ದೂರದೃಷ್ಟಿ, ಸಂವೇದನೆ ಇಲ್ಲದ 2021ರ ಬಜೆಟ್
ಭಾಗ-2
ದೇಶದ ಸಾಮಾನ್ಯ ಪ್ರಜೆಗಳ ದೃಷ್ಟಿಯಿಂದ ನಾಲ್ಕು ಪ್ರಮುಖ ಕ್ರಮಗಳನ್ನು ಸರಕಾರ ಬಜೆಟ್‌ನಲ್ಲಿ ಘೋಷಿಸಬಹುದೆಂಬ ನಿರೀಕ್ಷೆ ಇತ್ತು:
1. ಸಾರ್ವಜನಿಕ ಆರೋಗ್ಯ ರಕ್ಷಣೆ ಮತ್ತು ಸುಧಾರಣೆಗೆ ದೂರಗಾಮಿ ಯೋಜನೆಗಳು.
2. ಕೋವಿಡ್ ಸಂಬಂಧಿತ ಕಾರಣಗಳಿಂದ ನಷ್ಟವಾದ ಬದುಕುಗಳ ಚೇತರಿಕೆಗೆ ಕ್ರಮಗಳು.
3. ನಿರುದ್ಯೋಗ ಪರಿಹಾರಕ್ಕೆ ಗುರಿಯಾಧಾರಿತ ನಿರ್ದಿಷ್ಟ ಯೋಜನೆಗಳು ಮತ್ತು
4. ಆರ್ಥಿಕ ಭದ್ರತೆಗೆ ಪೂರಕವಾಗಬಲ್ಲ ದೂರಗಾಮಿ ಯೋಜನೆಗಳು.
ಈ ನಾಲ್ಕು ಗುರಿಗಳನ್ನು ತಲುಪುವ ತುರ್ತಿನಲ್ಲಿ ಬಜೆಟ್‌ನಲ್ಲಿ ಘೋಷಿಸಿದ ವಿಭಿನ್ನ ಯೋಜನೆಗಳ ಮೌಲ್ಯಮಾಪನವನ್ನು ಮಾಡಬೇಕು.
ಸಾರ್ವಜನಿಕ ಆರೋಗ್ಯ
ದೇಶದ ಅಸಮರ್ಪಕ ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಮತ್ತು ಅದರ ಮೇಲೆ ಕೋವಿಡ್ ಸಾಂಕ್ರಾಮಿಕದಿಂದಾದ ತೀವ್ರ ಹೊಡೆತವನ್ನು ಗಮನದಲ್ಲಿರಿಸಿ ಸರಕಾರದ ಆರ್ಥಿಕ ಸಮೀಕ್ಷೆ ಆರೋಗ್ಯ ಕ್ಷೇತ್ರಕ್ಕೆ ಕೊಡಮಾಡುವ ವೆಚ್ಚದ ಪ್ರಮಾಣವನ್ನು ಜಿಡಿಪಿಯ ಪ್ರಸಕ್ತ ಶೇ. 1ರಿಂದ 3ಕ್ಕೆ ಏರಿಸಬೇಕೆಂದು ಸಲಹೆ ನೀಡಿತ್ತು. ಇದು 2017ರಲ್ಲಿ ಹೊರತಂದ ರಾಷ್ಟ್ರೀಯ ಆರೋಗ್ಯ ನೀತಿಯ ಪ್ರಸ್ತಾವವೂ ಆಗಿತ್ತು. ಇದಕ್ಕೆ ವಿರುದ್ಧವಾಗಿ ಆರೋಗ್ಯ ಸೇವೆಗಳಿಗೆ ನಿಗದಿಪಡಿಸಲಾದ ವೆಚ್ಚ ಶೇ. 0.34. ಅಂಕಿಗಳ ಪ್ರಕಾರ 2020-21ರ ಪರಿಷ್ಕೃತ ಅಂದಾಜು ವೆಚ್ಚ ರೂ. 85,089 ಕೋಟಿಗಿಂತ ಈ ಬಜೆಟ್‌ನಲ್ಲಿ ಮೀಸಲಿರಿಸಿರುವ ಹಣ ಕೇವಲ ರೂ. 73,932 ಕೋಟಿ. ಹಿಂದಿನ ಬಜೆಟ್‌ನಲ್ಲಿ ಮೀಸಲಿರಿಸಿದ ವೆಚ್ಚವಾದ ರೂ. 67,484 ಕೋಟಿಗೆ ಈ ಬಜೆಟ್‌ನಲ್ಲಿ ಕೊಡಲಾಗುವ ರೂ. 73,932 ಕೋಟಿಗೆ ಹೋಲಿಸಿ ಶೇಕಡಾ 10ರಷ್ಟು ಹೆಚ್ಚಿಸಲಾಗಿದೆ ಎಂದು ಮಾನ್ಯ ಸಚಿವೆ ಘೋಷಿಸಿದ್ದಾರೆ. ಇದು ಅಂಕಿ-ಸಂಖ್ಯೆಗಳ ಮೂಲಕ ಮಾಡುವ ಕಸರತ್ತು ಅಷ್ಟೆ!
ಜೊತೆಗೆ ಆರೋಗ್ಯಕ್ಕೆ ಮಹತ್ವನೀಡುವ ಉದ್ದೇಶದಿಂದ ‘ಪ್ರಧಾನ ಮಂತ್ರಿ ಆತ್ಮ ನಿರ್ಭರ ಸ್ವಾಸ್ಥ್ಯ ಯೋಜನೆ’ಯೆಂಬ ಹೊಸ ಯೋಜನೆಯ ಘೋಷಣೆಯೂ ಆಗಿದೆ. ಇದರ ಗುರಿ ಪ್ರಾಥಮಿಕ ಮತ್ತು ಎರಡನೇ ಸ್ತರದಲ್ಲಿ ಆರೋಗ್ಯ ಸೌಕರ್ಯಗಳ ಸಾಮರ್ಥ್ಯವನ್ನು ಹೆಚ್ಚಿಸುವುದು. ಇದಕ್ಕೆ ಮೀಸಲಿರಿಸಿದ ಹಣ ರೂ. 64,180 ಕೋಟಿ. ಆದರೆ ಈ ವೆಚ್ಚ ಮುಂದಿನ 6 ವರ್ಷಗಳ ಅವಧಿಯಲ್ಲಿ, ಅಂದರೆ ವಾರ್ಷಿಕ ಸರಾಸರಿ ರೂ. 10,700 ಕೋಟಿ. ದೇಶದಾದ್ಯಂತ ಸಾರ್ವಜನಿಕ ಆರೋಗ್ಯ ಕೇಂದ್ರಗಳನ್ನು ಅಲ್ಲಿನ ಮೂಲಸೌಕರ್ಯಗಳನ್ನು ಹೆಚ್ಚಿಸಲು ಇಷ್ಟು ಸಾಕೆ? ಸಾಮಾನ್ಯ ಸಂದರ್ಭಗಳಲ್ಲಿ ಇದನ್ನು ಒಪ್ಪಬಹುದಾದರೂ ಈಗಿನ ಗಂಭೀರವಾದ ಆರೋಗ್ಯದ ಪರಿಸ್ಥಿತಿಯಲ್ಲಿ ಸರಕಾರ ಮೀಸಲಿರಿಸಿದ ಹಣದ ಪ್ರಮಾಣವು ಜನ ಸಾಮಾನ್ಯರ ಆರೋಗ್ಯರಕ್ಷಣೆಗೆ ಸರಕಾರದ ಬದ್ಧತೆಯ ಕುರಿತಾದ ನೈಜ ಚಿತ್ರಣವನ್ನು ನೀಡುತ್ತದೆ.
ಬದುಕುಗಳ ಉಳಿವಿಗೆ ಕ್ರಮ
ಈಗಾಗಲೇ ಹೇಳಿದಂತೆ ಲಾಕ್‌ಡೌನ್ ಮತ್ತು ನಂತರದ ದಿನಗಳಲ್ಲಿ ವಲಸೆಹೋಗಿ ಜೀವನೋಪಾಯಕ್ಕೆ ದಾರಿ ಇಲ್ಲದೆ ಬದುಕು ದುಸ್ತರವಾದ ಕೋಟ್ಯಂತರ ನಾಗರಿಕರ ಹಸಿವು ನೀಗಿಸುವ ತುರ್ತು ಕ್ರಮ ಬೇಕಾಗಿತ್ತು. ಅಮೆರಿಕದಂತಹ ಮುಂದುವರಿದ ದೇಶದಲ್ಲಿ ಪ್ರಮುಖ ರಾಜಕೀಯ ಪಕ್ಷಗಳು ಉದ್ಯೋಗ ಕಳಕೊಂಡು ಜೀವನ ದುರ್ಭರವಾದ ನಾಗರಿಕರಿಗೆ ಕನಿಷ್ಠ 900ರಿಂದ 2,000ದಷ್ಟು ಡಾಲರ್ ಪರಿಹಾರ ನೀಡುವ ಯೋಜನೆಯನ್ನು ಮಾಡಿದ್ದು ಅನುಕರಣೀಯ. ನಮ್ಮ ದೇಶದಲ್ಲಿ ವಿಭಿನ್ನ ಕ್ರಮಗಳ ಮೂಲಕ ಸಮಾಜದಲ್ಲಿ ತಳಮಟ್ಟದಲ್ಲಿರುವ ಬದುಕು ದುಸ್ತರವಾದ ನಾಗರಿಕರಿಗೆ ಮುಂದಿನ 6-12 ತಿಂಗಳುಗಳ ತನಕ ಕನಿಷ್ಠ ಸಹಾಯ ಧನ ನೀಡುವ ಕ್ರಮವನ್ನು ಬಜೆಟ್ ಮೂಲಕ ತರಬೇಕಾಗಿತ್ತು. ಇದಕ್ಕೆ ಸಂಪನ್ಮೂಲಗಳ ಜೋಡಣೆ ದೊಡ್ಡ ಸವಾಲಾಗುತ್ತಿರಲಿಲ್ಲ. ತಾತ್ಕಾಲಿಕವಾಗಿ ಉಳ್ಳವರ ಮೇಲೆ ತುಸು ಉಪಕರಗಳನ್ನು ಹೇರಿ ಅಥವಾ ಅತಿ ಶ್ರೀಮಂತರ ಮೇಲೆ ಹೆಚ್ಚಿನ ಕರ ವಿಧಿಸಿ ಸಂಪನ್ಮೂಲವನ್ನು ಪೇರಿಸಬಹುದಿತ್ತು. ಅಷ್ಟಕ್ಕೂ ಅನೇಕ ವರದಿಗಳ ಪ್ರಕಾರ ಕೋವಿಡ್ ಆರಂಭವಾದ 8-9 ತಿಂಗಳುಗಳಲ್ಲಿ ದೇಶದ ಅತಿ ಶ್ರೀಮಂತರ ಆದಾಯವೂ, ಸಂಪತ್ತೂ ಗಗನಕ್ಕೇರಿದೆ. ಬಜೆಟ್‌ನಲ್ಲಿ ಘೋಷಿಸಿದ ಹೊಸ ಯೋಜನೆಗಳಿಂದ ಆರ್ಥಿಕತೆ ಮತ್ತೆ ಹಳಿಗೇರಲು ಬಹಳ ಸಮಯ ಬೇಕು. ಆ ಅವಧಿಯಲ್ಲಿ ಸಂಪಾದನೆಯ ಮಾರ್ಗ ಕಳಕೊಂಡವರು ಬದುಕಲು ಅಲ್ಪಾವಧಿಯ ಧನಸಹಾಯವನ್ನು ಬಜೆಟ್‌ನಲ್ಲಿ ಕಲ್ಪಿಸಬಹುದಾಗಿತ್ತು.
ನಿರುದ್ಯೋಗ ಪರಿಹಾರ
10 ಕೋಟಿಗಿಂತಲೂ ಹೆಚ್ಚಿರುವ ನಿರುದ್ಯೋಗಿಗಳಿಗೆ ನಿಯಮಿತ ಕಾಲಾವಧಿಯೊಳಗೆ ಉದ್ಯೋಗ ಸೃಷ್ಟಿ ಮಾಡುವ ನಿರ್ದಿಷ್ಟವಾದ ಯೋಜನೆ ಈ ಬಜೆಟ್‌ನಲ್ಲಿ ಇಲ್ಲ. ಬೇರೆ ಬೇರೆ ಉದ್ಯೋಗ ಖಾತರಿ ಯೋಜನೆಗಳಿಗೆ ಇನ್ನೂ ಹೆಚ್ಚು ಪ್ರಾಶಸ್ತ್ಯ ಕೊಟ್ಟು ಅತ್ಯಂತ ಕೆಳಹಂತದಲ್ಲಿರುವ ಕಾರ್ಮಿಕರಿಗೆ ಬದುಕುವ ಆಸರೆಯನ್ನು ಕೊಡಲು ಸಾಧ್ಯವಿತ್ತು. ಬೃಹತ್ ಪ್ರಮಾಣದ ರೈಲು ಮಾರ್ಗ ಮತ್ತು ರಾಷ್ಟ್ರೀಯ ಹೆದ್ದಾರಿ ಯೋಜನೆಗಳು ಅಗತ್ಯ, ಆದರೆ ಅವುಗಳ ಜೊತೆಗೆ ಗ್ರಾಮೀಣ ಮತ್ತು ಸಣ್ಣ ಪಟ್ಟಣಗಳಲ್ಲಿ ಮೂಲಸೌಕರ್ಯಗಳ ಅಭಿವೃದ್ಧಿ ಯೋಜನೆಗಳಿಗೆ ಮಹತ್ವ ನೀಡಿದ್ದರೆ ಗ್ರಾಮೀಣ ಉದ್ಯೋಗಗಳೂ ಸೃಷ್ಟಿಯಾಗುತ್ತಿದ್ದವು, ಹಳ್ಳಿಗಳಲ್ಲಿ ಮೂಲ ಸೌಕರ್ಯಗಳೂ ಹೆಚ್ಚುತ್ತಿದ್ದವು. ಗ್ರಾಮೀಣ ರಸ್ತೆ ಮತ್ತು ಗೃಹ ನಿರ್ಮಾಣ ಯೋಜನೆಗಳಿಗೆ ಹೆಚ್ಚು ಆದ್ಯತೆ ಕೊಡುವ ಮೂಲಕ ನಿರುದ್ಯೋಗಿಗಳ ಸಂಖ್ಯೆಯನ್ನು ಕಡಿಮೆ ಮಾಡಲು ಸಾಧ್ಯವಿತ್ತು. ಆಶ್ಚರ್ಯವೆಂದರೆ ನರೇಗಾಕ್ಕೆ (ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಗೆ) 2020-21ರ ಕೋವಿಡ್ ಪೂರ್ವದಲ್ಲಿ ನಿಗದಿಮಾಡಿದ ರೂ. 1,11,500 ಕೋಟಿಯ ಬದಲಾಗಿ ಈ ಬಾರಿ ಕೇವಲ ರೂ. 73,000 ಕೋಟಿ ಮೊಬಲಗನ್ನು ನಿಗದಿಪಡಿಸಲಾಗಿದೆ. ಹಾಗಿದ್ದರೆ ನಮ್ಮದೇ ಪ್ರಜೆಗಳಿಗೆ ಬದುಕುವ ದಾರಿ ಒದಗಿಸುವ ಜವಾಬ್ದಾರಿ ಅವರೇ ಚುನಾಯಿಸಿದ ಸರಕಾರಕ್ಕೆ ಇಲ್ಲವೇ?
ಆರ್ಥಿಕ ಭದ್ರತೆ
ಮೇಲೆ ಸೂಚಿಸಿದ ಅಲ್ಪಾವಧಿಯ ನಿರ್ದಿಷ್ಟ ಕ್ರಮಗಳಲ್ಲದೆ, ದೀರ್ಘಾವಧಿಯ ಆರ್ಥಿಕ ಯೋಜನೆಗಳ ಅಗತ್ಯವೂ ದೇಶಕ್ಕಿದೆ. ಅವುಗಳ ಮೂಲಕ ಸಂಪನ್ಮೂಲಗಳ ಜೋಡಣೆ ಮತ್ತು ಬಂಡವಾಳದ ವಿನಿಯೋಗ, ಸರಕುಗಳ ಉತ್ಪಾದನೆ, ಮೂಲಸೌಕರ್ಯಗಳು, ಸೇವಾ ರಂಗಗಳು, ಸಣ್ಣ ಮತ್ತು ಮಧ್ಯಮ ಉದ್ದಿಮೆಗಳು ಸ್ಥಾಪನೆ ಮತ್ತು ಬೆಳವಣಿಗೆ-ಹೀಗೆ ವಿಭಿನ್ನ ಕ್ಷೇತ್ರದ ಚಟುವಟಿಕೆಗಳು ಚೇತರಿಸಿ ಸ್ಥಗಿತಗೊಂಡ ಆರ್ಥಿಕತೆಗೆ ಹೊಸ ಜೀವ ತುಂಬಬೇಕಿತ್ತು. ಅವು ಆರ್ಥಿಕ ಸ್ವಾವಲಂಬನೆ, ನಿರುದ್ಯೋಗ ನಿವಾರಣೆ ಮತ್ತು ಅರ್ಥವ್ಯವಸ್ಥೆಯ ಸ್ಥಿರತೆಯನ್ನು ಭದ್ರಪಡಿಸಲು ಅಗತ್ಯವಾದ ಮಾರ್ಗಗಳು. ಬಜೆಟ್‌ನಲ್ಲಿ ಸರಕಾರ ಘೋಷಿಸಿದ ಪ್ರಮುಖ ನಿರ್ಧಾರಗಳು ಈ ಗುರಿಗಳನ್ನು ತಲುಪುವತ್ತ ಫಲಕಾರಿಯಾಗಬಹುದೇ ಎಂಬ ಪ್ರಶ್ನೆ ಏಳುತ್ತದೆ. ಕೆಲವು ಕ್ಷೇತ್ರಗಳ ಬಗ್ಗೆ ಬಜೆಟ್ ಏನು ಹೇಳಿದೆ? ಈಗಾಗಲೇ ಹೋರಾಟದ ಹಾದಿ ಹಿಡಿದ ರೈತರ ಮತ್ತು ದೇಶದ ಬೆನ್ನೆಲುಬಾದ ಕೃಷಿ ಕ್ಷೇತ್ರಕ್ಕೆ ದೀರ್ಘಕಾಲೀನ ನೀತಿಯ ಉಲ್ಲೇಖವೇ ಇಲ್ಲ. ಕೃಷಿ ಉತ್ಪನ್ನಗಳ ಕುರಿತಂತೆ ಮುಕ್ತ ಮಾರುಕಟ್ಟೆಗೆ ತನ್ನ ಒಲವನ್ನು ಮತ್ತೆ ಒತ್ತಿ ಹೇಳಿದ ಸರಕಾರ ಅವರ ನಿರಂತರ ಸಮಸ್ಯೆಗಳಾದ ಬೆಂಬಲ ಬೆಲೆ, ವಿಶ್ವಾಸಾರ್ಹವಾದ ಹಣಕಾಸಿನ ವ್ಯವಸ್ಥೆಗಳ ಬಗ್ಗೆ ಗಮನ ಹರಿಸಿಲ್ಲ. ಸ್ವಾಮಿನಾಥನ್ ಆಯೋಗದ ಶಿಫಾರಸುಗಳನ್ನು ಕಾರ್ಯರೂಪಕ್ಕೆ ತರುವ ಸೂಚನೆಗಳಿಲ್ಲ.
ನೋಟುರದ್ದತಿ ಮತ್ತು ಜಿಎಸ್‌ಟಿಯಿಂದ ನೆಲಕಚ್ಚಿದ ಕಿರು ಮತ್ತು ಸಣ್ಣ ಉದ್ದಿಮೆಗಳನ್ನು ಪ್ರೋತ್ಸಾಹಿಸಲು 2019ರ ಉತ್ತರಾರ್ಧದಲ್ಲಿ ಕೇಂದ್ರ ಸರಕಾರವು ಸರಕಾರಿ ಬ್ಯಾಂಕುಗಳ ಮೇಲೆ ಸಾಲನೀಡಲು ಒತ್ತಡ ಹೇರಿಯೂ ಪರಿಸ್ಥಿತಿ ಸುಧಾರಿಸಿರಲಿಲ್ಲ. ಕೊರೋನ ಹೊಡೆತಕ್ಕೆ ಬೀಗ ಜಡಿದ ಸಣ್ಣ ಉದ್ದಿಮೆಗಳನ್ನು ಉದ್ಧರಿಸುವ ಮಾರ್ಗವನ್ನು ಬಜೆಟ್ ಸೂಚಿಸಿಲ್ಲ. ನಿರುದ್ಯೋಗ ಪರಿಹಾರಕ್ಕೆ ಅಗತ್ಯವಾದ ದಾರಿಯನ್ನು ಸರಕಾರ ಆಯ್ಕೆ ಮಾಡಿದಂತಿಲ್ಲ. ಉತ್ಪಾದನಾ ರಂಗಗಳ ಪುನಃಶ್ಚೇತನವನ್ನು ದೊಡ್ಡ ದೊಡ್ಡ ಖಾಸಗಿ ಉದ್ದಿಮೆಗಳ ವಿವೇಚನೆಗೆ ಬಿಡಲಾಗಿದೆ. ಆರ್ಥಿಕ ಚೇತರಿಕೆಗೆ ಮೂಲವಾದ ಬ್ಯಾಂಕಿಂಗ್ ರಂಗದಲ್ಲಿ ಏನು ಹೊಸತಿದೆ? ತನ್ನ ಬೊಕ್ಕಸದಿಂದ ಸರಕಾರಿ ಬ್ಯಾಂಕುಗಳಿಗೆ ಅವುಗಳ ಬಂಡವಾಳವನ್ನು ಹೆಚ್ಚಿಸಲು ರೂ. 20,000 ಕೋಟಿಯ ಅನುದಾನ ನೀಡಲಾಗುವುದು. 2 ಸರಕಾರಿ ಬ್ಯಾಂಕುಗಳನ್ನು ಖಾಸಗಿ ರಂಗಕ್ಕೆ ಮಾರಲಾಗುವುದು. ಕೈಗಾರಿಕೆಗಳಿಗೆ ಸಾಲ ನೀಡಲು ಹೊಸ ಒಂದು ಅಭಿವೃದ್ಧಿ ಹಣಕಾಸು ಬ್ಯಾಂಕನ್ನು (Development Finance Institution-DFI)ಸ್ಥಾಪಿಸಲಾಗುವುದು. ಕೆಟ್ಟ ಸಾಲಗಳನ್ನು ಬ್ಯಾಂಕುಗಳ ಲೆಕ್ಕಪುಸ್ತಕಗಳಿಂದ ಹೊಸತಾಗಿ ಆರಂಭಿಸಲಿರುವ ‘ಕೆಟ್ಟ ಬ್ಯಾಂಕು’ ತನ್ನ ಸುಪರ್ದಿಗೆ ವರ್ಗಾಯಿಸುತ್ತದೆ. ( ‘Bad Bank’ ಬ್ಯಾಡ್ ಬ್ಯಾಂಕ್-ವಸೂಲಿಯಾಗದ ಸಾಲಗಳನ್ನು ತನ್ನ ವಶಕ್ಕೆ ಪಡೆದುಕೊಂಡು ಅವುಗಳ ಹಿಂದೆ ಇರಬಹುದಾದ ಭದ್ರತಾ ಆಸ್ತಿಗಳನ್ನು ನಗದೀಕರಿಸುವ ಜವಾಬ್ದಾರಿ ಹೊಂದಿದ ಸಂಸ್ಥೆ). ಉತ್ಪಾದನೆ ಮತ್ತು ಸೇವಾ ರಂಗಗಳ ಪುನಃಶ್ಚೇತನಕ್ಕೆ ಸರಕಾರವೇ ನಿರ್ದಿಷ್ಟವಾದ ಮಾರ್ಗವನ್ನು ತೋರಿಸದಿದ್ದಾಗ ಬ್ಯಾಂಕುಗಳು ಹೊಸ ಸಾಲ ನೀಡುವಲ್ಲಿ ಎಷ್ಟು ಆಸಕ್ತಿ ವಹಿಸುತ್ತವೆ?
ಸರಕಾರಿ ಸ್ವಾಮ್ಯದ ಉದ್ದಿಮೆಗಳನ್ನು ಅಥವಾ ಅವುಗಳ ಆಸ್ತಿಗಳನ್ನು ನಗದೀಕರಿಸಿ, ಅರ್ಥಾತ್, ಮಾರಿ ಆ ಮೂಲಕ ಸಂಪನ್ಮೂಲಗಳನ್ನು ಜೋಡಿಸುವ ಇರಾದೆ ಬಜೆಟ್‌ನಲ್ಲಿದೆ. ಆಸ್ತಿ ಮತ್ತು ಕಂಪೆನಿಯ ಮಾರಾಟದಿಂದ ಆರ್ಥಿಕ ಚಟುವಟಿಕೆ ಬಿರುಸಾಗುತ್ತದೆಯೇ? ಹೊಸ ಉದ್ಯೋಗ ಸೃಷ್ಟಿಯಾಗುತ್ತದೆಯೇ?
ಇರುವ ಉದ್ದಿಮೆಗಳ ಚೇತರಿಕೆ ಮತ್ತು ಚುರುಕಿನ ವ್ಯವಹಾರ, ಹೊಸ ಉದ್ದಿಮೆಗಳ ಆರಂಭಕ್ಕೆ ಇರುವ ನಿರ್ಬಂಧಗಳನ್ನು ಸರಳಗೊಳಿಸಿ (single window -ಸಿಂಗಲ್ ವಿಂಡೊ- ಏಕ ಗವಾಕ್ಷಿ ಪದ್ಧತಿಯ ಮೂಲಕ) ಉತ್ತೇಜನ ಮತ್ತು ಕನಿಷ್ಠ ಸಹಾಯಧನದ ಕ್ಲಪ್ತ ಬಿಡುಗಡೆ, ಹಣಕಾಸು ರಂಗದ ದಕ್ಷತೆಯನ್ನು ಸುಧಾರಿಸಿ ಸಾಲ ಸುಲಭವಾಗಿ ಎಲ್ಲ ರಂಗಗಳಲ್ಲಿನ ಉದ್ದಿಮೆಗಳಿಗೆ ಸಿಗುವಂತೆ ಮಾಡುವುದು ಮತ್ತು ಸರಕಾರದ ಅಧೀನದ ಮೂಲಸೌಕರ್ಯ ಉದ್ದಿಮೆಗಳ ದಕ್ಷತೆಯನ್ನು ಇನ್ನಷ್ಟು ಸುಧಾರಿಸುವುದು-ಮೊದಲಾದ ಕ್ರಮಗಳ ಮೂಲಕ ದೀರ್ಘಕಾಲೀನ ಆರ್ಥಿಕ ಪ್ರಗತಿ ಸಾಧಿಸಲು ಸಾಧ್ಯವಿದೆ. ಆ ಮೂಲಕ ಹೊಸ ಉದ್ಯೋಗಗಳ ಸೃಷ್ಟಿಯೂ ಆಗುತ್ತದೆ. ಇವುಗಳು ಆರ್ಥಿಕ ಭದ್ರತೆಯನ್ನು ನೀಡುತ್ತವೆ.
ದೂರದೃಷ್ಟಿ ಇಲ್ಲದ, ಸಂವೇದನಾರಹಿತ ಬಜೆಟ್
ಆಧುನಿಕ ಪ್ರಜಾಸತ್ತೆಯಲ್ಲಿ ತೀವ್ರವಾದ ಬಿಕ್ಕಟ್ಟುಗಳನ್ನು ಸಮರ್ಥವಾಗಿ ಎದುರಿಸಲು ಅಧಿಕಾರಾರೂಢ ನಾಯಕರಿಗೆ ದೂರದೃಷ್ಟಿ, ಸಂವೇದನಾ ಶೀಲ ಮನೋಸ್ಥಿತಿ ಮತ್ತು ವಾಸ್ತವದ ಅರಿವು ಇರಬೇಕು. ಇಂಗ್ಲೆಂಡಿನ ಖ್ಯಾತ ಅರ್ಥಶಾಸ್ತ್ರಜ್ಞ ಜಾನ್ ಮೇನಾರ್ಡ್ ಕೀನ್ಸ್ ಅಮೆರಿಕದಲ್ಲಿ 1930ರ ದಶಕದಲ್ಲಿ ಸಂಭವಿಸಿದ ಹಿಂದೆಂದೂ ಕೇಳರಿಯದ ಆರ್ಥಿಕ ಬಿಕ್ಕಟ್ಟಿನಿಂದ ಚೇತರಿಸಲು ಪ್ರಜೆಗಳ ಜೇಬಿನಲ್ಲಿ ಹಣ ಓಡಾಡುವುದರ ಅಗತ್ಯವನ್ನು ಒತ್ತಿ ಹೇಳಿದ್ದನ್ನು ಮತ್ತು ಈ ಉದ್ದೇಶದಿಂದ ಸರಕಾರವು ನಿರುದ್ಯೋಗಿಗಳಿಗೆ ಬಾವಿ ತೋಡಿ ಮುಚ್ಚಿಸುವ ಕೆಲಸವಾದರೂ ಕೊಡಿ ಎಂದಿದ್ದರೆಂದು ಓದಿದ ನೆನಪು. ನಮ್ಮ ಸರಕಾರ ಹಳ್ಳಿಗಳಲ್ಲಿ ಬಾವಿ ತೋಡಿಸಿ, ರಸ್ತೆ ರಚಿಸಿ, ಪ್ರಾಥಮಿಕ ಶಾಲೆಗಳಿಗೆ ಕಟ್ಟಡಗಳನ್ನು ನಿರ್ಮಿಸಿ, ಆರೋಗ್ಯ ಕೇಂದ್ರಗಳನ್ನು ಬಲಪಡಿಸಲು ಮುಂದಾಗಿದ್ದರೆ ತಾತ್ಕಾಲಿಕವಾಗಿಯಾದರೂ ಉದ್ಯೋಗ ಲಭಿಸಿ ಸಿದ್ಧ ಸರಕುಗಳಿಗೆ ಬೇಡಿಕೆ ಹೆಚ್ಚುತ್ತಿತ್ತು. ಆ ಮೂಲಕ ಆರ್ಥಿಕತೆಗೆ ಪುನಃಶ್ಚೇತನ ಲಭಿಸುತ್ತಿತ್ತು. ದೇಶ ಪ್ರಧಾನ ಮಂತ್ರಿಗಳ ಭಾಷೆಯಲ್ಲಿಯೇ ಹೇಳುವುದಾದರೆ ‘ಆತ್ಮ ನಿರ್ಭರ’ ವಾಗುವತ್ತ ಮುನ್ನಡೆಯುತ್ತಿತ್ತು. 2021-21ರ ಬಜೆಟ್ ಆ ಅಪೂರ್ವ ಅವಕಾಶವನ್ನು ಚೆಲ್ಲಿಹಾಕಿದೆ. ಇದಕ್ಕೆ ಕಾರಣ ದೂರದೃಷ್ಟಿ, ಸಂವೇದನಾ ಶೀಲ ಮನೋಭಾವ ಮತ್ತು ವಾಸ್ತವದ ಅರಿವುಗಳ ಕೊರತೆ. ಇದರ ದೂರಗಾಮಿ ಪರಿಣಾಮ ದೇಶದ ಅಮಾಯಕ ಪ್ರಜೆಗಳ ಮೇಲೆನ್ನುವುದು ನಮ್ಮ ಪ್ರಜಾಸತ್ತೆಯ ದುರಂತ.