ಶಾರ್ದೂಲ: ಭ್ರಮೆ, ಸಂದೇಶ ಮತ್ತು ನಾಟಕೀಯತೆ

Update: 2021-08-21 19:30 GMT

ಯುವಕ-ಯುವತಿಯರ ಎರಡು ಜೋಡಿಗಳು. ನಾಲ್ವರೂ ಪರಸ್ಪರ ಸ್ನೇಹಿತರು. ಒಂದು ಸಾಹಸಮಯವಾದ ವಾರಾಂತ್ಯವನ್ನು ಕಳೆಯಲೆಂದು ಕಾರಲ್ಲಿ ಪ್ರಯಾಣಿಸುತ್ತಾರೆ. ಆದರೆ ಆ ಪ್ರಯಾಣ ಒಂದು ಅನಿರೀಕ್ಷಿತ ತಿರುವಿನಲ್ಲಿ ಕೊನೆಗೊಳ್ಳುತ್ತದೆ. ಅದೇನು ಎನ್ನುವುದೇ ‘ಶಾರ್ದೂಲ’ ಎನ್ನುವ ಸಿನೆಮಾದ ಹೂರಣ.

ನಾಲ್ವರಲ್ಲಿ ಚಿತ್ರದ ನಾಯಕನ ಹೆಸರು ದರ್ಶನ್. ಆತನ ಪ್ರೇಯಸಿ ದೀಕ್ಷಾಗೆ ದೆವ್ವಗಳೆಂದರೆ ವಿಪರೀತ ಭಯ. ಜೋಡಿಗಳು ಶಾರ್ದೂಲ ಎನ್ನುವ ಕಾಡುದಾರಿ ತಲುಪಿದಾಗ ಅವರಿದ್ದ ಕಾರು ನಿಂತು ಹೋಗುತ್ತದೆ. ಆಗ ಆ ಕಾಡುದಾರಿಯಲ್ಲಿ ಸಾವಿಗೀಡಾದ ತನ್ನ ತಂದೆ-ತಾಯಿಯ ಕತೆ ಹೇಳುತ್ತಾನೆ ದರ್ಶನ್. ಅದನ್ನು ಕೇಳಿ ದೀಕ್ಷಾ ಭಯಪಡುತ್ತಾಳೆ. ಬಳಿಕ ನಾಲ್ವರು ಆ ಕಾಡು ದಾರಿಯಲ್ಲಿ ಮುಂದೆ ಹೋದಾಗ ಇಲೆಕ್ಟ್ರಿಕ್ ಗರಗಸವೊಂದು ಪತ್ತೆಯಾಗುತ್ತದೆ. ಅದನ್ನು ಹಿಡಿದು ಮತ್ತೆ ಉಳಿದವರನ್ನು ಭಯಪಡಿಸಿ ನಗುತ್ತಾನೆ ದರ್ಶನ್. ಒಂದಷ್ಟು ಕಾಡು ಸುತ್ತಿ ತನ್ನ ಸಂಬಂಧಿಕರ ಮನೆಗೆ ಕರೆದೊಯ್ಯುತ್ತಾನೆ ದರ್ಶನ್. ಅಲ್ಲಿಂದ ಅವರು ಅದೇ ಶಾರ್ದೂಲ ಕಾಡಿನ ದಾರಿಯಲ್ಲಿ ಮರಳುವಾಗ ತುಸು ಕಾಡೊಳಗೆ ನಡೆಯುತ್ತಾರೆ. ಕಾರಿನ ಬಳಿಗೆ ಮರಳುವಾಗ ಕಾರಿನ ಡಿಕ್ಕಿಯಲ್ಲಿದ್ದ ಅವರ ವಸ್ತುಗಳೆಲ್ಲ ಹೊರಗಡೆ ಚೆಲ್ಲಪಿಲ್ಲಿಯಾಗಿ ಹರಡಿದ್ದವು. ಡಿಕ್ಕಿಯೊಳಗಿನಿಂದ ಯಾರೋ ಬಡಿಯುವ ಶಬ್ದ ಕೇಳಿಸುತ್ತದೆ. ಆತಂಕದಿಂದಲೇ ಡಿಕ್ಕಿ ತೆರೆದಾಗ ಅಲ್ಲಿ ಗರಗಸದಿಂದ ಕುತ್ತಿಗೆಗೆ ಏಟಾಗಿ ಬಿದ್ದಿರುವ ವ್ಯಕ್ತಿಯೊಬ್ಬ ಕಾಣಿಸುತ್ತಾನೆ. ಆತನನ್ನು ಡಿಕ್ಕಿ ಹೊರಗಿಟ್ಟು ತರಾತುರಿಯಿಂದ ಕಾರು ಹತ್ತುತ್ತಾರೆ ದರ್ಶನ್, ದೀಕ್ಷಾ ಮತ್ತು ಇನ್ನೊಂದು ಜೋಡಿ. ಆದರೆ ನಿಜಕ್ಕೂ ಅವರಿಗೆ ಆ ಸ್ಥಳದಿಂದ ಅಷ್ಟು ಸುಲಭದಲ್ಲಿ ಪಾರಾಗಿ ಬರಲು ಸಾಧ್ಯವಾಗುತ್ತದೆಯೇ? ಆ ಜಾಗದಿಂದ ಬಂದರೂ ಮನೆಗೆ ಹೋದ ಮೇಲೆ ದರ್ಶನ್ ಮತ್ತು

ದೀಕ್ಷಾ ಎದುರಿಸಬೇಕಾದ ಸಮಸ್ಯೆಗಳೇನು ಎನ್ನುವ ಕುರಿತಾದ ಪ್ರಶ್ನೆಗಳಿಗೆ ಚಿತ್ರ ಒಂದು ಮಟ್ಟಕ್ಕೆ ಉತ್ತರ ನೀಡಬಹುದು.
ಚಿತ್ರದಲ್ಲಿ ದರ್ಶನ್ ಪಾತ್ರವನ್ನು ರವಿ ಮೂಡಿಗೆರೆ ನಿರ್ವಹಿಸಿದ್ದಾರೆ. ಅವರ ನಟನೆಯಲ್ಲಿ ನಾಟಕೀಯತೆ ಎದ್ದು ಕಾಣುತ್ತದೆ. ನಾಟಕೀಯತೆಯ ವಿಚಾರಕ್ಕೆ ಬಂದರೆ ಅವುಗಳು ಇತರ ಪಾತ್ರಗಳಲ್ಲಿ ಮತ್ತು ಸಂಭಾಷಣೆಗಳಲ್ಲಿಯೂ ಗೋಚರಿಸುತ್ತವೆ. ವಿಶೇಷ ಏನೆಂದರೆ ದೆವ್ವ ಕಂಡು ಭಯ ಬೀಳುವ ದೀಕ್ಷಾ ಪಾತ್ರ ಮಾಡಿರುವ ಕೃತ್ತಿಕಾ ಅವರು ಮಾತ್ರ ಸಹಜವಾಗಿಯೇ ಭಯಬಿದ್ದಂತೆ ಕಾಣಿಸುತ್ತಾರೆ. ಅದೊಂದು ಭಯವೇ ಪ್ರೇಕ್ಷಕರಾದ ನಮ್ಮಾಳಗೂ ಆವರಿಸಿ ಚಿತ್ರವನ್ನು ಕೊನೆಯ ತನಕ ಕುತೂಹಲದಿಂದ ನೋಡಿಸಿಕೊಂಡು ಹೋಗುತ್ತದೆ. ಉಳಿದಂತೆ ಕಾಡೊಳಗೆ ಸಿಗುವ ಮಹೇಶ್ ಸಿದ್ದು, ದೆವ್ವದಂತೆ ಕಾಡುವ ನವೀನ್ ಅವರ ಲೋಬೊ ಪಾತ್ರ ನಿರ್ವಹಣೆ ಕೂಡ ಆಕರ್ಷಕವಾಗಿದೆ. ಆದರೆ ಕ್ಲೈಮ್ಯಾಕ್ಸ್‌ಗೂ ಮೊದಲು ಅವರಿಂದ ಸಂದೇಶದಂತೆ ಹೇಳಿಸಲ್ಪಟ್ಟ ಮಾತುಗಳು ಮತ್ತೆ ನಾಟಕೀಯತೆಗೆ ನಾಂದಿ ಹಾಡಿವೆ.

ನವೀನ್ ಅವರ ಕಣ್ಣುಗಳ ಚಲನೆಯಂತೂ ಉಲ್ಲೇಖಾರ್ಹ. ಹೊಡೆದಾಟದ ದೃಶ್ಯಗಳನ್ನು ಬಿಟ್ಟರೆ ಚೇತನ್ ಚಂದ್ರ ಅವರು ಮತ್ತೆಲ್ಲಿಯೂ ಗಮನ ಸೆಳೆಯುವುದಿಲ್ಲ ಎನ್ನುವುದು ವಿಷಾದನೀಯ. ದರ್ಶನ್ ಚಿಕ್ಕಮ್ಮನಾಗಿ ಕಿರುತೆರೆ ನಟಿ ರೇಣು ಅವರು ಒಂದು ದೃಶ್ಯದಲ್ಲಿ ಮಾತ್ರ ಕಾಣಿಸಿದರೂ ನೆನಪಲ್ಲಿ ಉಳಿಯುತ್ತಾರೆ. ಉಳಿದಂತೆ

ಹಿನ್ನೆಲೆ ಸಂಗೀತ ಮತ್ತು ಹಾಡುಗಳು ತಕ್ಕಮಟ್ಟಿಗೆ ಮನಸೆಳೆಯುವಂತಿವೆೆ. ಅದರಲ್ಲೂ ಕ್ಲೈಮ್ಯಾಕ್ಸ್ ಗೀತೆ ಸಂದರ್ಭಕ್ಕೆ ಚೆನ್ನಾಗಿ ಹೊಂದುತ್ತದೆ. ಚಿತ್ರದ ಮೂಲಕ ನಿರ್ದೇಶಕರು ಭಯಕ್ಕೊಳಗಾದ ವ್ಯಕ್ತಿಯೊಳಗಿನ ಭ್ರಮೆಯನ್ನು ತೋರಿಸಿದ್ದಾರೆ. ಆದರೆ ಭ್ರಮೆಯೇ ವಾಸ್ತವವೋ ಅಥವಾ ವಾಸ್ತವವೇ ಭ್ರಮೆಯೋ ಎನ್ನುವುದನ್ನು ಪ್ರೇಕ್ಷಕರಿಗೆ ಬಿಟ್ಟಿದ್ದಾರೆ.


ತಾರಾಗಣ: ಚೇತನ್ ಚಂದ್ರ, ಕೃತ್ತಿಕಾ
ನಿರ್ದೇಶನ: ಅರವಿಂದ್ ಕೌಶಿಕ್
ನಿರ್ಮಾಣ: ರೋಹಿತ್ ಎಸ್., ಕಲ್ಯಾಣ್ ಸಿ.

Writer - ಶಶಿಕರ ಪಾತೂರು

contributor

Editor - ಶಶಿಕರ ಪಾತೂರು

contributor

Similar News