ಸ್ಕೇರಿ ಫಾರೆಸ್ಟ್: ಫಾರೆಸ್ಟ್ ತುಂಬ ರೆಸ್ಟ್ ಇರದ ದೆವ್ವಗಳು!

Update: 2021-02-28 06:47 GMT

ಸ್ಕೇರಿ ಫಾರೆಸ್ಟ್ ಎನ್ನುವ ಹೆಸರೇ ಸೂಚಿಸುವಂತೆ ಇದೊಂದು ಭಯಾನಕ ಕಾಡೊಳಗಿನ ಕತೆ. ಕಾಡು ಸ್ಕೇರಿಯೆನಿಸಲು ಕಾರಣ ಅಲ್ಲಿ ಹಾರಿ ಬರುವ ದೆವ್ವಗಳು! ಒಮ್ಮೆ ಮಗುವಂತೆ, ಮತ್ತೊಮ್ಮೆ ಯುವತಿಯಂತೆ ಕಾಣುವ ದೆವ್ವಗಳ ಹಿಂದೆ ಕತೆಯೂ ಸಾಗುತ್ತದೆ.

ಕಾಡಿನಲ್ಲಿ ದಾರಿ ತಪ್ಪಿದ ವ್ಯಕ್ತಿಯೋರ್ವ ದಾರಿ ಹುಡುಕುವ ಸನ್ನಿವೇಶದೊಂದಿಗೆ ಸಿನೆಮಾ ಶುರುವಾಗುತ್ತದೆ. ಕಾಡಿನಿಂದ ಹೊರಗೆ ಬರುವ ದಾರಿಯಲ್ಲಿ ಡಾಬ ಮತ್ತು ಅದರ ಮಾಲಕ ಕಾಣಿಸುತ್ತಾರೆ. ಅನ್ನಾಹಾರ ಕೇಳಿ ಬಂದ ವ್ಯಕ್ತಿಗೆ ಕೆಲಸವನ್ನು ನೀಡುವುದಾಗಿ ಆ ವ್ಯಕ್ತಿ ಹೇಳುತ್ತಾರೆ. ಕೆಲಸ ಮಾಡಲು ಒಪ್ಪುವ ವ್ಯಕ್ತಿಯನ್ನು ಕಾಡಿನ ನಡುವೆ ಇರುವ ತನ್ನ ಬಂಗಲೆ ನೋಡಿಕೊಳ್ಳಲು ಕಳಿಸುತ್ತಾನೆ ಡಾಬದ ಮಾಲಕ. ಮೊದಲೇ ದೆವ್ವ, ಪಿಶಾಚಿಗಳನ್ನು ನಂಬದ ಆ ವ್ಯಕ್ತಿ ಅದೇ ರಾತ್ರಿ ಬಂಗಲೆಯತ್ತ ಪಯಣ ಬೆಳೆಸುತ್ತಾನೆ. ಆದರೆ ದಾರಿಯಲ್ಲಿ ಆತನಿಗೆ ದೆವ್ವ ಎದುರಾಗುತ್ತದೆ. ಅದನ್ನು ಮಟ್ಟಹಾಕುವಲ್ಲಿ ಆತ ಗೆಲ್ಲುತ್ತಾನೆ. ಬಹುಶಃ ಇದು ಪೂರ್ತಿ ಸಿನೆಮಾ ಕತೆ ಹೇಳಿದಂತೆ ನಿಮಗೆ ಅನಿಸಬಹುದು. ಆದರೆ ಇದು ಆರಂಭದ ಒಂದು ಜಲಕ್ ಮಾತ್ರ. ಈ ಘಟನೆ ನಡೆದ ಇಪ್ಪತ್ತು ವರ್ಷದ ಬಳಿಕದ ಕತೆಯೊಂದಿಗೆ ಚಿತ್ರ ಸಾಗುತ್ತದೆ. ಇದು ಇಬ್ಬರು ಯುವತಿಯರು ಮತ್ತು ಇಬ್ಬರು ಯುವಕರು ಸೇರಿರುವ ನಾಲ್ಕು ಜನರ ತಂಡದ ಕತೆ. ಅವರಲ್ಲಿ ಇಬ್ಬರಿಗೆ ಒಂದೇ ಕನಸು ಬೀಳುತ್ತದೆ. ಆ ಕನಸಲ್ಲಿ ಈ ಹಿಂದೆ ತಮ್ಮ ಜೊತೆಗಿದ್ದ ಗೆಳತಿಯೊಬ್ಬಳು ಬಂದು ತಾನು ಸತ್ತಿಲ್ಲ, ಬದುಕಿದ್ದೇನೆ ಎಂದು ಹೇಳಿದಂತಾಗುತ್ತದೆ! ಆಕೆಯ ಹೆಸರು ಪೀಹು. ವಿಚಿತ್ರ ಏನೆಂದರೆ ಆಕೆ ಇತ್ತೀಚೆಗಷ್ಟೇ ಕಾಣೆಯಾಗಿರುತ್ತಾಳೆ. ಕನಸಲ್ಲಿ ಆಕೆ ಕಾಡಿದ ಕಾರಣ ಗೆಳತಿ ಕಾಣೆಯಾದ ಜಾಗಕ್ಕೆ ನಾಲ್ಕು ಮಂದಿಯೂ ಹೊರಡುತ್ತಾರೆ. ಅಂದಹಾಗೆ ಆಕೆ ಕಾಣೆಯಾಗಿದ್ದು ಅದೇ ಕಾಡಿನ ನಡುವೆ ಇದ್ದಂಥ ಬಂಗಲೆಯಲ್ಲಿ!

ಬಂಗಲೆ ಇರುವ ಕಾಡಿನ ಕಡೆಗೆ ಹೊರಡುವ ಜಯ್, ಸಿದ್, ಟೀಯಾ ಮತ್ತು ಕಾಯ್ರ ಅವರು ಎದುರಿಸಬೇಕಾಗಿ ಬರುವ ಪರಿಸ್ಥಿತಿ ಏನು? ಇಪ್ಪತ್ತು ವರ್ಷಗಳಿಂದ ಆ ಬಂಗಲೆಯಲ್ಲಿ ಕೆಲಸಗಾರನಾಗಿದ್ದಾತ ಇವರು ಭೇಟಿ ನೀಡುವಾಗಲೂ ಅಲ್ಲೇ ಇರುತ್ತಾನೆಯೇ? ಆ ಬಂಗಲೆಯ ಮಾಲಕ ಆಶೀಷ್ ದಾಸ್ ಎನ್ನುವ ವ್ಯಕ್ತಿ ನಿಜಕ್ಕೂ ಯಾರು? ಜಯ್‌ನ ಪ್ರೇಯಸಿಯಾಗಿದ್ದಂಥ ಕಾಣೆಯಾಗಿರುವ ಪೀಹು ಕೊನೆಗೂ ಸಿಗುತ್ತಾಳಾ? ಎನ್ನುವ ಪ್ರಶ್ನೆಗಳಿಗೆ ಉತ್ತರ ಸಿಗಬೇಕಾದರೆ ನೀವು ಚಿತ್ರ ನೋಡಲೇಬೇಕು. ವಿಶೇಷ ಎನಿಸುವ ಕತೆ ಇಲ್ಲವಾದರೂ ತಕ್ಕಮಟ್ಟಿಗೆ ಕುತೂಹಲ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದೆ.

  ಚಿತ್ರದ ಪ್ರಧಾನ ಪಾತ್ರಗಳಲ್ಲಿ ಹೊಸ ಮುಖಗಳೇ ಇವೆ. ಚಿತ್ರದ ನಿರ್ಮಾಪಕರಾಗಿದ್ದುಕೊಂಡು ಪ್ರಧಾನ ಪಾತ್ರ ನಿರ್ವಹಿಸಿರುವ ಜಯ್ ಪಾತ್ರಧಾರಿ ಜಯಪ್ರಭು ಲಿಂಗಾಯತ್ ನಟನೆಗಿಂತ ತಮ್ಮ ಮೈಕಟ್ಟು ಪ್ರದರ್ಶನದಲ್ಲೇ ಗಮನ ಸೆಳೆಯುತ್ತಾರೆ. ನಟನೆಯಲ್ಲಿ ಹೆಚ್ಚು ಗಮನ ನೀಡಿದರೆ ಚಿತ್ರರಂಗದಲ್ಲಿ ಭರವಸೆಯ ನಾಯಕರಾಗುವ ಸಾಧ್ಯತೆ ಇದೆ. ಮುಂದುವರಿದರೆ ಅಚ್ಚರಿ ಇಲ್ಲ! ಚಿತ್ರದ ಆರಂಭದಿಂದ ಕೊನೆಯವರೆಗೆ ಕೇಳಿ ಬರುವ ಹೆಸರು ಪೀಹು. ಅಂದಹಾಗೆ ಪೀಹುವಾಗಿ ನಟಿಸಿದ ಟೀನಾ ಪೊನ್ನಪ್ಪ ಕೂಡ ಪಾತ್ರಕ್ಕೆ ನ್ಯಾಯ ನೀಡುವಲ್ಲಿ ಗೆದ್ದಿದ್ದಾರೆ. ಚಿತ್ರದಲ್ಲಿ ಅವರ ಪಾತ್ರಕ್ಕೆ ಎರಡು ಶೇಡ್ಸ್ ಇವೆ. ಉಳಿದಂತೆ ಆಶೀಸ್ ದಾಸ್ ಮತ್ತು ಬಂಗಲೆಯ ಕೆಲಸಗಾರ ಮಂಗಲ್ ಪಾತ್ರಗಳು ಕೂಡ ಕುತೂಹಲ ಮೂಡಿಸುತ್ತವೆ. ಅದರಲ್ಲಿಯೂ ಮಂಗಲ್ ಪಾತ್ರ ಬಳಸಿರುವ ಉತ್ತರ ಕರ್ನಾಟಕದ ಭಾಷೆ, ಅವರ ಅಭಿನಯದ ಶೈಲಿ ಉಲ್ಲೇಖನೀಯ. ನಿರ್ಮಾಪಕರ ಪುತ್ರಿ ಪುಟ್ಟ ದೆವ್ವವಾಗಿ ಕಾಣಿಸಿಕೊಂಡಿದ್ದಾರೆ.

ಇತ್ತೀಚೆಗೆ ನಾಲ್ಕು ಮಂದಿ ಯುವಕರು ಕಾಡಿಗೆ ಹೋಗುವ ಸಬ್ಜೆಕ್ಟ್ ಇರಿಸಿಕೊಂಡು ಸಾಕಷ್ಟು ಸಿನೆಮಾಗಳು ತೆರೆಗೆ ಬರುತ್ತಿವೆ. ಈ ಚಿತ್ರ ಕೂಡ ಅವುಗಳಲ್ಲಿ ಒಂದು ಎನ್ನುವಂತಿದ್ದರೂ ಆರಂಭದಿಂದಲೇ ನಿರೂಪಣೆಯ ಶೈಲಿ ಮತ್ತು ಹೊಸಮುಖದ ಕಲಾವಿದರ ನಟನೆ ಆಕರ್ಷಣೆ ಮೂಡಿಸುತ್ತದೆ. ಚಿತ್ರದ ಆರಂಭದಲ್ಲಿ ನೀಡಿರುವ ಹಿನ್ನೆಲೆ ಸಂಗೀತ, ಶೀರ್ಷಿಕೆ ತೋರಿಸಿರುವಲ್ಲಿನ ಕಲೆ, ಒಂದೆರಡು ಮಾಧುರ್ಯ ಪೂರ್ಣ ಹಾಡುಗಳಿದ್ದರೂ ಕೆಲವೊಂದು ಕಡೆ ಈ ಕತೆಗೆ ಅನಗತ್ಯವಾಗಿ ನುಸುಳಿ ಬಂದಂತೆ ಅನಿಸುತ್ತದೆ. ಚಿತ್ರದ ಸಂಭಾಷಣೆಗಳನ್ನು ಹಿಂದಿಯಲ್ಲಿ ಬರೆದು ಕನ್ನಡಕ್ಕೆ ಬದಲಾಯಿಸಿದಂತೆ ಇರುವ ಕಾರಣ ಕೆಲವು ಕಡೆಗಳಲ್ಲಿ ಡಬ್ಬಿಂಗ್ ಸಿನೆಮಾ ನೋಡಿದ ಅನುಭವ ನೀಡುವುದು ಸುಳ್ಳಲ್ಲ. ಒಟ್ಟಿನಲ್ಲಿ ದೆವ್ವ ಪ್ರಿಯರಿಗೆ ಇಷ್ಟವಾಗಬಹುದಾದ ಸಿನೆಮಾ ಇದು.

ಚಿತ್ರ: ಸ್ಕೇರಿ ಫಾರೆಸ್ಟ್

ತಾರಾಗಣ: ಜಯಪ್ರಭು ಲಿಂಗಾಯತ್, ಟೀನಾ ಪೊನ್ನಪ್ಪ

ನಿರ್ದೇಶನ: ಸಂಜಯ್ ಅಬಿರ್

ನಿರ್ಮಾಣ: ಜಯಪ್ರಭು ಆರ್.ಲಿಂಗಾಯತ್

Writer - ಶಶಿಕರ ಪಾತೂರು

contributor

Editor - ಶಶಿಕರ ಪಾತೂರು

contributor

Similar News

ಸಂವಿಧಾನ -75