ದಮನಿತರಲ್ಲಿ ಜಾಗೃತಿ ಮೂಡಿಸಿದ ರಟ್ಟೆಮಲೈ ಶ್ರೀನಿವಾಸನ್

Update: 2021-07-06 19:30 GMT

ತಮಿಳುನಾಡು ಮತ್ತು ಭಾರತದಾದ್ಯಂತ ದಲಿತರಿಗೆ ನ್ಯಾಯ ದೊರಕಿಸಿಕೊಡಲು ಹೋರಾಡಿದವರಲ್ಲಿ ರಟ್ಟೆಮಲೈ ಶ್ರೀನಿವಾಸನ್ ಕೂಡ ಒಬ್ಬರು. ಇವರು ಇಂದಿಗೂ ಕೂಡ ತಮಿಳುನಾಡಿನಲ್ಲಿ ‘ದಾದನ್’ ಎಂದೇ ಖ್ಯಾತಿಗೊಳಗಾಗಿದ್ದಾರೆ. ರಟ್ಟೆಮಲೈ ಶ್ರೀನಿವಾಸನ್ ಪ್ರಗತಿಪರ ಆಲೋಚನೆಗಳನ್ನು ಪರಿಚಯಿಸುವಲ್ಲಿ ಪ್ರಮುಖ ಪ್ರವರ್ತಕರು. ಜಸ್ಟೀಸ್ ಪಾರ್ಟಿ, ಕಾಂಗ್ರೆಸ್ ಹಾಗೂ ದ್ರಾವಿಡ ಪಕ್ಷಗಳು ಕೂಡ ಇವರ ವಿಚಾರಧಾರೆಗಳ ಪ್ರಭಾವವನ್ನು ಪಡೆದಿವೆ. ವಿಶೇಷವೆಂದರೆ ಅಂದಿನ ಮದ್ರಾಸ್ ಪ್ರೆಸಿಡೆನ್ಸಿಯಲ್ಲಿ ಸಾಮಾಜಿಕ ಮತ್ತು ರಾಜಕೀಯ ಸುಧಾರಣೆಯ ಬೀಜವನ್ನು ನೆಟ್ಟವರು ದಲಿತರು. 19ನೇ ಶತಮಾನದ ಉತ್ತರಾರ್ಧದಲ್ಲಿ ಪ್ರಗತಿಪರ ಸಾಮಾಜಿಕ ನ್ಯಾಯದ ಆಲೋಚನೆಗಳನ್ನು ಬಿತ್ತುವಲ್ಲಿ ದಲಿತರು ಪ್ರಮುಖ ಪಾತ್ರವಹಿಸಿದ್ದಾರೆ. ಇದು ಆಧುನಿಕ ತಮಿಳುನಾಡು ರಾಜಕೀಯದಲ್ಲಿ ಇನ್ನೂ ಪ್ರತಿಧ್ವನಿಸುತ್ತಿದೆ. ಆದರೆ ತಮಿಳುನಾಡಿದ ಸಾಮಾಜಿಕ ಮತ್ತು ರಾಜಕೀಯ ಇತಿಹಾಸದಲ್ಲಿ ಅದೆಲ್ಲವನ್ನೂ ಮರೆಮಾಚಲಾಗಿದೆ.

ಶ್ರೀನಿವಾಸನ್ ಅವರು ರಟ್ಟೆಮಲೈ ಅವರ ಮಗನಾಗಿ ಪರೈಯಾ ಜನಾಂಗದಲ್ಲಿ 7 ಜುಲೈ 1860ರಂದು ಮದ್ರಾಸ್ ನಗರದ ಹೊರವಲಯದಲ್ಲಿರುವ ಕೊಲಿಯಾಲಂ ಎಂಬ ಹಳ್ಳಿಯಲ್ಲಿ ಜನಿಸಿದರು. ಮರಣ ಹೊಂದಿದ್ದು 18 ಸೆಪ್ಟ್ಟಂಬರ್ 1945ರಲ್ಲಿ. ಒಟ್ಟು ಅವರ ಜೀವಿತದ ಪಯಣ 85 ವರ್ಷಗಳು. ಇಂದು ಅವರ 161ನೇ ಜನ್ಮ ಶತಾಬ್ದಿ. ರಟ್ಟೆಮಲೈ ಶ್ರೀನಿವಾಸ್ ಅವರ ತಂದೆ ಬ್ರಿಟಿಷರೊಂದಿಗೆ ವ್ಯಾಪಾರ ಸಂಬಂಧ ಹೊಂದಿದ್ದವರು. ಹಾಗಾಗಿ ಅವರ ಕುಟುಂಬವು ಆರ್ಥಿಕವಾಗಿ ಸ್ವಾವಲಂಬಿಯಾಗಿತ್ತು. ಅವರನ್ನು ಕೊಯಮತ್ತೂರಿನ ವಸತಿ ಶಾಲೆಯಲ್ಲಿ ವಿದ್ಯಾಭ್ಯಾಸ ಕೊಡಿಸುವಷ್ಟು ಶಕ್ತರಾಗಿದ್ದರು. ಶಾಲೆಯ 400 ವಿದ್ಯಾರ್ಥಿಗಳಲ್ಲಿ ಇವರೊಬ್ಬರೇ ದಲಿತ ವಿದ್ಯಾರ್ಥಿ. ಆನಂತರ ಮದ್ರಾಸ್ ಪ್ರೆಸಿಡೆನ್ಸಿಯ ಬೇಸಿಗೆಯ ರಾಜಧಾನಿಯಾಗಿದ್ದ ಊಟಿಯಲ್ಲಿ ಅಕೌಂಟೆಂಟ್ ಆಗಿ ಕೆಲಸ ಮಾಡಲು ಪ್ರಾರಂಭಿಸಿದರು. ಅಂದಿನ ದಲಿತ ರಾಜಕೀಯ ಕ್ರಿಯಾಶೀಲತೆಯಲ್ಲಿ ಊಟಿಯೂ ಚುರುಕಾಗಿದ್ದರಿಂದ ಶ್ರೀನಿವಾಸನ್ ಅವರಲ್ಲಿ ಆಸಕ್ತಿ ಮೊಳಕೆಯೊಡೆಯಿತು. ತಮಿಳುನಾಡಿನಲ್ಲಿ ಅಯೋತಿ ದಾಸ್ ಅವರು ದ್ರಾವಿಡ ಚಳವಳಿ ಕಟ್ಟಿದಾಗ ಅವರೊಡನೆ ಜೊತೆಗಿದ್ದವರಲ್ಲಿ ರಟ್ಟೆಮಲೈ ಶ್ರೀನಿವಾಸನ್ ಕೂಡ ಒಬ್ಬರು. ಆದರೆ ಆನಂತರದಲ್ಲಿ ಶ್ರೀನಿವಾಸನ್ ಮತ್ತು ಎಂ.ಸಿ.ರಾಜ ರಾಷ್ಟ್ರಮಟ್ಟದಲ್ಲಿ ಪ್ರಮುಖ ಪಾತ್ರವಹಿಸುತ್ತಾರೆ. ಇವರನ್ನು ಅಂದೇ ದಲಿತ ಸಂಘಟನೆಗಳು, ಸಂಸ್ಥೆಗಳು ಗುರುತಿಸಿ ಗೌರವಿಸುತ್ತಿದ್ದವು.

ಗಾಂಧಿ ಮತ್ತು ಅಂಬೇಡ್ಕರ್ ಅವರ ಸಮಕಾಲೀನರಾಗಿ ಗುರುತಿಸಿಕೊಂಡಿದ್ದ ರಟ್ಟೆಮಲೈ ಶ್ರೀನಿವಾಸನ್ ಇಬ್ಬರ ಬಳಿಯೂ ಸಂವಾದ ಮಾಡುವಷ್ಟು ಮುಕ್ತವಾಗಿ ಬೆರೆತಿದ್ದರು. ಶ್ರೀನಿವಾಸನ್ ಅವರ ಕಾರ್ಯಗಳು ದಲಿತ ಕೇಂದ್ರಿತವಾಗಿದ್ದರೂ, ಸಾಮಾಜಿಕ ಸುಧಾರಣೆಗೆ ಮಹತ್ತರ ಪಾತ್ರವಹಿಸಿವೆ. ಯೂರೋಪಿಯನ್ ವಿಚಾರಗಳನ್ನು ಇತರ ಸಮುದಾಯಗಳಿಗಿಂತ ದಲಿತರು ಮೊದಲು ಪ್ರಭಾವಿಸಿದ್ದರಿಂದ ನಿಯತಕಾಲಿಕೆಗಳು, ಪತ್ರಿಕೆಗಳ ಮೂಲಕ ಚಿಂತನಾಕ್ರಮವನ್ನು ಹರಡಲು ರಟ್ಟೆಮಲೈ ಶ್ರೀನಿವಾಸನ್‌ಗೆ ನೆರವಾದವು. ಪ್ರತಿಯೊಂದು ಅವಕಾಶವನ್ನು ಬಳಸಿಕೊಂಡು ಜಾತಿ ವ್ಯವಸ್ಥೆ ವಿರುದ್ಧ ನೇರ ದಾಳಿಗೆ ಇಳಿದರು. ವಸಾಹತುಶಾಹಿ ಆಡಳಿತ ಅವಧಿಯಲ್ಲಿ ಸಾಮಾಜಿಕ ಕ್ರಾಂತಿಯ ಸುತ್ತಲೂ ನಡೆಯುತ್ತಿರುವ ವಿದ್ಯಮಾನಗಳ ಹಿನ್ನೆಲೆಯಲ್ಲಿ ತುಳಿತಕ್ಕೊಳಗಾದ ಸಮುದಾಯಗಳ ಸ್ಥಾನವನ್ನು ಮುನ್ನೆಲೆಗೆ ತರುವುದು ಅವರ ಅಗತ್ಯವಾಗಿತ್ತು. ಆ ಮಹತ್ತರವಾದ ಅವಧಿಯಲ್ಲಿ ಸಾಮಾಜಿಕ ಮತ್ತು ರಾಜಕೀಯವಾಗಿ ಅವರ ಕೊಡುಗೆ ಅಪಾರ. ಸರಕಾರದ ಉನ್ನತ ಅಧಿಕಾರಿಗಳೊಂದಿಗೆ ಸಂಪರ್ಕವನ್ನು ರೂಪಿಸುವುದರೊಂದಿಗೆ, ಥಿಯೋಸಫಿಕಲ್ ಸೊಸೈಟಿಯ ಸಂಸ್ಥಾಪಕರಾದ ಕರ್ನಲ್ ಹೆನ್ರಿ ಓಲ್ಕಾಟ್ ಮತ್ತು ಮ್ಯಾಡಮ್ ಬ್ಲಾವಸ್ಕ್ಟಿಕಿ ಅವರೊಂದಿಗಿನ ಸಂಕ್ಷಿಪ್ತ ಸಂಬಂಧವು ಆರಂಭಿಕ ದಿನಗಳಲ್ಲಿ ಪ್ರಭಾವ ಬೀರಿದವು.

1890ರ ಹೊತ್ತಿಗೆ ರಟ್ಟೆಮಲೈ ಶ್ರೀನಿವಾಸನ್ ಅವರ ಸಾಮಾಜಿಕ ಕೆಲಸಗಳು ಮದ್ರಾಸ್ ಪ್ರೆಸಿಡೆನ್ಸಿಯನ್ನೇ ಆವರಿಸಿತು. ಅಂದು ಅನೇಕ ದಲಿತ ಸಂಘಟನೆಗಳು ಉದಯಗೊಂಡವು ಮತ್ತು ಆ ಅವಧಿಯಲ್ಲಿ ಮದ್ರಾಸ್‌ನಲ್ಲಿ ದಲಿತರು ನಿಯತಕಾಲಿಕೆಗಳನ್ನು ನಡೆಸಲು ಪ್ರಾರಂಭಿಸಿದರು. ಶ್ರೀನಿವಾಸನ್ 1890ರಿಂದ ಮೂರು ವರ್ಷಗಳ ಕಾಲ ಪರೈಯಾ ಜನಾಂಗಕ್ಕೆ ತಮಿಳುನಾಡಿನಲ್ಲಿ ಜಾತಿ ಕಳಂಕವನ್ನು ತೊಡೆದು ಹಾಕಲು ಐತಿಹಾಸಿಕ ದಾಖಲೆಗಳು ಮತ್ತು ಪುರಾವೆಗಳನ್ನು ಸಂಗ್ರಹಿಸಿದರು. ಇದಷ್ಟೆ ಅಲ್ಲದೆ ದಮನಿತ ಜನಾಂಗಗಳ ಶಿಕ್ಷಣಕ್ಕೆ ಸಂಬಂಧಿಸಿದಂತೆ 1893ರ ಸರಕಾರದ ಆದೇಶವನ್ನು ಜಾರಿಗೆ ತರುವಲ್ಲಿ ಬಹುಮುಖ್ಯವಾಗಿ ಕೆಲಸ ಮಾಡುತ್ತಾರೆ. ಜನರ ಆಕಾಂಕ್ಷೆ ಮತ್ತು ಬೇಡಿಕೆಗಳನ್ನು ಸರಕಾರಕ್ಕೆ ತಲುಪಿಸಲು 1892ರಲ್ಲಿ ‘ಪರೈಯಾ ಮಹಾಜನ ಸಭಾ’ ಮತ್ತು 1893ರಲ್ಲಿ ‘ಪರೈಯಾ’ ಎಂಬ ಹೆಸರಿನಲ್ಲಿ ಪತ್ರಿಕೆಯನ್ನು ಪ್ರಾರಂಭಿಸುತ್ತಾರೆ. ಆಧುನಿಕ ಭಾರತದ ವಸಾಹತುಶಾಹಿ ಆಡಳಿತವು ಮುದ್ರಣ ಸಂಸ್ಕೃತಿಯನ್ನು ಆರಂಭಿಸಿತು. ಇದನ್ನು ಗ್ರಹಿಸಿದ ತಮಿಳುನಾಡಿನ ದಲಿತರು ಕೂಡಾ ಮುದ್ರಣ ಮಾಧ್ಯಮದ ಮೊರೆ ಹೊಕ್ಕರು.

1869ರಲ್ಲಿ ದಲಿತರು ಸ್ಥಾಪಿಸಿದ ಮೊತ್ತ ಮೊದಲ ಪತ್ರಿಕೆ ‘ಸೂರ್ಯೋದಯಂ’. ಆನಂತರ 20 ವರ್ಷಗಳ ತರುವಾಯ ‘ಪಂಚಮ್’, ‘ದ್ರಾವಿಡ ಪಾಂಡಿಯನ್’, ‘ಮಹಾವಿಕಟ ತೂತನ್’, ‘ಬುಲೋಗ ವ್ಯಾಸನ್’ ಮತ್ತು ‘ಪರೈಯನ್’ ಹೀಗೆ ಮುಂತಾದ ಪತ್ರಿಕೆಗಳು ಬಂದವು. ಅವುಗಳಲ್ಲಿ ‘ಪರೈಯನ್’ ಪತ್ರಿಕೆ ಸ್ಥಾಪಿಸಿದ್ದು ಮಾತ್ರ ರಟ್ಟೆಮಲೈ ಶ್ರೀನಿವಾಸನ್. ಅವರ ಪತ್ರಿಕೆಯ ಶೀರ್ಷಿಕೆಯು ಕೂಡ ತಮಿಳುನಾಡಿನಾದ್ಯಂತ ಸಾಕಷ್ಟು ಟೀಕೆಗೆ ಕಾರಣವಾಯಿತು. ಕೆಲವರು ಅದನ್ನು ಅವಹೇಳನ ಮಾಡಿದರು. ಆದರೆ ಶ್ರೀನಿವಾಸನ್ ಅದಕ್ಕೆ ತಲೆಕೆಡಿಸಿಕೊಳ್ಳಲಿಲ್ಲ. ಆ ಸಂದರ್ಭದಲ್ಲಿ 400ಕ್ಕೂ ಹೆಚ್ಚು ಪ್ರತಿಗಳು ಮದ್ರಾಸ್ ಪ್ರೆಸಿಡೆನ್ಸಿಯಲ್ಲಿ ಮಾರಾಟವಾಗುತ್ತಿದ್ದವು. ದಲಿತರಿಗೆ ಭೂಮಿ, ವಸತಿ ಹಾಗೂ ಶಿಕ್ಷಣ ಇವುಗಳನ್ನು ಧ್ಯೇಯೋದ್ದೇಶವನ್ನಾಗಿಸಿಕೊಂಡು ಬಂದ ಈ ಪತ್ರಿಕೆ ಏಳು ವರ್ಷಗಳ ಕಾಲ ನಿರಂತರವಾಗಿ ನಡೆಯಿತು.

ಅಂದು ದಲಿತರ ಭೂಕ್ರಾಂತಿಗೆ ಕಾರಣವಾಗಿದ್ದು ಶ್ರೀನಿವಾಸನ್ ಅವರ ‘ಪರೈಯಾ’ ಪತ್ರಿಕೆ. ಅದನ್ನೇ ಮಾದರಿಯನ್ನಾಗಿ ಇಟ್ಟುಕೊಂಡು ಕಲೆಕ್ಟರ್ ಜೇಮ್ಸ್ ಟ್ರೆಮೆನ್ ಹೀರ್ ಅವರು ದಲಿತರಿಗಾಗಿ 12 ಲಕ್ಷ ಎಕರೆ ಭೂಮಿಯನ್ನು ಮಂಜೂರು ಮಾಡಿದರು. ಅದನ್ನು ‘ಪಂಚಮ್ ಲ್ಯಾಂಡ್ಸ್’ ಎಂದು ಕರೆಯಲಾಯಿತು. ಇದನ್ನು ‘ಸ್ವದೇಶ ಮಿತ್ರನ್’ ಎಂಬ ಬ್ರಾಹ್ಮಣರು ನಡೆಸುತ್ತಿದ್ದ ಪತ್ರಿಕೆ ವಿರೋಧಿಸಿತು. ಅದರ ಜಾತೀವಾದದ ನೆಲೆಯನ್ನು ರಟ್ಟೆಮಲೈ ಶ್ರೀನಿವಾಸನ್ ವಿರೋಧಿಸಿದರು. ಭಾರತೀಯರಿಗೆ ಬ್ರಿಟಿಷರು ಹಕ್ಕುಗಳನ್ನು ವರ್ಗಾಯಿಸುವುದಾದರೆ ಎಲ್ಲಾ ಸಮುದಾಯಗಳಿಗೂ ಸಮರ್ಪಕ ಪ್ರಾತಿನಿಧ್ಯ ಕೊಟ್ಟು ಆನಂತರ ವರ್ಗಾಯಿಸಬೇಕು ಎಂದು ಬ್ರಿಟಿಷರಿಗೆ ವಿನಂತಿ ಮಾಡುತ್ತಾರೆ. ರಾಷ್ಟ್ರೀಯತೆಯೊಂದಿಗೆ ಬ್ರಿಟಿಷರ ಸಂಘರ್ಷದಿಂದ ಭಾರತೀಯ ನಾಗರಿಕ ಸೇವಾ ಪರೀಕ್ಷೆಯನ್ನು ಬ್ರಿಟಿಷರು ಲಂಡನ್‌ನಲ್ಲಿ ನಡೆಸಲು ನಿರ್ಧರಿಸಿದರು. ಆದರೆ ಹೆಚ್ಚಿನ ಭಾರತೀಯರು ಪರೀಕ್ಷೆಯನ್ನು ಬರೆಯಲಾಗುತ್ತಿಲ್ಲವೆಂದು ಈ ಕ್ರಮವನ್ನು ಕಾಂಗ್ರೆಸ್ ವಿರೋಧಿಸಿತು. ಆದರೆ ರಟ್ಟೆಮಲೈ ಶ್ರೀನಿವಾಸನ್ ಭಾರತದಲ್ಲಿ ಪರೀಕ್ಷೆ ನಡೆದರೆ ಜಾತಿಯ ಕಾರಣಕ್ಕೆ ದಲಿತರನ್ನು ಹೊರಗಿಡುವ ಸಾಧ್ಯತೆಗಳೇ ಹೆಚ್ಚಿವೆ. ಆದ್ದರಿಂದ ಲಂಡನ್‌ನಲ್ಲಿಯೇ ಪರೀಕ್ಷೆ ನಡೆಯಲಿ ಎಂದು ಬ್ರಿಟಿಷ್ ಸರಕಾರವನ್ನು ಒತ್ತಾಯಿಸುತ್ತಾರೆ. ಒತ್ತಾಯದ ಪತ್ರವು 112 ಅಡಿ ಉದ್ದವಿದ್ದು, 3,412 ಜನರು ಆ ಪತ್ರಕ್ಕೆ ಸಹಿ ಹಾಕುತ್ತಾರೆ.

1895ರಲ್ಲಿ ರಟ್ಟೆಮಲೈ ಶ್ರೀನಿವಾಸನ್ ದೊಡ್ಡ ಮಟ್ಟದ ಹೋರಾಟ ರೂಪಿಸಿದರು. ರಾಜಕೀಯ ಸಂಘಟನೆಯ ನೀತಿಯನ್ನು ಪ್ರತಿಪಾದಿಸುವುದು, ಹಕ್ಕುಗಳು ಮತ್ತು ಬೇಡಿಕೆಗಳ ಬಗ್ಗೆ ತರಬೇತುಗೊಳಿಸುವ ಸಮಾವೇಶವೊಂದನ್ನು ಆಯೋಜಿಸಿದರು. ಅದು ನಡೆದದ್ದು ಮದ್ರಾಸ್‌ನ ವಿಕ್ಟೋರಿಯ ಹಾಲ್‌ನಲ್ಲಿ. ತುಳಿತಕ್ಕೊಳಗಾದ ಎಲ್ಲಾ ಸಮುದಾಯಗಳನ್ನು ಅದರಲ್ಲಿ ಒಳಗೊಳ್ಳಲಾಯಿತು. ಮದ್ರಾಸ್‌ನ ವಿಕ್ಟೋರಿಯ ಹಾಲ್‌ನಲ್ಲಿ ದಲಿತರು ಸಮಾವೇಶ ಮಾಡಿದ್ದು ಅದೇ ಮೊದಲು ಹಾಗೂ ಇಡೀ ಮದ್ರಾಸ್‌ನ ಅತ್ಯಂತ ದೊಡ್ಡ ಸಮಾವೇಶವೂ ಕೂಡ ಅದೇ ಆಗಿತ್ತು. ತುಳಿತಕ್ಕೊಳಗಾದ ಸಮುದಾಯಗಳ ಪರಿಸ್ಥಿತಿಯನ್ನು ಸುಧಾರಿಸುವಂತೆ ಅದೇ 6 ಡಿಸೆಂಬರ್ 1895 ರಂದು ರಾಜ್ಯಪಾಲರಲ್ಲಿಗೆ ಮೊವಣಿಗೆ ಹೊರಟು ಮನವಿ ಸಲ್ಲಿಸಲಾಯಿತು. ಮುಂದೆ ರಟ್ಟೆಮಲೈ ಶ್ರೀನಿವಾಸನ್ ಅವರು ಲಂಡನ್‌ಗೆ ಹೋಗುವ ಯೋಜನೆ ಇದ್ದುದರಿಂದ 1900ರಲ್ಲಿ ‘ಪರೈಯಾ’ ಪತ್ರಿಕೆಯನ್ನು ನಿಲ್ಲಿಸಬೇಕಾಯಿತು. ಆನಂತರ 19 ವರ್ಷಗಳ ಕಾಲ ದಕ್ಷಿಣಾ ಆಫ್ರಿಕಾದಲ್ಲಿ ಕಳೆದರು. ಅವರ ಅನುಪಸ್ಥಿತಿಯಲ್ಲಿ ಅವರ ಸಹೋದ್ಯೋಗಿಗಳು ಪರೈಯಾ ಮಹಾಜನ ಸಭಾ ಸಂಘಟನೆಯನ್ನು ಮುನ್ನಡೆಸುತ್ತಿದ್ದರು. 1919ರಲ್ಲಿ ರಾಜಪ್ರಭುತ್ವದ ವ್ಯವಸ್ಥೆಯಲ್ಲಿ ಅಧ್ಯಕ್ಷೀಯ ಶಾಸಕಾಂಗ ಮಂಡಳಿಗಳು, ನಾಮ ನಿರ್ದೇಶಿತ ಮತ್ತು ಚುನಾಯಿತ ಸದಸ್ಯರನ್ನು ಪರಿಷತ್‌ನಲ್ಲಿ ಸೇರಿಸಲಾಗುತ್ತಿತ್ತು. ಆ ಹೊತ್ತಿಗೆ ರಟ್ಟೆಮಲೈ ಶ್ರೀನಿವಾಸನ್ ಭಾರತಕ್ಕೆ ಬಂದರು. ಮದ್ರಾಸ್ ಪ್ರೆಸಿಡೆನ್ಸಿ ಶಾಸಕಾಂಗ ಮಂಡಳಿಗೆ ಶ್ರೀನಿವಾಸನ್ ಅವರನ್ನು ನಾಮನಿರ್ದೇಶಿತ ಸದಸ್ಯರನ್ನಾಗಿ ನೇಮಿಸಲಾಯಿತು.

ಅವರು ಮೂಲತಃ ಬ್ಯಾರಿಸ್ಟರ್ ಆಗಿದ್ದರಿಂದ ಹಲವಾರು ಮಸೂದೆಗಳನ್ನು ಪರಿಚಯಿಸಿದರು ಮತ್ತು ಪ್ರತಿ ಚರ್ಚೆಯಲ್ಲೂ ಭಾಗವಹಿಸುತ್ತಿದ್ದರು. ಬಾವಿಗಳು, ಕೆರೆಗಳು, ಬೀದಿಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ದಲಿತರಿಗೆ ನಿಷೇಧ ಮಾಡುವುದು ಅಪರಾಧ. ಎಲ್ಲಾ ಸಾರ್ವಜನಿಕ ಸ್ಥಳಗಳನ್ನು ಮುಕ್ತಗೊಳಿಸಬೇಕು ಎಂದು ಕಾನೂನು ರೂಪಿಸಿದ್ದೇ ಶ್ರೀನಿವಾಸನ್. 1930ರ ದಶಕದ ಆರಂಭದಲ್ಲಿ ದುಂಡು ಮೇಜಿನ ಪರಿಷತ್ ಆರಂಭವಾಯಿತು. ಅದರಲ್ಲಿ ಶ್ರೀನಿವಾಸನ್ ಕೂಡ ಇದ್ದರು. ಅದೇ ಪರಿಷತ್‌ಗೆ ದಲಿತರ ಪ್ರತಿನಿಧಿಯಾಗಿ ಡಾ.ಬಿ.ಆರ್.ಅಂಬೇಡ್ಕರ್ ಕೂಡ ಮುಖಾಮಖಿಯಾಗುತ್ತಾರೆ. ಆ ದುಂಡು ಮೇಜಿನ ಪರಿಷತ್‌ನಲ್ಲಿ ದಲಿತರಿಗೆ ಪ್ರತ್ಯೇಕ ಮತದಾನ ಹಕ್ಕನ್ನು ನೀಡಿದಾಗ ಗಾಂಧೀಜಿಯವರು ತೀವ್ರವಾಗಿ ಅದನ್ನು ವಿರೋಧಿಸಿ ಪೂನಾದ ಜೈಲಿನಲ್ಲಿ ಉಪವಾಸ ಕೂರುತ್ತಾರೆ. ಆನಂತರ ಗಾಂಧಿ ಮತ್ತು ಅಂಬೇಡ್ಕರ್ ಬೆಂಬಲಿಗರು ಸಹಿ ಹಾಕುವ ಮೂಲಕ ಅದನ್ನು ಹಿಂಪಡೆಯಲಾಗುತ್ತದೆ. ಅಂದು ದಲಿತರ ಪರವಾಗಿ ಸಹಿಹಾಕಿದವರಲ್ಲಿ ರಟ್ಟೆಮಲೈ ಶ್ರೀನಿವಾಸನ್ ಕೂಡ ಒಬ್ಬರು. ಶ್ರೀನಿವಾಸನ್ ದಕ್ಷಿಣಾ ಆಫ್ರಿಕಾದಲ್ಲಿ ಇದ್ದಾಗ ಗಾಂಧೀಜಿಯವರೊಟ್ಟಿಗೆ ಕೆಲಸ ಮಾಡಿದ್ದರು. ಆದರೆ 1920ರ ನಂತರ ಡಾ. ಬಿ.ಆರ್.ಅಂಬೇಡ್ಕರ್ ಅವರೊಂದಿಗೆ ಕೈ ಜೋಡಿಸುತ್ತಾರೆ.

ರಟ್ಟೆಮಲೈ ಶ್ರೀನಿವಾಸನ್ ರಾಜಕೀಯ, ಪತ್ರಿಕೆ, ಸಾಮಾಜಿಕ ಸುಧಾರಣೆಗೆ ಸಂಬಂಧಿಸಿದ ಸುದೀರ್ಘ ಪಯಣ ಕುರಿತಂತೆ 1938ರಲ್ಲಿ ‘ಜೀವಿಯಾ ಸರಿತೀರಾ ಸುರುಕ್ಕಂ’ (ನನ್ನ ಜೀವನದ ಇತಿಹಾಸ) ಎಂಬ ಆತ್ಮಕಥನವನ್ನು ಬರೆದುಕೊಳ್ಳುತ್ತಾರೆ. ಅದು ತಮಿಳು ಸಾಹಿತ್ಯದಲ್ಲಿ ದಲಿತರ ಮೊತ್ತ ಮೊದಲ ಆತ್ಮಕಥನವಾಗಿದೆ. ಅವರನ್ನು ತಮಿಳುನಾಡಿನ ಜನತೆ ಈಗಲೂ ಸಹಿತ ಶ್ರೀನಿವಾಸನ್ ಎಂದು ಕರೆಯದೆ ‘ದಾದನ್’ ಎಂದೇ ಕರೆಯುತ್ತಾರೆ. ಇಂತಹ ಮಹಾನ್ ವ್ಯಕ್ತಿಯ ಜನ್ಮ ದಿನ ಇಂದು. ಈ ಸಂದರ್ಭದಲ್ಲಿ ಭಾರತೀಯ ದಲಿತ ಚಿಂತನಾಕ್ರಮದೊಟ್ಟಿಗೆ ಇನ್ನಾದರೂ ರಟ್ಟೆಮಲೈ ಶ್ರೀನಿವಾಸ್ ಅವರ ಆಲೋಚನೆಗಳನ್ನು ಅನುಸಂಧಾನ ಮಾಡಬೇಕಿದೆ.

Writer - ಹಾರೋಹಳ್ಳಿ ರವೀಂದ್ರ

contributor

Editor - ಹಾರೋಹಳ್ಳಿ ರವೀಂದ್ರ

contributor

Similar News