ಕರಿದ ಎಣ್ಣೆಯನ್ನು ಪದೇ ಪದೇ ಬಳಸಿದರೆ ಏನಾಗುತ್ತದೆ ಗೊತ್ತೇ?

Update: 2021-03-28 07:07 GMT

ಮನೆಗಳಲ್ಲಾಗಲೀ ಹೊರಗಡೆಯಾಗಲೀ,ಒಮ್ಮೆ ಖಾದ್ಯಗಳನ್ನು ಕರಿದ ಎಣ್ಣೆಯನ್ನೇ ಪದೇ ಪದೇ ಬಳಸುವುದು ಸಾಮಾನ್ಯವಾಗಿಬಿಟ್ಟಿದೆ. ಸ್ವಲ್ಪ ಹಣವನ್ನುಳಿಸಲು ಬಯಸುವ ಪ್ರತಿಯೊಬ್ಬರೂ ವಿವಿಧ ಖಾದ್ಯಗಳನ್ನು ಕರಿಯಲು ಒಮ್ಮೆ ಬಳಸಿದ ಎಣ್ಣೆಯನ್ನೇ ಮತ್ತೆ ಮತ್ತೆ ಬಳಸುತ್ತಿರುತ್ತಾರೆ. ಹೋಟೆಲ್‌ಗಳಲ್ಲಂತೂ ಇದು ಮಾಮೂಲು ಎಂದೇ ಹೇಳಬಹುದು. ನಾವು ಬಳಸುವ ಖಾದ್ಯ ತೈಲ ಅದಾಗಲೇ ಸ್ಯಾಚುರೇಟೆಡ್ ಫ್ಯಾಟ್ ಆಗಿರುತ್ತದೆ ಮತ್ತು ಅದರ ಮರುಬಳಕೆ ಅತ್ಯಂತ ಕೆಟ್ಟ ಪರಿಣಾಮವನ್ನುಂಟು ಮಾಡುತ್ತದೆ. ಅದು ಶರೀರದಲ್ಲಿ ಆರೋಗ್ಯಕ್ಕೆ ಹಾನಿಕಾರಕವಾದ ಟ್ರಾನ್ಸ್ ಫ್ಯಾಟ್‌ಗಳುಂಟಾಗಲು ಕಾರಣವಾಗುತ್ತದೆ. ಇದು ಮಾತ್ರವಲ್ಲ,ಮರುಬಳಕೆಯ ಎಣ್ಣೆಯು ಹಲವಾರು ದೀರ್ಘಕಾಲಿಕ ರೋಗಗಳನ್ನೂ ಉಂಟುಮಾಡುತ್ತದೆ.

ಒಮ್ಮೆ ಕರಿದ ಎಣ್ಣೆಯ ಮರುಬಳಕೆಯು ಉರಿಯೂತವನ್ನುಂಟು ಮಾಡುತ್ತದೆ ಮತ್ತು ಇದು ಕಾಯಿಲೆಗಳಿಗೆ ಕಾರಣವಾಗುತ್ತದೆ. ಫ್ರೀ ರ‍್ಯಾಡಿಕಲ್‌ಗಳು ಆರೋಗ್ಯಕರ ಕೋಶಗಳಿಗೆ ಅಂಟಿಕೊಂಡು ಅವುಗಳನ್ನು ಅನಾರೋಗ್ಯಕರವನ್ನಾಗಿಸುತ್ತವೆ ಮತ್ತು ಇದು ಆರೋಗ್ಯ ಸಮಸ್ಯೆಗಳನ್ನು ಸೃಷ್ಟಿಸುತ್ತದೆ. ಎಣ್ಣೆಯ ಮರುಬಳಕೆಯು ಬೊಜ್ಜು,ಹೃದ್ರೋಗ ಮತ್ತು ಮಧುಮೇಹಗಳಿಗೆ ಮೂಲ ಕಾರಣವಾಗಬಲ್ಲದು.

ಎಣ್ಣೆಯನ್ನು ಅತಿಯಾಗಿ ಕಾಯಿಸಿದಾಗ ಅದು ಅಪಕರ್ಷಣಗೊಳ್ಳುತ್ತದೆ ಮತ್ತು ಫ್ರೀ ರ‍್ಯಾಡಿಕಲ್‌ಗಳ ಬಿಡುಗಡೆಗೆ ಕಾರಣವಾಗುತ್ತದೆ. ಇದೇ ಎಣ್ಣೆಯನ್ನು ಪುನಃ ಪುನಃ ಕಾಯಿಸಿದಾಗ ಅದು ಟೋಟಲ್ ಪೋಲರ್ ಕಂಪೌಂಡ್ (ಟಿಪಿಸಿ) ಸೃಷ್ಟಿಯಾಗಲು ಕಾರಣವಾಗುತ್ತದೆ ಮತ್ತು ಈ ಟಿಪಿಸಿ ಎಣ್ಣೆಯನ್ನು ಸೇವನೆಗೆ ಅನರ್ಹವನ್ನಾಗಿಸುತ್ತದೆ. ಈ ಪೋಲರ್ ಕಂಪೌಂಡ್‌ಗಳ ನಂಜು ಹೃದ್ರೋಗಗಳು, ಬೊಜ್ಜು, ಕ್ಯಾನ್ಸರ್, ಅಧಿಕ ರಕ್ತದೊತ್ತಡ,ಯಕೃತ್ತಿನ ಸಮಸ್ಯೆಗಳು, ಮಧುಮೇಹ ಇತ್ಯಾದಿಗಳೊಂದಿಗೆ ಗುರುತಿಸಿಕೊಂಡಿದೆ. ಅಲ್ಲದೆ ಪದೇ ಪದೇ ಕಾಯಿಸುವುದರಿಂದ ಎಣ್ಣೆಯು ತನ್ನಲ್ಲಿಯ ಪೋಷಕಾಂಶಗಳು ಮತ್ತು ರಾಸಾಯನಿಕ ಗುಣಗಳನ್ನು ಕಳೆದುಕೊಳ್ಳುತ್ತದೆ ಮತ್ತು ಸೆಲ್ಯುಲರ್ ಮತ್ತು ಮಾಲೆಕ್ಯುಲರ್ ಮಟ್ಟಗಳಿಗೆ ಹಾನಿಯನ್ನುಂಟು ಮಾಡುತ್ತದೆ. ಎಣ್ಣೆಯನ್ನು ಪುನಃ ಪುನಃ ಕಾಯಿಸಿದಾಗ ಹಾನಿಕಾರಕ ವಿಷವಸ್ತುಗಳು ಬಿಡುಗಡೆಗೊಳ್ಳುತ್ತವೆ, ಟ್ರಾನ್ಸ್ ಫ್ಯಾಟ್ ಮತ್ತು ಎಣ್ಣೆಯಲ್ಲಿನ ಫ್ರೀ ರ‍್ಯಾಡಿಕಲ್ ಮಟ್ಟವು ಹೆಚ್ಚುತ್ತದೆ ಎನ್ನುವುದನ್ನು ಹಲವಾರು ಅಧ್ಯಯನಗಳು ತೋರಿಸಿವೆ.

ಶೇ.48ರಷ್ಟು ಜನರು ವಾರದಲ್ಲಿ 1ರಿಂದ 6 ಸಲ ಕರಿದ ಖಾದ್ಯಗಳನ್ನು ಮತ್ತು ಜಂಕ್ ಫುಡ್‌ಗಳನ್ನು ಸೇವಿಸುತ್ತಾರೆ ಎನ್ನುವುದನ್ನು ಸಮೀಕ್ಷೆಯೊಂದು ತೋರಿಸಿದ್ದು,ಇದು ನಿಜಕ್ಕೂ ಅತಂಕಕಾರಿಯಾಗಿದೆ.

ಖಾದ್ಯ ತೈಲದಲ್ಲಿ ಶೇ.25ರಷ್ಟು ಟಿಪಿಸಿ ಇರಬಹುದು,ಆದರೆ ಅದಕ್ಕೂ ಹೆಚ್ಚಿದ್ದರೆ ಅಂತಹ ಎಣ್ಣೆಯು ಸೇವಿಸಲು ಅರ್ಹವಲ್ಲ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಅತಿಯಾಗಿ ಕಾಯಿಸದಿರುವುದು, ಖಾದ್ಯಗಳನ್ನು ಕರಿಯುವ ಮುನ್ನ ಉಪ್ಪನ್ನು ಬೆರೆಸದಿರುವುದು, ಕರಿದ ಕೆಲಸ ಮುಗಿದ ನಂತರ ಖಾದ್ಯದ ಅವಶೇಷಗಳು ಎಣ್ಣೆಯಲ್ಲಿ ಇರದಂತೆ ನೋಡಿಕೊಳ್ಳುವುದು ಇವೇ ಮುಂತಾದ ಮುನ್ನೆಚ್ಚರಿಕೆಗಳನ್ನು ವಹಿಸುವ ಮೂಲಕ ಎಣ್ಣೆಯ ಮರುಬಳಕೆಯ ಹಾನಿಕಾರಕ ಪರಿಣಾಮಗಳನ್ನು ಕಡಿಮೆ ಮಾಡಬಹುದು.

ಗರ್ಭಿಣಿಯರು ಒಮ್ಮೆ ಕಾಯಿಸಿದ ಎಣ್ಣೆಯನ್ನು ಯಾವುದೇ ಕಾರಣಕ್ಕೆ ಮರುಬಳಕೆ ಮಾಡಲೇಬಾರದು. ಏಕೆಂದರೆ ಇಂತಹ ಎಣ್ಣೆಯ ಪದೇ ಪದೇ ಬಳಕೆಯು ಗರ್ಭಿಣಿಗೆ ಮಾತ್ರವಲ್ಲ, ಗರ್ಭದೊಳಗೆ ಬೆಳೆಯುತ್ತಿರುವ ಶಿಶುವಿಗೂ ಹಾನಿಯನ್ನುಂಟು ಮಾಡುತ್ತದೆ. ಇಂತಹ ಎಣ್ಣೆಯಲ್ಲಿರುವ ಸ್ಯಾಚುರೇಟೆಡ್ ಫ್ಯಾಟ್ ರಕ್ತದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುತ್ತದೆ ಮತ್ತು ಹೃದ್ರೋಗಗಳು,ಗರ್ಭಾವಸ್ಥೆಯಲ್ಲಿ ಶರೀರದ ತೂಕ ಹೆಚ್ಚಲು ಕಾರಣವಾಗುತ್ತದೆ.

ಜಠರದಲ್ಲಿ ಅಥವಾ ಗಂಟಲಿನಲ್ಲಿ ಆಗಾಗ್ಗೆ ಉರಿಯ ಅನುಭವ ನಿಮಗಾಗುತ್ತಿದ್ದರೆ ಅದಕ್ಕೆ ಕಾರಣ ಆ್ಯಸಿಡಿಟಿ. ನಿಮಗೆ ಆ್ಯಸಿಡಿಟಿ ಸಮಸ್ಯೆ ಹೆಚ್ಚುತ್ತಿದ್ದರೆ ಅದಕ್ಕೆ ನಿಮ್ಮ ಅಡುಗೆ ಎಣ್ಣೆಯು ಕಾರಣವಾಗಿರಬಹುದು. ರಸ್ತೆಬದಿಗಳಲ್ಲಿ ದೊರೆಯುವ ಜಂಕ್ ಫುಡ್‌ಗಳು ಹೆಚ್ಚಾಗಿ ಕರಿಯಲ್ಪಟ್ಟಿರುತ್ತವೆ ಮತ್ತು ಒಂದು ಸಲ ಬಳಸಿದ ಎಣ್ಣೆಯನ್ನೇ ಪುನಃ ಪುನಃ ಬಳಸಲಾಗುತ್ತದೆ. ಆ್ಯಸಿಡಿಟಿ ನಿಮ್ಮಿಂದ ದೂರವಿರಬೇಕಿದ್ದರೆ ನೀವು ಇಂತಹ ಎಣ್ಣೆಯಿಂದ ದೂರ ಉಳಿಯುವುದು ಅಗತ್ಯವಾಗುತ್ತದೆ.

ಕೃಪೆ: Onlymyhealth

Writer - ಪುರು ಬನ್ಸಾಲ್

contributor

Editor - ಪುರು ಬನ್ಸಾಲ್

contributor

Similar News