ಅಂಬೇಡ್ಕರ್ ಎಂಬ ಕಠಿಣ ವಜ್ರದ ಹೊಳಪನ್ನು ಕುಂದಿಸದಿರಿ

Update: 2021-04-22 19:30 GMT

ಡಾ. ಅಂಬೇಡ್ಕರ್ ಅವರ 55ನೇ ವರ್ಷದ ಹುಟ್ಟುಹಬ್ಬವನ್ನು ಮದ್ರಾಸ್‌ನಲ್ಲಿ, ಅವರ ಬಗ್ಗೆ ವಿಶೇಷ ಸಂಚಿಕೆ ತರುವುದರ ಮೂಲಕ ಆಚರಿಸಲು ನಿರ್ಧರಿಸಲಾಗಿತ್ತು. ಈ ಸಂಚಿಕೆಗೆ ಅವರಿಂದ ವಿಶೇಷ ಸಂದೇಶವನ್ನು ಕೇಳಲಾಗಿತ್ತು. ಆ ಸಂದರ್ಭದಲ್ಲಿ ಅವರು ಆಡಿದ ಮಾತುಗಳಿವು. ‘‘ನನಗೆ ನೀವು ಸಂದೇಶವನ್ನು ಕೇಳಿದ್ದೀರಿ, ಇಂಡಿಯಾ ದೇಶದ ದುರಂತವೆಂದರೆ, ಇಲ್ಲಿ ರಾಜಕಾರಣಿಗಳು ಮತ್ತು ದಾರ್ಶನಿಕರನ್ನು ಒಂದೇ ತಕ್ಕಡಿಯಲ್ಲಿಟ್ಟು ತೂಗುತ್ತಾರೆ. ಆದರೆ ವಿದೇಶದಲ್ಲಿ ಪರಿಸ್ಥಿತಿ ಹೀಗಿಲ್ಲ. ಅವರು ದಾರ್ಶನಿಕರ ಹುಟ್ಟುಹಬ್ಬವನ್ನು ಹೇಗೆ ಆಚರಿಸಬೇಕು ಹಾಗೆಯೇ ಆಚರಿಸುತ್ತಾರೆ. ಇಲ್ಲಿ ರಾಜಕಾರಣಿ ಮತ್ತು ದಾರ್ಶನಿಕರ ಹುಟ್ಟುಹಬ್ಬವನ್ನು ಒಂದೇ ರೀತಿ ಆಚರಿಸಲಾಗುತ್ತದೆ. ಇದು ಇಲ್ಲಿನ ಕರುಣಾಜನಕ ಸ್ಥಿತಿ. ವೈಯಕ್ತಿಕವಾಗಿ ನನಗೆ ಹುಟ್ಟುಹಬ್ಬ ಆಚರಿಸುವುದು ಇಷ್ಟ ಇಲ್ಲ. ನಾನೊಬ್ಬ ಅಪ್ಪಟ ಪ್ರಜಾಪ್ರಭುತ್ವವಾದಿ. ವ್ಯಕ್ತಿಪೂಜೆ ಮತ್ತು ವ್ಯಕ್ತಿಯ ಆರಾಧನೆ ಪ್ರಜಾಪ್ರಭುತ್ವ ತತ್ವಗಳಿಗೆ ಮಾರಕ ಎಂದು ಬಯಸುವವನು ನಾನು. ಒಬ್ಬ ನಾಯಕನ ಮೇಲೆ ಗೌರವ, ಪ್ರೀತಿ, ಅಭಿಮಾನ, ತೋರುವುದು ತಪ್ಪಲ್ಲ. ಆ ನಾಯಕ ಅದಕ್ಕೆ ಅರ್ಹನಾಗಿದ್ದಲ್ಲಿ, ಇದು ನಾಯಕ ಮತ್ತು ಅಭಿಮಾನಿಗಳ ನಡುವೆ ಚಾಲ್ತಿಯಲ್ಲಿದ್ದಲ್ಲಿ ಮತ್ತು ಅದು ಒಂದು ಮಿತಿಯಲ್ಲಿ ಇದ್ದಲ್ಲಿ ಮಾತ್ರ. ಆದರೆ ಅದು ಗೆರೆಯನ್ನು ದಾಟಿ, ಮಿತಿ ಮೀರಿ ವ್ಯಕ್ತಿಪೂಜೆ, ವ್ಯಕ್ತಿಯ ಆರಾಧನೆಯಂತಾದರೆ, ಅದಕ್ಕೆ ನನ್ನ ಸಹಮತವಿಲ್ಲ.’’ ಅವರ ಈ ಮಾತುಗಳಲ್ಲಿಯೇ ಇಂದಿನ ಅಂಬೇಡ್ಕರ್ ಜಯಂತಿಗಳನ್ನು ನಾವು ಬಹಳ ವಿಮರ್ಶಾತ್ಮಕ ದೃಷ್ಟಿಯಿಂದ ಆಲೋಚನೆ ಮಾಡಿ ಆಚರಿಸಬೇಕಾಗಿದೆ.

ಈ ನೆಲದ ಇತಿಹಾಸದ ಪುಟಗಳಲ್ಲಿ ಡಾ.ಅಂಬೇಡ್ಕರ್ ಅವರ ಭಾವಚಿತ್ರವನ್ನು ಪಾರ್ಲಿಮೆಂಟ್‌ನಲ್ಲಿ ಇಡಲು, ಅವರ ಮರಣಾನಂತರ 36 ವರ್ಷಗಳು ನಮ್ಮ ಹಿರಿಯರು ಹೋರಾಡಬೇಕಾಯಿತು. ಪ್ರತಿ ಸರಕಾರಿ ಕಚೇರಿಗಳಲ್ಲಿ ಅಂಬೇಡ್ಕರ್ ಅವರ ಭಾವಚಿತ್ರಗಳನ್ನು ಇಡಲು 51ವರ್ಷಗಳು ಹೋರಾಡಬೇಕಾಯಿತು. ಭಾರತವನ್ನು ರತ್ನವಾಗಿಸಿದವರಿಗೆ ‘ಭಾರತರತ್ನ’ವನ್ನು ನೀಡಲು ಈ ದೇಶ 40 ವರ್ಷಗಳನ್ನು ತೆಗೆದುಕೊಂಡಿತು. ಸಂವಿಧಾನ ಬರೆದವರ ಭಾವಚಿತ್ರವನ್ನು ಸಂವಿಧಾನ ದಿನಾಚರಣೆಯ ದಿನ ಇಟ್ಟು ಗೌರವಿಸಲು 65 ವರ್ಷಗಳು ಯೋಚಿಸಬೇಕಾಯಿತು. ಇನ್ನು ಅವರ ಬರಹ ಮತ್ತು ಭಾಷಣಗಳನ್ನು ಪ್ರಕಟಿಸಲು ಈ ದೇಶ 38 ವರ್ಷಗಳ ಕಾಲ ಸಂಘರ್ಷದಲ್ಲಿ ತೊಡಗಿತ್ತು. ಇದಕ್ಕಾಗಿ ಹೋರಾಟಗಳಾದವು, ಕೆಲವರು ಜೈಲು ಪಾಲಾದರು, ಕೆಲವರು ಕೋರ್ಟ್‌ಗೆ ಅಲೆಯಬೇಕಾಯಿತು. ಕೆಲವರು ತಮ್ಮ ಕೆಲಸಗಳನ್ನೂ ಕಳೆದುಕೊಂಡು ಬೀದಿಪಾಲಾದರು. ಸುಮಾರು ನೂರರ ದಶಕದ ವರೆಗೂ ನಮ್ಮ ಮೊದಲ ತಲೆಮಾರಿಗೆ ಡಾ. ಅಂಬೇಡ್ಕರ್ ರವರು ಸರಿಯಾಗಿ ದಕ್ಕದಿರಲು ಇದೆಲ್ಲವೂ ಕಾರಣವಾಗಿತ್ತು. ಆದರೆ ಇಂದು? ಇಷ್ಟೆಲ್ಲ ಹೋರಾಟದ ಫಲವಾಗಿ ಅಂಬೇಡ್ಕರ್ ಅವರು ನಮ್ಮ ಬದುಕಿನ ಪೂರ್ತಿ ಓದಿದರೂ ಮುಗಿಯಲಾರದಷ್ಟು ನಮ್ಮನ್ನು ವ್ಯಾಪಿಸಿಕೊಂಡಿದ್ದಾರೆ, ಇಂತಹ ವ್ಯಾಪಕತೆಯಲ್ಲಿಯೂ ಕೂಡ ನಾವು ಹಾದಿ ತಪ್ಪುವುದು ಎಂದರೆ ಹೇಗೆ? ಅದು ಎಲ್ಲಿ? ಹೇಗೆ? ಎಂದು ನಾವು ಪ್ರಜ್ಞಾವಂತಿಕೆಯಿಂದ ಆಲೋಚಿಸಬೇಕಿದೆ ಅಲ್ಲವೇ?

ಈ ನೆಲದ ಧರ್ಮ ಮತ್ತು ಜಾತಿಯ ಕ್ರೌರ್ಯ ಅಂಬೇಡ್ಕರ್‌ರವರನ್ನು ಬದುಕಿದಾಗ ಮಾತ್ರ ತಿಂದು ಸುಮ್ಮನಾಗಲಿಲ್ಲ, ಅದು ಅವರ ಮರಣಾನಂತರವೂ ಕೂಡ ಅವರನ್ನು ಪ್ರತಿ ದಿನ ಅವಮಾನಿಸಿ ತಿನ್ನುತ್ತಿದೆ. ಇಂದಿಗೂ ತಿನ್ನುತ್ತಲೇ ಇದೆ. ಇಡೀ ಜಗತ್ತಿನಲ್ಲಿ ಜೀವಿಸಿದಾಗಲೂ ಮತ್ತು ಮರಣಾನಂತರವೂ ಪ್ರತಿ ದಿನ ಅವಮಾನಕ್ಕೆ ಒಳಗಾಗುತ್ತಿರುವ ಹಾಗೂ ಪ್ರತಿದಿನ ಹೆಚ್ಚು ಹೆಚ್ಚು ಗೌರವಿಸಲ್ಪಡುತ್ತಿರುವ ಜಗತ್ತಿನ ಏಕೈಕ ವ್ಯಕ್ತಿ ಡಾ. ಅಂಬೇಡ್ಕರ್ ಅವರು.

ಇವತ್ತು ನಾವು ಎಲ್ಲೆಡೆ ಅಂಬೇಡ್ಕರ್ ಭಾವಚಿತ್ರಗಳನ್ನು, ಪ್ರತಿಮೆಗಳನ್ನು ಹಾಗೂ ನಾಮ ಫಲಕಗಳನ್ನು ನಿರಾಳವಾಗಿ ಪ್ರತಿಷ್ಠಾಪಿಸಿ ಗೌರವಿಸುತ್ತೇವೆ. ಆದರೆ ಅದೊಂದು ಕಾಲಕ್ಕೆ ಅಂಬೇಡ್ಕರ್ ಅವರ ಬರಹ, ಭಾಷಣ, ಭಾವಚಿತ್ರ, ಪುತ್ತಳಿಗಳನ್ನಿಡಲು ಈ ನೆಲದಲ್ಲಿ ಬಹುದೊಡ್ಡ ಹೋರಾಟಗಳಾಗಿವೆ. ಇಂದಿಗೂ ಆಗುತ್ತಲಿವೆ. ತ್ಯಾಗ ಬಲಿದಾನಗಳಾಗಿವೆ. ನಮ್ಮ ಹಿರಿಯರು ಅಂಬೇಡ್ಕರ್‌ರವರು ನೀಡಿದ ಹಕ್ಕುಗಳನ್ನು ಹೋರಾಟಮಾಡಿ ಪಡೆಯುವುದರ ಜೊತೆ ಜೊತೆಗೆ ಅಂಬೇಡ್ಕರ್ ಅವರನ್ನು ಕೂಡ ಈ ನೆಲದಲ್ಲಿ ಪ್ರತಿಷ್ಠಾಪಿಸಿ ಮುಂದಿನ ಪೀಳಿಗೆಗೆ ಪರಿಚಯಿಸಿ ಕೊಡಲು ತಮ್ಮನ್ನೇ ತಾವು ಬಲಿತೆಗೆದುಕೊಂಡಿದ್ದಾರೆ. ಅಂತಹ ಅವಿರತ ಶ್ರಮ ಜವಾಬ್ದಾರಿ ಹಾಗೂ ಮುಂದಾಲೋಚನೆಗಳಿಲ್ಲದೆ ನಾವು ಬರೀ ಸಂಭ್ರಮಾಚರಣೆಯಲ್ಲಿಯೇ ಮುಳುಗಿ ಹೋದರೆ, ಮುಂದಿನ ಪೀಳಿಗೆಗೆ ತಾಜಾ ಅಂಬೇಡ್ಕರ್ ಸಿದ್ಧಾಂತವನ್ನು ಉಳಿಸಿಕೊಡುವುದು ಹೇಗೆ...?

 ಒಬ್ಬ ಅಂಬೇಡ್ಕರ್ ಹುಟ್ಟಿ, ಇಷ್ಟೊಂದು ಜನರ ಬದುಕನ್ನು ಬದಲಾಯಿಸಿದ್ದರು. ಆದರೆ ಇಷ್ಟೊಂದು ಜನ ಅಂಬೇಡ್ಕರ್‌ವಾದಿಗಳು ಇದ್ದೂ ಕೂಡ, ಯಾಕೆ ದಲಿತರ ಮನೆಯ ಹೆಣ್ಣು ಮಕ್ಕಳ ಮೇಲೆ ಇಂದಿಗೂ ಅತಿ ಹೆಚ್ಚು ರೇಪ್ ನಡೆಯುತ್ತಿದೆ? ಬೀದಿ, ಬೀದಿಗಳಲ್ಲಿ ಅಮಾಯಕ ಹೆಣ್ಣುಮಕ್ಕಳನ್ನು ಬಹಿರಂಗವಾಗಿ ಯಾಕೆ ಸುಡಲಾಗುತ್ತಿದೆ? ಯಾಕೆ ಪ್ರತಿ ದಿನ ದಲಿತರ ಮನೆಗಳು ಸುಡುತ್ತಿವೆ? ಪ್ರತಿ ದಿನ ದಲಿತರೇಕೆ ಕಗ್ಗೊಲೆಗೀಡಾಗುತ್ತಿದ್ದಾರೆ? ಪ್ರತಿದಿನ ದರ್ಪ ದೌರ್ಜನ್ಯಗಳೇಕೆ ಇವರ ಮೇಲೆ ನಡೆಯುತ್ತಿವೆ? ಯಾಕೆ ಇವರ ಮೇಲೆಯೇ ಬಹಿಷ್ಕಾರ, ಅವಮಾನ, ಅವಹೇಳನಗಳಾಗುತ್ತಿವೆ? ಪ್ರತಿ ದಿನ ಎಲ್ಲಾದರೊಂದು ಕಡೆ ಅಂಬೇಡ್ಕರವರ ಪುತ್ಥಳಿ ಏಕೆ ವಿರೂಪಗೊಳಿಸಲ್ಪಡುತ್ತಿದೆ? ಇದನ್ನೆಲ್ಲ ಗಮನಿಸಿದರೆ ದಿನದಿಂದ ದಿನಕ್ಕೆ ನೈಜ ಅಂಬೇಡ್ಕರ್‌ವಾದಿಗಳು ಹೆಚ್ಚುತ್ತಿಲ್ಲ ಎನ್ನುವುದು ಸತ್ಯ ಅಲ್ಲವೇ? ಬಹುತೇಕರು ಆರಾಧನೆ ಮತ್ತು ಭಾವಪರವಶರಾಗಿರುವುದು ಸತ್ಯ ಅನಿಸುವುದಿಲ್ಲವೇ? ಇವರಲ್ಲಿ ಲೇಖಕರು, ಕವಿಗಳು, ಭಾಷಣಕಾರರು, ಬರಹಗಾರರು, ಚರ್ಚಾಪಟುಗಳು, ರಾಜಕಾರಣಿಗಳು, ಅಧಿಕಾರಿಗಳು ಇರುವುದೂ ಸತ್ಯವೇ ಅಲ್ಲವೇ? ನಾವೆಲ್ಲಾ ಅಂಬೇಡ್ಕರ್‌ರವರ ಬಗ್ಗೆ ಯೋಚಿಸುವುದನ್ನು, ಚಿಂತಿಸುವುದನ್ನು, ಬರೆಯುವುದನ್ನೂ, ಮಾತನಾಡುವುದನ್ನು ಈ 70 ವರುಷಗಳಲ್ಲಿ ಕರಗತಮಾಡಿಕೊಂಡೆವು, ಆದರೆ ಅವರಂತೆ ಕೆಲಸ ಮಾಡುವುದನ್ನು ಯಾಕೆ ನಾವು ಮರೆತೆವು?

ತಾವು ನಂಬಿದ ಅಮಾಯಕರಿಗೆ ಬದುಕಿನ ಸುರಕ್ಷೆ ನೀಡುವುದರಲ್ಲಿಯೇ ಅಂಬೇಡ್ಕರ್‌ವಾದ ಅಡಗಿರಬೇಕಿತ್ತು. ಆದರೆ ತುಂಬು ವಯಸ್ಸಿಗೆ ಬಂದ ಯುವಕನೊಬ್ಬ ತನ್ನ ತಾಯಿ, ಅಕ್ಕ, ತಂಗಿಯನ್ನು ಬಲಿಷ್ಠರ ಮನೆಯ ಕೂಲಿಗೆ ಕಳುಹಿಸಿ ಬಂದ ಹಣದಲ್ಲಿ ಜೀವಿಸುತ್ತಾ ‘ನಾನು ಸ್ವಾಭಿಮಾನಿ ಅಂಬೇಡ್ಕರ್ ಅಭಿಮಾನಿ’ ಎನ್ನುವುದನ್ನು ಕೇಳುವುದು ತುಂಬಾ ನೋವಿನ ಸಂಗತಿ. ನಮ್ಮ ಸೋಲು ಇಲ್ಲೇ ಅಡಗಿದೆ. ಈಗ ಹೋರಾಟದ ಹಾದಿ ದಿಕ್ಕು ತಪ್ಪುತ್ತಿದೆ. ಪರಿಸ್ಥಿತಿಗೆ ತಕ್ಕಂತೆ ಅಂಬೇಡ್ಕರ್‌ರವರನ್ನು ಭಟ್ಟಿ ಇಳಿಸಿಕೊಂಡು ಮಾಡಿದ ಭಾಷಣಗಳೇ ಅಂಬೇಡ್ಕರ್ ಇಸಂ ಆಗಿದೆ. ರಾಜಕೀಯದ ಒತ್ತಡಕ್ಕಾಗಿ ಅಂಬೇಡ್ಕರ್‌ರನ್ನು ಸಹಿಸಿಕೊಂಡು ಕುಳಿತಿರುವಂತೆ ಕೆಲವು ವೇದಿಕೆಗಳು ಭಾಸವಾಗುತ್ತಿರುವ ಈ ಹೊತ್ತಿನಲ್ಲಿ ಅಂಬೇಡ್ಕರ್‌ವಾದಿಗಳು, ಬರಹಗಾರರು, ಭಾಷಣಕಾರರು, ಎಲ್ಲಿ ಅಂಬೇಡ್ಕರರ ಮೂಲ ಆಶಯದ ಅಂತರಕ್ಕೆ ಕಾರ್ಯಕ್ರಮಗಳನ್ನು ನಿಯೋಜಿಸಲಾಗಿದೆಯೋ, ಎಲ್ಲಿ ಅಂಬೇಡ್ಕರ್ ಅವರ ತಾಜಾ ತತ್ವಗಳನ್ನು ಅನಾವರಣಗೊಳಿಸಲಾಗುತ್ತಿದೆಯೋ ಅಂತಹ ವೇದಿಕೆಗಳಿಗೆ ತಮ್ಮ ಬದ್ಧತೆ ತೋರಿಸಿಕೊಳ್ಳಬೇಕು. ಇಲ್ಲದಿದ್ದರೆ ನಾಳಿನ ಅಂಬೇಡ್ಕರ್ ಜಯಂತಿಗಳು ಪ್ರತಿ ಹಳ್ಳಿಗಳಲ್ಲಿ ಮತ್ತೊಂದು ಮಾರಿ ಹಬ್ಬದಂತೆ ಆಚರಿಸಲ್ಪಡಬಹುದೇನೋ.
ಅಂಬೇಡ್ಕರ್ ಕೃತಕ ಹೊಳಪಿನ ಲೋಹ ಅಲ್ಲ. ವಜ್ರದಷ್ಟೇ ಕಠಿಣ. ಅವರನ್ನು ಪ್ರವೇಶಿಸುವುದಕ್ಕೆ ಕಠಿಣ ಶ್ರಮವೇ ಬೇಕು.

Writer - ಮಲ್ಕುಂಡಿ ಮಹದೇವಸ್ವಾಮಿ

contributor

Editor - ಮಲ್ಕುಂಡಿ ಮಹದೇವಸ್ವಾಮಿ

contributor

Similar News