‘ಸಂಗೀತ ವೈದ್ಯ’ ಮಿಥುನ್ ಮುಕುಂದನ್

Update: 2021-06-05 19:30 GMT

ಮಿಥುನ್ ಮುಕುಂದನ್ ಕನ್ನಡದ ಭರವಸೆಯ ಸಂಗೀತ ನಿರ್ದೇಶಕ. ಅವರ ಸಂಗೀತದಲ್ಲಿ ಮೈಮರೆಸುವ ಶಕ್ತಿ ಇದೆ. ಬಹುಶಃ ವೈದ್ಯವೃತ್ತಿ ಬಲ್ಲವರಾದ ಕಾರಣ ಇದು ಅವರಿಂದ ಸಾಧ್ಯವಾಗಿರಲೂಬಹುದು! ಇದುವರೆಗೆ ಅವರು ನೀಡಿರುವ ಚಿತ್ರದ ಹಾಡುಗಳೆಲ್ಲ ಪ್ರೇಕ್ಷಕರ ಗಮನ ಸೆಳೆದಂತಹವುಗಳೇ ಆಗಿವೆ. ಅದಕ್ಕೆ ಒಂದು ಉದಾಹರಣೆ ‘ಒಂದು ಮೊಟ್ಟೆಯ ಕಥೆ’ ಎನ್ನುವ ಚಿತ್ರದ ಹಾಡುಗಳು. ಆದರೆ ಆ ಚಿತ್ರದ ಸಂಗೀತ ನಿರ್ದೇಶಕ ಇವರು ಎಂದು ತಿಳಿದವರು ಕಡಿಮೆ. ಅದಕ್ಕೆ ಇವರೊಬ್ಬರು ಮಿತಭಾಷಿ ಮತ್ತು ಪ್ರಚಾರದ ಹಿಂದೆ ಹೋಗುವವರಲ್ಲ ಎನ್ನುವುದು ಕೂಡ ಕಾರಣ ಇರಬಹುದು. ಮಿಥುನ್ ಮುಕುಂದನ್ ಎನ್ನುವ ಹೆಸರೇ ಸೂಚಿಸುವಂತೆ ಅವರು ಮೂಲತಃ ಮಲಯಾಳಿ. ಆದರೆ ಇದೀಗ ಚೆನ್ನಾಗಿ ಕನ್ನಡ ಮಾತನಾಡಬಲ್ಲರು. ಅವರೊಂದಿಗೆ ‘ವಾರ್ತಾಭಾರತಿ’ ನಡೆಸಿರುವ ಮಾತುಕತೆ ಇದು.


ನೀವು ಕೇರಳದಿಂದ ಬಂದು ಕನ್ನಡದಲ್ಲಿ ಸಂಗೀತ ನಿರ್ದೇಶಕರಾಗಿದ್ದು ಹೇಗೆ?
ನಾನು ಹುಟ್ಟಿನಿಂದಷ್ಟೇ ಕೇರಳದ ಕಣ್ಣೂರಿನವನು. ಯಾಕೆಂದರೆ ಬೆಳೆದಿದ್ದೆಲ್ಲ ನನ್ನ ಪೋಷಕರೊಂದಿಗೆ ದೋಹಾ, ಖತರ್‌ನಲ್ಲಿ. ಪ್ರಾಥಮಿಕ ಶಿಕ್ಷಣವೂ ಅಲ್ಲೇ ಆಯಿತು. ಬಳಿಕ ಎಂಬಿಬಿಎಸ್ ಮಾಡಲು ಮಂಗಳೂರಿನ ಎ.ಜೆ. ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್‌ನ ವಿದ್ಯಾರ್ಥಿಯಾಗಿ ಕರ್ನಾಟಕಕ್ಕೆ ಆಗಮಿಸಿದೆ. ಆ ಸಂದರ್ಭದಲ್ಲಿ ಪ್ರೊಫೆಶನ್ ಬದಲಾಯಿಸುವ ಒಂದು ನಿರ್ಧಾರ ಮಾಡಿದೆ. ಅದಕ್ಕಾಗಿ ಅಲ್ಲೇ ಮ್ಯೂಸಿಕ್ ಬ್ಯಾಂಡ್‌ನಲ್ಲಿ ಗುರುತಿಸಿಕೊಳ್ಳಲು ಶುರು ಮಾಡಿದೆ. ಆ ಸಂದರ್ಭದಲ್ಲಿ ಮಂಗಳೂರಿನ ಖಾಸಗಿ ಎಫ್‌ಎಂ ವಾಹಿನಿಗೆ ಜಿಂಗಲ್ಸ್ ಎಲ್ಲ ಮಾಡಿಕೊಟ್ಟಿದ್ದೇನೆ. ಅದರ ನಡುವೆ ಸಣ್ಣದೊಂದು ಪ್ರಾಜೆಕ್ಟ್‌ಗಾಗಿ ಬೆಂಗಳೂರಿಗೆ ಬಂದೆ. ಆಗ ಒಂದಷ್ಟು ಮಂದಿ ಸ್ನೇಹಿತರಾದರು. ಹಾಗೆ ಬೆಂಗಳೂರಿನಿಂದಲೇ ಕೆಲಸ ಮಾಡುವ ಯೋಜನೆ ಹಾಕಿದೆ. ಯಾಕೆಂದರೆ ಮೂಲತಃ ಮಲಯಾಳಿಯೇ ಆದರೂ ನನಗೆ ಕೇರಳದ ಸಿನೆಮಾ ಸಂಗೀತ ಕ್ಷೇತ್ರದೊಂದಿಗೆ ಯಾವುದೇ ಸಂಪರ್ಕ ಇರಲಿಲ್ಲ.


ಸಂಗೀತದಲ್ಲಿ ನಿಮ್ಮ ಆಸಕ್ತಿ ಆರಂಭವಾಗಿದ್ದು ಹೇಗೆ?
ಮನೆಯಲ್ಲಿ ನನ್ನ ತಂದೆ ಟಿ.ಕೆ. ಮುಕುಂದನ್ ತುಂಬ ಚೆನ್ನಾಗಿ ಹಾಡುತ್ತಿರುವುದನ್ನು ಕೇಳಿಸಿಕೊಂಡೇ ಬೆಳೆದೆ. ನನ್ನಮ್ಮ ಮಿನಿಯವರು ಕೂಡ ನೃತ್ಯ ಮತ್ತು ಸಂಗೀತದಲ್ಲಿ ಆಸಕ್ತಿಯುಳ್ಳವರು. ಹಾಗಾಗಿ ಸಹಜವಾಗಿ ನಾನು ಕೂಡ ಸಂಗೀತದಲ್ಲಿ ಒಲವು ಬೆಳೆಸಿಕೊಂಡೆ. ಮಾತ್ರವಲ್ಲ, ನಾನು ಮೂರು ನಾಲ್ಕು ವರ್ಷದ ಮಗುವಾಗಿದ್ದಾಗಲೇ ನನ್ನನ್ನು ಮೃದುಲಾ ಚಂದ್ರನ್ ಎನ್ನುವ ಸಂಗೀತ ಶಿಕ್ಷಕಿಯ ಬಳಿ ವಿದ್ಯಾರ್ಥಿಯನ್ನಾಗಿಸಿದ್ದರು. ಮೊದಲು ಕೀಬೋರ್ಡ್ ಮತ್ತು ಶಾಸ್ತ್ರೀಯ ಸಂಗೀತವನ್ನು ಅವರಿಂದಲೇ ಪಡೆದುಕೊಂಡೆ. ನನಗೊಬ್ಬರು ಸಹೋದರಿ ಕೂಡ ಇದ್ದಾರೆ. ಆಕೆ ಕೂಡ ನನ್ನೊಂದಿಗೆ ಸಂಗೀತಾಭ್ಯಾಸ ಮಾಡಿದ್ದು, ‘ಒಂದು ಮೊಟ್ಟೆಯ ಕಥೆ’ಯಲ್ಲಿ ಹಾಡಿದ್ದಾರೆ. ಆಕೆ ಚೆನ್ನಾಗಿ ಹಾಡುತ್ತಿದ್ದರೂ ವೃತ್ತಿಪರವಾಗಿ ಸಂಗೀತವನ್ನು ಆಯ್ಕೆ ಮಾಡಿಕೊಂಡಿಲ್ಲ. ಆದರೆ ನನಗೆ ಸಿನೆಮಾ ಸಂಗೀತ ಮೊದಲಿನಿಂದಲೂ ಇಷ್ಟ. ಅದರಲ್ಲಿಯೂ ಹಾಡುಗಳಿಗಿಂತ ಆ ಸಿನೆಮಾಗಳ ಹಿನ್ನೆಲೆ ಸಂಗೀತದ ಬಗ್ಗೆ ಅಪಾರ ಆಸಕ್ತಿ. ಇಂದಿಗೂ ನನಗೆ ತೊಂಭತ್ತರ ದಶಕದ ಸಿನೆಮಾಗಳ ಬಗ್ಗೆ ಮಾತನಾಡುವಾಗ ಅವುಗಳ ಹಿನ್ನೆಲೆ ಸಂಗೀತ ಮೊದಲು ನೆನಪಾಗುತ್ತದೆ.

ಇದುವರೆಗೆ ಎಷ್ಟು ಸಿನೆಮಾಗಳಿಗೆ ಸಂಗೀತ ನೀಡಿದ್ದೀರಿ?
ಇಲ್ಲಿಯವರೆಗೆ ನನ್ನ ಸಂಗೀತದಲ್ಲಿ ಕನ್ನಡದ ಹತ್ತು ಸಿನೆಮಾಗಳು ಬಿಡುಗಡೆಯಾಗಿವೆ. ಅವುಗಳಲ್ಲಿ ಮೊದಲು ಜನಪ್ರಿಯವಾಗಿದ್ದು ‘ಒಂದು ಮೊಟ್ಟೆಯ ಕಥೆ’ ಚಿತ್ರ. ಅದು ನನ್ನ ಸಂಗೀತ ನಿರ್ದೇಶನದ ಮೂರನೇ ಚಿತ್ರ. ಮೊದಲ ಚಿತ್ರ ಅರವಿಂದ ಶಾಸ್ತ್ರಿಯವರ ನಿರ್ದೇಶನದ ‘ಕಹಿ’ ಆಗಿತ್ತು. ಎರಡನೆಯದು ಎಂ. ಜಿ. ಶ್ರೀನಿವಾಸ್ ಅವರ ನಿರ್ದೇಶನದ ‘ಶ್ರೀನಿವಾಸ ಕಲ್ಯಾಣ’. ಟಿ. ಎನ್. ಸೀತಾರಾಮ್ ನಿರ್ದೇಶನದ ‘ಕಾಫಿತೋಟ’ ಸೇರಿದಂತೆ ‘ಡಾಟರ್ ಆಫ್ ಪಾರ್ವತಮ್ಮ’, ‘ಅಳಿದು ಉಳಿದವರು’ ಮತ್ತು ‘ಸಾರ್ವಜನಿಕರಿಗೆ ಸುವರ್ಣಾವಕಾಶ’ ಮೊದಲಾದವು ನಾನು ಸಂಗೀತ ನೀಡಿದ ಚಿತ್ರಗಳು. ‘ಮಾಯಾ ಬಜಾರ್’ ನನ್ನ ಸಂಗೀತದ ಹತ್ತನೇ ಚಿತ್ರವಾಗಿತ್ತು. ಇದರ ನಡುವೆ ‘ಲಂಬೋದರ’ ಮತ್ತು ‘ಮಹಿರ’ ಎನ್ನುವ ಸಿನೆಮಾಗಳಿಗೆ ಹಿನ್ನೆಲೆ ಸಂಗೀತವನ್ನು ಕೂಡ ನೀಡಿದ್ದೇನೆ.

ಹೊಸ ಪ್ರಾಜೆಕ್ಟ್‌ಗಳು ಯಾವುವು?
ಈಗ ಹೊಸದಾಗಿ ಐದು ಚಿತ್ರಗಳು ವಿವಿಧ ಹಂತದಲ್ಲಿ ಪ್ರಗತಿಯಲ್ಲಿವೆ. ರಾಜ್ ಬಿ. ಶೆಟ್ಟಿಯವರದೇ ‘ಗರುಡ ಗಮನ ವೃಷಭ ವಾಹನ’ ಬಿಡುಗಡೆಗೆ ತಯಾರಾಗಿದೆ. ಕೊರೋನ ಸಮಸ್ಯೆ ಇಲ್ಲವಾಗಿದ್ದರೆ ಸಿನೆಮಾ ಈಗಾಗಲೇ ಬಿಡುಗಡೆಯಾಗಿರುತ್ತಿತ್ತು. ಅರವಿಂದ್ ಶಾಸ್ತ್ರಿಯವರ ನಿರ್ದೇಶನ ಮತ್ತು ಶರ್ಮಿಳಾ ಮಾಂಡ್ರೆಯವರ ನಿರ್ಮಾಣದಲ್ಲಿ ‘ದಸರಾ’ ಎನ್ನುವ ಚಿತ್ರ ತಯಾರಾಗುತ್ತಿದೆ. ‘ಒಂದು ಮೊಟ್ಟೆಯ ಕಥೆ’ ತಂಡದವರೇ ಸೇರಿಕೊಂಡು ಮತ್ತೊಂದು ನಿರ್ಮಾಣ ಸಂಸ್ಥೆಗೆ ಸಿದ್ಧಗೊಳಿಸಿರುವ ಚಿತ್ರ ಇದು. ರಕ್ಷಿತ್ ಶೆಟ್ಟಿಯವರ ‘ಪರಮ್ವ ಪ್ರೊಡಕ್ಷನ್’ಗಾಗಿ ಒಂದು ಸಿನೆಮಾಕ್ಕೆ ಸಹಿ ಮಾಡಿದ್ದೇನೆ. ರಾಹುಲ್ ಪಿ.ಕೆ. ನಿರ್ದೇಶನದ ಆ ಚಿತ್ರದ ಹೆಸರು ‘ಸಕುಟುಂಬ ಸಮೇತ’. ಅದು ಒಟಿಟಿ ಬಿಡುಗಡೆಗೆಂದು ಮಾಡುತ್ತಿರುವ ಸಣ್ಣ ಪ್ರಾಜೆಕ್ಟ್. ಅದರ ಹಾಡುಗಳು ಸಿದ್ಧವಾಗಿವೆ. ಹಿನ್ನೆಲೆ ಸಂಗೀತದ ಕೆಲಸ ಉಳಿದುಕೊಂಡಿದೆ. ‘ಪರಮ್ವ’ದ ಜೊತೆಗೆ ಹೊಂದಾಣಿಕೆ ಮಾಡಿಕೊಂಡಿರುವ ‘ಏಕಂ’ ಎನ್ನುವ ವೆಬ್ ಸೀರೀಸ್‌ಗೂ ಸಂಗೀತ ನೀಡಲಿದ್ದೇನೆ. ಇವೆಲ್ಲದರ ಜೊತೆಗೆ ಕನ್ನಡ ಮತ್ತು ತೆಲುಗಲ್ಲಿ ತಯಾರಾಗುತ್ತಿರುವ ‘ಆಗಸ್ಟ್’ ಎನ್ನುವ ಚಿತ್ರವೂ ಇದೆ.

ಒಬ್ಬ ವೈದ್ಯರೂ ಆಗಿರುವ ನೀವು ಕೋವಿಡ್ ಕಾಲಘಟ್ಟವನ್ನು ಹೇಗೆ ಕಾಣುತ್ತೀರಿ?
ಬಹುಶಃ ವೈದ್ಯ ಕೂಡ ಆಗಿರುವ ಕಾರಣದಿಂದಲೇ ಇರಬಹುದು; ನಾನು ತುಂಬ ನೊಂದುಕೊಂಡಿದ್ದೇನೆ. ಕೊರೋನ ಕೇಸುಗಳು ಹೆಚ್ಚುತ್ತಿರುವ ಸುದ್ದಿ ನೋಡಿ, ಸುತ್ತಮುತ್ತಲಿನ ಜನರ ಕಷ್ಟಗಳನ್ನು ಕಂಡ ಮೇಲೆಯೂ ಸಂಗೀತದ ಕೆಲಸ ಮಾಡುತ್ತಾ ಕುಳಿತಿರುವುದು ಕಷ್ಟ. ಅದಕ್ಕೊಂದು ಸಮಾಧಾನಕರ ಸನ್ನಿವೇಶ ಬೇಕೇಬೇಕು. ಆದರೆ ನನ್ನದು ಒಬ್ಬ ವೈದ್ಯನ ಹೃದಯವೂ ಆಗಿರುವ ಕಾರಣ ಸದ್ಯಕ್ಕೆ ಅಂತಹ ವಾತಾವರಣ ಸಿಕ್ಕಿಲ್ಲ. ಆದರೆ ಅದಕ್ಕೆ ತಕ್ಕಂತೆ ಸಿನೆಮಾದ ಕೆಲಸಗಳು ಕೂಡ ನಡೆಯುತ್ತಿಲ್ಲವಾದ ಕಾರಣ ನನಗೆ ಒತ್ತಡಕ್ಕೆ ಬಿದ್ದು ಕೆಲಸ ಮಾಡಬೇಕಾದ ಅನಿವಾರ್ಯತೆಯೂ ಇಲ್ಲ. ಆದರೆ ಸದ್ಯದಲ್ಲೇ ಕೊರೋನ ಕಾಲ ಮುಗಿಯುತ್ತದೆ ಎನ್ನುವ ನಿರೀಕ್ಷೆಯಲ್ಲಿದ್ದೇನೆ.

Writer - ಶಶಿಕರ ಪಾತೂರು

contributor

Editor - ಶಶಿಕರ ಪಾತೂರು

contributor

Similar News