‘ಗಾಯನವೇ ಜೀವನ’ ಎನ್ನುವ ಮೇಧಾ ವಿದ್ಯಾಭೂಷಣ

Update: 2021-08-28 19:30 GMT

ವಿದ್ಯಾಭೂಷಣರ ಹೆಸರು ಕೇಳಿದೊಡನೆ ಕರಾವಳಿಯ ಮಂದಿಗೆ ನೆನಪಾಗುವುದು ಸುಶ್ರಾವ್ಯ ಕಂಠದ ದಾಸರ ಪದಗಳು, ಒಂದು ಆದರ್ಶ ವಿವಾಹ ಮೊದಲಾದವು. ‘ಹಾಡುವ ಸ್ವಾಮೀಜಿ’ ಎಂದೇ ಹೆಸರಾದ ಅವರನ್ನು ಅನುಕರಿಸಿ ಆನಂತರ ಒಂದಷ್ಟು ಸ್ವಾಮಿಗಳು ಕೀರ್ತನೆ ಹಾಡಲು ಶುರು ಮಾಡಿದ್ದರು. ಆದರೆ ವಿದ್ಯಾಭೂಷಣರ ಮಟ್ಟಕ್ಕೆ ಯಾರೂ ತಲುಪಲಿಲ್ಲ ಎನ್ನುವುದು ಸತ್ಯ. ಪ್ರಸ್ತುತ ಅವರ ಪುತ್ರಿ ಮೇಧಾ ವಿದ್ಯಾಭೂಷಣರು ಕೂಡ ಗಾಯನದತ್ತ ತಮ್ಮ ಒಲವು ಎನ್ನುವುದನ್ನು ಸಾಬೀತು ಮಾಡಿದ್ದಾರೆ. ಕನ್ನಡ ಕಿರುತೆರೆಯ ಜನಪ್ರಿಯ ನಿರ್ದೇಶಕ ಟಿ. ಎನ್. ಸೀತಾರಾಮ್ ಅವರ ಸಾರಥ್ಯದಲ್ಲಿ ಬರಲಿರುವ ಹೊಸ ಧಾರಾವಾಹಿಗೆ ಇವರೇ ನಾಯಕಿ. ಆದರೂ ತಾನು ‘ಮೂಲತಃ ಗಾಯಕಿ’ ಎನ್ನುವ ಅವರ ಮೇಧಾ ಮನದಾಳದ ಮಾತುಗಳು ಇಲ್ಲಿವೆ.



ವಿದ್ಯಾಭೂಷಣರ ಸಂಗೀತ ನಿಮ್ಮ ಮೇಲೆ ಬೀರಿದ ಪ್ರಭಾವ?
 ಅವರು ನನ್ನ ತಂದೆಯಾಗಿರುವ ಕಾರಣ ಅವರ ಪೂರ್ತಿ ಜೀವನವೇ ನನ್ನ ಮೇಲೆ ಸಹಜವಾಗಿ ಪ್ರಭಾವಿಸಿದೆ. ಇನ್ನು ಗಾಯನವಂತೂ ನನಗೆ ಪ್ರಿಯವಾದ ಕ್ಷೇತ್ರ. ಅವರ ಹಾಡುಗಳೆಲ್ಲವೂ ನನಗೆ ಇಷ್ಟ. ಅದರಲ್ಲಿಯೂ ಒಂದನ್ನು ಆಯ್ಕೆ ಮಾಡಬೇಕು ಎಂದು ನೀವು ಹೇಳುವುದಾದರೆ ನಮ್ಮಮ್ಮ ಶಾರದೇ.. ತುಂಬಾನೇ ಇಷ್ಟ. ಚಿಕ್ಕವಳಾಗಿದ್ದಾಗಿನಿಂದಲೂ ನಾನು ಮೆಚ್ಚುವ ದೇವರನಾಮ ಅದು.


ನಟನೆಯ ಆಸಕ್ತಿ ಮೂಡಿದ್ದು ಹೇಗೆ?
ಸಂಗೀತವಿರಲಿ, ನಟನೆಯಿರಲಿ ಒಟ್ಟು ಕಲೆಗಳನ್ನು ಆಸ್ವಾದಿಸಲು, ಕಲಿಯಲು ನಮ್ಮ ಮನೆಯಲ್ಲಿ ಸದಾ ಪ್ರೋತ್ಸಾಹದ ವಾತಾವರಣವೇ ಇತ್ತು. ಕರ್ನಾಟಕ ಸಂಗೀತವನ್ನಂತೂ ಐದು ವರ್ಷದವಳಿದ್ದಾಗಿನಿಂದಲೇ ಕಲಿಯಲು ಶುರು ಮಾಡಿದ್ದೆ. ‘ರಂಗಶಂಕರ’ ಸೇರಿದಂತೆ ಬೆಂಗಳೂರಿನ ಪ್ರತಿಷ್ಠಿತ ರಂಗಮಂದಿರಗಳಲ್ಲಿ ನಾಟಕ ಪ್ರದರ್ಶನವಿದ್ದಾಗ ತಂದೆ-ತಾಯಿ ನನ್ನನ್ನೂ ಕರೆದುಕೊಂಡು ಹೋಗುತ್ತಿದ್ದರು. ನಿರುಪಮಾ ರಾಜೇಂದ್ರ ಅವರ ನೃತ್ಯ ಶೋಗಳಿಗೂ ಹೋಗುತ್ತಿದ್ದೆವು. ಅದನ್ನು ತುಂಬಾ ಇಷ್ಟಪಟ್ಟು ನಾನೇ ತಾಯಿಗೆ ಹೇಳಿ ಒಂದಷ್ಟು ವರ್ಷ ಕಥಕ್ ವಿದ್ಯಾರ್ಥಿನಿಯಾದೆ. ಕಾಲೇಜಿನಲ್ಲಿ ನೀನಾಸಂ ಕಡೆಯಿಂದ ನಡೆಸಲಾದ ವರ್ಕ್ ಶಾಪ್‌ನಲ್ಲಿ ಭಾಗಿಯಾಗಿದ್ದೆ. ಆ ಮೂಲಕ ಜರ್ಮನ್ ನಾಟಕವೊಂದರಲ್ಲಿ ಪೂರ್ಣ ಪ್ರಮಾಣದ ನಟಿಯಾಗುವ ಅವಕಾಶ ದೊರಕಿತ್ತು. ‘ವೈಜಾಗ್’ ಎನ್ನುವ ಹೆಸರಲ್ಲಿ ಕೆ.ವಿ ಸುಬ್ಬಣ್ಣ ಅವರು ಕನ್ನಡಕ್ಕೆ ಅನುವಾದ ಮಾಡಿರುವಂಥ ನಾಟಕದ ಮೂಲಕ ಅಭಿನಯ ಕ್ಷೇತ್ರದಲ್ಲಿ ಗಂಭೀರವಾಗಿ ತೊಡಗಿಸಿಕೊಂಡೆ.


ಇವೆಲ್ಲದರ ನಡುವೆ ವಿದ್ಯಾಭ್ಯಾಸದತ್ತ ಗಂಭೀರವಾಗಿ ತೊಡಗಿಸಿಕೊಳ್ಳಲು ಸಾಧ್ಯವೇ?
 ಸಾಧ್ಯವಾಗಲೇಬೇಕಲ್ಲ! ಯಾಕೆಂದರೆ ಸಂಗೀತ, ನೃತ್ಯ ಯಾವುದೇ ಇದ್ದರೂ ಇವೆಲ್ಲವೂ ಮನರಂಜನೆಯ ವಿಚಾರಗಳು. ಜನರು ಅವರ ಬಿಡುವಿನಲ್ಲಿ ಮಾತ್ರ ಮನರಂಜನೆಗಾಗಿ ಕಲೆಗಳ ಆಸ್ವಾದನೆಯತ್ತ ಗಮನಹರಿಸುತ್ತಾರೆ. ವಿಶೇಷವಾಗಿ ಇಂದಿನ ಕಾಲಘಟ್ಟದಲ್ಲಿ ಮನರಂಜನೆಗೆ ಎರಡನೇ ಸ್ಥಾನ. ಹಾಗಾಗಿ ವಿದ್ಯಾಭ್ಯಾಸ ಎನ್ನುವುದು ಮುಖ್ಯ. ಆದರೆ ನನ್ನ ಪ್ರಕಾರ ವಿದ್ಯಾಭ್ಯಾಸ ಎನ್ನುವುದು ಸರ್ಟಿಫಿಕೆಟ್ ಪಡೆಯುವುದಕ್ಕೆ ಎನ್ನುವುದಕ್ಕಿಂತ ನಮ್ಮ ಸರ್ವತೋಮುಖವಾದ ಬೆಳವಣಿಗೆಗೆ ಅಗತ್ಯ. ಹಾಗಾಗಿ ಯಾವತ್ತೂ ವಿದ್ಯಾಭ್ಯಾಸವನ್ನು ಕಡೆಗಣಿಸುವಂತಿಲ್ಲ ಎನ್ನುವುದನ್ನು ನಾನು ಕಲಿತಿದ್ದೇನೆ. ಸದ್ಯಕ್ಕೆ ನಾನು ಬೆಂಗಳೂರಿನ ಪಿಇಎಸ್ ಕಾಲೇಜಿನಲ್ಲಿ ಇಲೆಕ್ಟ್ರಿಕಲ್ ಇಂಜಿನಿಯರಿಂಗ್ ವಿಭಾಗದಲ್ಲಿ ಮೂರನೇ ವರ್ಷದ ವಿದ್ಯಾರ್ಥಿನಿ. ನಮ್ಮಣ್ಣ ಅನಿರುದ್ಧ್ ಕೂಡ ಅಷ್ಟೇ, ಒಳ್ಳೆಯ ವೈಲ್ಡ್ ಲೈಫ್ ಫೋಟೊಗ್ರಾಫರ್. ಕ್ರಿಕೆಟ್ ಆಟಗಾರನೂ ಹೌದು. ಈಗ ಎಂಎಸ್ ಮಾಡಲು ವಿದೇಶಕ್ಕೆ ಹೋಗುವ ತಯಾರಿಯಲ್ಲಿದ್ದಾರೆ.

 ಮೊದಲ ಧಾರಾವಾಹಿ ಚಿತ್ರೀಕರಣದಲ್ಲಿ ನಿಮ್ಮ ಅನುಭವ ಹೇಗಿದೆ?
 ನನಗೆ ಹೊಸದಾಗಿ ಏನೂ ಅನಿಸಿಲ್ಲ. ಯಾಕೆಂದರೆ ನಾನು ಬಾಲ್ಯದಿಂದಲೇ ಎಲ್ಲರ ಮುಂದೆ ಕುಳಿತು ಒಬ್ಬಳೇ ಹಾಡಿ ಅಭ್ಯಾಸ ಇರುವ ಕಾರಣ ಕ್ಯಾಮರಾ ಭಯ ಏನೂ ಇರಲಿಲ್ಲ. ಪಾತ್ರ ಹೇಗೆ ನಿಭಾಯಿಸುತ್ತೇನೆ ಎನ್ನುವ ಆತಂಕ ಇತ್ತು. ಆದರೆ ನಾನು ಅದಕ್ಕೂ ಮೊದಲು ಪಾತ್ರದ ತಯಾರಿಗಾಗಿ ಟಿ. ಎನ್. ಸೀತಾರಾಮ್ ಅವರ ಬಳಿ ತರಬೇತಿ ಪಡೆದಿದ್ದೇನೆ. ಹಾಗಾಗಿ ತಕ್ಕಮಟ್ಟಿನ ಸಿದ್ಧತೆ ಇದ್ದೇ ಇರುತ್ತದೆ. ಆದರೂ ಶೂಟಿಂಗ್ ವೇಳೆ ಸರ್ ಮೂಲಕ ಬೈಸಿಕೊಳ್ಳುತ್ತಿರುತ್ತೇನೆ! ಅವರು ಸೀನಿಯರ್ ಕಲಾವಿದರಿಗೂ ಬೈಯ್ಯುವುದರಿಂದ ನನಗೆ ಬೈದಾಗ ಅದು ವಿಶೇಷ ಅನಿಸಿಲ್ಲ! ಕಲಿಯಬೇಕು ಎಂದರೆ ಬೈಸಿಕೊಳ್ಳುವುದರಲ್ಲಿ ತಪ್ಪಿಲ್ಲ ಎಂದು ನನ್ನ ಅನಿಸಿಕೆ. ಅದೇ ಚೆನ್ನಾಗಿ ನಟಿಸಿದಾಗ ಅವರು ತುಂಬಾನೇ ಪ್ರಶಂಸಿಸುತ್ತಾರೆ ಕೂಡ.

Writer - ಶಶಿಕರ ಪಾತೂರು

contributor

Editor - ಶಶಿಕರ ಪಾತೂರು

contributor

Similar News