ಹೊಸ ಶಿಕ್ಷಣ ನೀತಿಯಿಂದ ಯಾರಿಗೆ ಲಾಭ?
ಉನ್ನತ ಶಿಕ್ಷಣವನ್ನು ಸಂಪೂರ್ಣವಾಗಿ ಭಾರೀ ಕಾರ್ಪೊರೇಟ್‌ಗಳಿಗೆ ಬಿಟ್ಟುಕೊಡುವ ಮೂಲಕ ದೇಶದ ಮಧ್ಯಮ ವರ್ಗದ ಕುಟುಂಬಗಳನ್ನು ಈ ನೀತಿಯು ನೇರವಾಗಿ ಗುರಿಮಾಡುತ್ತದೆ. ನಮ್ಮ ದೇಶದ ಜನಸಂಖ್ಯೆಯ ಶೇ. 31ರಷ್ಟು ಇದ್ದ ಮಧ್ಯಮವರ್ಗದ ಶಿಕ್ಷಣದ ಅಗತ್ಯವನ್ನು ಸರಕೀಕರಿಸಿ ಸಂಪೂರ್ಣವಾಗಿ ವಶಪಡಿಸಿಕೊಳ್ಳುವ ಉದ್ದೇಶವೇ ಪ್ರಧಾನವಾಗಿ ಈ ರಾಷ್ಟ್ರೀಯ ಶಿಕ್ಷಣ ನೀತಿಯದ್ದಾಗಿದೆ.
ಕಳೆದ 2020ರ ಜುಲೈ 29ರಂದು ಒಕ್ಕೂಟ ಸರಕಾರವಾದ ಪ್ರಧಾನಿ ಮೋದಿ ಮಂತ್ರಿಮಂಡಲ ಸದ್ದೇ ಇಲ್ಲದೆ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಅನುಮೋದಿಸಿತು. ಶಿಕ್ಷಣ ಕ್ಷೇತ್ರ ಸಾಂವಿಧಾನಿಕವಾಗಿ ರಾಜ್ಯಗಳ ಸಹವರ್ತಿ ಪಟ್ಟಿಯಲ್ಲಿ ಇದ್ದರೂ ಒಕ್ಕೂಟ ಸರಕಾರ ಏಕಪಕ್ಷೀಯವಾಗಿ ತನ್ನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರಾಜ್ಯಗಳ ಮೇಲೆ ಯಾವುದೇ ಚರ್ಚೆಗಳಿಗೆ ಅವಕಾಶ ನೀಡದೆ ಜಾರಿಗೊಳಿಸಿತು. ತಮಿಳುನಾಡು ರಾಜ್ಯ ಮಾತ್ರ ಹೆಚ್ಚು ಬಲವಾಗಿ ಒಕ್ಕೂಟ ಸರಕಾರದ ಈ ನಡೆಯನ್ನು ವಿರೋಧಿಸಿ ಈ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೊಳಿಸುವುದಿಲ್ಲ ಎಂದು ಹೇಳಿದ್ದರೆ ಪಶ್ಚಿಮ ಬಂಗಾಳ, ರಾಜಸ್ಥಾನ, ಛತ್ತೀಸ್‌ಗಡ, ದಿಲ್ಲಿ ಸರಕಾರಗಳು ಕೂಡ ಈ ನೀತಿಯನ್ನು ವಿರೋಧಿಸುವುದಾಗಿ ಹೇಳಿವೆ. ಕೇರಳ ಸರಕಾರ ಈ ನೀತಿಯ ಕೆಲವು ವಿಚಾರಗಳ ಬಗ್ಗೆ ಭಿನ್ನಾಭಿಪ್ರಾಯಗಳಿದ್ದರೂ ಜಾರಿಮಾಡುವುದಾಗಿ ಹೇಳಿಕೊಂಡಿದೆ. ಬಿಜೆಪಿಯೇತರ ಸರಕಾರಗಳಿರುವ ಇತರ ಆಂಧ್ರ, ತೆಲಂಗಾಣ, ಮಹಾರಾಷ್ಟ್ರ, ಒಡಿಶಾದಂತಹ ರಾಜ್ಯಗಳು ಈ ಬಗ್ಗೆ ತುಟಿಬಿಚ್ಚಿದ ವರದಿಗಳಿಲ್ಲ. ಒಟ್ಟಿನಲ್ಲಿ ಬಹುತೇಕ ರಾಜ್ಯ ಸರಕಾರಗಳು ಈ ನೀತಿಯನ್ನು ಜಾರಿಮಾಡಲು ಹೊರಟಿವೆ. ಮತ್ತೊಂದು ಮುಖ್ಯವಾದ ವಿಚಾರವೆಂದರೆ ಈ ನೀತಿಯ ಕರಡನ್ನು ಸಾರ್ವಜನಿಕ ಚರ್ಚೆಗಾಗಲೀ, ಸಂಸತ್ತಿನ ಚರ್ಚೆಗಾಗಲೀ ನೀಡಿರಲಿಲ್ಲ. ಕನಿಷ್ಠ ಮಂತ್ರಿಮಂಡಲದಲ್ಲಿಯಾದರೂ ಇದರ ಕರಡಿನ ಚರ್ಚೆ ನಡೆದಿರುವ ಭರವಸೆ ಕೂಡ ಇಲ್ಲ. ಕೊರೋನ ನೆಪದಲ್ಲಿ ದೇಶದ ಜನಸಾಮಾನ್ಯರನ್ನು ತೀವ್ರ ರೀತಿಯ ಆತಂಕ ಹಾಗೂ ಗೊಂದಲಗಳಿಗೆ ದೂಡಿ, ನಿರ್ಬಂಧಗಳಡಿ ಇಟ್ಟಿರುವ ಸಂದರ್ಭದಲ್ಲೇ ರಾಷ್ಟೀಯ ಶಿಕ್ಷಣ ನೀತಿಯಂತಹ ಇಡೀ ದೇಶದ ಜನಸಾಮಾನ್ಯರಿಗೆ ಅನ್ವಯವಾಗುವ ನೀತಿಗಳನ್ನು ಹೇರಲಾಗುತ್ತಿದೆ.
ಇದಲ್ಲದೆ ಕೊರೋನ ಸಂದರ್ಭದಲ್ಲೇ ಕೃಷಿ ಕಾಯ್ದೆಗಳ ತಿದ್ದುಪಡಿಗಳು, ಸಾರ್ವಜನಿಕ ಕ್ಷೇತ್ರಗಳ ಅಪಹೂಡಿಕೆ, ರೈಲು ಸೇವೆಗಳ ಕಾರ್ಪೊರೇಟೀಕರಣ ಬ್ಯಾಂಕುಗಳನ್ನು ಪುನರ್ ಸಂಘಟಿಸುವುದು, ವಿದ್ಯುತ್ ಕ್ಷೇತ್ರದ ಸಂಪೂರ್ಣ ಕಾರ್ಪೊರೇಟೀಕರಣ, ಸಂರಕ್ಷಿತ ಅರಣ್ಯ ಪ್ರದೇಶಗಳ ಕಾರ್ಪೊರೇಟೀಕರಣ, ಭಾರೀ ಕಾರ್ಪೊರೇಟ್‌ಗಳ ಸಾವಿರಾರು ಕೋಟಿ ರೂಪಾಯಿ ಸಾಲಗಳನ್ನು ರಿಟ್ಟನ್ ಆಫ್ (written off) ಹೆಸರಿನಲ್ಲಿ ಮನ್ನಾ ಮಾಡುವುದು ಮೊದಲಾದವನ್ನು ಮಾಡಲಾಗಿದೆ. ಇದೀಗ ವಿಮಾ ಕ್ಷೇತ್ರವನ್ನು ಸಂಪೂರ್ಣ ಕಾರ್ಪೊರೇಟೀಕರಿಸುವ ತೀರ್ಮಾನಗಳು ಹೊರಬಿದ್ದಿವೆ ಎಂಬುದನ್ನು ನಾವು ಸೂಕ್ಷ್ಮವಾಗಿ ಗಮನಿಸಬೇಕಾಗಿದೆ. ಇದೇ ವೇಳೆಯಲ್ಲೇ ಅದಾನಿಗೆ ದೇಶದ ಹಲವಾರು ಬಂದರುಗಳು ಹಾಗೂ ವಿಮಾನ ನಿಲ್ದಾಣಗಳನ್ನು ಕೂಡ ಹಸ್ತಾಂತರಿಸಲಾಗಿದೆ. ಈ ಪಟ್ಟಿಗೆ ಇನ್ನೂ ಹಲವಾರಿವೆ. ‘ರಾಷ್ಟ್ರೀಯ ಶಿಕ್ಷಣ ನೀತಿ 2020’ರ ಜಾರಿ ಕೂಡ ಮೇಲಿನ ಎಲ್ಲಾ ಪ್ರಕ್ರಿಯೆಗಳ ಭಾಗವೇ ಆಗಿದೆ ಎನ್ನುವುದನ್ನೂ ಗಮನಿಸಬೇಕಿದೆ. ಒಟ್ಟಾರೆಯಾಗಿ ಇವೆಲ್ಲವೂ ದೇಶದ ಎಲ್ಲಾ ರಂಗಗಳನ್ನು ಸಂಪೂರ್ಣವಾಗಿ ಜಾಗತಿಕವಾಗಿ ಭಾರೀ ಕಾರ್ಪೊರೇಟ್‌ಗಳಿಗೆ ಕಾನೂನಾತ್ಮಕವಾಗಿಯೇ ಒಪ್ಪಿಸುವ ನಡೆಗಳೇ ಆಗಿವೆ.
ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಒಕ್ಕೂಟ ಸರಕಾರದ ಸಂಪುಟ ಅನುಮೋದಿಸುವ ಒಂದು ತಿಂಗಳ ಹಿಂದೆ ಮಾನವ ಸಂಪನ್ಮೂಲ ಸಚಿವಾಲಯವು ಪೂರ್ವ ಪ್ರಾಥಮಿಕದಿಂದ ಹಿಡಿದು ಹನ್ನೆರಡನೇ ತರಗತಿಯವರೆಗಿನ ಶಾಲಾ ಶಿಕ್ಷಣದ ಕುರಿತಾದ ವಿಶ್ವಬ್ಯಾಂಕಿನ ಸಾಲವೊಂದನ್ನು ಅಂತಿಮಗೊಳಿಸಿತ್ತು. ಇದು ಜಾಗತೀಕರಣದ ಭಾಗವಾಗಿ ನಮ್ಮಂತಹ ದೇಶಗಳ ಎಲ್ಲಾ ಕ್ಷೇತ್ರಗಳನ್ನು ಸಂಪೂರ್ಣವಾಗಿ ಖಾಸಗೀಕರಿಸುವ ಯೋಜನೆಗಳ ವಿಶ್ವಬ್ಯಾಂಕಿನ ಮದ್ಯಪ್ರವೇಶಗಳ ಭಾಗವಾಗಿದೆ. ಶಿಕ್ಷಣ ಕ್ಷೇತ್ರದಲ್ಲಿ ವಿಶ್ವಬ್ಯಾಂಕಿನ ಯೋಜನೆಗಳು ಜಾರಿಗೊಳ್ಳಲು ಆರಂಭವಾಗಿ ಈಗಾಗಲೇ ಮೂರುದಶಕಗಳಿಗೂ ಹೆಚ್ಚು ಕಾಲವಾಗಿದೆ. ಈಗಿನದು ಅದರ ಮೂರನೇ ಮತ್ತು ಅಂತಿಮ ಮಧ್ಯಪ್ರವೇಶದ ಪ್ರಕ್ರಿಯೆಗಳನ್ನು ತೀರ್ಮಾನಿಸುವ ಸಾಲವಾಗಿದೆ. ಇದನ್ನು ಸ್ಟಾರ್ಸ್ (ಬಲಗೊಳಿಸುವುದು-ಬೋಧಿಸುವುದು -ಕಲಿಯುವುದು ಮತ್ತು ರಾಜ್ಯಗಳಿಗೆ ಫಲಿತಾಂಶಗಳು) (STARS; strenghthening- teaching-learning and results for states) ಎಂದು ಹೇಳಲಾಗುತ್ತಿದೆ.
ಶಿಕ್ಷಣ ರಂಗದಲ್ಲಿನ ವಿಶ್ವಬ್ಯಾಂಕಿನ ಈ ಹಿಂದಿನ ಎರಡು ಮಧ್ಯಪ್ರವೇಶಗಳನ್ನು 1993ರಿಂದ 2002ರವರೆಗಿನ ಡಿಪಿಇಪಿ (ಜಿಲ್ಲಾ ಪ್ರಾಥಮಿಕ ಶಿಕ್ಷಣ ಕಾರ್ಯಕ್ರಮ) ಮತ್ತು 2002ರಿಂದ ‘ಸರ್ವಶಿಕ್ಷಾ ಅಭಿಯಾನ್’ ಎಂದು ಕರೆಯಲಾಗಿತ್ತು. ಇದರಲ್ಲಿ ಸರಕಾರೇತರ ಸಂಘಟನೆಗಳನ್ನು ತೊಡಗಿಸಿಕೊಳ್ಳಲಾಗಿತ್ತು. ಎಡರಾಜಕೀಯ ಪಕ್ಷಗಳ ಕಾರ್ಯಕರ್ತರಲ್ಲಿ ಹಲವರು ಇದರಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದರು. ಈ ಅವಧಿಯಲ್ಲಿ ಸರಕಾರಿ ಶಾಲೆಗಳನ್ನು ನಿಷ್ಕ್ರಿಯಗೊಳಿಸುವ ಕಾರ್ಯಗಳೂ ಆರಂಭವಾಗಿದ್ದವು. ನಂತರ ‘ಶಿಕ್ಷಣದ ಹಕ್ಕು’ ಎಂಬ ಕಾಯ್ದೆಯಡಿ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲೂ ಶೇ. ಇಪ್ಪತ್ತೈದರಷ್ಟು ಅವಕಾಶಗಳು ಉಚಿತವಾಗಿ ಕೊಡಬೇಕು ಎಂಬ ಕಾನೂನು ಕೂಡ ಶಿಕ್ಷಣ ರಂಗದ ಖಾಸಗೀಕರಣವನ್ನು ಜನಸಾಮಾನ್ಯರು ಸ್ವಾಗತಿಸಿ ಒಪ್ಪಿಕೊಳ್ಳುವಂತೆ ಮಾಡುವ ಒಂದು ನಡೆಯಾಗಿತ್ತು. ಹಾಗಾಗಿಯೇ ಶಿಕ್ಷಣದ ಹಕ್ಕಿನಡಿ ಜನಸಾಮಾನ್ಯರಿಗೆ ಅವಕಾಶಗಳು ಹೇಳಿದಂತಹ ರೀತಿಯಲ್ಲಿ ಸಿಗಲಿಲ್ಲ. ಹಾಗೆಯೇ ಅವಕಾಶ ಪಡೆದವರಲ್ಲಿ ಬಹುತೇಕರು ಅರ್ಧದಲ್ಲೇ ಶಿಕ್ಷಣದಿಂದಲೇ ಹೊರಬರಬೇಕಾದ ಪರಿಸ್ಥಿತಿ ಸೃಷ್ಟಿಯಾಯಿತು. ಹಲವು ವಿದ್ಯಾರ್ಥಿಗಳ ಆತ್ಮಹತ್ಯೆಗಳಿಗೂ ಕಾರಣವಾಯಿತು. ಇದೀಗ ಐಐಟಿ, ಐಐಎಮ್‌ನಂತಹ ಶಿಕ್ಷಣ ಸಂಸ್ಥೆಗಳಲ್ಲಿ ಅರ್ಧಕ್ಕೇ ಹೊರಬೀಳುವ ವಿದ್ಯಾರ್ಥಿಗಳಲ್ಲಿ ಶೇ. 60ರಷ್ಟು ದಲಿತ, ದಮನಿತರಿಗೆ ಸೇರಿದವರಾಗಿದ್ದಾರೆ ಎಂಬ ವರದಿಗಳು ಹೊರಬಿದ್ದಿವೆ.
ಅಂದರೆ ಈಗ ಒಕ್ಕೂಟ ಸರಕಾರವು ಜಾರಿಮಾಡಿರುವ ರಾಷ್ಟ್ರೀಯ ಶಿಕ್ಷಣ ನೀತಿಯು ಮೂಲಭೂತವಾಗಿ ಕಳೆದ ಮೂರು ದಶಕಗಳಿಂದ ಪಾಲಿಸಿಕೊಂಡು ಬಂದ ಜಾಗತೀಕರಣ ನೀತಿಗಳ ಭಾಗವೇ ಆಗಿದೆ ಎಂಬುದು ಸ್ಪಷ್ಟ. ಆದರೆ ಈಗ ಸರಕಾರ ಇದು ಹಿಂದಿನ ಶಿಕ್ಷಣ ನೀತಿಗಳಿಗಿಂತಲೂ ಭಿನ್ನವಾಗಿದೆ. ಹಿಂದಿನದರಲ್ಲಿ ರಾಷ್ಟ್ರೀಯ ಚಿಂತನೆಗಳಿಗೆ ಅವಕಾಶ ಇರಲಿಲ್ಲ. ಕೌಶಲ್ಯ ಅಭಿವೃದ್ಧಿಯಾಗಲೀ, ಉದ್ಯೋಗ ಖಾತ್ರಿಯಾಗಲೀ ಇರಲಿಲ್ಲ. ಇದು ಆ ರೀತಿಯದಲ್ಲ ಕೌಶಲ್ಯ ಅಭಿವೃದ್ಧಿಯ ಜೊತೆಗೆ ಉದ್ಯೋಗಾಧಾರಿತವಾಗಿದೆ. ಬದುಕು ಕಟ್ಟಿಕೊಳ್ಳಲು ಸಹಕಾರಿಯಾಗಿದೆ. ದೇಶದ ಸನಾತನ ಮೌಲ್ಯಗಳು, ಸನಾತನ ಕೊಡುಗೆಗಳು ಮತ್ತವುಗಳ ಮೂಲ ರಾಷ್ಟ್ರೀಯ ಪುರುಷರ ಬಗ್ಗೆ ಅರಿವು ಮೂಡಿಸುವ, ಸನಾತನ ಪರಂಪರೆಯನ್ನು ಎತ್ತಿಹಿಡಿಯುವ ನೀತಿ ಇದು. ಇದು ದೇಶೀಯ ವಿಚಾರಗಳಿವೆ ಎಂದೆಲ್ಲಾ ತನ್ನ ಬೆಂಬಲಿಗರ ಮಧ್ಯೆ ಆಕರ್ಷಕವಾಗಿ ಪ್ರಚಾರ ಮಾಡುತ್ತಿದೆ. ಭಕ್ತ ವಲಯಗಳು ಇದನ್ನು ಪ್ರಾಯೋಜಿಸುತ್ತಲೂ ಇವೆ. ಆದರೆ ಈ ಪ್ರಚಾರ ಪೂರ್ಣ ಸತ್ಯವಲ್ಲ ಎನ್ನುವುದು ಈ ಶಿಕ್ಷಣ ನೀತಿಯ ಹಿನ್ನೆಲೆ ಮುನ್ನೆಲೆ ಗ್ರಹಿಸಿದಾಗ ಅರಿವಾಗುತ್ತದೆ. ಈ ಶಿಕ್ಷಣ ನೀತಿಯಲ್ಲಿ ಉದ್ಯೋಗ ಖಾತ್ರಿಯ ಪ್ರಸ್ತಾವ ಕೂಡ ಇಲ್ಲ. ಕೌಶಲ್ಯ ಅಭಿವೃದ್ಧಿಯೆಂಬುದು ಭಾರೀ ಕಾರ್ಪೊರೇಟ್‌ಗಳಿಗೆ ಅಗ್ಗದಲ್ಲಿ ಸಹಾಯಕರು, ಯಂತ್ರ ನಿರ್ವಾಹಕರು ಇತ್ಯಾದಿಗಳನ್ನು ಒದಗಿಸುವ ನೀತಿ ಇದು. ಅಲ್ಲದೆ, ಇದ್ದ ಉದ್ಯೋಗದ ಭದ್ರತೆಯನ್ನೂ ರದ್ದುಗೊಳಿಸಿರುವ ಕಾರ್ಮಿಕ ಕಾಯ್ದೆಗಳು ಈಗಾಗಲೇ ಜಾರಿಯಾಗಿವೆ ಎನ್ನುವುದನ್ನೂ ಗಮನಿಸಬೇಕು. ಇಂತಹ ಕೌಶಲವಿರುವ ನಿರುದ್ಯೋಗಿಗಳ ಮೀಸಲು ಪಡೆಗಳನ್ನು ಸಿದ್ಧಗೊಳಿಸಿ ಇಡುವ ಮೂಲಕ ಭಾರೀ ಕಾರ್ಪೊರೇಟ್‌ಗಳಿಗೆ ಅಂತಹವರ ಅವಶ್ಯಕತೆಗಳನ್ನು ಅಗ್ಗದಲ್ಲಿ ಪೂರೈಸುವುದನ್ನು ಮಾತ್ರ ಈ ನೀತಿಯು ಖಾತ್ರಿಗೊಳಿಸುವುದರಲ್ಲಿ ಅನುಮಾನವಿಲ್ಲ.
ಇದರಲ್ಲಿ ಸಂಘ ಪರಿವಾರದ ಕಾರ್ಯ ಸೂಚಿಯಾದ ಬ್ರಾಹ್ಮಣಶಾಹಿ ಹಿಂದೂಕರಣದ ಸನಾತನ ವಿಚಾರಗಳನ್ನು ಬಾಲವಾಡಿಯಿಂದಲೇ ಹಿಂದಿಗಿಂತಲೂ ದೊಡ್ಡಮಟ್ಟದಲ್ಲಿ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ತೂರಿಸಿರುವುದು ಹಾಗೂ ಸಂಘಪರಿವಾರದ ಸಂಘಟನೆಗಳು ಸರಕಾರೇತರ ಸಮಾಜಸೇವಾ ಸಂಘಟನೆಗಳ ಹೆಸರಿನಲ್ಲಿ ನೇರವಾಗಿ ಮತ್ತು ಪರೋಕ್ಷವಾಗಿ ಸಾರ್ವಜನಿಕ ಶಿಕ್ಷಣರಂಗದಲ್ಲಿ ಬಾಲವಾಡಿಯಿಂದಲೇ ತೊಡಗಲು ಹೆಚ್ಚಿನ ಪ್ರಮಾಣದಲ್ಲಿ ಅವಕಾಶ ಕಲ್ಪಿಸಿರುವುದು, ಹಿಂದಿ ಮತ್ತು ಸಂಸ್ಕೃತ ಭಾಷೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡುವಿಕೆ, ಇತರ ಭಾಷೆಗಳ ತುಳಿಯುವಿಕೆ ಇವೆಲ್ಲಾ ಇವೆ. ಕೇಂದ್ರೀಕರಣದ ಮೂಲಕ ಜೊತೆಗೆ ಅಳಿದುಳಿದ ಸರಕಾರಿ ಸಾರ್ವಜನಿಕ ಶಿಕ್ಷಣದ ಕ್ಷೇತ್ರಗಳನ್ನು ಕೂಡ ಕಾರ್ಪೊರೇಟ್‌ಗಳ ಕೈಗೆ ಹಸ್ತಾಂತರಿಸಲಾಗುತ್ತದೆ ಎನ್ನುವುದು ಹಿಂದಿನದಕ್ಕೂ ಈಗಿನದಕ್ಕೂ ಇರುವ ವ್ಯತ್ಯಾಸವಾಗಿದೆ. ಇದು ಅಖಂಡ ಇಂಡಿಯಾದ ಮಾರುಕಟ್ಟೆಯನ್ನು ಸದೃಢೀಕರಿಸುವ ಪ್ರಕ್ರಿಯೆಗಳ ಭಾಗವೇ ಆಗಿದೆ ಎನ್ನುವುದು ಕೂಡ ಅಷ್ಟೇ ನಿಜ. ಅದಕ್ಕಾಗಿಯೇ ಶಿಕ್ಷಣ ರಂಗವನ್ನು ರಾಜ್ಯಗಳ ಕೈಯಿಂದ ಕಿತ್ತುಕೊಳ್ಳುವಂತಹ ಕೇಂದ್ರೀಕರಣವನ್ನು ಪ್ರಾಯೋಜಿಸುವ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಇಡೀ ದೇಶದ ಮೇಲೆ ಹೇರುತ್ತಿರುವುದು.
ಆದರೆ ಬಾಲವಾಡಿ ಪೂರ್ವದಿಂದ ಹಿಡಿದು ಉನ್ನತ ಶಿಕ್ಷಣದವರೆಗಿನ ಪಠ್ಯ ರಚನೆ, ಪ್ರಕಟನೆ, ಕಲಿಕಾ ಪದ್ಧತಿಗಳು, ಬೋಧನಾ ಪದ್ಧತಿಗಳು, ಶಿಕ್ಷಕ ತರಬೇತಿ ಹಾಗೂ ನೇಮಕಾತಿ, ಸಂರಚನೆಗಳು, ಸೌಲಭ್ಯಗಳು, ಶುಲ್ಕ ನಿರ್ಣಯ ಇತ್ಯಾದಿ ಇಡೀ ಶಿಕ್ಷಣದ ಎಲ್ಲಾ ಪ್ರಕ್ರಿಯೆಗಳನ್ನು ಕೇಂದ್ರೀಕರಿಸುವ ಹಲವು ಪ್ರಸ್ತಾವನೆಗಳು ಈ ನೀತಿಯಲ್ಲಿವೆ. ಉನ್ನತ ಶಿಕ್ಷಣದಲ್ಲಿ ಇದು ಬಹಳ ಬೇಗನೇ ಭಾರೀ ಕಾರ್ಪೊರೇಟ್‌ಗಳು ನೇರವಾಗಿಯೇ ನಿರ್ಣಾಯಕರಾಗುವಂತೆ ಮಾಡುತ್ತದೆ. ಮತ್ತೊಂದು ಪ್ರಮುಖ ವಿಚಾರ ಏನೆಂದರೆ ಅಂತರ್ಜಾಲ ಶಿಕ್ಷಣವನ್ನು ಸಾಂಸ್ಥಿಕಗೊಳಿಸುತ್ತದೆ.
ಅಸಲಿಗೆ ವಿಶ್ವಬ್ಯಾಂಕ್ ಒದಗಿಸುವ ಸಾಲ ಈಗ ಹೇಳುತ್ತಿರುವ ಸಮಗ್ರ ಶಿಕ್ಷಾ ಅಭಿಯಾನದ ಒಟ್ಟು ಖರ್ಚಿನ ಶೇ 1.4 ಮಾತ್ರ ಉಳಿದ ಶೇ. 98.6ರಷ್ಟು ವೆಚ್ಚವನ್ನು ಭರಿಸಬೇಕಾದವರು ರಾಜ್ಯಗಳು ಹಾಗೂ ಒಕ್ಕೂಟ ಸರಕಾರವೇ ಆಗಿವೆ ಎನ್ನುವುದು ಆಶ್ಚರ್ಯ ಎನಿಸಬಹುದಾದರೂ ಸತ್ಯವಾದುದು. ಅಂದರೆ ಈ ಯೋಜನೆ ಹೇಗಿದೆ ಎಂದರೆ ಇದುವರೆಗೂ ಕಟ್ಟಿಕೊಂಡು ಬಂದಿರುವ ಶಿಕ್ಷಣರಂಗವನ್ನು ನಮ್ಮ ಜನರ ತೆರಿಗೆಯ ಹಣ ವ್ಯಯಿಸಿ ಜಾಗತಿಕ ಭಾರೀ ಕಾರ್ಪೊರೇಟ್‌ಗಳಿಗೆ ಬಿಟ್ಟುಕೊಡುವುದೇ ಆಗಿದೆ. ಉಳಿದ ಶೇ. 98.6 ಖರ್ಚನ್ನು ಭರಿಸುವ ಬಗೆ ಹೇಗೆ ಎಂಬುದರ ಬಗ್ಗೆ ಈ ಶಿಕ್ಷಣ ನೀತಿಯಲ್ಲಿ ನಿರ್ದಿಷ್ಟವಾಗಿ ಏನೂ ಹೇಳಿಲ್ಲವಾದರೂ, ಸರಕಾರೇತರ ಸಮಾಜಸೇವಾ ಸಂಘಟನೆಗಳಿಗೆ ಶಿಕ್ಷಣ ಸಂಸ್ಥೆಗಳನ್ನು ನಿರ್ವಹಿಸಲು ಬಿಟ್ಟುಕೊಡುವ ಬಗ್ಗೆ, ಸ್ವಾಯತ್ತ ಶಿಕ್ಷಣ ಸಂಸ್ಥೆಗಳು, ಸ್ವಾಯತ್ತ ವಿಶ್ವವಿದ್ಯಾನಿಲಯಗಳು ಇತ್ಯಾದಿ ಖಾಸಗಿಯವರ ಪಾಲ್ಗೊಳಿಸುವಿಕೆ ಬಗ್ಗೆ ಸ್ಪಷ್ಟವಾಗಿಯೇ ಸಾಕಷ್ಟು ಹೇಳುತ್ತದೆ.
ಅದೇ ವೇಳೆಗೆ ದೇಶದ ಬಹುಸಂಖ್ಯಾತ ದಲಿತ, ಆದಿವಾಸಿ, ದಮನಿತ, ಮಹಿಳೆ, ಬಡ ಹಿಂದುಳಿದ, ಬಡ ಅಲ್ಪಸಂಖ್ಯಾತ ಇನ್ನಿತರ ಜನಸಾಮಾನ್ಯರ ಮಕ್ಕಳಿಗೆ ಶಿಕ್ಷಣವನ್ನು ಸಂಪೂರ್ಣವಾಗಿ ನಿರಾಕರಣೆಯಾಗುವಂತೆ ಮಾಡುವುದು. ಶಿಕ್ಷಣವನ್ನು ಮಾರುಕಟ್ಟೆಯಲ್ಲಿ ಕೊಂಡುಕೊಳ್ಳಲು ಸಾಧ್ಯವಿರುವ ಮಂದಿಗೆ ಮಾತ್ರ ಎನ್ನುವಂತೆ ಮಾಡುವುದು, ಅಂದರೆ ಶಿಕ್ಷಣದ ಅಳಿದುಳಿದ ಸರಕೀಕರಣದ ಪ್ರಕ್ರಿಯೆಗಳನ್ನು ಪೂರ್ಣಗೊಳಿಸುವುದು ಎನ್ನುವುದಾಗಿದೆ.
ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರೂಪಿಸಿದ ಸಮಿತಿ ಯಾವುದು, ಅವರ ಅರ್ಹತೆಗಳ ಬಗ್ಗೆಯಾಗಲೀ, ನಿರ್ದಿಷ್ಟ ಕ್ಷೇತ್ರದಲ್ಲಿ ಅವರ ಕೊಡುಗೆಯೇನು ಎಂಬುದರ ವಿವರಗಳು ಕೂಡ ಸರಕಾರ ಕೊಟ್ಟಿಲ್ಲ. ಕಲಾ ವಿಭಾಗ, ಭಾಷಾ ವಿಭಾಗ, ಮಾನವಿಕ ವಿಭಾಗ ಇತ್ಯಾದಿಗಳಿಗೆ ಅವಕಾಶ ಕಡಿತ ಮಾಡುವ ಇಲ್ಲವೇ ನಿರುತ್ಸಾಹಗೊಳಿಸುವುದು ಈ ನೀತಿಯ ಸಾರವಾಗಿದೆ. ಈ ನೀತಿಯನ್ನು ಸರ್ವರನ್ನೂ ಒಳಗೊಳಿಸುವಂತಹ ರೀತಿಯಲ್ಲಿ ಆಕರ್ಷಕ ಪದಪುಂಜಗಳಲ್ಲಿ ಹೆಣೆಯಲಾಗಿದೆ. ಶಿಕ್ಷಣದ ಕುರಿತಾದ ಸಾರ್ವತ್ರಿಕ ವೈಜ್ಞಾನಿಕ ಚಿಂತನೆಗಳ ಪದಗಳನ್ನು ಬಳಸುತ್ತಾ ಒಂದು ಭ್ರಮೆಯನ್ನು ಹುಟ್ಟುಹಾಕಲು ಇದು ಶ್ರಮಿಸುತ್ತದೆ. ಆದರೆ ಅವುಗಳಿಗೆ ಯಾವುದೇ ನಿರ್ದಿಷ್ಟತೆಗಳನ್ನು ಹೇಳದೆ ಜಾಣತನ ತೋರಲಾಗಿದೆ.
ಇದು ವಿವೇಕ, ವಿವೇಚನೆ, ವಿಚಾರವಂತಿಕೆ, ಪ್ರಜ್ಞಾವಂತಿಕೆ ಹೆಚ್ಚಿಸುವಂತಹ, ಪ್ರಶ್ನೆ ಮಾಡುವ, ಯುಕ್ತಾಯುಕ್ತತೆಗಳನ್ನು ನೋಡುವ ಗುಣಗಳನ್ನು ಬೆಳೆಸುವಂತಹ ವಾತಾವರಣವನ್ನೇ ಪೂರ್ಣವಾಗಿ ಇಲ್ಲದಂತೆ ಮಾಡುತ್ತದೆ. ಈ ಗಂಭೀರ ಸಮಸ್ಯೆ ಹಿಂದಿನಿಂದಲೂ ಇದ್ದಿದ್ದು ನಿಜವಾದರೂ ಈ ನೀತಿ ಸರಕಾರಿ ಸಾರ್ವಜನಿಕ ಶಿಕ್ಷಣ ವಲಯಗಳಲ್ಲಿ ಹಿಂದಿನಿಂದ ಇದ್ದ ಒಂದು ಮಟ್ಟದ ಅಂತಹ ವಾತಾವರಣವನ್ನೂ ಕೂಡ ಸಾಂಸ್ಥಿಕವಾಗಿಯೇ ಪೂರ್ತಿಯಾಗಿ ಇಲ್ಲವಾಗಿಸುವ ಕಾರ್ಯ ಮಾಡುತ್ತದೆ. ಯಾಕೆಂದರೆ ಶಿಕ್ಷಣ ರಂಗದಲ್ಲಿ ಸರಕಾರದ ಪಾತ್ರವನ್ನೇ ಇಲ್ಲವಾಗಿಸಲು ಹೊರಟಿರುವ ನೀತಿ ಇದಾಗಿದೆ. ಉನ್ನತ ಶಿಕ್ಷಣವನ್ನು ಸಂಪೂರ್ಣವಾಗಿ ಭಾರೀ ಕಾರ್ಪೊರೇಟ್‌ಗಳಿಗೆ ಬಿಟ್ಟುಕೊಡುವ ಮೂಲಕ ದೇಶದ ಮಧ್ಯಮ ವರ್ಗದ ಕುಟುಂಬಗಳನ್ನು ಈ ನೀತಿಯು ನೇರವಾಗಿ ಗುರಿಮಾಡುತ್ತದೆ. ನಮ್ಮ ದೇಶದ ಜನಸಂಖ್ಯೆಯ ಶೇ. 31ರಷ್ಟು ಇದ್ದ ಮಧ್ಯಮವರ್ಗದ ಶಿಕ್ಷಣದ ಅಗತ್ಯವನ್ನು ಸರಕೀಕರಿಸಿ ಸಂಪೂರ್ಣವಾಗಿ ವಶಪಡಿಸಿಕೊಳ್ಳುವ ಉದ್ದೇಶವೇ ಪ್ರಧಾನವಾಗಿ ಈ ರಾಷ್ಟ್ರೀಯ ಶಿಕ್ಷಣ ನೀತಿಯದ್ದಾಗಿದೆ.
ಕೊರೋನ ನೀತಿಗಳ ಪರಿಣಾಮವಾಗಿ ಮಧ್ಯಮ ವರ್ಗದ ಜನಸಂಖ್ಯೆ ಈಗ ಒಟ್ಟು ಜನಸಂಖ್ಯೆಯ ಶೇ. 28ಕ್ಕೆ ಕುಸಿದಿದೆ ಎಂಬ ವರದಿ ಕೂಡ ಹೊರಬಿದ್ದಿದೆ. ಈಗಾಗಲೇ ನೋಟು ರದ್ದತಿ, ಜಿಎಸ್‌ಟಿ ಹೇರಿಕೆ, ಕೊರೋನ ನೀತಿ, ಪೆಟ್ರೋಲ್, ಡೀಸೆಲ್ ಬೆಲೆಯೇರಿಕೆ ಮೊದಲಾದವುಗಳ ಮೂಲಕ ದೇಶದ ಮಧ್ಯಮವರ್ಗದ ಜೇಬುಗಳು ಹಾಗೂ ಉಳಿತಾಯಗಳ ಮೇಲೆ ನಿರಂತರ ದಾಳಿಗಳನ್ನು ನಡೆಸುತ್ತಾ ಬರಲಾಗಿದೆ. ‘ರಾಷ್ಟ್ರೀಯ ಶಿಕ್ಷಣ ನೀತಿ 2020’ ದೇಶದ ಮಧ್ಯಮ ವರ್ಗದ ಯುವಕಯುವತಿಯರಿಗೆ ಉನ್ನತ ಶಿಕ್ಷಣ ಮತ್ತಷ್ಟು ದುಬಾರಿಯನ್ನಾಗಿಸುತ್ತದೆ. ಬಡದಲಿತರು, ದಮನಿತರು, ಮಹಿಳೆಯರು, ಹಿಂದುಳಿದವರು, ಇನ್ನಿತರ ಬಡವರು ಹಾಗೂ ಕೆಳಮಧ್ಯಮ ವರ್ಗದವರಿಗೆ ಉನ್ನತ ಶಿಕ್ಷಣವೆಂಬುದು ಸಂಪೂರ್ಣ ಮರೀಚಿಕೆಯೇ ಆಗಿಬಿಡುತ್ತದೆ. ‘ರಾಷ್ಟ್ರೀಯ ಶಿಕ್ಷಣ ನೀತಿ 2020’ಅನ್ನು ಕರ್ನಾಟಕ ಸರಕಾರವು ಈ ಸಾಲಿನಿಂದಲೇ ತರಾತುರಿಯಲ್ಲಿ ಜಾರಿ ಮಾಡಲು ಹೊರಟಿದೆ. ಈಗ ರಾಜ್ಯದಲ್ಲಿ ಕೆಲವು ವಿದ್ಯಾರ್ಥಿ ಸಂಘಟನೆಗಳು, ಕೆಲವು ಸಾಮಾಜಿಕ ಕಾರ್ಯಕರ್ತರು ಇದರ ಗಂಭೀರ ಪರಿಣಾಮಗಳ ಕುರಿತಾಗಿ ಚರ್ಚಿಸುವುದು ಹಾಗೂ ಸಾರ್ವಜನಿಕವಾಗಿ ಪ್ರತಿಭಟನೆ ವ್ಯಕ್ತ ಪಡಿಸಲು ತೊಡಗಿದ್ದರೂ ಪರಿಸ್ಥಿತಿಯ ಅಗತ್ಯಕ್ಕೆ ಅದು ಏನೇನೂ ಸಾಲದಾಗಿದೆ.
ದೇಶದ ಪ್ರತಿಯೊಬ್ಬರಿಗೂ ಅವರಿಗೆ ಇಷ್ಟವಾದುದನ್ನು ಕಲಿಯುವ ಹಾಗೂ ಕಲಿಸುವ ವಾತಾವರಣವನ್ನು ದೇಶದ ಜನರನ್ನು ಪ್ರತಿನಿಧಿಸುವ ವ್ಯವಸ್ಥೆಯೊಂದು ನಿರ್ಮಿಸಬೇಕಾದುದು ಅದರ ಆದ್ಯ ಕರ್ತವ್ಯವಾಗಿದೆ. ಆಗ ಮಾತ್ರ ಅದನ್ನು ಒಂದು ಪ್ರಜಾತಾಂತ್ರಿಕ ವ್ಯವಸ್ಥೆ ಎನ್ನಬಹುದು. ದೇಶದ ಎಲ್ಲಾ ಜನರಿಗೆ ಆಹಾರ, ಆರೋಗ್ಯ, ವಸತಿ, ಶಿಕ್ಷಣ, ಉದ್ಯೋಗದ ಅವಕಾಶಗಳು ಮೂಲಭೂತ ನಾಗರಿಕ ಸೌಲಭ್ಯಗಳನ್ನು ಖಾತ್ರಿಗೊಳಿಸುವುದು ಜನರನ್ನು ಪ್ರತಿನಿಧಿಸುವ ಸರಕಾರವೊಂದರ ಆದ್ಯ ಕರ್ತವ್ಯವಾಗಬೇಕು. ಹಾಗಿದ್ದಾಗ ಮಾತ್ರ ಅದು ಪ್ರಜಾತಾಂತ್ರಿಕ ಸರಕಾರವಾಗಲು ಸಾಧ್ಯ.
‘ರಾಷ್ಟ್ರೀಯ ಶಿಕ್ಷಣ ನೀತಿ 2020’ರ ಬಗ್ಗೆ ಕನ್ನಡದಲ್ಲಿ ಹೆಚ್ಚಿನ ವಿವರಗಳಿಗೆ https://www.education.gov.in/sites/upload_files/mhrd/files/nep/2020/KANNADA.pdf ನೋಡಬಹುದು
ಮಿಂಚಂಚೆ: nandakumarnandana67@gmail.com