ಜಗಮೆ ತಂದಿರಂ: ಹಿಂಸಾತ್ಮಕ ಚಿತ್ರದಲ್ಲಿ ಸಂದೇಶ ಹುಡುಕುವುದು ಕಷ್ಟ

Update: 2021-06-21 11:07 GMT

ತಮಿಳುನಾಡಿನ ಮದುರೈನಲ್ಲಿರುವ ಹೊಟೇಲ್ ಕಾರ್ಮಿಕ ಸುರುಳಿ. ಆತ ಮುಷ್ಟಿ ಹಿಡಿದು ಪರೊಟ ಮಾಡುವುದರ ಜೊತೆಗೆ ಕತ್ತಿ ಹಿಡಿದು ಹೋರಾಟ ಮಾಡುವುದರಲ್ಲಿಯೂ ಎತ್ತಿದ ಕೈ. ಕಣ್ಣೆದುರೇ ನಾಡಬಾಂಬು ತಯಾರಿಸಿ ಎಸೆಯಬಲ್ಲ. ಅಲ್ಲಿಗೆ ಸುರುಳಿ ಎನ್ನುವ ಪಾತ್ರ ಧನುಷ್‌ಗೆ ಹೇಳಿ ಮಾಡಿಸಿದಂತಿದೆ ಎನ್ನಬಹುದು. ಆದರೆ ಅಂತಹ ವ್ಯಕ್ತಿ ಲಂಡನ್‌ಗೆ ಹೋದ ಮೇಲೆ ಏನೇನು ನಡೆಯುತ್ತದೆ ಎನ್ನುವುದೇ ಚಿತ್ರದ ಪ್ರಮುಖ ಎಳೆ.

ಸುರುಳಿ ಎನ್ನುವ ಹೆಸರಿಗಿರುವಷ್ಟು ಸುರುಳಿಗಳು ಆ ಪಾತ್ರಕ್ಕಿಲ್ಲ. ಲಂಡನ್‌ಗೆ ಹೋದರೂ ರೌಡಿಸಂ ಮಾಡುವುದಷ್ಟೇ ಆತನ ಧ್ಯೇಯ. ಅದರಿಂದಲೇ ಕೋಟಿ ರೂಪಾಯಿ ಗಳಿಸಬಹುದು ಎನ್ನುವ ಕಾರಣಕ್ಕಾಗಿ ವಿದೇಶ ಸೇರುತ್ತಾನೆ. ಅಲ್ಲಿನ ಡಾನ್ ಪೀಟರ್ ಕೈಯಿಂದ ದುಡ್ಡು ಪಡೆದು ಆತನ ವಿರೋಧಿ ಪಾಳಯವಾದ ಶಿವದಾಸ್ ವಿರುದ್ಧ ಯುದ್ಧಕ್ಕೆ ನಿಲ್ಲುತ್ತಾನೆ. ಈ ಸಂದರ್ಭದಲ್ಲಿ ಆತನಿಗೆ ಅತ್ತಿಲ ಎನ್ನುವ ಯುವತಿಯ ಪರಿಚಯವಾಗುತ್ತದೆ. ಈ ಸಂದರ್ಭದಲ್ಲಿ ಆತನಿಗೆ ಎರಡು ವಿಚಾರಗಳು ತುಸು ನಿಧಾನವಾಗಿ ಅರ್ಥವಾಗುತ್ತವೆ. ಒಂದು ಪೀಟರ್ ಒಬ್ಬ ಜನಾಂಗೀಯ ದ್ವೇಷಿ ಎನ್ನುವುದು ಮತ್ತು ಶಿವದಾಸ್ ಶ್ರೀಲಂಕಾದಿಂದ ಲಂಡನ್‌ಗೆ ವಲಸೆ ಬಂದಿದ್ದು, ಅಲ್ಲಿನ ವಲಸೆ ತಮಿಳರ ರಕ್ಷಕ ಎನ್ನುವುದು. ಆದರೆ ಈ ವಿಚಾರ ತಿಳಿಯುವಷ್ಟರಲ್ಲಿ ಸಾಕಷ್ಟು ಸಂಗತಿಗಳು ನಾಯಕನ ಕೈ ಮೀರಿ ಹೋಗಿರುತ್ತವೆ. ಅವುಗಳನ್ನು ನಿಯಂತ್ರಿಸುವ ಸುರುಳಿಯ ಪ್ರಯತ್ನ ಯಾವ ರೀತಿಯಲ್ಲಿದೆ ಎನ್ನುವುದನ್ನು ತೋರಿಸಿರುವ ಚಿತ್ರವೇ ‘ಜಗಮೆ ತಂದಿರಂ’.

‘ಪಿಜಾ’, ‘ಜಿಗರ್ ಥಂಡ’ದಂತಹ ಚಿತ್ರಗಳನ್ನು ನೀಡಿರುವ ಯುವ ನಿರ್ದೇಶಕ ಕಾರ್ತಿಕ್ ಸುಬ್ಬರಾಜು ಸಿನೆಮಾ ಎನ್ನುವ ಕಾರಣಕ್ಕೆ ಈ ಚಿತ್ರದ ಬಗ್ಗೆ ಹೆಚ್ಚು ನಿರೀಕ್ಷೆ ಇರಿಸಿಕೊಂಡರೆ ನಿರಾಶೆ ಕಟ್ಟಿಟ್ಟ ಬುತ್ತಿ. ಶ್ರೀಲಂಕಾದ ವಲಸೆ ಕಾರ್ಮಿಕರ ಸಮಸ್ಯೆಯಂತಹ ಗಂಭೀರ ವಿಚಾರವನ್ನು ಚಿತ್ರದಲ್ಲಿ ಸೇರಿಸಿರುವ ರೀತಿ ಪಕ್ವತೆ ಪಡೆದಿಲ್ಲ. ಸರಿಯಾದ ಚಿತ್ರಕತೆ ಮಾಡುವಲ್ಲಿ ನಿರ್ದೇಶಕರು ಎಡವಿದಂತೆ ಕಾಣಿಸುತ್ತದೆ. ಆದರೆ ಒಂದು ಆ್ಯಕ್ಷನ್ ಥ್ರಿಲ್ಲರ್ ಮಿಶ್ರಿತ ಪ್ರೇಮಕತೆ ಬಯಸುವವರು ನೋಡಬಹುದಾದ ಸಿನೆಮಾ. ಬಹುಶಃ ರಜನಿಯ ‘ಕಬಾಲಿ’ ಮಾದರಿಯಲ್ಲಿ ಧನುಷ್‌ಗೆ ಒಂದು ಸಿನೆಮಾ ಮಾಡುವ ಆಸೆಯನ್ನು ಈ ನಿರ್ದೇಶಕರು ನೆರವೇರಿಸಲು ಪ್ರಯತ್ನಿಸಿದಂತಿದೆ.

ಕಥಾನಾಯಕ ಸುರುಳಿಯ ಪಾತ್ರದಲ್ಲಿ ಧನುಷ್ ಎಂದಿನಂತೆ ಲವಲವಿಕೆಯ ನಟನೆ ನೀಡಿದ್ದಾರೆ. ಸಂತೋಷ್ ನಾರಾಯಣ್ ಸಂಗೀತದಲ್ಲಿ ಪಾತ್ರ ಇನ್ನಷ್ಟು ವೈಭವ ಪಡೆದುಕೊಂಡಿದೆ. ‘ರಕಿಟ ರಕಿಟ’ ಎನ್ನುವ ಹಾಡಂತೂ ‘ವಾದಿ ಕಮ್ಮಿಂಗ್’ ಹಾಡಿನಂತೆ ಮಾಸ್ ಪ್ರೇಕ್ಷಕರ ಮೈನವಿರೇಳಿಸುವಂತಿದೆ. ಅದಕ್ಕೆ ಧನುಷ್ ಹಾಕಿದ ಹೆಜ್ಜೆಯೂ ಜೊತೆ ನೀಡಿದೆ. ನಾಯಕಿ ಅತ್ತಿಲ ಪಾತ್ರದಲ್ಲಿ ಮಲಯಾಳಂ ನಟಿ ಐಶ್ವರ್ಯ ಲಕ್ಷ್ಮೀ ನಟಿಸಿದ್ದಾರೆ. ಆಕೆಯ ಪಾತ್ರಕ್ಕೂ ಅಭಿನಯಕ್ಕಾಗಿ ಉತ್ತಮ ಅವಕಾಶಗಳಿವೆ. ಆದರೆ ಸಂದರ್ಭಕ್ಕೆ ಒಪ್ಪದಂತೆ ಸೃಷ್ಟಿಸಲಾದ ಭಾವಗಳ ಬದಲಾವಣೆಗಳನ್ನು ಅರಗಿಸಿಕೊಳ್ಳುವುದು ಕಷ್ಟ!

ಪೀಟರ್ ಪಾತ್ರದಲ್ಲಿ ಹಾಲಿವುಡ್ ನಟ ಜೇಮ್ಸ್ ಕಾಸ್ಮೊ, ಶಿವದಾಸ್ ಆಗಿ ಮಲಯಾಳಂ ನಟ ಜೋಜು ಜಾರ್ಜ್ ನಟಿಸಿದ್ದಾರೆ. ಒಟ್ಟಿನಲ್ಲಿ ಈ ಎಲ್ಲ ಜನಪ್ರಿಯ ನಟರ ಹಿಂದಿನ ಚಿತ್ರಗಳನ್ನು ವೀಕ್ಷಿಸಿದವರಿಗೆ ಅವರ ಪ್ರತಿಭೆಗೆ ತಕ್ಕ ಪಾತ್ರಗಳನ್ನು ನೀಡಿಲ್ಲ ಎನ್ನುವ ಆಪಾದನೆ ನಿರ್ದೇಶಕರ ಮೇಲೆ ಮೂಡುವುದು ಸಹಜ. ಇರುವ ಅವಕಾಶದಲ್ಲಿ ಸುರುಳಿಯ ತಾಯಿಯಾಗಿ ವಡಿವುಕರಸಿ ಮತ್ತು ಮುರುಗೇಸನಾಗಿ ಎಸ್. ಪಿ. ಗಜರಾಜ್ ನೆನಪಲ್ಲಿ ಉಳಿಯುತ್ತಾರೆ.

‘‘ಹೊಡೆದಾಟ, ಕೊಲೆಯನ್ನು ಕೂಡ ಕ್ಷಮಿಸಬಹುದೇನೋ, ಆದರೆ ದ್ರೋಹ ಬಗೆಯುವುದನ್ನು ಕ್ಷಮಿಸಲಾರೆ’’ ಎಂದು ನಾಯಕನಿಗೆ ತಾಯಿ ಹೇಳುವ ಮಾತು, ‘‘ಯುದ್ಧ ಆರಂಭಿಸಲು ಮಾತ್ರ ಸಾಧ್ಯ. ಮುಗಿಸುವುದು ಹೇಗೆ ಎನ್ನುವುದು ನಮ್ಮ ಕೈಯಲ್ಲಿರುವುದಿಲ್ಲ’’ ಎಂದು ನಾಯಕನಿಗೆ ಪತ್ನಿ ಹೇಳುವ ಮಾತುಗಳು ಸಂಭಾಷಣೆಕಾರರನ್ನು ನೆನಪಿಸುವಂತೆ ಮಾಡುತ್ತದೆ. ದಶಕದ ಹಿಂದೆ ಮಲಯಾಳಂನಲ್ಲಿ ಮೋಹನ್ ಲಾಲ್ ನಾಯಕರಾಗಿದ್ದ ‘ಪೆರುಚ್ಚಾಳಿ’ ಎನ್ನುವ ಚಿತ್ರ ತೆರೆಕಂಡಿತ್ತು. ಅದರ ಕತೆಯ ಪ್ರಮುಖ ಎಳೆಯ ಮಾದರಿಯಲ್ಲೇ ಇಲ್ಲಿಯೂ ಕತೆ ಸಾಗುತ್ತದೆ. ಅಲ್ಲಿ ನಾಯಕನ ಬುದ್ಧಿಶಕ್ತಿಗೆ ಹೆಚ್ಚು ಮಹತ್ವ ಇತ್ತು. ಇಲ್ಲಿ ತೋಳ್ಬಲಕ್ಕೆ ಪ್ರಾಮುಖ್ಯತೆ ನೀಡಲಾಗಿದೆ.

ಸಾಮಾನ್ಯವಾಗಿ ರೌಡಿಸಂಗೆ ಇಳಿಯುವ ನಾಯಕ ಬದಲಾಗುವ ಅಥವಾ ದುರಂತ ಅಂತ್ಯ ಕಾಣುವುದೇ ಚಿತ್ರದ ಸಂದೇಶ ಎನ್ನಲಾಗುತ್ತದೆ. ಆದರೆ ಇಲ್ಲಿ ಜನಾಂಗೀಯ ದ್ವೇಷದ ವಿರುದ್ಧದ ಹೋರಾಟ ಎನ್ನುವುದಕ್ಕಾಗಿ ಆತನ ಹೋರಾಟಕ್ಕೆ ಪಾವಿತ್ರ್ಯತೆ ತುರುಕಲಾಗಿದೆಯೇ ಎನ್ನುವ ಸಂದೇಹ ಕಾಡಿದರೆ ಅಚ್ಚರಿ ಇಲ್ಲ. ಹಿಂಸಾತ್ಮಕ ಚಿತ್ರದಲ್ಲಿ ಸಂದೇಶ ಹುಡುಕುವುದು ಕಷ್ಟ. ಆದರೆ ಹೊಡೆದಾಟ ಇಷ್ಟಪಡುವವರಿಗೆ ಇದು ಹೇಳಿ ಮಾಡಿಸಿದ ಚಿತ್ರ.

ತಾರಾಗಣ: ಧನುಷ್, ಐಶ್ವರ್ಯ ಲಕ್ಷ್ಮೀ
ನಿರ್ದೇಶನ: ಕಾರ್ತಿಕ್ ಸುಬ್ಬರಾಜು
ನಿರ್ಮಾಣ: ಎಸ್. ಶಶಿಕಾಂತ್, ಚಕ್ರವರ್ತಿ,
ರಾಮಚಂದ್ರ

Writer - ಶಶಿಕರ ಪಾತೂರು

contributor

Editor - ಶಶಿಕರ ಪಾತೂರು

contributor

Similar News