ಕೇರಳ ಸಂಪುಟದಿಂದ ಕೆ.ಕೆ.ಶೈಲಜಾರನ್ನು ಕೈಬಿಟ್ಟಿರುವುದು ರಾಜಕೀಯ ಮತ್ತು ಸಾಂಸ್ಥಿಕ ನಿರ್ಧಾರ: ಸಿಪಿಎಂ
ತಿರುವನಂತಪುರ,ಮೇ 19: ಕೇರಳದ ಮಾಜಿ ಆರೋಗ್ಯ ಸಚಿವೆ ಕೆ.ಕೆ.ಶೈಲಜಾರನ್ನು ಸಂಪುಟದಿಂದ ಕೈಬಿಟ್ಟಿದ್ದು ರಾಜಕೀಯ ಮತ್ತು ಸಾಂಸ್ಥಿಕ ನಿರ್ಧಾರವಾಗಿದೆ ಮತ್ತು ಇದನ್ನು ಸಿಪಿಎಂ ಪುನರ್ಪರಿಶೀಲಿಸುವುದಿಲ್ಲ ಎಂದು ಪಕ್ಷದ ಪ್ರಭಾರ ಕಾರ್ಯದರ್ಶಿ ಎ.ವಿಜಯರಾಘವನ್ ಅವರು ಬುಧವಾರ ಸ್ಪಷ್ಟಪಡಿಸಿದರು.
ಕೇರಳದಲ್ಲಿ ಕೋವಿಡ್-19 ಮತ್ತು ನಿಫಾ ಸಾಂಕ್ರಾಮಿಕಗಳನ್ನು ಉತ್ತಮವಾಗಿ ನಿರ್ವಹಿಸಿದ್ದಕ್ಕಾಗಿ ಶೈಲಜಾ ವ್ಯಾಪಕ ಪ್ರಶಂಸೆಗಳಿಗೆ ಪಾತ್ರರಾಗಿದ್ದರು. ಇತ್ತೀಚಿಗೆ ನಡೆದ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿಯೂ 60,963 ಮತಗಳ ದಾಖಲೆ ಅಂತರದಿಂದ ಅವರು ವಿಜಯಿಯಾಗಿದ್ದಾರೆ. ಕೇರಳದ ನೂತನ ಸಂಪುಟದಿಂದ ಅವರನ್ನು ಹೊರಗಿಟ್ಟಿದ್ದಕ್ಕೆ ರಾಜಕಾರಣಿಗಳು ಸೇರಿದಂತೆ ಕೆಲವು ಸಾಮಾಜಿಕ ಮಾಧ್ಯಮ ಬಳಕೆದಾರರು ಮಂಗಳವಾರ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.
ಟೀಕೆಗಳ ನಡುವೆಯೇ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಿಜಯರಾಘವನ್,ಪ್ರತಿಯೊಬ್ಬರೊಂದಿಗೂ ಸಮಾಲೋಚಿಸಿದ ಬಳಿವೇ ಪಕ್ಷವು ಈ ನಿರ್ಧಾರವನ್ನು ತೆಗೆದುಕೊಂಡಿದೆ. ಇದು ಶೈಲಜಾರ ವಿಜಯವಲ್ಲ. ಜನರ ಗುಂಪೊಂದರ ಪ್ರಯತ್ನಗಳಿಂದಾಗಿ ಅವರು ಅತ್ಯುತ್ತಮ ಸಚಿವೆಯಾಗಿದ್ದರು. ಇ.ಪಿ.ಜಯರಾಜನ್, ಟಿ.ಪಿ.ರಾಮಕೃಷ್ಣನ್ ಮತ್ತು ಥಾಮಸ್ ಐಸಾಕ್ ಅವರೂ ರಾಜ್ಯದ ಅತ್ಯುತ್ತಮ ಸಚಿವರಾಗಿದ್ದರು ಎಂದರು.
ನೂತನ ಸಂಪುಟದಿಂದ ಶೈಲಜಾರನ್ನು ಕೈಬಿಡುವ ಪಕ್ಷದ ನಿರ್ಧಾರವನ್ನು ಇನ್ನೋರ್ವ ಸಿಪಿಎಂ ನಾಯಕ ಎಂ.ವಿ.ಜಯರಾಜನ್ ಅವರೂ ಸಮರ್ಥಿಸಿದ್ದಾರೆ.
ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸಿದ್ದ ಐಸಾಕ್ ಮತ್ತು ಕೆ.ಟಿ.ಜಲೀಲ್ ಅವರಂತಹ ನಾಯಕರನ್ನೂ ಸಂಪುಟದಿಂದ ಕೈಬಿಡಲಾಗಿದೆ. ಸಿಪಿಎಂ ಆಂದೋಲನದಿಂದ ಮುನ್ನಡೆಯುತ್ತಿದೆಯೇ ಹೊರತು ವ್ಯಕ್ತಿಯಿಂದಲ್ಲ. ವ್ಯಕ್ತಿ ಇಲ್ಲಿ ಆಂದೋಲನದ ಸಂಕೇತ ಎಂದು ಅವರು ಹೇಳಿದರು. ಸಂಪುಟದಲ್ಲಿ ಎಲ್ಲ ಸ್ಥಾನಗಳನ್ನು ಹೊಸಬರಿಗೆ ನೀಡುವುದು ಪಕ್ಷದ ನಿರ್ಧಾರವಾಗಿತ್ತು. ಅದರಂತೆ ಸಚಿವ ಸ್ಥಾನವನ್ನು ಬಿಡಲು ತಾನೂ ನಿರ್ಧರಿಸಿದ್ದೇನೆ ಎಂದು ಶೈಲಜಾ ಮಂಗಳವಾರ ಸುದ್ದಿಸಂಸ್ಥೆಗೆ ತಿಳಿಸಿದ್ದರು.
ಶೈಲಜಾ ಅವರನ್ನು ನೂತನ ವಿಧಾನಸಭೆಯಲ್ಲಿ ಸಿಪಿಎಂ ಮುಖ್ಯ ಸಚೇತಕರನ್ನಾಗಿ ಹೆಸರಿಸಲಾಗಿದೆ.
ಪಿಣರಾಯಿ ವಿಜಯನ್ ಅವರು ಮೇ 20ರಂದು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.