ಜಿ.ವಿ.-ನಡೆದಾಡುತ್ತಿದ್ದ ಒಂದು ವಿಶ್ವಕೋಶ

Update: 2021-04-19 19:30 GMT

ತಮ್ಮ ವೃತ್ತಿಯೊಂದಿಗೇ ಕನ್ನಡ ಸಾಹಿತ್ಯಕ್ಕಾಗಿ ನಿರಂತರ ದುಡಿದವರು ‘ಜಿ.ವಿ.’ ನಡೆದಾಡುವ ವಿಶ್ವಕೋಶವೆಂದೇ ಪ್ರಸಿದ್ಧರಾಗಿದ್ದ ಜಿ.ವಿ.ಯವರು ನಮ್ಮ ನಾಡಿನ ಮತ್ತು ದೇಶದ ಪ್ರಕಾಂಡ ಭಾಷಾತಜ್ಞರಲ್ಲಿ ಒಬ್ಬರಾಗಿದ್ದರು. ತಮ್ಮ ನಿರಂತರ ಅಧ್ಯಯನ, ಚಿಂತನಶೀಲತೆ ಮತ್ತು ಸಂಶೋಧನೆಗಳಿಂದ ಕನ್ನಡ ಸಾರಸ್ವತಲೋಕಕ್ಕೆ ಅಮೋಘವಾದ ಕೊಡುಗೆ ನೀಡಿದ ವಿದ್ವಾಂಸರು.


ಸೋಮವಾರ, ಎಪ್ರಿಲ್ 19ರ ಮುಂಜಾನೆ ತಮ್ಮ 108ನೆಯ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ ಪ್ರೊಫೆಸರ್ ಜಿ. ವೆಂಕಟಸುಬ್ಬಯ್ಯರವರು ಜನಿಸಿದ್ದು 1913ರಲ್ಲಿ, ಶ್ರೀರಂಗಪಟ್ಟಣದ ಸಮೀಪದ ಗಂಜಂನಲ್ಲಿ. ಮೈಸೂರಿನ ಮಹಾರಾಜಾ ಕಾಲೇಜಿನಲ್ಲಿ ಕನ್ನಡ ಸ್ನಾತಕೋತ್ತರ ಪದವಿಯಲ್ಲಿ ಚಿನ್ನದ ಪದಕ ಗಳಿಸಿ ಆ ಬಳಿಕ ಸುಮಾರು 40 ವರ್ಷಗಳ ಕಾಲ ವಿವಿಧೆಡೆ ಅಧ್ಯಾಪಕರಾಗಿ ಮತ್ತು ಪ್ರಾಚಾರ್ಯರಾಗಿ ಕೆಲಸ ಮಾಡಿದರು.

 ತಮ್ಮ ವೃತ್ತಿಯೊಂದಿಗೇ ಕನ್ನಡ ಸಾಹಿತ್ಯಕ್ಕಾಗಿ ನಿರಂತರ ದುಡಿದವರು ‘ಜಿ.ವಿ.’ ನಡೆದಾಡುವ ವಿಶ್ವಕೋಶವೆಂದೇ ಪ್ರಸಿದ್ಧರಾಗಿದ್ದ ಜಿ.ವಿ.ಯವರು ನಮ್ಮ ನಾಡಿನ ಮತ್ತು ದೇಶದ ಪ್ರಕಾಂಡ ಭಾಷಾತಜ್ಞರಲ್ಲಿ ಒಬ್ಬರಾಗಿದ್ದರು. ತಮ್ಮ ನಿರಂತರ ಅಧ್ಯಯನ, ಚಿಂತನಶೀಲತೆ ಮತ್ತು ಸಂಶೋಧನೆಗಳಿಂದ ಕನ್ನಡ ಸಾರಸ್ವತಲೋಕಕ್ಕೆ ಅಮೋಘವಾದ ಕೊಡುಗೆ ನೀಡಿದ ವಿದ್ವಾಂಸರು. ಭಾಷಾಶಾಸ್ತ್ರಕ್ಕೆ ಸಂಬಂಧಿಸಿದ ಅವರ ಗ್ರಂಥಗಳು ಅವರ ಅಧ್ಯಯನದ ವಿಸ್ತಾರ ಮತ್ತು ಆಳವನ್ನು ಪ್ರತಿಬಿಂಬಿಸುತ್ತವೆ. ಅವರ ಅವಿರತ ಶ್ರಮದಿಂದ ರಚಿತವಾದ 14 ನಿಘಂಟುಗಳು ಮತ್ತು ಅವಕ್ಕೆ ಸಂಬಂಧಿಸಿದ ಗ್ರಂಥಗಳು ಇದಕ್ಕೆ ಸಾಕ್ಷಿ. ಇದರೊಂದಿಗೆ, ಜಿ.ವಿ.ಯವರು ಅನೇಕ ವಿಮರ್ಶಾ ಪುಸ್ತಕಗಳನ್ನು, ಸಂಪಾದಿತ ಗ್ರಂಥಗಳನ್ನು, ಅನುವಾದಿತ ಕೃತಿಗಳನ್ನು, ಮಕ್ಕಳ ಬರಹಗಳನ್ನು ಮತ್ತು ಸಾಹಿತ್ಯ ಚರಿತ್ರೆಯ ಕುರಿತಾದ ಪುಸ್ತಕಗಳನ್ನು ರಚಿಸಿದರು. ಬಹುಕಾಲದ ವರೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಯಾಗಿ, ಆನಂತರ ಅಧ್ಯಕ್ಷರಾಗಿ, ವಿಭಿನ್ನ ಸಮಿತಿಗಳ ಸದಸ್ಯರಾಗಿದ್ದುದಲ್ಲದೆ, 98ರ ಇಳಿ ವಯಸ್ಸಿನಲ್ಲಿ 2011ರ 77ನೇ ಅಖಿಲ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಕನ್ನಡಕ್ಕಾಗಿ ಸೇವೆ ಸಲ್ಲಿಸಿದರು. ಕನ್ನಡ ಸಾಹಿತ್ಯ ಅಕಾಡಮಿ, ನಾಡೋಜ, ಮಾಸ್ತಿ, ಸೇಡಿಯಾಪು ಮುಂತಾದ ಹಲವು ಪ್ರಶಸ್ತಿಗಳು ಅವರನ್ನು ಅರಸಿಕೊಂಡು ಬಂದಿವೆ. ಪದ್ಮಶ್ರೀ ಪ್ರಶಸ್ತಿಯೂ 2017ರಲ್ಲಿ ಅವರ 103ನೇ ವರ್ಷ ವಯಸ್ಸಿನಲ್ಲಿ ಲಭಿಸಿದೆ.

ಜಿ.ವಿ. ಅವರ ಅಗಾಧವಾದ ಭಾಷಾಜ್ಞಾನಕ್ಕೆ ಕಿರೀಟಪ್ರಾಯವಾದ ಗ್ರಂಥ ಅವರ ‘ಇಗೋ ಕನ್ನಡ’. ಹಿಂದೆ, ಪ್ರಜಾವಾಣಿಯಲ್ಲಿ ಕನ್ನಡದ ಭಾಷೆಯ ಪ್ರಯೋಗಗಳ ಬಗ್ಗೆ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಅಂಕಣ ಬರಹದ ಮೂಲಕ ಉತ್ತರಿಸುತ್ತಿದ್ದ ಅವರ ಲೇಖನಮಾಲೆ ಬಹಳ ಜನಪ್ರಿಯವಾಗಿ ಸಾಮಾನ್ಯ ಓದುಗರ ಗಮನವನ್ನು ಸೆಳೆದಿತ್ತು. ಆರಂಭದಲ್ಲಿ ಒಂದು ಸಂಪುಟದಲ್ಲಿ ಬಂದ ‘ಇಗೋ ಕನ್ನಡ’, ಬೆಳೆಯುತ್ತಾ ಮೂರಾಯಿತು. ಮುಂದೆ ಸಂಯುಕ್ತ ಸಂಪುಟವಾಗಿ ಹೊರಬಂತು.
ಕನ್ನಡದ ಭಾಷಾ ಶ್ರೀಮಂತಿಕೆಯನ್ನು ಸವಿಯುವ ಆಸಕ್ತಿಯುಳ್ಳವರಿಗೆ ಅತ್ಯಂತ ಉಪಯುಕ್ತವಾದ ಇನ್ನೊಂದು ಗ್ರಂಥ ‘ಕನ್ನಡ ಕ್ಲಿಷ್ಟಪದಕೋಶ’. ಶಬ್ದಗಳ ಉಗಮ, ಅವುಗಳ ಬಗ್ಗೆ ನೀಡಿರುವ ವಿವರಣೆಗಳು ಅದರ ಮೌಲ್ಯವನ್ನು ಹೆಚ್ಚಿಸಿವೆ. ಅವರ ಇಂಗ್ಲಿಷ್ ಕನ್ನಡ ನಿಘಂಟು ಮತ್ತೊಂದು ಅಮೂಲ್ಯವಾದ ರಚನೆ. ಈ ಮೂರೂ ಗ್ರಂಥಗಳು ಪ್ರತಿಯೊಬ್ಬ ಕನ್ನಡಪ್ರೇಮಿಯ ಮನೆಯಲ್ಲಿ ಇರಬೇಕಾದ ಕೃತಿಗಳು. ಹೊಸ ಪೀಳಿಗೆಯವರಿಗೆ, ಕನ್ನಡದ ಸರಿಯಾದ ಬಳಕೆಯ ಬಗ್ಗೆ ಕಾಳಜಿ ಇರುವವರಿಗೆ ಇವುಗಳು ಅತ್ಯಂತ ಉಪಯುಕ್ತವಾದ ಗ್ರಂಥಗಳು.

ಜಿ.ವಿ.ಯವರಿಗೆ ದಕ್ಷಿಣ ಕನ್ನಡದಲ್ಲಿ ವಾಡಿಕೆಯಲ್ಲಿರುವ ಭಾಷಾಪ್ರಯೋಗದ ಬಗ್ಗೆ ವಿಶೇಷ ಗೌರವವಿತ್ತು. ನಾನು ಅವರನ್ನು 2015ರಲ್ಲಿ ಬೆಂಗಳೂರಿನ ಅವರ ಮನೆಯಲ್ಲಿ ಭೇಟಿಯಾದಾಗ ಅವರು ಹೇಳಿದ ಮಾತು ಮರೆಯಲು ಸಾಧ್ಯವಿಲ್ಲ. ‘‘ನಿಮ್ಮಲ್ಲಿನ ಶುದ್ಧ ಭಾಷಾಪ್ರಯೋಗದಿಂದಾಗಿ ಕನ್ನಡ ಇನ್ನೂ ಉಳಿದಿದೆ. ತಾಳಮದ್ದಳೆ ಮತ್ತು ಯಕ್ಷಗಾನಗಳ ಮೂಲಕ ನಿಮ್ಮ ಸ್ವಂತಿಕೆಯನ್ನು ಉಳಿಸಿಕೊಂಡಿದ್ದೀರಿ’’ ಅಂದರು. ಅವರ ಮಾತಿನಲ್ಲೂ ಕರಾವಳಿಯ ಭಾಷೆ, ಸಂಸ್ಕೃತಿ ಮತ್ತು ಜನರ ಬಗ್ಗೆ ಇನ್ನಿಲ್ಲದ ಅಭಿಮಾನವನ್ನು ಕಂಡಿದ್ದೆ.

ಓರ್ವ ವ್ಯಕ್ತಿಯ ನೆಲೆಯಲ್ಲಿ ಜಿ.ವಿ.ಯವರು ಸೌಜನ್ಯದ ಪ್ರತೀಕವಾಗಿದ್ದರು. ಅವರ ಭೇಟಿಗೆ ಹೋಗಿದ್ದಾಗ ಮನೆಯ ಬಾಗಿಲಿನ ತನಕ ಬಂದು ನನ್ನನ್ನೂ, ನನ್ನಾಕೆಯನ್ನೂ ಒಳಗೆ ಆಮಂತ್ರಿಸಿದ್ದರು. ವಯಸ್ಸಿನಲ್ಲಿ ಚಿಕ್ಕವರಾಗಿದ್ದ ನಮ್ಮನ್ನು ಬಹಳ ಗೌರವದಿಂದ ಮತ್ತು ಆತ್ಮೀಯವಾಗಿ ಮಾತನಾಡಿಸಿದ್ದರು.
ತಮ್ಮ ಇಳಿವಯಸ್ಸಿನಲ್ಲಿಯೂ ನಿರಂತರ ಕ್ರಿಯಾಶೀಲರಾಗಿದ್ದ, ಸದಾ ಅಧ್ಯಯನ ಹಾಗೂ ಪಾಂಡಿತ್ಯಪೂರ್ಣ ಸಾಹಿತ್ಯದ ಸೃಷ್ಟಿಗೆ ತಮ್ಮ ಜೀವನವನ್ನು ಮುಡಿಪಾಗಿಟ್ಟ ಜಿ.ವಿ.ಯವರ ಜೀವನ ಅನುಕರಣೀಯ, ಹೊಸ ಪೀಳಿಗೆಗೆ ಮಾದರಿ.

Writer - ಟಿ. ಆರ್. ಭಟ್

contributor

Editor - ಟಿ. ಆರ್. ಭಟ್

contributor

Similar News