‘‘ಕನ್ನಡದ ಪ್ರಮುಖ ಸ್ಟಾರ್‌ಗಳ ಸಿನೆಮಾಗಳಲ್ಲಿ ನಟಿಸಿದ್ದೇನೆ ಎಂಬ ಹೆಮ್ಮೆ ಇದೆ’’ -ದಾನಿಶ್ ಅಖ್ತರ್ ಸೈಫಿ

Update: 2021-05-29 19:30 GMT

ದಾನಿಶ್ ಅಖ್ತರ್ ಸೈಫಿ ಎನ್ನುವ ಹೆಸರು ಕುರುಕ್ಷೇತ್ರ ಚಿತ್ರದ ಬಳಿಕ ಕನ್ನಡಿಗರಿಗೂ ಪರಿಚಿತ. ಯಾಕೆಂದರೆ ಕುರುಕ್ಷೇತ್ರ ಸಿನೆಮಾ ನೋಡಿದವರೆಲ್ಲ, ಭೀಮನಾಗಿ ಕಾಣಿಸಿಕೊಂಡ ಆ ಮಹಾಕಾಯ ಯಾರು ಎಂದು ಹುಡುಕಾಡಿದವರೇ. ಅದಾಗಲೇ ‘ಸಿಯಾ ಕೆ ರಾಮ್’ ಧಾರಾವಾಹಿಯಲ್ಲಿ ಹನುಮಂತನಾಗಿ ಗಮನ ಸೆಳೆದಿದ್ದ ದಾನಿಶ್ ಇದೀಗ ಕನ್ನಡ ಪ್ರೇಕ್ಷಕರಿಗೆ ಇನ್ನಷ್ಟು ಆತ್ಮೀಯರಾಗುತ್ತಿದ್ದಾರೆ. ಅದಕ್ಕೆ ಕಾರಣ ಅವರು ಕನ್ನಡದ ಹೆಚ್ಚಿನ ಸ್ಟಾರ್ ನಟರ ಜೊತೆಗೆ ಕೂಡ ನಟಿಸಿದ್ದಾರೆ. ಪ್ರಸ್ತುತ ಲಾಕ್‌ಡೌನ್ ಸಂದರ್ಭದಲ್ಲಿ ಅವರು ಏನು ಮಾಡುತ್ತಿದ್ದಾರೆ ಎನ್ನುವ ಬಗ್ಗೆ ‘ವಾರ್ತಾಭಾರತಿ’ಯೊಂದಿಗೆ ಮಾತನಾಡಿದ್ದಾರೆ.



ಲಾಕ್‌ಡೌನ್ ದಿನಗಳನ್ನು ಹೇಗೆ ಕಳೆಯುತ್ತಿದ್ದೀರಿ?
 ಸಿನೆಮಾದವರು ಮನೆಯಲ್ಲಿರುವಾಗ ಬೇರೆ ಬೇರೆ ಸಿನೆಮಾಗಳನ್ನು ನೋಡುವುದೇ ಒಳ್ಳೆಯ ಅಭ್ಯಾಸ ಎಂದು ನನ್ನ ಅನಿಸಿಕೆ. ಅದರಲ್ಲಿಯೂ ನಾನು ದಕ್ಷಿಣ ಭಾರತೀಯ ಸಿನೆಮಾಗಳನ್ನು ನೋಡುತ್ತಿದ್ದೇನೆ. ಧ್ರುವಸರ್ಜಾ ಅವರ ‘ಪೊಗರು’ ಸಿನೆಮಾ ನೋಡಿದ್ದೆ. ‘ವಿಕ್ರಂ ವೇದ’ ಎನ್ನುವ ತಮಿಳು ಚಿತ್ರ ನೋಡಿದ್ದೇನೆ. ಅದರಲ್ಲಿ ಸಸ್ಪೆನ್ಸ್ ಥ್ರಿಲ್ಲರ್ ಅಂಶ ಮೆಚ್ಚುಗೆಯಾಗಿತ್ತು. ನಿನ್ನೆಯಷ್ಟೇ ದರ್ಶನ್ ಅವರ ‘ರಾಬರ್ಟ್’ ಕೂಡ ನೋಡಿದೆ. ಆ್ಯಕ್ಷನ್ ಮತ್ತು ಕತೆ ತುಂಬ ಇಷ್ಟವಾಯಿತು.


ಸದ್ಯಕ್ಕೆ ನಿಮ್ಮ ಯಾವ ಚಿತ್ರದ ಚಿತ್ರೀಕರಣ ಸ್ಥಗಿತವಾಗಿದೆ?
 ಲಾಕ್‌ಡೌನ್ ಸಂದರ್ಭದಲ್ಲಿ ನಾನು ಕನ್ನಡ ಸಿನೆಮಾ ಚಿತ್ರೀಕರಣದಲ್ಲೇ ಇದ್ದೆ. ಬೆಂಗಳೂರಿನಲ್ಲಿ ನಡೆದ ಚಂದ್ರು ಸರ್ ನಿರ್ದೇಶನದ ‘ಕಬ್ಜ’ ಸಿನೆಮಾದ ಶೂಟಿಂಗ್‌ನಲ್ಲಿ ಭಾಗಿಯಾಗಿದ್ದೆ. ಎರಡನೇ ಹಂತದ ಚಿತ್ರೀಕರಣ ಹೈದರಾಬಾದ್‌ನಲ್ಲಿ ನಡೆಯುವುದಿತ್ತು. ಅಷ್ಟರಲ್ಲಿ ಕೊರೋನ ವೈರಸ್ ಎರಡನೇ ಅಲೆಯ ದಾಳಿ ಈ ಮಟ್ಟಕ್ಕೆ ಹೆಚ್ಚಾಗಿಬಿಟ್ಟಿತು. ಸದ್ಯಕ್ಕೆ ನಾನು ಮುಂಬೈಯ ನನ್ನ ಮನೆಯಲ್ಲಿದ್ದೇನೆ. ಮಹಾರಾಷ್ಟ್ರದಲ್ಲಿ ಕೋವಿಡ್ ಯಾವ ಪ್ರಮಾಣದಲ್ಲಿ ಹೆಚ್ಚಾಗಿದೆ ಎಂದು ನಾನು ಹೇಳಬೇಕಿಲ್ಲವಲ್ಲ?


ಉಪೇಂದ್ರ ಅವರೊಡನೆ ನಟಿಸಿದ ಅನುಭವ ಹೇಗಿತ್ತು? 
 ‘ಕಬ್ಜ’ದಲ್ಲಿ ನನ್ನದು ಅಫ್ಘಾನಿಸ್ತಾನದ ಖಳನಾಯಕನ ಪಾತ್ರ. ಯಂಗ್ ಡಾನ್ ಆಗಿ ಕಾಣಿಸಿಕೊಳ್ಳುತ್ತಿದ್ದೇನೆ. ಉಪ್ಪಿಸರ್ ಅವರೊಂದಿಗೆ ನಾನು ಮೊದಲ ಬಾರಿ ನಟಿಸುತ್ತಿದ್ದೇನೆ. ಗ್ರೇಟ್ ವ್ಯಕ್ತಿತ್ವ ಅವರದು. ಅವರೊಂದಿಗೆ ಕೆಲಸ ಮಾಡಿ ತುಂಬ ಖುಷಿ ಆಯಿತು. ಚಿತ್ರದಲ್ಲಿ ಮತ್ತೋರ್ವ ಕನ್ನಡದ ಜನಪ್ರಿಯ ಸ್ಟಾರ್ ಸುದೀಪ್ ಅವರೂ ಇದ್ದಾರೆ. ನನಗೆ ಹೆಮ್ಮೆಯ ವಿಚಾರ ಏನೆಂದರೆ ಕನ್ನಡದ ಪ್ರಮುಖ ಸ್ಟಾರ್‌ಗಳ ಸಿನೆಮಾಗಳಲ್ಲಿ ನಟಿಸಿದ್ದೇನೆ. ದರ್ಶನ್ ಅವರೊಂದಿಗೆ ‘ಕುರುಕ್ಷೇತ್ರ’, ಸುದೀಪ್ ಅವರೊಂದಿಗೆ ‘ಕೋಟಿಗೊಬ್ಬ-3’ರಲ್ಲಿ ನಟಿಸಿದ್ದೇನೆ. ಚಿತ್ರ ಬಿಡುಗಡೆಯಾಗಬೇಕಿದೆ. ಹಾಗೆ ನೋಡಿದರೆ ಕನ್ನಡದ ದಿಗಂತ್ ಅವರ ಜೊತೆಗೂ ಒಂದು ಪ್ರಾಜೆಕ್ಟ್ ಮಾಡಿದ್ದೇನೆ. ಆದರೆ ಅದು ಹಿಂದಿಯಲ್ಲಿ ಮೂಡಿ ಬಂದಿದೆ.


ದಿಗಂತ್ ಜೊತೆಗೆ ನೀವು ನಟಿಸಿದ ಚಿತ್ರ ಯಾವುದು?
ಅದೊಂದು ವೆಬ್ ಸೀರೀಸ್. ಈಗಾಗಲೇ ಒ.ಟಿ.ಟಿ. ಮೂಲಕ ಬಿಡುಗಡೆಯಾಗಿದೆ. ಹೆಸರು ‘ರಾಮ್‌ಯುಗ್’ ಎಂದು. ಕುನಾಲ್ ಕೊಹ್ಲಿ ನಿರ್ದೇಶಕರು. ಅದರಲ್ಲಿ ರಾಮನ ಪಾತ್ರವನ್ನು ದಿಗಂತ್ ನಿರ್ವಹಿಸಿದ್ದಾರೆ. ನನ್ನದು ಕುಂಭಕರ್ಣನ ಪಾತ್ರ. ದಿಗಂತ್ ಜೊತೆಗೆ ಒಂದು ಯುದ್ಧದ ಸನ್ನಿವೇಶದಲ್ಲಿ ಮಾತ್ರ ಕಾಣಿಸಿಕೊಳ್ಳುತ್ತೇನೆ. ರಾಮ್‌ಯುಗ್‌ನಲ್ಲಿ ರಾವಣನಾಗಿ ಕಬೀರ್ ದುಹಾನ್ ಸಿಂಗ್ ನಟಿಸಿದ್ದಾರೆ. ಕಬೀರ್ ಜೊತೆಗೆ ನಾನು ಕನ್ನಡದ ‘ಉದ್ಘರ್ಷ’ ಎನ್ನುವ ಚಿತ್ರದಲ್ಲಿಯೂ ನಟಿಸಿದ್ದೆ. ಅದು ತೀರ ಚಿಕ್ಕ ಪಾತ್ರವಾಗಿತ್ತು. ಆದರೆ ನನಗೆ ಕನ್ನಡದಲ್ಲಿ ಯಶ್ ಅವರೊಂದಿಗೆ ನಟಿಸಬೇಕು ಎನ್ನುವ ಆಸೆ ಇದೆ.


ಯಶ್ ಅವರು ನಿಮಗೆ ಯಾಕೆ ಇಷ್ಟ?
ನನಗೆ ‘ಕೆಜಿಎಫ್’ ಸಿನೆಮಾ ನೋಡಿದ ಬಳಿಕ ಅವರೊಂದಿಗೆ ನಟಿಸುವ ಅವಕಾಶ ಸಿಕ್ಕರೆ ಚೆನ್ನಾಗಿರುತ್ತದೆ ಎನ್ನುವ ಆಶಯ ಮೂಡಿತು. ಯಾಕೆಂದರೆ ಕೆಜಿಎಫ್ ಚಿತ್ರದ್ದು ಒಂದು ತೂಕವಾದರೆ ಅದರಲ್ಲಿ ನಾಯಕನ ಪಾತ್ರವನ್ನು ಯಶ್ ಅವರು ನಿಭಾಯಿಸಿರುವ ರೀತಿ ಮತ್ತೊಂದು ಮಟ್ಟದಲ್ಲಿದೆ. ನಾನು ಇಲ್ಲಿಯವರೆಗೆ ಕೆಜಿಎಫ್ ಚಿತ್ರವನ್ನು ಹಲವಾರು ಬಾರಿ ನೋಡಿದ್ದೇನೆ. ಪ್ರತಿ ಬಾರಿ ನೋಡಿ ಮುಗಿಸಿದಾಗಲೂ ಕನ್ನಡ ಸಿನೆಮಾದಲ್ಲಿ ನನಗೆ ಯಶ್ ಅವರೊಂದಿಗೆ ದೃಶ್ಯ ಹಂಚಿಕೊಳ್ಳುವ ಅವಕಾಶ ಸಿಗಬೇಕು ಎಂದು ಬಯಸಿದ್ದೇನೆ.
ಸದ್ಯದ ಮಟ್ಟಿಗೆ ಕೋವಿಡ್ ನಮ್ಮ ದೇಶದಿಂದ ಆದಷ್ಟು ಬೇಗ ದೂರವಾಗಲಿ ಎಂದು ಬಯಸುತ್ತಿದ್ದೇನೆ. ನಮ್ಮೆಲ್ಲರ ಬದುಕು ಮತ್ತೆ ಎಂದಿನಂತಾಗಲಿ ಎನ್ನುವುದೇ ದೊಡ್ಡ ಆಶಯ!


ನಿಮ್ಮ ಬಾಡಿ ಫಿಟ್ನೆಸ್ ಹೇಗೆ ಕಾಯ್ದುಕೊಳ್ಳುತ್ತಿದ್ದೀರಿ?
ನಾನು ಆರು ಅಡಿ ಐದು ಇಂಚು ಎತ್ತರ ಇದ್ದೇನೆ. ಹಾಗಾಗಿ ಈ ದೇಹವನ್ನು ಸರಿಯಾಗಿ ಕಾಯ್ದುಕೊಳ್ಳಬೇಕಾದ ಅಗತ್ಯವಂತೂ ಖಂಡಿತವಾಗಿ ಇದೆ. ಆದರೆ ಈಗಂತೂ ಜಿಮ್‌ಗೂ ಹೋಗಲು ಸಾಧ್ಯವಾಗದ ಪರಿಸ್ಥಿತಿ. ಮಾತ್ರವಲ್ಲ ನಮ್ಮ ಮನೆಯಲ್ಲಿ ಜಿಮ್ ವ್ಯವಸ್ಥೆ ಕೂಡ ನಾನು ಮಾಡಿಕೊಂಡಿಲ್ಲ. ಆದರೆ ನಾನು ಉಪವಾಸದ ದಿನಗಳಲ್ಲೇ ಜಿಮ್ ಮಾಡುವುದನ್ನು ತೊರೆದೆ. ರಮಝಾನ್‌ನಲ್ಲಿ ಉಪವಾಸ ಇದ್ದ ಕಾರಣ ಒಂದು ಹಂತಕ್ಕೆ ಡಯಟ್ ಕಂಟ್ರೋಲ್ ಆಗಿತ್ತು. ಹಾಗಾಗಿ ಲಾಕ್‌ಡೌನ್ ಮುಗಿಯುವ ತನಕ ಜಿಮ್ ಮಾಡಲು ಸಾಧ್ಯವಿಲ್ಲ. ಆದರೆ ಆಹಾರ ಕ್ರಮದಲ್ಲಿ ನಿಯಂತ್ರಣ ಪಾಲಿಸುತ್ತಿರುವ ಕಾರಣ ಆ ಬಗ್ಗೆ ಚಿಂತೆ ಇಲ್ಲ.

Writer - ಶಶಿಕರ ಪಾತೂರು

contributor

Editor - ಶಶಿಕರ ಪಾತೂರು

contributor

Similar News