ಸಿನೆಮಾ ಸಾಧ್ಯತೆಗಳನ್ನು ವಿಸ್ತರಿಸುವ ಮೂರು ವಿಭಿನ್ನ ಚಿತ್ರಗಳು

Update: 2021-06-13 05:54 GMT

ಕೊರೋನ ಲಾಕ್‌ಡೌನ್ ಕೃಪೆಯಿಂದಾಗಿ ಇತ್ತೀಚೆಗೆ ಒಂದಷ್ಟು ಸಿನೆಮಾಗಳನ್ನು ನೋಡಿದೆ. ಅವುಗಳಲ್ಲಿ ನನಗೆ ಬಹಳ ಮುಖ್ಯ ಎನಿಸಿದ, ಸಿನೆಮಾ ಸಾಧ್ಯತೆಗಳನ್ನು ವಿಸ್ತರಿಸುವ ಮೂರು ಚಿತ್ರಗಳ ಕುರಿತು ಹೇಳಬೇಕೆನಿಸಿದೆ. ಆ ಚಿತ್ರಗಳೆಂದರೆ- ಮಲಯಾಳಂನ ‘ಬಿರಿಯಾನಿ’, ತಮಿಳಿನ ‘ಮಂಡೇಲಾ’ ಮತ್ತು ತೆಲುಗಿನ ‘ಸಿನೆಮಾ ಬಂಡಿ’. ಈ ಮೂರೂ ಚಿತ್ರಗಳಲ್ಲಿ ಕಾಣುವ ಸಮಾನ ಅಂಶ- ಬಿಗ್ ಬಜೆಟ್ ಚಿತ್ರಗಳಲ್ಲ, ಸ್ಟಾರ್ ನಟ-ನಟಿಯರ ದಂಡಿಲ್ಲ, ರಿಚ್‌ನೆಸ್‌ಗಾಗಿ ಫಾರಿನ್ ಚಿತ್ರೀಕರಣವಿಲ್ಲ, ಹೆಸರಾಂತ ನಿರ್ದೇಶಕರು ನಿರ್ದೇಶಿಸಿದ ಚಿತ್ರಗಳಲ್ಲ. ಈ ಮೂರೂ ಚಿತ್ರಗಳಲ್ಲಿ ಎದ್ದುಕಾಣುವುದು- ಬಡತನ, ಅವಮಾನ ಮತ್ತು ಹಸಿವು. ಈ ಮೂರು ಅಂಶಗಳನ್ನು ಕಥಾವಸ್ತುವಿನಲ್ಲಿ ಅಳವಡಿಸಿಕೊಂಡು ಮೂವರು ನಿರ್ದೇಶಕರು ನಿಭಾಯಿಸಿರುವ, ನಿರೂಪಿಸಿರುವ ರೀತಿ ವಿಭಿನ್ನವಾಗಿದೆ. ಹಾಗೆಯೇ ಮತ್ತೊಂದು ಸಮಾನ ಸಂಗತಿ ಎಂದರೆ, ಆ ಮೂವರು ನಿರ್ದೇಶಕರಿಗೂ, ಇದೇ ಮೊದಲ ನಿರ್ದೇಶನದ ಚಿತ್ರ.

ತೆಲುಗಿನ ‘ಸಿನೆಮಾ ಬಂಡಿ’ ಚಿತ್ರದ ಕಿಕ್ಕರ್- ಎವರಿವನ್ ಇಸ್ ಎ ಫಿಲ್ಮ್ ಮೇಕರ್.. ಅಟ್ ಹಾರ್ಟ್- ಇದೇ ಎಲ್ಲವನ್ನು ಹೇಳುತ್ತದೆ. ಆಂಧ್ರ ಹೇಳಿಕೇಳಿ ಸಿನಿಪ್ರಿಯರ ರಾಜ್ಯ. ಅತೀ ಅನಿಸುವಷ್ಟು ಸಿನೆಮಾ ಹುಚ್ಚು. ಆ ಹುಚ್ಚನ್ನೇ ಕಥಾವಸ್ತುವನ್ನಾಗಿಟ್ಟು ಸಿನೆಮಾ ಮಾಡಿದ್ದಾರೆ ನಿರ್ದೇಶಕ ಪ್ರವೀಣ್ ಕುಂದ್ರೆಗುಲ. ಕರ್ನಾಟಕ-ಆಂಧ್ರದ ಅಂಚಿನಲ್ಲಿರುವ ಹಳ್ಳಿ. ಹಳ್ಳಿಯಿಂದ ಹತ್ತಿರದ ಪಟ್ಟಣಕ್ಕೆ ಹೋಗಿಬರುವ ಜನರನ್ನು ಸಾಗಿಸುವ ಆಟೊ ಡ್ರೈವರ್ ವೀರಬಾಬುಗೆ ಆಕಸ್ಮಿಕವಾಗಿ ಆಟೊದಲ್ಲಿ ಯಾರೋ ಮರೆತು ಬಿಟ್ಟುಹೋದ ಕ್ಯಾಮರಾ ಸಿಗುತ್ತದೆ. ಸಿಕ್ಕ ಕ್ಯಾಮರಾ (‘ಗಾಡ್ಸ್ ಮಸ್ಟ್ ಬಿ ಕ್ರೇಜಿ’ ಚಿತ್ರದ ಬಾಟಲ್ ಥರ) ಹಳ್ಳಿಯಲ್ಲಿ ಎಂತಹ ಸಂಚಲನ ಉಂಟುಮಾಡುತ್ತದೆ ಹಾಗೂ ಬದಲಾವಣೆಗೆ ಕಾರಣವಾಗುತ್ತದೆ ಎಂಬುದೇ ಚಿತ್ರದ ಕಥಾವಸ್ತು.

ವೀರಬಾಬುಗೆ ಸಿಕ್ಕ ಕ್ಯಾಮರಾ, ಅವನೊಳಗೆ ಹುದುಗಿರುವ ಸಿನೆಮಾ ಹುಚ್ಚನ್ನು ಕೆರಳಿಸುತ್ತದೆ. ಅದಕ್ಕೆ ಹಳ್ಳಿಯ ಅಜ್ಜನ ಕೈಯಲ್ಲಿರುವ ಕತೆ, ಕ್ಯಾಮರಾಮನ್ ಆಗಿ ಸ್ಥಳೀಯ ಸ್ಟಿಲ್ ಫೋಟೊಗ್ರಾಫರ್ ಗಣಪತಿ, ಚಿತ್ರದ ಹೀರೋ ಆಗಿ ಕ್ಷೌರಿಕ ಮರಿದಯ್ಯ, ಹೀರೋಯಿನ್ ಆಗಿ ತರಕಾರಿ ಮಾರುವ ಮಂಗ, ಕಂಟಿನ್ಯುಟಿ ಹೇಳುವ ಹುಡುಗ.. ಜೊತೆಗೂಡುತ್ತಾರೆ. ಹಳ್ಳಿಯ ಹಳ್ಳ-ಕೊಳ್ಳಗಳಲ್ಲೆಲ್ಲ ಕ್ಯಾಮರಾ ಇಟ್ಟು ಚಿತ್ರೀಕರಿಸಿಕೊಳ್ಳುತ್ತಾರೆ. ಸಿನೆಮಾ ಕನಸಿನಲ್ಲಿ ತೇಲುವ ವೀರಬಾಬು ಆಟೊ ಓಡಿಸುವುದನ್ನು ನಿಲ್ಲಿಸುತ್ತಾನೆ. ದೊಡ್ಡ ಕ್ಯಾಮರಾ ಕೈಗೆ ಸಿಕ್ಕ ಖುಷಿಯಲ್ಲಿ ಸ್ಟಿಲ್ ಫೋಟೊಗ್ರಾಫರ್ ಮದುವೆ ಪ್ರೋಗ್ರಾಂಗಳನ್ನು ತಿರಸ್ಕರಿಸುತ್ತಾನೆ. ಹೀರೋ ಭ್ರಮೆಯಲ್ಲಿ ತೇಲಾಡುವ ಮರಿದಯ್ಯನ ಸೆಲೂನ್‌ಗೆ ಬೀಗ ಬೀಳುತ್ತದೆ. ಇವರೆಲ್ಲರ ಒತ್ತಾಯಕ್ಕೆ ಮಣಿದು ಹೀರೋಯಿನ್ ಆಗುವ ಮಂಗನ ತರಕಾರಿ ವ್ಯಾಪಾರಕ್ಕೂ ಕಂಟಕ ಎದುರಾಗುತ್ತದೆ. ಎಲ್ಲರೂ ಅಂದಂದಿನ ಆದಾಯ ನಂಬಿ ಬದುಕುವ ಬಡವರು. ಆದರೆ ಸಿನೆಮಾ ಎಂಬ ಹಸಿವನ್ನು ಗೆಲ್ಲಲು ಹೊರಟವರು. ಅದರಿಂದಾದ ಅವಮಾನಕ್ಕೂ ಅಂಜದವರು.

ಇಂತಹದ್ದೊಂದು ಕತೆಯನ್ನಿಟ್ಟುಕೊಂಡು ಚಿತ್ರ ಮಾಡಬಹುದು ಎನಿಸಿದ ನಿರ್ದೇಶಕರ, ಚಿತ್ರತಂಡದ ಮತ್ತು ಅದನ್ನು ಆಗುಮಾಡಿದ ನಿರ್ಮಾಪಕರ ಸಾಹಸವನ್ನು ಮೆಚ್ಚಲೇಬೇಕು. ಹಾಗೆಯೇ ಸಿನೆಮಾ ಎಂಬ ಮಾಂತ್ರಿಕ ಸ್ಪರ್ಶಕ್ಕೆ ಸಿಕ್ಕ ಸಾಮಾನ್ಯ ಜನರ- ಹೊಸಬರ ಕನಸು ನನಸಾದ ಬಗೆ ಹಲವರಿಗೆ ಮಾದರಿಯಾಗುವಂತಹದ್ದು.

ಇನ್ನು ಮಡೋನ್ನೆ ಅಶ್ವಿನ್ ನಿರ್ದೇಶನದ ತಮಿಳಿನ ‘ಮಂಡೇಲಾ’ ಚಿತ್ರ, ಗ್ರಾಮ ಪಂಚಾಯತ್ ಚುನಾವಣೆಯ ಹಿನ್ನೆಲೆಯ ಕಥಾವಸ್ತುವುಳ್ಳದ್ದು. ಈ ಚಿತ್ರದ ಹೀರೋ ದಕ್ಷಿಣ ಆಫ್ರಿಕಾದ ನೆಲ್ಸನ್ ಮಂಡೇಲಾ ಅಲ್ಲ, ಆ ಹೆಸರಿನ ಪಾತ್ರ ನಿರ್ವಹಿಸಿರುವ ತಮಿಳು ಚಿತ್ರರಂಗದ ಹಾಸ್ಯನಟ ಯೋಗಿ ಬಾಬು. ಈತ ಎಲ್ಲರಿಂದ ತುಚ್ಛವಾಗಿ ತಿರಸ್ಕರಿಸಲ್ಪಟ್ಟ, ಎರಡೂ ಹಳ್ಳಿಗಳ ಕೂಡು ರಸ್ತೆಯಲ್ಲಿರುವ ದೊಡ್ಡಾಲದ ಮರದ ಕೆಳಗೆ ಕಟಿಂಗ್, ಶೇವಿಂಗ್ ಮಾಡುವ ಕ್ಷೌರಿಕ. ಮರವೇ ಮನೆ. ಹೆಸರು ಸ್ಮೈಲ್ ಅಲಿಯಾಸ್ ಮಂಡೇಲಾ. ಜಾತಿಯ ಕಾರಣಕ್ಕೆ ಈತನನ್ನು ಹೀಯಾಳಿಸುವ, ಅವಮಾನಿಸುವ ಹಳ್ಳಿಯೇ ಕೊನೆಗೊಂದು ದಿನ ಇವನ ಬೆನ್ನಿಗೆ ನಿಲ್ಲುತ್ತದೆ. ಅಂತಹ ನಾಟಕೀಯ ಸಂದರ್ಭವೇ ಸೃಷ್ಟಿಯಾಗುತ್ತದೆ.

ಎರಡೂ ಹಳ್ಳಿಗಳಿಗೆ ಡಿಫಾಕ್ಟೋ ಚೇರ್ಮನ್ ಆಗಿರುವ ಹಿರಿತಲೆ ಅಯ್ಯ, ಆತನಿಗೆ ಇಬ್ಬರು ಹೆಂಡತಿಯರು, ಅವರಿಗಿಬ್ಬರು ಗಂಡುಮಕ್ಕಳು. ಮುಂದಿನ ಗ್ರಾಮ ಪಂಚಾಯತ್ ಚುನಾವಣೆಗೆ ಅಧ್ಯಕ್ಷರು ಯಾರು ಎನ್ನುವುದು ಯಕ್ಷಪ್ರಶ್ನೆ. ಇಬ್ಬರು ಹೆಂಡತಿಯರ ಬಾಯಿಗೆ, ಬಿಗಿಪಟ್ಟಿಗೆ ಸಿಕ್ಕ ಅಯ್ಯ, ಆಯ್ಕೆ ಮಾಡದೆ ಮೌನಕ್ಕೆ ಜಾರುತ್ತಾನೆ. 30 ಕೋಟಿ ಅನುದಾನದ ಆಸೆಗೆ ಬಿದ್ದ ಇಬ್ಬರು ಮಕ್ಕಳೂ ಚುನಾವಣೆಗೆ ಸ್ಪರ್ಧಿಸುತ್ತಾರೆ. ಜಾತಿ ರಾಜಕಾರಣ, ಮತ ಮಾರಾಟ, ಗುಂಪುಗಾರಿಕೆ, ಹೊಡೆದಾಟ ಎಲ್ಲ ನಡೆದು, ಕೊನೆಗೆ ಒಂದು ವೋಟಿನಿಂದ ಗೆಲ್ಲುವ ಪರಿಸ್ಥಿತಿ ಉದ್ಭವವಾಗುತ್ತದೆ. ಆ ನಿರ್ಣಾಯಕ ಮತವೇ ಮಂಡೇಲಾನದ್ದು. ಆತ ಯಾರಿಗೆ ಮತ ಚಲಾಯಿಸುತ್ತಾನೆ ಎನ್ನುವುದೇ ಚಿತ್ರದ ಕ್ಲೈಮ್ಯಾಕ್ಸ್.

ಹಳ್ಳಿಯ ಹಿರಿಯ ವ್ಯಕ್ತಿ ಪೆರಿಯಯ್ಯ, ಕರುಣಾನಿಧಿಯಂತೆ, ಆತನ ಇಬ್ಬರು ಹೆಂಡಿರ ಇಬ್ಬರು ಮಕ್ಕಳು ಸ್ಟಾಲಿನ್-ಅಳಗಿರಿಯಂತಿದ್ದು, ಪ್ರಸ್ತುತ ರಾಜಕಾರಣವನ್ನು ಅಣಕಿಸುವಂತಿದೆ. ಹಾಗೆಯೇ ಚುನಾವಣೆಯಿಂದಾಗುವ ಅವಘಡಗಳನ್ನು ವಿಡಂಬನಾತ್ಮಕವಾಗಿ ತೋರಲಾಗಿದೆ. ಹಳ್ಳಿಯ ಪೋಸ್ಟ್ ಆಫೀಸನ್ನು, ನೆಲ್ಸನ್ ಮಂಡೇಲಾರನ್ನು ಬದಲಾವಣೆಯ ಸಂಕೇತವಾಗಿ ಬಳಸಲಾಗಿದೆ.

ಹಳ್ಳಿಗೇ ಕ್ಯಾಮರಾ ಇಟ್ಟು ಚಿತ್ರೀಕರಿಸಿದಂತೆ ಕಂಡರೂ, ಸಿನೆಮಾದ ಗುಣವಾದ ಲಾರ್ಜರ್ ದ್ಯಾನ್ ಲೈಫ್ ಎದ್ದುಕಾಣುತ್ತದೆ. ನಡುವಿನಲ್ಲಿ ಕೊಂಚ ಬೋರ್ ಹೊಡೆಸುತ್ತದೆ. ಆದರೆ ಚಿತ್ರದ ಕ್ಲೈಮ್ಯಾಕ್ಸ್ ಸೀನ್ ನಿರೂಪಿಸಿರುವ ರೀತಿ ವಿಶೇಷವಾಗಿದೆ. ಕೊಳಕು ಜಾತಿ ರಾಜಕಾರಣದಿಂದ ಮೂಲಭೂತ ಸೌಕರ್ಯಗಳಾದ ರಸ್ತೆ, ನೀರು, ಶೌಚಾಲಯ, ಸ್ಕೂಲ್ ಕಟ್ಟಡಗಳು ಹಳ್ಳಿಗರ ಅನುಕೂಲಕ್ಕೆ ಒದಗಿಬರುವ, ಹಳ್ಳಿಯನ್ನು ಗೆಲ್ಲಿಸುವ ಬಗೆ ಭಿನ್ನವಾಗಿದೆ. ಆ ಗೆಲುವಿಗೆ ಒಬ್ಬ ಕ್ಷೌರಿಕ ಕಾರಣನಾಗುವುದು ಸಿನೆಮಾದ ಸಾಧ್ಯತೆಯನ್ನು ವಿಸ್ತರಿಸಿದೆ.

ಇವೆರಡು ಚಿತ್ರಗಳಿಗಿಂತ ವಿಭಿನ್ನವಾಗಿ ನಿಲ್ಲುವುದು ಸಾಜಿನ್ ಬಾಬು ನಿರ್ದೇಶನದ ಮಲಯಾಳಂ ಚಿತ್ರ ‘ಬಿರಿಯಾನಿ’. ಬಡ ಮುಸ್ಲಿಂ ಕುಟುಂಬದ ಹೆಣ್ಣುಮಗಳು ಖದೀಜಾಳ ಬರ್ಬರ ಬದುಕನ್ನು ಬಿಡಿಸಿಡುವ ಚಿತ್ರ. ಧರ್ಮ, ಸಂಪ್ರದಾಯ, ಸಾಮಾಜಿಕ ಕಟ್ಟುಪಾಡುಗಳ ಚೌಕಟ್ಟನ್ನು ಮುರಿಯುವ, ಮೀರುವ ಖದೀಜಾಳ ಪಾತ್ರವನ್ನು ನಿರ್ವಹಿಸಿರುವ ನಟಿ ಕನಿ ಕಸ್ರುತಿ, ಗಟ್ಟಿಗಿತ್ತಿಯೇ ಸೈ. ಖದೀಜಾಳ ಅಮ್ಮ ಅರೆಹುಚ್ಚಿ. ಅವಳನ್ನು ನೋಡಲು ತವರಿಗೆ ಹೋಗುವ ಖದೀಜಾಗೆ ಅಮ್ಮನ ಆತ್ಮಹತ್ಯೆ ಯತ್ನ, ಮನೆಯ ಅಸ್ತವ್ಯಸ್ತ ಬದುಕು ಖಿನ್ನತೆಗೆ ದೂಡುತ್ತದೆ. ಜೊತೆಗೆ ದುಡಿಮೆಗಾಗಿ ಹೊರದೇಶಕ್ಕೆ ಹೋದ ಸಹೋದರನ ಮೇಲೆ ಉಗ್ರ ಎಂಬ ಆರೋಪ, ವಿಚಾರಣೆಗಾಗಿ ಮನೆಗೆ ಬರುವ ಪೊಲೀಸರ ವರ್ತನೆ ಇನ್ನಷ್ಟು ಅಧೀರಳನ್ನಾಗಿಸುತ್ತದೆ. ಆಕೆಯ ಮಾಸಿದ ಬುರ್ಖಾ, ಬತ್ತಿದ ಬಾವಿಯಂತಿರುವ ಕಣ್ಣುಗಳು- ಬರಿದಾದ ಭವಿಷ್ಯವನ್ನು ಬಯಲಿಗಿಡುತ್ತವೆ. ಅಮ್ಮನ ಸಂತೈಸಲು ಸ್ವಲ್ಪ ದಿನಗಳ ಕಾಲ ತವರಲ್ಲೇ ಉಳಿದ ಸಂದರ್ಭದಲ್ಲಿಯೇ ಗಂಡನಿಂದ ಫೋನ್‌ಗೆ ಬರುವ ತಲಾಖ್ ಎಂಬ ಮೆಸೇಜ್- ಭೂಮಿ ಬಿರಿದು ಬರಸೆಳೆಯಬಾರದೆ ಎನಿಸುತ್ತದೆ.

ಕೊನೆಗೂ ಖದೀಜಾ ಬದಲಾಗುತ್ತಾಳೆ. ಕಲ್ಲುಬಂಡೆಯ ಸೀಳಿ ತನ್ನಸ್ತಿತ್ವವನ್ನು ತೋರುವ ಗಿಡದಂತೆ, ಸೋಗಲಾಡಿ ಸಮಾಜದ ಮುಖವಾಡ ಕಳಚಿಟ್ಟು ಸಿಡಿದೇಳುತ್ತಾಳೆ. ಅರಗಿಸಿಕೊಳ್ಳಲಾಗದ ಹಲವು ಕಟು ಸತ್ಯಗಳನ್ನು ಹಸಿಹಸಿಯಾಗಿಯೇ ಬಿಡಿಸಿಡುವ ಬಿರಿಯಾನಿ ಈಗಾಗಲೇ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಹಲವು ಪ್ರಶಸ್ತಿಗಳಿಗೆ-ಪ್ರಶಂಸೆಗೆ ಪಾತ್ರವಾಗಿದೆ. ಮಲಯಾಳಿಗಳ ಪ್ರಯೋಗಶೀಲತೆಗೆ ಗರಿ ಮೂಡಿಸಿದೆ. ಹಾಗೆಯೇ ಸಂಪ್ರದಾಯಸ್ಥರ ಕೆಂಗಣ್ಣಿಗೂ ಗುರಿಯಾಗಿದೆ.

ಕೋವಿಡ್ ಕಾಲದಲ್ಲಿ, ಆನ್‌ಲೈನ್ ಯುಗದಲ್ಲಿ, ಭಾಷೆಯ ಎಲ್ಲೆ ದಾಟಿ ಎಲ್ಲರಿಗೆ ಎಲ್ಲವೂ ಕ್ಷಣಮಾತ್ರದಲ್ಲಿ ಸಿಗುತ್ತಿರುವ ಈ ಹೊತ್ತಿನಲ್ಲಿ, ಮೇಲಿನ ಮೂರು ಚಿತ್ರಗಳನ್ನು ಕುತೂಹಲಕ್ಕಾದರೂ ನೋಡಬೇಕಿದೆ.

Writer - ಬಸವರಾಜು ಮೇಗಲಕೇರಿ

contributor

Editor - ಬಸವರಾಜು ಮೇಗಲಕೇರಿ

contributor

Similar News