ಮಾಲಿಕ್: ಸಾಮರಸ್ಯದ ಹೃದಯ ಸೀಳುವ ರಾಜಕೀಯದ ಗುಂಡು

Update: 2021-07-18 05:02 GMT

ಒಬ್ಬ ವ್ಯಕ್ತಿ ಭೂಗತ ಪಾತಕಿಯಾಗಲು ಕಾರಣಗಳೇನಿರಬಹುದು? ಸಾಮಾನ್ಯವಾಗಿ ಯಾವ ಕಾರಣಗಳು ಕೂಡ ಪಾತಕಿಯನ್ನು ಸಮರ್ಥಿಸಲಾರವು. ಆದರೆ ಸಿನೆಮಾಗಳಲ್ಲಿ ಹಲವು ಬಾರಿ ಪಾತಕ ನಿವಾರಣೆಗೆ ನಾಯಕನೇ ಕಾನೂನು ಕೈಗೆತ್ತಿಕೊಳ್ಳುವುದನ್ನು ತೋರಿಸಲಾಗುತ್ತದೆ. ‘ಮಾಲಿಕ್’ ಎನ್ನುವ ಈ ಚಿತ್ರ ಕೂಡ ಹೇಳುವುದು ಅಂತಹದ್ದೊಂದು ಕತೆ. ಆದರೆ ಇಲ್ಲಿರುವುದು ಕಮರ್ಷಿಯಲ್ ಚಿತ್ರಗಳ ಬಿಲ್ಡಪ್ ನಾಯಕನಲ್ಲ. ಪರಿಸ್ಥಿತಿಗೆ ಪೂರಕವಾಗಿ ಹುಟ್ಟಿಕೊಂಡವನು.

ಅಹಮದಲಿ ಸುಲೈಮಾನ್ ಎನ್ನುವ ವ್ಯಕ್ತಿಯೋರ್ವ ಹಜ್ ಯಾತ್ರೆಗೆ ಹೊರಡುವ ದೃಶ್ಯದೊಂದಿಗೆ ಚಿತ್ರ ಆರಂಭವಾಗುತ್ತದೆ. ವಿಮಾನ ನಿಲ್ದಾಣದಲ್ಲಿ ಟಾಡಾ ಕಾಯ್ದೆಯ ಅಡಿಯಲ್ಲಿ ಆತನನ್ನು ಪೊಲೀಸರು ಬಂಧಿಸುವ ಕುತೂಹಲಕಾರಿ ಘಟನೆಯ ಬಳಿಕ ಫ್ಲ್ಯಾಶ್ ಬ್ಯಾಕ್ ಸ್ಟೋರಿ ಆರಂಭವಾಗುತ್ತದೆ. ಆತ ಮಾಡಿರುವ ಅಪರಾಧ ಏನು? ಆ ಅಪರಾಧಕ್ಕೆ ಕಾರಣಗಳೇನು? ಬಂಧಿತನಾದ ಅಹಮದಲಿ ಸುಲೈಮಾನ್ ಪರಿಸ್ಥಿತಿ ಅಂತಿಮವಾಗಿ ಏನಾಗುತ್ತದೆ ಎನ್ನುವುದೇ ಕತೆಯ ಪ್ರಮುಖ ಅಂಶಗಳಾಗಿವೆ.
ಚಿತ್ರದ ನಾಯಕ ಫಹದ್ ಫಾಸಿಲ್ ಪ್ರೇಕ್ಷಕರ ನಿರೀಕ್ಷೆಗೆ ಪೂರಕವಾದ ನಟನೆ ನೀಡಿದ್ದಾರೆ. ವಿವಿಧ ಕಾಲಘಟ್ಟಗಳ ಸನ್ನಿವೇಶಗಳಿಗೆ ಅನುಗುಣವಾಗಿ ಬದಲಾಗುವ ಮುಖಭಾವ ಅದ್ಭುತವೆನಿಸುತ್ತದೆ. ಕಮರ್ಷಿಯಲ್ ಹೀರೋ ಎನ್ನುವ ನಾಯಕನ ಮೈಕಟ್ಟು, ಚೌಕಟ್ಟುಗಳನ್ನು ಅವರು ಎಂದೋ ದಾಟಿದ್ದಾರೆ. ಅವರಿಗೆ ಜೋಡಿಯಾಗಿ ನಟಿಸಿರುವ ನಿಮಿಷಾ ಸಜಯನ್ ಜೋಡಿ ಎನ್ನುವುದರಾಚೆ ತಮಗೂ ಒಂದು ಕ್ಯಾರೆಕ್ಟರ್ ಇರುವುದನ್ನು ಸಾಬೀತು ಪಡಿಸುವ ಅಭಿನಯ ಅವರದು.

 ಅನ್ವರ್ ಅಲಿ ಹೆಸರಿನ ಐಎಎಸ್ ಅಧಿಕಾರಿಯಾಗಿ ನಟಿಸಿರುವ ಜೋಜು ಜಾರ್ಜ್, ಅಬೂಬಕರ್ ಎನ್ನುವ ರಾಜಕಾರಣಿಯ ಪಾತ್ರ ನಿರ್ವಹಿಸಿರುವ ದಿಲೀಶ್ ಪೋತನ್, ಡೇವಿಡ್ ಪಾತ್ರದಲ್ಲಿನ ವಿನಯ್ ಫೋರ್ಟ್, ಪೊಲೀಸ್ ಆಗಿ ಕಾಣಿಸಿಕೊಂಡಿರುವ ಇಂದ್ರನ್ಸ್ ಮೊದಲಾದ ಎಲ್ಲರಿಗೂ ತಮ್ಮ ವೃತ್ತಿ ಜೀವನದ ಶ್ರೇಷ್ಠ ಪಾತ್ರಗಳಲ್ಲೊಂದನ್ನು ಈ ಚಿತ್ರ ನೀಡಿದೆ ಎಂದೇ ಹೇಳಬಹುದು.

ಎಸೆದ ಎಂಜಲಿನೆಲೆಗೆ ಬಾಯಿ ಹಾಕುವ ನಾಯಿಗಳಿಂದ ಆರಂಭವಾಗುವ ದೃಶ್ಯ ಅಹಮದಲಿ ಸುಲೈಮಾನ್ ಮನೆಯೊಳಗೆ ನುಗ್ಗಿ ಒಂದು ಸುತ್ತಿನ ನೋಟ ಮುಗಿಸುವಲ್ಲಿ ಧರ್ಮದ ಹೆಸರಿನಲ್ಲಿ ಸಂಪತ್ತಿನ ಎಂಜಲಿಗೆ ಬಾಯಿ ಹಾಕುವ ರಾಜಕಾರಣದ ಮುಖ ಅನಾವರಣಗೊಳಿಸಿರುತ್ತದೆ. ಹನ್ನೆರಡು ನಿಮಿಷಗಳ ನಿರಂತರ ಛಾಯಾಗ್ರಹಣದೊಂದಿಗೆ ನಮ್ಮನ್ನು ಚಿತ್ರದೊಳಗಿಳಿಸುವ ಛಾಯಾಗ್ರಾಹಕ ಸಾನು ವರ್ಗೀಸ್ ಹೆಸರನ್ನು ಇಲ್ಲಿ ಉಲ್ಲೇಖಿಸಲೇಬೇಕು.

ಎರಡು ಗಂಟೆ ನಲವತ್ತು ನಿಮಿಷ ಕಾಲಾವಧಿಯ ಈ ಸಿನೆಮಾ ಒಂದು ವೇಳೆ ಚಿತ್ರಮಂದಿರದಲ್ಲಿ ತೆರೆಕಂಡಿದ್ದರೆ ಅದರ ನಿರಂತರವಾದ ನೋಟ ನೀಡಬಹುದಾದ ಅನುಭವವೇ ಅದ್ಭುತ. ಆದರೆ ಪ್ರಸ್ತುತ ಒಟಿಟಿಯಲ್ಲಿ ಚಿತ್ರ ನೋಡುವವರು ಕೈಗಳಲ್ಲಿ ರಿಮೋಟ್ ಹಿಡಿದುಕೊಂಡು ಫಾರ್ವರ್ಡ್ ಮಾಡಿದರೆ ರಸಭಂಗ ಖಚಿತ. ಮತ್ತೆ ಕಾಲಾವಧಿಯನ್ನು ಖಂಡಿಸಿ ಅರ್ಥವಿಲ್ಲ. ಯಾಕೆಂದರೆ ಸ್ವತಃ ಸಂಕಲನಕಾರರೂ ಆಗಿರುವ ನಿರ್ದೇಶಕ ಮಹೇಶ್ ನಾರಾಯಣ್ ಚಿತ್ರದ ಮೂಲಕ ಪ್ರೇಕ್ಷಕರು ನೋಡಬೇಕಾಗಿರುವ ದೃಶ್ಯಗಳನ್ನಷ್ಟೇ ನೀಡಿರುವುದರಲ್ಲಿ ಸಂದೇಹವಿಲ್ಲ.

ಈ ಚಿತ್ರದ ಮೇಲಿರುವ ಇನ್ನೊಂದು ಬಹುದೊಡ್ಡ ಆರೋಪ ಇದು ಅಮೆರಿಕನ್ ಚಿತ್ರ ‘ದಿ ಗಾಡ್ ಫಾದರ್’ ಮತ್ತು ಅದನ್ನು ಆಧರಿಸಿ ಮಣಿರತ್ನಂ ನಿರ್ದೇಶಿಸಿದ ‘ನಾಯಕನ್’ ಸಿನೆಮಾದ ಛಾಯೆ ಇದರಲ್ಲಿ ದಟ್ಟವಾಗಿದೆ ಎನ್ನುವುದಾಗಿದೆ. ಅದೇ ರೀತಿ ಬಾಲಿವುಡ್‌ನ ‘ಗ್ಯಾಂಗ್ಸ್ ಆಫ್ ವಸ್ಸೇಪುರ್’ ದೃಶ್ಯಗಳು ಕೂಡ ನುಸುಳಿದೆ ಎನ್ನುವುದು ಮತ್ತೊಂದು ಆರೋಪ. ಇವೆಲ್ಲದರ ಜೊತೆಗೆ ಕೇರಳದಲ್ಲಿ ನಡೆದ ನೈಜ ಘಟನೆಯೊಂದನ್ನು ಆಧಾರವಾಗಿಸಿ ಚಿತ್ರ ಮಾಡಲಾಗಿದೆ ಎಂದು ಮಲಯಾಳಿಗಳೆಲ್ಲರೂ ಒಪ್ಪುತ್ತಿದ್ದಾರೆ. ಆದರೆ ಘಟನೆಯಲ್ಲಿ ತಪ್ಪಿತಸ್ಥ ಸ್ಥಾನದಲ್ಲಿ ಇರಬೇಕಾದ ಪಕ್ಷ ಮತ್ತು ವ್ಯಕ್ತಿಗಳನ್ನು ಇಂದಿನ ರಾಜಕೀಯ ಹಿತಾಸ್ತಕಿಗೆ ಅನುಗುಣವಾಗಿ ಬದಲಾಯಿಸಲಾಗಿದೆ ಎನ್ನುವ ಆರೋಪವೂ ಚರ್ಚೆಯಲ್ಲಿದೆ.

ಒಟ್ಟಿನಲ್ಲಿ ಒಬ್ಬ ಸಾಮಾನ್ಯ ಪ್ರೇಕ್ಷಕನಂತೆ ಚಿತ್ರ ನೋಡಿದಾಗ ಸಂಪಾದನೆಯನ್ನಷ್ಟೇ ಗುರಿಯಾಗಿಸಿದ ರಾಜಕಾರಣಿಗಳು ಹೇಗೆ ಧರ್ಮವನ್ನು ಬಳಸಿಕೊಂಡು ಸಾಮಾಜಿಕ ಅಶಾಂತಿ ಸೃಷ್ಟಿಸಬಲ್ಲರು ಎನ್ನುವುದನ್ನು ಮನಮುಟ್ಟುವ ಹಾಗೆ ತೋರಿಸಿಕೊಟ್ಟಂತಹ ಚಿತ್ರ ಇದು.

ತಾರಾಗಣ: ಫಹದ್ ಫಾಸಿಲ್, ನಿಮಿಷಾ ಸಜಯನ್
ನಿರ್ದೇಶನ: ಮಹೇಶ್ ನಾರಾಯಣ್
ನಿರ್ಮಾಣ: ಆಂಟೊ ಜೋಸೆಫ್

Writer - ಶಶಿಕರ ಪಾತೂರು

contributor

Editor - ಶಶಿಕರ ಪಾತೂರು

contributor

Similar News