ಗಾಂಧಿ ಬಳಿಕ ಅದಾನಿ

Update: 2020-12-05 11:15 GMT

ನನಗೆ ಬಂದ ಆ ಕೊಡುಗೆಯ ಮೂಲ ಪತ್ರವನ್ನು ಕೆಲವು ಗೆಳೆಯರೊಂದಿಗೆ ಹಂಚಿಕೊಂಡೆ. ಜೊತೆಗೆ ಈ ಒಂದು ವಾಕ್ಯವನ್ನೂ ಸೇರಿಸಿದೆ: ‘‘ಆ ಕೊಡುಗೆಯನ್ನು ಸ್ವೀಕರಿಸಲು ಇದ್ದಿರಬಹುದಾದ ಒಂದೇ ಕಾರಣವೆಂದರೆ ನಾನು ನನ್ನ ಜೀವನ ಚರಿತ್ರೆಗೆ ಹೀಗೆ ಶೀರ್ಷಿಕೆ ನೀಡಬಹುದು ಎಂಬುದಾಗಿತ್ತು. ‘ಒಬ್ಬ ಜೀವನ ಚರಿತ್ರೆಕಾರನ ಪ್ರಯಾಣ: ಗಾಂಧಿಯಿಂದ ಅದಾನಿವರೆಗೆ’(‘ಎ ಬಯಾಗ್ರಫರ್’ಸ್ ಜರ್ನಿ: ಫ್ರಮ್ ಗಾಂಧಿ ಟು ಅದಾನಿ’)’’. ಆಗ ಒಬ್ಬ ಗೆಳೆಯ ಇದಕ್ಕಿಂತಲೂ ಹೆಚ್ಚು ಚುಟುಕು ಹಾಗೂ ಉತ್ತಮವಾದ ಶೀರ್ಷಿಕೆಯನ್ನು (ಎಂದೂ ನಾನು ಬರೆಯದಿರುವ ಭವಿಷ್ಯದ ಆ ಪುಸ್ತಕಕ್ಕೆ) ಸೂಚಿಸಿದ.
‘‘ಅದಾನಿ ಆಫ್ಟರ್ ಗಾಂಧಿ’’



ಫೈನಾನ್ಶಿಯಲ್ ಟೈಮ್ಸ್‌ನಲ್ಲಿ ಇತ್ತೀಚೆಗೆ ಪ್ರಕಟವಾದ ಲೇಖನವೊಂದು 2014ರ ಮೇಯಲ್ಲಿ ನರೇಂದ್ರ ಮೋದಿಯವರು ಪ್ರಧಾನಿಯಾದ ನಂತರದ ವರ್ಷಗಳಲ್ಲಿ ಹಾಗೂ ತಿಂಗಳುಗಳಲ್ಲಿ ಗುಜರಾತಿನ ಓರ್ವ ಉದ್ಯಮಿಯ ಸಂಪತ್ತಿನಲ್ಲಿ ಆಶ್ಚರ್ಯ ಹುಟ್ಟಿಸುವಷ್ಟು ಅಗಾಧ ಪ್ರಮಾಣದ ಏರಿಕೆಯಾಗಿರುವುದನ್ನು ವಿವರಿಸುತ್ತದೆ. ಆ ಲೇಖನದ ಒಂದು ಪ್ಯಾರ ಹೀಗಿದೆ:
‘‘ಶ್ರೀ ಮೋದಿಯವರು ಅಧಿಕಾರ ವಹಿಸಿಕೊಂಡಾಗ ಅವರು ಗುಜರಾತಿನಿಂದ ರಾಜಧಾನಿ ದಿಲ್ಲಿಗೆ ಶ್ರೀ ಅದಾನಿಯವರ ಖಾಸಗಿ ಜೆಟ್ ವಿಮಾನದಲ್ಲಿ ಪ್ರಯಾಣಿಸಿದರು. ಇದು ಅವರಿಬ್ಬರು ಜತೆಯಾಗಿ ಅಧಿಕಾರದಲ್ಲಿ ಉತ್ತುಂಗ ಶಿಖರಕ್ಕೇರಿದ್ದನ್ನು ಸಂಕೇತಿಸುವ ಗೆಳೆತನದ ಒಂದು ಮುಕ್ತ ಪ್ರದರ್ಶನವಾಗಿತ್ತು. ಶ್ರೀ ಮೋದಿಯವರು ಪ್ರಧಾನಿಯಾದಂದಿನಿಂದ, ಶ್ರೀ ಅದಾನಿಯವರ ಒಟ್ಟು ಸಂಪತ್ತಿನಲ್ಲಿ 230 ಶೇಕಡಾ ಹೆಚ್ಚಳವಾಗಿ 26 ಬಿಲಿಯ ಡಾಲರಿಗಿಂತಲೂ ಹೆಚ್ಚಿನ ಸಂಖ್ಯೆಗೆ ಏರಿತು. ಅದಾನಿಯವರು ಸರಕಾರದ ಟೆಂಡರ್‌ಗಳನ್ನು ಪಡೆದು ದೇಶದ ಉದ್ದಗಲಕ್ಕೂ ಮೂಲಚೌಕಟ್ಟು ಯೋಜನೆಗಳನ್ನು ನಿರ್ಮಾಣ ಮಾಡಿದಂತೆಯೇ ಸಂಪತ್ತಿನ ಈ ಏರಿಕೆಯಾಯಿತು.’’...
ನಾನು ಯಾವತ್ತೂ ಶ್ರೀ ಮೋದಿಯವರನ್ನು ಭೇಟಿಯಾಗಿಲ್ಲವಾದರೂ, ನಾನು ಅದಾನಿಯವರನ್ನು ಭೇಟಿಯಾಗಿ ಅವರ ಜೊತೆ ಕೆಲಸ ಮಾಡುವ ಅವಕಾಶವನ್ನು ಪಡೆಯಬಹುದಾಗಿದ್ದ ನೆನಪುಗಳು ಫೈನಾನ್ಶಿಯಲ್ ಟೈಮ್ಸ್‌ನ ಲೇಖನ ಮರುಕಳಿಸುವಂತೆ ಮಾಡಿತು. ಆ ನೆನಪುಗಳ ಹಿನ್ನೆಲೆ ಹೀಗಿದೆ:
2013ರ ಸೆಪ್ಟಂಬರ್‌ನಲ್ಲಿ ನಾನು ‘ಗಾಂಧಿ ಬಿಫೋರ್ ಇಂಡಿಯಾ’ ಎಂಬ ಒಂದು ಪುಸ್ತಕವನ್ನು ಪ್ರಕಟಿಸಿದೆ. ಆ ಪುಸ್ತಕ ಖತಿಯಾವಾಡ್ ಸಂಸ್ಥಾನದಲ್ಲಿ ಗಾಂಧಿಯವರ ಬಾಲ್ಯ, ಇಂಪೀರಿಯಲ್ ಲಂಡನ್‌ನಲ್ಲಿ ಅವರ ಶಿಕ್ಷಣ ಮತ್ತು ದಕ್ಷಿಣ ಆಫ್ರಿಕದಲ್ಲಿ ಓರ್ವ ವಕೀಲ ಹಾಗೂ ಹೋರಾಟಗಾರನಾಗಿ ಅವರ ಜೀವನದ ಕುರಿತಾಗಿತ್ತು.
ಆ ವರ್ಷ ಡಿಸೆಂಬರ್‌ನಲ್ಲಿ ನನ್ನ ಹೊಸ ಪುಸ್ತಕದ ಬಗ್ಗೆ ಮುಂಬೈಯಲ್ಲಿ ನಡೆದ ಸಾಹಿತ್ಯ ಸಮಾರಂಭವೊಂದರಲ್ಲಿ ನಾನು ಭಾಷಣ ಮಾಡಿದೆ.
ನನ್ನ ಭಾಷಣದ ನಂತರ ಯುವಕನೊಬ್ಬ ನನ್ನ ಬಳಿ ಬಂದು ತಾನೊಬ್ಬ ಉದಯೋನ್ಮುಖ ಲೇಖಕನೆಂದು ಪರಿಚಯಿಸಿಕೊಂಡ.

ಮುಖ್ಯವಾದ ವಿಷಯವೊಂದರ ಬಗ್ಗೆ ನಿಮ್ಮೆಡನೆ ಚರ್ಚಿಸಬೇಕು ಎಂದ. ಆದರೆ ನಾನು ಬೆಂಗಳೂರಿಗೆ ಮರಳುವ ವಿಮಾನ ಏರುವುದಕ್ಕಾಗಿ ತಕ್ಷಣವೇ ಅಲ್ಲಿಂದ ಹೊರಡಬೇಕಾಯಿತು. ಆತನೊಡನೆ ಮಾತನಾಡುವಷ್ಟು ಸಮಯವಿಲ್ಲದ್ದರಿಂದ, ಆತ ಅದೇನು ಮಾತಾಡಬೇಕೆಂದಿದ್ದನೋ ಆ ಬಗ್ಗೆ ನನಗೆ ಬರೆಯಲು ಅನುಕೂಲವಾಗುವಂತೆ ಅವನಿಗೆ ನಾನು ನನ್ನ ಇ ಮೇಲ್ ವಿಳಾಸ ನೀಡಿದೆ.

ಕೆಲವು ದಿನಗಳ ಬಳಿಕ ಆ ಯುವಕ ಒಂದು ಇ ಮೇಲ್ ಕಳುಹಿಸಿದ. ಅದರಲ್ಲಿ ‘‘ಗೌತಮ್ ಅದಾನಿಯ ಜೀವನ ಚರಿತ್ರೆ ಎಂಬ ಪ್ರಾಜೆಕ್ಟ್‌ವೊಂದನ್ನು ಕಾರ್ಯಗತಗೊಳಿಸುವುದಕ್ಕಾಗಿ’’ ತಾನೊಂದು ಕನ್ಸಲ್ಟೆನ್ಸಿ ಕಂಪೆನಿಯೊಂದಿಗೆ ಕಾರ್ಯೋನ್ಮುಖನಾಗಿರುವುದಾಗಿ ಬರೆದಿದ್ದ.
‘‘ಜೀವನ ಚರಿತ್ರೆಯ ಬಗ್ಗೆ ಶ್ರೀ ಅದಾನಿಯವರೊಂದಿಗೆ ತನ್ನ ಕಂಪೆನಿ ಚರ್ಚಿಸುತ್ತಿದೆ’’ ಎಂದು ಆತ ಹೇಳಿದ. ‘‘ಹಲವು ಮಂದಿ ಪ್ರತಿಷ್ಠಿತ (ಟಾಪ್) ಪ್ರಕಾಶಕರು ಆ ಪ್ರಾಜೆಕ್ಟ್ ಬಗ್ಗೆ ತುಂಬ ಉತ್ಸಾಹಿತರಾಗಿದ್ದಾರೆಂದು ಓರ್ವ ಪ್ರಸಿದ್ಧ ಸಾಹಿತ್ಯಕ ಏಜಂಟ್ ಸೂಚಿಸಿದ್ದಾರೆ’’ ಎಂದೂ ಆತ ಬರೆದಿದ್ದ.
ನನ್ನ ಬಾತ್ಮೀದಾರ ಹೇಳಿದ: ‘‘ಆತನ ಕಂಪೆನಿ ಮತ್ತು ಅದಾನಿ ಗ್ರೂಪ್-ಎರಡೂ ಕೂಡ ಉತ್ತಮ ಗುಣಮಟ್ಟದ, ಆಳವಾದ ಅಧ್ಯಯನದ ಒಂದು ಕೃತಿಯ ಬಗ್ಗೆ ತುಂಬಾ ಕಾಳಜಿ ಹೊಂದಿರುವುದರಿಂದ, ಈ ಪ್ರಾಜೆಕ್ಟ್ ಬಗ್ಗೆ ಓರ್ವ ಮಾರ್ಗದರ್ಶಕ ಹಾಗೂ ಸಲಹೆಗಾರನಾಗಬಲ್ಲ ಒಬ್ಬರಿಗಾಗಿ ನಾವು ಹುಡುಕಾಟ ನಡೆಸುತ್ತಿದ್ದೇವೆ’’. ಈ ‘ಮೆಂಟರ್’ ಮತ್ತು ಅಡ್ವೈಸರ್’ ನಾನು ಆಗಬಹುದೆಂದು ಅವರು ಭಾವಿಸಿದ್ದರು. ಆದ್ದರಿಂದ ನನ್ನ ಬಾತ್ಮೀದಾರ ಕಂಪೆನಿಯ ಓರ್ವ ಪ್ರತಿನಿಧಿ, ‘ಶ್ರೀ ಗೌತಮ್ ಅದಾನಿ ಮತ್ತು ನಿಮ್ಮ ನಡುವೆ’ ಒಂದು ಭೇಟಿಗೆ ವ್ಯವಸ್ಥೆ ಮಾಡುವುದಾಗಿ ಹೇಳಿದ.
(ಮಹಾತ್ಮಾ ಗಾಂಧಿ ಕುರಿತು ಸಂಶೋಧನೆ ನಡೆಸಲು) ನಾನು ಆಗಾಗ ಗುಜರಾತಿಗೆ ಹೋಗುತ್ತಿದ್ದೆನಾದ್ದರಿಂದ 2013ರ ಡಿಸೆಂಬರ್‌ನಷ್ಟು ಹಿಂದೆಯೇ ನನಗೆ ಗೌತಮ್ ಅದಾನಿ ಯಾರು ಎಂದು ಸುಮಾರಾಗಿ ತಿಳಿದಿತ್ತು.

ಅವರು 2001ರಿಂದ ಗುಜರಾತಿನ ಮುಖ್ಯಮಂತ್ರಿಯಾಗಿದ್ದ ವ್ಯಕ್ತಿ, ನರೇಂದ್ರ ಮೋದಿಯವರಿಗೆ ತುಂಬ ಆತ್ಮೀಯವಾದ ಓರ್ವ ಉದ್ಯಮಿ ಎಂದು ನನಗೆ ಗೊತ್ತಿತ್ತು. ಅಷ್ಟು ಹಿಂದೆಯೇ ಶ್ರೀ ಮೋದಿ ಕೆಲವೊಮ್ಮೆ ಶ್ರೀ ಅದಾನಿಯವರ ಖಾಸಗಿ ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು. ಕರಾವಳಿಯ ಉದ್ದಕ್ಕೂ ಅದಾನಿ ಪ್ರಾಜೆಕ್ಟ್‌ಗಳನ್ನು ಹೇಗೆ ತ್ವರಿತವಾಗಿ ಗುಜರಾತ್ ಸರಕಾರ ಮಂಜೂರು ಮಾಡಿತ್ತೆಂದು ಅಹಮದಾಬಾದ್‌ನ ನನ್ನ ಗೆಳೆಯರು ನನಗೆ ಹೇಳಿದ್ದರು. ಆ ಯೋಜನೆಗಳು ಗುಜರಾತಿನ ಬೆಸ್ತರನ್ನು ನಿರ್ವಸಿತರನ್ನಾಗಿ ಮಾಡಿದ್ದವು ಮತ್ತು ಮ್ಯಾಂಗ್ರೋವ್ ಕಾಡುಗಳನ್ನು ನಾಶ ಮಾಡಿದ್ದವು.

2013ರ ಡಿಸೆಂಬರ್ ವೇಳೆಗೆ ಶ್ರೀ ಮೋದಿಯವರು ಭಾರತದ ಮುಂದಿನ ಪ್ರಧಾನಿಯಾಗುವ ಸಾಧ್ಯತೆ ನಿಚ್ಚಳವಾಗಿತ್ತು. ಹಾಗಾದಾಗ ಗೌತಮ್ ಅದಾನಿಯವರಿಗೆ ಇನ್ನಷ್ಟು ಅನುಕೂಲವಾಗುವುದು ಸ್ಪಷ್ಟವಾಗ ತೊಡಗಿತ್ತು. ತಾನು ಇನ್ನಷ್ಟು ಪ್ರಭಾವಿ ಹಾಗೂ ಇನ್ನಷ್ಟು ಮುಖ್ಯ ವ್ಯಕ್ತಿಯಾಗುವುದನ್ನು ಗ್ರಹಿಸಿ ಅವರು, ತನ್ನ ಬಗ್ಗೆ ಒಂದು ಜೀವನ ಚರಿತ್ರೆಯನ್ನು ಪ್ರಕಟಿಸುವ ವಿಚಾರವಾಗಿ ಯೋಚಿಸುತ್ತಿದ್ದರು. ಆ ಜೀವನ ಚರಿತ್ರೆಯ ಬರವಣಿಗೆಯಲ್ಲಿ (ಅಥವಾ ಘೋಸ್ಟ್ -ರೈಟಿಂಗ್‌ನಲ್ಲಿ) ಗಾಂಧಿಯ ಈ ಜೀವನ ಚರಿತ್ರೆಕಾರ ಒಂದು ಮುಖ್ಯಪಾತ್ರ ವಹಿಸಬೇಕೆಂದು ಅವರ ಸಲಹೆಗಾರರು ಭಾವಿಸಿದ್ದರು.

ಗೌತಮ್ ಅದಾನಿಯವರ ಜೀವನ ಚರಿತ್ರೆ ಬರೆಯಲು ನನಗೆ ಬಂದ ವಿನಂತಿ ಈ ವಿಷಯದಲ್ಲಿ ಮೊದಲನೆಯದೇನೂ ಅಲ್ಲ. ಗಾಂಧಿಯವರ ಕುರಿತು ಅಧ್ಯಯನ ನಡೆಸಲು ನಾನು ಆರಂಭಿಸುವ ಹಲವು ವರ್ಷಗಳ ಹಿಂದೆಯೇ ನಾನು ವೆರಿಯರ್ ಎಲ್ವಿನ್‌ರವರ ಜೀವನ ಚರಿತ್ರೆ ಬರೆದಿದ್ದೆ. ಬ್ರಿಟಿಷ್ ಸಂಜಾತ ಎಲ್ವಿನ್ ಭಾರತದ ಆದಿವಾಸಿ ಜನಸಮುದಾಯಗಳ ಬಗ್ಗೆ ಅಧಿಕಾರಯುತವಾಗಿ ಬರೆದ ಬಹಳ ದೊಡ್ಡ ವಿದ್ವಾಂಸ. 1999ರ ಮಾರ್ಚ್‌ನಲ್ಲಿ ಆಕ್ಸ್‌ಫರ್ಡ್ ಯೂನಿವರ್ಸಿಟಿ ಪ್ರೆಸ್‌ನಿಂದ ಪ್ರಕಟವಾದ ‘ಸ್ಯಾವೇಂಜಿಂಗ್ ದಿ ಸಿವಿಲೈಸ್ಡ್’ ಎಂಬ ವೆರಿಯರ್ ಎಲ್ವಿನ್‌ರವರ ಆ ಜೀವನ ಚರಿತ್ರೆಗೆ ಉತ್ತಮ ವಿಮರ್ಶೆಗಳು ಬಂದವು. ವಿದ್ವತ್‌ಪೂರ್ಣವಾದ ಒಂದು ಪುಸ್ತಕದ ಬಗ್ಗೆ ಹೇಳುವುದಾದರೆ ತಕ್ಕಷ್ಟು ಮಟ್ಟಿಗೆ ಅದರ ಪ್ರತಿಗಳು ಮಾರಾಟವಾದವು. ಪುಸ್ತಕ ಪ್ರಕಟವಾಗಿ ಒಂದು ಅಥವಾ ಎರಡು ತಿಂಗಳ ಬಳಿಕ ದಿಲ್ಲಿಯ ಓರ್ವ ಗೌರವಾನ್ವಿತ ಹಿರಿಯ ಗ್ರಂಥಪಾಲಕರೊಬ್ಬರಿಂದ ನನಗೆ ಒಂದು ದೂರವಾಣಿ ಕರೆ ಬಂತು. ಅವರ ಬಗ್ಗೆ ನನಗೆ ಹೆಚ್ಚೇನೂ ತಿಳಿದಿರಲಿಲ್ಲ.

ಪ್ರಧಾನಿ ಅಟಲ್‌ಬಿಹಾರಿ ವಾಜಪೇಯಿಯವರ ಜೀವನ ಚರಿತ್ರೆಯೊಂದನ್ನು ಬರೆಯಲು ನಾನು ಆಸಕ್ತನೇ? ಎಂದು ಆ ಗ್ರಂಥಪಾಲಕರು ಕೇಳಿದರು. ವಾಜಪೇಯಿಯವರ ಕುಟುಂಬದವರು ಯಾರನ್ನು ಕೇಳಿದರಾಗಬಹುದು ಎಂದು ಅವರೊಡನೆ ವಿಚಾರಿಸಿದ್ದರು. ಎಲ್ವಿನ್ ಕುರಿತಾದ ನನ್ನ ಪುಸ್ತಕದ ನೋಟೀಸ್‌ಗಳನ್ನು ನೋಡಿದ್ದ ಆ ಗ್ರಂಥಪಾಲಕರು ನನ್ನನ್ನು ಸಂಪರ್ಕಿಸಿದ್ದರು. ಆತ ಅದಾಗಲೇ ಆಕ್ಸಫರ್ಡ್ ಯೂನಿವರ್ಸಿಟಿ ಪ್ರೆಸ್‌ನೊಡನೆ ಮಾತಾಡಿದ್ದರು ಮತ್ತು ಪ್ರೆಸ್‌ನವರು ಆ ಯೋಜನೆ ಬಗ್ಗೆ ತುಂಬ ಉತ್ಸುಕರಾಗಿದ್ದರು.

ಪ್ರಧಾನಿಯವರ ಕುರಿತಾದ ವ್ಯಾಪಕ ಸಾರ್ವಜನಿಕ ಆಸಕ್ತಿಯಷ್ಟೇ ಅಲ್ಲದೆ, ಪ್ರತಿಯೊಂದು ಸರಕಾರಿ ಇಲಾಖೆ ಮತ್ತು ಉಪ ಇಲಾಖೆಗಳು ಕೂಡ ಪುಸ್ತಕದ ಹತ್ತಾರು ಪ್ರತಿಗಳನ್ನು ಕೊಂಡುಕೊಳ್ಳುತ್ತವೆ ಎಂದು ಆ ಗ್ರಂಥಪಾಲಕ ಹೇಳಿದರು. ಅಲ್ಲದೆ ರಾಜ್ಯ ಸರಕಾರಗಳಿಗಾಗಿ ಅದನ್ನು ಹಿಂದಿಗೆ ಅನುವಾದಿಸಲಾಗುತ್ತದೆ, ಎಲ್ಲ ಆರೆಸ್ಸೆಸ್ ಶಾಖೆಗಳು ಅದರ ಪ್ರತಿಗಳನ್ನು ಕೊಂಡುಕೊಳ್ಳುತ್ತವೆ. ಪುಸ್ತಕದಿಂದ (ದೊಡ್ಡ ಮೊತ್ತದ) ಪ್ರತಿಫಲಗಳು ದೊರಕುತ್ತವೆ ಎಂದು ಆತ ಸೂಚಿಸಿದರು. ಆದರೆ ನಾನು ಅದು ಯಾವುದರಿಂದಲೂ ಆಕರ್ಷಿತನಾಗಲಿಲ್ಲ. ಯಾಕೆಂದರೆ, ಒಂದನೆಯದಾಗಿ, ಹಾಗೆ ‘ವಿನಂತಿಸಿಕೊಳ್ಳಲ್ಪಟ್ಟ’ (‘ಕಮಿಶನ್ಡ್’) ಓರ್ವ ಜೀವನ ಚರಿತ್ರಕಾರ ಅಧಿಕಾರದಲ್ಲಿರುವ ರಾಜಕಾರಿಣಿಯೊಬ್ಬರ ಬಗ್ಗೆ ಪ್ರಾಮಾಣಿಕವಾಗಿ ಹಾಗೂ ಮುಕ್ತವಾಗಿ ಬರೆಯಲು ಸಾಧ್ಯವಾಗುವುದಿಲ್ಲ. ಎರಡನೆಯದಾಗಿ, ಶ್ರೀ ವಾಜಪೇಯಿಯವರು ತುಂಬ ಬುದ್ಧಿಮತ್ತೆಯ ಹಾಗೂ ಆಕರ್ಷಕ ವ್ಯಕ್ತಿಯಾಗಿದ್ದರೂ, ನಾನು ಅವರ ಪಕ್ಷ ಬಿಜೆಪಿಯನ್ನು ಸ್ವಲ್ಪವೂ ಇಷ್ಟಪಡುತ್ತಿರಲಿಲ್ಲ. ಅದರ ಹಿಂದೂ ಮೆಜಾರಿಟೇರಿಯನಿಸಂ ಬ್ರಾಂಡ್‌ನ ಹಿಂದುತ್ವ ಗಾಂಧಿಯವರ ಬಹುತ್ವ ಹಾಗೂ ಎಲ್ಲರನ್ನೂ ಒಳಗೊಳ್ಳುವ (ಇನ್‌ಕ್ಲೂಸಿವ್) ಹಿಂದುತ್ವಕ್ಕೆ ತೀರ ವಿರುದ್ಧವಾಗಿತ್ತು. ನನ್ನ ಪ್ರಾಮಾಣಿಕವಾದ ಅನಿಸಿಕೆಗಳನ್ನು ಹೇಳುವಷ್ಟು ಆತ್ಮೀಯತೆ ನನಗೆ ಆ ಗ್ರಂಥಪಾಲಕರಲ್ಲಿ ಇರಲಿಲ್ಲ. ಆದ್ದರಿಂದ ನಾನು ಹಾಗೆ ಹೇಳುವ ಬದಲಾಗಿ, ವೆರಿಯರ್ ಎಲ್ವಿನ್ ಓರ್ವ ಅಷ್ಟೇನೂ ದೊಡ್ಡ ವ್ಯಕ್ತಿಯಲ್ಲ, ಮೊದಲು ಒಬ್ಬ ಕ್ರಿಶ್ಚಿಯನ್ ಮಿಶಿನರಿಯಾಗಿದ್ದು, ಬಳಿಕ ಒಬ್ಬ ಹವ್ಯಾಸಿ ವಿದ್ವಾಂಸರಾದವರು ಅಂತೆಲ್ಲ ಏನೋ ಗೊಣಗುಟ್ಟಿದ್ದೆ. ಎಲ್ವಿನ್ ಬಗ್ಗೆ ನಾನು ಬರೆದಿದ್ದೆನಾದರೂ, ನಮ್ಮ ಪ್ರಧಾನಿಯವರಷ್ಟು ಗೌರವಾನ್ವಿತರಾದ ಒಂದು ದೊಡ್ಡ ಗಣ್ಯ ವ್ಯಕ್ತಿತ್ವದ ಕುರಿತು ಬರೆಯುವಷ್ಟು ಅರ್ಹತೆ ನನಗಿದೆಯೆಂದು ನನ್ನನ್ನು ನಾನು ಪರಿಗಣಿಸಿಲ್ಲವೆಂದು ಹೇಳಿದೆ.

ಅಟಲ್ ಬಿಹಾರಿ ವಾಜಪೇಯಿಯವರ ಜೀವನ ಚರಿತ್ರೆ ಬರೆಯಲು ನನಗೆ ಬಂದ ಆ ಕೊಡುಗೆ, ಒಂದು ‘ಕಮಿಶನ್ಡ್’ ಜೀವನ ಚರಿತ್ರೆ ಬರೆಯಲು ಬಂದದ್ದು ಮೊದಲ ಬಾರಿಯಾಗಿತ್ತು. ಅದು ಕೊನೆಯ ಬಾರಿಯೂ ಆಗಿರಲಿಲ್ಲ. 2002ರಲ್ಲಿ ಕ್ರಿಕೆಟ್ ಕುರಿತು ನಾನೊಂದು ಪುಸ್ತಕ ಬರೆದ ಮೇಲೆ ಇಬ್ಬರು ಕ್ರಿಕೆಟ್ ಆಟಗಾರರು ಅವರ ಜೀವನ ಚರಿತ್ರೆ ಬರೆಯುವುದರಲ್ಲಿ ನಾನು ಸಹಯೋಗ ನೀಡಬಲ್ಲೆನೇ ಎಂದು ಕೇಳಿದರು. 2007ರಲ್ಲಿ ನಾನು ಸ್ವತಂತ್ರ ಭಾರತದ ಕುರಿತು ಒಂದು ಪುಸ್ತಕ ಬರೆದ ಬಳಿಕ, ಇತ್ತೀಚೆಗಷ್ಟೆ ನಿಧನರಾದ ಕಾಂಗ್ರೆಸ್ ರಾಜಕಾರಣಿಯೊಬ್ಬರ ಮಗ ಅವರ ತಂದೆಯ ಬಗ್ಗೆ ಒಂದು ಪುಸ್ತಕ ಬರೆಯಲು ಅವರಿಗೆ ಸಹಾಯ ಮಾಡಬೇಕೆಂದು ಕೇಳಿಕೊಂಡರು. ಹಾಗೆಯೇ ಆಗಿನ್ನೂ ಸಕ್ರಿಯ ರಾಜಕಾರಣದಲ್ಲಿದ್ದ ಕಾಂಗ್ರೆಸ್ ರಾಜಕಾರಣಿಯೊಬ್ಬರು ಅವರ ಬಗ್ಗೆ ಒಂದು ಪುಸ್ತಕ ಬರೆಯುವಂತೆ ನನ್ನನ್ನು ವಿನಂತಿಸಿಕೊಂಡರು. ಅದೇ ರೀತಿಯಾಗಿ ಮುಂದಕ್ಕೆ, ಭಾರತದ ಅತ್ಯಂತ ಪ್ರಸಿದ್ಧ ವಿಜ್ಞಾನಿಯೊಬ್ಬರ ಅನುಯಾಯಿಗಳು ತಮ್ಮ ಹೀರೋವಿನ 80ನೇ ಜನ್ಮದಿನದ ಸಂದರ್ಭದಲ್ಲಿ ಒಂದು ಪುಸ್ತಕ ಬರೆಯುವಂತೆ ಕೇಳಿಕೊಂಡರು. ಭಾರತದ ಅತ್ಯಂತ ಗೌರವಾನ್ವಿತ ಅರ್ಥಶಾಸ್ತ್ರಜ್ಞ- ಆಡಳಿತಗಾರರಲ್ಲೊಬ್ಬರ ಕುಟುಂಬದವರು ಇತ್ತೀಚೆಗೆ ನಿಧನರಾಗಿದ್ದ ಅವರ ತಂದೆಯ ಒಂದು ಜೀವನ ಚರಿತ್ರೆ ಬರೆಯುವಂತೆ ನನ್ನನ್ನು ವಿನಂತಿಸಿಕೊಂಡಿದ್ದರು. ಇತರ ಪ್ರಸಿದ್ಧ ಬಲಾಢ್ಯ ಅಥವಾ ಶ್ರೀಮಂತ ಭಾರತೀಯರ ಜೀವನ ಚರಿತ್ರೆ ಬರೆಯುವಂತೆ ಕೂಡ ನನಗೆ ಹಲವು ಆಫರ್‌ಗಳು ಬಂದಿದ್ದವು.

ನಾನು ಈ ಎಲ್ಲ ಆಫರ್‌ಗಳನ್ನು, ಕಮಿಶನ್‌ಗಳನ್ನು ನಿರಾಕರಿಸಿದೆ. ನನಗೆ ನನ್ನದೇ ಆದ ಬರೆಯುವ ಕಮಿಟ್‌ಮೆಂಟ್‌ಗಳಿದ್ದವು ಎಂಬ ಕಾರಣಕ್ಕಾಗಿ ಕೆಲವನ್ನು, ಬರೆಯಲು ನಾನು ಅರ್ಹತೆ ಹೊಂದಿಲ್ಲ ಎಂಬ ಕಾರಣಕ್ಕಾಗಿ ಇನ್ನು ಕೆಲವನ್ನು ನಿರಾಕರಿಸಿದ್ದೆ. ಅದೇನಿದ್ದರೂ, ಒಂದು ‘ಕಮಿಶನ್ಡ್’ ಅಥವಾ ‘ಅಥಾರೈಸ್ಡ್’ ಜೀವನ ಚರಿತ್ರೆಯ ಬಗ್ಗೆ ನನಗೆ ಒಂದು ರೀತಿಯ ರಸಾತ್ಮಕವಾದ, ಅಸ್ಥೆಟಿಕ್ ಹೇವರಿಕೆ ಇತ್ತು. ಒಬ್ಬ ವ್ಯಕ್ತಿಯ ಬಗ್ಗೆ ನನಗೆ ಆಸಕ್ತಿ ಇದ್ದು, ನನ್ನ ಒಳಗಿನಿಂದಲೇ ಬರೆಯಬೇಕು ಎಂಬ ಒತ್ತಡವಿದ್ದಾಗ ಮಾತ್ರ ನಾನು ಓರ್ವ ವ್ಯಕ್ತಿಯ ಜೀವನ ಚರಿತ್ರೆ ಬರೆಯುತ್ತೇನೆ; ಭಾರೀ ಹಣ, ಸಂಪತ್ತು ಇರುವ ಯಾರೋ ಒಬ್ಬ ಬರಿ ಎಂದು ಹೇಳಿದ ಕಾರಣಕ್ಕೆ ನಾನು ಬರೆಯಲಾರೆ.

ನಾನು ವೆರಿಯರ್ ಎಲ್ವಿನ್ ಬಗ್ಗೆ ಪುಸ್ತಕವೊಂದನ್ನು ಬರೆದೆ, ಯಾಕೆಂದರೆ ನನ್ನ ಬದುಕನ್ನು ಬದಲಿಸಿದಾತ ಎಲ್ವಿನ್, ಆತನ ಪುಸ್ತಕ ಕೈಗೆತ್ತಿಕೊಳ್ಳುವಾಗ ನಾನೊಬ್ಬ ಅರ್ಥಶಾಸ್ತ್ರದ ಅನಾಸಕ್ತ ವಿದ್ಯಾರ್ಥಿಯಾಗಿದ್ದೆ. ಸಮಾಜಶಾಸ್ತ್ರ ಮತ್ತು ಸಾಮಾಜಿಕ ಇತಿಹಾಸದಲ್ಲಿ ಇನ್ನಷ್ಟು ಅಧ್ಯಯನ ಮಾಡುವಂತೆ ನನಗೆ ಸ್ಫೂರ್ತಿ ಬಂದದ್ದು ಎಲ್ವಿನ್‌ನನ್ನು ಓದಿದಾಗ, ನಾನು ವಿದ್ಯಾರ್ಥಿಯಾಗಿದ್ದಾಗಿನಿಂದ ನನಗೆ ಗಾಂಧಿಯ ಬದುಕು ಹಾಗೂ ಕೊಡುಗೆಯಲ್ಲಿ ಆಸಕ್ತಿ ಇತ್ತು. ಬಳಿಕ ಒರ್ವ ಕಾರ್ಯನಿರತ ಇತಿಹಾಸಕಾರನಾಗಿ ವಿಶ್ವದ ನಾನಾಕಡೆಗಳಲ್ಲಿನ ಪ್ರಾಚಾರಗಳಲ್ಲಿ ಗಾಂಧಿಗೆ ಸಂಬಂಧಿಸಿದ ಅಪರೂಪದ ದಾಖಲೆಗಳ ರಾಶಿರಾಶಿಯೇ ನನಗೆ ಕಂಡುಬಂತು. ಗಾಂಧಿ ಬಗ್ಗೆ ಎರಡು ಸಂಪುಟಗಳ ಜೀವನ ಚರಿತ್ರೆ ಬರೆಯಲು ಇದು ನನಗೆ ಸ್ಫೂರ್ತಿ ನೀಡಿತು.

2013ರ ಡಿಸೆಂಬರ್‌ನಲ್ಲಿ ಗೌತಮ್ ಅದಾನಿಯವರ ಜೀವನ ಚರಿತ್ರೆ ಬರೆಯುವಂತೆ ಮಾಡಿಕೊಂಡ ವಿನಂತಿ ನನ್ನ ಇನ್‌ಬಾಕ್ಸಿಗೆ ಬರುವ ವೇಳೆಗೆ, ಜೀವನ ಚರಿತ್ರೆ ಬರೆಯುವಂತೆ ನನಗೆ ಬರುತ್ತಿದ್ದ ಅಂತಹ ಕೊಡುಗೆಗಳನ್ನು ನಿರಾಕರಿಸುವುದರಲ್ಲಿ ನಾನೊಬ್ಬ ಪಳಗಿದವನಾಗಿದ್ದೆ. ಹಾಗಾಗಿ, ಗಾಂಧಿ ಜೀವನ ಚರಿತ್ರೆಯ ಎರಡನೇ ಸಂಪುಟ ಬರೆಯುವುದರಲ್ಲಿ ನಾನು ಬಿಝಿಯಾಗಿರುವುದರಿಂದ ಅವರ ಅದಾನಿ ಪ್ರಾಜೆಕ್ಟ್‌ಗೆ ನಾನೊಬ್ಬ ‘‘ಮಾರ್ಗದರ್ಶಿ ಹಾಗೂ ಒಬ್ಬ ಸಲಹೆಗಾರ’’ನಾಗಲು ಸಾಧ್ಯವಾಗುವುದಿಲ್ಲವೆಂದು ಹೇಳಿ ಆ ಯುವಕನಿಗೆ ಹಾಗೂ ಆತನ ಕನ್ಸಲ್ಟೆನ್ಸಿಗೆ ಉತ್ತರ ಬರೆದೆ.

ನನಗೆ ಬಂದ ಆ ಕೊಡುಗೆಯ ಮೂಲ ಪತ್ರವನ್ನು ಕೆಲವು ಗೆಳೆಯರೊಂದಿಗೆ ಹಂಚಿಕೊಂಡೆ. ಜೊತೆಗೆ ಈ ಒಂದು ವಾಕ್ಯವನ್ನೂ ಸೇರಿಸಿದೆ: ‘‘ಆ ಕೊಡುಗೆಯನ್ನು ಸ್ವೀಕರಿಸಲು ಇದ್ದಿರಬಹುದಾದ ಒಂದೇ ಕಾರಣವೆಂದರೆ ನಾನು ನನ್ನ ಜೀವನ ಚರಿತ್ರೆಗೆ ಹೀಗೆ ಶೀರ್ಷಿಕೆ ನೀಡಬಹುದು ಎಂಬುದಾಗಿತ್ತು. ‘ಒಬ್ಬ ಜೀವನ ಚರಿತ್ರೆಕಾರನ ಪ್ರಯಾಣ: ಗಾಂಧಿಯಿಂದ ಅದಾನಿವರೆಗೆ’(‘ಎ ಬಯಾಗ್ರಫರ್’ಸ್ ಜರ್ನಿ: ಫ್ರಮ್ ಗಾಂಧಿ ಟು ಅದಾನಿ’)’’. ಆಗ ಒಬ್ಬ ಗೆಳೆಯ ಇದಕ್ಕಿಂತಲೂ ಹೆಚ್ಚು ಚುಟುಕು ಹಾಗೂ ಉತ್ತಮವಾದ ಶೀರ್ಷಿಕೆಯನ್ನು (ಎಂದೂ ನಾನು ಬರೆಯದಿರುವ ಭವಿಷ್ಯದ ಆ ಪುಸ್ತಕಕ್ಕೆ) ಸೂಚಿಸಿದ.
‘‘ಅದಾನಿ ಆಫ್ಟರ್ ಗಾಂಧಿ’’

Writer - ರಾಮಚಂದ್ರ ಗುಹಾ

contributor

Editor - ರಾಮಚಂದ್ರ ಗುಹಾ

contributor

Similar News