'ಭಾರತ್ ಬದ್ನಾಮ್' ಹೇಳಿಕೆಯಿಂದ ಮತ್ತೆ ವಿವಾದಕ್ಕೆ ಗುರಿಯಾದ ಕಮಲ್‌ ನಾಥ್

Update: 2021-05-29 05:12 GMT
(ಕಮಲ್‌ ನಾಥ್ PTI Photo)

ಭೋಪಾಲ್: ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಕಮಲ್‌ ನಾಥ್ ಅವರು ಕೊರೋನ ವೈರಸ್‌ನ ’ಭಾರತೀಯ ಅವತರಣಿಕೆ’ ಎಂದು ಹೇಳಿಕೆ ನೀಡಿದ ಕಾರಣಕ್ಕೆ ಅವರ ವಿರುದ್ಧ ಅಪರಾಧ ಪ್ರಕರಣ ದಾಖಲಾಗಿರುವ ಬೆನ್ನಲ್ಲೇ ಶುಕ್ರವಾರ ಮತ್ತೊಂದು ವಿವಾದದಲ್ಲಿ ಸಿಲುಕಿಕೊಂಡಿದ್ದಾರೆ.

ಭಾರತ ’ಮಹಾನ್’ ಅಲ್ಲ; ಬದಲಾಗಿ ಬದ್ನಾಮ್ (ಕುಖ್ಯಾತ) ಎಂದು ಅವರು ನೀಡಿರುವ ಹೇಳಿಕೆ ವ್ಯಾಪಕ ಟೀಕೆಗೆ ಗುರಿಯಾಗಿದೆ.

"ಭಾರತ ಮಹಾನ್ ಅಲ್ಲ; ಬದಲಾಗಿ ಕುಖ್ಯಾತ ಎಂದು ನಾನು ಹೇಳುತ್ತಿದ್ದೇನೆ. ಭಾರತದಲ್ಲಿ ಕೋವಿಡ್-19 ಸಾಂಕ್ರಾಮಿಕ ವ್ಯಾಪಕವಾಗಿರುವ ಹಿನ್ನೆಲೆಯಲ್ಲಿ ಎಲ್ಲ ದೇಶಗಳು ಭಾರತೀಯರ ಪ್ರವೇಶಕ್ಕೆ ನಿರ್ಬಂಧ ಹೇರಿವೆ. ಇತ್ತೀಚೆಗೆ ಉಜ್ಜಯಿನಿಯಲ್ಲಿ ನಾನು ಇದನ್ನು ಹೇಳಿದ್ದೆ. ಇದೀಗ ಮತ್ತೆ ಸ್ಪಷ್ಟವಾಗಿ ಹೇಳುತ್ತಿದ್ದೇನೆ. ನ್ಯೂಯಾರ್ಕ್‌ನಿಂದ ಒಬ್ಬರು ನನಗೆ ಕರೆ ಮಾಡಿ, ಭಾರತೀಯರು ಚಾಲನೆ ಮಾಡುವ ಕಾರುಗಳಿಗೂ ಜನ ಹತ್ತುತ್ತಿಲ್ಲ ಎಂದು ಹೇಳಿದರು" ಎಂದು ಕಮಲ್‌ ನಾಥ್ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.

ಕೋವಿಡ್-19 ಸೋಂಕಿನ ಪ್ರಸಕ್ತ ಅಲೆಯನ್ನು ಸಕಾಲಿಕವಾಗಿ ತಡೆಯುವಲ್ಲಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮತ್ತು ಶಿವರಾಜ್ ಸಿಂಗ್ ಚೌಹಾಣ್ ನೇತೃತ್ವದ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಟೀಕಿಸಿದರು. "ನನ್ನ ಆಡಳಿತ ಅವಧಿಯಲ್ಲಿ ಕಲಬೆರಕೆ ವಿರುದ್ಧ ಅಭಿಯಾನ ಕೈಗೊಂಡಿದ್ದೆ. ಆದರೆ ಇದೀಗ ಆಡಳಿತಾರೂಢ ಬಿಜೆಪಿ ಕಾರ್ಯಕರ್ತರು ವೆಂಟಿಲೇಟರ್, ಚುಚ್ಚುಮದ್ದು, ಆಮ್ಲಜನಕ ಮತ್ತು ಆಸ್ಪತ್ರೆ ಬೆಡ್‌ಗಳನ್ನು ಮಾರುತ್ತಿದ್ದಾರೆ" ಎಂದು ಆರೋಪಿಸಿದರು.

ತಜ್ಞರು ಎಚ್ಚರಿಕೆ ನೀಡಿದರೂ, ಎರಡನೇ ಅಲೆ ತಡೆಯಲು ಯಾವುದೇ ಕ್ರಮ ಕೈಗೊಂಡಿಲ್ಲ. ಈ ಬಗ್ಗೆ ಯಾರಾದರೂ ಪ್ರಶ್ನಿಸಿದರೆ, ಅವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗುತ್ತದೆ ಎಂದು ವ್ಯಂಗ್ಯವಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News