ಪ್ರಜಾತಂತ್ರ ಮತ್ತು ಸಚಿವರ ಉತ್ತರದಾಯಿತ್ವ

Update: 2021-05-07 19:30 GMT

ಚುನಾವಣೆಯಲ್ಲಿ ಜನಮತದಿಂದ ಆಯ್ಕೆಯಾಗಿ ಬಂದ ನಂತರ ಪ್ರತಿನಿಧಿಯಾಗಿ ಮತ್ತು ಸಚಿವರಾದಾಗ ಆ ನೆಲೆಯಲ್ಲಿಯೂ, ದೇಶದ ಮತ್ತು ತಮ್ಮನ್ನು ಆಯ್ಕೆ ಮಾಡಿದ ಜನರ ಹಿತರಕ್ಷಣೆಯ ಸಾಂವಿಧಾನಿಕ ಜವಾಬ್ದಾರಿ ಓರ್ವ ಪ್ರತಿನಿಧಿಗಿದೆ, ನೇಮಕವಾದ ಸಚಿವರಿಗೂ ಇದೆ. ಅದೂ ಅಲ್ಲದೆ, ತಮ್ಮ ಅವಧಿಯಲ್ಲಿ ಆಗಲೇ ಬೇಕಾದ ಕರ್ತವ್ಯಗಳನ್ನು ಮಾಡದೆ ಇದ್ದಾಗ ಆ ವೈಫಲ್ಯಕ್ಕೆ ಅವರು ಹೊಣೆಗಾರರಾಗಿರುತ್ತಾರೆ. ಪ್ರಜಾತಂತ್ರದ ಅರ್ಥಪೂರ್ಣತೆ ಇರುವುದು ಆ ಹೊಣೆಗಾರಿಕೆಯನ್ನು ತಾವು ಒಪ್ಪಿಕೊಂಡರೆ ಮಾತ್ರ. ಸರ್ವಾಧಿಕಾರಿ ಪದ್ಧತಿಯಲ್ಲಿ ಆ ಉತ್ತರದಾಯಿತ್ವಕ್ಕೆ ಅವಕಾಶ ಇಲ್ಲ.



ಕೋವಿಡ್-19 ಸಾಂಕ್ರಾಮಿಕದ ಎರಡನೇ ಅಲೆಯಿಂದಾಗಿ ಈಗ ಗಮನಕ್ಕೆ ಬರುತ್ತಿರುವ ದೇಶದ ಸಾರ್ವಜನಿಕ ಆರೋಗ್ಯರಂಗದ ದುರವಸ್ಥೆ ಇಡೀ ನಾಗರಿಕ ಸಮಾಜಕ್ಕೇ ತೀವ್ರ ಆಘಾತವನ್ನು ಉಂಟುಮಾಡುವ ಒಂದು ವಿದ್ಯಮಾನ. ಅದು ಜನರಿಂದಲೇ ಚುನಾಯಿತವಾದ ಸರಕಾರದ ಉತ್ತರದಾಯಿತ್ವಹೀನ ವರ್ತನೆಗೆ ಸಮಾಜ ತೆರುತ್ತಿರುವ ಅಸಾಮಾನ್ಯ ಬೆಲೆಯೂ ಕೂಡ.

ಸಂಸದೀಯ ಪದ್ಧತಿಯಲ್ಲಿ ಜನಸಾಮಾನ್ಯರಿಗೆ ಗೌರವ ಹೆಚ್ಚುವುದು ಮತ್ತು ನಂಬಿಕೆ ಭದ್ರವಾಗುವುದು ಜನರಿಂದ ಆಯ್ಕೆಯಾಗಿ ಬಂದ ಮಂತ್ರಿಗಳು ತಮ್ಮ ಸಾಂವಿಧಾನಿಕ ಹಾಗೂ ನೈತಿಕ ಉತ್ತರದಾಯಿತ್ವಕ್ಕೆ ಬದ್ಧತೆಯನ್ನು ತೋರಿಸಿದಾಗ. ತದ್ವಿರುದ್ಧವಾಗಿ ತಮ್ಮ ಸುಪರ್ದಿಯಲ್ಲಿರುವ ವಿಭಾಗಗಳು ಅವುಗಳ ಆದ್ಯ ಕರ್ತವ್ಯವನ್ನು ನಿಭಾಯಿಸುವುದರಲ್ಲಿ ವಿಫಲವಾಗಿ ಅದರಿಂದಾಗಿ ಸಮಾಜಕ್ಕೆ ತೀವ್ರ ನಷ್ಟ, ಜೀವ ಹಾನಿ ಮುಂತಾದ ದುಷ್ಪರಿಣಾಮಗಳು ಸಂಭವಿಸಿದಾಗ ನೈತಿಕತೆಯ ಪ್ರಶ್ನೆ ಏಳುತ್ತದೆ. ಈ ಹಿನ್ನೆಲೆಯಲ್ಲಿ ಕೇಂದ್ರದ (ಮತ್ತು ಕರ್ನಾಟಕದ) ಆರೋಗ್ಯ ಸಚಿವರ ರಾಜೀನಾಮೆಯ ಬೇಡಿಕೆಗಳನ್ನು ಪರಿಶೀಲಿಸಬೇಕಾಗುತ್ತದೆ. ಹಿಂದಿನ ಘಟನೆಗಳು:

ಕಳೆದ ಏಳು ವರ್ಷಗಳಲ್ಲಿ ಸ್ವಾತಂತ್ರ್ಯೋತ್ತರ ದಶಕಗಳ ಸಾಧನೆಗಳನ್ನು ಮತ್ತು ಸಂಪ್ರದಾಯಗಳನ್ನು ತುಚ್ಛೀಕರಿಸುವ ನಿರಂತರ ಪ್ರಯತ್ನ ನಡೆಯುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಷಯ. ಹಾಗಿದ್ದರೂ ಇಂದು ದೇಶ ಎದುರಿಸುತ್ತಿರುವ ಭೀಕರ ಸಂಕಷ್ಟದ ಸಂದರ್ಭದಲ್ಲಿ, ಹಿಂದಿನ ದಶಕಗಳ ಬೇರೆ ಬೇರೆ ಕಾಲಮಾನಗಳಲ್ಲಿ ಸಂಭವಿಸಿದ ನಾಲ್ಕು ಘಟನೆಗಳು ಅಮೂಲ್ಯವಾದ ಪಾಠವನ್ನು ಹೇಳುತ್ತವೆ.

ಶಾಸ್ತ್ರಿ ಮತ್ತು ಟಿಟಿಕೆಯವರ ರಾಜೀನಾಮೆ:

1956 ಆಗಸ್ಟ್ ತಿಂಗಳಲ್ಲಿ ಆಗಿನ ಆಂಧ್ರಪ್ರದೇಶದ ಮೆಹಬೂಬನಗರದ ರೈಲು ದುರ್ಘಟನೆಯಲ್ಲಿ 112 ಮಂದಿ ಮೃತರಾದಾಗ ಅಂದಿನ ರೈಲ್ವೆ ಮಂತ್ರಿ ಲಾಲ್ ಬಹಾದ್ದೂರ್ ಶಾಸ್ತ್ರಿ ರಾಜೀನಾಮೆ ನೀಡಿದರು. ಪ್ರಧಾನ ಮಂತ್ರಿ ಜವಾಹರಲಾಲ್ ನೆಹರೂ ಶಾಸ್ತ್ರಿಯವರ ತ್ಯಾಗಪತ್ರವನ್ನು ಅಂಗೀಕರಿಸಲಿಲ್ಲ. ಅದೇ ವರ್ಷ ನವೆಂಬರ್‌ನಲ್ಲಿ ಆಗಿನ ಮದ್ರಾಸ್ ರಾಜ್ಯದ ಅರಿಯಲೂರಿನಲ್ಲಿ ಮತ್ತೊಂದು ರೈಲು ಅಪಘಾತವಾಗಿ 144 ಮಂದಿ ಅಸು ನೀಗಿದರು. ಮತ್ತೆ ಪದತ್ಯಾಗ ಮಾಡಿದ ಶಾಸ್ತ್ರಿ ತನ್ನ ನೈತಿಕ ಹೊಣೆಯನ್ನು ಒತ್ತಿ ಹೇಳಿ ನೆಹರೂಗೆ ತನ್ನ ರಾಜೀನಾಮೆಯನ್ನು ಸ್ವೀಕರಿಸಲು ಒತ್ತಾಯಿಸಿದರು. ತನ್ನ ನಿಕಟವರ್ತಿಯಾಗಿದ್ದ ಶಾಸ್ತ್ರಿಯವರ ರಾಜೀನಾಮೆಯನ್ನು ಅಂಗೀಕರಿಸುತ್ತಾ ನೆಹರೂ ಹೇಳಿದರು: ‘‘ಅತ್ಯಂತ ದಕ್ಷ ಮತ್ತು ನಿಯತ್ತಿನ ಸಹೋದ್ಯೋಗಿಯಾದ ಶಾಸ್ತ್ರಿಯವರು ಈ ದುರಂತಗಳಿಗೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಕಾರಣರಲ್ಲ. ಆದರೆ ಆತ್ಮಸಾಕ್ಷಿಗೆ ಅನುಗುಣವಾಗಿ ದುಡಿಯುವ ಅವರ ಮನೋಭಾವನೆಯನ್ನು ನಾನು ಗೌರವಿಸುತ್ತೇನೆ.’’ ಶಾಸ್ತ್ರಿಯವರ ನಡತೆ ಮುಂದಿನ ಪೀಳಿಗೆಗೆ ದಾರಿ ಹಾಕಿಕೊಟ್ಟಿತ್ತು.

1958ರ ಫೆಬ್ರವರಿಯಲ್ಲಿ, ಪ್ರಧಾನ ಮಂತ್ರಿ ನೆಹರೂ ಅವರ ಸಂಪುಟದಲ್ಲಿ ಅರ್ಥಮಂತ್ರಿಯಾಗಿದ್ದ ಮಹಾ ಮೇಧಾವಿ ಎಂಬ ಹೆಸರು ಗಳಿಸಿದ್ದ ಟಿ. ಟಿ. ಕೃಷ್ಣಮಾಚಾರಿ (ಟಿಟಿಕೆ) ತಮ್ಮ ರಾಜೀನಾಮೆ ಸಲ್ಲಿಸಿದರು. ಇದಕ್ಕೆ ಕಾರಣ: 1956ರಲ್ಲಿ ಜೀವ ವಿಮಾ ವ್ಯವಹಾರ ರಾಷ್ಟ್ರೀಕರಣಗೊಂಡು ಸ್ಥಾಪಿಸಲ್ಪಟ್ಟ ‘ಭಾರತೀಯ ಜೀವವಿಮಾ ಕಾರ್ಪೊರೇಶನ್’ (ಎಲ್.ಐ.ಸಿ.) ಹರಿದಾಸ ಮುಂಧ್ರರ ಕಂಪೆನಿಗಳ ಶೇರುಗಳಲ್ಲಿ ಅಕ್ರಮವಾಗಿ ತನ್ನ ಹಣವನ್ನು ವಿನಿಯೋಗಿಸಿತು; ಈ ಅವ್ಯವಹಾರದ ಕುರಿತಂತೆ ನೆಹರೂ ಅವರ ಅಳಿಯ ಹಾಗೂ ಕಾಂಗ್ರೆಸ್‌ನ ಸಂಸದರಾಗಿದ್ದ ಫಿರೋಝ್ ಗಾಂಧಿ ಸಂಸತ್ತಿನಲ್ಲಿ ಬಿರುಗಾಳಿ ಎಬ್ಬಿಸಿದರು; ಅದರ ಪರಿಣಾಮವಾಗಿ ನೇಮಕವಾದ ನ್ಯಾಯಮೂರ್ತಿ ಎಂ.ಸಿ.ಛಾಗ್ಲಾ ಆಯೋಗ ನಡೆಸಿದ ವಿಚಾರಣೆಯಲ್ಲಿ ಮುಂಧ್ರ ಮತ್ತು ಎಲ್‌ಐಸಿಯ ಅಕ್ರಮಗಳು ಸಾಬೀತುಗೊಂಡವು. ಟಿಟಿಕೆಯವರು ಮಂತ್ರಿಪದವಿಯನ್ನು ತ್ಯಜಿಸಬೇಕಾಯಿತು.

ವಿ. ಕೆ. ಕೃಷ್ಣ ಮೆನನ್ ಅವರ ಪದತ್ಯಾಗ:
ಮತ್ತೊಂದು ಸಂದರ್ಭದಲ್ಲಿ 1962ರಲ್ಲಿ ಆಗಿನ ರಕ್ಷಣಾ ಸಚಿವರಾಗಿದ್ದ ವಿ. ಕೆ. ಕೃಷ್ಣ ಮೆನನ್ ಅವರು ನೆಹರೂ ಸಂಪುಟದಿಂದ ಹೊರಬಂದರು. ‘ಹಿಂದಿ-ಚೀನೀ ಭಾಯಿ ಭಾಯಿ’ ಎಂಬ ಘೋಷಣೆಯಲ್ಲಿ ಸಮಯ ಕಳೆದ ಸರಕಾರ, ದೇಶದ ರಕ್ಷಣಾ ಸಾಮರ್ಥ್ಯವನ್ನು ಬೆಳೆಸುವತ್ತ ಆದ್ಯತೆ ನೀಡದ ಕಾರಣ ಚೀನಾದ ಆಕ್ರಮಣವನ್ನು ತಡೆಗಟ್ಟಲಾಗಲಿಲ್ಲ. ಆ ಯುದ್ಧವು ಭಾರತಕ್ಕೆ ಅಪಾರವಾದ ಹಾನಿಯನ್ನುಂಟುಮಾಡಿತು. ತಮ್ಮ ಸುಪರ್ದಿಯಲ್ಲಿದ್ದ ರಕ್ಷಣಾ ಸಚಿವಾಲಯದ ಕಾರ್ಯನಿರ್ವಹಣೆಯಲ್ಲಿ ವಿಫಲರಾದ ಹಿನ್ನೆಲೆಯಲ್ಲಿ ನೆಹರೂ ಅವರ ನಿಕಟವರ್ತಿಗಳೂ ಅಂದಿನ ಕಾಲಕ್ಕೆ ಮಹಾನ್ ಚಿಂತಕರೂ ಎಂದು ಖ್ಯಾತರಾಗಿದ್ದ ಕೃಷ್ಣ ಮೆನನ್ ಅಧಿಕಾರತ್ಯಾಗ ಮಾಡಬೇಕಾಗಿ ಬಂತು.

ಅರ್ಥಮಂತ್ರಿ ಮನಮೋಹನ ಸಿಂಗ್‌ರ ರಾಜೀನಾಮೆ:
 1992ರಲ್ಲಿ ಹಣಕಾಸುರಂಗದಲ್ಲಿ ಶೇರು ಮಾರುಕಟ್ಟೆಯ ದಳ್ಳಾಳಿ ಹರ್ಷದ್ ಮೆಹ್ತಾರಿಂದ ಪ್ರೇರಿತವಾದ ಅವ್ಯವಹಾರಗಳ ಬಿರುಗಾಳಿಗೆ ಭಾರತದ ಅರ್ಥವ್ಯವಸ್ಥೆ ತತ್ತರಿಸಿತ್ತು. ರೂ. 4,000 ಕೋಟಿಗಳಿಗಿಂತಲೂ ಮಿಕ್ಕಿದ ಈ ಹಗರಣದ ಸಂದರ್ಭದಲ್ಲಿ ಕೇಂದ್ರ ವಿತ್ತಸಚಿವರಾಗಿದ್ದವರು ವಿಶ್ವಮನ್ನಣೆ ಪಡೆದಿದ್ದ ಮನಮೋಹನ ಸಿಂಗ್. ಸಂಸತ್ತಿನಲ್ಲಿಯೂ, ಅದರ ಹೊರಗೂ ಅವರ ರಾಜೀನಾಮೆಗೆ ತೀವ್ರವಾದ ಬೇಡಿಕೆ ಬಂತು. ಅವ್ಯವಹಾರದ ಕುರಿತಂತೆ ನೈತಿಕ ಹೊಣೆ ತನ್ನದೆಂಬ ಕಾರಣ ನೀಡಿ ಅವರು ತಮ್ಮ ರಾಜೀನಾಮೆಯನ್ನು ಅಂದಿನ ಪ್ರಧಾನಿ ಪಿ. ವಿ. ನರಸಿಂಹರಾವ್‌ರಿಗೆ ರವಾನಿಸಿದರು. ರಾಜಕೀಯ ಮತ್ತು ನೈತಿಕ ನೆಲೆಯಲ್ಲಿ ಅವರ ನಿರ್ಧಾರ ಸಮಂಜಸವಾದುದಾಗಿತ್ತು. ಒಂದು ವಾರದ ಬಳಿಕ ಪ್ರಧಾನಿ ನರಸಿಂಹರಾವ್ ಅವರು ‘‘ಹಣಕಾಸು ಸಚಿವರಾಗಿ ನೀವು ಮಾಡಬೇಕಾದ ಅನೇಕ ಕಾರ್ಯಗಳು ಇನ್ನೂ ಅಪೂರ್ಣವಾಗಿವೆ. ಹಾಗಾಗಿ ನೀವು ಹುದ್ದೆಯಲ್ಲಿ ಮುಂದುವರಿಯಿರಿ’’ ಎಂದು ಮನಮೋಹನ್ ಸಿಂಗರಿಗೆ ಉತ್ತರಿಸಿದರು. ಮುಂದಿನ ಬೆಳವಣಿಗೆ ಇಲ್ಲಿ ಅಪ್ರಸ್ತುತ.

ಸಾಂವಿಧಾನಿಕ ಮತ್ತು ನೈತಿಕ ಉತ್ತರದಾಯಿತ್ವ:
 ಈ ಎಲ್ಲ ಘಟನೆಗಳು ಸಂಸದೀಯ ಪದ್ಧತಿಯಲ್ಲಿ ಜನಪ್ರತಿನಿಧಿಗಳ ಉತ್ತರದಾಯಿತ್ವದ ದ್ಯೋತಕಗಳು. ಚುನಾವಣೆಯಲ್ಲಿ ಜನಮತದಿಂದ ಆಯ್ಕೆಯಾಗಿ ಬಂದ ನಂತರ ಪ್ರತಿನಿಧಿಯಾಗಿ ಮತ್ತು ಸಚಿವರಾದಾಗ ಆ ನೆಲೆಯಲ್ಲಿಯೂ, ದೇಶದ ಮತ್ತು ತಮ್ಮನ್ನು ಆಯ್ಕೆ ಮಾಡಿದ ಜನರ ಹಿತರಕ್ಷಣೆಯ ಸಾಂವಿಧಾನಿಕ ಜವಾಬ್ದಾರಿ ಓರ್ವ ಪ್ರತಿನಿಧಿಗಿದೆ, ನೇಮಕವಾದ ಸಚಿವರಿಗೂ ಇದೆ. ಅದೂ ಅಲ್ಲದೆ, ತಮ್ಮ ಅವಧಿಯಲ್ಲಿ ಆಗಲೇ ಬೇಕಾದ ಕರ್ತವ್ಯಗಳನ್ನು ಮಾಡದೆ ಇದ್ದಾಗ ಆ ವೈಫಲ್ಯಕ್ಕೆ ಅವರು ಹೊಣೆಗಾರರಾಗಿರುತ್ತಾರೆ. ಪ್ರಜಾತಂತ್ರದ ಅರ್ಥಪೂರ್ಣತೆ ಇರುವುದು ಆ ಹೊಣೆಗಾರಿಕೆಯನ್ನು ತಾವು ಒಪ್ಪಿಕೊಂಡರೆ ಮಾತ್ರ. ಸರ್ವಾಧಿಕಾರಿ ಪದ್ಧತಿಯಲ್ಲಿ ಆ ಉತ್ತರದಾಯಿತ್ವಕ್ಕೆ ಅವಕಾಶ ಇಲ್ಲ.

 ದೇಶ ಮತ್ತು ಕರ್ನಾಟಕ ರಾಜ್ಯದಲ್ಲಿ ಕೊರೋನ ಹೆಮ್ಮಾರಿ ತಡೆಯಿಲ್ಲದೆ ಹರಡುತ್ತಿರುವ ಹಿನ್ನೆಲೆ ಮತ್ತು ಅದರ ಬಗ್ಗೆ ಕೇಂದ್ರ ಮತ್ತು ರಾಜ್ಯದ ಆರೋಗ್ಯ ಸಚಿವರ ಪ್ರತಿಕ್ರಿಯೆಗಳು ಪ್ರಜಾಪ್ರಭುತ್ವದ ಮೂಲ ಆಶಯಗಳ ಸರಹದ್ದುಗಳ ಹೊರಗೆಯೇ ಇವೆ. ಹೋದ ವರ್ಷದ ಆರಂಭದಿಂದಲೇ ಕಾಣಬಂದ ಈ ಸಾಂಕ್ರಾಮಿಕವನ್ನು ತಡೆಯುವ, ಬಾಧೆಗೆ ಒಳಗಾದವರಿಗೆ ಸೂಕ್ತ ಚಿಕಿತ್ಸೆಗೆ ಬೇಕಾದ ಸೌಲಭ್ಯ ಒದಗಿಸುವ ಮತ್ತು ಜನಸಾಮಾನ್ಯರಿಗೆ ಮುಂಜಾಗರೂಕತಾ ಕ್ರಮವಾಗಿ ರೋಗನಿರೋಧಕ ಚುಚ್ಚುಮದ್ದುಗಳ ಉತ್ಪಾದನೆ ಮತ್ತು ವಿತರಣೆ ಮಾಡಿಸುವ ಕಾರ್ಯಪ್ರಣಾಳಿಗಳನ್ನು ಇವರ್ಯಾರೂ ರೂಪಿಸಲೇ ಇಲ್ಲ. ಈ ವೈಫಲ್ಯಗಳ ಪರಿಣಾಮ ಇಡೀ ದೇಶದ ಜನಸಾಮಾನ್ಯರ ಮೇಲೆ ಇಂದು ಆಗುತ್ತಾ ಇದೆ. ಈ ವೈಫಲ್ಯಗಳ ನಡುವೆ ಕೇಂದ್ರ ಆರೋಗ್ಯ ಸಚಿವರಾದ ಹರ್ಷವರ್ಧನರು, ಓರ್ವ ದೂರದರ್ಶಿಯಾಗಿ ವಿಶ್ವದಾದ್ಯಂತ ಗೌರವಕ್ಕೆ ಪಾತ್ರರಾದ ಮತ್ತು ಆಡಳಿತದಲ್ಲಿ ಅಪಾರ ಅನುಭವ ಹೊಂದಿರುವ ಹಿರಿಯ ಮುತ್ಸದ್ದಿ ಮನಮೋಹನ ಸಿಂಗ್‌ರು ಈಗಿನ ಪ್ರಧಾನಿಗಳಿಗೆ ನಿರ್ದಿಷ್ಟವಾದ ಸಲಹೆಗಳನ್ನು ನೀಡಿ ಬರೆದ ಪತ್ರಕ್ಕೆ ಉದ್ಧಟತನದ ಉತ್ತರ ನೀಡಿದ್ದರೆಂಬುದನ್ನು ನಾವು ಸ್ಮರಿಸಿಕೊಳ್ಳಬೇಕು. ಈ ಮನೋಭಾವವೂ ಪ್ರಜಾತಂತ್ರಕ್ಕೆ ಮಾರಕವಾಗುತ್ತದೆ.

ಕೇಂದ್ರದ ಮತ್ತು ರಾಜ್ಯದ ಆರೋಗ್ಯ ಮಂತ್ರಿಗಳು ಪದತ್ಯಾಗ ಮಾಡಿದರೆ ಸಾಂಕ್ರಾಮಿಕವನ್ನು ತಡೆಯಲು ಸಾಧ್ಯವೇ ಎಂಬ ಪ್ರಶ್ನೆ ಉದ್ಭವಿಸಬಹುದು. ಅದಕ್ಕಿಂತಲೂ ಪ್ರಮುಖವಾದ ಪ್ರಶ್ನೆ ಈ ತನಕ ತಮ್ಮ ಜವಾಬ್ದಾರಿಯನ್ನು ನಿಭಾಯಿಸುವಲ್ಲಿ ಸಂಪೂರ್ಣ ವಿಫಲರಾದುದಕ್ಕೆ ಹೊಣೆಗಾರಿಕೆ ಎಂಬುದು ಬೇಡವೇ? ಪ್ರಜಾಪ್ರಭುತ್ವದಲ್ಲಿ ಅಧಿಕಾರದಲ್ಲಿ ಉಳ್ಳ್ಳವರಿಗೆ ಹೊಣೆಗಾರಿಕೆ ಇದೆ ಎಂಬುದನ್ನು ಒತ್ತಿ ಹೇಳಲು ಈ ತರದ ನಿರ್ಧಾರಗಳು ಅಗತ್ಯ. ಅದರ ಅರಿವಿಗೋಸ್ಕರ ಕೇಂದ್ರದ ಮತ್ತು ರಾಜ್ಯದ ಆರೋಗ್ಯ ಸಚಿವರು ಪದತ್ಯಾಗ ಮಾಡುವ ಮೂಲಕ ಪ್ರಜಾಪ್ರಭುತ್ವದಲ್ಲಿ ಜನರಿಗೆ ಒಂದಷ್ಟು ನಂಬಿಕೆ ಬರುವಂತೆ ಮಾಡಬಹುದು. ಅವರ ಸ್ಥಾನಕ್ಕೆ ನೇಮಕವಾಗುವವರಿಗೂ ಅದೊಂದು ಎಚ್ಚರಿಕೆಯಾಗುತ್ತದೆ.

Writer - ಟಿ. ಆರ್. ಭಟ್

contributor

Editor - ಟಿ. ಆರ್. ಭಟ್

contributor

Similar News