ಕೋಲ್ಡ್ ಕೇಸ್: ಒಂದು ತಣ್ಣಗಿನ ಪ್ರತೀಕಾರದ ಕತೆ

Update: 2021-07-03 19:30 GMT

‘ಕೋಲ್ಡ್ ಕೇಸ್’ ಎನ್ನುವ ಹೆಸರೇ ತುಸು ಹೊಸದಾಗಿ ಗೋಚರಿಸಬಹುದು. ವರ್ಷಗಳಿಂದ ತನಿಖೆ ನಡೆಸುತ್ತಿರುವ ಸಾಕ್ಷಿ ಸಿಗದ ಪ್ರಕರಣಕ್ಕೆ ಪೊಲೀಸ್ ಭಾಷೆಯಲ್ಲಿ ಹಾಗೆ ಹೇಳುತ್ತಾರೆ. ಇದೊಂದು ತನಿಖೆಗೆ ಸಂಬಂಧಿಸಿದ ಕತೆ ಎನ್ನುವುದನ್ನು ಚಿತ್ರದ ಟ್ರೇಲರ್ ಕೂಡ ತೋರಿಸಿತ್ತು.

ನದಿ ತೀರದಲ್ಲಿ ಸಿಗುವ ಮಾನವ ತಲೆಬುರುಡೆಯಿಂದ ಆರಂಭವಾಗುವ ತನಿಖೆ ಅದೊಂದು ಕೊಲೆ ಎನ್ನುವುದನ್ನು ಸಾಬೀತು ಪಡಿಸುತ್ತದೆ. ರಾಜ್ಯದ ವಿವಿಧೆಡೆಗಳಲ್ಲಿ ಪತ್ತೆಯಾಗುವ ದೇಹದ ವಿವಿಧ ಭಾಗಗಳ ಮೂಲಕ ಅದೊಂದು ಮಹಿಳೆಯ ಹೆಣವೆಂದು ಪೊಲೀಸ್ ಇಲಾಖೆ ಪತ್ತೆ ಮಾಡುತ್ತದೆ. ಆಕೆಯ ಸಾವಿನ ಕಾಲಾವಧಿಯಲ್ಲಿ ನಾಪತ್ತೆಯಾದ ಮಹಿಳೆಯರ ಬಗ್ಗೆ ಶುರುವಾಗುವ ತನಿಖೆ, ಯಾವ ಹಂತದವರೆಗೆ ತಲುಪುತ್ತದೆ ಎನ್ನುವುದೇ ಕೋಲ್ಡ್ ಕೇಸ್ ಚಿತ್ರದ ಸಾರಾಂಶ. ಆದರೆ ಪೊಲೀಸ್ ತನಿಖೆಯ ಮಧ್ಯದಲ್ಲೇ ಬಾಡಿಗೆ ಮನೆ ಹುಡುಕುವ ಪತ್ರಕರ್ತೆಯೊಬ್ಬಳಿಗೆ ಎದುರಾಗುವ ಪ್ರೇತಬಾಧೆ ಕತೆಗೆ ಸಂಬಂಧಿಸಿದ ಮತ್ತೊಂದು ಮುಖವನ್ನು ಕೂಡ ಅನಾವರಣಗೊಳಿಸುತ್ತದೆ.

ಚಿತ್ರದಲ್ಲಿ ಎಸಿಪಿ ಸತ್ಯನಾಥ್ ಎನ್ನುವ ತನಿಖಾಧಿಕಾರಿಯ ಪಾತ್ರವನ್ನು ಪೃಥ್ವಿರಾಜ್ ನಿರ್ವಹಿಸಿದ್ದಾರೆ. ವಿಶೇಷ ಏನೆಂದರೆ ಈ ಸಿನೆಮಾದಲ್ಲಿ ಪೃಥ್ವಿರಾಜ್‌ಗೆ ತಮ್ಮ ಅಭಿನಯ ಪ್ರತಿಭೆ ತೋರಿಸುವ ವಿಶೇಷ ಅವಕಾಶಗಳೇನೂ ಇಲ್ಲ. ತನಿಖೆ ಸಾಗುವ ದಾರಿಯನ್ನು ವರದಿಯಂತೆ ಒಪ್ಪಿಸುವ ಒಂದಷ್ಟು ಸಂಭಾಷಣೆಗಳಿವೆ. ಒಂದಷ್ಟು ಗ್ರಾಂಥಿಕ, ನಾಟಕೀಯವೆನಿಸುವ ಮಾತುಗಳು ನಾಯಕ ಸೇರಿದಂತೆ ಇತರ ಪಾತ್ರಗಳನ್ನು ಆಪ್ತವಾಗದಂತೆ ಮಾಡಿವೆ. ಅದರಲ್ಲೂ ಒಬ್ಬ ತನಿಖಾಧಿಕಾರಿಯ ಪೋಷಾಕಿನಲ್ಲಿ ಕಾಣಿಸುವ ನಾಯಕನ ಯಾವ ವೈಯಕ್ತಿಕ ಘಟನೆಗಳನ್ನು ಕೂಡ ಚಿತ್ರದಲ್ಲಿ ತೋರಿಸಲಾಗುವುದಿಲ್ಲ. ಹಾಗಾಗಿ ಸ್ಟಾರ್ ನಾಯಕನಾಗಿದ್ದರೂ ಒಂದು ಪೋಷಕ ಪಾತ್ರದ ಇಮೇಜ್‌ಗೆ ಸೀಮಿತವಾಗಿದ್ದಾರೆ ಪೃಥ್ವಿರಾಜ್.

ಎಸಿಪಿ ಸತ್ಯನಾಥ್ ಪತ್ತೆ ಮಾಡುವ ಸತ್ಯದ ಮತ್ತೊಂದು ಮುಖವನ್ನು ವೈಯಕ್ತಿಕ ಕುತೂಹಲದಿಂದ ಹಿಂಬಾಲಿಸುವಾಕೆ ಟಿವಿ ವರದಿಗಾರ್ತಿ ಮೇಧಾ. ಬಾಡಿಗೆ ಮನೆಯೊಂದರ ಹುಡುಕಾಟದಲ್ಲಿದ್ದ ಮೇಧಾ ಅತೀಂದ್ರಿಯ ಶಕ್ತಿಯ ಅನುಭವಕ್ಕೊಳಗಾಗುತ್ತಾರೆ. ಅದನ್ನು ಬಹಳ ನೈಜವಾಗಿ ಹೊರಗೆಡಹಿದ್ದಾರೆ ಮೇಧಾ ಪಾತ್ರಧಾರಿ ಅದಿತಿ ಬಾಲನ್. ಆದರೆ ಆ ಅನುಭವಗಳು ಮಾತ್ರ ನಾವು ಸಾಕಷ್ಟು ಸಿನೆಮಾಗಳಲ್ಲಿ ಕಂಡಂಥವುಗಳೇ ಆಗಿವೆ. ಅನಗತ್ಯ ಬೊಂಬೆ, ನಾಯಿ, ಮಗುವಿನ ನಡುವೆ ಕೊನೆಗೂ ರೆಫ್ರಿಜರೇಟರ್ ದೆವ್ವದ ಆವಾಸ ಸ್ಥಾನವಾಗುವುದೇ ಸಣ್ಣದೊಂದು ಹೊಸತನ ಎನ್ನಬಹುದು!

ಹರಿತಾ ಎನ್ನುವ ವಕೀಲೆಯ ಪಾತ್ರದಲ್ಲಿ ನಟಿಸಿರುವ ಲಕ್ಷ್ಮೀಪ್ರಿಯಾ ಚಂದ್ರಮೌಳಿಯ ನಟನೆ ಚಿತ್ರದ ಪ್ರಮುಖ ಆಕರ್ಷಣೆ ಎನ್ನಬಹುದು. ಪ್ರಧಾನ ಭಾಗಗಳಲ್ಲಿ ಆಕೆಯ ಮುಖದ ಮೇಲೆ ಮಡುಗಟ್ಟುವ ಭಾವ ಸಹಜಾಭಿನಯಕ್ಕೆ ಹಿಡಿದ ಕನ್ನಡಿ.

ಉಳಿದಂತೆ ಅತೀಂದ್ರಿಯ ಶಕ್ತಿಯ ಅನ್ವೇಷಕಿಯಾಗಿ ಬರುವ ಸುಚಿತ್ರಾ ಪಿಳ್ಳೈ ಸೇರಿದಂತೆ ಮತ್ತಿತರ ಪಾತ್ರಗಳಿಗೆ, ಕೆಲವೊಂದು ಘಟನೆಗಳಿಗೆ ನಿರ್ದೇಶಕರು ತಾರ್ಕಿಕ ಅಂತ್ಯ ನೀಡಿಲ್ಲ. ಅರ್ಥವಾಗಬಹುದಾದ ದೃಶ್ಯಗಳಿಗೆ ಅನಗತ್ಯ ವಿವರಣೆಗಳೂ ಇವೆ. ಬಹುಶಃ ಛಾಯಾಗ್ರಹಣ ಕ್ಷೇತ್ರದಿಂದ ಬಂದ ಕಾರಣವೂ ಇರಬಹುದು, ನಿರ್ದೇಶಕರು ತಾಂತ್ರಿಕವಾಗಿ ಕ್ಯಾಮರಾ ಕಂಗಳಿಗೆ ನೀಡಿರುವ ಪ್ರಾಮುಖ್ಯತೆ ಉಳಿದ ವಿಚಾರಗಳಿಗೆ ನೀಡಿದಂತಿಲ್ಲ. ಎರಡು ರೀತಿಯ ಹಿನ್ನೆಲೆ ಇಟ್ಟುಕೊಂಡು ಸಮಾನಾಂತರವಾಗಿ ನಡೆಯುವ ಕೊಲೆಗಾರನ ಹುಡುಕಾಟ ಆರಂಭದಲ್ಲಿ ಕುತೂಹಲ ಮೂಡಿಸುತ್ತದೆ. ಆದರೆ ಒಂದು ಹಂತದಲ್ಲಿ ನಿರೀಕ್ಷೆ ಸೃಷ್ಟಿಸುವ ಅವರಿಬ್ಬರ ಸಂಗಮ ಮತ್ತು ಮುಂದಿನ ತನಿಖೆ ಅದುವರೆಗಿನ ಮಟ್ಟ ಉಳಿಸಿಕೊಳ್ಳುವುದಿಲ್ಲ. ಒಟ್ಟಿನಲ್ಲಿ ಟೈಮ್ ಪಾಸ್‌ಗಾಗಿ ಸಿನೆಮಾ ನೋಡಲು ಬಯಸುವವರು ಕೋಲ್ಡ್ ಕೇಸ್ ನೋಡಿ ತೃಪ್ತಿ ಪಟ್ಟುಕೊಳ್ಳಬಹುದು.

ತಾರಾಗಣ: ಪೃಥ್ವಿರಾಜ್ ಸುಕುಮಾರನ್, ಅದಿತಿ ಬಾಲನ್
ನಿರ್ದೇಶನ: ತನು ಬಲಕ್
ನಿರ್ಮಾಣ: ಆಂಟೊ ಜೋಸೆಫ್, ಜೋಮೋನ್ ಟಿ. ಜಾನ್, ಶಮೀರ್ ಮುಹಮ್ಮದ್

Writer - ಶಶಿಕರ ಪಾತೂರು

contributor

Editor - ಶಶಿಕರ ಪಾತೂರು

contributor

Similar News