ದೇಶ ವಿಭಜನೆಯ ಕಹಿ ನೆನಪು ಬೇಡ

Update: 2021-08-23 04:09 GMT

ಹೊಸ ಭಾರತ ಕಟ್ಟಲು ಹಳೆಯ ಕಹಿ ಘಟನೆಗಳನ್ನು ನಾವು ಮರೆಯಬೇಕಾಗಿದೆ. ಚುನಾವಣೆಗಳು ಬರುತ್ತವೆ, ಹೋಗುತ್ತವೆ. ಯಾರೇ ಗೆಲ್ಲಲಿ, ಸೋಲಲಿ ಭಾರತ ಎಂಬ ದೇಶ ಸೋಲಬಾರದು. ಭಾರತವೆಂದರೆ ಕೇವಲ ಇಲ್ಲಿ ಹರಿಯುವ ನದಿಗಳು, ದೇವಾಲಯಗಳು, ಕಲ್ಲು ಮಣ್ಣುಗಳಲ್ಲ. ಭಾರತವೆಂದರೆ ಇಲ್ಲಿ ಶತಮಾನಗಳಿಂದ ನೆಲೆಸಿರುವ ಜನ. ಯುರೋಪಿನ ರಾಷ್ಟ್ರಗಳಂತೆ ಯಾವುದೇ ಒಂದು ಧರ್ಮ, ಸಮುದಾಯದ ಜನ ಮಾತ್ರ ಇಲ್ಲಿ ವಾಸಿಸುತ್ತಿಲ್ಲ. ಇದು ಬಹುಧರ್ಮೀಯ, ಬಹುಜನಾಂಗೀಯ, ಬಹು ಭಾಷಿಕ, ಬಹುಸಂಸ್ಕೃತಿಗಳ ಜನರು ನೆಲೆಸಿ ಕಟ್ಟಿದ ದೇಶ.



ಚುನಾವಣೆ ಗೆಲ್ಲುವ ಈ ಅದ್ಭುತ ಅಸ್ತ್ರವನ್ನು ಪ್ರಧಾನಿ ನರೇಂದ್ರ ಮೋದಿಯವರು ಮಾತಿನ ಮೂಲಕ ಝಳಪಿಸಿದ್ದಾರೆ. ಆರ್ಥಿಕ, ಸಾಮಾಜಿಕ ಅಭಿವೃದ್ಧಿಯ ಕಾರ್ಯಕ್ರಮ ಇಟ್ಟುಕೊಂಡು ಜನರ ಬಳಿ ಹೋಗಲು ಮುಖವಿಲ್ಲ. ಯಾಕೆಂದರೆ ಜನತೆಗೆ ನೀಡಿರುವ ಯಾವ ಭರವಸೆಯನ್ನು ಈಡೇರಿಸಲು ಆಗಿಲ್ಲ. ಏರುತ್ತಿರುವ ಜೀವನಾವಶ್ಯಕ ಪದಾರ್ಥಗಳ ಬೆಲೆಯನ್ನು ನಿಯಂತ್ರಿಸಲು ಆಗಿಲ್ಲ. ಕೊರೋನ ನಿಭಾಯಿಸುವಲ್ಲಿ ಸರಕಾರದ ವೈಫಲ್ಯ ಬಟಾಬಯಲಾಗಿದೆ. ದೇಶದ ಆರ್ಥಿಕ ಪರಿಸ್ಥಿತಿ ಹಳ್ಳ ಹಿಡಿದಿದೆ.ಇಂತಹ ಸನ್ನಿವೇಶದಲ್ಲಿ ಮತದಾರರ ಬಳಿ ಹೋಗಿ ಮುಖ ತೋರಿಸುವುದು ಅಂದುಕೊಂಡಷ್ಟು ಸುಲಭವಲ್ಲ. ಅದಕ್ಕಾಗಿ ಅಧಿಕಾರದಲ್ಲಿರುವ ಪಕ್ಷಕ್ಕೆ ಜನ ವಿಭಜನೆಯ ತಂತ್ರ ಬಳಸುವುದು ಅನಿವಾರ್ಯವಾಗಿದೆ. ಈ ಕಾರ್ಯಕ್ಕೆ ನೇರವಾಗಿ ಪ್ರಧಾನಿ ನರೇಂದ್ರ ಮೋದಿಯವರೇ ಕೈ ಹಾಕಿದ್ದಾರೆ.

ಮುಂದಿನ ಲೋಕಸಭಾ ಚುನಾವಣೆ ಇನ್ನೂ ದೂರದಲ್ಲಿದೆ. ಸಕಾಲಕ್ಕೆ ನಡೆದರೆ 2024ರಲ್ಲಿ ಮತ್ತೆ ಮತದಾರರ ಮನೆ ಬಾಗಿಲಿಗೆ ರಾಜಕಾರಣಿಗಳು ಬರುತ್ತಾರೆ. ನಮ್ಮ ಪ್ರಧಾನ ಮಂತ್ರಿಗಳು ಆಗಲೇ ಗೆಲುವಿನ ಬಾವುಟ ಹಾರಿಸಲು ತಂತ್ರ, ಕುತಂತ್ರಗಳನ್ನು ರೂಪಿಸುತ್ತಿದ್ದಾರೆ. ಪ್ರತಿಪಕ್ಷಗಳು ಮತ್ತೆ ಒಂದುಗೂಡಲು ಕಸರತ್ತು ನಡೆಸಿವೆ. ಆದರೆ ಈಗ ಅಧಿಕಾರದಲ್ಲಿರುವ ಪಕ್ಷವನ್ನು ಸೋಲಿಸುವುದು ಅಷ್ಟು ಸುಲಭವಲ್ಲ. ವಿರೋಧ ಪಕ್ಷಗಳ ಬಳಿ ಇಲ್ಲದ ಅದ್ಭ್ಬುತ ಅಸ್ತ್ರವೊಂದು ಬಿಜೆಪಿ ಬಳಿ ಇದೆ.
ಪ್ರಧಾನಿಯವರ ಹೇಳಿಕೆಯ ಉದ್ದೇಶ ಏನೇ ಇರಲಿ ಒಣಗಿದ ಗಾಯಕ್ಕೆ ಮತ್ತೆ ಉಪ್ಪಿನ ಹುಡಿ ಎರಚುವುದು ಒಳ್ಳೆಯದಲ್ಲ. ಇತಿಹಾಸದ ಯಾವುದೋ ಕಾಲಘಟ್ಟದಲ್ಲಿ ಕಹಿ ಘಟನೆಗಳು ಸಂಭವಿಸಿರುತ್ತವೆ. ಯಾವುದೇ ಕುಟುಂಬವಿರಲಿ, ಹಳ್ಳಿಯಾಗಿರಲಿ ಅಥವಾ ದೇಶವಾಗಿರಲಿ ಇಂತಹ ಕಹಿ ಘಟನೆಗಳನ್ನು ಮರೆತು ಹೊಸ ಬದುಕನ್ನು ಕಟ್ಟಿಕೊಳ್ಳುವುದು ವಿವೇಕದ ಕ್ರಮವೆನಿಸಿಕೊಳ್ಳುತ್ತದೆ. ಯಾವುದನ್ನೂ ದೀರ್ಘಕ್ಕೆ ತೆಗೆದುಕೊಂಡು ಹೋಗಬಾರದು.

ಈಗ ಅಯೋಧ್ಯೆಯ ರಾಮ ಮಂದಿರದ ಬಂಡವಾಳ ಮುಗಿದಿದೆ.ದನಗಳ ಸಾಗಾಟ ಮತ್ತು ಹತ್ಯೆ ಹಳೆಯದಾಗಿದೆ. ಲವ್ ಜಿಹಾದ್ ಬೇಳೆ ಬೇಯುವುದಿಲ್ಲ. ಅಂತಲೇ ಪ್ರಧಾನ ಮಂತ್ರಿ ಮೋದಿಯವರಿಗೆ ದೇಶ ವಿಭಜನೆಯ ಕ್ರೌರ್ಯದ ನೆನಪಾಗಿದೆ. ಪ್ರತಿ ವರ್ಷ ಆಗಸ್ಟ್ 14 ರಂದು ದೇಶ ವಿಭಜನೆಯ ಕ್ರೌರ್ಯದ ನೆನಪಿನ ದಿನವನ್ನಾಗಿ ಆಚರಿಸುವುದಾಗಿ ಅವರು ಘೋಷಿಸಿದ್ದಾರೆ. ಈ ಮೂಲಕ ಎರಡು ಸಮುದಾಯಗಳ ನಡುವೆ ಮತ್ತೆ ವೈಷಮ್ಯದ ಕಂದಕ ನಿರ್ಮಿಸಿ ಓಟಿನ ಬೆಳೆ ತೆಗೆಯುವ ಲೆಕ್ಕಾಚಾರ ಅವರ ಮಾತಿನಲ್ಲಿದೆ.

ಇನ್ನು ದೇಶ ವಿಭಜನೆ ಎಂಬುದು ಲಕ್ಷಾಂತರ ಜನರ ಬದುಕು ಪಲ್ಲಟಗೊಂಡ ಕಹಿ ಘಟನೆ. ಭಾರತ ಮತ್ತು ಪಾಕಿಸ್ತಾನ ಎರಡೂ ದೇಶಗಳ ಜನರು ವಿಭಜನೆಯ ಕಹಿ ನೆನಪನ್ನು ಮರೆಯುತ್ತಿದ್ದಾರೆ. ಭಾರತ ಮತ್ತು ಪಾಕಿಸ್ತಾನದ ಅನೇಕ ಕುಟುಂಬಗಳ ನಡುವೆ ನೆಂಟಸ್ತಿಕೆಗಳಿವೆ. ಈಗ ಪರಸ್ಪರ ಬೆರೆಯಲು ಎರಡೂ ದೇಶಗಳ ನಾಗರಿಕರು ಬಯಸುತ್ತಿದ್ದಾರೆ.ಆದರೆ ಈ ದೇಶಗಳ ಆಳುವ ವರ್ಗಗಳಿಗೆ ಜನ ಪರಸ್ಪರ ಬೆರೆಯುವುದು ಬೇಕಾಗಿಲ್ಲ.

 ಸಣ್ಣಪುಟ್ಟ ಊರುಗಳಲ್ಲಿ ಮತ್ತು ನಗರಗಳಲ್ಲಿ ಕೂಡ ಎರಡು ಕುಟುಂಬಗಳ ನಡುವೆ ವೈಷಮ್ಯ ಉಂಟಾದಾಗ ರಾಜಿ ಪಂಚಾಯತಿ ಮೂಲಕ ಬಗಹರಿಸಿಕೊಳ್ಳುವುದು ನಾಗರಿಕ ಸಂಸ್ಕೃತಿ. ಇಂದಿಗೂ ಅನೇಕ ಹಳ್ಳಿಗಳಲ್ಲಿ ಸ್ಥಳೀಯ ಜಗಳ, ವೈಷಮ್ಯ, ದ್ವೇಷಗಳನ್ನು ಕೋರ್ಟ್‌ಗೆ ಹೋಗದೇ ರಾಜಿ ಮೂಲಕ ಬಗೆಹರಿಸುವ ಪದ್ಧತಿ ನಮ್ಮ ದೇಶದಲ್ಲಿದೆ.

ದೇಶ ಮತ್ತು ಸಾಮಾಜಿಕ ವಿಭಜನೆ ಹಾಗೂ ಸಂಘರ್ಷದಲ್ಲಿರುವ ವಿಷವನ್ನು ಹೊರತೆಗೆದು ಸಾಮಾಜಿಕ ಸಾಮರಸ್ಯವನ್ನು ಬಲಪಡಿಸಲು ಐತಿಹಾಸಿಕ ಕ್ರೌರ್ಯದ ವಾರ್ಷಿಕ ದಿನಾಚರಣೆ ಅಗತ್ಯ ಎಂದು ಪ್ರಧಾನಿ ಹೇಳಿದ್ದರೂ ಅವರ ಹೇಳಿಕೆಯ ಉದ್ದೇಶ ಬೇರೆಯದೇ ಆಗಿದೆ ಎಂಬ ಸಂದೇಹ ಸಹಜವಾಗಿ ಮೂಡುತ್ತದೆ.

ಪಾಕಿಸ್ತಾನದ ಜೊತೆಗೆ ಗಡಿ ಹಂಚಿಕೊಂಡಿರುವ ಪಂಜಾಬ್, ಅತ್ಯಂತ ಮಹತ್ವದ ಉತ್ತರ ಪ್ರದೇಶ ಸೇರಿದಂತೆ ಐದು ರಾಜ್ಯಗಳ ವಿಧಾನ ಸಭಾ ಚುನಾವಣೆ ಕೆಲವೇ ತಿಂಗಳಲ್ಲಿ ನಡೆಯಲಿರುವುದರಿಂದ ಅವುಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಕೋಮು ಧ್ರುವೀಕರಣದ ಬ್ರಹ್ಮಾಸ್ತ್ರ ಬಳಸಿ ಮತ್ತೆ ಗೆಲುವಿನ ಜಯಭೇರಿ ಮೊಳಗಿಸಲು ದೇಶ ವಿಭಜನೆಯ ಕ್ರೌರ್ಯದ ನೆನಪಾಗಿದೆ ಅಂದರೆ ಅತಿಶಯೋಕ್ತಿಯಲ್ಲ.

ನರೇಂದ್ರ ಮೋದಿಯವರನ್ನು ದೇಶದ ಶೇ.40ರಷ್ಟು ಜನರು ಪ್ರಧಾನಿ ಸ್ಥಾನದಲ್ಲಿ ಕೂರಿಸಿದ್ದಾರೆ. ಅವರು ಕುಳಿತ ಕುರ್ಚಿ ಬರೀ ಕಟ್ಟಿಗೆಯ ಕುರ್ಚಿಯಲ್ಲ. ಅದು ಭಾರತದ ಮೊದಲ ಪ್ರಧಾನಿ ಪಂಡಿತ ಜವಾಹರಲಾಲ್ ನೆಹರೂ ಕುಳಿತ ಕುರ್ಚಿ. 1947ರ ಆಗಸ್ಟ್ 15ರ ಮಧ್ಯರಾತ್ರಿ ಸ್ವಾತಂತ್ರ ಬಂದಾಗ ನೆಹರೂ ಅವರು ಮಾಡಿದ ಐತಿಹಾಸಿಕ ಭಾಷಣವನ್ನು ಮೋದಿಯವರು ಒಮ್ಮೆ ಓದಬೇಕು.

ಪ್ರಧಾನಿ ಬಾಯಿಯಿಂದ ಮನಸ್ಸು ಕಟ್ಟುವ ಮಾತು ಬರಬೇಕೇ ಹೊರತು ಮನಸ್ಸು ಒಡೆಯುವ ಮಾತು ಬರಬಾರದು. ನಿಜ, ಮೋದಿಯವರಿಗೆ ಇತಿಮಿತಿಗಳಿವೆ. ಸಂಘದ ಶಾಖೆಯಲ್ಲಿ ಕವಾಯತು ಮಾಡುತ್ತಾ, ಔರಂಗಜೇಬನ, ಶಿವಾಜಿಯ ಕತೆ ಕೇಳುತ್ತ ಬಾಲ್ಯದಿಂದಲೂ ಬೆಳೆದು ಬಂದವರಿಗೆ ಒಮ್ಮಲೇ ಮಾತು ಬದಲಿಸುವುದು ಕಷ್ಟ. ಆದರೆ ಮೋದಿಯವರು ಈಗ ಕೇವಲ ಸಂಘದ ಸ್ವಯಂ ಸೇವಕನಲ್ಲ ನಮ್ಮ ಪ್ರಧಾನಿ. ಅಂದರೆ ದೇಶದ ನೂರಾ ಮೂವತ್ತು ಕೋಟಿ ಜನರಿಗೆ ಪ್ರಧಾನಿ. ಈ ನೂರಾ ಮೂವತ್ತು ಕೋಟಿಯಲ್ಲಿ ಹಿಂದೂಗಳು, ಜೈನರು, ಬೌದ್ಧರು, ಮುಸಲ್ಮಾನರು, ಕ್ರೈಸ್ತರು, ಸಿಖ್ಖರು,ಲಿಂಗಾಯತರು ಮತ್ತು ಯಾವುದೇ ಧರ್ಮಕ್ಕೆ ಸೇರದ ಬುಡಕಟ್ಟುಗಳು ಹಾಗೂ ನಾಸ್ತಿಕರೂ ಬರುತ್ತಾರೆ. ಇವರನ್ನೆಲ್ಲ ಪ್ರತಿನಿಧಿಸುವ ಪ್ರಧಾನಿ ಬಾಯಿಯಿಂದ ವಿಭಜನೆಯ ಗಾಯ ಕೆರೆದು ಖಾರದ ಪುಡಿ ಎರಚುವಂತಹ ಮಾತು ಬರಬಾರದು.

ದೇಶ ವಿಭಜನೆಯ ಕ್ರೌರ್ಯದ ದಿನವನ್ನು ನೆನಪಿಸುವುದಾದರೆ ಅದರ ಜೊತೆಗೆ ಗಾಂಧಿ ಹತ್ಯೆಯನ್ನು ನೆನಪಿಸಬೇಕಾಗುತ್ತದೆ. ದೇಶ ವಿಭಜನೆ ಯಾವುದೇ ಸಮುದಾಯದ ಆಯ್ಕೆಯಾಗಿರಲಿಲ್ಲ. ಜಿನ್ನಾ ಅವರಂತಹ ಅತೃಪ್ತ ಆತ್ಮಗಳ ಆಯ್ಕೆ ಅದಾಗಿತ್ತು. ಸಾವರ್ಕರ್ ಅಂಥವರೂ ಹಿಂದೂ ಮತ್ತು ಮುಸಲ್ಮಾನರು ಒಂದು ದೇಶವಾಗಿ ಇರಲು ಸಾಧ್ಯವಿಲ್ಲ ಎಂದು ಜಿನ್ನಾಗಿಂಥ ಮೊದಲೇ ಪ್ರತಿಪಾದಿಸಿದ್ದರು. ಆದರೆ, ಬಹುಸಂಖ್ಯಾತ ಮುಸಲ್ಮಾನರು ಜಿನ್ನಾ ಮಾತಿಗೆ ಬೆಲೆ ಕೊಡದೇ ಭಾರತದಲ್ಲಿ ಉಳಿದರು. ಅದೇ ರೀತಿ ಬಹುಸಂಖ್ಯಾತ ಹಿಂದೂಗಳು ಸಾವರ್ಕರ್ ಅವರನ್ನು ಒಪ್ಪಿಕೊಳ್ಳಲಿಲ್ಲ. ದೇಶ ವಿಭಜನೆಯ ಪರಿಚಯವಿಲ್ಲದ, ಅದರ ನೆನಪನ್ನೂ ಬಯಸದ ದೇಶದ ಹೊಸ ಪೀಳಿಗೆಯ ಮೆದುಳಿಗೆ ವಿಭಜನೆಯ ವಿಷ ಮೆತ್ತುವುದು ಬೇಡ. ನವ ಭಾರತದ ಇಂದಿನ ಯುವಕರು ವಿದ್ಯೆ ಕಲಿತು ಆಧುನಿಕ ತಂತ್ರಜ್ಞಾನದಲ್ಲಿ ಪರಿಣಿತಿ ಗಳಿಸಿ, ವಿಜ್ಞಾನಿಗಳಾಗಿ, ವೈದ್ಯರಾಗಿ, ಪ್ರಾಧ್ಯಾಪಕರಾಗಿ ತಮ್ಮ ಬದುಕಿನ ಜೊತೆಗೆ ಹೊಸ ಭಾರತವನ್ನು ಕಟ್ಟಲು ಬಯಸುತ್ತಾರೆ.

ವಿದ್ಯೆ ಕಲಿಯುವ, ಯಾವ ಅನುಕೂಲಗಳಿಲ್ಲದ ಸಹಸ್ರಾರು ಯುವಕರು ದೇಶದಲ್ಲಿ ಇದ್ದಾರೆ. ಕಲಿತವರು ಉದ್ಯೋಗಕ್ಕಾಗಿ ಹಂಬಲಿಸುತ್ತಿದ್ದಾರೆ. ಹಸಿದವರ ಸಂಖ್ಯೆಯೂ ಸಾಕಷ್ಟಿದೆ. ಸಮಾಜದ ಅರ್ಧ ಭಾಗದಷ್ಟಿರುವ ಮಹಿಳೆಯರಿಗೆ ಸಮಾನತೆಯ ಬದುಕು ಬೇಕಾಗಿದೆ. ನಿಮ್ಮ ದೇಶ ವಿಭಜನೆಯ ಮಾತುಗಳನ್ನು ನಿಮ್ಮ ಸಂಘದ ಶಾಖೆಗಳಲ್ಲಿ ಆಡಿ, ಪ್ರಧಾನ ಮಂತ್ರಿ ಸ್ಥಾನದಲ್ಲಿರುವ ನಿಮ್ಮಿಂದ ಇಂಥ ಮಾತು ಬರಬಾರದು.

ಹೀಗೆ ಕಹಿ ನೆನಪುಗಳನ್ನು ಕೆದರುತ್ತ ಹೋದರೆ 2002ರ ಗುಜರಾತ್ ಹತ್ಯಾಕಾಂಡವನ್ನು ಕೂಡ ನೆನಪಿಸಿಕೊಳ್ಳಬೇಕಾಗುತ್ತದೆ. ಗುಜರಾತಿನ ಮುಖ್ಯಮಂತ್ರಿಯಾಗಿ ನರೇಂದ್ರ ಮೋದಿಯವರು ಅಲ್ಲಿ ಹೇಗೆ ತಮ್ಮ ಕರ್ತವ್ಯ ನಿಭಾಯಿಸಿದರು ಎಂಬುದನ್ನೂ ದೇಶ ನೆನಪಿಸಿಕೊಳ್ಳಬೇಕಾಗುತ್ತದೆ.

ಪ್ರಧಾನಿ ಮೋದಿಯವರಿಗೆ ತಮ್ಮ ಜನಪ್ರಿಯತೆ ವರ್ಷದಿಂದ ವರ್ಷಕ್ಕೆ, ತಿಂಗಳಿಂದ ತಿಂಗಳಿಗೆ ಕುಸಿಯುತ್ತಿರುವುದು ಸಹಜವಾಗಿ ಆತಂಕಕ್ಕೆ ಕಾರಣವಾಗಿರಬಹುದು. ಅವರ ಪರಿಸ್ಥಿತಿಯನ್ನೂ ನಾವು ಅರ್ಥ ಮಾಡಿಕೊಳ್ಳಬೇಕು. ಹಾಗೆಂದು ದೇಶ ವಿಭಜನೆಯ ಕಹಿ ಕತೆಗಳನ್ನು ಹೇಳುತ್ತಾ ಹೋದರೆ ಕುಸಿಯುತ್ತಿರುವ ಜನಪ್ರಿಯತೆಯನ್ನು ತಡೆಯಲು ಸಾಧ್ಯವಾಗುವುದಿಲ್ಲ ಎಂದು ಅವರೂ ಅರ್ಥ ಮಾಡಿಕೊಳ್ಳಬೇಕು.

ಹೊಸ ಭಾರತ ಕಟ್ಟಲು ಹಳೆಯ ಕಹಿ ಘಟನೆಗಳನ್ನು ನಾವು ಮರೆಯಬೇಕಾಗಿದೆ. ಚುನಾವಣೆಗಳು ಬರುತ್ತವೆ, ಹೋಗುತ್ತವೆ. ಯಾರೇ ಗೆಲ್ಲಲಿ, ಸೋಲಲಿ ಭಾರತ ಎಂಬ ದೇಶ ಸೋಲಬಾರದು. ಭಾರತವೆಂದರೆ ಕೇವಲ ಇಲ್ಲಿ ಹರಿಯುವ ನದಿಗಳು, ದೇವಾಲಯಗಳು, ಕಲ್ಲು ಮಣ್ಣುಗಳಲ್ಲ. ಭಾರತವೆಂದರೆ ಇಲ್ಲಿ ಶತಮಾನಗಳಿಂದ ನೆಲೆಸಿರುವ ಜನ. ಯುರೋಪಿನ ರಾಷ್ಟ್ರಗಳಂತೆ ಯಾವುದೇ ಒಂದು ಧರ್ಮ, ಸಮುದಾಯದ ಜನ ಮಾತ್ರ ಇಲ್ಲಿ ವಾಸಿಸುತ್ತಿಲ್ಲ. ಇದು ಬಹುಧರ್ಮೀಯ, ಬಹುಜನಾಂಗೀಯ, ಬಹು ಭಾಷಿಕ, ಬಹುಸಂಸ್ಕೃತಿಗಳ ಜನರು ನೆಲೆಸಿ ಕಟ್ಟಿದ ದೇಶ. ಇದು ಎಲ್ಲರೂ ಕೂಡಿ ಬಾಳಿದರೆ ಉಳಿಯುತ್ತದೆ. ಇಲ್ಲವಾದರೆ, ನಾಶವಾಗುತ್ತದೆ. ಪ್ರಧಾನಿ ಅವರು ಇದನ್ನೆಲ್ಲ ಗಮನಿಸಿ ಮಾತಾಡಬೇಕು.

ನಾಗಪುರದ ಸಂವಿಧಾನೇತರ ಶಕ್ತಿ ಕೇಂದ್ರದ ನಿಯಂತ್ರಣದಲ್ಲಿರುವ ನೀವು ಬದಲಾಗುತ್ತೀರೆಂದು ನಿರೀಕ್ಷೆ ಇಲ್ಲ. ಆದರೆ, ದೇಶದ ಪ್ರಧಾನಿ ಆಗಿರುವುದರಿಂದ ಕೆಲ ಮಾತುಗಳನ್ನು ಹೇಳಲೇಬೇಕಾಗಿದೆ. ಮೋದಿಯವರೇ, ನೀವು ಪ್ರಧಾನಿ. ನಿಮ್ಮ ಎದುರು ಎರಡು ಆಯ್ಕೆಗಳಿವೆ. ಒಂದು ಗೋಳ್ವಾಲ್ಕರ್ ಬರೆದ ಬಂಚ್ ಆಫ್ ಥಾಟ್ಸ್ ಇಲ್ಲವೇ ಬಾಬಾಸಾಹೇಬರು ರೂಪಿಸಿದ ಸಂವಿಧಾನ. ಎರಡರಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಿ. ಎರಡು ಕುದುರೆ ಸವಾರಿ ಒಳ್ಳೆಯದಲ್ಲ.

Writer - ಸನತ್ ಕುಮಾರ್ ಬೆಳಗಲಿ

contributor

Editor - ಸನತ್ ಕುಮಾರ್ ಬೆಳಗಲಿ

contributor

Similar News

ನಾಸ್ತಿಕ ಮದ