ಜನಸೇವೆಯ ಮಧ್ಯೆ ಕೆಳಮಟ್ಟದ ರಾಜಕೀಯ ಮಾಡುವುದು ನನಗೆ ಗೊತ್ತಿಲ್ಲ..!: -ಸುಮಲತಾ ಅಂಬರೀಷ್

Update: 2021-05-08 19:30 GMT

ಅಂಬರೀಷ್‌ರಂತೆ ಸುಮಲತಾ ಕೂಡ ರಾಜಕೀಯ ಕ್ಷೇತ್ರವನ್ನು ಪ್ರವೇಶಿಸಿರುವುದು ಅನಿರೀಕ್ಷಿತವಾಗಿಯೇ. ಬಹುಶಃ ಅದೇ ಕಾರಣದಿಂದಲೇ ಇರಬಹುದು, ಇಂದು ರಾಜಕೀಯದಲ್ಲಿದ್ದೂ ‘ರಾಜಕಾರಣ’ ಮಾಡದ ವ್ಯಕ್ತಿಗಳಾಗಿ ಅವರು ಗುರುತಿಸಿಕೊಳ್ಳುತ್ತಾರೆ. ಕೋವಿಡ್ ಕಾಲವನ್ನು ಕೂಡ ತಮ್ಮ ಬೇಳೆ ಬೇಯಿಸಿಕೊಳ್ಳಲು ಬಳಸಿಕೊಳ್ಳುವ ರಾಜಕಾರಣಿಗಳ ವಿರುದ್ಧ ಸಂಸದೆ ಸುಮಲತಾ ಅವರು ಸಿಡಿದೆದ್ದಿದ್ದಾರೆ. ಈ ಸಂದರ್ಭದಲ್ಲಿ ಸಂಸದೆಯಾಗಿ ಮಾತ್ರವಲ್ಲ, ವೈಯಕ್ತಿಕವಾಗಿ ತಮ್ಮ ಕೈಲಾದ ಸಹಾಯ ಮಾಡುವುದೇ ಧರ್ಮ ಎನ್ನುವುದನ್ನು ಅವರು ‘ವಾರ್ತಾಭಾರತಿ’ಯೊಂದಿಗಿನ ಮಾತುಕತೆಯಲ್ಲಿ ಒತ್ತಿ ಹೇಳಿದ್ದಾರೆ.


ಕೋವಿಡ್ ಕಾಲಘಟ್ಟ ಒಬ್ಬ ಸಂಸದೆಯಾಗಿ ನಿಮಗೆಷ್ಟು ಆತಂಕ ತಂದಿದೆ?

 ಇದು ಸಂಸದೆಗಷ್ಟೇ ಅಲ್ಲ; ಪ್ರತಿಯೊಬ್ಬರಿಗೂ ಪ್ರಾಣಭಯ ಮೂಡಿಸಿರುವ ಕಾಯಿಲೆ. ಆದರೆ ನನಗಂತೂ ನನ್ನ ಪ್ರಾಣಭಯದ ಜೊತೆಗೆ ಮತ್ತೊಂದಷ್ಟು ಆತಂಕದಿಂದಲೇ ದಿನ ಶುರುವಾಗುತ್ತದೆ. ಕಾರಣ ಬೆಳಗ್ಗೆ ಆರಂಭವಾಗುವ ಫೋನ್ ಕರೆಗಳು ಒಂದು ಕಡೆ ಸಾವಿನ ಸುದ್ದಿಯನ್ನು, ಮತ್ತೊಂದೆಡೆ ಆಕ್ಸಿಜನ್ ಸಿಗುತ್ತಿಲ್ಲ ಎನ್ನುವ ನೋವನ್ನೇ ಹೇಳುತ್ತಿರುತ್ತವೆ. ಹಾಗಾಗಿ ಪ್ರತಿಯೊಬ್ಬರ ಸಾವು ಕೂಡ ನಮಗೆ ಸಂಬಂಧಿಸಿದ್ದೇ ಎನ್ನುವ ನೋವಿದೆ. ಕುಟುಂಬದೊಳಗೆ ಒಂದು ಅನಿರೀಕ್ಷಿತ ಸಾವು ನೀಡುವ ಆಘಾತ ನನಗೂ ಚೆನ್ನಾಗಿ ಗೊತ್ತು. ಮುನ್ನೆಚ್ಚರಿಕೆ ಒಂದನ್ನು ಬಿಟ್ಟು ಬೇರೇನನ್ನೂ ಮಾಡಲಾಗದ ಅಸಹಾಯಕ ಪರಿಸ್ಥಿತಿ ನಮ್ಮೆಲ್ಲರದ್ದು. ಆ ಮುನ್ನೆಚ್ಚರಿಕೆ ಕೂಡ ಸರಿಯಾಗಿ ಪಾಲಿಸದ ಸರಕಾರದ ಕ್ರಮದ ಬಗ್ಗೆ ನೋವಿದೆ.


ಲಾಕ್‌ಡೌನ್ ಮೂಲಕ ಎಷ್ಟರ ಮಟ್ಟಿಗೆ ಕೋವಿಡ್ ನಿಯಂತ್ರಣ ಸಾಧ್ಯ?
ಕಳೆದ ಬಾರಿ ತುಂಬ ಕಠಿಣವಾದ ಲಾಕ್‌ಡೌನ್ ಇದ್ದುದರಿಂದ ತುಂಬಾನೇ ಸೋಂಕು ನಿಯಂತ್ರಣ ಸಾಧ್ಯವಾಗಿತ್ತು. ಆದರೆ ಬಡವರಿಗೆ ಕಷ್ಟವಾಗಿದೆ ಎನ್ನುವ ಕಾರಣದಿಂದಲೇ ಇರಬಹುದು; ಈ ಬಾರಿ ಅಷ್ಟು ಸ್ಟ್ರಿಕ್ಟ್ ಆದ ಲಾಕ್‌ಡೌನ್ ಅಳವಡಿಸಲಾಗಿಲ್ಲ. ಒಂದು ಕಡೆ ಲಾಕ್‌ಡೌನ್ ಆದರೂ ಒಪ್ಪಲ್ಲ; ಮತ್ತೊಂದೆಡೆ ಮಾಡದಿದ್ದರೂ ಒಪ್ಪಲ್ಲ ಎನ್ನುವ ಅಭಿಪ್ರಾಯ ಜನರಿಂದ ಬರುತ್ತಿದೆ. ಆದರೆ ಇದರಲ್ಲಿ ರಾಜಕೀಯ ನುಸುಳಲು ಬಿಡಬಾರದು. ಲಾಕ್‌ಡೌನ್ ಮಾಡುವುದರಿಂದ ಆರ್ಥಿಕತೆಗೆ ಹೊಡೆತ ಬೀಳುತ್ತೆ ಅನ್ನೋದು ನಿಜ. ಆದರೆ ಜೀವ ಇದ್ದರೆ ತಾನೇ ಜೀವನ? ನಾವೇ ಇರದ ನಾಳಿನ ಆರ್ಥಿಕತೆಯ ಬಗ್ಗೆ ನಾವು ಯಾಕೆ ಚಿಂತಿಸಬೇಕಿದೆ? ಸೆಮಿಲಾಕ್‌ಡೌನ್ ಬಗ್ಗೆ ಜನ ಸಹಕರಿಸಲಾರರು. ಬೀದಿಗೊಂದು ದಿನಸಿ ಅಂಗಡಿ, ಸೂಪರ್ ಮಾರ್ಕೆಟ್, ಮೆಡಿಕಲ್ ಶಾಪ್, ಹಾಸ್ಪಿಟಲ್ ಇದ್ದಾಗ ಮಾತ್ರ ನಡೆದೇ ಹೋಗಿ ಎನ್ನುವ ರೂಲ್ ಮಾಡಬಹುದು. ಆದರೆ ಆ ವ್ಯವಸ್ಥೆ ನಮ್ಮಲ್ಲೆಷ್ಟು ಕಡೆಗಳಲ್ಲಿ ಇವೆ? ಹಾಗಾಗಿ ಪೂರ್ತಿ ಲಾಕ್‌ಡೌನ್ ಮಾಡುವ ಮೊದಲು ಕಾರ್ಮಿಕರ, ಬಡಜನರ ಬಗ್ಗೆ ಗಮನ ಇರಿಸಿಕೊಂಡೇ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ.


ನಿಮ್ಮ ಪ್ರಕಾರ ಲಾಕ್‌ಡೌನ್ ಪರಿಸ್ಥಿತಿಯನ್ನು ಹೇಗೆ ನಿಭಾಯಿಸಬೇಕು?
ಕಳೆದ ಸಲದ ದಿಢೀರ್ ಲಾಕ್‌ಡೌನ್ ಕಾರಣ ಎಷ್ಟು ಮಂದಿಗೆ ತೊಂದರೆಯಾಗಿದೆ ಎನ್ನುವುದನ್ನು ಕೂಡ ನಾವು ನೋಡಿದ್ದೇವೆ. ಹಾಗಾಗಿ ಅವರ ಕಷ್ಟವನ್ನು ತಲೆಯಲ್ಲಿ ಇರಿಸಿಕೊಂಡೇ ನಿರ್ಧಾರ ಮಾಡಬೇಕಾಗುತ್ತದೆ. ಆ ಜವಾಬ್ದಾರಿಯನ್ನು ಸರಕಾರ ಹಂಚಬೇಕಾಗುತ್ತದೆ. ಗ್ರಾಮೀಣ ಪ್ರದೇಶಗಳಲ್ಲಾದರೆ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್, ವಾರ್ಡ್‌ಗಳಿವೆ. ನಗರಗಳಲ್ಲಿ ಕೌನ್ಸಿಲರ್ಸ್, ಕಾರ್ಪೊರೇಟರ್ಸ್ ಇದ್ದಾರೆ. ಪ್ರತಿಯೊಂದು ಬೀದಿಗೂ ಒಬ್ಬೊಬ್ಬರು ಜವಾಬ್ದಾರಿ ವಹಿಸುವಂತೆ ಮಾಡಿ ಆಯಾ ಬೀದಿಗಳಲ್ಲಿನ ಸಮಸ್ಯೆಗಳನ್ನು ಅರಿತುಕೊಂಡು ಅವರ ಬೇಕು ಬೇಡಗಳ ಬಗ್ಗೆ ಕಾಳಜಿ ವಹಿಸಬೇಕಾಗುತ್ತದೆ. ಮನೆಮನೆಗೆ ನೇರವಾಗಿ ಯೋಜನೆಗಳನ್ನು ತಲುಪಿಸಲಾಗದ ಸಂದರ್ಭದಲ್ಲಿ ಲಾಕ್‌ಡೌನ್ ಮಾಡಿ ಉಪಯೋಗವೇನು? ಉದಾಹರಣೆಗೆ ಅನಾರೋಗ್ಯದ ಸಂದರ್ಭದಲ್ಲಿ ಪರೀಕ್ಷೆ ಮಾಡಿಸಲಿಕ್ಕಾದರೂ ಮನೆಯಿಂದ ಹೊರಗಡೆ ಹೋಗಲೇಬೇಕು ತಾನೇ? ಅಥವಾ ವ್ಯಾಕ್ಸಿನ್ ಹಾಕಿಸಲಿಕ್ಕಾದರೂ ಹೊರಗಡೆ ಹೋಗಲೇಬೇಕು. ಅದಕ್ಕಿಂತ ಎಲ್ಲರ ಮನೆಗೆ ಈ ವ್ಯವಸ್ಥೆ ತಲುಪುವಂತಾದಾಗಲೇ ಲಾಕ್‌ಡೌನ್ ಸಾರ್ಥಕ ಅನಿಸಬಹುದು.


ಕಳೆದ ಬಾರಿಗೆ ಹೋಲಿಸಿದರೆ ನೀವು ಈ ಬಾರಿ ಹೊರಗಡೆ ಕಾಣಿಸಿಕೊಂಡಿದ್ದು ಕಡಿಮೆ ಎಂದೇ ಹೇಳಬಹುದಲ್ಲ?
ಕಳೆದ ಬಾರಿ ಎಚ್ಚರಿಕೆ ವಹಿಸಿಕೊಂಡೇ ಹೊರಗಡೆ ಸುತ್ತಾಡಿದ್ದರೂ ನನಗೆ ಕೋವಿಡ್ ಬಂದಿತ್ತು. ಈ ಬಾರಿಯ ಘಟನೆಗಳನ್ನು ಗಮನಿಸಿದರೆ ನನಗೆ ಮಾತ್ರವಲ್ಲ, ಜೊತೆಗೆ ಗುಂಪು ಸೇರುವವರಿಗೂ ಅಪಾಯ ಇತ್ತು. ಯಾಕೆಂದರೆ ನನಗೆ ಸಂಸದೆ ಎನ್ನುವುದರ ಜೊತೆಗೆ ಅಂಬರೀಷ್ ಅವರ ಪತ್ನಿ ಮತ್ತು ಸಿನೆಮಾರಂಗದಿಂದ ಬಂದಿದ್ದೀನಿ ಎನ್ನುವ ಕಾರಣದಿಂದಲೂ ಹೆಚ್ಚಿನ ಜನಾಕರ್ಷಣೆ ಸಿಗುತ್ತದೆ. ಅವರೆಲ್ಲರನ್ನು ನಿಯಮಗಳ ಮೂಲಕ ನಿಯಂತ್ರಿಸಲಾಗದ ಪರಿಸ್ಥಿತಿ ಉಂಟಾಗುತ್ತದೆ. ಹಾಗೆ ಅಭಿಮಾನದಿಂದ ಸೇರುವ ಜನರ ನಡುವೆ ಕೋವಿಡ್ ಹರಡಿದರೆ ಅದಕ್ಕೆ ನಾನೇ ಹೊಣೆಯಾಗಬೇಕಾಗುತ್ತದೆ. ಹಾಗಂತ ನಾನು ನನ್ನ ಜವಾಬ್ದಾರಿ ನಿರ್ವಹಿಸಲು ಯಾವತ್ತಿಗೂ ಹಿಂಜರಿದಿಲ್ಲ. ಫೋನ್ ಮೂಲಕ ಅಧಿಕಾರಿಗಳೊಂದಿಗೆ ನಿತ್ಯ ಸಂಪರ್ಕದಲ್ಲಿರುತ್ತೇನೆ. ನಮ್ಮ ಕಚೇರಿ ಸದಾ ತೆರೆದೇ ಇರುತ್ತದೆ. ಕೋವಿಡ್ ಹೊರತಾಗಿಯೂ ಬರುವ ಸಮಸ್ಯೆಗಳಿಗೆ ಸ್ಪಂದಿಸಲು ಸಿಬ್ಬಂದಿ ಕಾರ್ಯನಿರತರಾಗಿರುತ್ತಾರೆ. ಅವರ ಯಾವುದೇ ಅರ್ಜಿಗಳು ನನ್ನ ತನಕ ತಲುಪುತ್ತವೆ, ನಾನು ಪರಿಶೀಲಿಸುತ್ತಿರುತ್ತೇನೆ. ಇವೆಲ್ಲವುಗಳನ್ನು ನಾನು ಹೊರಗಡೆ ಬಂದು ಫೋಟೊಗೆ ಪೋಸು ನೀಡಿ ಪ್ರಚಾರ ಮಾಡಬೇಕಾದ ಅಗತ್ಯವಿಲ್ಲ.


 ಬಹುಶಃ ಪ್ರಚಾರಕ್ಕೆ ಹಿಂಜರಿದ ಕಾರಣವೇ ನಿಮ್ಮಿಂದ ಆಕ್ಸಿಜನ್ ದೊರಕಿಲ್ಲವೆಂಬ ಆಪಾದನೆ ಕೂಡ ಬಂತು ಎನ್ನಬಹುದೇ?

ಅದನ್ನು ಚೀಪ್ ಪಾಲಿಟಿಕ್ಸ್ ಎನ್ನಬಹುದು. ಅದು ಕೂಡ ಈ ಸಮಯದಲ್ಲಿ ಬೇಕಾಗಿರಲಿಲ್ಲ. ಕೆಲವರ ಪಾಲಿಗೆ ರಾಜಕೀಯವೆಂದರೆ ಅದೇನೇ. ಅವರಿಗೆ ಬೇರೆ ಗೊತ್ತಿಲ್ಲ. ನನ್ನ ಮೇಲೆ ಈ ಆಪಾದನೆ ಮಾಡಿರುವ ಶ್ರೀರಂಗಪಟ್ಟಣದ ಶಾಸಕರಿಗೆ ಅಲ್ಲೇ ನಡೆಯುತ್ತಿದ್ದ ಅಕ್ರಮ ಮೈನಿಂಗ್ ಬಗ್ಗೆಯೇ ಅರಿವಿರಲಿಲ್ಲ. ಇನ್ನು ನಮ್ಮ ಕಾಳಜಿಯ ಬಗ್ಗೆ ಹೇಗೆ ತಾನೇ ಅರಿವಿರಲು ಸಾಧ್ಯ? ಮಂಡ್ಯ ಜಿಲ್ಲೆಯಲ್ಲಿ ಆಕ್ಸಿಜನ್ ಕೊರತೆಯಿಂದ ಯಾರೊಬ್ಬರ ಸಾವಾಗಬಾರದು ಎನ್ನುವ ಉದ್ದೇಶ ನನ್ನದಾಗಿತ್ತು. ಬಳ್ಳಾರಿ, ಪೀಣ್ಯ, ತುಮಕೂರು, ಮೈಸೂರಲ್ಲಿ ಬೇಡಿಕೊಂಡ ಮೇಲೆ ಅಂಬರೀಷ್ ಅವರ ಹೆಸರಿನ ಪುಣ್ಯದಿಂದ ನನ್ನ ಮನವಿಗೆ ಆಕ್ಸಿಜನ್ ನೀಡಲು ಒಪ್ಪಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಇವರು ಖಾಲಿ ಸಿಲಿಂಡರ್ ಬಗ್ಗೆ ವಿವಾದ ಮಾಡುತ್ತಿದ್ದಾರೆ. ಖಾಲಿ ಸಿಲಿಂಡರ್ ಇದ್ದರೇನೇ ಅವುಗಳನ್ನು ತುಂಬಿಸಲು ಸಾಧ್ಯ. ಕಳಿಸಲಾದ ಖಾಲಿ ಸಿಲಿಂಡರ್‌ಗೆ ಆಕ್ಸಿಜನ್ ತುಂಬಿ ವಾಪಸು ಮಾಡಲಾಗಿದೆ. ಶುಕ್ರವಾರ ಎರಡು ಆಸ್ಪತ್ರೆಗಳಿಗೆ ಎರಡು ಟ್ಯಾಂಕ್‌ಗಳಲ್ಲಿ ಮೂರುಲಕ್ಷ ಲೀಟರ್ ಆಕ್ಸಿಜನ್ ಫಿಲ್ ಮಾಡಿಸಿ ಆಕ್ಸಿಜನ್‌ಗೆ ಯಾವುದೇ ದುಡ್ಡು ಪಡೆಯದೆ ಕಳಿಸಿಕೊಟ್ಟಿದ್ದೇನೆ. ಇದಕ್ಕೆ ಫೋಟೊಗಳು ಅಲ್ಲ, ಡಿ.ಸಿ. ಕಡೆಯಿಂದಲೇ ದಾಖಲೆಗಳಿವೆ. ಬಿಲ್ ಇವೆ. ಎಲ್ಲವೂ ಇವೆ.

Writer - ಶಶಿಕರ ಪಾತೂರು

contributor

Editor - ಶಶಿಕರ ಪಾತೂರು

contributor

Similar News