ಭೂಕಾಂತ ಕ್ಷೇತ್ರ ಮರೆಯಾದರೆ...?

Update: 2021-07-10 19:30 GMT

ಮಾರ್ಕೆಟ್‌ನಿಂದ ಬಂದ ತಂದೆ ಹೂವಿನ ಪೊಟ್ಟಣವನ್ನು ಮಗಳು ಮಧುರಾಳ ಕೈಗೆ ಕೊಟ್ಟರು. ಮಧುರಾ ಪೇಪರ್ ಪೊಟ್ಟಣ ಬಿಡಿಸಿ ಹೂವನ್ನು ತಾಯಿಯ ಕೈಗಿತ್ತಳು. ಪೇಪರನ್ನು ಬಿಡಿಸಿದಾಗ ಅದರಲ್ಲಿನ ಚಿತ್ರಗಳತ್ತ ಕಣ್ಣಾಡಿಸಿದಳು. ಅದರಲ್ಲಿನ ಒಂದು ಸುದ್ದಿ ಮಧುರಾಳ ಚಿತ್ತವನ್ನು ಸೆಳೆಯಿತು. ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆಯ ವಿಜ್ಞಾನಿಗಳು ಆಫ್ರಿಕಾ ಮತ್ತು ದಕ್ಷಿಣ ಅಮೆರಿಕದ ನಡುವಿನ ಕೆಲವು ಪ್ರದೇಶಗಳಲ್ಲಿ ಭೂಮಿಯ ಭೂಕಾಂತ ಕ್ಷೇತ್ರ ದುರ್ಬಲಗೊಳ್ಳುತ್ತಿರುವ ಬಗ್ಗೆ ಎಚ್ಚರಿಸಿದ್ದರು. ಇದನ್ನು ಓದಿದ ಮಧುರಾ ಪೇಪರ್‌ನ ತುಣುಕನ್ನು ಹಿಡಿದು ತಂದೆಯತ್ತ ಓಡಿದಳು. ‘‘ಪಪ್ಪಾ, ಭೂಕಾಂತ ಕ್ಷೇತ್ರ ಎಂದರೇನಪ್ಪ? ಅದು ದುರ್ಬಲವಾದರೆ ನಮಗೆ ಏನಾಗುತ್ತೆ?’’ ಎಂದು ಕಳವಳದಿಂದ ಪ್ರಶ್ನಿಸಿದಳು. ‘‘ಈಗ್ಯಾಕೆ ಈ ಪ್ರಶ್ನೆ ಬಂತು ನಿನಗೆ?’’ ಎಂದರು ತಂದೆ.

‘‘ಪಪ್ಪಾ, ಈ ಪೇಪರ್‌ನಲ್ಲಿ ಅದರ ಬಗ್ಗೆ ಒಂದಿಷ್ಟು ಸುದ್ದಿ ಬಂದಿತ್ತು. ಅದಕ್ಕೆ ಕೇಳಿದೆ’’ ಎಂದಳು ಮಧುರಾ. ಮಗಳು ಮಧುರಾ ಕೇಳಿದ ಪ್ರಶ್ನೆಗೆ ತಂದೆ ಉತ್ತರಿಸುತ್ತಾ ಸುದೀರ್ಘ ವಿವರಣೆಯನ್ನೇ ನೀಡಿದರು. ಅದು ಹೀಗಿದೆ. ಭೂಮಿಗೆ ವಾತಾವರಣ ನೀಡುವ ಮೂಲಕ ನಮ್ಮನ್ನು ರಕ್ಷಿಸುವ ಒಂದು ಅದ್ಭುತ ಶಕ್ತಿ ಇದೆ. ಅದು ಇಲ್ಲದಿದ್ದರೆ ಭೂಮಿಯ ಮೇಲಿನ ಜೀವನ ಬೇಗನೇ ಮುಗಿದು ಹೋಗುತ್ತಿತ್ತು. ಹಾಗಾದರೆ ಭೂಮಿಯನ್ನು ರಕ್ಷಿಸಿದ ಆ ವ್ಯವಸ್ಥೆ ಯಾವುದು? ಅದು ಇಲ್ಲದೇ ಹೋದರೆ ಭೂಮಿಗೆ ಮತ್ತು ಅದರಲ್ಲಿನ ಜೀವಿಗಳಿಗೆ ಏನಾಗುತ್ತೆ? ಎಂಬುದನ್ನು ಈಗ ತಿಳಿಯೋಣ. ಭೂಮಿಯ ಸುತ್ತ ಕಾಂತಕ್ಷೇತ್ರವಿದೆ. ಭೂಮೇಲ್ಮೈಯಿಂದ ಸುಮಾರು 3,000 ಕಿ.ಮೀ. ದೂರದಲ್ಲಿ ವ್ಯಾಪಿಸಿರುವ ಅದು ನಮ್ಮನ್ನು ಸೂರ್ಯನ ನೇರಳಾತೀತ ಕಿರಣಗಳಿಂದ ರಕ್ಷಿಸುತ್ತದೆ. ಜೊತೆಗೆ ಉಪಗ್ರಹಗಳು ಮತ್ತು ಬ್ಯಾಹ್ಯಾಕಾಶ ನೌಕೆಗಳ ಸಂವಹನಕ್ಕೆ ಸಹಾಯ ಮಾಡುತ್ತದೆ. ಅಂದಹಾಗೆ ಭೂಕಾಂತ ಹೇಗೆ ಉಂಟಾಗುತ್ತದೆ ಎಂಬುದನ್ನು ತಿಳಿದರೆ ಅದರ ಉಪಯೋಗ ಮತ್ತು ಸಾಧಕ ಬಾಧಕಗಳನ್ನು ತಿಳಿಯಲು ಅನುಕೂಲವಾಗುತ್ತದೆ. ಭೂಮಿ ತನ್ನ ಅಕ್ಷದ ಮೇಲೆ ತಿರುಗುತ್ತಿರುವಾಗ ಘನರೂಪದ ಒಳತಿರುಳು, ದ್ರವರೂಪದ ಹೊರತಿರುಳು ಹಾಗೂ ಕವಚದಲ್ಲಿನ ಶಿಲಾರಸಗಳ ಚಲನೆಯಲ್ಲಿ ವ್ಯತ್ಯಾಸ ತೋರುತ್ತವೆ. ಇವುಗಳ ಜೊತೆಗೆ ವಿಕಿರಣ ಪಟುತ್ವದಿಂದ ಭೂ ಅಂತರಾಳದಲ್ಲಿ ಅತ್ಯಧಿಕ ಉಷ್ಣತೆ ಮೈದಳೆಯುತ್ತದೆ. ಈ ಎಲ್ಲಾ ಕ್ರಿಯೆಗಳಿಂದ ಭೂಗರ್ಭದ ಎಲೆಕ್ಟ್ರಾನ್‌ಗಳ ಚಲನೆ ವಿದ್ಯುತ್ ಪ್ರವಾಹದಂತೆ ಪ್ರಾರಂಭವಾಗುತ್ತದೆ.

ಈ ಪ್ರವಾಹವೇ ಭೂಮಿಗೆ ಕಾಂತಕ್ಷೇತ್ರವನ್ನು ಒದಗಿಸಿದೆ. ಭೂ ಕಾಂತಕ್ಷೇತ್ರ ಧ್ರುವ ಪ್ರದೇಶಗಳ ಬಳಿ ಹೆಚ್ಚು ತೀವ್ರವಾಗಿರುತ್ತದೆ. ಕಾಂತಕ್ಷೇತ್ರವು ತಿರುಳಿಗೆ ಮಾತ್ರ ಸೀಮಿತವಾಗಿಲ್ಲ. ಭೂಮೇಲ್ಮೈ ಹಾಗೂ ಅದರಾಚೆಗೂ ವಿಸ್ತರಿಸಿದೆ. ಇದರ ಪ್ರಭಾವಕ್ಕೆ ಬರುವ ವಲಯವನ್ನು ಕಾಂತವಲಯ ಅಥವಾ ಕಾಂತಗೋಳ ಎನ್ನುವರು. ಆಗಾಗ ಈ ಕಾಂತಕ್ಷೇತ್ರದ ಧ್ರುವಗಳು ಅದಲು ಬದಲಾಗುತ್ತವೆ. ಉತ್ತರದ ಜಾಗಕ್ಕೆ ದಕ್ಷಿಣ, ದಕ್ಷಿಣದ ಜಾಗಕ್ಕೆ ಉತ್ತರ ಬಂದು ಅದು ತೆಳ್ಳಗಾಗಿ ನೇರಳಾತೀತ ಕಿರಣಗಳು ಯಥೇಚ್ಛ ಭೂಮಿಯನ್ನು ತಲುಪಿ ಜೀವಸಂಕುಲಗಳಿಗೆ ಮಾರಕವಾಗುತ್ತವೆ. ಇಂತಹ ಘಟನೆಯೊಂದು 42,000 ವರ್ಷಗಳ ಹಿಂದೆ ಜರುಗಿ 1,000 ವರ್ಷಗಳ ಕಾಲ ಚಾಲ್ತಿಯಲ್ಲಿತ್ತು. ಅಂದು ಬದುಕಿದ್ದ ನ್ಯೂಝಿಲ್ಯಾಂಡಿನಲ್ಲಿರುವ ‘ಕೌರಿ’ ಮರಗಳನ್ನು ಕಾರ್ಬನ್ ಡೇಟಿಂಗಿಗೆ ಒಳಪಡಿಸಿದಾಗ ವಿಜ್ಞಾನಿಗಳಿಗೆ ಮಾಹಿತಿ ಸಿಕ್ಕಿದೆ.

ಹಾಗಿದ್ದರೆ ಸಹಸ್ರಾರು ವರ್ಷಗಳ ಹಿಂದೆ ಬದುಕಿದ್ದ ಮನುಷ್ಯನ ಮುಂಚಿನ ಪ್ರಭೇದ ನಿಯಾಂಡರ್ತಾಲ್‌ನ ಮನುಷ್ಯರು ಒಮ್ಮೆಲೇ ಕಣ್ಮರೆಯಾಗಲು ಧ್ರುವಗಳ ತಿರುವುಮುರುವು ಕಾರಣವಾಗಿರಬಹುದೆ? ಖಾತರಿಗೆ ಇನ್ನಷ್ಟು ಪುರಾವೆಗಳು ಬೇಕು. ವಿಜ್ಞಾನ ಮತ್ತು ನಿಸರ್ಗ ಎಂದೆಂದಿಗೂ ಸೋಜಿಗ ಮತ್ತು ಕ್ರಿಸ್ಟಿಯ ಪತ್ತೆದಾರಿ ಕಾದಂಬರಿಯಂತೆ ಸ್ವಾರಸ್ಯಕರ.

ಇತ್ತೀಚೆಗೆ ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆಯ ವಿಜ್ಞಾನಿಗಳು ನಡೆಸಿದ ಸಂಶೋಧನೆಗಳ ಆಧಾರದ ಮೇಲೆ ಆಫ್ರಿಕಾ ಮತ್ತು ದಕ್ಷಿಣ ಅಮೆರಿಕದ ನಡುವಿನ ಕೆಲವು ಪ್ರದೇಶಗಳಲ್ಲಿ ಭೂಮಿಯ ಭೂಕಾಂತ ಕ್ಷೇತ್ರ ದುರ್ಬಲಗೊಳ್ಳುತ್ತಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಅವರ ಪ್ರಕಾರ ಕಳೆದ ಎರಡು ದಶಕಗಳ ಅವಧಿಯಲ್ಲಿ ಶೇ.10ರಷ್ಟು ಶಕ್ತಿಯನ್ನು ಅದು ಕಳೆದುಕೊಂಡಿದೆ. ಒಂದಿಷ್ಟು ತಾರ್ಕಿಕ ಅಂಶಗಳ ಆಧಾರದ ಮೇಲೆ ಭೂಕಾಂತ ಕ್ಷೇತ್ರ ದುರ್ಬಲಗೊಂಡರೆ ಏನಾಗುತ್ತದೆ ಎಂಬುದನ್ನು ಲೆಕ್ಕಾಚಾರ ಹಾಕಬಹುದು. ಭೂಕಾಂತ ಕ್ಷೇತ್ರ ದುರ್ಬಲಗೊಂಡರೆ ದಿಕ್ಸೂಚಿಯ ಕಾರ್ಯ ಅಸಮರ್ಪಕವಾಗುತ್ತದೆ. ದಿಕ್ಸೂಚಿಯು ಒಂದು ಕಿರು ಅಯಸ್ಕಾಂತ. ದಿಕ್ಕನ್ನು ಗಮನಿಸಲು ಇದನ್ನು ಬಳಸುತ್ತೇವೆ. ನಿಖರವಾದ ಜಲಪ್ರಯಾಣಕ್ಕೆ ದಿಕ್ಸೂಚಿ ಅತ್ಯಗತ್ಯ. ಭೂಕಾಂತ ಕ್ಷೇತ್ರವು ದುರ್ಬಲವಾದರೆ ದಿಕ್ಸೂಚಿಯ ಕಾರ್ಯವೈಖರಿ ಬದಲಾಗುತ್ತದೆ. ನಿರ್ದಿಷ್ಟವಾದ ದಿಕ್ಕನ್ನು ಪತ್ತೆ ಹಚ್ಚಲು ಕಷ್ಟವಾಗುತ್ತದೆ. ಭೂಕಾಂತ ಕ್ಷೇತ್ರದ ಉಪಯೋಗ ಕೇವಲ ಮಾನವರಿಗಷ್ಟೇ ಸೀಮಿತವಾಗಿಲ್ಲ. ಅನೇಕ ಪಕ್ಷಿಗಳು, ಸಮುದ್ರ ಆಮೆಗಳು, ಏಡಿಗಳು, ಜೇನುಹುಳಗಳು ಹಾಗೂ ಕೆಲ ಜಾತಿಯ ನೊಣಗಳು ಜೈವಿಕ ದಿಕ್ಸೂಚಿಯನ್ನು ಹೊಂದಿವೆ. ಇದನ್ನು ‘ಮ್ಯಾಗ್ನೆಟೊರೆಸೆಪ್ಟರ್’ ಎಂದು ಕರೆಯಲಾಗುತ್ತದೆ. ಇದು ಅವುಗಳ ದೇಹದಲ್ಲೇ ನಿರ್ಮಿತವಾಗಿರುತ್ತದೆ. ಪಕ್ಷಿಗಳು ಚಳಿಗಾಲದ ತಿಂಗಳಲ್ಲಿ ಬೆಚ್ಚಗಿನ ಹವಾಮಾನ ಪಡೆಯಲು ಈ ಸಾಮರ್ಥ್ಯವನ್ನು ಬಳಸುತ್ತವೆ. ಸಮುದ್ರದ ಆಮೆಗಳು ಮೊಟ್ಟೆಗಳನ್ನು ಇಡಲು ಸಮುದ್ರದ ತೀರವನ್ನು ಹುಡುಕಲು ಈ ಸಾಮರ್ಥ್ಯವನ್ನು ಬಳಸುತ್ತವೆ. ಭೂಮಿಯ ಕಾಂತಕ್ಷೇತ್ರವು ಮರೆಯಾದರೆ ದಿಕ್ಸೂಚಿ ಸಂಚರಣೆ ಅವಲಂಬಿಸಿರುವ ಅನೇಕ ಪ್ರಾಣಿಗಳು ತೀವ್ರ ತೊಂದರೆಗೆ ಒಳಗಾಗುತ್ತವೆ. ಸಮುದ್ರದ ಆಮೆಗಳಿಗೆ ಮೊಟ್ಟೆ ಇಡಲು ದಡ ಸಿಗದೇ ಇರಬಹುದು.

ವಲಸೆ ಪಕ್ಷಿಗಳು ತಪ್ಪಾದ ಮಾರ್ಗದಲ್ಲಿ ಚಲಿಸಬಹುದು. ಜೇನುನೊಣಗಳು ತಮ್ಮ ಜೇನುಗೂಡನ್ನು ಹುಡುಕುವ ಪ್ರಯತ್ನದಲ್ಲಿ ಕಳೆದುಹೋಗಬಹುದು. ಇದರಿಂದ ಹೂವು ಮತ್ತು ಪರಾಗಸ್ಪರ್ಶದ ಮೇಲೆ ಪರಿಣಾಮ ಬೀರಬಹುದು. ಜೈವಿಕ ದಿಕ್ಸೂಚಿಯಾಧಾರಿತ ಮಾರ್ಗಹುಡುಕುವ ಹೊಂದಾಣಿಕೆ ಮಾಡಿಕೊಂಡ ಅನೇಕ ಜೀವಿಗಳು ಅಳಿವಿನಂಚಿಗೆ ಸರಿಯಬಹುದು. ಸೌರಮಾರುತಗಳು ಧ್ರುವ ಪ್ರದೇಶಗಳ ಬಳಿ ಸುಂದರ ವಿದ್ಯಮಾನವನ್ನು ರಚಿಸುತ್ತವೆ. ಇದನ್ನು ‘ಅರೋರಾ’ ಎನ್ನುತ್ತೇವೆ. ಭೂಕಾಂತ ಕ್ಷೇತ್ರವು ಸೌರಮಾರುತಗಳನ್ನು ಬಹುವರ್ಣದ ಅರೋರಾಗಳನ್ನು ಸೃಷ್ಟಿಸುತ್ತದೆ. ಭೂಕಾಂತ ಕ್ಷೇತ್ರ ಇಲ್ಲದೆ ಹೋದರೆ ಇಂತಹ ಅರೋರಾಗಳನ್ನು ನೋಡಲು ಸಾಧ್ಯವೇ ಇಲ್ಲ. ಕಾಂತಕ್ಷೇತ್ರವು ಕಾಸ್ಮಿಕ್ ಕಿರಣಗಳಿಂದ ಭೂಮಿಯನ್ನು ರಕ್ಷಿಸುತ್ತದೆ. ಅದು ಮರೆಯಾದರೆ ಕಾಸ್ಮಿಕ್ ಕಿರಣಗಳು ಮತ್ತು ಸೌರ ಮಾರುತಗಳಿಂದ ಭೂಮಿಯ ಜೀವಿಗಳಿಗೆ ಹಾನಿಯಾಗುತ್ತದೆ. ಕಾಸ್ಮಿಕ್ ಕಿರಣಗಳಿಂದ ನಿರಂತರವಾಗಿ ಭೂಮಿಯಲ್ಲಿ ಸ್ಫೋಟಗಳು ಸಂಭವಿಸಬಹುದು. ಕಾಸ್ಮಿಕ್ ಕಿರಣಗಳು ದೇಹದ ಮೇಲೆ ಭಯಾನಕ ಪರಿಣಾಮಗಳನ್ನು ಉಂಟು ಮಾಡುತ್ತದೆ. ಕಾಸ್ಮಿಕ್ ಕಿರಣಗಳಿಂದ ಚರ್ಮ ಮತ್ತು ಕಣ್ಣಿನ ರೆಟಿನಾದ ಮೇಲೆ ಗಂಭೀರ ಪರಿಣಾಮಗಳಾಗುತ್ತವೆ. ಕ್ಯಾನ್ಸರ್‌ನಂತಹ ಮಾರಕ ಕಾಯಿಲೆಗೆ ತುತ್ತಾಗುತ್ತೇವೆ. ಅಷ್ಟೇ ಅಲ್ಲ ಕಾಸ್ಮಿಕ್ ಕಿರಣಗಳು ನಮ್ಮ ದೇಹವನ್ನೇ ಸ್ಫೋಟಿಸಬಹುದು. ನಮ್ಮ ದೇಹದ ಡಿಎನ್‌ಎಗೂ ಹಾನಿಯಾಗುವ ಸಂಭವವನ್ನು ತಳ್ಳಿಹಾಕುವಂತಿಲ್ಲ. ಭೂಕಾಂತ ಕ್ಷೇತ್ರವಿಲ್ಲದೆ ನಮ್ಮ ಸಂಪರ್ಕ ವ್ಯವಸ್ಥೆ ಒಂದಿಷ್ಟು ಅಸ್ತವ್ಯಸ್ತಗೊಳ್ಳಬಹುದು. ಭೂಮಧ್ಯ ರೇಖೆಯಿಂದ 36,000 ಕಿ.ಮೀ. ಎತ್ತರದ ಕಕ್ಷೆಯಲ್ಲಿ ಬಂಧಿಸಿದ ಕೃತಕ ಉಪಗ್ರಹಗಳು ದೂರ ಸಂಪರ್ಕ ವ್ಯವಸ್ಥೆಯನ್ನು ಕಲ್ಪಿಸಿವೆ. ಭೂಕಾಂತ ಕ್ಷೇತ್ರದ ಕ್ಷೀಣತೆಯಿಂದ ಇವುಗಳಿಗೆ ತೊಂದರೆಯಾಗುವುದಿಲ್ಲ.

ಆದರೆ ಅದರ ಕೆಳ ಕಕ್ಷೆಯಲ್ಲಿ ಸಂಚರಿಸುವ ಕೆಲ ಕೃತಕ ಉಪಗ್ರಹ ಹಾಗೂ ಬಾಹ್ಯಾಕಾಶ ನೌಕೆಗಳು ಕೆಲವೊಂದು ತಾಂತ್ರಿಕ ತೊಂದರೆಗಳನ್ನು ಅನುಭವಿಸಬಹುದು. ಇದರಿಂದ ನಮ್ಮ ಸಂವಹನ ಮತ್ತು ಸಂಪರ್ಕ ವ್ಯವಸ್ಥೆಯಲ್ಲಿ ಒಂದಿಷ್ಟು ಏರುಪೇರುಗಳಾಗಬಹುದು. 1989ರಲ್ಲಿ ಬೃಹತ್ ಸೌರಜ್ವಾಲೆಯೊಂದು ಭೂಮಿಯ ಮೇಲೆ ಅಪ್ಪಳಿಸಿತು. ಅದು ಕೆನಡಾದ ಕ್ವಿಬೆಕ್‌ನಲ್ಲಿ ವಿದ್ಯುತ್ ಗ್ರಿಡ್‌ನ ಮೇಲೆ ಅಪ್ಪಳಿಸಿತು. ಇದರಿಂದ ಆ ಪ್ರಾಂತದಲ್ಲಿ 12 ಗಂಟೆಗಳ ಕಾಲ ವಿದ್ಯುತ್ ಸರಬರಾಜು ನಿಂತಿತು. ಕೆಲವು ಕೃತಕ ಉಪಗ್ರಹಗಳು ಹಾನಿಗೊಳಗಾದವು. ಕೆಲವು ಉಪಗ್ರಹಗಳು ನಿಯಂತ್ರಣ ತಪ್ಪಿದವು. ಏಕೆಂದರೆ ಉಪಗ್ರಹಗಳ ಸೂಕ್ಷ್ಮ ಎಲೆಕ್ಟ್ರಾನಿಕ್‌ಗಳು ಸೌರ ಮಾರುತವನ್ನು ನಿಭಾಯಿಸಲು ವಿನ್ಯಾಸಗೊಂಡಿಲ್ಲ. ಬಹುಶಃ ಭೂಮಿಯು ತನ್ನ ಕಾಂತಕ್ಷೇತ್ರವನ್ನು ಕಳೆದುಕೊಂಡರೆ, ನಾವು ಉಸಿರಾಡುವ ಗಾಳಿಯನ್ನೂ ಕಳೆದುಕೊಳ್ಳಬಹುದು. ಮಂಗಳ ಗ್ರಹವು ಭೂಮಿಯಂತೆಯೇ ಇದೆ ಎನ್ನುತ್ತೇವೆ. ಆದರೆ ಅಲ್ಲಿ ಶತಕೋಟಿ ವರ್ಷಗಳ ಹಿಂದೆಯೇ ಕಾಂತಕ್ಷೇತ್ರ ಮರೆಯಾಯಿತು. ಅದರ ಪರಿಣಾಮವಾಗಿ ಅಲ್ಲಿ ಜೀವಿಗಳು ಉಸಿರಾಡಲು ಅಗತ್ಯವಾದ ಗಾಳಿಯಾಗಲೀ, ವಾತಾವರಣವಾಗಲೀ ಇಲ್ಲ. ಭೂಕಾಂತೀಯ ಕ್ಷೇತ್ರವಿಲ್ಲದೆ ನಮ್ಮ ವಾತಾವರಣ, ಸಾಗರಗಳು ಮತ್ತು ಜೀವನವು ಭಯಾನಕ ಎನಿಸುತ್ತದೆ.

ಸದ್ಯಕ್ಕೆ ಅಂತಹ ಯಾವುದೇ ಗಂಭೀರ ಪರಿಣಾಮಗಳು ಸಂಭವಿಸುವುದಿಲ್ಲ ಎಂಬುದು ಒಂದಿಷ್ಟು ನೆಮ್ಮದಿಯ ವಿಚಾರ. ಭೂಮಿಯ ಕಾಂತ ಕ್ಷೇತ್ರ ಏಕಾಏಕಿ ಒಂದೇ ದಿನದಲ್ಲಿ ಕಣ್ಮರೆಯಾಗುವುದಿಲ್ಲ ಅಥವಾ ದುರ್ಬಲವಾಗುವುದಿಲ್ಲ. ಹಾಗಂತ ನಿರ್ಲಕ್ಷ ವಹಿಸುವಂತೆಯೂ ಇಲ್ಲ ಎನ್ನುತ್ತಾ ತಮ್ಮ ಸುದೀರ್ಘ ವಿವರಣೆಯನ್ನು ಮೊಟಕುಗೊಳಿಸಿದರು.

Writer - ಆರ್. ಬಿ. ಗುರುಬಸವರಾಜ

contributor

Editor - ಆರ್. ಬಿ. ಗುರುಬಸವರಾಜ

contributor

Similar News