಕ್ಟರ್ ಅಲ್ವಲ್ಲ....’’ ಕಾಸಿ ಆತಂಕದಿಂದ ಪ್ರಶ್ನಿಸಿದ.

‘‘ಯಾಕ್ರೀ ಅಲ್ಲ....? ನಾವು ಸಂಶೋಧನೆ ಮಾಡುತ್ತೇವೆ. ಈಗ ಆಯುರ್ವೇದ, ಯುನಾನಿ, ಹೋಮಿಯೋಪತಿ ಡಾಕ್ಟರನ್ನೆಲ್ಲ ಸೇರಿಸಿ ಆಯುಷ್ ಸಂಸ್ಥೆ ಮಾಡಿದ ಹಾಗೆ...ಸಾಹಿತ್ಯ ಲೋಕದ ಎಲ್ಲ ಡಾಕ್ಟರ್‌ಗಳಿಗೂ ಔಷಧಿ ಕೊಡುವ ಪ್ರಮಾಣಪತ್ರ ನೀಡಬೇಕು, ಆಯುಷ್‌ನಲ್ಲಿ ನಮ್ಮಂತಹ ಡಾಕ್ಟರ್‌ಗಳನ್ನೆಲ್ಲ ಸೇರಿಸಬೇಕು ಎಂದು ಸಾಹಿತ್ಯ ಸಮ್ಮೇಳನದಲ್ಲಿ ನಿರ್ಣಯ ತೆಗೆದುಕೊಳ್ಳಲಿದ್ದೇವೆ. ಈ ಬಾರಿ ಸಾಹಿತ್ಯ ಸಮ್ಮೇಳನದಲ್ಲಿ ಕೊರೋನದ ಕುರಿತಂತೆ ಭಾರೀ ಸಂಶೋಧನೆ ನಡೆಯಲಿದೆ....ಕೊರೋನ ಸಂಶೋಧನೆಗಾಗಿ ನಮಗೆ ವಿಶೇಷ ಅನುದಾನ ನೀಡಬೇಕು ಎಂದು ಸರಕಾರವನ್ನು ಕೇಳಿಕೊಂಡಿದ್ದೇವೆ....’’ ಡಾ. ನಮೋ ಬರಿಗಾಲ್ ಘೋಷಿಸಿದರು.

‘‘ಅದಿರಲಿ ಸಾರ್....ಸಮ್ಮೇಳನದಲ್ಲಿ ಎಲ್ಲರೂ ಮಾಸ್ಕ್ ಹಾಕಿಕೊಂಡಿರುತ್ತಾರೆ. ಇದು ಭಾಷಣಕ್ಕೆ ಅಡ್ಡಿಯಾಗುವುದಿಲ್ಲವೇ’’ ಕಾಸಿ ಕೇಳಿದ.
‘‘ಬಾಯಿ ಹೊಲಿದಾಕಿದ್ರೆ ಮೂಗಲ್ಲಿ ಕನ್ನಡ ಮಾತನಾಡ್ತೀನಿ ಎಂದು ಜಿ.ಪಿ. ರಾಜರತ್ನಂ ಹೇಳಿದ್ದಾರೆ...’’ ಬರಿಗಾಲ್ ಸ್ಪಷ್ಟನೆ ನೀಡಿದರು.
‘‘ಆದರೆ ಮಾಸ್ಕನ್ನು ಮೂಗಿನ ಮೇಲೂ ಹಾಕಬೇಕಾಗುತ್ತದೆ....’’
‘‘ಹೌದಲ್ಲ...ಹಾಗಾದರೆ ಬಾಯಿ ಮೂಗು ಹೊರತು ಪಡಿಸಿ ಇನ್ನಾವ ಭಾಗದಲ್ಲಿ ಮಾತನಾಡಬಹುದು ಎನ್ನುವುದನ್ನು ಅಧ್ಯಯನ ನಡೆಸಿ ಅದರ ಮೂಲಕವೇ ಮಾತನಾಡಲಿದ್ದೇವೆ...’’ ಬರಿಗಾಲ್ ತಿಳಿಸಿದರು.
‘‘ಸಾಹಿತ್ಯ ಸಮ್ಮೇಳನಕ್ಕೆ ಬೇರೆ ಬೇರೆ ಊರಿನಿಂದ ಜನರು ಆಗಮಿಸುತ್ತಾರೆ...ಅವರೆಲ್ಲ ಕೊರೋನವನ್ನು ಹೊತ್ತುಕೊಂಡು ಬಂದರೆ...’’ ಕಾಸಿ ಮತ್ತೆ ಅನುಮಾನವನ್ನು ಮುಂದಿಟ್ಟ.
‘‘ಅವರು ಹೊತ್ತುಕೊಂಡು ಬಂದರೂ, ಸಭೆಯಲ್ಲಿ ಮಂಡಿಸುವ ವಿವಿಧ ಘೋರ ಉಪನ್ಯಾಸ ಸದ್ದುಗಳಿಂದಾಗಿ ಅದು ಓಡಿ ಹೋಗುತ್ತದೆ ಎನ್ನುವುದನ್ನು ಈಗಾಗಲೇ ನಾವು ಹಲವು ಬಾರಿ ಪ್ರಯೋಗ ಮಾಡಿ ಯಶಸ್ವಿಯಾಗಿದ್ದೇವೆ. ಕವಿಗೋಷ್ಠಿ, ವಿಮರ್ಶೆ ಇತ್ಯಾದಿಗಳಿಂದ ಜನರೇ ದೂರ ಹೋಗುತ್ತಿರುವಾಗ ಕೊರೋನ ನಿಲ್ಲುತ್ತದೆಯೇ?’’ ಬರಿಗಾಲ್ ಮುಗುಳ್ನಕ್ಕು ಕೇಳಿದರು.
‘‘ಈ ಬಾರಿ ಊಟಕ್ಕೆ ಏನು ವಿಶೇಷ ಸಾರ್?’’ ಕಾಸಿ ಜೊಲ್ಲು ಸುರಿಸುತ್ತಾ ಕೇಳಿದ.

‘‘ಈ ಬಾರಿ ಊಟದ ಗುತ್ತಿಗೆಯನ್ನು ವಿವಿಧ ಸಾಹಿತಿಗಳಿಗೇ ವಹಿಸಿರುವುದು ವಿಶೇಷ. ಕನ್ನಡದ ಖ್ಯಾತ ಕವಿಯೊಬ್ಬರಿಗೆ ಪಾಯಸದ ಹೊಣೆಯನ್ನು ವಹಿಸಿದ್ದೇವೆ. ವಿಮರ್ಶಕರೊಬ್ಬರಿಗೆ ಹೋಳಿಗೆ-ತುಪ್ಪದ ಹೊಣೆ, ಬದನೆಗೊಜ್ಜು ತಯಾರಿಸುವ ಹೊಣೆಗೆ ಬೇರೆ ಬೇರೆ ಅಂಕಣಕಾರರು ಬೇಡಿಕೆಯಿಟ್ಟಿದ್ದಾರೆ. ಅವರಲ್ಲಿ ಅರ್ಹ ಅಂಕಣಕಾರರನ್ನು ಗುರುತಿಸಿ ಹೊಣೆ ವಹಿಸಿಕೊಡಲಿದ್ದೇವೆ...ಡುಂಡಿರಾಜರಿಗೆ ಉಪ್ಪಿನ ಕಾಯಿಯ ಗುತ್ತಿಗೆ, ಇನ್ನೂ ಯುವ ಲೇಖಕರಾಗಿಯೇ ಮುಂದುವರಿದಿರುವ ಜಾಣ-ಕಿಗೆ ತಿಳಿಸಾರಿನ ಹೊಣೆ, ಎಚ್. ಎಸ್. ವೆಂಕಟೇಶರಿಗೆ ಕುಂಬಳಕಾಯಿ ಸಾರು....ಹಂಪ ನಾಗರಾಜರಿಗೆ ಹಪ್ಪಳದ ಹೊಣೆಗಾರಿಕೆ...ಹೀಗೆ....’’ ಹೀಗೆ ಸಾಹಿತ್ಯ ಸಮ್ಮೇಳನದಲ್ಲಿ ಸಾಹಿತಿಗಳ ಹೊಣೆಗಾರಿಕೆಗಳನ್ನು ವಿವರಿಸುತ್ತಾ ಹೋದರು.
‘‘ಈ ಬಾರಿ ಸಾಹಿತ್ಯ ಸಮ್ಮೇಳನದ ಘೋಷಣೆ ಏನು ಸಾರ್?’’ ಕಾಸಿ ಕೇಳಿದ.
‘‘ಮತ್ತೇನು...ಜೈ ಕೊರೋನಾಟಕ ಮಾತೆ....’’ ಬರಿಗಾಲ್ ಘೋಷಣೆ ಕೂಗಿಯೇ ಬಿಟ್ಟರು.
 

Writer - *ಚೇಳಯ್ಯ, chelayya@gmail.com

contributor

Editor - *ಚೇಳಯ್ಯ, chelayya@gmail.com

contributor

Similar News