‘ಶಿವ’ಮಯ ಅನುಭವದ ಬಗ್ಗೆ ರಾಕೇಶ್ ಮಯ್ಯ....

Update: 2021-05-16 08:13 GMT

ಎಲ್ಲ ಭಾಷೆಯ ಚಿತ್ರರಂಗದಲ್ಲಿ ಕೂಡ ಒಬ್ಬರು ತುಂಬ ಹೆಸರು ಮಾಡಿರುವ ಕಲಾವಿದ ಇರುತ್ತಾರೆ. ಒಂದು ಹಂತದಲ್ಲಿ ಆ ಭಾಷೆಯ ಚಿತ್ರರಂಗವೇ ಅವರ ಹೆಸರಿನಿಂದ ಗುರುತಿಸಲ್ಪಡುತ್ತದೆ. ಹಾಗಾದಾಗ ಆ ನಟನ ಜೊತೆಗೆ ಒಮ್ಮೆಯಾದರೂ ನಟಿಸಬೇಕೆನ್ನುವುದು ಆ ಚಿತ್ರರಂಗದಲ್ಲಿರುವ ಬಹುತೇಕ ಕಲಾವಿದರಿಗೆ ಗುರಿಯಾಗಿರುತ್ತದೆ. ಆದರೆ ಕೆಲವರಿಗೆ ಮಾತ್ರ ಆ ಅದೃಷ್ಟ ದೊರಕುತ್ತದೆ. ಕನ್ನಡದಲ್ಲಿ ಆ ಮಟ್ಟಕ್ಕೆ ಹೆಸರು ಮಾಡಿರುವ ನಟರಾಗಿ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಇದ್ದಾರೆ. ಅವರೊಡನೆ ನಟಿಸಬೇಕು ಎನ್ನುವ ಆಕಾಂಕ್ಷೆಯನ್ನು ಈಡೇರಿಸಿಕೊಂಡವರಾಗಿ ‘ಮಗಳು ಜಾನಕಿ ನಿರಂಜನ್’ ಖ್ಯಾತಿಯ ಯುವನಟ ರಾಕೇಶ್ ಮಯ್ಯ ಇದ್ದಾರೆ. ಈಗ ಆ ಸಂದರ್ಭ ಹೇಗಿತ್ತು ಎನ್ನುವುದನ್ನು ತಿಳಿಯಲು ಒಂದಿಡೀ ಸಿನೆಮಾ ಪ್ರಿಯರ ಸಮೂಹವೇ ಕಾದಿದೆ ಎನ್ನುವುದು ಎಲ್ಲರಿಗೂ ಗೊತ್ತು. ಹಾಗಾಗಿಯೇ ರಾಕೇಶ್ ಮಯ್ಯ ಅವರಲ್ಲಿ ಆ ಅನುಭವ ಕಥನದ ಬಗ್ಗೆ ವಿಚಾರಿಸಿದಾಗ ‘ವಾರ್ತಾಭಾರತಿ’ಗೆ ದೊರಕಿದ ರಸಮಯ ವಿಚಾರಗಳು ಹೀಗಿವೆ.

ನೀವು ಶಿವರಾಜ್ ಕುಮಾರ್ ಅವರನ್ನು ಭೇಟಿಯಾದ ಸಂದರ್ಭ ಹೇಗಿತ್ತು?

 ಹಾಗೆ ನೋಡಿದರೆ ನಾನು ಅವರನ್ನು ಮೊದಲ ಬಾರಿ ನೇರವಾಗಿ ಕಂಡದ್ದು ‘ಟಗರು’ ಸಿನೆಮಾದ ಚಿತ್ರೀಕರಣದ ವೇಳೆ. ಅಲ್ಲಿಯೇ ಅವರ ಎನರ್ಜಿಯನ್ನು ಕಣ್ಣಾರೆ ನೋಡಿದ್ದೆ. ಆದರೆ ಆ ಬಗ್ಗೆ ಮಾತನಾಡುವ ಅವಕಾಶ ದೊರಕಿದ್ದು ಜೊತೆಗೆ ಕೆಲಸ ಮಾಡಿದ ಸಂದರ್ಭದಲ್ಲಿ. ಅಂದಹಾಗೆ ಈ ಅವಕಾಶ ನನಗೆ ಸಿನೆಮಾ ಮೂಲಕ ದೊರಕಿದ್ದಲ್ಲ. ಅದೊಂದು ಜಾಹೀರಾತು. ಬಹುಶಃ ಆ ಪುಳಿಯೋಗೆರೆ ಜಾಹೀರಾತು ನೀವು ಕೂಡ ನೋಡಿರಬಹುದು. ಚಿತ್ರೀಕರಣದಲ್ಲಿಯೂ ಅಷ್ಟೇ, ಲೈಟಿಂಗ್ ಬದಲಾಯಿಸುವ ಸಂದರ್ಭದಲ್ಲಿ ಅವರಿ ಗೊಂದು ಕುರ್ಚಿ ನೀಡಿ ಕುಳಿತುಕೊಳ್ಳುವಂತೆ ಹೇಳಿ ದರೂ ಅವರು ಪರ್ವಾಗಿಲ್ಲ ಎಂದು ಅದರತ್ತ ಗಮನವೇ ಕೊಡುತ್ತಿರಲಿಲ್ಲ. ಎಲ್ಲ ಕಡೆ ಉತ್ಸಾಹದಿಂದ ಓಡಾಡು ತ್ತಿದ್ದರು. ಸ್ಟಾರ್ ಇಮೇಜ್ ಹೇಗಿರುತ್ತದೆ ಎನ್ನುವುದು ತಿಳಿಯದವರಿಗೆ ಇದೇನೂ ವಿಶೇಷ ಅನಿಸುವುದಿಲ್ಲ. ಆದರೆ ಅಂತಹ ದೊಡ್ಡ ಇಮೇಜ್ ಇರಿಸಿಕೊಂಡಿದ್ದರೂ ಅದರ ಬಗ್ಗೆ ಯಾವುದೇ ಪರಿವೆಯೇ ಇಲ್ಲದಂತೆ ಇರುತ್ತಾರಲ್ಲ? ಅದೇ ಶಿವಣ್ಣನ ಸರಳತೆ.

 ಶಿವರಾಜ್ ಕುಮಾರ್ ಅವರಲ್ಲಿ ಕಂಡ ವಿಶೇಷತೆ?

ನಾನು ಶಿವರಾಜ್ ಕುಮಾರ್ ಅವರಿಗೆ ಮೊದಲು ನನ್ನನ್ನು ಪರಿಚಯಿಸಬೇಕಿತ್ತು. ಸರ್, ನಾನು ನಿಮ್ಮ ಫ್ಯಾನ್ ಎಂದೇ ಮಾತು ಶುರುಮಾಡಿದೆ. ಅದಕ್ಕೆ ಅವರು ಓಹ್ ನೀವು ಕನ್ನಡದವರಾ? ಎಂದು ಅಚ್ಚರಿಯಿಂದ ಪ್ರತಿಕ್ರಿಯಿಸಿದರು. ಅವರು ಹಾಗೆ ಕೇಳೋದಕ್ಕೆ ಕಾರಣವಿತ್ತು. ಆ ಜಾಹೀರಾತನ್ನು ಮುಂಬೈ ತಂಡದವರು ಚಿತ್ರೀಕರಿಸುತ್ತಿದ್ದರು ಎನ್ನುವಲ್ಲಿಗೆ ಶಿವಣ್ಣ ಪ್ರಾಜೆಕ್ಟ್ ಯಾವುದು ಎನ್ನುವುದನ್ನಷ್ಟೇ ಗಮನಿಸಿ ಒಪ್ಪಿಕೊಂಡಿದ್ದಾರೆ ಎಂದು ಸಾಬೀತಾಗಿತ್ತು. ಆ ವರ್ತನೆ ಅವರು ನಿರ್ದೇಶಕರ ವಿಭಾಗದಲ್ಲಿ ತಲೆ ಹಾಕಿ ತಮ್ಮಿಂದಿಗೆ ಈ ಕಲಾವಿದ ಬೇಕು; ಈ ಕಲಾವಿದ ಬೇಡ ಎನ್ನುವ ರಾಜಕೀಯ ಅವರು ಮಾಡುವುದಿಲ್ಲ ಎನ್ನುವುದನ್ನು ಸಾರುತ್ತಿತ್ತು. ಮುಂಬೈ ತಂಡದ ಪ್ರಾಜೆಕ್ಟ್ ಆಗಿದ್ದ ಕಾರಣ ನಾನು ಕೂಡ ಮುಂಬೈನಿಂದಲೇ ಬಂದಿರಬಹುದು ಎಂದು ಅವರು ಅಂದುಕೊಂಡಿದ್ದರು. ಹಾಗಾಗಿ ನಾನೇ ಅವರಿಗೆ ನನ್ನ ಪರಿಚಯ ಮಾಡಿಕೊಂಡೆ. ಜೊತೆಗೆ ಅವರಲ್ಲಿ ಅಚ್ಚರಿಯಾಗಿ ಕಂಡ ಎನರ್ಜಿಯ ಬಗ್ಗೆ ವಿಚಾರಿಸಿದೆ. ಅದು ಯಾವುದೇ ವಿಶೇಷ ಆಹಾರದಿಂದ ಸೃಷ್ಟಿಯಾದ ಶಕ್ತಿಯಲ್ಲವಾದ ಕಾರಣ ಅವರಿಗೆ ಆ ಬಗ್ಗೆ ಹೆಚ್ಚು ವಿವರಿಸುವುದಕ್ಕೆ ಏನೂ ಇರಲಿಲ್ಲ!

 ಒಬ್ಬ ಸ್ಟಾರ್ ಆಗಿ ಶಿವರಾಜ್ ಕುಮಾರ್ ಹೇಗೆ ವಿಭಿನ್ನವೆನಿಸುತ್ತಾರೆ?

ಯಾವುದೇ ಸ್ಟಾರ್ ಬಗ್ಗೆ ಇದ್ದಲ್ಲಿಂದಲೇ ಕಲ್ಪನೆ ಮಾಡುವುದು ಸುಲಭ. ಅವರು ತುಂಬ ಸಿನೆಮಾಗಳಲ್ಲಿ ನಟಿಸಿದ್ದಾರೆ ಅದಕ್ಕೆ ಅವರು ಸ್ಟಾರ್ ಆಗಿದ್ದಾರೆ ಎಂದೇನೋ ಹೇಳಿಬಿಡಬಹುದು. ಆದರೆ ಹಾಗೆ ತುಂಬ ಸಿನೆಮಾಗಳ ಅವಕಾಶ ಎಷ್ಟೇ ಪ್ರಭಾವಿ ನಟನಿಗೂ ಸುಮ್ಮಸುಮ್ಮನೇ ಸಿಗುವುದಿಲ್ಲ. ಸರಾಸರಿ ಉತ್ತಮ ಯಶಸ್ಸಿನ ಚಿತ್ರ ಅವರಿಂದ ಬರುತ್ತಲೇ ಇರಬೇಕು. ಸಿನೆಮಾಗಳ ಯಶಸ್ಸಿಗೆ ಸಿದ್ಧಸೂತ್ರಗಳಿಲ್ಲ ಎನ್ನುವುದೇನೋ ನಿಜ. ಆದರೆ ನಾನು ಕಂಡ ಹಾಗೆ ಬಹಳ ಕಾಲದಿಂದ ಗೆಲುವನ್ನು ಉಳಿಸಿಕೊಂಡಿರುವ ಒಬ್ಬ ದೊಡ್ಡ ಸ್ಟಾರ್ ಶಿವರಾಜ್ ಕುಮಾರ್. ಇಂದಿಗೂ ಅವರಲ್ಲಿರುವ ಪರಿಶ್ರಮದ ಮನೋಭಾವ ಖಂಡಿತವಾಗಿ ಕಲಾವಿದರಾಗಲು ಬಯಸುವ ಪ್ರತಿಯೊಬ್ಬರಿಗೂ ಪಾಠ. ತಮ್ಮ ಅನುಭವದಷ್ಟು ವರ್ಷಗಳ ವಯಸ್ಸಿರದ ಯುವನಿರ್ದೇಶಕರನ್ನು ಕೂಡ ‘ಸರ್’ ಎಂದೇ ಗೌರವ ನೀಡಿ ಮಾತನಾಡುತ್ತಾರೆ. ತಮ್ಮಿಂದೇನೋ ತಪ್ಪಾಯಿತು ಎಂದು ಅವರಿಗೆ ಅನಿಸಿದ ತಕ್ಷಣ ನನ್ನಂತಹ ಹೊಸ ನಟನಲ್ಲೂ ‘‘ಸಾರಿ ನಾನು ಮಿಸ್ಟೇಕ್ ಮಾಡ್ದೆ, ಇನ್ನೊಂದು ಟೇಕ್ ತೆಗೆದುಕೊಳ್ಳೋಣ’’ ಎಂದರು! ನಿಜದಲ್ಲಿ ಅವರು ಯಾವುದೇ ಕಾರಣ ನೀಡದೆ ಒನ್ ಮೋರ್ ಟೇಕ್ ಎಂದು ನೇರವಾಗಿ ನಿರ್ದೇಶಕರಿಗೆ ಹೇಳಬಲ್ಲಷ್ಟು ದೊಡ್ಡ ಪೊಸಿಷನಲ್ಲಿ ಇರುವ ವ್ಯಕ್ತಿ. ಆದರೆ ಅದು ಅವರ ವ್ಯಕ್ತಿತ್ವವಾಗಿರಲಿಲ್ಲ.

 ನಿಮ್ಮ ಮುಂದಿನ ಪ್ರಾಜೆಕ್ಟ್‌ಗಳು ಯಾವ ಹಂತದಲ್ಲಿವೆ?

‘ಸಂಘರ್ಷ’ ಧಾರಾವಾಹಿಯಲ್ಲಿ ನಾನು ನಟಿಸುತ್ತಿದ್ದ ಪಾತ್ರಕ್ಕೆ ಒಂದು ಅಲ್ಪವಿರಾಮ ನೀಡಿದ್ದಾರೆ. ಇದರ ನಡುವೆ ‘ಲವ್ ಇನ್ ದ ಟೈಮ್ಸ್ ಆಫ್ ಕೋವಿಡ್’ ಎನ್ನುವ ಸಿನೆಮಾ ಪೂರ್ತಿಯಾಗಲು ಮೂರು ದಿನಗಳ ಚಿತ್ರೀಕರಣ ಬಾಕಿ ಇತ್ತು. ಜಯಂತ್ ಸೀಗೆ ನಿರ್ದೇಶನದ ಈ ಚಿತ್ರದ ಶೀರ್ಷಿಕೆಯನ್ನು ರಕ್ಷಿತ್ ಶೆಟ್ಟಿಯವರು ಅನೌನ್ಸ್ ಮಾಡಿದ್ದರು. ಚಿತ್ರದ ನಾಯಕಿಯಾಗಿ ಶ್ರುತಿ ಪ್ರಕಾಶ್ ನಟಿಸಿದ್ದಾರೆ. ಸರ್ಪ್ರೈಸ್ ಟೀಸರ್ ಮೂಲಕ ಜನರ ಮುಂದೆ ತರುವ ಯೋಜನೆ ತಂಡದ್ದಾಗಿದೆ. ಪಾವನಾ ಅವರು ನಾಯಕಿಯಾಗಿರುವ ಭಾಸ್ಕರ್ ನೀನಾಸಂ ನಿರ್ದೇಶನದ ‘ಸದ್ದು ವಿಚಾರಣೆ ನಡೆಯುತ್ತಿದೆ’ ಚಿತ್ರ ಡಬ್ಬಿಂಗ್ ಹಂತದಲ್ಲಿತ್ತು. ‘ಶುಭಮಂಗಳ’ ಬಿಡುಗಡೆಗೆ ತಯಾರಾಗಿದೆ. ಚಿತ್ರ ಕಳೆದ ವರ್ಷವೇ ತೆರೆಕಾಣಬೇಕಿತ್ತು. ಬೆಂಗಳೂರು ಇಂಟರ್‌ನ್ಯಾಶನಲ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಪ್ರದರ್ಶನಗೊಂಡು ಪ್ರಶಂಸೆ ಪಡೆದಿತ್ತು. ಮುಂದೆ ಏನು ಎನ್ನುವುದು ನಿಜಕ್ಕೂ ಗೊತ್ತಿಲ್ಲ.

Writer - ಶಶಿಕರ ಪಾತೂರು

contributor

Editor - ಶಶಿಕರ ಪಾತೂರು

contributor

Similar News