ರಾಜಕೀಯದ ಆಟದಲ್ಲಿ ಬಲಿಪಶುವಾದ ಎನ್‌ಎಂಎಂಎಲ್

Update: 2021-01-22 18:37 GMT

ಪ್ರಧಾನಿ ನರೇಂದ್ರ ಮೋದಿಯವರ ಆಡಳಿತದ ವರ್ಷಗಳಲ್ಲಿ ಎದುರಾಗುವ ಅಪಾಯಗಳಿಂದ ಎನ್‌ಎಂಎಂಎಲ್ ಯಾವ ರೂಪ ಅಥವಾ ಆಕಾರದಲ್ಲಿ ಉಳಿದುಕೊಳ್ಳಬಹುದೆಂಬುದು ಯಾರಿಗೂ ತಿಳಿದಿಲ್ಲ. ಬೌದ್ಧಿಕ ಉತ್ಕೃಷ್ಟತೆಯ ಕೇಂದ್ರ, ಹರಿದೇವ್ ಶರ್ಮಾರಂತಹ ಮೇಧಾವಿ ಪತ್ರಾಗಾರ ಸಿಬ್ಬಂದಿಯನ್ನು ಹೊಂದಿದ್ದ, ಎಲ್ಲಾ ತಲೆಮಾರುಗಳ ವಿದ್ವಾಂಸರನ್ನು ಉಪಚರಿಸುವ ಹಾಗೂ ಸ್ವಾಗತಿಸುವ ಎನ್‌ಎಂಎಂಎಲ್ ಈಗ ವಿಷಾದಕರ ಹಾಗೂ ನಿಸ್ತೇಜವಾದ ಸ್ಥಳವಾಗಿ ಬದಲಾಗಿದೆ. ಎನ್‌ಎಂಎಂಎಲ್‌ನ ಉಚ್ಛ್ರಾಯದ ದಿನಗಳ ಅರಿವಿರುವ ಎಲ್ಲರಂತೆ ನಾನು ಕೂಡಾ ಅದೃಷ್ಟವಂತನೆನಿಸುತ್ತದೆ. ಅಲ್ಲಿ ಮಾಡಿಕೊಂಡಿದ್ದ ಟಿಪ್ಪಣಿಗಳ ಸಂಗ್ರಹವು ನನ್ನ ಜೀವನದುದ್ದಕ್ಕೂ ನನಗೆ ಆಧಾರವಾಗಲಿದೆ. ಇದೇ ವೇಳೆ ನಾನು ಈ ಪತ್ರಾಗಾರವನ್ನು ಆಳವಾಗಿ ಸಂಶೋಧಿಸಲು ಸಾಧ್ಯವಾದಷ್ಟು ಈಗಿನ ಯುವತಲೆಮಾರಿಗೆ ಅಥವಾ ಇನ್ನೂ ಜನಿಸಬೇಕಾದವರಿಗೆ ಇನ್ನು ಮುಂದೆ ಯಾವತ್ತೂ ಸಾಧ್ಯವಾಗಲಾರದು ಎಂಬ ತಪ್ಪಿತಸ್ಥ ಭಾವನೆಯೂ ನನ್ನನ್ನು ಕಾಡುತ್ತಿದೆ.

ಸರಿಯಾಗಿ ಒಂದು ವರ್ಷದ ಹಿಂದೆ, ಅಂದರೆ 2020ರ ಜನವರಿ ಮೂರನೇ ವಾರದಲ್ಲಿ ನಾನು ಹೊಸದಿಲ್ಲಿಯಲ್ಲಿದ್ದು, ನೆಹರೂ ಸ್ಮಾರಕ ಮ್ಯೂಸಿಯಂ ಹಾಗೂ ಗ್ರಂಥಾಲಯ(ಎನ್‌ಎಂಎಂಎಲ್)ದ ಸಂಗ್ರಹಗಳ ಕುರಿತಾಗಿ ಕೆಲಸ ಮಾಡುತ್ತಿದ್ದೆ. ಎನ್‌ಎಂಎಂಎಲ್‌ನಲ್ಲಿರುವ ದಾಖಲೆ ಸಂಗ್ರಹಗಳ ಶ್ರೀಮಂತಿಕೆಯನ್ನು ನಾನು 1980ರ ಮೊದಲ ದಶಕದಲ್ಲಿ ಪತ್ತೆಹಚ್ಚಿದ್ದೆ. 1988 ಹಾಗೂ 1994ರ ನಡುವೆ ದಿಲ್ಲಿಯಲ್ಲಿ ವಾಸವಾಗಿದ್ದಾಗ ನಾನು ಅವುಗಳನ್ನು ಹೆಚ್ಚುಕಮ್ಮಿ ಸಂಪೂರ್ಣವಾಗಿ ಅನ್ವೇಷಿಸಿದ್ದೆ. ಆ ವರ್ಷಗಳಲ್ಲಿ ನಾನು ವಾರದಲ್ಲಿ ಒಂದೆರಡು ದಿನಗಳನ್ನು ಎನ್‌ಎಂಎಂಎಲ್‌ನಲ್ಲೇ ಕಳೆಯುತ್ತಿದ್ದೆ. ಆಧುನಿಕ ಭಾರತೀಯ ಇತಿಹಾಸದ ಪ್ರಮುಖ (ಹಾಗೂ ಗಣ್ಯರಲ್ಲದವರು ಕೂಡಾ) ವ್ಯಕ್ತಿಗಳ ಕುರಿತಾದ ಖಾಸಗಿ ಪತ್ರಗಳ ಭಂಡಾರವನ್ನೇ ನಾನು ಅನ್ವೇಷಿಸಿದ್ದೆ ಹಾಗೂ ಹಳೆಯ ದಿನಪತ್ರಿಕೆಗಳ ಸಂಗ್ರಹಗಳನ್ನು ಅಳವಾಗಿ ಕೆದಕುತ್ತಲೇ ಇದ್ದೆ.

 1994ರಲ್ಲಿ ನಾನು ಬೆಂಗಳೂರಿನಲ್ಲಿ ನೆಲೆಸಿದೆ. ಆಗ ನನಗೆ ಎನ್‌ಎಂಎಂಎಲ್ ಅನ್ನು ದಿನನಿತ್ಯವೂ ಸಂಪರ್ಕಿಸುವುದು ಸಾಧ್ಯವಾಗುತ್ತಿರಲಿಲ್ಲ. ಆದರೂ ನಾನು ವರ್ಷದಲ್ಲಿ ಕೆಲವು ಬಾರಿ ಅಂದರೆ ಸಾಮಾನ್ಯವಾಗಿ ಜನವರಿ, ಎಪ್ರಿಲ್, ಸೆಪ್ಟೆಂಬರ್ ಹಾಗೂ ನವೆಂಬರ್‌ನಲ್ಲಿ ಪ್ರಯಾಣಿಸುತ್ತಿದ್ದೆ. ಹೀಗೆ ಬೇಸಿಗೆಯ ಪ್ರಖರ ತಾಪಮಾನದಿಂದ ಹಾಗೂ ಮಳೆಗಾಲದಲ್ಲಿನ ಜಡ ಜಿಗುಟುತನದಿಂದ ತಪ್ಪಿಸಿಕೊಳ್ಳುತ್ತಿದ್ದೆ. ವಾರದಲ್ಲಿ ಒಂದು ವಾರ ಅಥವಾ ಹತ್ತು ದಿನಗಳ ಕಾಲ ಹೊಸದಿಲ್ಲಿಯಲ್ಲಿ ಎನ್‌ಎಂಎಂಎಲ್‌ನಿಂದ ಕಾಲ್ನಡಿಗೆ ದೂರದಲ್ಲಿರುವ ವಸತಿಗೃಹದಲ್ಲಿ ಕೊಠಡಿಯೊಂದನ್ನು ನನಗಾಗಿ ಕಾದಿರಿಸುತ್ತಿದ್ದೆ. ಹಸ್ತಪ್ರತಿ ದಾಖಲೆಗಳ ಕೊಠಡಿ 9 ಗಂಟೆಗೆ ತೆರೆಯುತ್ತಿದ್ದಂತೆಯೇ ಅಲ್ಲಿಗೆ ನಾನು ತಲುಪುತ್ತಿದ್ದೆ. ಕಿಟಕಿಯ ಪಕ್ಕದಲ್ಲೇ ಇರುವ ಮೇಜೊಂದನ್ನು ನಾನು ಆಕ್ರಮಿಸಿಕೊಳ್ಳುತ್ತಿದ್ದೆ. ಮಧ್ಯಾಹ್ನದ ಹೊತ್ತಿನ ಅಲ್ಪ ಸಮಯದ ಊಟದ ಬಿಡುವು ಹಾಗೂ ಎರಡು ಹೊತ್ತಿನ ಚಹಾಕ್ಕಾಗಿನ ಅಲ್ಪ ಬಿಡುವನ್ನು ಹೊರತುಪಡಿಸಿದರೆ, ನಾನು ಸಂಜೆ 5ರವರೆಗೆ ಟಿಪ್ಪಣಿಗಳನ್ನು ಬರೆದುಕೊಳ್ಳುತ್ತಲೇ ಇರುತ್ತಿದ್ದೆ. ಮರುದಿನ ಇನ್ನೂ ಹೆಚ್ಚಿನದಕ್ಕಾಗಿ ಬರುತ್ತಿದ್ದೆ.

 ಜಗತ್ತಿನೆಲ್ಲೆಡೆ ನಾನು 12ಕ್ಕೂ ಅಧಿಕ ಪತ್ರಾಗಾರಗಳಲ್ಲಿ ಕೆಲಸ ಮಾಡಿದ್ದೇನೆ. ಆದರೆ ಎನ್‌ಎಂಎಂಎಲ್ ಮಾತ್ರ ಸಂಶೋಧನೆಗೆ ನನ್ನ ಅಚ್ಚುಮೆಚ್ಚಿನ ಸ್ಥಳವಾಗಿತ್ತು. ಇದಕ್ಕೆ ಕಾರಣಗಳೂ ಅನೇಕವಿದ್ದವು. ಅಲ್ಲಿನ ವಿನ್ಯಾಸ, ಮರಗಳಿಂದ ಆವೃತವಾದ ಕ್ಯಾಂಪಸ್‌ನಲ್ಲಿ ಸಮೃದ್ಧ ಪಕ್ಷಿ ಸಂಕುಲ, ವೈಭವೋಪೇತವಾದ ತೀನ್‌ಮೂರ್ತಿ ಭವನ, ನಮ್ಮ ಇತಿಹಾಸದ ಎಲ್ಲಾ ಅಂಶಗಳನ್ನು ಕುರಿತಾಗಿ ಲಭ್ಯವಾಗುವ ಪ್ರಾಥಮಿಕ ವಿಷಯಸಾಮಗ್ರಿಗಳು, ಸಮರ್ಥ ಹಾಗೂ ಸೇವಾಮನೋಭಾವದ ಸಿಬ್ಬಂದಿ, ಅಲ್ಲಿಗೆ ಕೆಲಸದ ನಿಮಿತ್ತ ಬರುತ್ತಿದ್ದ ನಮ್ಮ ವಿದ್ವಾಂಸರೊಂದಿಗೆ ಅಯೋಜಿತವಾದ ಮಾತುಕತೆಗಳನ್ನು ನಡೆಸುವುದು ಹೀಗೆ ಹಲವಾರು ಕಾರಣಗಳಿದ್ದವು.

ಕಳೆದ ಕಾಲು ಶತಮಾನದಲ್ಲಿ ನಾನು ಕನಿಷ್ಠ ನಾಲ್ಕು, ಕೆಲವೊಮ್ಮೆ ಐದು ಹಾಗೂ ಮಗದೊಮ್ಮೆ ಆರು ಬಾರಿ ಕೂಡಾ, ಈ ಮಂದಿರಕ್ಕೆ ಐತಿಹಾಸಿಕ ಸಂಶೋಧನೆಗಳಿಗಾಗಿ ತೀರ್ಥಯಾತ್ರೆ ಕೈಗೊಳ್ಳುತ್ತಿದ್ದೆ. ಕಳೆದ ಜನವರಿಯಲ್ಲಿ ನಾನು ಅಲ್ಲಿದ್ದಾಗ, 2020ನೇ ಇಸವಿಯು ವಿಭಿನ್ನವಾದ ವರ್ಷವಾಗಿರುವುದೆಂಬ ಬಗ್ಗೆ ನನಗೆ ಯಾವುದೇ ಸುಳಿವು ದೊರೆತಿರಲಿಲ್ಲ. ಆನಂತರ ಸಾಂಕ್ರಾಮಿಕ ರೋಗವು ಆವರಿಸಿಕೊಂಡಿತು ಮತ್ತು ಉಳಿದ ವರ್ಷವಿಡೀ ನಾನು ದಕ್ಷಿಣ ಭಾರತದಲ್ಲಿಯೇ ಅಸಹಾಯಕನಾಗಿ ಉಳಿದುಕೊಳ್ಳಬೇಕಾಯಿತು. ಒಂದು ವೇಳೆ ಹೇಗಾದರೂ ಮಾಡಿ ವಿಮಾನದಲ್ಲಿ ಹೋಗಲು ಸಾಧ್ಯವಾದರೂ ಕೂಡಾ, ನಾನು ಎನ್‌ಎಂಎಂಎಲ್‌ನ ಬಾಗಿಲು ಮುಚ್ಚಿರುವುದನ್ನು ಕಾಣಬೇಕಾಗುತ್ತಿತ್ತು.

 ಅದೇನೇ ಇರಲಿ, ವರ್ಷದುದ್ದಕ್ಕೂ ನನ್ನ ಈ ಅತ್ಯಂತ ಪ್ರೀತಿಪಾತ್ರ ಪತ್ರಾಗಾರದೊಂದಿಗೆ ನಾನು ಒಡನಾಟವನ್ನು ಇರಿಸಿಕೊಂಡಿದ್ದೆ. ಈ ಮೊದಲು ನೆಹರೂ ಸ್ಮಾರಕ ಮ್ಯೂಸಿಯಂ ಹಾಗೂ ಗ್ರಂಥಾಲಯದಲ್ಲಿ ನಡೆಸಿದ್ದ ದೊಡ್ಡ ಮಟ್ಟದ ಸಂಶೋಧನೆಯ ಆಧಾರದಲ್ಲಿ ನಾನು ಸ್ವಾತಂತ್ರ ಸಂಗ್ರಾಮದಲ್ಲಿ ಕೈಜೋಡಿಸಿದ ವಿದೇಶೀಯರ ಕುರಿತಾದ ಪುಸ್ತಕವೊಂದನ್ನು ಪೂರ್ಣಗೊಳಿಸಿದ್ದೆ ಹಾಗೂ ನಾನು ಯುವ ವಿದ್ವಾಂಸರ ಹಸ್ತಪ್ರತಿಗಳನ್ನು ಓದುತ್ತಿದ್ದೆ. ಇದು ಎನ್‌ಎಂಎಂಎಲ್‌ನ ಸಂಗ್ರಹಗಳನ್ನು ಓದುತ್ತಿರುವಂತೆ ಅನಿಸುತ್ತಿತ್ತು. ನಾನು ರಾಹುಲ್ ರಾಮಗುಂಡಂ ಬರೆದಿರುವ ಸಮಾಜವಾದಿ ನಾಯಕ ಜಾರ್ಜ್ ಫೆರ್ನಾಂಡಿಸ್ ಅವರ ಕುರಿತಾದ ಪುಸ್ತಕ ಕೃತಿ, ಅಭಿಷೇಕ್ ಚೌಧರಿ ಬರೆದಿರುವ ಬಿಜೆಪಿಯ ಮೇರು ನಾಯಕ ಅಟಲ್ ಬಿಹಾರಿ ವಾಜಪೇಯಿ ಅವರ ಆತ್ಮಕಥೆಯನ್ನು ಓದಿದ್ದೆ. ಜಯಪ್ರಕಾಶ್ ನಾರಾಯಣ್ ಅವರ ಕುರಿತಾದ ಹೊಸ ಜೀವನಚರಿತ್ರೆ ಪುಸ್ತಕದ ಕುರಿತಾಗಿ ಕೆಲಸ ಮಾಡುತ್ತಿದ್ದ ಅಕ್ಷಯ್ ಮುಕುಲ್ ಜೊತೆಗೂ ಹಲವಾರು ಸಲ ಸುದೀರ್ಘ ಸಂಭಾಷಣೆಗಳಲ್ಲಿ ತೊಡಗಿದ್ದೆ.

ಈ ಮೂರು ಪುಸ್ತಕರಚನೆ ಯೋಜನೆಗಳಲ್ಲಿ ನಾಲ್ಕು ಅಂಶಗಳು ಸಮಾನವಾಗಿದ್ದವು. ಮೊದಲನೆಯದಾಗಿ ಈ ಪುಸ್ತಕಗಳು ಪ್ರಕಟವಾಗುವಾಗ ಅವೆಲ್ಲವೂ ಪ್ರಮುಖ ಹಾಗೂ ಬಹುಶಃ ಸಂಬಂಧಿತ ವ್ಯಕ್ತಿಗಳ ಖಚಿತವಾದ ಆತ್ಮಕಥೆಗಳಾಗಲಿವೆ. ಎರಡನೆಯದಾಗಿ ಈ ಪುಸ್ತಕಗಳು ಮಹತ್ವದ (ಮತ್ತು ವಿವಾದಾತ್ಮಕ) ಐತಿಹಾಸಿಕ ವ್ಯಕ್ತಿಗಳ ಕುರಿತಾಗಿದ್ದು, ವ್ಯಾಪಕ ಓದುಗ ಬಳಗವನ್ನು ಹೊಂದಿರುತ್ತವೆ.

 ಮೂರನೆಯದಾಗಿ ಈ ಪುಸ್ತಕಗಳ ವಿಷಯವ್ಯಕ್ತಿಗಳೆಲ್ಲರೂ ಕಾಂಗ್ರೆಸ್ ಹಾಗೂ ಅದರ ಪ್ರಮುಖ ನೇತಾರ ಜವಾಹರಲಾಲ್ ನೆಹರೂ ಅವರ ಬದ್ಧವಿರೋಧಿಗಳಾಗಿದ್ದವರು. ನಾಲ್ಕನೆಯದಾಗಿ ಜಾರ್ಜ್ ಫೆರ್ನಾಂಡಿಸ್ ವಾಜಪೇಯಿ ಹಾಗೂ ಜಯಪ್ರಕಾಶ್ ನಾರಾಯಣ್ ಅವರಿಗೆ ಸಂಬಂಧಿಸಿದ ಅಪರೂಪದ ಹಾಗೂ ಸಮೃದ್ಧವಾದ ವಿಷಯಗಳು, ಅವರ ಸಮಾನವಾದ ಎದುರಾಳಿಯ ಹೆಸರಿನಲ್ಲಿರುವ ಪತ್ರಾಗಾರದಲ್ಲಿ ಇರಿಸಿದ ದಾಖಲೆಗಳನ್ನು ಬಳಸದೆ ಈ ಪೈಕಿ ಯಾವುದೇ ಪುಸ್ತಕವನ್ನು ರೂಪಿಸಲು, ಸಂಶೋಧನೆ ಮಾಡಲು ಅಥವಾ ಬರೆಯಲು ಸಾಧ್ಯವಾಗುತ್ತಿರಲಿಲ್ಲ.

 ಇದೊಂದು ಆಕಸ್ಮಿಕವಲ್ಲ, ನೆಹರೂ ಅವರ ಹೆಸರನ್ನಿಡಲಾಗಿದ್ದರೂ, ಎನ್‌ಎಂಎಂಎಲ್ ಎಂದಿಗೂ ಪಕ್ಷಪಾತದ ದೃಷ್ಟಿಕೋನವನ್ನು ಹೊಂದಿರಲಿಲ್ಲ. ಇದಕ್ಕಾಗಿಯೇ, ಜೆಪಿ, ಫೆರ್ನಾಂಡಿಸ್ ಹಾಗೂ ವಾಜಪೇಯಿ ಅವರ ಜೀವನಚರಿತ್ರೆ ಬರಹಗಾರರು ಅಲ್ಲಿಯೇ ಹೆಚ್ಚಿನ ಸಂಶೋಧನೆಯನ್ನು ಮಾಡಿದ್ದಾರೆ. ಶ್ಯಾಮಪ್ರಸಾದ್ ಮುಖರ್ಜಿ ಹಾಗೂ ಸಿ. ರಾಜಗೋಪಾಲಚಾರಿಯವರಂತಹ ಹೆಸರಾಂತ ಕಾಂಗ್ರೆಸ್ ವಿರೋಧಿ ರಾಜಕಾರಣಿಗಳ ಜೀವನಚರಿತ್ರೆಯನ್ನು ಬರೆದವರ ವಿಷಯ ಕೂಡಾ ಅದೇ ಆಗಿದೆ.

 ಇತರ ಹಲವಾರು ಭಾರತೀಯ ಸಂಸ್ಥೆಗಳಂತಲ್ಲದ ಎನ್‌ಎಂಎಂಎಲ್, ತನ್ನನ್ನು ನಿರ್ಮಿಸಿದ ವ್ಯಕ್ತಿಗಳಿಂದಾಗಿ ಅದೃಷ್ಟಶಾಲಿ ಯಾಗಿದೆ. ಅದರ ಮೊದಲ ಇಬ್ಬರು ನಿರ್ದೇಶಕರಾದ ಬಿ. ಆರ್. ನಂದಾ ಹಾಗೂ ರವೀಂದರ್ ಕುಮಾರ್ ಅಸಾಧಾರಣವಾದ ವಿದ್ವಾಂಸರು ಹಾಗೂ ಆಡಳಿತಗಾರರಾಗಿದ್ದರು. ನಂದಾ ಹಾಗೂ ಕುಮಾರ್ ಜೊತೆ ಕೆಲಸ ಮಾಡಿದ ಉತ್ಕೃಷ್ಟವಾದ ಪತ್ರಸಂಗ್ರಾಹಕರ ತಂಡವು ದೇಶಾದ್ಯಂತ ಹಸ್ತಪ್ರತಿಗಳನ್ನು ಮತ್ತು ಸುದ್ದಿಪತ್ರಿಕೆಗಳ ಸಂಗ್ರಹಗಳನ್ನು ಸಂಗ್ರಹಿಸಿತು, ಅವುಗಳ ವಿಷಯ ಸೂಚಿಯನ್ನು ಸಿದ್ಧಪಡಿಸಿತು ಹಾಗೂ ಪಟ್ಟಿ ಮಾಡಿತು ಮತ್ತು ಅವುಗಳನ್ನು ಸಂರಕ್ಷಿಸಿತು ಹಾಗೂ ಅವು ವಿದ್ವಾಂಸರಿಗೆ ಲಭ್ಯವಾಗುವಂತೆ ಮಾಡಿತು.

ಹಲವಾರು ದಶಕಗಳಿಂದ ಎನ್‌ಎಂಎಂಎಲ್ ಸಂಗ್ರಹಗಳ ಆಧಾರದಲ್ಲಿ ಸಾವಿರಾರು ಪುಸ್ತಕ ಕೃತಿಗಳು ಹಾಗೂ ಪ್ರಬಂಧಗಳನ್ನು ಬರೆಯಲಾಗಿದೆ. ಆಧುನಿಕ ಭಾರತದ ಇತಿಹಾಸದ ಕುರಿತ ವಿಷಯದ ಬಗ್ಗೆ ಗಂಭೀರವಾಗಿ ಏನಾದರೂ ಕೆಲಸ ಮಾಡಬೇಕಿದ್ದರೆ, ಅವರು ಇಲ್ಲಿ ಸಮಯ ಕಳೆಯಲೇಬೇಕಾಗುತ್ತದೆ. ಸ್ವದೇಶಿಯನಿರಲಿ ಅಥವಾ ವಿದೇಶೀಯನಿರಲಿ, ಯುವ, ವೃದ್ಧ ಅಥವಾ ಮಧ್ಯವಯಸ್ಕನಿರಲಿ, ಸಾಮಾಜಿಕ ಇತಿಹಾಸಕಾರನಾಗಿರಲಿ, ಆರ್ಥಿಕ ಇತಿಹಾಸತಜ್ಞನಿರಲಿ, ಸಾಂಸ್ಕೃತಿಕ ಇತಿಹಾಸತಜ್ಞನಿರಲಿ, ವಿಜ್ಞಾನದ ಇತಿಹಾಸಶಾಸ್ತ್ರಜ್ಞನಿರಲಿ, ಸಿನೆಮಾ ಇತಿಹಾಸಕಾರ ಅಥವಾ ಕ್ರೀಡಾ ಇತಿಹಾಸಕಾರ, ಸ್ತ್ರೀವಾದ, ಪರಿಸರವಾದ ಹಾಗೂ ಸಮಾಜವಾದದ ವಿದ್ಯಾರ್ಥಿಯಿರಲಿ, ಹೀಗೆ ಯಾರೇ ಆಗಿರಲಿ ಇವರೆಲ್ಲರ ಸಂಶೋಧನೆಯು ಬಹುತೇಕವಾಗಿ ಎನ್‌ಎಂಎಂಎಲ್‌ನಲ್ಲಿ ಆರಂಭಗೊಂಡು, ಎನ್‌ಎಂಎಂಎಲ್‌ನಲ್ಲಿಯೇ ಕೊನೆಗೊಳ್ಳುತ್ತದೆ.

ನೆಹರೂ ಸ್ಮಾರಕ ಮ್ಯೂಸಿಯಂ ಹಾಗೂ ಗ್ರಂಥಾಲಯವನ್ನು ರೂಪಿಸಿದ ಇತರ ಪುರುಷರು ಹಾಗೂ ಮಹಿಳೆಯರಿಗೆ ಯಾವುದೇ ಅಗೌರವವನ್ನು ತೋರಿಸದೆ ಹೇಳುವುದೇನೆಂದರೆ, ಬಹುಶಃ ಅದರ ಸ್ಫೂರ್ತಿ ಹಾಗೂ ಚಾರಿತ್ರವನ್ನು ಸಾಕಾರಗೊಳಿಸಿದವರು ಡಾ. ಹರಿದೇವ್ ಶರ್ಮಾ. ಪಂಜಾಬ್‌ನವರಾದ ಈ ಇತಿಹಾಸತಜ್ಞ 1966ರಲ್ಲಿ ಎನ್‌ಎಂಎಂಎಲ್ ಸ್ಥಾಪನೆಯಾದ ತುಸು ಸಮಯದಲ್ಲೇ ಅಲ್ಲಿ ಸೇರಿಕೊಂಡರು ಹಾಗೂ ಮೂರುದಶಕಗಳಿಗೂ ಹೆಚ್ಚು ಸಮಯ ಅಲ್ಲಿ ಕೆಲಸ ಮಾಡಿದರು. ಎನ್‌ಎಂಎಂಎಲ್‌ನ ಹಲವಾರು ಅತ್ಯಂತ ಮಹತ್ವದ ಸಂಗ್ರಹಗಳನ್ನು ಹರಿದೇವ್ ಶರ್ಮಾ ಅವರ ಕುಶಲತೆ, ಉದ್ಯಮಶೀಲತೆ ಹಾಗೂ ನಿಸ್ವಾರ್ಥತೆಯಿಂದಾಗಿ ಸಂಗ್ರಹಿಸಲಾಗಿದೆ. ಮೇಲೆ ಉಲ್ಲೇಖಿಸಲಾದ ಫೆರ್ನಾಂಡಿಸ್, ಜೆಪಿ ಹಾಗೂ ರಾಜಗೋಪಾಲಾಚಾರಿ ಅವರ ದಾಖಲೆಪತ್ರಗಳನ್ನು ಕೂಡಾ ಇವು ಒಳಗೊಂಡಿವೆ. ಮಹಾತ್ಮಾ ಗಾಂಧೀಜಿಯವರ ವಿಸ್ತೃತವಾದ ದಾಖಲೆಪತ್ರಗಳ ಸಂಗ್ರಹಗಳು ಕೂಡಾ ಸೇರಿವೆ. ವೌಖಿಕ ಇತಿಹಾಸ ದಾಖಲೆಗಳ ಸಂಗ್ರಹಗಳ ಮೇಲ್ವಿಚಾರಣೆಯನ್ನು ಕೂಡಾ ಶರ್ಮಾ ನೋಡಿಕೊಂಡಿದ್ದರು. ಇವುಗಳಲ್ಲಿ ಕೆಲವು ಖುದ್ದಾಗಿ ಅವರೇ ನಡೆಸಿದ್ದ ಸ್ವಾತಂತ್ರ ಹೋರಾಟಗಾರರ ಜೊತೆಗಿನ ಸಂದರ್ಶನಗಳು ಕೂಡಾ ಇವೆ.

2020ರ ಫೆಬ್ರವರಿಯಿಂದ ಡಿಸೆಂಬರ್‌ವರೆಗೆ ಎನ್‌ಎಂಎಂಎಲ್‌ನಿಂದ ಭೌತಿಕ ಸಂಪರ್ಕವನ್ನು ವಂಚಿತನಾದ ನಾನು ಓದುತ್ತಿದ್ದ ಹಸ್ತಪ್ರತಿಗಳ ಮೂಲಕ ಆ ಮಹಾನ್‌ಸಂಸ್ಥೆಯ ಜೊತೆ ನಂಟನ್ನು ಇಟುಕೊಂಡಿದ್ದ್ದೆ. ಫೆರ್ನಾಂಡಿಸ್ ಬಗ್ಗೆ ರಾಹುಲ್ ರಾಮಗುಂಡಂ ಜೊತೆ ಅಥವಾ ವಾಜಪೇಯಿ ಜೊತೆ, ಅಭಿಷೇಕ್ ಚೌಧರಿ ಜೊತೆ ಅಥವಾ ಜೆಪಿ ಬಗ್ಗೆ ಅಕ್ಷಯ್ ಮುಕುಲ್ ಜೊತೆ ಚರ್ಚಿಸುವಾಗ ಹರಿದೇವ್ ಶರ್ಮಾ ಅವರ ವ್ಯಕ್ತಿತ್ವ ಆಗಾಗ್ಗೆ ನನ್ನ ಮನಸ್ಸಿನಲ್ಲಿ ಮೂಡುತ್ತಿತ್ತು. ಆ ವ್ಯಕ್ತಿಯನ್ನು ಭೇಟಿಯಾಗಲು ಸಾಧ್ಯವಿಲ್ಲದಷ್ಟು ಕಿರಿಯವಯಸ್ಸಿನವರು ಇವರಾಗಿದ್ದಾರೆ. ಆದರೆ ಹರಿದೇವ್ ಶರ್ಮಾರಂತರ ಪತ್ರಾಗಾರ ತಜ್ಞರು ತಾವು ವಿದ್ವಾಂಸರಾಗಲು ಸಾಧ್ಯವಾಗಿದೆಯೆಂಬುದು ಅವರಿಗೆ ತಿಳಿದಿದೆ.

ಕುಳ್ಳಗೆ ಹಾಗೂ ಸ್ಥೂಲಕಾಯದ ಹರಿದೇವ್‌ಜಿ ಅವರು ಸದಾ ಬಿಳಿ ಹಾಗೂ ಖಾದಿ ಬಣ್ಣದ ಕುರ್ತಾ-ಪೈಜಾಮವನ್ನೇ ಧರಿಸುತ್ತಿದ್ದರು. ಸರಕಾರಿ ಕಾರನ್ನು ಖಡಾಖಂಡಿತವಾಗಿ ನಿರಾಕರಿಸಿದ್ದ ಅವರು ಸ್ವಂತ ಸ್ಕೂಟರ್‌ನ್ನು ಚಲಾಯಿಸಿಕೊಂಡು ಕಚೇರಿಗೆ ಬರುತ್ತಿದ್ದರು. ನಾನು ಈ ಲೇಖನವನ್ನು ಬರೆಯುವಾಗ, ಚಳಿಗಾಲದ ಬೆಳಗ್ಗಿನಲ್ಲಿ ನಮ್ಮಿಬ್ಬರ ಮಾತುಕತೆಯ ಚಿತ್ರವು ಕಣ್ಣಮುಂದೆ ಬರುತ್ತದೆ. ಆಟೊರಿಕ್ಷಾದಿಂದ ನಾನು ಇಳಿಯುತ್ತಿದ್ದಂತೆಯೇ, ಅವರು ವೆಸ್ಪಾವನ್ನು ಪಾರ್ಕ್ ಮಾಡಿ, ಹೆಲ್ಮೆಟ್ ತೆಗೆದಿಡುತ್ತಾರೆ. ನಾವಿಬ್ಬರು ಪರಸ್ಪರ ಎದುರಾದಾಗ, ಈ ರೀತಿಯ ಸಂಭಾಷಣೆ ಶುರುಹಚ್ಚಿಕೊಳ್ಳುತ್ತದೆ.

ಪತ್ರಾಗಾರತಜ್ಞ (ಹಿಂದಿಯಲ್ಲಿ): ‘‘ ಕಹೋ ರಾಮ್, ಕೈಸೆ ಹೋ? ಬೆಂಗಳೂರು ಸೆ ಕಬ್ ಆಯೆ?’’(ಹೇಳಿ ರಾಮ್, ಹೇಗಿದ್ದೀರಿ, ಬೆಂಗಳೂರಿನಿಂದ ಯಾವಾಗ ಬಂದಿರಿ)

ಸಂಶೋಧಕ: ‘‘ಮೇರಿ ಫ್ಲೈಟ್ ಕಲ್ ರಾತ್ ಕೊ ಪಹುಂಚಿ, ಹರಿದೇವ್‌ಜಿ’’ (ನನ್ನ ವಿಮಾನ ನಿನ್ನೆ ರಾತ್ರಿ ತಲುಪಿದೆ ಹರಿದೇವ್‌ಜಿ)

ಪತ್ರಾಗಾರತಜ್ಞ: ‘‘ ತೋ ಇಸ್ ಬಾರ್ ಕ್ಯಾ ದೇಖ್ ರಹೆ ಹೋ?’’ (ಈ ಬಾರಿ ಏನನ್ನು ನೋಡುತ್ತಿರುವಿರಿ?)

ಸಂಶೋಧಕ: ‘‘ಮೈನೆ ಗಾಂಧೀಜಿ ಕೆ ಡಿಸಿಪಲ್ಸ್ ಪರ್ ಕಾಮ್ ಸ್ಟಾರ್ಟ್ ಕರ್‌ನಾ ಚಾಹ್ತಾ ಹೂ’’

(ನಾನು ಗಾಂಧೀಜಿಯವರ ಶಿಷ್ಯಂದಿರ ಬಗ್ಗೆ ಕೆಲಸ ಮಾಡಲು ಬಯಸುತ್ತಿದ್ದೇನೆ)

ಪತ್ರಾಗಾರತಜ್ಞ: ‘‘ತಬ್ ಆವೋ ಮೇರೆ ಸಾಥ್ ಕಮರ್‌ಮೆ’’

(ಹಾಗಾದರೆ ನನ್ನ ಜೊತೆ ಕೊಠಡಿಗೆ ಬನ್ನಿ.)

ಒಂದು ವೇಳೆ ನಾನು ಹರಿದೇವ್‌ಜಿ ಜೊತೆ ಗ್ರಂಥಾಲಯದ ಮೆಟ್ಟಲುಗಳನ್ನು ಹತ್ತದೇ ಇರುತ್ತಿದ್ದರೆ, ನಾನು ಹಸ್ತಪ್ರತಿಗಳ ಕೊಠಡಿಯೆಡೆಗೆ ಮುಂದುವರಿಯುತ್ತಿದ್ದೆ, ಕತ್ತಲಲ್ಲೇ ಹುಡುಕಾಡುತ್ತಾ, ಯಾವುದೇ ಮಾರ್ಗದರ್ಶನವಿಲ್ಲದೆ ಅಥವಾ ನೆರವಿಲ್ಲದೆ ನನ್ನ ಸಂಶೋಧನೆ ಆರಂಭಿಸುತ್ತಿದ್ದೆ. ಈಗ ಅವರನ್ನು ಭೇಟಿಯಾಗಿದ್ದರಿಂದ ಮತ್ತು ಅವರು ನನ್ನನ್ನು ತನ್ನ ಕಚೇರಿಗೆ ಕೊಂಡೊಯ್ದಿದ್ದರಿಂದ ಎನ್‌ಎಂಎಂಎಲ್‌ನ ಸಂಗ್ರಹಗಳ ನಡುವೆ ಹೆಚ್ಚು ಲಾಭಕರವಾಗಿ ಕಳೆಯಲ್ಪಡುತ್ತಿತ್ತು. ಮಹಾತ್ಮಾ ಗಾಂಧೀಜಿಯವರ ಹತ್ಯೆಯ ಬಳಿಕ ಅವರ ನಿಕಟ ಅನುಯಾಯಿಗಳು ಏನು ಮಾಡಿದ್ದರು ಎಂಬುದನ್ನು ತಿಳಿಯಲು ಬಯಸಿದ್ದೀರಾ ಎಂದವರು ನನ್ನನ್ನು ಕೇಳಿದ್ದರು. ಒಂದು ವೇಳೆ ಹಾಗಿದ್ದರೆ ನಾನು ಅರ್ಥಶಾಸ್ತ್ರಜ್ಞ ಜೆ.ಸಿ.ಕುಮಾರಪ್ಪ ಅವರ ಸಂಗ್ರಹವನ್ನು ಪಡೆದುಕೊಳ್ಳಬೇಕಾಗಿದೆ, ವಿನೋಭಾ ಭಾವೆ ಹಾಗೂ ಮೀರಾ ಬೆಹನ್ ಜೊತೆಗಿನ ಅವರ ಪತ್ರವ್ಯವಹಾರದ ಬಗ್ಗೆ ಗಮನ ಕೇಂದ್ರೀಕರಿಸಬೇಕಾಗುತ್ತದೆ. ಆನಂತರ ನಾನು ಡಿ. ಜಿ. ತೆಂಡುಲ್ಕರ್ ಹಾಗೂ ಕಮಲನಯನ್ ಬಜಾಜ್ ಅವರ ದಾಖಲೆಪತ್ರಗಳಲ್ಲಿ ಒಳಗೊಂಡಿರುವ ಗಡಿನಾಡ ಗಾಂಧಿ ಖಾನ್ ಅಬ್ದುಲ್ ಗಫೂರ್ ಖಾನ್ ಅವರ ಕುರಿತಾದ ವಿಷಯಸಾಮಗ್ರಿಗಳನ್ನು ಪರಿಶೀಲಿಸಬೇಕಾಗುತ್ತದೆ. ಹೀಗೆ ಶಿಫಾರಸಾತ್ಮಕ ಸಲಹೆಗಳ ಪ್ರವಾಹವೇ ಹರಿದೇವ್‌ಜಿ ಅವರಿಂದ ಹರಿದುಬರುವುದರಿಂದ ಸಂಶೋಧಕರ ಕೆಲಸವನ್ನು ತುಂಬಾ ಸುಲಭಗೊಳಿಸುತ್ತದೆ.

ಹರಿದೇವ್ ಶರ್ಮಾ ಅವರು 1999ರಲ್ಲಿ ಎನ್‌ಎಂಎಂಎಲ್‌ನ ಉಪನಿರ್ದೇಶಕ ಹುದ್ದೆಯಿಂದ ನಿವೃತ್ತರಾದರು ಹಾಗೂ ಮಾರನೆಯ ವರ್ಷ ಅವರು ನಿಧನರಾದರು. ನಾನು ಎನ್‌ಎಂಎಂಎಲ್ ಅನ್ನು ಪ್ರವೇಶಿಸಿದಾಗಲೆಲ್ಲಾ ನಾನವರನ್ನು ಭೇಟಿಯಾದಂತೆ ಕಲ್ಪಿಸಿಕೊಳ್ಳುತ್ತಿದ್ದೆ. ಕೈಯಲ್ಲೊಂದು ಹೆಲ್ಮೆಟ್ ಹಾಗೂ ಸಲಹೆ, ಸೂಚನೆ ನೀಡುವುದಕ್ಕಾಗಿ ನನ್ನನ್ನು ಅವರ ಕೊಠಡಿಗೆ ಕೊಂಡೊಯ್ಯುತ್ತಿರುವುದು ಇವೆಲ್ಲಾ ಮನದಲ್ಲಿ ಮೂಡುತ್ತವೆ. ಆದರೆ 2020ರ 11 ತಿಂಗಳುಗಳು, ನನ್ನ ನೆಚ್ಚಿನ ಪತ್ರಾಗಾರದೊಳಗೆ ಕಾಲಿಡದೆ ಕಳೆದುಹೋದವು. ಪ್ರಾಯಶಃ ಇತ್ತೀಚಿನ ವರ್ಷಗಳಲ್ಲಿ ನೆಹರೂ ಸ್ಮಾರಕ ಗ್ರಂಥಾಲಯವು ಸ್ಥಿರವಾದ ಹಾಗೂ ಬಹುಶಃ ಬದಲಾಯಿಸಲು ಸಾಧ್ಯವಿಲ್ಲದಂತಹ ಅವನತಿಯೆಡೆಗೆ ಸಾಗಿದೆ. ನಿವೃತ್ತರಾದ ದಕ್ಷ ಪತ್ರಾಗಾರ ತಜ್ಞರ ಸ್ಥಾನಗಳು ತೆರವಾಗಿಯೇ ಉಳಿದಿವೆ. ಸಹೃದಯಿ ಭಾರತೀಯರು ದೇಣಿಗೆಯಾಗಿ ನೀಡಿರುವ ಮಹತ್ವದ ಸಂಗ್ರಹಗಳು ಪಟ್ಟಿ ಮಾಡಲ್ಪಡದೆಯೇ ಉಳಿದುಕೊಂಡಿವೆ. ಇದರ ಜೊತೆಗೆ ಎನ್‌ಎಂಎಂಎಲ್‌ನ ಆಡಳಿತವು ಅದರ ರಾಜಕೀಯ ದಣಿಗಳ ಅಣತಿಯಂತೆ ನಡೆದುಕೊಳ್ಳುತ್ತಿದ್ದು, ವಿದ್ವಾಂಸರು ಹಾಗೂ ಸಂಶೋಧನಾರ್ಥಿಗಳಿಗೆ ಅನಾದರ ತೋರುತ್ತಿದೆ. ಬದಲಿಗೆ ಹುಲ್ಲುಹಾಸಿನಲ್ಲಿ ದೈತ್ಯ ಕಟ್ಟಡವೊಂದನ್ನು ನಿರ್ಮಿಸುತ್ತಿದೆ. ಹೊಸದಿಲ್ಲಿಯಲ್ಲಿ ನಿರ್ಮಾಣ ಹಂತದಲ್ಲಿರುವ ಇತರ ಹಲವಾರು ಕೊಳಕು ರಚನೆಗಳಂತೆ ಇದು ಕೂಡಾ ಭಾರತ ಎಲ್ಲಾ ಪ್ರಧಾನಿಗಳನ್ನು ಗೌರವಿಸುವುದಕ್ಕಾಗಿ ಸ್ಥಾಪಿಸಲಾಗುವ ಮ್ಯೂಸಿಯಂ ಎನ್ನಲಾಗುತ್ತಿದೆ. ಸಂಕ್ಷಿಪ್ತವಾಗಿ ಹೇಳುವುದಾದರೆ ಬಹುಶಃ ಈ ಕಟ್ಟಡವು ಹಾಲಿ ಪ್ರಧಾನಿಯವರ ಪ್ರತಿಷ್ಠೆಗಾಗಿ ನಿರ್ಮಾಣವಾಗುತ್ತಿರುವ ಸ್ಮಾರಕವೆನ್ನಬಹುದಾಗಿದೆ.

ಪ್ರಧಾನಿ ನರೇಂದ್ರ ಮೋದಿಯವರ ಆಡಳಿತದ ವರ್ಷಗಳಲ್ಲಿ ಎದುರಾಗುವ ಅಪಾಯಗಳಿಂದ ಎನ್‌ಎಂಎಂಎಲ್ ಯಾವ ರೂಪ ಅಥವಾ ಆಕಾರದಲ್ಲಿ ಉಳಿದುಕೊಳ್ಳಬಹುದೆಂಬುದು ಯಾರಿಗೂ ತಿಳಿದಿಲ್ಲ. ಬೌದ್ಧಿಕ ಉತ್ಕೃಷ್ಟತೆಯ ಕೇಂದ್ರ, ಹರಿದೇವ್ ಶರ್ಮಾರಂತಹ ಮೇಧಾವಿ ಪತ್ರಾಗಾರ ಸಿಬ್ಬಂದಿಯನ್ನು ಹೊಂದಿದ್ದ, ಎಲ್ಲಾ ತಲೆಮಾರುಗಳ ವಿದ್ವಾಂಸರನ್ನು ಉಪಚರಿಸುವ ಹಾಗೂ ಸ್ವಾಗತಿಸುವ ಎನ್‌ಎಂಎಂಎಲ್ ಈಗ ವಿಷಾದಕರ ಹಾಗೂ ನಿಸ್ತೇಜವಾದ ಸ್ಥಳವಾಗಿ ಬದಲಾಗಿದೆ. ಎನ್‌ಎಂಎಂಎಲ್‌ನ ಉಚ್ಛ್ರಾಯದ ದಿನಗಳ ಅರಿವಿರುವ ಎಲ್ಲರಂತೆ ನಾನು ಕೂಡಾ ಅದೃಷ್ಟವಂತನೆನಿಸುತ್ತದೆ. ಅಲ್ಲಿ ಮಾಡಿಕೊಂಡಿದ್ದ ಟಿಪ್ಪಣಿಗಳ ಸಂಗ್ರಹವು ನನ್ನ ಜೀವನದುದ್ದಕ್ಕೂ ನನಗೆ ಆಧಾರವಾಗಲಿದೆ. ಇದೇ ವೇಳೆ ನಾನು ಈ ಪತ್ರಾಗಾರವನ್ನು ಆಳವಾಗಿ ಸಂಶೋಧಿಸಲು ಸಾಧ್ಯವಾದಷ್ಟು ಈಗಿನ ಯುವತಲೆಮಾರಿಗೆ ಅಥವಾ ಇನ್ನೂ ಜನಿಸಬೇಕಾದವರಿಗೆ ಇನ್ನು ಮುಂದೆ ಯಾವತ್ತೂ ಸಾಧ್ಯವಾಗಲಾರದು ಎಂಬ ತಪ್ಪಿತಸ್ಥ ಭಾವನೆಯೂ ನನ್ನನ್ನು ಕಾಡುತ್ತಿದೆ.

Writer - ರಾಮಚಂದ್ರ ಗುಹಾ

contributor

Editor - ರಾಮಚಂದ್ರ ಗುಹಾ

contributor

Similar News