ಯೂಟ್ಯೂಬ್‌ನ ಸಂಗೀತ ವಿಸ್ಮಯಲೋಕ

Update: 2021-08-13 19:30 GMT

ಹಲವಾರು ವರ್ಷಗಳಿಂದ ನಾನು ಯೂಟ್ಯೂಬ್‌ನಲ್ಲಿ ಹೆಚ್ಚಾಗಿ ಹಾಡುಗಳನ್ನೇ ಕೇಳುತ್ತಿದ್ದೇನೆ. ಇತರರು ಆಲಿಸಲು ಹಾಗೂ ಅಭಿಮಾನದಿಂದ ತಮ್ಮ ಸಂಗ್ರಹಗಳನ್ನು ನಿಸ್ವಾರ್ಥತೆಯಿಂದ ಹಂಚಿಕೊಳ್ಳುತ್ತಿರುವವರನ್ನು ನಾನು ಪ್ರಶಂಸಿಸುತ್ತೇನೆ. ಅವರ ಹೆಸರುಗಳನ್ನು ಉಲ್ಲೇಖಿಸಲು ನಾನು ಬಯಸುವೆ. ಆದರೆ ಕೆಲವು ಸಂಕುಚಿತ ಮನೋಭಾವದ ಹಕ್ಕು ಸ್ವಾಮ್ಯವಾದಿಗಳು ಹಾಗೂ ದುರಾಸೆಯ ನ್ಯಾಯವಾದಿಗಳಿಂದ ಅವರು ಕಿರುಕುಳಕ್ಕೊಳಗಾಗುವುದನ್ನು ನಾನು ಇಚ್ಛಿಸುವುದಿಲ್ಲ.



ನನಗೆದುರಾದ ಗಂಭೀರವಾದ ರಸ್ತೆ ಅಪಘಾತವು ನನ್ನನ್ನು ಯೂಟ್ಯೂಬ್ ವೀಡಿಯೊ ಜಾಲತಾಣದಲ್ಲಿ ಪ್ರಸಾರ ವಾಗುವ ಸಮೃದ್ಧ ಸಂಗೀತದೆಡೆಗೆ ಸೆಳೆಯುವಂತೆ ಮಾಡಿತು. ನನ್ನ ಹಿಮ್ಮಡಿ ಮುರಿದಿತ್ತು ಹಾಗೂ ಭುಜದ ಎಲುಬು ಸ್ಥಾನಪಲ್ಲಟಗೊಂಡಿತ್ತು. ಹೀಗಾಗಿ ನಾನು ವಾರಗಳ ಕಾಲ ಹಾಸಿಗೆಯಲ್ಲೇ ಬಿದ್ದುಕೊಂಡಿರಬೇಕಾಯಿತು. ಪುಸ್ತಕವನ್ನು ಕೂಡಾ ಓದಲು ನನಗೆ ಸಾಧ್ಯವಾಗುತ್ತಿರಲಿಲ್ಲ. ಆದರೆ ನಾನು ನನ್ನ ಲ್ಯಾಪ್‌ಟ್ಯಾಪ್ ತೆರೆದು ನನಗೆ ಬಂದಿದ್ದ ಇಮೇಲ್‌ಗಳನ್ನು ತಪಾಸಣೆ ಮಾಡುತ್ತಿದ್ದೆ (ಅಗತ್ಯ ಬಿದ್ದಲ್ಲಿ ಅವುಗಳಿಗೆ ಒಂದೇ ಕೈಯ ಬೆರಳಿನಲ್ಲಿ ಟೈಪ್ ಮಾಡಿ ಉತ್ತರಿಸುತ್ತಿದ್ದೆ). 2012ರ ಬೇಸಿಗೆಯಲ್ಲಿ ಈ ಅವಘಡ ಸಂಭವಿಸಿತ್ತು. ಈ ಮೊದಲು ಕೆಲವು ವರ್ಷಗಳವರೆಗೆ, ನಾನು ಖ್ಯಾತ ಸಂಗೀತ ವಿದ್ವಾಂಸ ಹಾಗೂ ಮಲಯಾಳಂ ಬರಹಗಾರ ಎಸ್. ಗೋಪಾಲಕೃಷ್ಣನ್‌ರಿಂದ ಅವರು ಪೋಸ್ಟ್ ಮಾಡುವ ವೀಡಿಯೊಗಳನ್ನು ನಿಯಮಿತವಾಗಿ ಪಡೆಯುವ ನೂರಾರು ಅದೃಷ್ಟಶಾಲಿ ಫಲಾನುಭವಿಗಳಲ್ಲಿ ನಾನೂ ಒಬ್ಬನಾಗಿದ್ದೆ. ಗೋಪಾಲ್ ಅವರು ವಾರದಲ್ಲಿ ಎರಡು ಮೂರು ಸಲ ನನಗೆ ಶಾಸ್ತ್ರೀಯ ಸಂಗೀತದ ತುಣುಕುಗಳನ್ನು ಕಳುಹಿಸಿಕೊಡುತ್ತಿದ್ದರು.ಜೊತೆಗೆ ಅವುಗಳ ಅರ್ಥ ಅಥವಾ ಮಹತ್ವದ ಕುರಿತಾಗಿ ಕೆಲವು ವಾಕ್ಯಗಳು ಕೂಡಾ ಇರುತ್ತಿದ್ದವು. ನಸುಕು ಹರಿಯುವ ಹೊತ್ತಿಗೆ ಈ ವೀಡಿಯೊಗಳು ಬರುತ್ತಿದ್ದು, ಅವನ್ನು ನಾವು ಯಾವುದೇ ಸಮಯದಲ್ಲಿಯೂ ಅಲಿಸಬಹುದಾಗಿತ್ತು.

ಅವಘಡದ ಮುನ್ನ ನನ್ನ ಬೆಳಗ್ಗಿನ ಚಟುವಟಿಕೆಗಳು ಬಿಡುವು ರಹಿತವಾಗಿದ್ದವು. ಹೀಗಾಗಿ ನಾನು ಗೋಪಾಲ್ ಅವರ ಪೋಸ್ಟಿಂಗ್‌ಗಳನ್ನು ಆಲಿಸುತ್ತಿದ್ದುದು ತೀರಾ ವಿರಳವಾಗಿತ್ತು. ಕೆಲವು ಸಮಯದ ಆನಂತರ ಈ ವೀಡಿಯೊಗಳ ಕಂತೆಯು ತುಂಬಿ ತುಳುಕತೊಡಗಿದಾಗ ಕೊನೆಗೂ ನಾನು ಮನಸ್ಸು ಮಾಡಿ ಎಲ್ಲವನ್ನೂ ಒಟ್ಟಿಗೆ ಕೇಳಲಾರಂಭಿಸಿದೆ. ನನ್ನ ಕಂಪ್ಯೂಟರ್‌ನಲ್ಲಿ ಸಂಶೋಧನಾ ಟಿಪ್ಪಣಿಗಳನ್ನು ಟೈಪ್ ಮಾಡುವಾಗ ಹಿನ್ನೆಲೆಯಲ್ಲಿ ಮಧುರವಾದ ಶಾಸ್ತ್ರೀಯ ಸಂಗೀತವನ್ನು ಕೇಳುವುದು ಹಿತಕರವಾಗುತ್ತದೆಯೆಂಬ ಸ್ನೇಹಿತರೊಬ್ಬರ ಸಲಹೆ ನನಗೆ ಹಿಡಿಸಿತು.

ನನ್ನ ಹಿಮ್ಮಡಿಯಲ್ಲಿ ಹಾಗೂ ಭುಜದಲ್ಲಿ ಪ್ಲಾಸ್ಟರ್ ಕಟ್ಟಿಕೊಂಡಿರುವ ನಾನು ಹಾಸಿಗೆಯಿಂದ ಏಳುವ ಹೊತ್ತಿಗೆ ಮ್ಲಾನ ಚಿತ್ತನಾಗಿರುತ್ತಿದ್ದೆ. ನನ್ನ ಮುಂದೆ ಇಡೀ ದಿನವು ಕೊನೆಯಿಲ್ಲದಂತೆ ಹರಡಿಕೊಂಡಿರುವ ಹಾಗೆ ಭಾಸವಾಗುತ್ತಿತ್ತು. ಕಬ್ಬನ್‌ಪಾರ್ಕ್‌ನಲ್ಲಿ ವಾಯುವಿಹಾರದ ಮೂಲಕ ನನ್ನನ್ನು ನಾನೇ ಉಲ್ಲಸಿತಗೊಳಿಸುವ ಯಾವುದೇ ಸಾಧ್ಯತೆಗಳಿರಲಿಲ್ಲ. ಕಂಪ್ಯೂಟರ್ ಆನ್ ಮಾಡುತ್ತಿದ್ದಂತೆಯೇ ಮೊದಲಿಗೆ ಗೋಪಾಲ್ ಅವರಿಂದ ಬಂದ ಮೇಲ್ ಅನ್ನು ತೆರೆಯುತ್ತಿದ್ದೆ.ಅವರು ಬರೆದಿದ್ದನ್ನು ಓದುತ್ತಿದ್ದೆ ಮತ್ತು ಕಳುಹಿಸಿರುವ ಲಿಂಕ್‌ಗೆ ಕ್ಲಿಕ್ ಮಾಡುತ್ತಿದ್ದೆ ಮತ್ತು ಆ ಮೂಲಕ ಸಂಗೀತ ಆಲಿಸುತ್ತಿದ್ದೆ. ಹೀಗೆ ಇದನ್ನು ನಾನು ನಿಯಮಿತವಾಗಿ ಮಾಡತೊಡಗಿದಾಗ, ಈ ಮೊದಲು ನನ್ನಿಂದ ಮರೆಯಾಗಿದ್ದಂತಹ ಯಾವುದೋ ಒಂದು ವಸ್ತು ಸಿಕ್ಕಿದೆಯೆಂಬುದನ್ನು ಕಂಡುಕೊಂಡೆ. ಹೀಗೆ ಒಂದು ಸಂಗೀತ ಸಂರಚನೆ ಮುಗಿಯುತ್ತಿದ್ದಂತೆಯೇ ಇನ್ನೊಂದು ಸಂರಚನೆಯನ್ನು ಆಲಿಸಲು ಕಂಪ್ಯೂಟರ್ ಪರದೆಯ ಸಂದೇಶವು ನನಗೆ ಆಹ್ವಾನ ನೀಡುತ್ತಿತ್ತು. ಆದರೆ ಕ್ರಮೇಣ ನಾನು ಲಿಂಕ್ ಕ್ಲಿಕ್ಕಿಸಿದ ಆನಂತರ ಗೋಪಾಲ್ ಅವರ ಶಿಫಾರಸು ಮಾಡಿದ ಸಂಗೀತ ಸಂರಚನೆಗಳನ್ನು ಒಂದರ ಆನಂತರ ಇನ್ನೊಂದರಂತೆ ಆಲಿಸುತ್ತಿದ್ದೆ. ಈಗ ನಾನು ಜೋಮುಹಿಡಿದಿರುವ ಹಿಮ್ಮಡಿ ಹಾಗೂ ಭುಜದ ನೋವಿನೊಂದಿಗೆ ಹಾಸಿಗೆ ಮೇಲೆ ಕುಳಿತುಕೊಂಡಿದ್ದೇನೆ. ಆದರೆ ಯೂಟ್ಯೂಬ್ ಹೀಗೆ ಆಹ್ಲಾದವನ್ನು ನೀಡುವ ಮೂಲಕ ಎಲ್ಲಾ ನೋವನ್ನು ನಾನು ಮರೆಯುವಂತೆ ಮಾಡಿತು. ಎಸ್. ಗೋಪಾಲಕೃಷ್ಣನ್ ಮಾಡಿದ ಒಂದು ನಿರ್ದಿಷ್ಟ ಶಿಫಾರಸು ಯೂಟ್ಯೂಬ್‌ನಲ್ಲಿ ನನಗೆ ಸಂಗೀತದ ಒಡನಾಟವನ್ನು ಹುಟ್ಟುಹಾಕಿತು. ಒಂದು ಬಾರಿ ಬೆಳಗ್ಗೆ ಅವರು ಖ್ಯಾತ ಕರ್ಣಾಟಕ ಸಂಗೀತ ಗಾಯಕಿ ‘‘ಕೃಷ್ಣಾ ನೀ ಬೇಗನೇ ಬಾರೋ’’ ಹಾಡಿದ ಗಾಯನದ ರೆಕಾರ್ಡಿಂಗ್ ಅನ್ನು ಅವರು ಲಿಂಕ್ ಮಾಡಿದ್ದರು. ಅದು ನನ್ನ ನಿರ್ದಿಷ್ಟವಾದ ಫೇವರಿಟ್ ಹಾಡಾಗಿತ್ತು. ಎಂ.ಎಲ್.ವಿ. ಹಾಡಿದ ಆ ಗಾಯನವನ್ನು ಆಲಿಸಿದ ಬಳಿಕ ನಾನು ಅದೇ ಜನಪ್ರಿಯ ಸಮಕಾಲೀನ ಗಾಯಕಿ ಬಾಂಬೆ ಜಯಶ್ರೀ ಹಾಡಿದ ಅದೇ ಹಾಡಿನ ಲಿಂಕನ್ನು ನೋಡಿದ್ದೆ. ಹೀಗಾಗಿ ಆಕೆ ಹಾಡಿದ ಹಾಡನ್ನು ಕೂಡಾ ಕೇಳಿದೆ.

ಆ ಹಾಡನ್ನು ಆಲಿಸುತ್ತಿದ್ದಂತೆಯೇ ಈ ನಿರ್ದಿಷ್ಟ ಹಾಡನ್ನು ಒಳಗೊಂಡ ಘಟನೆಯೊಂದರ ಬಗ್ಗೆ ಓದಿದ್ದುದು ನನಗೆ ನೆನಪಿಗೆ ಬಂದಿತು. ಉಡುಪಿ ಪಟ್ಟಣಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಕೃಷ್ಣಮಠ ದೇಗುಲಕ್ಕೆ ಭೇಟಿ ನೀಡಲು ಆಗಮಿಸಿದ್ದ ಅಮೆರಿಕ ಮೂಲದ ಕರ್ಣಾಟಕ ಸಂಗೀತ ವಿದ್ವಾಂಸ ಜಾನ್ ಹಿಗ್ಗಿನ್ಸ್ ಅವರಿಗೆ ಅವರ ಮೈಬಣ್ಣದ ಕಾರಣದಿಂದಾಗಿ ಪ್ರವೇಶವನ್ನು ನಿರಾಕರಿಸಲಾಗಿತ್ತು. ಹೀಗಾಗಿ ಅವರು ಹೊರಗಡೆ ಬೀದಿಯಲ್ಲಿ ನಿಂತು ‘‘ಕೃಷ್ಣಾ ನೀ ಬೇಗನೆ ಬಾರೋ’’ ಹಾಡನ್ನು ಹಾಡಿದರು. ಆ ಮೂಲಕ ತನಗೆ ದೇಗುಲದೊಳಗೆ ಪ್ರವೇಶ ನಿರಾಕರಿಸಿದ ಅರ್ಚಕರು ನಾಚುವಂತೆ ಮಾಡಿದರು. 16ನೇ ಶತಮಾನದಲ್ಲಿ ಕನಕದಾಸರಿಗೆ ಅವರು ಕೆಳಜಾತಿಯವನೆಂಬ ಕಾರಣದಿಂದಾಗಿ ಪ್ರವೇಶ ನಿರಾಕರಿಸಿದ, ಪುರಾತನ ಕತೆಯನ್ನು ನೆನಪಿಸುವ ಉದ್ದೇಶದಿಂದಲೇ ಹಿಗ್ಗಿನ್ಸ್ ಅತ್ಯಂತ ಭಾವುಕತೆಯಿಂದ ಹೀಗೆ ಮಾಡಿದ್ದರು. ಅರ್ಚಕರಿಂದ ನಿಂದನೆಗೊಳಗಾದ ಕನಕದಾಸರು ಕೃಷ್ಣನ ಕುರಿತಾಗಿ ಹಾಡೊಂದನ್ನು ಭಕ್ತಿಪರಶವತೆಯಿಂದ ಹಾಡಿದ್ದರು. ಆಗ ಕೃಷ್ಣನ ವಿಗ್ರಹವು ತನ್ನಿಂತಾನೆ ತಿರುಗಿತ್ತು ಮತ್ತು ದೇಗುಲದ ಗೋಡೆ ಒಡೆದು ಭಕ್ತ ಕನಕದಾಸರಿಗೆ ದರ್ಶನ ನೀಡಿತ್ತು ಎಂಬ ಐತಿಹ್ಯವಿದೆ.

 ಈ ಘಟನೆಯನ್ನು ನೆನಪಿಸಿಕೊಂಡ ನಾನು, ಹಿಗ್ಗಿನ್ಸ್ ಹಾಡಿದ ‘‘ಕೃಷ್ಣಾ ನೀ ಬೇಗನೇ ಬಾರೋ’’ ಹಾಡನ್ನು ಕೇಳಲು ಅವಕಾಶ ನೀಡುವಂತೆ ಯೂಟ್ಯೂಬ್‌ನಲ್ಲಿ ಮನವಿ ಮಾಡಿದ್ದೆ. ನನ್ನ ಬೇಡಿಕೆ ಕೂಡಲೇ ಈಡೇರಿತ್ತು. ಅಷ್ಟೇ ಅಲ್ಲದೆ, ಕ್ರೈಸ್ತ ಕುಟುಂಬದಲ್ಲಿ ಜನಿಸಿದ ಕೆ.ಜೆ. ಯೇಸುದಾಸ್ ಹಾಡಿದ ಇದೇ ಹಾಡಿನ ಆವೃತ್ತಿಯನ್ನು ಕೂಡಾ ನನಗೆ ಕಳುಹಿಸಿಕೊಡಲಾಗಿತ್ತು. ಈ ಎಲ್ಲಾ ಕಾರಣಗಳಿಂದಾಗಿ ನನ್ನ ಬೆಳಗ್ಗಿನ ಸಮಯ ಉಲ್ಲಾಸಭರಿತವಾಗಿ ಕಳೆಯತೊಡಗಿದವು.

ನಾನು ಯೂಟ್ಯೂಬ್‌ನಲ್ಲಿ ಸಂಗೀತಭಂಡಾರವನ್ನು ಕಂಡುಕೊಳ್ಳುವ ಮುನ್ನ ಸಂಗೀತದ ಆಲಿಕೆಯ ಹವ್ಯಾಸಕ್ಕೆ ಹಲವಾರು ವರ್ಷಗಳಿಂದ ಕಲೆಹಾಕಿದ್ದ ರಾಷ್ಟ್ರೀಯ ಸಂಗೀತ ಕಾರ್ಯಕ್ರಮಗಳ ರೆಕಾರ್ಡಿಂಗ್ ಸೀಡಿಗಳು ಹಾಗೂ ಕ್ಯಾಸೆಟ್‌ಗಳ ಬೃಹತ್ ಸಂಗ್ರಹವನ್ನು ಅವಲಂಬಿಸಿದ್ದೆ.

ವಿಶೇಷವಾಗಿ ಖಂಡಾಂತರ ವಿಮಾನ ಹಾರಾಟದ ಸಂದರ್ಭಗಳಲ್ಲಿ ಈ ಹವ್ಯಾಸ ಉಪಯೋಗಕ್ಕೆ ಬರುತ್ತಿತ್ತು. ವಾದ್ಯ ಸಂಗೀತ ಆಲಿಸಬೇಕೆಂಬ ಮನಸ್ಸಾದಾಗ ನಾನು ಅಲಿ ಅಕ್ಬರ್ ಖಾನ್, ನಿಖಿಲ್ ಬ್ಯಾನರ್ಜಿ, ರವಿಶಂಕರ್, ವಿಲಾಯತ್ ಖಾನ್, ಎನ್. ರಾಜಮ್ ಹಾಗೂ ಬಿಸ್ಮಿಲ್ಲಾ ಖಾನ್ ಅವರ ವಾದನವನ್ನು ಮತ್ತು ಗಾಯನಸಂಗೀತವನ್ನು ಕೇಳಲು ಬಯಸಿದಾಗ ಭೀಮಸೇನ್ ಜೋಶಿ, ಕುಮಾರ ಗಂಧರ್ವ, ಮಲ್ಲಿಕಾರ್ಜುನ ಮನ್ಸೂರ್, ಮಾಲಿನಿ ರಾಜುರ್‌ಕರ್, ಕಿಶೋರಿ ಅಮೋನ್‌ಕರ್ ಹಾಗೂ ಬಸವರಾಜ ರಾಜಗುರು ಅವರ ಹಾಡುಗಳನ್ನು ಆಲಿಸುತ್ತಿದ್ದೆ.

2018ರ ಜನವರಿ ದ್ವಿತೀಯಾರ್ಧದಲ್ಲಿ ಯೂಟ್ಯೂಬ್‌ನಲ್ಲಿ ಸಂಗೀತವನ್ನು ಆಲಿಕೆಯ ಹವ್ಯಾಸ ನನಗೆ ಉಂಟಾಗಿತ್ತು. ಮಹಾನ್ ಸರೋದ್ ವಾದಕ ಬುದ್ಧದೇವ್ ದಾಸ್‌ಗುಪ್ತಾ ಅವರ ನಿಧನವು ಇದಕ್ಕೆ ಪ್ರೇರಣೆಯಾಗಿತ್ತು. 1980ರ ದಶಕದಲ್ಲಿ ನಾನು ಕೋಲ್ಕತಾದಲ್ಲಿ ವಿದ್ಯಾರ್ಥಿಯಾಗಿದ್ದಾಗ ಬುದ್ಧದೇವ್ ದಾಸ್‌ಗುಪ್ತಾ ಅವರ ಹಾಡಿನ ಸಂಗೀತ ಕಚೇರಿಯನ್ನು ಆಲಿಸಿದ್ದೆ. ಅವರೊಬ್ಬ ವೃತ್ತಿಪರ ಇಂಜಿನಿಯರ್ ಆಗಿದ್ದರಿಂದ, ಅವರಿಗೆ ತನ್ನ ಸಮಕಾಲೀನರಾದ ಅಲಿ ಅಕ್ಬರ್‌ಖಾನ್ ಹಾಗೂ ಅಮ್ಜದ್ ಅಲಿ ಖಾನ್ ಅವರಂತೆ ಅಖಿಲ ಭಾರತ ಹಾಗೂ ಪಾಶ್ಚಿಮಾತ್ಯ ವಲಯದಲ್ಲಿ ಸಂಗೀತಗೋಷ್ಠಿಗಳನ್ನು ನಡೆಸಲು ಸಾಧ್ಯವಾಗಿರಲಿಲ್ಲ. ದಾಸ್‌ಗುಪ್ತಾ ಅವರ ಸಂಗೀತಗೋಷ್ಠಿಗಳ ಸುಮಧುರ ನೆನಪುಗಳನ್ನು ನಾನು ಈಗಲೂ ಉಳಿಸಿಕೊಂಡಿದ್ದೇನೆ. ಬುದ್ಧದೇವ್ ಬಾಬು ಅವರು 2010ರಲ್ಲಿ ಬೆಂಗಳೂರಿನಲ್ಲಿ ಸಂಗೀತಗೋಷ್ಠಿ ನಡೆಸಿಕೊಡಲು ಆಗಮಿಸಿದ್ದಾಗ, ಅವರ ಸುಮಧುರ ವಾದನ ಆಲಿಸಲು ನನ್ನ ಪುತ್ರನನ್ನು ಕರೆದುಕೊಂಡು ಹೋಗಿದ್ದೆ. ಆ ಸಂಗೀತ ವಿದ್ವಾನ್‌ರಿಗೆ ಮುಪ್ಪು ಅವರಿಸಿರುವುದು ಸ್ಪಷ್ಟವಾಗಿ ಗೋಚರವಾಗುತ್ತಿತ್ತು. ಸಂಗೀತಗೋಷ್ಠಿ ಆರಂಭಿಸುವ ಮುನ್ನ ಚೌಡಯ್ಯ ಸ್ಮಾರಕ ಭವನದಲ್ಲಿ ಶ್ರೋತೃಗಳನ್ನು ಉದ್ದೇಶಿಸಿ ಮಾತನಾಡಿ ಅವರು, ‘‘ಇದು ನೀವು ಹಿಂದೆ ತಿಳಿದಿದ್ದಂತಹ ಬುದ್ಧದೇವ್ ದಾಸ್‌ಗುಪ್ತಾ ಅಲ್ಲ. ಆದರೆ ಬೆಂಗಳೂರಿನಿಂದ ನನಗೆ ಸಂಗೀತಗೋಷ್ಠಿ ನಡೆಸಲು ಆಹ್ವಾನ ಬಂದಾಗ ಅದನ್ನು ತಿರಸ್ಕರಿಸಲು ನನಗೆ ಸಾಧ್ಯವಾಗಲಿಲ್ಲ’’ ಎಂದರು.

2018ರ ಜನವರಿಯಲ್ಲಿ ಬುದ್ಧದೇವ್ ದಾಸ್‌ಗುಪ್ತಾ ಅವರು ನಿಧನರಾದರು. ಅವರು ತಮ್ಮ 85ನೇ ಜನ್ಮದಿನವನ್ನು ಆಚರಿಸುವುದಕ್ಕೆ ಕೆಲವೇ ವಾರಗಳಷ್ಟೇ ಬಾಕಿಯಿದ್ದವು. ಅವರ ನಿಧನದ ಸುದ್ದಿಯನ್ನು ಕೇಲಿ ಗೋರಖ್ ಕಲ್ಯಾಣ್ ಹಾಗೂ ಜೈಜೈವಂತಿ ಕುರಿತ ಅವರ ವಾದನದ ರೆಕಾರ್ಡಿಂಗ್ ಕೇಳಲು ನಾನೊಮ್ಮೆ ಐಪಾಡ್ ಬಳಸಿದ್ದೆ. 1980ರ ದಶಕದಲ್ಲಿ ರಾಷ್ಟ್ರೀಯ ಕಾರ್ಯಕ್ರಮದಲ್ಲಿ ಅದ್ಭುತವಾಗಿ ಕೇದಾರ ರಾಗವನ್ನು ನುಡಿಸುತ್ತಿರುವುದನ್ನು ಆಲಿಸಿದೆ. ಬುದ್ಧದೇವ್ ಅವರ ನಿಧನದ ಆನಂತರ ವಾರಗಳಲ್ಲಿ ಅವರ ಅಭಿಮಾನಿಗಳು ಅವರ ವಾದನಸಂಗೀತವನ್ನು ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡಿದ್ದರು. ಅವುಗಳಲ್ಲಿ ಅತ್ಯಂತ ಸುಂದರವಾದ ಹಾಗೂ ಅತ್ಯಂತ ಅಪರೂಪವಾಗಿ ಬಳಕೆಯಾಗುವ ರಾಗವಾದ ಛಾಯಾ ಭಾಂಗ್ ಕೂಡಾ ಇತ್ತು. ಅದನ್ನು ನಾನು ಮತ್ತೆ ಮತ್ತೆ ಆಲಿಸುತ್ತಿದ್ದೆ.

‘‘ಕೃಷ್ಣಾ ನೀ ಬೇಗನೆ ಬಾರೋ’’ ಎಂಬ ನಿರ್ದಿಷ್ಟ ಹಾಡು ಯೂಟ್ಯೂಬ್ ಸಂಗೀತಭಂಡಾರದೆಡೆಗೆ ನನ್ನನ್ನು ಕೊಂಡೊಯ್ದ ‘ವಾಹನ’ವಾಗಿತ್ತು. ಬುದ್ಧದೇವ್ ದಾಸ್‌ಗುಪ್ತಾ ಎಂಬ ಸಂಗೀತಗಾರ ಅವರು ಇನ್ನೊಂದು ವಾಹನವಾಗಿದ್ದರು. ಕೊರೋನ ಸಾಂಕ್ರಾಮಿಕದ ಹಾವಳಿ ಉಲ್ಬಣಗೊಂಡ ಬಳಿಕ ನನ್ನ ಯೂಟ್ಯೂಬ್ ವೀಕ್ಷಣೆಯ ಹವ್ಯಾಸ ಹೆಚ್ಚಾಯಿತು. ಅವುಗಳಲ್ಲಿ ಕೆಲವು ಕ್ರಿಕೆಟ್ ಕುರಿತಾದುದಾಗಿತ್ತು. ಅದರಲ್ಲೂ ಶೇನ್ ವಾರ್ನ್ ಹಾಗೂ ಮೈಕೆಲ್ ಆಥರ್ಟನ್ ಅವರ ನಡುವಿನ ಅದ್ಭುತವಾದ ಸಂಭಾಷಣೆಯನ್ನು ವೀಕ್ಷಿಸುವಂತೆ ನಾನು ಶಿಫಾರಸು ಮಾಡುತ್ತೇನೆ. ಇನ್ನು ಕೆಲವು ಸಾಹಿತ್ಯಕ್ಕೆ ಸಂಬಂಧಿಸಿದಾಗಿತ್ತು.

ಸಿ.ಎಲ್.ಆರ್.ಜೇಮ್ಸ್ ಹಾಗೂ ಸ್ಟುವಾರ್ಟ್ ಹಾಲ್ ನಡುವೆ ವಿಚಾರಗೋಷ್ಠಿಯನ್ನು ನಾನಿಲ್ಲಿ ವಿಶೇಷವಾಗಿ ಪ್ರಸ್ತಾವಿಸುತ್ತೇನೆ. ಆದಾಗ್ಯೂ ಯೂಟ್ಯೂಬ್‌ನಲ್ಲಿ ಬಹುತೇಕವಾಗಿ ನಾನು ಸಂಗೀತದ ಆಲಿಕೆಗೆ ಪ್ರಾಶಸ್ತ್ಯ ನೀಡುತ್ತೇನೆ. ಯೂಟ್ಯೂಬ್ ಮೂಲಕವೇ ನಾನು ಅತ್ಯಂತ ನಿಧಾನವಾಗಿ ಪಾಶ್ಚಾತ್ಯ ಶಾಸ್ತ್ರೀಯ ಸಂಗೀತದ ಭವ್ಯತೆಯನ್ನು ಅರಿತುಕೊಂಡೆ ಹಾಗೂ ಯೂಟ್ಯೂಬ್ ಮೂಲಕವೇ ನಾನು ನನ್ನ ಯೌವನಾವಸ್ಥೆಯಲ್ಲಿ ಆರಾಧಿಸುತ್ತಿದ್ದ ಗಾಯಕರ ಜೊತೆಗಿನ ತಲೆಮಾರುಗಳ ಬಾಂಧವ್ಯದಾಚೆಗೂ ಹೋಗಲು ಸಾಧ್ಯವಾಗಿದೆ. ವೆಂಕಟೇಶ್ ಕುಮಾರ್, ಕಾಲಪಿನಿ ಕೋಮ್‌ಕಳಿ, ಅಶ್ವಿನಿ ಭಿಡೆ ದೇಶಪಾಂಡೆ ಹಾಗೂ ಪ್ರಿಯಾ ಪುರುಷೋತ್ತಮನ್‌ರಂತಹ ಸಮಕಾಲೀನ ಗಾಯಕರ ಸಂಗೀತವನ್ನು ಕೂಡಾ ನಾನು ಆನಂದಿಸತೊಡಗಿದೆ.

ಕಿರಾನಾ ಘರಾನದ ಮಹಾನ್ ಗಾಯಕಿ ರೋಶನ್ ಅರಾ ಬೇಗಂ ಅವರ ಹಾಡುಗಳ ರೆಕಾರ್ಡಿಂಗ್ ಯೂಟ್ಯೂಬ್‌ನಲ್ಲಿನ ನನ್ನ ತೀರಾ ಇತ್ತೀಚಿನ ಅನ್ವೇಷಣೆಯಾಗಿದೆ. ಉಸ್ತಾದ್ ಅಬ್ದುಲ್ ಕರೀಂ ಖಾನ್ ಅವರ ವಿದ್ಯಾರ್ಥಿನಿಯಾಗಿದ್ದ ರೋಶನ್ ಅರಾ ಅವರು ದೇಶವಿಭಜನೆಯ ಬಳಿಕ ಪಾಕಿಸ್ತಾನಕ್ಕೆ ತೆರಳಿದರು. 1982ರಲ್ಲಿ ನಿಧನರಾಗುವವರೆಗೂ ಅವರು ಸಂಗೀತ ಪ್ರದರ್ಶನ ನೀಡುತ್ತಲೇ ಇದ್ದರು. 2009ರಲ್ಲಿ ನಾನು ಲಾಹೋರ್‌ಗೆ ತೆರಳಿದ್ದಾಗ ಅನಾರ್ಕಲಿ ಬಝಾರ್‌ನಲ್ಲಿ ರೋಶನ್ ಅರಾ ಅವರ ಹಾಡುಗಳ ಧ್ವನಿಮುದ್ರಿಕೆಗಳಿಗಾಗಿ ಹುಡುಕಾಡಿದ್ದೆ. ನಾನು ಲೆಕ್ಕವಿಲ್ಲದಷ್ಟು ಸಲ ಆಲಿಸುತ್ತಿದ್ದ ಶಂಕರ ಎಂಬ ಹಾಡಿನ ಗಾಯನವೂ ಸೇರಿದಂತೆ ಆಕೆಯ ಹಾಡುಗಳ ಕೆಲವು ಕ್ಯಾಸೆಟ್‌ಗಳು ನನಗೆ ದೊರೆತವು. ಇತ್ತೀಚೆಗೆ ನನಗೆ ಬಹುಶಃ 1950ರ ದಶಕದಲ್ಲಿ ದಿಲ್ಲಿಯಲ್ಲಿ ನಡೆದ ಸಂಗೀತ ಗೋಷ್ಠಿಯೊಂದರ ರೆಕಾರ್ಡಿಂಗ್ ಯೂಟ್ಯೂಬ್‌ನಲ್ಲಿ ಲಭ್ಯವಾಯಿತು. ಅತ್ಯಂತ ಅಪರೂಪದ ನೂರಾನಿ ರಾಗವು ಆ ಸಂಗೀತ ಗೋಷ್ಠಿಯ ಕೇಂದ್ರ ಬಿಂದುವಾಗಿತ್ತು. ಸಂಗೀತ ನಡುವೆ ನಿರೂಪಕರಾದ ಸುರಜಿತ್ ಸೇನ್ ಅವರು ತನ್ನ ಸುಶ್ರಾವ್ಯ ಧ್ವನಿಯಲ್ಲಿ ‘‘ಇದು ಆಲ್ ಇಂಡಿಯಾ ರೇಡಿಯೊ. ಇಂದು ರಾತ್ರಿ ರಾಷ್ಟ್ರೀಯ ಸಂಗೀತ ಕಾರ್ಯಕ್ರಮದಲ್ಲಿ, ನೀವು ಪಾಕಿಸ್ತಾನದ ರೋಶನ್ ಅರಾ ಬೇಗಂ ಅವರ ಗಾಯನವನ್ನು ಕೇಳುವಿರಿ’’ ಎಂದು ಹೇಳುವುದನ್ನು ಕೇಳುವಾಗ ಮೈಪುಳಕಗೊಳ್ಳುತ್ತದೆ.

ಹಲವಾರು ವರ್ಷಗಳಿಂದ ನಾನು ಯೂಟ್ಯೂಬ್‌ನಲ್ಲಿ ಹೆಚ್ಚಾಗಿ ಹಾಡುಗಳನ್ನೇ ಕೇಳುತ್ತಿದ್ದೇನೆ. ಇತರರು ಆಲಿಸಲು ಹಾಗೂ ಅಭಿಮಾನದಿಂದ ತಮ್ಮ ಸಂಗ್ರಹಗಳನ್ನು ನಿಸ್ವಾರ್ಥತೆಯಿಂದ ಹಂಚಿಕೊಳ್ಳುತ್ತಿರುವವರನ್ನು ನಾನು ಪ್ರಶಂಸಿಸುತ್ತೇನೆ. ಅವರ ಹೆಸರುಗಳನ್ನು ಉಲ್ಲೇಖಿಸಲು ನಾನು ಬಯಸುವೆ. ಆದರೆ ಕೆಲವು ಸಂಕುಚಿತ ಮನೋಭಾವದ ಹಕ್ಕು ಸ್ವಾಮ್ಯವಾದಿಗಳು ಹಾಗೂ ದುರಾಸೆಯ ನ್ಯಾಯವಾದಿಗಳಿಂದ ಅವರು ಕಿರುಕುಳಕ್ಕೊಳಗಾಗುವುದನ್ನು ನಾನು ಇಚ್ಛಿಸುವುದಿಲ್ಲ. ನನ್ನಂತೆಯೇ ತಮ್ಮ ಸಂಗೀತದ ಅವಶ್ಯಕತೆಗಳನ್ನು ಈಡೇರಿಸಲು ಯೂಟ್ಯೂಬ್‌ಗೆ ತೆರಳುವವರಿಗೆ ನಾನು ಯಾರನ್ನು ಉದ್ದೇಶಿಸಿ ಹೇಳುತ್ತಿದ್ದೇನೆಂಬುದು ಅರಿವಾದೀತು. ದ್ವೇಷ, ಮಾತ್ಸರ್ಯ, ಅಸಹನೆ, ಪ್ರತಿಸ್ಪರ್ಧೆ, ಹೆಮ್ಮೆ ಹಾಗೂ ಪೂರ್ವಾಗ್ರಹದಿಂದ ಪೀಡಿತವಾಗಿ ರುವ ಈ ಜಗತ್ತಿನಲ್ಲಿ, ತಾವು ಶ್ರಮವಹಿಸಿ ಸಂಗ್ರಹಿಸಿರುವ ಅಮೂಲ್ಯವಾದ ಸಂಗೀತ ನಿಧಿಯನ್ನು ಸಾರ್ವಜನಿಕ ವೇದಿಕೆಯಲ್ಲಿ ಸಮರ್ಪಿಸುತ್ತಿರುವವರು ನಿಜಕ್ಕೂ ಮಾನವಕುಲಕ್ಕೆ ಆಭರಣಗಳಾಗಿದ್ದಾರೆ.

Writer - ರಾಮಚಂದ್ರ ಗುಹಾ

contributor

Editor - ರಾಮಚಂದ್ರ ಗುಹಾ

contributor

Similar News

ಸಂವಿಧಾನ -75