ಪ್ರಾಣಿಗಳು ನಮಗಿಂತ ಬುದ್ಧಿವಂತವಾಗಿದ್ದರೆ...?

Update: 2021-07-04 06:29 GMT

ತಂದೆಯ ಜೊತೆ ಝೂ ಸುತ್ತಾಡಿ, ಅಲ್ಲಿನ ಪ್ರಾಣಿಗಳನ್ನೆಲ್ಲಾ ನೋಡಿ ಹೊರಬಂದ ಧನ್ವಿತಳನ್ನು ಒಂದು ಪ್ರಶ್ನೆ ಕಾಡುತ್ತಲೇ ಇತ್ತು. ಕಾರು ಹತ್ತುತ್ತಿದ್ದಂತೆ ‘‘ಪಪ್ಪಾ ಯಾಕೆ ಎಲ್ಲಾ ಪ್ರಾಣಿಗಳನ್ನು ಕೂಡಿ ಹಾಕಿದ್ದಾರೆ?’’ ಎಂದಳು. ‘‘ಆಗ್ಲೆ ಶುರುವಾಯ್ತ ನಿನ್ನ ಪ್ರಶ್ನೆಗಳ ಸುರಿಮಳೆ, ಸಿಟಿ ದಾಟಿದ ಮೇಲೆ ನಿನ್ನ ಪ್ರಶ್ನೆಗೆ ಉತ್ತರಿಸ್ತೇನೆ. ಆಗಬಹುದಾ?’’ ಎನ್ನುತ್ತಾ ಡ್ರೈವ್ ಮಾಡತೊಡಗಿದರು. ಇವಳದು ಒಂದು ಪ್ರಶ್ನೆ ಶುರುವಾದರೆ ಅದರ ಹಿಂದೆ ನಾಲ್ಕಾರು ಪ್ರಶ್ನೆಗಳು ಪೋಣಿಸಿಕೊಳ್ಳುತ್ತವೆ ಎಂಬುದು ತಂದೆಗೆ ತಿಳಿದಿತ್ತು.

ಕಾರು ಚಾಲನೆಗೆ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ಸಿಟಿ ದಾಟಿದ ಮೇಲೆ ಉತ್ತರಿಸುವ ಭರವಸೆ ನೀಡಿದ್ದರು. ಯಾವಾಗ ಸಿಟಿ ಲಿಮಿಟ್ಸ್ ದಾಟಿ ಮುಂದೆ ಹೋಗ್ತೇವೋ ಎಂಬುದನ್ನು ಕಾಯತೊಡಗಿದ ಧನ್ವಿತ, ಸಿಟಿ ದಾಟಿದ ಕೂಡಲೇ ‘‘ಪಪ್ಪಾ,ನನ್ನ ಪ್ರಶ್ನೆಗೆ ಉತ್ತರ ಹೇಳಪ್ಪ’’ ಎಂದು ಕಾಡತೊಡಗಿದಳು. ‘‘ಪುಟ್ಟಿ, ಪ್ರಾಣಿಗಳನ್ನು ಕೂಡಿ ಹಾಕದಿದ್ದರೆ ಅವು ಮನುಷ್ಯರನ್ನು ತಿಂದು ಹಾಕುತ್ತವೆ. ಅದಕ್ಕೆ ಕೂಡಿ ಹಾಕಿದ್ದಾರೆ’’ ಎಂದರು. ‘‘ಅಲ್ಲಿರುವ ಎಲ್ಲಾ ಪ್ರಾಣಿಗಳು ಮಾಂಸಾಹಾರಿಗಳು ಅಲ್ವಲ್ಲಪ್ಪಾ... ಆದ್ರೂ ಕೂಡಿ ಹಾಕಿದ್ದಾರಲ್ಲ’’ ತಟ್ಟನೆ ಎರಡನೇ ಪ್ರಶ್ನೆ ಬಂತು. ‘‘ಪ್ರತಿ ಪ್ರಾಣಿಯ ಆವಾಸ ಬೇರೆ ಬೇರೆ. ಅದಕ್ಕಾಗಿ ಪ್ರತಿ ಪ್ರಾಣಿಗೂ ಅದರ ಆವಾಸದ ಮಾದರಿಯನ್ನು ನಿರ್ಮಿಸಿ ಅದರಲ್ಲೇ ಅವುಗಳನ್ನು ಕೂಡಿ ಹಾಕಿದ್ದಾರೆ. ಬೇರೆ ಆವಾಸದಲ್ಲಿ ಅವು ಹೊಂದಿಕೊಳ್ಳಲಾರವು. ಅಂತೆಯೇ ಒಂದು ಪ್ರಾಣಿ ಇನ್ನೊಂದು ಪ್ರಾಣಿಗೆ ತೊಂದರೆ ಕೊಡಲೂಬಾರದು ಎಂಬ ಉದ್ದೇಶದಿಂದಲೂ ಅವುಗಳನ್ನು ಪ್ರತ್ಯೇಕವಾಗಿ ಕೂಡಿ ಹಾಕಿದ್ದಾರೆ’’ ಎಂದು ವಿವರಿಸಿದರು.

‘‘ಪಪ್ಪಾ, ಎಲ್ಲಾ ಪ್ರಾಣಿಗಳು ಮಾನವರಂತೆ ಬುದ್ಧಿವಂತ ಆಗಿದ್ದರೆ ಏನಾಗ್ತಿತ್ತು?’’ ಎಂಬ ಪ್ರಶ್ನೆಯು ಬಾಣದಷ್ಟೇ ವೇಗವಾಗಿ ಬಂತು. ಇದರ ಮೂಲಕ ಪ್ರಾಣಿ ಪರ ತನ್ನ ಧ್ವನಿಯನ್ನು ಧನ್ವಿತ ಹೊರಹಾಕಿದಳು. ‘‘ಪುಟ್ಟಿ, ಒಳ್ಳೆಯ ಪ್ರಶ್ನೆಯನ್ನೇ ಕೇಳಿದೆ. ಅದರ ಬಗ್ಗೆ ನನಗೆ ತಿಳಿದ ಮಾಹಿತಿಯನ್ನು ಹೇಳ್ತೇನೆ ಕೇಳು’’ ಎನ್ನುತ್ತಾ ಎಲ್ಲಾ ಪ್ರಾಣಿಗಳು ಮಾನವರಂತೆ ಬುದ್ಧಿವಂತ ಆಗಿದ್ದರೆ ಏನಾಗುತ್ತಿತ್ತು ಅನ್ನುವುದನ್ನು ಹೇಳತೊಡಗಿದರು. ಅದನ್ನು ನಿಮಗೂ ತಿಳಿಯೋ ಆಸೆ ಇದೆಯಾ? ಮುಂದೆ ಓದಿ.

ಮಾನವರು ಭೂಮಿಯಲ್ಲಿ ಉಗಮಿಸಿದ ಮೊದಲ ಜೀವಿಗಳಲ್ಲ. ಆದರೆ ಭೂಮಿಯ ಮೇಲಿನ ಇಡೀ ಜೀವಸಂಕುಲವನ್ನೇ ಆಳುವ ಸಾಮರ್ಥ್ಯ ಪಡೆದಿದ್ದು ಸೋಜಿಗವೇ ಎನ್ನಬಹುದು. ಅದಕ್ಕೆ ಮುಖ್ಯಕಾರಣ ಮಾನವನ ಮೆದುಳಿನ ರಚನೆ ಎಂಬುದು ಒಂದು ವಾದ. ಎಲ್ಲಾ ಪ್ರಾಣಿಗಳಿಗಿಂತ ಮಾನವನ ಮೆದುಳು ಉತ್ತಮ ವಿಕಾಸ ಹೊಂದಿರುವುದರಿಂದ ಇನ್ನಿತರ ಪ್ರಾಣಿಗಳನ್ನು ತನ್ನ ಹತೋಟಿಯಲ್ಲಿಟ್ಟುಕೊಳ್ಳಲು ಸಾಧ್ಯವಾಯಿತು ಎಂಬುದು ಅನೇಕರ ವಾದ. ಸೂರ್ಯ ಹಾಗೂ ಭೂಮಿಗೆ ಇರುವಷ್ಟು ಪ್ರಖರವಾದ ಇತಿಹಾಸ ಮಾನವನಿಗೆ ಇಲ್ಲದಿದ್ದರೂ ಮೂರು ಶತಕೋಟಿ ವರ್ಷಗಳಿಂದಲೂ ಮಾನವನು ತನ್ನ ಆಹಾರ, ರಕ್ಷಣೆ ಹಾಗೂ ಇನ್ನಿತರ ಕೆಲಸಗಳಿಗಾಗಿ ಪ್ರಾಣಿಗಳನ್ನು ಬಳಸಿಕೊಳ್ಳುತ್ತಲೇ ಬಂದಿದ್ದಾನೆ.

ಪ್ರಪಂಚದ ಒಟ್ಟು 580 ಪ್ರಾಣಿಸಂಗ್ರಹಾಲಯ (ಝೂ)ಗಳಲ್ಲಿ 15,000 ವಿವಿಧ ಪ್ರಭೇದದ ಪ್ರಾಣಿಗಳನ್ನು ಮಾನವ ಕೂಡಿ ಹಾಕಿದ್ದಾನೆ. ಇವುಗಳಲ್ಲದೆ ಕಾಡಿನಲ್ಲಿ ಹಾಗೂ ನಾಡಿನಲ್ಲಿ ಅನೇಕ ಪ್ರಾಣಿಗಳನ್ನು ಮಾನವ ತನ್ನ ನಿತ್ಯದ ಕೆಲಸಗಳಿಗಾಗಿ ಬಳಸಿಕೊಳ್ಳುತ್ತಲೇ ಬಂದಿದ್ದಾನೆ. ಮಾನವ ಮತ್ತು ಪ್ರಾಣಿಗಳ ನಡುವಿನ ಸಂಘರ್ಷ ಸಾವಿರಾರು ವರ್ಷಗಳಿಂದ ನಡೆಯುತ್ತಲೇ ಇದೆ. ಈ ಯುದ್ಧದಲ್ಲಿ ಪ್ರತಿಬಾರಿ ಮಾನವನೇ ಮೇಲುಗೈ ಸಾಧಿಸಲು ಕಾರಣವಾಗಿರುವುದು ಅವನ ಚಾಣಾಕ್ಷತನ. ದೈತ್ಯ ಕಾಡುಪ್ರಾಣಿಗಳಿಂದ ತನಗೆ ಅಪಾಯ ಬರುತ್ತದೆ ಎಂಬುದನ್ನು ಅರಿತ ಮಾನವ ಅವೆಲ್ಲವನ್ನು ಪಳಗಿಸತೊಡಗಿದ. ಒಂದು ವೇಳೆ ಅವುಗಳನ್ನು ಪಳಗಿಸುವ ಚಾಣಾಕ್ಷತನ ನಮ್ಮಲ್ಲಿ ಇಲ್ಲದಿದ್ದರೆ ಅಥವಾ ಪ್ರಾಣಿಗಳೆಲ್ಲವೂ ನಮಗಿಂತ ಚಾಣಾಕ್ಷವಾಗಿದ್ದರೆ, ಅವುಗಳ ಮೇಲೆ ನಾವು ಹಿಡಿತ ಸಾಧಿಸಲು ಸಾಧ್ಯವಾಗುತ್ತಿರಲಿಲ್ಲ. ಆಗ ನಾವೂ ಸಹ ಇನ್ನಿತರ ಪ್ರಾಣಿಗಳಂತೆ ಅವುಗಳೊಂದಿಗೆ ಹೊಂದಿಕೊಂಡೇ ಜೀವನ ನಡೆಸಬೇಕಾದ ಅನಿವಾರ್ಯತೆ ಬರುತ್ತಿತ್ತು.

ಕೆಲವು ಪ್ರಾಣಿಗಳು ನಮಗಿಂತ ಬಲಶಾಲಿಗಳು ಎಂಬುದರಲ್ಲಿ ಎರಡು ಮಾತಿಲ್ಲ. ಒಂದು ಸಣ್ಣ ಸೊಳ್ಳೆಯೂ ಕೂಡಾ ಕೆಲವು ವಿಚಾರಗಳಲ್ಲಿ ನಮಗಿಂತ ಬಲಶಾಲಿ ಎಂದೇ ಹೇಳಬಹುದು. ಏಕೆಂದರೆ ಸೊಳ್ಳೆಯು ಗಾತ್ರದಲ್ಲಿ ಚಿಕ್ಕದಿದ್ದರೂ ಅದು ಮಾರಣಾಂತಿಕ ರೋಗಗಳನ್ನು ತರುವ ಶಕ್ತಿ ಅದಕ್ಕೆ ಇದೆ ಎಂಬುದನ್ನು ಮಾನವರಾದ ನಾವು ಮರೆಯುವಂತಿಲ್ಲ. ತಿಮಿಂಗಿಲ, ಆನೆ, ಹುಲಿ, ಸಿಂಹ, ಚಿರತೆ, ಕರಡಿಗಳಿಗಿಂತ ದೈತ್ಯರಾದ ಡೈನೋಸಾರ್‌ಗಳೂ ಇದ್ದವು. ಆದರೆ ಮಾನವನ ಚಾಣಾಕ್ಷತನ ಇವುಗಳಿಗೆ ಬರಲೇ ಇಲ್ಲ. ಈಗಲೂ ಮಾನವ ಇವೆಲ್ಲ ಪ್ರಾಣಿಗಳಿಗೆ ಹೆದರುತ್ತಾನಾದರೂ ತನ್ನ ಬುದ್ಧಿಮತ್ತೆ ಉಪಯೋಗಿಸಿ ಅವುಗಳನ್ನು ಪಳಗಿಸುವ ಹಾಗೂ ತನ್ನ ಕೆಲಸ ಕಾರ್ಯಗಳಿಗೆ ಅವುಗಳನ್ನು ಬಳಸಿಕೊಳ್ಳುವ ಚಾಣಾಕ್ಷತನ ಹೊಂದಿರುವುದು ಸೋಜಿಗವಲ್ಲವೇ?. ಮಾನವರ ಹೋಲಿಕೆಯುಳ್ಳ ಚಿಪಾಂಜಿಗಳು ಶೇ. 99ರಷ್ಟು ನಮ್ಮ ಡಿ.ಎನ್.ಎ. ರಚನೆಯನ್ನೇ ಹೋಲುತ್ತಿವೆ. ಆದರೂ ಅವುಗಳಿಗೆ ಕಂಪ್ಯೂಟರನ್ನು ಬಳಸುವ ಚಾಣಾಕ್ಷತನವಾಗಲೀ, ಇತರ ಪ್ರಾಣಿಗಳನ್ನು ತನ್ನ ಹತೋಟಿಯಲ್ಲಿಟ್ಟುಕೊಳ್ಳುವ ಬುದ್ಧಿವಂತಿಯಾಗಲೀ ಬರಲೇ ಇಲ್ಲ. ಈ ಕುರಿತು ಇನ್ನಷ್ಟು ಸಂಶೋಧನೆಗಳು ಅಗತ್ಯವಲ್ಲವೇ?

Writer - ಆರ್. ಬಿ. ಗುರುಬಸವರಾಜ

contributor

Editor - ಆರ್. ಬಿ. ಗುರುಬಸವರಾಜ

contributor

Similar News