ಜನರಿಂದ, ಜನರಿಗಾಗಿ ಬದುಕಿದ ದೊರೆಸ್ವಾಮಿ

Update: 2021-05-27 08:49 GMT

ಕಳೆದ ನಾಲ್ಕು ದಿನಗಳ ಹಿಂದೆ, ‘‘ಹತ್ತಾರು ದಿನಗಳ ನಂತರ ದೊರೆಸ್ವಾಮಿಯವರು ಮೊದಲ ಬಾರಿಗೆ ಪತ್ರಿಕೆ ಓದುವಷ್ಟು ಚೇತರಿಸಿಕೊಂಡಿದ್ದಾರೆ. ‘ದೇಶ ಉಳೀಬೇಕಪ್ಪಾ’ಎನ್ನುತ್ತಿದ್ದಾರೆ’’ ಎಂದು ರವಿಕೃಷ್ಣಾ ರೆಡ್ಡಿಯವರು ಫೇಸ್‌ಬುಕ್ ವಾಲ್‌ನಲ್ಲಿ ಬರೆದಿದ್ದರು. ಆ ಸ್ಥಿತಿಯಲ್ಲೂ ‘‘ದೇಶ ಉಳೀಬೇಕಪ್ಪಾ’’ ಎಂದಿದ್ದು ನನ್ನನ್ನು ಅಲ್ಲಾಡಿಸಿ ಅಣಕಿಸತೊಡಗಿತು. ಅವರು ಎದ್ದು ಓಡಾಡದಿದ್ದರೂ ಪರವಾಗಿಲ್ಲ, ಇದ್ದು ಈ ದೇಶಕ್ಕೆ ದಿಕ್ಕು ತೋರಬೇಕೆನಿಸಿತು. ಆದರೆ ಅದಾಗದೆ, ಬುಧವಾರ ಮಧ್ಯಾಹ್ನ 1:40ಕ್ಕೆ ಮತ್ತೆಂದೂ ಬಾರದ ಲೋಕಕ್ಕೆ ಹೋಗಿಯೇ ಬಿಟ್ಟರು. ತಾವು ಇರುವುದೇ ಬಡವರ, ಅಸಹಾಯಕರ ಸಮಸ್ಯೆಗಳಿಗಾಗಿ ಎನ್ನುತ್ತಿದ್ದ, ಅದಕ್ಕಾಗಿಯೇ ಸದಾ ಸಿದ್ಧವಾಗಿದ್ದ ದೊರೆಸ್ವಾಮಿಯವರು, ಡಿಸೆಂಬರ್ 2019ರಲ್ಲಿ ಪತ್ನಿ ಲಲಿತಮ್ಮನವರು ನಿಧನರಾದ ನಂತರ, ಕೊಂಚ ಕಳೆಗುಂದಿದರು. ವಯಸ್ಸು ಮತ್ತು ಆರೋಗ್ಯದ ಕಾರಣಕ್ಕೆ ಸಾರ್ವಜನಿಕ ಸಭೆ, ಸಮಾರಂಭ, ಸತ್ಯಾಗ್ರಹ, ಹೋರಾಟ, ಪ್ರತಿಭಟನೆ, ರ್ಯಾಲಿಗಳಿಂದ ದೂರವಾಗಿದ್ದರು. ಅವರನ್ನು ಭೇಟಿ ಮಾಡಿ ಮಾತನಾಡಿಸುವವರೂ ಕಡಿಮೆಯಾಗಿದ್ದರು. ಅದು ಸಹಜವಾಗಿಯೇ ಅವರಲ್ಲಿ ಕೊಂಚ ಖಿನ್ನತೆಗೆ ಕಾರಣವಾಗಿತ್ತು. ಆರೋಗ್ಯವೂ ಆಗಾಗ ಕೈ ಕೊಡುತ್ತಿತ್ತು. ನೂರು ವರ್ಷಗಳ ಕಾಲ ಜನರ ನಡುವೆ ಬಯಲಲ್ಲಿ ಬದುಕಿದ ಜೀವ, ಕೊನೆಘಟ್ಟದಲ್ಲಿ ಒಬ್ಬಂಟಿಯಾಗಿತ್ತು. ಇಂತಹ ಸಮಯದಲ್ಲಿಯೇ ಕೊರೋನ ಸೋಂಕು ತಗಲಿತ್ತು. ಜಯದೇವ ಹೃದ್ರೋಗ ಆಸ್ಪತ್ರೆಗೆ ದಾಖಲಾಗಿ, ಡಾ. ಸಿ.ಎನ್.ಮಂಜುನಾಥ್ ಮತ್ತವರ ಸಿಬ್ಬಂದಿಯ ಕಾಳಜಿ-ಕಕ್ಕುಲತೆಯಿಂದ ಚಿಕಿತ್ಸೆ ಪಡೆದು ಗುಣಮುಖರಾಗಿ ಮನೆಗೆ ಬಂದಿದ್ದರು. ಆ ಸಂದರ್ಭದಲ್ಲಿ ಅವರನ್ನು ನೋಡಲು ಹೋದ ರವಿಕೃಷ್ಣಾ ರೆಡ್ಡಿಯವರಿಗೆ, ‘‘ಈ ಕೊರೋನ ಕಾಲದಲ್ಲಿ ಎಲ್ಲರೂ ಸಂಘಟಿತವಾಗಿ, ಒಗ್ಗಟ್ಟಾಗಿ ಕೆಲಸ ಮಾಡಿ ದೇಶ ಉಳಿಸಿಕೊಳ್ಳಬೇಕು. ಯಾರೂ ಸ್ವಾರ್ಥವನ್ನು ನೋಡಬಾರದು’’ ಎಂದಿದ್ದರು. ಅದೇ ಜೀವನೋತ್ಸಾಹ, ಅದೇ ಆಶಾವಾದ, ಅದೇ ನಿಸ್ವಾರ್ಥ.

ಹಿಂದೊಮ್ಮೆ ‘‘ನಾನೊಬ್ಬ ಸಾಮಾನ್ಯ ಕೆಲಸಗಾರ. ಎಪ್ಪತ್ತು ವರ್ಷಗಳಿಂದಲೂ ಬಡತನ ನಿರ್ಮೂಲನೆಗೆ ಎಲ್ಲ ಸರಕಾರಗಳನ್ನು ಕೇಳಿಕೊಳ್ಳುತ್ತಿದ್ದೇನೆ. ಬಡವರು ಇನ್ನು ಎಷ್ಟು ವರ್ಷ ಬಡವರಾಗಿಯೇ ಇರಬೇಕು? ಗಾಂಧೀಜಿ ಆಶಯಗಳನ್ನು ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡಿ’’ ಎಂದು ಸರಕಾರ ಕೊಡಮಾಡುವ ‘ಮಹಾತ್ಮಾಗಾಂಧಿ ಸೇವಾ ಪ್ರಶಸ್ತಿ’ ಸ್ವೀಕರಿಸಿ, ಪ್ರಶಸ್ತಿ ಪ್ರದಾನಿಸಿದ ಸರಕಾರದ ಮುಖ್ಯಸ್ಥರಾದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೇ ಸಲಹೆ ನೀಡಿದ್ದರು.
ಅದೇ ದೊರೆಸ್ವಾಮಿ. ಅಷ್ಟೇ ಅಲ್ಲ, ಅವರಿಗೆ ಬಂದ ಪ್ರಶಸ್ತಿಯ ಮೊತ್ತವಾದ ಐದು ಲಕ್ಷವನ್ನು, ‘‘ಈ ವಯಸ್ಸಿನಲ್ಲಿ ಇಷ್ಟೊಂದು ದುಡ್ಡು ಇಟ್ಟುಕೊಂಡು ಏನ್ಮಾಡಲಿ’’ ಎಂದು ವೇದಿಕೆಯ ಮೇಲೆಯೇ ಹಂಚಿಬಿಟ್ಟರು. ಒಂದು ಲಕ್ಷ ಹೋರಾಟಕ್ಕೆ, ಒಂದು ಲಕ್ಷ ಜಯದೇವ ಹೃದ್ರೋಗ ಸಂಸ್ಥೆಗೆ ಮತ್ತು ಮೂರು ಲಕ್ಷ ತಮ್ಮನ್ನು ಈ ಇಳಿವಯಸ್ಸಿನಲ್ಲಿಯೂ ಜತನದಿಂದ ಕಾಪಾಡುವ ಮಡದಿಗೆ ಕೊಟ್ಟು, ‘‘ಈಗ ನಿರಾಳ’’ ಎಂದು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದರು.

ಆಶ್ಚರ್ಯವೆಂದರೆ, ಸರಕಾರ ಕೊಟ್ಟ ಆ ಪ್ರಶಸ್ತಿಯ ಮೊತ್ತವನ್ನು ದೊರೆಸ್ವಾಮಿಯವರು, ಮತ್ತೆ ಸಾರ್ವಜನಿಕ ಕ್ಷೇತ್ರದ ಒಳತಿಗಾಗಿಯೇ ವಿನಿಯೋಗಿ ಸಿದ್ದರು. ನಿನ್ನೆಯವರೆಗೆ ಅದೇ ಹೋರಾಟಗಾರರು ಮತ್ತು ಜಯದೇವ ಹೃದ್ರೋಗ ಆಸ್ಪತ್ರೆ ಸಿಬ್ಬಂದಿ ಅವರನ್ನು ಮಗುವಿನಂತೆ ನೋಡಿಕೊಂಡಿದ್ದರು. ಇಂತಹ ದೊರೆಸ್ವಾಮಿ ಜನಿಸಿದ್ದು ಬೆಂಗಳೂರಿನ ಹತ್ತಿರದ ಹಾರೋಹಳ್ಳಿಯ ಐಯ್ಯರ್‌ಗಳ ಕುಟುಂಬದಲ್ಲಿ, ಎಪ್ರಿಲ್ 10, 1918ರಲ್ಲಿ. ಸುಮಾರು 50 ಜನರಿದ್ದ ಕೂಡು ಕುಟುಂಬದಲ್ಲಿ 16 ಮಕ್ಕಳಿದ್ದರು. ಪ್ರಾಥಮಿಕ ಶಿಕ್ಷಣ ಮುಗಿಸುವಷ್ಟರಲ್ಲಿ, ತಂದೆಯನ್ನು ಕಳೆದುಕೊಂಡ ದೊರೆಸ್ವಾಮಿ ಅಜ್ಜನ ಆರೈಕೆಯಲ್ಲಿ ಬೆಳೆದರು. ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಬೆಂಗಳೂರಿಗೆ ಬಂದರು. ವಿವಿ ಪುರಂನಲ್ಲಿ ಮಾಧ್ಯಮಿಕ, ಕೋಟೆ ಸ್ಕೂಲಿನಲ್ಲಿ ಪ್ರೌಢಶಾಲೆ ಕಲಿತರು. ಆ ದಿನಗಳಲ್ಲಿಯೇ ಮಹಾತ್ಮಾಗಾಂಧಿಯವರ ‘ಮೈ ಅರ್ಲಿ ಲೈಫ್’ ಪುಸ್ತಕ ಓದಿ, ಪ್ರಭಾವಿತರಾಗಿ, ಅವರ ವಿಚಾರಧಾರೆಗೆ ಮನಸೋತು ಸ್ವಾತಂತ್ರ್ಯ ಚಳವಳಿಗೆ ಧುಮುಕಿದರು. ಎ. ಜಿ. ರಾಮಚಂದ್ರರಾಯರಂತಹ ಹಿರಿಯರ ಮಾರ್ಗದರ್ಶನದಲ್ಲಿ ಸರಕಾರಿ ಕಚೇರಿಗಳಿಗೆ ಟೈಂಬಾಂಬ್ ಇಟ್ಟು, 14 ತಿಂಗಳುಗಳ ಕಾಲ ಸೆರೆಮನೆ ವಾಸ ಅನುಭವಿಸಿದರು.

‘‘ಜೈಲು ನನಗೆ ಒಳ್ಳೆಯ ಪಾಠ ಕಲಿಸಿತು’’ ಎನ್ನುವ ದೊರೆಸ್ವಾಮಿಯವರು, 1942ರಲ್ಲಿ ಬಿ.ಎಸ್ಸಿ. ಪದವಿ ಪೂರೈಸಿ, ಗಾಂಧಿನಗರದ ಹೈಸ್ಕೂಲಿನಲ್ಲಿ ಶಿಕ್ಷಕನಾಗಿ ಕೆಲಸ ಮಾಡಿದರು. ಆನಂತರ ಮೈಸೂರಿಗೆ ತೆರಳಿ 1947ರಲ್ಲಿ ‘ಸಾಹಿತ್ಯ ಮಂದಿರ’ ಎಂಬ ಪ್ರಕಟಣಾ ಸಂಸ್ಥೆ ಸ್ಥಾಪಿಸಿ ಪುಸ್ತಕ ಮಳಿಗೆ ತೆರೆದರು. ಬರವಣಿಗೆ ಮೂಲಕ ಜನರನ್ನು ಜಾಗೃತರನ್ನಾಗಿಸಬಹುದೆಂದು ಪತ್ರಿಕೆ ಆರಂಭಿಸಿ, ಮೈಸೂರು ಚಲೋ ಚಳವಳಿ ಕುರಿತು ಲೇಖನಗಳನ್ನು ಬರೆದರು. ನಂತರ ಕ್ವಿಟ್ ಇಂಡಿಯಾ ಮೂಮೆಂಟಿನಲ್ಲಿ ಬ್ರಿಟಿಷರ ವಿರುದ್ಧ ಪತ್ರಿಕೆಯನ್ನು ಪ್ರಬಲ ಅಸ್ತ್ರವನ್ನಾಗಿ ಪ್ರಯೋಗಿಸತೊಡಗಿದರು. ಸರಕಾರ ಪತ್ರಿಕೆಯನ್ನು ಮುಟ್ಟುಗೋಲು ಹಾಕಿತು. ಸ್ವಾತಂತ್ರ್ಯಾನಂತರ ತಮ್ಮ 31ನೇ ವಯಸ್ಸಿನಲ್ಲಿ ಲಲಿತಮ್ಮ ಎಂಬ 19ರ ಹರೆಯದ ಹುಡುಗಿಯನ್ನು ಮದುವೆಯಾದರು. ಇಬ್ಬರು ಮಕ್ಕಳು. ಸಣ್ಣ ಸುಖಿ ಸಂಸಾರ. ದೊರೆಸ್ವಾಮಿಯವರ ಹೋರಾಟದ ಬದುಕನ್ನು ಅರಿತಿದ್ದ ಲಲಿತಮ್ಮನವರು, ಸಂಸಾರದ ನೊಗವನ್ನು ಹೊತ್ತು, ಸಾಮಾಜಿಕ ಹೋರಾಟಗಳಿಗೆ ಪತಿಯನ್ನು ಸಮರ್ಪಿಸಿದ್ದರು. ಕೆಂಗಲ್ ಹನುಮಂತಯ್ಯನವರನ್ನು ಕಂಡರೆ ತುಂಬಾ ಇಷ್ಟಪಡುತ್ತಿದ್ದ ದೊರೆಸ್ವಾಮಿಯವರು, ಇಂದಿರಾ ಗಾಂಧಿಯವರ ತುರ್ತು ಪರಿಸ್ಥಿತಿಯ ವಿರುದ್ಧವೂ ಬೀದಿಗಿಳಿದು ಹೋರಾಟ ಮಾಡಿದ್ದಿದೆ. ಬಡತನ ಮತ್ತು ಭ್ರಷ್ಟಾಚಾರ- ಇವರೆಡೆ ಈ ದೇಶದ ಶತ್ರುಗಳು ಎನ್ನುವ ದೊರೆಸ್ವಾಮಿಯವರು, ‘‘ಬಡವರು ಮತ್ತು ಶ್ರೀಮಂತರ ನಡುವಿನ ಕಂದಕ ಹೆಚ್ಚಾಗುತ್ತಿದೆ. ಭ್ರಷ್ಟಾಚಾರ ಭೂತದಂತೆ ದೇಶವನ್ನು ಕಾಡುತ್ತಿದೆ.

ಇವೆರಡರಿಂದ ನಮ್ಮ ದೇಶ ಮುಕ್ತವಾದರೆ, ಗಾಂಧಿ ಈ ದೇಶದಲ್ಲಿ ಹುಟ್ಟಿದ್ದಕ್ಕೂ ಸಾರ್ಥಕ’’ ಎನ್ನುತ್ತಿದ್ದರು. ಎಲ್ಲಿ ಅನ್ಯಾಯ, ಅಸಮಾನತೆ, ಅರಾಜಕತೆ ಇರುತ್ತದೆಯೋ ಅಲ್ಲಿ ವಯಸ್ಸಾದ, ದನಿ ಇಲ್ಲದ, ದುಡ್ಡೇ ಇಲ್ಲದ ದೊರೆಸ್ವಾಮಿಯವರು ಇರುತ್ತಿದ್ದರು. ಜೊತೆಗೆ ಜನ ಬಂದರೆ, ನಿಮ್ಮಿಂದಿಗೆ ನಾನು ಎನ್ನುತ್ತಿದ್ದರು. ಯಾರೂ ಬರದಿದ್ದರೆ ನಾನೊಬ್ಬನೇ ಎನ್ನುತ್ತಿದ್ದರು. ಅವರದು ಗಾಂಧಿ ಮಾರ್ಗ. ಸದ್ದು ಗದ್ದಲವಿಲ್ಲ, ಹಿಂಸೆಯಿಲ್ಲ. ಮಂಡೂರಿನ ಕಸ ಸುರಿಯುವ ವಿರುದ್ಧ, ಎ. ಟಿ. ರಾಮಸ್ವಾಮಿಯವರ ಭೂ ಒತ್ತುವರಿ ವರದಿಯ ಪರ, ದಿಡ್ಡಳ್ಳಿ ಆದಿವಾಸಿ ವಸತಿಹೀನರ ಪರ, ಭೂ ಸಾಗುವಳಿ ರೈತರ ಪರವಾದ ಹೋರಾಟವಾಗಿರಬಹುದು ಎಲ್ಲಾ ಕಡೆ ದೊರೆಸ್ವಾಮಿಯವರು ಇರುತ್ತಿದ್ದರು.

ಅವರ ಹೋರಾಟದ ಹುಮ್ಮಸ್ಸು ಹೇಗಿತ್ತೆಂದರೆ, ಈ ವ್ಯವಸ್ಥೆ ಅವರೆಲ್ಲ ಹೋರಾಟವನ್ನು ಬುಡಮೇಲು ಮಾಡಿದರೂ, ಹೋರಾಟಗಾರರಲ್ಲಿಯೇ ಬಿರುಕುಂಟು ಮಾಡಿ ಹಾದಿ ತಪ್ಪಿಸಿದರೂ, ಕುಂದದ ಉತ್ಸಾಹ ಎಂತಹವರನ್ನು ಚಕಿತಗೊಳಿಸುತ್ತಿತ್ತು. ಇಲ್ಲಿ ಏನೂ ಸಾಧ್ಯವಿಲ್ಲವೆನ್ನುವ ಬದಲು; ಇಲ್ಲ, ಇಲ್ಲಿ ಇನ್ನೂ ಒಳ್ಳೆಯವರಿದ್ದಾರೆ ಎಂಬ ಅವರ ಆಶಾವಾದ ಜೊತೆಗಿರುವವರನ್ನೂ ಪ್ರೇರೇಪಿಸುತ್ತಿತ್ತು. ದೊರೆಸ್ವಾಮಿಯವರು, ತಮ್ಮ ಬದುಕಿನುದ್ದಕ್ಕೂ ಸರಳತೆ, ಪ್ರಾಮಾಣಿಕತೆಯನ್ನು ವ್ರತದಂತೆ ಪಾಲಿಸಿಕೊಂಡು ಬಂದವರು. ಈ ಸರಳ ಬದುಕು ಎನ್ನುವುದು ಬರೆದಷ್ಟು, ಮಾತನಾಡಿದಷ್ಟು ಸಲೀಸಲ್ಲ. ಕಂಡಿದ್ದನ್ನೆಲ್ಲ ಖರೀದಿಸಬೇಕೆಂಬ ಇವತ್ತಿನ ಆಸೆಬುರುಕ ಸಮಾಜದಲ್ಲಿ, ನಿರ್ಲಿಪ್ತವಾಗಿ ಬದುಕುವುದು ಋಷಿ-ಮುನಿಗಳ ವ್ರತದಂತೆ. ಅದಕ್ಕೆ ಎದುರಾಗುವ ಕಷ್ಟ-ನಷ್ಟಗಳಿಗೆ ಲೆಕ್ಕವೇ ಇಲ್ಲ. ಆದರೆ ದೊರೆಸ್ವಾಮಿಯವರು ಚಿಕ್ಕಂದಿನಿಂದಲೇ ಅದನ್ನು ರೂಢಿಸಿಕೊಂಡವರು, ಕೊನೆಯವರೆಗೂ ಹಾಗೆಯೇ ಬದುಕಿದವರು. ‘‘ನನಗೆ ನಾನು ಬದುಕಿದ ರೀತಿಯಲ್ಲಿ ಸಂತೃಪ್ತಿಯಿದೆ. ಏನೋ ಒಂದಷ್ಟು ಮಾಡಿದ್ದೇನೆ, ಬದುಕನ್ನು ಯೋಗ್ಯವಾಗಿ ಬಾಳಿದ್ದೇನೆ ಎಂಬ ಭಾವವಿದೆ’’ ಎನ್ನುತ್ತಿದ್ದ; ಹಾಗೆಯೇ ಬದುಕಿಹೋದ ಆ ಜೀವಕ್ಕೆ ನಡುಬಗ್ಗಿಸಿ ನಮಿಸುವುದೊಂದೇ ನಾವು ಸಲ್ಲಿಸಬಹುದಾದ ಶ್ರದ್ಧಾಂಜಲಿ.

Writer - ಬಸವರಾಜು ಮೇಗಲಕೇರಿ

contributor

Editor - ಬಸವರಾಜು ಮೇಗಲಕೇರಿ

contributor

Similar News