1971ರ ನೆನಪುಗಳು

Update: 2021-08-27 19:30 GMT

 ನಾನು ಬರೆಯುವಾಗ ಭಾರತ-ಇಂಗ್ಲೆಂಡ್ ಸರಣಿ ಟೆಸ್ಟ್ ಪಂದ್ಯ ನಡೆಯುತ್ತಿದೆ. ಒಂದು ವೇಳೆ ಭಾರತ ಗೆದ್ದರೆ ಅದು ಪಟೌಡಿ ಟ್ರೋಫಿಯನ್ನು ಉಳಿಸಿಕೊಳ್ಳಲಿದೆ. ಆದರೂ, 2021ನೇ ಇಸವಿಯು ಇಂದಿನ ಹದಿಹರೆಯದ ಕ್ರಿಕೆಟ್ ಅಭಿಮಾನಿಗಳ ಮೇಲೆ ಚಿರಂತನವಾದ ಭಾವನೆಗಳನ್ನು ಪುಟಿದೆಬ್ಬಿಸುತ್ತದೆಯೆಂಬ ಬಗ್ಗೆ ನನಗೆ ಸಂದೇಹವಾಗುತ್ತದೆ. ಇನ್ನೊಂದೆಡೆ ನನ್ನ ತಲೆಮಾರಿನ ಕ್ರಿಕೆಟ್‌ಅಭಿಮಾನಿಗಳಿಗೆ 1971 ಎಂಬುದು ಸದಾಕಾಲವೂ ವಿಶೇಷ ಹಾಗೂ ಪವಿತ್ರವಾದ ಅಂಕಿಯಾಗಿದೆ. ಆ ವರ್ಷ ಭಾರತವು ವೆಸ್ಟ್ ಇಂಡೀಸ್ ಹಾಗೂ ಇಂಗ್ಲೆಂಡ್ ತಂಡಗಳನ್ನು ಮೊದಲ ಬಾರಿಗೆ ಸೋಲಿಸಿ ಸರಣಿ ಜಯ ಸಾಧಿಸಿತ್ತು.



 ಭಾರತದ ಹೊರಗೆ ನನಗೆ ತಿಳಿದಿರುವ ನಗರಗಳಲ್ಲಿ ಅತ್ಯುತ್ತಮವಾದುದು ಲಂಡನ್ ಆಗಿದೆ. ಲಂಡನ್‌ನಲ್ಲಿ ನನಗೆ ತಿಳಿದ ಅತ್ಯುತ್ತಮ ಸ್ಥಳವೆಂದರೆ ಬ್ರಿಟಿಷ್ ಲೈಬ್ರರಿ ಆಗಿದೆ. ಅಲ್ಲಿ ನಾನು ನಲ್ವತ್ತು ವರ್ಷಗಳಿಂದ ವಸಾಹತುಶಾಹಿ ಭಾರತದ ಇತಿಹಾಸದ ಕುರಿತಾದ ಅದ್ಭುತವಾದ ಪುಸ್ತಕ ಸಂಗ್ರಹಗಳನ್ನು ಜಾಲಾಡಿದ್ದೆ. ಒಟ್ಟಾರೆಯಾಗಿ ನಾನು ಅಲ್ಲಿ ಸಾವಿರ ದಿನಗಳ ಕಾಲ ಕೆಲಸ ಮಾಡಿದ್ದೆ. ಗ್ರಂಥಾಲಯ ಪ್ರವೇಶಿಸಲು ನನ್ನ ಗುರುತುಚೀಟಿಯನ್ನು ತೋರಿಸುವ ಮುನ್ನ ಬೇಸ್‌ಮೆಂಟ್‌ನಲ್ಲಿರುವ ಲಾಕರ್‌ನಲ್ಲಿ ನನ್ನ ಸೊತ್ತುಗಳನ್ನು ಇರಿಸುವುದರೊಂದಿಗೆ ನನ್ನ ದೈನಂದಿನ ಚಟುವಟಿಕೆ ಆರಂಭವಾಗುತ್ತಿತ್ತು. ಆನಂತರ ನಾನು ಮೇಲಿರುವ ನಾಲ್ಕು ಅಂತಸ್ತುಗಳ ವಾಚನ ಕೊಠಡಿಗೆ ತೆರಳಿ ಬ್ರಿಟಿಷ್ ಸಾಮ್ರಾಜ್ಯಶಾಹಿ ಕಾಲದ ದಾಖಲೆಗಳನ್ನು ಅಧ್ಯಯನ ಮಾಡುತ್ತಿದ್ದೆ.

ಬ್ರಿಟಿಷ್ ಗ್ರಂಥಾಲಯದ ಲಾಕರ್‌ಗಳನ್ನು ತೆರೆಯಲು ಹಾಗೂ ಮುಚ್ಚಲು ಓರ್ವನಿಗೆ ನಾಲ್ಕು ಅಂಕಿಗಳ ಕೋಡ್ ಅಗತ್ಯವಿದೆ. ಈ ರೀತಿಯ ಕೋಡ್ ಒಂದನ್ನು ಆಯ್ಕೆ ಮಾಡುವಂತೆ ನಮ್ಮಲ್ಲಿ ಬಹುತೇಕ ಮಂದಿಯನ್ನು ಕೇಳಿಕೊಂಡಾಗ ಅವರು ತಮ್ಮ ಜನ್ಮದಿನಾಂಕ, ವಿವಾಹದ ದಿನಾಂಕ, ತಮ್ಮ ಪಾಲಕರು ಹುಟ್ಟಿದ ದಿನಾಂಕವನ್ನು ಆಯ್ಕೆ ಮಾಡುವಂತೆ ಕೇಳಲಾಗಿತ್ತು. ಬ್ರಿಟಿಷ್ ಲೈಬ್ರರಿಯಲ್ಲಿ ಕೆಲಸ ಮಾಡುತ್ತಿದ್ದ ಈ ಎಲ್ಲಾ ವರ್ಷಗಳಲ್ಲಿ ನಾನು ಒಂದೇ ರೀತಿಯ ಸಂಖ್ಯಾಜೋಡಣೆಯನ್ನು ಅಂದರೆ 1971 ಅನ್ನು ಕೋಡ್ ಆಗಿ ಬಳಸಿದ್ದೆ. ಯಾಕೆಂದರೆ 1971ರಲ್ಲಿ ನನಗೆ 13 ವರ್ಷವಾಗಿತ್ತು ಹಾಗೂ ಆನಂತರ 13 ವರ್ಷಗಳ ಬಳಿಕ ನನಗೆ ವಿವಾಹವಾಗಿತ್ತು. ಆದರೆ ಸಂಪೂರ್ಣವಾಗಿ ಈ ಕಾರಣಕ್ಕೆಂದೇ ನಾನು 1971 ಅನ್ನು ಕೋಡ್ ಆಗಿ ಬಳಸಿರಲಿಲ್ಲ. ಕ್ರಿಕೆಟ್ ಆಟದ ದೃಷ್ಟಿಯಲ್ಲಿ ಹೇಳುವುದಾದರೆ 1971ನೇ ಇಸವಿಯು, ಒಂದು ಕಾಲದಲ್ಲಿ ಬ್ರಿಟಿಷ್ ಆಡಳಿತದ ಪ್ರಜೆಗಳಾಗಿದ್ದ ನಾವು ನಮ್ಮ ಮಾಜಿ ವಸಾಹತುಶಾಹಿ ಧಣಿಗಳ ವಿರುದ್ಧ ಗೆಲುವು ಸಾಧಿಸಿದ್ದೆವು. ಕ್ರಿಕೆಟ್ ಅಭಿಮಾನಿಯೊಬ್ಬ ಬ್ರಿಟಿಷ್ ಆಳ್ವಿಕೆಯ ಬಗ್ಗೆ ಐತಿಹಾಸಿಕ ಸಂಶೋಧನೆಯನ್ನು ನಡೆಸುವಾಗ ಈ ಸಂಖ್ಯಾಜೋಡಣೆಯು ನನ್ನ ವೃತ್ತಿ ಹಾಗೂ ಪ್ರವೃತ್ತಿಯ ಸಂಯೋಜನೆಯನ್ನು ವೈಶಿಷ್ಟಪೂರ್ಣವಾಗಿ ಸೆರೆಹಿಡಿದಿದೆ.

ಕೆಲವು ದಿನಗಳ ಹಿಂದೆ, ಇಂಗ್ಲೆಂಡ್‌ನಲ್ಲಿ ಭಾರತದ ಪ್ರಪ್ರಥಮ ಟೆಸ್ಟ್ ಸರಣಿಯ 50ನೇ ವರ್ಷಾಚರಣೆಯನ್ನು ನಾವು ಆಚರಿಸಿದೆವು. ಆದರೆ 1971ರ ಆರಂಭದಲ್ಲಿ ಭಾರತವು ವೆಸ್ಟ್ ಇಂಡೀಸ್ ವಿರುದ್ಧ ಮೊದಲ ಬಾರಿಗೆ ಸರಣಿ ಗೆಲುವನ್ನು ಸಾಧಿಸಿತ್ತು. ಅದು ಕೂಡಾ ಗಮನಾರ್ಹ ಸಾಧನೆಯಾಗಿತ್ತು. ಇದಕ್ಕೂ ಹಿಂದೆ 1962ರಲ್ಲಿ ನಾವು ಕೆರೇಬಿಯನ್ ಪ್ರವಾಸ ಕೈಗೊಂಡಿದ್ದಾಗ ಎಲ್ಲಾ ಐದು ಟೆಸ್ಟ್‌ಗಳಲ್ಲಿ ಸೋಲುಂಡಿದ್ದೆವು. 9 ವರ್ಷಗಳ ಆನಂತರ, ನಮ್ಮನ್ನು ಈ ಹಿಂದೆ ಅಪಮಾನಿಸಿದ್ದ ಮಹಾನ್ ವಿಂಡಿಗರಲ್ಲಿ ಕೆಲವರು ನಿವೃತ್ತರಾಗಿದ್ದಾರೆ ಹಾಗೂ ಇನ್ನೂ ಕೆಲವರಿಗೆ ಇಳಿವಯಸ್ಸಾಗಿದೆ. ಆದಾಗ್ಯೂ ಗ್ಯಾರಿ ಸೋಬರ್ಸ್ ಈಗಲೂ ಅವರ ಪಾಲಿಗೆ ನಾಯಕನಾಗಿದ್ದಾರೆ. ಅವರ ಜೊತೆ ಕ್ಯಾನ್‌ಹಾಯ್, ಲಾಯ್ಡಾ ಹಾಗೂ ಗಿಬ್ಸ್ ಅವರಂತಹ ಪ್ರಚಂಡ ಕ್ರಿಕೆಟಿಗರು ಆಡಿದ್ದಾರೆ. ವಿಂಡಿಗರನ್ನು ಅವರ ತವರಿನಲ್ಲೇ ಸೋಲಿಸುವ ಲೇಶಮಾತ್ರ ಅವಕಾಶವನ್ನು ಕೂಡಾ ಇವರು ಬಿಟ್ಟುಕೊಡಲಿಲ್ಲವಾದರೂ ನಾವು ಗೆದ್ದೇಬಿಟ್ಟೆವು. ಒಂದು ಟೆಸ್ಟ್ ಪಂದ್ಯದಲ್ಲಿ ಗೆಲುವು ಸಾಧಿಸಿದ ನಾವು ಇತರ ನಾಲ್ಕು ಪಂದ್ಯಗಳನ್ನು ಡ್ರಾ ಮಾಡಿದ್ದೆವು.

ವೆಸ್ಟ್ ಇಂಡೀಸ್‌ನಲ್ಲಿ ಈ ಸರಣಿ ಪಂದ್ಯಗಳನ್ನು ಫೆಬ್ರವರಿ ಹಾಗೂ ಎಪ್ರಿಲ್ 1971ರ ಮಧ್ಯೆ ಆಡಲಾಗಿತ್ತು. ಆಗ ನಾನು ಡೆಹ್ರಾಡೂನ್‌ನ ವಸತಿಶಾಲೆಯಲ್ಲಿ ಕಲಿಯುತ್ತಿದ್ದೆ. ಟೈಮ್ಸ್ ಆಫ್ ಇಂಡಿಯಾ ದಿನಪತ್ರಿಕೆಯ ಕ್ರೀಡಾಪುಟಗಳಲ್ಲಿ ಕೆ.ಎನ್. ಪ್ರಭು ಅವರ ದೈನಂದಿನ ವರದಿಗಳ ಮೂಲಕ ನಾನು ಈ ಟೆಸ್ಟ್ ಪಂದ್ಯಗಳ ಬಗ್ಗೆ ಓದುತ್ತಿದ್ದೆ. ಕಾವ್ಯಾತ್ಮಕ ಶೈಲಿ ಹಾಗೂ ಕ್ರಿಕೆಟ್ ಬಗ್ಗೆ ಆಳವಾದ ಜ್ಞಾನದಿಂದ ಆ ಲೇಖನಗಳು ಕೂಡಿರುತ್ತಿದ್ದವು.

ನನ್ನ ವಸತಿನಿಲಯದಲ್ಲಿ ಅಲ್ಲಿದ್ದ ನೂರಕ್ಕಿಂತಲೂ ಅಧಿಕ ನಿವಾಸಿಗಳಿಗೆ ಒಂದೇ ಒಂದು ದಿನಪತ್ರಿಕೆ ಲಭ್ಯವಿತ್ತು. ಮಧ್ಯಾಹ್ನ ತರಗತಿಗಳು ಮುಗಿದು ಊಟವಾದ ಬಳಿಕ ಆಟದ ಅವಧಿಗೆ ಇನ್ನೂ ಒಂದು ತಾಸು ಬಿಡುವಿರುತ್ತಿತ್ತು. ನನ್ನ ಸಹಪಾಠಿಗಳು ಮಾತನಾಡುತ್ತಾ, ಇಲ್ಲವೇ ಗಾಸಿಪ್‌ಗಳನ್ನು ಹೇಳುತ್ತಾ ಅಥವಾ ಕೀಟಲೆ ಮಾಡುತ್ತಾ ಇರುತ್ತಿದ್ದರು. ಆದರೆ ನಾನು ಬೆಂಚ್‌ನಲ್ಲಿ ಕುಳಿತುಕೊಂಡು ದಿನಪತ್ರಿಕೆ ಓದುತ್ತಿದ್ದೆ ಮತ್ತು ಪ್ರಭು ಅವರು ವಿಸ್ತೃತವಾಗಿ ಪಂದ್ಯದಲ್ಲಿ ಕ್ರಿಕೆಟ್‌ಗಳನ್ನು ಹೇಗೆ ಉರುಳಿಸಲಾಯಿತು ಹಾಗೂ ಇನ್ನಿಂಗ್ಸ್ ರನ್‌ಗಳನ್ನು ಹೇಗೆ ಪೋಷಿಸಲಾಯಿತು ಹಾಗೂ ಜೊತೆಯಾಟವನ್ನು ಹೇಗೆ ಸೃಷ್ಟಿಸಲಾಯಿತು ಎಂಬ ಬಗ್ಗೆ ವಿಸ್ತೃತವಾಗಿ ಬರೆದಿದ್ದುದನ್ನು ಶ್ರದ್ಧೆಯಿಂದ ಓದುತ್ತಿದ್ದೆ.

 ಈಗ ಇರುವಂತೆಯೇ ವೆಸ್ಟ್ ಇಂಡೀಸ್‌ನಲ್ಲಿ ಕ್ರಿಕೆಟ್ ಪಂದ್ಯಗಳು ಭಾರತೀಯ ಕಾಲಮಾನ ಸಂಜೆ 7:30ಕ್ಕೆ ನಡೆಯುತ್ತಿತ್ತು. ಮರುದಿನ ಪ್ರಕಟವಾಗುವ ದಿನಪತ್ರಿಕೆಯ ದಿಲ್ಲಿ ಆವೃತ್ತಿಯು ಮಧ್ಯಾಹ್ನದ ಅವಧಿಯವರೆಗಿನ ಪಂದ್ಯದ ವರದಿಯನ್ನು ಮಾತ್ರವೇ ಒಳಗೊಂಡಿರುತ್ತಿತ್ತು. ಆದರೆ ಇದಕ್ಕಿಂತ ಎರಡು ತಾಸುಗಳ ಮೊದಲು ರವಾನೆಯಾಗುವ ಡಾಕ್ ಆವೃತ್ತಿಯಲ್ಲಿ ಅದು ಕೂಡಾ ಇರುತ್ತಿರಲಿಲ್ಲ. ಹೀಗಾಗಿ ಪ್ರತಿ ದಿನದ ಆಟದ ಪೂರ್ತಿ ವರದಿಯನ್ನು ಎರಡು ದಿನಗಳ ಬಳಿಕವೇ ಓದಲು ಸಾಧ್ಯವಾಗುತ್ತಿತ್ತು. ಆದರೂ ಈ ವಿಳಂಬವು ಉತ್ಸಾಹವನ್ನು ತುಂಬುತ್ತಿತ್ತಲ್ಲದೆ, ಕೆ.ಎನ್. ಪ್ರಭು ಅವರ ವಿಸ್ತೃತವಾದ ವಿವರಣೆಯು ಮುದವನ್ನು ನೀಡುತ್ತಿತ್ತು.

ಪ್ರಸಕ್ತ ತಲೆಮಾರು ಪ್ರತಿಯೊಂದನ್ನೂ ನೇರ ಪ್ರಸಾರದ ವೀಕ್ಷಣೆಯ ಮೂಲಕ ದಿಢೀರ್ ಸಂತೃಪ್ತಿಯನ್ನು ಪಡೆಯುವ ಜಾಯಮಾನಕ್ಕೆ ಒಗ್ಗಿಹೋಗಿದೆ. ಬ್ಯಾಟ್ಸ್‌ಮನ್‌ಗಳಾದ ಸುನೀಲ್ ಗಾವಸ್ಕರ್ ಹಾಗೂ ಸರ್ದೇಸಾಯಿ, ಬೇಡಿ, ಪ್ರಸನ್ನ ಹಾಗೂ ವೆಂಕಟ್ ರಾಘವನ್ ಅವರ ಬಗ್ಗೆ ನನಗಿರುವ ಮೆಚ್ಚುಗೆಯು, 50 ವರ್ಷಗಳ ಹಿಂದೆ ವಾಡೇಕರ್ ನೇತೃತ್ವದ ಈ ತಂಡವು ಒಗ್ಗೂಡಿ ಆಡಿದ್ದನ್ನು ನಾವು ಪರದೆಯ ಮೂಲಕ ವೀಕ್ಷಿಸಿರುತ್ತಿದ್ದರೆ ಉಂಟಾಗುತ್ತಿರಲಿಲ್ಲವೆಂದೆನಿಸುತ್ತದೆ.

ವಸಂತಋತುವಿನಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ವಾಡೇಕರ್ ತಂಡ ಸೋಲಿಸಿತ್ತು. ಅವರು ಆ ವರ್ಷದ ಬೇಸಿಗೆಯಲ್ಲಿ ಇಂಗ್ಲೆಂಡ್ ಪ್ರವಾಸ ಕೈಗೊಂಡಿದ್ದಾಗ ದುರ್ಬಲ ತಂಡವಾಗಿತ್ತು. ನಲ್ವತ್ತು ವರ್ಷಗಳ ಕಾಲ ನಾವು ಪ್ರಯತ್ನಿಸಿದರೂ ಆ ದೇಶದಲ್ಲಿ ನಮಗೆ ಗೆಲುವು ಸಾಧ್ಯವಾಗಿರಲಿಲ್ಲ. 1959ರಿಂದ 1967ರ ನಡುವೆ ನಾವು ಕೈಗೊಂಡಿದ್ದ ಎರಡು ಪ್ರವಾಸಗಳಲ್ಲಿ ಆಡಿದ್ದ ಎಲ್ಲಾ ಪಂದ್ಯಗಳಲ್ಲಿ ಸೋಲುಂಡಿದ್ದೆವು. ಒಂದೆಡೆೆ ಗ್ಯಾರಿ ಸೋಬರ್ಸ್ ಹಾಗೂ ಅವರ ತಂಡವು ಕುಸಿಯುತ್ತಾ ಸಾಗುತ್ತಿರುವುದು ಗಮನಕ್ಕೆ ಬಂದಿತ್ತು. ರೇಲ್ಲಿಂಗ್‌ವರ್ತ್ ನೇತೃತ್ವದ ಇಂಗ್ಲೆಂಡ್ ತಂಡವು ಜಗತ್ತಿನ ಅತ್ಯುತ್ತಮ ತಂಡವೆಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಅದಕ್ಕೂ ಹಿಂದಿನ ಚಳಿಗಾಲದಲ್ಲಿ ಅವರು ಬಲಿಷ್ಠ ಆಸ್ಟ್ರೇಲಿಯನ್ ತಂಡವನ್ನು ಲೀಲಾಜಾಲವಾಗಿ ಸೋಲಿಸಿದ್ದರು.

ಇಂಗ್ಲೆಂಡ್ ಸರಣಿ ಆರಂಭಗೊಂಡ ವೇಳೆಗೆ, ಬೇಸಿಗೆ ರಜಾದಿನಗಳು ಆರಂಭವಾಗಿದ್ದವು. ಮನೆಯಲ್ಲಿ ನಾನು ರೇಡಿಯೊದಲ್ಲಿ ಇಂಗ್ಲೆಂಡ್-ಪಾಕಿಸ್ತಾನ ಸರಣಿ ಪಂದ್ಯಗಳನ್ನು ಕಟ್ಟಕಡೆಯವರೆಗೂ ಆಲಿಸುತ್ತಿದ್ದೆೆ. ಮನೆಯಲ್ಲಿರುವಾಗ ನಾನು ಇಂಗ್ಲೆಂಡ್ ಹಾಗೂ ಭಾರತದ ನಡುವೆ ನಡೆಯುತ್ತಿದ್ದ ಮೊದಲ ಟೆಸ್ಟ್‌ನ ಪ್ರತಿಯೊಂದು ಬಾಲ್‌ನ ಆಟವನ್ನೂ ಕಿವಿಗೊಡುತ್ತಿದ್ದೆ. ಇದೊಂದು ರೋಮಾಂಚಕಾರಿ ಪಂದ್ಯವಾಗಿದ್ದು, ಜಿದ್ದಾಜಿದ್ದಿಯ ಹೋರಾಟ ನಡೆದಿತ್ತು. ನಾಲ್ಕನೇ ಇನ್ನಿಂಗ್ಸ್‌ನಲ್ಲಿ 183 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಭಾರತವು ಒಂದು ಹಂತದಲ್ಲಿ ಮೂರು ವಿಕೆಟ್‌ಗಳಿಗೆ 100 ರನ್‌ಗಳನ್ನು ಕಲೆಹಾಕಿತು. ಆದರೆ ಆನಂತರ ವಿಕೆಟ್‌ಗಳು ಕ್ಷಿಪ್ರವಾಗಿ ಪತನಗೊಳ್ಳತೊಡಗಿದವು. ಪಂದ್ಯ ಕೊನೆಗೊಳ್ಳಲು ಒಂದು ತಾಸು ಬಾಕಿಯಿದ್ದಾಗ ಬಾನು ಬಿರಿದು ಮಳೆ ಸುರಿಯ ತೊಡಗಿತು. ಈ ಹಂತದಲ್ಲಿ ಗೆಲುವಿಗೆ 40 ರನ್‌ಗಳ ಅಗತ್ಯವಿತ್ತು. ಆದರೆ ಅವರ ಬಳಿ ಕೇವಲ ಎರಡು ವಿಕೆಟ್‌ಗಳಷ್ಟೇ ಇದ್ದವು.

ಮ್ಯಾಂಚೆಸ್ಟರ್‌ನಲ್ಲಿ ಆಡಲಾದ ಎರಡನೇ ಟೆಸ್ಟ್ ಪಂದ್ಯದ ಹೆಚ್ಚಿನ ಭಾಗವನ್ನು ಕೂಡಾ ಮನೆಯಲ್ಲಿ ರೇಡಿಯೊ ಮೂಲಕ ಆಲಿಸಿದ್ದೆ. ಭಾರತವು ಈ ಸಲ ಒಟ್ಟಾರೆ ಚೆೆನ್ನಾಗಿ ಆಡಲೇ ಇಲ್ಲವಾದರೂ ಮಳೆಯಿಂದಾಗಿ ಬಚಾವಾಯಿತು. ಓವಲ್‌ನಲ್ಲಿ ಮೂರನೇ ಟೆಸ್ಟ್ ಆರಂಭಗೊಂಡಾಗ ಶಾಲೆ ಪುನಾರಂಭಗೊಂಡಿತು ಹಾಗೂ ನಾನು ಹಾಸ್ಟೆಲ್‌ಗೆ ಮರಳಬೇಕಾಯಿತು. ಅಲ್ಲಿದ್ದುದು ಒಂದೇ ಒಂದು ರೇಡಿಯೊ ಮತ್ತು ಅದು ಹಿರಿಯ ತರಗತಿಯ ವಿದ್ಯಾರ್ಥಿಗಳಿಗೆ ಮಾತ್ರ ಸೀಮಿತವಾಗಿತ್ತು. ಅದನ್ನು ಅವರು ಸಂಜೆಯ ಹೊತ್ತಲ್ಲಿ ಆಲಿಸುತ್ತಿದ್ದರು. ರಾತ್ರಿ 10 ಗಂಟೆಗೆ ನಾವೆಲ್ಲಾ ದೀಪಗಳನ್ನು ಕಡ್ಡಾಯವಾಗಿ ಆರಿಸಿ, ಮಲಗಬೇಕಿತ್ತು. ಆ ವೇಳೆಗೆ ನಾವು ಜೂನಿಯರ್‌ಗಳು ನಮ್ಮ ಓದುಕೋಣೆಯಲ್ಲಿ ಜೊತೆಗೂಡುತ್ತಿದ್ದೆವು. ನಮ್ಮ ಹೌಸ್ ಕ್ಯಾಪ್ಟನ್ ಆಗಿದ್ದ ವಿವೇಕ್ ಬಾಮ್ಮಿಯು ನಾವು ಹಾಸಿಗೆಗೆ ಹೋಗುವ ಸ್ವಲ್ಪ ಸಮಯ ಮೊದಲು ನಮಗಾಗಿ ಕ್ರಿಕೆಟ್ ಪಂದ್ಯದ ವೀಕ್ಷಕ ವಿವರಣೆಯ ಬುಲೆಟಿನ್ ಸುದ್ದಿಗಳನ್ನು ತರುವ ಉದಾರತೆಯನ್ನು ತೋರುತ್ತಿದ್ದ. ನಾನು ಕುಳಿತಿದ್ದೆಡೆಗೆ ಬಂದ ಬಾಮ್ಮಿಯು ಅತ್ಯಾಧುನಿಕವಾದ ಹಾಗೂ ಅತ್ಯಂತ ನಾಟಕೀಯವಾದ ಕ್ರಿಕೆಟ್ ಸುದ್ದಿಯ ಅಪ್‌ಡೇಟ್ ನೀಡಿದ್ದ. 101ಕ್ಕೆ ಇಂಗ್ಲೆಂಡ್ ಅಲ್ ಔಟ್, ಚಂದ್ರಶೇಖರ್ 6ಕ್ಕೆ 38!’

 ಐವತ್ತು ವರ್ಷಗಳ ಆನಂತರವೂ ಅಂದು ನನ್ನ ಹೌಸ್ ಕ್ಯಾಪ್ಟನ್‌ನಿಂದ ಕೇಳಿದ ಈ ಪದಗಳು, ನನ್ನ ಕ್ರಿಕೆಟ್ ಕ್ಷಣಗಳ ಆಹ್ಲಾದಕರ ನೆನಪಾಗಿದೆ. ಅಸಂಖ್ಯ ಬಾರಿ ನಾನು ಚಂದ್ರಶೇಖರ್ ಅವರು ಅದ್ಭುತ ಬ್ರಿಟಿಷ್ ಆಟಗಾರ ಎಡ್ರಿಕ್‌ನ ವಿಕೆಟ್ ಬಲಿಪಡೆದುದನ್ನು, ಇಲ್ಲಿಂಗ್‌ವರ್ತ್ ಹಾಗೂ ಸ್ನೋ ಅವರನ್ನು ಕಲಾತ್ಮಕವಾಗಿ ಕ್ಯಾಚ್ ಆ್ಯಂಡ್ ಬೌಲ್ಡ್ ಮಾಡಿದ್ದುದು, ಕೊನೆಯ ದಾಂಡಿಗ ಜಾನ್ ಪ್ರೈಸ್ ಅವರನ್ನು ತಬ್ಬಿಬ್ಬಾಗುವಂತೆ ಮಾಡಿದ ಕ್ಷಣಗಳು, ಫ್ಲೆಚರ್ ಅವರನ್ನು ಸೋಲ್ಕರ್ ಔಟ್ ಮಾಡಿದ ಕ್ಷಣಗಳನ್ನು ನಾನು ಮೆಲುಕುಹಾಕುತ್ತಲೇ ಇರುತ್ತೇನೆ. ಆದರೆ ಬಿ.ಎಸ್.ಚಂದ್ರಶೇಖರ್ ಅವರು ಎದುರಾಳಿ ತಂಡವನ್ನು ಒಟ್ಟಾರೆಯಾಗಿ ಬಗ್ಗು ಬಡಿಯುವ ಚಾತುರ್ಯದ ಮುಂದೆ ಯಾರೂ ಸಾಟಿಯಲ್ಲ.

ನಾನು ಬರೆಯುವಾಗ ಭಾರತ-ಇಂಗ್ಲೆಂಡ್ ಸರಣಿ ಟೆಸ್ಟ್ ಪಂದ್ಯ ನಡೆಯುತ್ತಿದೆ. ಒಂದು ವೇಳೆ ಭಾರತ ಗೆದ್ದರೆ ಅದು ಪಟೌಡಿ ಟ್ರೋಫಿಯನ್ನು ಉಳಿಸಿಕೊಳ್ಳಲಿದೆ. ಆದರೂ, 2021ನೇ ಇಸವಿಯು ಇಂದಿನ ಹದಿಹರೆಯದ ಕ್ರಿಕೆಟ್ ಅಭಿಮಾನಿಯ ಮೇಲೆ ಚಿರಂತನವಾದ ಭಾವನೆಗಳನ್ನು ಪುಟಿದೆಬ್ಬಿಸುತ್ತದೆಯೆಂಬ ಬಗ್ಗೆ ನನಗೆ ಸಂದೇಹವಾಗುತ್ತದೆ. ಇನ್ನೊಂದೆಡೆ ನನ್ನ ತಲೆಮಾರಿನ ಕ್ರಿಕೆಟ್‌ಅಭಿಮಾನಿಗಳಿಗೆ 1971 ಎಂಬುದು ಸದಾಕಾಲವೂ ವಿಶೇಷ ಹಾಗೂ ಪವಿತ್ರವಾದ ಅಂಕಿಯಾಗಿದೆ. ಆ ವರ್ಷ ಭಾರತವು ವೆಸ್ಟ್ ಇಂಡೀಸ್ ಹಾಗೂ ಇಂಗ್ಲೆಂಡ್ ತಂಡಗಳನ್ನು ಮೊದಲ ಬಾರಿಗೆ ಸೋಲಿಸಿ ಸರಣಿ ಜಯ ಸಾಧಿಸಿತ್ತು.

ಕೊರೋನ ಸಾಂಕ್ರಾಮಿಕ ಕೊನೆಗೊಳ್ಳಬೇಕೆಂದು ನಾನು ಬಯಸುವ ಕಾರಣಗಳಲ್ಲಿ ಮತ್ತೊಮ್ಮೆ ಬ್ರಿಟಿಷ್ ಲೈಬ್ರರಿಗೆ ಪ್ರವೇಶಿಸುವುದೂ ಕೂಡಾ ಸೇರಿದೆ. ಆ ಮಹಾನ್ ಗ್ರಂಥಾಲಯದ ಮಾಳಿಗೆಯಲ್ಲಿರುವ ವಾಚನ ಕೊಠಡಿಯಲ್ಲಿ ಕಡತಗಳನ್ನು ಪರಿಶೀಲಿಸುವ ಮೊದಲು, ಗ್ರಂಥಾಲಯದ ಬೇಸ್‌ಮೆಂಟ್‌ನಲ್ಲಿರುವ ಲಾಕರ್‌ಗಳಲ್ಲಿರುವ ನಾಲ್ಕು ನಂಬರ್‌ಗಳನ್ನು ಹೆಮ್ಮೆಯೊಂದಿಗೆ ಪಂಚ್ ಮಾಡ ಬಯಸುತ್ತೇನೆ. ವಸಾಹತುಶಾಹಿ ಆಡಳಿತದ ಟೀಕಾಕಾರನಾಗಿ ಹಾಗೂ 1971ರಲ್ಲಿ ನಮ್ಮ ಕ್ರಿಕೆಟಿಗರ ಗೆಲುವಿನ ಸಂಭ್ರಮವನ್ನು ಆಚರಿಸುವವನಾಗಿ ನಾನು ಈ ಕೃತ್ಯವನ್ನು ಪ್ರತಿಭಟನೆ ಹಾಗೂ ದೃಢಪಡಿಸುವಿಕೆಯ ಸಂಕೇತವಾಗಿ ಕಾಣುತ್ತೇನೆ.

Writer - ರಾಮಚಂದ್ರ ಗುಹಾ

contributor

Editor - ರಾಮಚಂದ್ರ ಗುಹಾ

contributor

Similar News

ಸಂವಿಧಾನ -75