ಚಿಕ್ಕಮಗಳೂರು: ತುಂಬಿ ಹರಿಯುವ ನದಿ ದಾಟಲು ಸೇತುವೆ ಸೌಲಭ್ಯ ಮರೀಚಿಕೆ

Update: 2021-07-19 18:43 GMT

ಚಿಕ್ಕಮಗಳೂರು: ಮಳೆಗಾಲದ ಹಿನ್ನೆಲೆಯಲ್ಲಿ ಸದ್ಯ ಕಾಫಿನಾಡಿನಲ್ಲಿ ವರ್ಷಧಾರೆ ಬಿರುಸುಗೊಂಡಿದೆ. ನದಿಗಳು, ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿವೆ. ಆದರೆ, ಜಿಲ್ಲೆಯ ಮಲೆನಾಡು ಭಾಗದಲ್ಲಿರುವ ನೂರಾರು ಕುಗ್ರಾಮಗಳ ವ್ಯಾಪ್ತಿಯಲ್ಲಿ ಹಳ್ಳಕೊಳ್ಳಗಳನ್ನು ದಾಟಲು ಇಂದಿಗೂ ಸುಸಜ್ಜಿತ ಸೇತುವೆ ಸೌಲಭ್ಯಗಳು ಮರೀಚಿಕೆಯಾಗಿವೆ.

ಮೂಡಿಗೆರೆ ತಾಲೂಕಿನ ಮಾಗೋಡು ಸಮೀಪದ ಅರೇನೂರು ಗ್ರಾಮಸ್ಥರು ಗ್ರಾಮದಲ್ಲಿ ಹರಿಯುವ ಹಳ್ಳವನ್ನು ಪ್ರಾಣದ ಹಂಗು ತೊರೆದು ದಾಟಬೇಕಾದ ಅನಿವಾರ್ಯ ಪರಿಸ್ಥಿತಿಯಲ್ಲಿದ್ದಾರೆ.

ಮೂಡಿಗೆರೆ ತಾಲೂಕಿನ ಮಾಗೋಡು ಗ್ರಾಮದಿಂದ ಅರೇನೂರು ಗ್ರಾಮ ತಲುಪುಲು ಯಾವುದೇ ಕಚ್ಛಾ ರಸ್ತೆಯಾಗಲೀ, ಕಾಂಕ್ರಿಟ್ ರಸ್ತೆಯಾಗಲೀ ಇಲ್ಲ. ಅರೇನೂರು ಗ್ರಾಮಸ್ಥರು, ಶಾಲಾ ಕಾಲೇಜು ವಿದ್ಯಾರ್ಥಿಗಳು ಮಾಗೋಡು ಮೂಲಕ ಮೂಡಿಗೆರೆ, ಆಲ್ದೂರು, ಚಿಕ್ಕಮಗಳೂರು ನಗರಕ್ಕೆ ಆಗಮಿಸಲು ಗ್ರಾಮ ಸಮೀಪದಲ್ಲಿ ಹರಿಯುವ ಹಳ್ಳವೊಂದನ್ನು ದಾಟಿ ಬರಬೇಕಿದೆ. ಬೇಸಿಗೆಯಲ್ಲಿ ಹಳ್ಳದಲ್ಲಿ ನೀರು ಕಡಿಮೆಯಾಗುವುದರಿಂದ ಹಳ್ಳದಲ್ಲಿ ನಡೆದುಕೊಂಡು ಬರುವ ಗ್ರಾಮಸ್ಥರು ಮಳೆಗಾಲ ಆರಂಭವಾಗುತ್ತಿದ್ದಂತೆ ನದಿ ದಾಟಲು ಸರ್ಕಸ್ ಮಾಡುವುದು ಅನಿವಾರ್ಯವಾಗಿದೆ.

ಅರೇನೂರು ಗ್ರಾಮದಿಂದ ಮಾಗೋಡು ಗ್ರಾಮ ಸಂಪರ್ಕ ರಸ್ತೆಯ ಮಧ್ಯೆ ಆನೆಬಿದ್ದ ಹಳ್ಳ ಎಂಬ ಸಣ್ಣ ನದಿ ಹರಿಯುತ್ತಿದ್ದು, ಈ ಹಳ್ಳ ಮಳೆಗಾಲದಲ್ಲಿ ತುಂಬಿ ಹರಿಯುತ್ತದೆ. ಈ ವೇಳೆ ಗ್ರಾಮದ ಜನರು, ಶಾಲಾ ಕಾಲೇಜು ವಿದ್ಯಾರ್ಥಿಗಳು ಹಳ್ಳಕ್ಕೆ ಅಡ್ಡಲಾಗಿ ಹಾಕಿರುವ ಮರದ ದಿಮ್ಮಿಯೊಂದರಿಂದ ಮಾಡಿರುವ ಕಾಲು ಸಂಕದ ಮೇಲೆ ಪ್ರಾಣದ ಹಂಗು ತೊರೆದು ಸರ್ಕಸ್ ಮಾಡುತ್ತಾ ನದಿ ದಾಟುತ್ತಿದ್ದಾರೆ. ಅರೇನೂರು ಗ್ರಾಮದಲ್ಲಿ ನೂರಾರು ಕುಟುಂಬಗಳು ವಾಸಿಸುತ್ತಿದ್ದು, ಈ ಪೈಕಿ ರೈತರು, ಕೂಲಿ ಕಾರ್ಮಿಕರು, ಶಾಲಾ ಕಾಲೇಜು ವಿದ್ಯಾರ್ಥಿಗಳು ಪ್ರತಿದಿನ ಇದೇ ಮರದ ದಿಮ್ಮಿಯ ಮೇಲೆ ನಡೆದು ಹೊರ ಜಗತ್ತಿನ ಸಂಪರ್ಕ ಸಾಧಿಸಬೇಕಿದೆ.

ಮಳೆಗಾಲದಲ್ಲಿ ಈ ಮರದ ದಿಮ್ಮಿ ಮಳೆ ನೀರಿನಿಂದ ಪಾಚಿಕಟ್ಟಿಕೊಳ್ಳುತ್ತಿದ್ದು, ದಿಮ್ಮಿ ಮೇಲೆ ನಡೆದು ನದಿ ದಾಟುವವರು ಕೊಂಚ ಎಚ್ಚರ ತಪ್ಪಿದರೂ ಅಪಾಯ ಕಟ್ಟಿಟ್ಟಬುತ್ತಿಯಾಗಿದೆ. ಮರದ ದಿಮ್ಮಿ ಶಿಥಿಲಾವಸ್ಥೆಯಲ್ಲಿರುವುದರಿಂದ ಗ್ರಾಮಸ್ಥರು ಪ್ರಾಣದ ಭೀತಿಯಿಂದಲೇ ಕಾಲು ಸಂಕದ ಮೇಲೆ ಒಬ್ಬರ ಕೈ ಮತ್ತೊಬ್ಬರು ಹಿಡಿದುಕೊಂಡು ನದಿ ದಾಟುವ ದೃಶ್ಯ ಮನಕಲುಕುತ್ತಿದ್ದು, ಅರೇನೂರು ಗ್ರಾಮದಿಂದ ಮಾಗೋಡು ಗ್ರಾಮಕ್ಕೆ ಬರಲು ಬೇರೆ ದಾರಿ ಇಲ್ಲದ ಪರಿಣಾಮ ಅಪಾಯವನ್ನು ಲೆಕ್ಕಿಸದೇ ಕಾಲುಸಂಕದ ಮೇಲೆ ನದಿ ದಾಟಬೇಕಾಗಿರುದು ಇಲ್ಲಿನ ನಿವಾಸಿಗಳಿಗೆ ಅನಿವಾರ್ಯವಾಗಿದೆ.

ಅರೇನೂರು ಗ್ರಾಮಸ್ಥರು ಕಳೆದ 7 ದಶಕಗಳಿಂದ ಈ ನದಿ ದಾಟಲು ಕಾಲು ಸಂಕವನ್ನೇ ಬಳಸುತ್ತಿದ್ದು, ಸಂಕದಿಂದ ಹಳ್ಳಕ್ಕೆ ಬಿದ್ದು ಕೆಲವರು ಪ್ರಾಣವನ್ನೂ ಕಳೆದುಕೊಂಡಿದ್ದಾರೆ. ಈ ಹಳ್ಳ ದಾಟಲು ಸೇತುವೆಯೊಂದನ್ನು ನಿರ್ಮಿಸಿಕೊಡುವಂತೆ ಅನೇಕ ಬಾರಿ ಜನಪ್ರತಿನಿಧಿಗಳು ಸೇರಿದಂತೆ ಸಂಬಂಧಿಸಿದ ಇಲಾಖಾಧಿಕಾರಿಗಳಿಗೆ ಗ್ರಾಮಸ್ಥರು ಮನವಿ ಮಾಡಿದ್ದೇವೆ. ಆದರೆ, ಇದುವರೆಗೂ ಗ್ರಾಮಸ್ಥರ ಸೇತುವೆಯ ಕನಸು ನನಸಾಗಿಲ್ಲ ಎಂದು ಆರೋಪಿಸಿದ್ದಾರೆ. ಇನ್ನಾದರೂ ಸಂಬಂಧಿಸಿದವರು ಅರೇನೂರು ಗ್ರಾಮಸ್ಥರ ಈ ಸಮಸ್ಯೆಗೆ ಸ್ಪಂದಿಸುತ್ತಾರೆಯೇ ಎಂಬುದನ್ನು ಕಾದು ನೋಡಬೇಕಿದೆ.

ಅರೇನೂರು ಸೇರಿದಂತೆ ಇನ್ನೂ ಕೆಲವು ಗ್ರಾಮಗಳ ಜನರು ಆನೆಬಿದ್ದ ಹಳ್ಳ ದಾಟಿ ಮಾಗೋಡು ಮೂಲಕ ಹೊರ ಜಗತ್ತಿನ ಸಂಪರ್ಕಕ್ಕೆ ಬರಬೇಕಿದೆ. ಅರೇನೂರು ಬಳಿ ಇರುವ ನದಿ ದಾಟಿದರೆ ಕೇವಲ 1 ಕಿ.ಮೀ. ಮೂಲಕ ಮಾಗೋಡಿಗೆ ಬರಬಹುದು. ಆದರೆ, ಈ ನದಿ ದಾಟಲು ಸೇತುವೆ ಸೌಲಭ್ಯ ಇಲ್ಲ. ಪರಿಣಾಮ ಗ್ರಾಮದ ಜನರು ಕಾಲುಸಂಕದ ಮೂಲಕ ಪ್ರಾಣ ಭೀತಿಯಲ್ಲೇ ನದಿ ದಾಟಬೇಕಿದೆ. ಕಾಲು ಸಂಕದ ಭೀತಿಯಿಂದ ಗ್ರಾಮಸ್ಥರು 15 ಕಿ.ಮೀ. ಸುತ್ತಿ ಬಳಸಿ ಮಾಗೋಡು ತಲುಪಬೇಕಿದೆ. ಸರಕಾರ ಈ ನದಿ ದಾಟಲು ಸುಸಜ್ಜಿತ ಸೇತುವೆ ನಿರ್ಮಿಸಿಕೊಡಬೇಕು.

-ಜಗದೀಶ್, ಅರೇನೂರು ನಿವಾಸಿ

ಅರೇನೂರು ಗ್ರಾಮದಿಂದ ಮಾಗೋಡು ಗ್ರಾಮದ ಮೂಲಕ ನಾವು ಆಲ್ದೂರು, ಮೂಡಿಗೆರೆ, ಚಿಕ್ಕಮಗಳೂರು, ಬಾಳೆಹೊನ್ನೂರು ಪಟ್ಟಣಗಳಿಗೆ ಹೋಗಬೇಕಿದೆ. ಮಳೆಗಾಲದಲ್ಲಿ ನದಿ ತುಂಬಿ ಹರಿಯುತ್ತಿದ್ದು, ನದಿ ದಾಟಲು ಮರದ ಕಾಲು ಸಂಕ ಬಳಸುತ್ತಿದ್ದೇವೆ. ಈ ಸಂಕ ಶಿಥಿಲಗೊಂಡಿದ್ದು, ನದಿ ದಾಟುವಾಗ ಮುರಿದು ಬೀಳುವ ಸಾಧ್ಯತೆ ಇದೆ. ಮಳೆಗಾಲದ 6 ತಿಂಗಳು ಈ ಗ್ರಾಮದ ಶಾಲಾ ಕಾಲೇಜು ಮಕ್ಕಳು ಕಾಲು ಸಂಕದ ಭೀತಿಯಿಂದ ಗ್ರಾಮಕ್ಕೆ ಬಾರದೇ ಸಂಬಂಧಿಕರ ಮನೆಯಲ್ಲಿ ಉಳಿದುಕೊಳ್ಳುತ್ತಾರೆ. ಸೇತುವೆ ನಿರ್ಮಿಸಿ ಕೊಡುವಂತೆ ಪ್ರತೀ ವರ್ಷ ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಮನವಿ ಮಾಡುತ್ತಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.

- ಡೇನಿಯಲ್, ಅರೆನೂರು ಗ್ರಾಮದ ಕೃಷಿಕ

Writer - ಕೆ.ಎಲ್. ಶಿವು

contributor

Editor - ಕೆ.ಎಲ್. ಶಿವು

contributor

Similar News