ಅಮೃತ ವಾಹಿನಿ: ಸಂಸಾರದಲ್ಲಿನ ಅಪಸ್ವರ
ಒಂದು ಕ್ಷೇತ್ರದ ಜನಪ್ರಿಯ ವ್ಯಕ್ತಿ ಮತ್ತೊಂದು ಕ್ಷೇತ್ರದಲ್ಲಿ ಜನಮನ ಸೆಳೆಯಬೇಕಾಗಿಲ್ಲ ಎನ್ನುವ ಮಾತು ಅಮೃತ ವಾಹಿನಿ ಚಿತ್ರದ ಮೂಲಕ ಮತ್ತೊಮ್ಮೆ ಸಾಬೀತಾಗಿದೆ! ಸಾಹಿತ್ಯ ಕೃಷಿಯಿಂದ ಹೆಸರು ಮಾಡಿರುವ ಎಚ್. ಎಸ್. ವೆಂಕಟೇಶಮೂರ್ತಿಯವರು ಪ್ರಧಾನ ಪಾತ್ರ ನಿರ್ವಹಿಸಿರುವ ಈ ಚಿತ್ರದಲ್ಲಿ ಅವರು ನೀಡಿರುವ ಅಭಿನಯವೇ ಅಂತಹ ಅಭಿಪ್ರಾಯ ಮೂಡಲು ಕಾರಣ.
ಕನ್ನಡದ ಭಾವಕವಿ ಎನ್ನುವ ಬಿರುದಾಂಕಿತ ಜನಪ್ರಿಯ ಸಾಹಿತಿ ಎಚ್. ಎಸ್. ವೆಂಕಟೇಶಮೂರ್ತಿಯವರು ಪ್ರಧಾನ ಪಾತ್ರದಲ್ಲಿದ್ದಾರೆ ಎನ್ನುವ ಕಾರಣದಿಂದಲೇ ಗಮನ ಸೆಳೆದ ಚಿತ್ರ ಅಮೃತ ವಾಹಿನಿ. ಚಿತ್ರದಲ್ಲಿ ಅವರು ಸಾಹಿತಿಯಾಗಿಯೇ ಕಾಣಿಸಿಕೊಳ್ಳುತ್ತಾರೆ ಎನ್ನುವ ಕಾರಣಕ್ಕೆ ಮತ್ತಷ್ಟು ಕುತೂಹಲವನ್ನು ಮೂಡಿಸಿತ್ತು. ಆದರೆ ಅವರದು ಸಾಹಿತಿಯ ಪಾತ್ರವೇ ಆದರೂ ಅದು ಒಂದು ಸರಾಸರಿ ವ್ಯಕ್ತಿಯ ವೃದ್ಧಾಪ್ಯದಲ್ಲಿ ನಡೆಯುವ ಘಟನೆಗಳನ್ನು ಆಧಾರವಾಗಿಸಿರುವ ಚಿತ್ರವಾಗಿದೆ. ಹಾಗಾಗಿ ಕವಿಯಾಗಿ, ಸಾಹಿತಿಯಾಗಿ ಅವರಿಗೆ ವಿಶೇಷ ಅವಕಾಶವೇನೂ ಇಲ್ಲ ಎನ್ನುವುದು ಸತ್ಯ.
ಚಿತ್ರದಲ್ಲಿ ಎಚ್.ಎಸ್.ವಿ.ಯವರು ‘ಜಿ.ಕೆ.’ ಎಂದು ಕರೆಸಲ್ಪಡುವ ಸಾಹಿತಿ ಗೋಪಾಲ ಕೃಷ್ಣ ಎನ್ನುವ ಪಾತ್ರವನ್ನು ನಿಭಾಯಿಸಿದ್ದಾರೆ. ಜಿ.ಕೆ.ಗೆ ಇಳಿ ವಯಸ್ಸು. ತನಗಿರುವ ಒಬ್ಬನೇ ಒಬ್ಬ ಮಗ ಹೇಳದೆ ಕೇಳದೆ ಪ್ರೇಮ ವಿವಾಹವಾಗಿದ್ದಕ್ಕಾಗಿ ಆತನನ್ನು ಜಿ.ಕೆ. ತನ್ನ ಮನೆಯಿಂದ ಹೊರಗೆ ಹಾಕಿರುತ್ತಾರೆ. ಮಗನ ಕೊರಗಿನಲ್ಲಿ ಜಿ.ಕೆ.ಯ ಪತ್ನಿಯೂ ಅಸುನೀಗಿರುತ್ತಾಳೆ. ವರ್ಷಗಳು ಉರುಳಿದ ಬಳಿಕ ಏಕಾಂಗಿ ಜಿ.ಕೆ.ಗೆ ಕೆಮ್ಮಿನ ಕಾಯಿಲೆಯೂ ಶುರುವಾಗುತ್ತದೆ. ಇಂತಹ ಸಂದರ್ಭದಲ್ಲಿ ಜಿ.ಕೆ. ಮಗನ ಮನೆ ಹುಡುಕಿಕೊಂಡು ಹೋಗುತ್ತಾರೆ. ಆಗ ಅಲ್ಲಿ ಮಗ, ಆತನ ಪತ್ನಿ ಮತ್ತು ಮಗು ನೀಡುವ ಪ್ರತಿಕ್ರಿಯೆ ಹೇಗಿರುತ್ತದೆ ಎನ್ನುವುದು ಚಿತ್ರದ ಪ್ರಮುಖ ಎಳೆ.
ಅದರ ಜೊತೆಯಲ್ಲಿ ಜಿ.ಕೆ.ಯ ಸ್ನೇಹಿತರಲ್ಲೊಬ್ಬನಾದ ವೆಂಕೋಬರಾವ್ ಎನ್ನುವ ಹಿರಿಯ, ತನ್ನ ಏಕಾಂಗಿತನ ನೀಗಲು ಮತ್ತೊಂದು ಮದುವೆ ಬಗ್ಗೆ ಯೋಜನೆ ಹಾಕುತ್ತಾನೆ. ಅದಕ್ಕೆ ಆತನ ಮಕ್ಕಳಿಂದ ಸಿಗುವ ಪ್ರತಿಕ್ರಿಯೆ, ಅದೇ ರೀತಿ ಇನ್ನೊಂದು ಯುವ ಜೋಡಿಯ ದಾಂಪತ್ಯದಲ್ಲಿ ನಡೆಯುವ ತಳಮಳಗಳು ಎಲ್ಲವನ್ನೂ ತೋರಿಸಲಾಗಿದೆ. ಒಟ್ಟಿನಲ್ಲಿ ಪೂರ್ತಿ ಚಿತ್ರದಲ್ಲಿ ತಲೆಮಾರುಗಳ ನಡುವಿನ ಕೌಟುಂಬಿಕ ಸಂಬಂಧಗಳ ಸೂಕ್ಷ್ಮತೆಯನ್ನು ಮನವರಿಕೆ ಮಾಡುವ ಪ್ರಯತ್ನ ನಡೆಸಲಾಗಿದೆ. ಚಿತ್ರದ ಕೊನೆಯಲ್ಲಿ ಒಂದು ಪುಸ್ತಕ ಬಿಡುಗಡೆಯ ದೃಶ್ಯದ ಮೂಲಕ ಸಾಹಿತಿಯ ಪಾತ್ರಕ್ಕೆ ಒಂದು ಸಮರ್ಥನೆ ನೀಡಲಾಗಿದೆ. ಜೊತೆಗೆ ಸಂಸಾರದ ಸಮಸ್ಯೆಗಳಿಗೆ ಒಂದು ಮಾಯೆಯಂತಹ ಪರಿಹಾರವನ್ನೂ ನೀಡಲಾಗಿದೆ! ಅದೇನು ಎನ್ನುವುದನ್ನು ಚಿತ್ರಮಂದಿರಕ್ಕೆ ಹೋಗಿ ನೋಡಬಹುದು.
ಆರಂಭದಲ್ಲೇ ಹೇಳಿದಂತೆ ಎಚ್.ಎಸ್. ವೆಂಕಟೇಶ ಮೂರ್ತಿಯವರು ಕವಿಯಾಗಿ, ಉಪನ್ಯಾಸಕರಾಗಿ ಜನ ಮೆಚ್ಚುಗೆ ಪಡೆದವರು. ಆದರೆ ನಟನಾಗಿ ಅವರ ಅಭಿನಯದ ರೀತಿ ಮಕ್ಕಳಾಟದಂತೆ ಗೋಚರಿಸಿದೆ. ಒಂದು ಕೆಮ್ಮು ಕೂಡ ಅವರಿಂದ ಸಹಜವಾಗಿ ಹೊರಬಂದಿಲ್ಲ ಎಂದ ಮೇಲೆ, ನಟನೆಯ ಬಗ್ಗೆ ಇನ್ನು ಕೆಮ್ಮುವಂತಿಲ್ಲ! ಎಲ್ಲಕ್ಕಿಂತ ಮುಖ್ಯವಾಗಿ ನಿರ್ದೇಶನದ ಬಗ್ಗೆ ಹೇಳಲೇಬೇಕು. ಬಹುಶಃ ನಿರ್ದೇಶಕರಾದರೂ ನೈಜ ನಟನೆಗೆ ಮಾರ್ಗದರ್ಶನ ನೀಡಿದ್ದರೆ ಪೂರ್ತಿ ಚಿತ್ರ ಈ ರೀತಿ ನಾಟಕೀಯವೆನಿಸುತ್ತಿರಲಿಲ್ಲ.
ಜಿ.ಕೆ.ಯ ಪುತ್ರ ವೇಣುವಿನ ಪಾತ್ರವನ್ನು ನಟ ಸಂತೋಷ್ ಎಸ್. ಕರ್ಕಿ ಆಕರ್ಷಕವಾಗಿ ನಿಭಾಯಿಸಿದ್ದಾರೆ. ‘ಮಗಳು ಜಾನಕಿ’ ಧಾರಾವಾಹಿ ಖ್ಯಾತಿಯ ಸುಪ್ರಿಯಾ ಚಿತ್ರದಲ್ಲಿ ಅಮೂಲ್ಯ ಎನ್ನುವ ಗಯ್ಯಿಳಿ ಸೊಸೆಯ ಪಾತ್ರಕ್ಕೆ ಜೀವ ತುಂಬಿದ್ದಾರೆ. ಅಂಕಿತ ಎನ್ನುವ ಮಗುವಿನ ಪಾತ್ರದಲ್ಲಿ ಬೇಬಿ ಋತ್ವಿ ನಟನೆ ಗಮನ ಸೆಳೆಯುವಂತಿದೆ. ಜಿ.ಕೆ.ಯ ಪತ್ನಿಯಾಗಿ ನಟಿ, ನಿರೂಪಕಿ ಡಾ.ವತ್ಸಲಾ ಮೋಹನ್ ಹಾಡೊಂದರಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಾರೆ. ಕತೆಯೊಳಗೆ ಹಾಡುಗಳು ಧುತ್ತನೆ ಪ್ರತ್ಯಕ್ಷವಾಗುವುದಾದರೂ ಉಪಾಸನಾ ಮೋಹನ್ ಸಂಗೀತದಿಂದಾಗಿ ಸಹ್ಯವೆನಿಸುತ್ತದೆ.
ತಾರಾಗಣ: ಎಚ್. ಎಸ್. ವೆಂಕಟೇಶ ಮೂರ್ತಿ, ಸುಪ್ರಿಯಾ
ನಿರ್ದೇಶನ: ಕೆ. ನರೇಂದ್ರ ಬಾಬು
ನಿರ್ಮಾಣ: ಕೆ. ಸಂಪತ್ ಕುಮಾರ್, ಅಕ್ಷಯ್ ರಾವ್