ವೈಕಂ: ಮಾನವತಾವಾದಿ ಲೇಖಕ

Update: 2021-07-13 19:30 GMT

ವೈಕಂ ಬರಹವನ್ನು ಒಮ್ಮೆ ಓದಲಾರಂಭಿಸಿದರೆ ಮುಗಿವ ತನಕ ಬಿಡಲಾಗುವುದಿಲ್ಲ. ಓದಿದ ಅವರ ಬರಹವನ್ನು ನೆನೆದರೆ ಮೊದಲಿಗೆ ಮನಸ್ಸು ಪ್ರಸನ್ನಗೊಂಡು ತುಟಿಯಲ್ಲಿ ಮಂದಹಾಸ ಸುಳಿಯುತ್ತದೆ. ಚೇತೋಹಾರಿಯಾದ ಸನ್ನಿವೇಶಗಳು, ಪಾತ್ರಗಳು, ಮಾತುಕತೆಗಳು ಅಲ್ಲಿ ತುಂಬಿವೆ. ಅವರ ಕಥನದ ಭಾಷೆಯಲ್ಲೇ ವಿನೋದ ಪ್ರಜ್ಞೆ ಸುಪ್ತವಾಗಿ ಅಡಕವಾಗಿದೆ.



ನಾನು ಕೆಲವು ಕೃತಿಗಳನ್ನು ಮತ್ತೆಮತ್ತೆ ಓದುತ್ತೇನೆ- ಕುವೆಂಪು ಅವರ ‘ಮದುಮಗಳು’, ರಾವ್‌ಬಹಾದೂರರ ‘ಗ್ರಾಮಾಯಣ’, ಮಿರ್ಜಿಯವರ ‘ನಿಸರ್ಗ’ ತೇಜಸ್ವಿಯವರ ‘ಕರ್ವಾಲೊ’, ದೇವನೂರರ ‘ಒಡಲಾಳ’, ಕಾಫ್ಕಾನ ‘ರೂಪಾಂತರ’, ನವರತ್ನ ರಾಮರಾಯರ ‘ಕೆಲವು ನೆನಪುಗಳು’, ತಕಳಿಯವರ ‘ಚೆಮ್ಮೀನ್’, ಟಾಲ್‌ಸ್ಟಾಯ್‌ರ ‘ಒಬ್ಬನಿಗೆ ಎಷ್ಟು ನೆಲ ಬೇಕು?’ ಹೀಗೆ. ಪ್ರತಿಸಲ ಓದುವಾಗಲೂ ಇವು ವಿಭಿನ್ನವಾಗಿ ಕಾಣಿಸುತ್ತವೆ. ಹಿಂದಣ ಓದಿನಲ್ಲಿ ಕಾಣದ ಹೊಸ ಹೊಳಹು ಹುಟ್ಟಿಸುತ್ತವೆ. ದೊಡ್ಡ ಜೀವನದರ್ಶನ ಮತ್ತು ಕಲೆಯ ಮಾಂತ್ರಿಕತೆಯುಳ್ಳ ಜೀವಂತ ಸಾಹಿತ್ಯದ ಹೊಳಪು ಎಂದೂ ಮಾಸುವುದಿಲ್ಲ. ಕೃತಿ ಬದಲಾಗಿರುವುದಿಲ್ಲ. ಆದರೆ ನಮ್ಮ ವ್ಯಕ್ತಿತ್ವವೂ ನಮ್ಮ ಬಾಳಿನ ಸನ್ನಿವೇಶವೂ ಬದಲಾಗಿರುತ್ತದೆ. ಹೀಗಾಗಿಯೇ ಕೃತಿಯು ಹೊಸತಾಗಿ ಕಾಣುತ್ತದೆ. ಇದು ಕೃತಿಯಿಂದ ಓದುಗರು ಬೆಳೆವ ಮತ್ತು ಕೃತಿ ಓದುಗರನ್ನು ಬೆಳೆಸುವ ಪರಿ.

ವೈಕಂ ಸಾಹಿತ್ಯಕ್ಕೂ ನಮ್ಮನ್ನು ಆಯುಷ್ಯದುದ್ದಕ್ಕೂ ಆಕರ್ಷಿಸುವ, ಬೆಳೆಸುವ, ಪರಿವರ್ತಿಸುವ ಗುಣಗಳಿವೆ. ಅವರ ‘ಪಾತುಮ್ಮಳ ಆಡು’, ‘ಬಾಲ್ಯಕಾಲ ಸಖಿ’, ‘ನನ್ನಜ್ಜನಿಗೊಂದು ಆನೆಯಿತ್ತು’ ಕಾದಂಬರಿಗಳು; ‘ಅಮ್ಮ’, ‘ಪ್ರೇಮಪತ್ರ’, ‘ಹೂಬಾಳೆ ಹಣ್ಣು’, ‘ಐಷು ಕುಟ್ಟಿ’, ‘ಆನೆ ಬಾಚನೂ ಹೊನ್ನ ಶಿಲುಬೆಯೂ’ ಮುಂತಾದ ಕತೆಗಳು ಭಾರತೀಯ ಸಾಹಿತ್ಯದ ಶ್ರೇಷ್ಠ ಬರಹಗಳು. ವೈಕಂ ಅವರ ಸಾಹಿತ್ಯ ಓದುತ್ತಿದ್ದರೆ, ಭಾರತದ ಒಂದು ಪ್ರದೇಶದ ಸಜೀವವಾದ ಜಗತ್ತು ಕಣ್ಮುಂದೆ ಸೃಷ್ಟಿಯಾಗುತ್ತದೆ.

ಅದು ಕಾಡು-ಹೊಳೆ-ಮಳೆ; ಆನೆ-ಆಡು; ಜನ, ಜನರ ಉಡುಗೆ-ಆಹಾರ; ಕಾಮ-ಪ್ರೇಮ; ಕರುಣೆ-ಮೈತ್ರಿ; ಕಿಲಾಡಿತನ-ಕ್ರೌರ್ಯ; ಸ್ವಾತಂತ್ರ್ಯ ಹೋರಾಟ-ಕಮ್ಯುನಿಸ್ಟ್ ಚಳವಳಿಗಳ ಸಮೇತ ಅನಾವರಣಗೊಳ್ಳುವ ಕೇರಳ ಸಂಸ್ಕೃತಿ ಸಶಕ್ತ ಜಗತ್ತು. ಬದುಕಿನ ಅನೂಹ್ಯ ವರ್ತನೆಗಳನ್ನು ಶೋಧಿಸುವುದು ವೈಕಂ ಸಾಹಿತ್ಯದ ಉದ್ದೇಶವಾದರೂ, ಅದರ ಭಾಗವಾಗಿ ಪ್ರಾದೇಶಿಕ ಸಂಸ್ಕೃತಿಯ ಪ್ರತಿಬಿಂಬಗಳು ಸಹಜವಾಗಿ ಮೂಡಿವೆ. ದೊಡ್ಡ ಲೇಖಕರು ತಮ್ಮ ನೆಲದ ಸಾಂಸ್ಕೃತಿಕ ಕಥನವನ್ನು ತಮ್ಮ ಸೃಜನಶೀಲ ಬರಹದ ಭಾಗವಾಗಿ ಕಟ್ಟಿಕೊಡುತ್ತಾರೆ. ಓದಿನ ಸುಖ ಕೊಡದೆ ದೊಡ್ಡ ಜೀವನ ಮೌಲ್ಯವನ್ನು ಅನ್ವೇಷಣೆ ಮಾಡಿರುವ ಕೃತಿಗಳಿವೆ; ಚೆನ್ನಾಗಿ ಓದಿಸಿಕೊಂಡು ಹೋಗಿ ದೊಡ್ಡದೇನನ್ನೂ ಕೊಡದ ಬರಹಗಳೂ ಇವೆ. ನಿಜವಾದ ಗದ್ಯಬರಹ ಸರಸದಲ್ಲಿ ಸಲಿಗೆಯಲ್ಲಿ ಓದಿನ ಸುಖವನ್ನು ಕೊಡುತ್ತದೆ; ಅದೇಕಾಲಕ್ಕೆ ಓದುಗ ಸಂವೇದನೆಯನ್ನು ಹರಿತಗೊಳಿಸುತ್ತದೆ. ಇದು ಚಾಪ್ಲಿನ್ ಸಿನೆಮಾಗಳ ದಾರ್ಶನಿಕ ವಿನೋದ.

ವೈಕಂ ಬರಹವನ್ನು ಒಮ್ಮೆ ಓದಲಾರಂಭಿಸಿದರೆ ಮುಗಿವ ತನಕ ಬಿಡಲಾಗುವುದಿಲ್ಲ. ಓದಿದ ಅವರ ಬರಹವನ್ನು ನೆನೆದರೆ ಮೊದಲಿಗೆ ಮನಸ್ಸು ಪ್ರಸನ್ನಗೊಂಡು ತುಟಿಯಲ್ಲಿ ಮಂದಹಾಸ ಸುಳಿಯುತ್ತದೆ. ಚೇತೋಹಾರಿಯಾದ ಸನ್ನಿವೇಶಗಳು, ಪಾತ್ರಗಳು, ಮಾತುಕತೆಗಳು ಅಲ್ಲಿ ತುಂಬಿವೆ. ಅವರ ಕಥನದ ಭಾಷೆಯಲ್ಲೇ ವಿನೋದ ಪ್ರಜ್ಞೆ ಸುಪ್ತವಾಗಿ ಅಡಕವಾಗಿದೆ. ಅವರ ಕಾದಂಬರಿ-ಕತೆಗಳು ಬಾಳಿನ ಅರ್ಥದ ಶೋಧವನ್ನು ತತ್ವಶಾಸ್ತ್ರೀಯವಾದ ಗಾಂಭೀರ್ಯದಲ್ಲಿ ನಡೆಸುವುದಿಲ್ಲ. ಲೀಲೆಯ ಶೈಲಿಯಲ್ಲಿ ಕಟ್ಟಿಕೊಡುತ್ತವೆ. ಅವುಗಳ ನಿಜವಾದ ಉದ್ದೇಶ ಜೀವನ ಪ್ರೀತಿಯನ್ನು ಹೊಮ್ಮಿಸುವುದು. ಜೀವನ ದರ್ಶನವನ್ನು ಅಡಗಿಸಿ ತೋರುವುದು.

ತುಟಿಯಲ್ಲಿ ಮಂದಹಾಸ ಸುಳಿಸಬಲ್ಲ ವೈಕಂ ಕಣ್ಣಲ್ಲಿ ಕಂಬನಿ ಉಕ್ಕಿಸುವ ಮತ್ತು ಗಾಢವಾದ ವಿಷಾದ ಹೊಮ್ಮಿಸುವಂತೆಯೂ ಬರೆಯಬಲ್ಲರು. ಇವು ವ್ಯವಸ್ಥೆಯ ಕ್ರೌರ್ಯವನ್ನೂ ಬಲಿಪಶುಗಳ ಅಸಹಾಯಕತೆಯನ್ನೂ ಕಾಣಿಸುತ್ತವೆ. ‘ಟೈಗರ್’, ‘ಮೂರ್ಖರ ಸ್ವರ್ಗ’, ‘ಕೈಕೋಳ’ ಇಂತಹ ಕತೆಗಳು; ‘ಬಾಲ್ಯಕಾಲ ಸಖಿ’, ‘ಮದಿಲುಗಳು’ ಕಾದಂಬರಿಗಳು ಇಂತಹವು. ಜೀವನ ದರ್ಶನ ವಿಷಯದಲ್ಲಿ ಟಾಲಸ್ಟಾಯ್‌ನನ್ನು ನೆನಪಿಸುವ ವೈಕಂ ಸಾಹಿತ್ಯವು, ದಾರುಣ ವ್ಯಂಗ್ಯದ ವಿಷಯದಲ್ಲಿ ಸಾದತ್ ಹಸನ್ ಮಂಟೊನನ್ನು ನೆನಪಿಸುತ್ತದೆ. ವೈಕಂ ಕತೆಗಳಲ್ಲಿ ಕೆಲವು ಪಾತ್ರಗಳು ಮತ್ತೆಮತ್ತೆ ಬರುತ್ತವೆ. ಹೀಗಾಗಿ ಅವರ ಕತೆಗಳನ್ನು ಕಾದಂಬರಿಯೊಂದರ ಬಿಡಿಬಿಡಿ ಅಧ್ಯಾಯಗಳಂತೆಯೂ ಓದಬಹುದು.

ಅಲ್ಲಿನ ಬಹುತೇಕ ಜನ ಸಾಮಾನ್ಯರು- ಕಾರ್ಮಿಕರ ನಾಯಕ, ಪುಡಿಗಳ್ಳ, ಹೋಟೆಲುಕಾರ್ತಿ, ಕೂಲಿಕಾರ, ಪೊಲೀಸು, ಮಾವುತ ಇತ್ಯಾದಿ. ಇವರಲ್ಲಿ ಕೆಲವರ ಚಟುವಟಿಕೆಗಳು ಕಾನೂನಿನ ಕಣ್ಣಲ್ಲಿ ಅಪರಾಧಗಳು. ಆದರೆ ಅವು ಅವರು ಬದುಕುಳಿಯಲು ಮಾಡುವ ಉಪಾಯ ಹಾಗೂ ಅವರ ಜೀವನಪ್ರೀತಿಯ ದ್ಯೋತಕಗಳೂ ಆಗಿವೆ. ಏಸುವನ್ನು ಏರಿಸಿದ್ದು ಮರದ ಶಿಲುಬೆಗೆ. ಚರ್ಚಿನಲ್ಲೇಕೆ ಹೊನ್ನಶಿಲುಬೆ ಇರಬೇಕು ಎಂಬ ಮೂಲಭೂತ ಪ್ರಶ್ನೆಯನ್ನು ಹಾಕಿಕೊಳ್ಳುವ ತೋಮ, ಅದನ್ನು ಕದಿಯುತ್ತಾನೆ. ತನಗಲ್ಲ, ಜೈಲಿನಲ್ಲಿ ತನ್ನ ಪಹರೆಕಾಯುವ ಬಡಪಾಯಿ ಪೊಲೀಸನ ಹೆಣ್ಣುಮಕ್ಕಳ ಮದುವೆಗೆಂದು. ಮಾಸ್ತಿಯವರ ‘ಇಲ್ಲಿಯ ನ್ಯಾಯ’ ಕತೆಯಲ್ಲೂ ಇಂಥದೇ ಪ್ರಸಂಗ ಬರುತ್ತದೆ. ಲೋಕದ ಕಣ್ಣಲ್ಲಿ ಅಪರಾಧಿಗಳಾಗಿರುವ ಜನರ ಕೃತ್ಯಗಳು ವ್ಯವಸ್ಥೆಯನ್ನೂ ಸ್ಥಾಪಿತ ಧರ್ಮವನ್ನೂ ಪ್ರಶ್ನೆಗೊಳಪಡಿಸುತ್ತವೆ. ಹೀಗಾಗಿ ವೈಕಂ ಕಾದಂಬರಿ-ಕತೆಗಳು ಸಾಂಪ್ರದಾಯಿಕ ಸಮಾಜದ ಆತ್ಮವಿಮರ್ಶೆಯೂ ಆಗಿವೆ.

ಸಾಮಾನ್ಯರ ಬದುಕಿನ ಹೋರಾಟವನ್ನು ಕಟ್ಟಿಕೊಡುವ ವೈಕಂ ಕತೆಗಳದ್ದು, ಅಪ್ಪಟವಾದ ಜಾತ್ಯತೀತ ಲೋಕ. ಈ ಲೋಕದಲ್ಲಿ ಪ್ರಮುಖ ಪಾತ್ರಧಾರಿಗಳು ಮಹಿಳೆಯರೇ. ಇವರಲ್ಲಿ ಪರಿತ್ಯಕ್ತರಾಗಿ ಅನಾಥ ಬದುಕನ್ನು ನಡೆಸುವವರೂ ಉಂಟು. ಆದರೆ ಹೆಚ್ಚಿನ ಕತೆಗಳಲ್ಲಿ ಬರುವ ಮಹಿಳೆಯರು ಗಂಡಂದಿರ ಗುಲಾಮರಲ್ಲ. ತಮ್ಮ ಜಾಣ್ಮೆ ಸೌಂದರ್ಯ ದುಡಿಮೆಯಿಂದ ಗಂಡಸರನ್ನು ಆಳಬಲ್ಲವರು. ಗಟ್ಟಿಗಿತ್ತಿಯರು. ಜೀವನ ಪ್ರೀತಿಯುಳ್ಳವರು. ಬದುಕನ್ನು ಕಟ್ಟಿಕೊಳ್ಳಲು ಹೋರಾಡುವವರು. ‘ಪ್ರೇಮಪತ್ರ’ ಕತೆಯ ಸಾರಮ್ಮ, ನದಿಯ ಜಲದಲ್ಲಿ ಮುಳುಗಿಕೊಂಡ ಬಾಳೆಗೊನೆಯನ್ನು ಎಗರಿಸುವ ಝೈನಬ ಇಂತಹವರು. ತಮ್ಮ ಮೇಲೆ ಮಹಾ ಆತ್ಮವಿಶ್ವಾಸವುಳ್ಳ ಇಂತಹ ಮಹಿಳೆಯರನ್ನು ಕಾಣಿಸುವುದಕ್ಕೆ ಲೇಖಕರು ಮಾತೃಪ್ರಧಾನ ಸಮಾಜದ ಚಹರೆಗಳು ಉಳಿದಿರುವ ಪರಿಸರದಿಂದ ಬಂದವರಾಗಿರುವುದೂ ಒಂದು ಕಾರಣವಿರಬೇಕು.

ಇವುಗಳಲ್ಲಿ ಜೀವನ ಸಂಘರ್ಷದಿಂದಲೇ ದಕ್ಕಿದ ಮತ್ತು ಸಹಜವಾಗಿ ನೆಲೆಸಿರುವ ಸ್ತ್ರೀವಾದವಿದೆ. ವೈಕಂ ಅವರ ಬಹಳಷ್ಟು ಕತೆಗಳು ಗಂಡುಹೆಣ್ಣಿನ ಪ್ರೇಮವನ್ನು ಕುರಿತವು. ಈ ಪ್ರೇಮವೊ ಹತ್ತಾರು ವಿನ್ಯಾಸಗಳದ್ದು. ಹೆಚ್ಚಿನ ಪ್ರೇಮ ಪ್ರಕರಣದಲ್ಲಿ ಹೆಣ್ಣನ್ನು ಆರಾಧಿಸುವ ಅವಳ ಹಸಾದಕ್ಕಾಗಿ ಹಾತೊರೆಯುವ ಮತ್ತು ಸಂಘರ್ಷ ಮಾಡುವವನು ಗಂಡು. ಸೂಫಿದರ್ಶನದ ಮುಖ್ಯ ತತ್ವ ಇಶ್ಕ್ ಅಥವಾ ಪ್ರೇಮ. ಅಲ್ಲಿ ಸಾಧಕರು ಗಂಡುಗಳಾಗಿ ಅವರು ಹುಡುಕುವ ಪರತತ್ವ ಅಥವಾ ದೇವರು ಹೆಣ್ರೂಪದಲ್ಲಿರುತ್ತದೆ. ಈ ಅರ್ಥದಲ್ಲಿ ಈ ಕಥೆಗಳು ಸೂಫಿಪ್ರೇಮದ ಲೌಕಿಕ ನಿದರ್ಶನಗಳಂತೆ ತೋರುತ್ತವೆ. ವೈಕಂ ಒಬ್ಬ ಪ್ರತಿಭಾವಂತ ಸ್ಟೋರಿಟೆಲರ್. ಅವರಿಗೆ ಕತೆ ಹೇಳುವುದಕ್ಕೆ ಘನವಾದ ವಿಷಯವೇ ಆಗಬೇಕಿಲ್ಲ. ಲೋಕದ ಸಣ್ಣಸಂಗತಿಗಳೂ ಸಾಕು. ಒಬ್ಬ ವ್ಯಕ್ತಿ ದಿನಚರಿಯು ಸಾಮಾನ್ಯವಾದ ವರದಿಯನ್ನೂ ಕಥೆಯನ್ನಾಗಿ ರೂಪಾಂತರಿಸಬಲ್ಲರು. ಭಗವದ್ಗೀತೆ ಕುರಿತ ಕತೆ ಇಂತಹುದು. ಪಾತ್ರಗಳ ಮಾತುಕತೆಯಲ್ಲೇ ಕತೆಯನ್ನು ಬೆಳೆಸುವ ಅಪೂರ್ವ ಕೌಶಲ್ಯವೂ ಅವರಲ್ಲಿದೆ. ದೊಡ್ಡಪ್ರತಿಭೆಯೊಂದು ಕಥನದ ಕ್ಷೇತ್ರದಲ್ಲಿ ಲೀಲೆಯಲ್ಲಿ ಮಾಡಿದ ಪ್ರಯೋಗಗಳಂತೆ ಅವರ ಕತೆಗಳಿವೆ. ಈ ಲೀಲೆಯು ಕೆಲವೊಮ್ಮೆ ಅವಕ್ಕೆ ವಿಲಕ್ಷಣ ರೂಪವನ್ನು ಕೊಟ್ಟುಬಿಡುತ್ತವೆ.

ಸಣ್ಣಕತೆಯ ರೂಪವನ್ನು ಸೃಜನಶೀಲ ಸ್ವೇಚ್ಛೆಯಿಂದ ಹೀಗೆ ಒಡೆದು ಮತ್ತೆಕಟ್ಟಿದ ಲೇಖಕರು ಕಡಿಮೆ. ಕೆಲವು ಕತೆಗಳು ತುಂಬ ಜಾಳಾಗಿದ್ದು, ತಮ್ಮ ವಿನೋದ ಪ್ರಜ್ಞೆಯಿಂದ ಮಾತ್ರ ಬದುಕಿರುವಂತೆ ತೋರುತ್ತವೆ. ಗಾಂಧಿ ಹಾಗೂ ಟಾಲ್‌ಸ್ಟಾಯ್ ಅವರಿಗೆ ನೊಬೆಲ್ ಕೊಡದೆ ಹೋದುದಕ್ಕೆ ಈಗಲೂ ಪ್ರಶಸ್ತಿ ಸಮಿತಿ ಪರಿತಪಿಸುತ್ತಿದೆಯಂತೆ. ಲಂಕೇಶ್, ವೈಕಂ, ತೇಜಸ್ವಿ ಮುಂತಾದ ಅನೇಕ ಭಾರತೀಯ ಲೇಖಕರಿಗೂ ಜ್ಞಾನಪೀಠ ಪ್ರಶಸ್ತಿ ಬರಲಿಲ್ಲ. ಆದರೆ ಇವರು ತಮ್ಮ ಉಜ್ವಲವಾದ ಬರಹದಿಂದಲೇ ಓದುಗಲೋಕದಲ್ಲಿ ಉಳಿದಿದ್ದಾರೆ. ದೇಶಭಾಷೆಗಳಲ್ಲಿ ಬರೆದ ಕಾರಣದಿಂದಲೇ ದಕ್ಷಿಣ ಭಾರತದ ಎಷ್ಟೊ ದೊಡ್ಡ ಲೇಖಕರು ದೇಶದ ಲೇಖಕರಾಗದೆ ಉಳಿದುಬಿಡುವ ದುರಂತವೂ ಇದೆ. ಆದರೆ ಈ ತೊಡಕನ್ನೂ ದಾಟಿ ವೈಕಂ ಭಾರತೀಯ ಭಾಷೆಗಳಿಗೆ ಹೋದವರಲ್ಲಿ ಒಬ್ಬರು. ವೈಕಂ ಅವರನ್ನು ವೆಂಕಟರಾಜ ಪುಣಿಂಚಿತ್ತಾಯ, ಬಿ.ಕೆ. ತಿಮ್ಮಪ್ಪ, ಕೆ.ಎಸ್. ಕರುಣಾಕರನ್, ಕೆ. ಕೆ. ಗಂಗಾಧರ್, ಕೆ. ಕೆ. ನಾಯರ್, ಎಂ. ಗಂಗಾಧರಯ್ಯ, ಸುನೈಫ್ ಹಾಗೂ ಮೋಹನ್ ಕುಂಟಾರ್ ಮುಂತಾದವರು ಕನ್ನಡಕ್ಕೆ ತಂದಿದ್ದಾರೆ. ಅವರಿಗೆ ಕನ್ನಡಿಗರ ಕೃತಜ್ಞತೆ ಸದಾ ಸಲ್ಲಬೇಕು.

Writer - ರಹಮತ್ ತರೀಕೆರೆ

contributor

Editor - ರಹಮತ್ ತರೀಕೆರೆ

contributor

Similar News