ಪ್ರಜಾತಂತ್ರ ಮತ್ತು ಸ್ವತಂತ್ರ ಜನದನಿ

Update: 2021-02-06 19:30 GMT

ಇಂದು ದೇಶದ ಒಳಗೂ ಹೊರಗೂ ಸಂಭವಿಸುವ ಹಿಂಸೆ, ನಾಗರಿಕ ಹಕ್ಕುಗಳ ದಮನ, ಜನಾಂಗೀಯ ದ್ವೇಷ, ಸಾಮಾಜಿಕ ಶೋಷಣೆ, ಅಭಿವೃದ್ಧಿಯ ಸೋಗಿನಲ್ಲಿ ಹೆಚ್ಚುತ್ತಿರುವ ಆರ್ಥಿಕ ಅಸಮಾನತೆ ಮುಂತಾದವುಗಳು, ಓರ್ವ ಸಮಾಜಜೀವಿಯಾದ ನನ್ನನ್ನು ಸ್ವತಂತ್ರ ಚಿಂತನೆಗೆ ಉತ್ತೇಜಿಸುತ್ತವೆ. ಆ ಚಿಂತನೆಗೆ ಅಗತ್ಯವಾದ ಮೂಲಧಾತು ವಸ್ತುನಿಷ್ಠವಾದ ಮಾಹಿತಿ. ಈ ಮಾಹಿತಿಯ ಆಕರ ಸ್ವತಂತ್ರ ಮಾಧ್ಯಮಗಳು. ಪ್ರಜಾಪ್ರಭುತ್ವ ಜೀವಂತವಾಗಿರಲು ನಿಖರವಾದ ಮಾಹಿತಿ ಅಗತ್ಯ.

 ಈ ಮಾಹಿತಿಗೋಸ್ಕರ ದೇಶದ, ವಿದೇಶದ ಆಗುಹೋಗುಗಳ ಬಗ್ಗೆ ವಸ್ತುನಿಷ್ಠ ವಾರ್ತೆಗಳನ್ನು ಓದುವ ಮತ್ತು ಕೇಳುವ ಮೂಲಭೂತ ಹಕ್ಕು ನನಗಿದೆ. ಅವುಗಳನ್ನು ಕಾಲಕಾಲಕ್ಕೆ ಪ್ರಕಟಿಸುವ ಕರ್ತವ್ಯ ಮಾಧ್ಯಮಗಳದ್ದಾಗಿರುತ್ತದೆ. ಮಾಧ್ಯಮಗಳು ಜನರ ದನಿಗೆ ಸ್ಪಂದಿಸುವ ಮತ್ತು ಅವರ ದನಿಯೂ ಆಗುವ ಜವಾಬ್ದಾರಿಯನ್ನು ಹೊಂದಿವೆ. ಈ ದಿಕ್ಕಿನಲ್ಲಿ ಪ್ರಮುಖ ಮಾಧ್ಯಮಗಳು ಇತ್ತೀಚೆಗೆ ಕರ್ತವ್ಯ ವಿಮುಖವಾಗಿವೆ ಎಂಬುದು ಖೇದಕರ ಬೆಳವಣಿಗೆ. ಅಧಿಕಾರವರ್ಗದ, ಶ್ರೀಮಂತರ, ಬಲಶಾಲಿಗಳ ಹಿಡಿತಕ್ಕೆ ಒಳಗಾಗಿರುವ ಅನೇಕ ಮುಖ್ಯವಾಹಿನಿಯ ಪತ್ರಿಕೆಗಳು ಮತ್ತು ಟಿವಿ ಚಾನೆಲ್‌ಗಳು ವಾಸ್ತವದ ಚಿತ್ರಣದಿಂದ ವಿಮುಖವಾಗಿ ನಂಬಿಕೆಗೆ ಅನರ್ಹವಾಗಿವೆ. ಸಾಮಾಜಿಕ ಜಾಲತಾಣದ ಮಾಧ್ಯಮಗಳೂ ಬಹುತೇಕ ಅದೇ ತಾಳಕ್ಕೆ ಸರಿಯಾಗಿ ವರ್ತಿಸುತ್ತವೆ.

ಇದಕ್ಕೆ ಒಂದು ಜ್ವಲಂತ ಉದಾಹರಣೆ, ದೇಶದಲ್ಲಿ ಅದರಲ್ಲೂ ಉತ್ತರ ಭಾರತದಲ್ಲಿ ಕೆಲವು ತಿಂಗಳುಗಳಿಂದ ನಡೆಯುತ್ತಿರುವ ಶಾಂತಿಯುತವಾದ ರೈತರ ಪ್ರತಿಭಟನೆ. ನಮ್ಮ ದೇಶದ, ನಾಗರಿಕತೆಯ ಮತ್ತು ಸಂಸ್ಕೃತಿಯ ಬೆನ್ನೆಲುಬಾದ ಕೃಷಿ ಮತ್ತು ಅದರಲ್ಲಿ ತಮ್ಮ ಬದುಕನ್ನು ಕಾಣುತ್ತಲೇ ದೇಶಕ್ಕೆ ಆಹಾರ ಭದ್ರತೆಯನ್ನೂ ಒದಗಿಸುವ ರೈತಬಂಧುಗಳ ಚಳವಳಿಯ ಕುರಿತಾದ ನಿಖರ ಮಾಹಿತಿಯನ್ನು ನೀಡುವಲ್ಲಿ ಮುಖ್ಯವಾಹಿನಿಯ ಮಾಧ್ಯಮಗಳು ವಿಫಲವಾಗಿವೆ. ಈ ಹಿನ್ನೆಲೆಯಲ್ಲಿ ನಾನು ಗಮನಿಸಿದ ಅಪರೂಪದ ಮಾಧ್ಯಮ ಕನ್ನಡದ ‘ವಾರ್ತಾಭಾರತಿ’.

ಅದರ ಮುದ್ರಣ ಸಂಚಿಕೆಗಳಲ್ಲಿ, ಯೂಟ್ಯೂಬಿನಲ್ಲಿ, ವೆಬ್ ಮಾಧ್ಯಮದಲ್ಲಿ, ವಾಟ್ಸ್‌ಆ್ಯಪ್ ಮತ್ತು ಫೇಸ್‌ಬುಕ್ ಅವತರಣಿಕೆಗಳಲ್ಲಿ ದಿಲ್ಲಿ ಮತ್ತು ಅದರ ಗಡಿ ಪ್ರದೇಶಗಳಲ್ಲಿ ಆಗುತ್ತಿರುವ ಬೆಳವಣಿಗೆಗಳನ್ನು ಓದಿದ್ದೇನೆ. ಕೆಲವೇ ಸ್ವತಂತ್ರ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ವಿದ್ಯುನ್ಮಾನ ಮಾಧ್ಯಮಗಳಲ್ಲಿ ಕಾಣಬಹುದಾದ ಸಮಯ ಪ್ರಜ್ಞೆ, ವಸ್ತುನಿಷ್ಠತೆ ಮತ್ತು ಪ್ರಜಾತಂತ್ರದ ಮೌಲ್ಯಗಳಿಗೆ ಒತ್ತುನೀಡುವ ಬದ್ಧತೆಯನ್ನು ‘ವಾರ್ತಾಭಾರತಿ’ಯ ವರದಿಗಳಲ್ಲಿ ನಾನು ಗಮನಿಸಿದ್ದೇನೆ.

ದಿಲ್ಲಿಯಲ್ಲಿ ಗಣರಾಜ್ಯೋತ್ಸವದಂದು ನಡೆದ ಟ್ರಾಕ್ಟರ್ ಪೆರೇಡ್, ಶಿಂಘು, ಘಾಝಿಪುರ, ಟಿಕ್ರಿ ಮುಂತಾದೆಡೆಗಳಲ್ಲಿ ಆಗುತ್ತಿರುವ ವಿದ್ಯಮಾನಗಳು, ಅಲ್ಲಿನ ಚಳವಳಿಯಲ್ಲಿ ಭಾಗವಹಿಸುತ್ತಿರುವ ಮಹಿಳೆಯರ, ಹಿರಿಯ ನಾಗರಿಕರ, ನಿವೃತ್ತ ಸೈನಿಕರ, ದೈನಂದಿನದ ಬವಣೆಯ ಹೊರತಾಗಿಯೂ ಅವರಲ್ಲಿರುವ ಬದ್ಧತೆ, ಶಾಂತಿಪ್ರಿಯತೆ ಹಾಗೂ ಸಮಕಾಲೀನ ಸಾಮಾಜಿಕ ಪ್ರಜ್ಞೆಗಳ ಕುರಿತಾದ, ಅದೇ ರೀತಿ ಉತ್ತರ ಪ್ರದೇಶ, ಹರ್ಯಾಣ ಮತ್ತು ರಾಜಸ್ಥಾನದಲ್ಲಿನ ರೈತ ಪಂಚಾಯತ್‌ಗಳ ಬಗ್ಗೆ ನೇರ ವರದಿಗಳು, ನಾಡಿನ ಇತರ ಪತ್ರಿಕೆಗಳಲ್ಲಾಗಲೀ ಕಾಣಸಿಗುವುದು ವಿರಳ.

ಗಂಭೀರವಾಗಿ ಗಮನ ಸೆಳೆಯಬೇಕಾದ ಈ ವಿಷಯಗಳು ಕನ್ನಡದ ಮುಖ್ಯವಾಹಿನಿಯಲ್ಲಿ ಮೂಲೆಗೆ ಅಥವಾ ನೇಪಥ್ಯಕ್ಕೆ ಸರಿದಾಗ ಅವುಗಳನ್ನು ನಮ್ಮ ರಾಜ್ಯದಲ್ಲಿ ಕಾಲಕಾಲಕ್ಕೆ ಬೆಳಕಿಗೆ ತಂದ ಹಿರಿಮೆ ‘ವಾರ್ತಾಭಾರತಿ’ ಬಳಗಕ್ಕೆ ಸಲ್ಲಬೇಕು. ದುಡಿಯುವ, ಶೋಷಿತರ, ದುರ್ಬಲರ ಮತ್ತು ಮಹಿಳೆಯರ ಮೇಲಾಗುವ ಶೋಷಣೆ ಮತ್ತು ಅದಕ್ಕೆ ಸಂಬಂಧಿಸಿದ ಬೆಳವಣಿಗೆಗಳ ಬಗ್ಗೆ ನಿಷ್ಪಕ್ಷವಾದ ವರದಿಗಳನ್ನು ಕೊಡುವ ಕೆಲಸವನ್ನೂ ‘ವಾರ್ತಾಭಾರತಿ’ ಮಾಡುವುದನ್ನು ನಾನು ಗಮನಿಸಿದ್ದೇನೆ.
ವರದಿಗಳೂ ಅಲ್ಲದೆ, ನಾಡಿನ ಖ್ಯಾತ ಲೇಖಕರು ಆಗಾಗ ‘ವಾರ್ತಾಭಾರತಿ’ಯಲ್ಲಿ ಬರೆಯುತ್ತಿರುವ, ನೀಡುವ ಸಮಕಾಲೀನ ಸಾಮಾಜಿಕ ಸವಾಲುಗಳ ಕುರಿತಾದ ವಿಶ್ಲೇಷಣೆಗಳು ನಮ್ಮನ್ನು ಚಿಂತನೆಗೆ ಒಡ್ಡುತ್ತವೆ.
ಪತ್ರಿಕೆಯ ವರದಿಗಳಲ್ಲಿ ಮತ್ತು ಲೇಖನಗಳಲ್ಲಿ ಭಾಷೆಯ ಹಿಡಿತ ಮತ್ತು ವಸ್ತು ನಿಷ್ಠತೆಗೆ ಒತ್ತು ನೀಡುವುದು ಒಂದು ಗಮನಾರ್ಹವಾದ ವಿಷಯ. ಈ ದೃಷ್ಟಿಯಿಂದಲೂ ‘ವಾರ್ತಾಭಾರತಿ’ಯ ಕೊಡುಗೆ ಅನನ್ಯ.
ಸ್ವತಂತ್ರ ಚಿಂತನೆ ಮತ್ತು ವಸ್ತುನಿಷ್ಠ ವಿಶ್ಲೇಷಣೆಯ ಮಹತ್ವವನ್ನು ನನ್ನದೇ ಅನುಭವಗಳಿಂದ ಸಾಧ್ಯವಾದಷ್ಟು ಮಟ್ಟಿಗೆ ಅರಿತಿದ್ದೇನೆ, ಈ ಮೌಲ್ಯಗಳನ್ನು ಅನುಸರಿಸಲು ಸದಾ ಪ್ರಯತ್ನಿಸುತ್ತಿರುತ್ತೇನೆ. ನನ್ನ ಈ ದೃಷ್ಟಿಕೋನಕ್ಕೆ ಕನ್ನಡದ ‘ವಾರ್ತಾಭಾರತಿ’ ಪೂರಕವಾಗಿದೆ ಎಂಬ ಅನುಭವದ ಹಿನ್ನೆಲೆಯಲ್ಲಿ ಅದಕ್ಕೆ ಓದುಗರ, ಪ್ರಜ್ಞಾವಂತರ, ಚಿಂತನಶೀಲರ ಬೆಂಬಲ ಅತೀ ಅಗತ್ಯ ಎಂದು ನನ್ನ ನಂಬಿಕೆ.

(ಟಿ. ಆರ್. ಭಟ್ ಅವರು ಕಾರ್ಪೊರೇಷನ್ ಬ್ಯಾಂಕ್ ಅಧಿಕಾರಿಗಳ ಸಂಘದ ಮಾಜಿ ಅಧ್ಯಕ್ಷರು, ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಒಕ್ಕೂಟದ ಮಾಜಿ ಜಂಟಿ ಪ್ರಧಾನ ಕಾರ್ಯದರ್ಶಿ, ಬ್ಯಾಂಕಿಂಗ್ ಹಾಗೂ ಆರ್ಥಿಕ ವಿಷಯಗಳ ಪರಿಣತರು, ಹಿರಿಯ ಲೇಖಕರು)

Writer - ಟಿ. ಆರ್. ಭಟ್

contributor

Editor - ಟಿ. ಆರ್. ಭಟ್

contributor

Similar News