ಮತ್ತೆ ಮತ್ತೆ ನೆನಪಾಗುವ ಕಲಬುರ್ಗಿ ಮತ್ತು ಗೌರಿ

Update: 2021-09-05 19:30 GMT

ಪ್ರಜಾಪ್ರಭುತ್ವವಾದಿ ಚಳವಳಿ ದುರ್ಬಲವಾದಾಗ ಫ್ಯಾಶಿಸ್ಟ್ ಶಕ್ತಿಗಳ ಕೈ ಮೇಲಾಗುತ್ತದೆ. ತಾರ್ಕಿಕ ಪ್ರಶ್ನೆಗಳಿಗೆ ಉತ್ತರ ನೀಡಲಾಗದ ಫ್ಯಾಶಿಸ್ಟ್ ಶಕ್ತಿಗಳು ಪ್ರಶ್ನಿಸುವ ವ್ಯಕ್ತಿಯನ್ನು ಕೊಂದು ಬಾಯಿ ಮುಚ್ಚಿಸಲು ಹೋಗುತ್ತಾರೆ. ಫ್ಯಾಶಿಸ್ಟ್ ಶಕ್ತಿಗಳ ಆರ್ಭಟ ಈಗ ಜೋರಾಗಿ ಕೇಳಿಬರುತ್ತಿರಬಹುದು. ಆದರೆ ಯಾವುದಕ್ಕೂ ಕೊನೆ ಎಂಬುದಿರುತ್ತದೆ. ಇವರ ಕೊನೆಗಾಲ ಸಮೀಪಿಸುತ್ತಿದೆ. ಇಂತಹ ಸನ್ನಿವೇಶದಲ್ಲಿ ಪ್ರಗತಿಪರರು, ಪ್ರಜಾಪ್ರಭುತ್ವವಾದಿ ಶಕ್ತಿಗಳು ಸಕಲರ ಏಳಿಗೆ ಬಯಸುವ ಅರ್ಥಪೂರ್ಣ ಪರ್ಯಾಯ ರೂಪಿಸಲು ಶ್ರಮಿಸಬೇಕಾಗಿದೆ.



ಪ್ರತಿವರ್ಷ ಆಗಸ್ಟ್ 30 ಬಂದಾಗ ಹಂತಕರ ಗುಂಡಿಗೆ ಬಲಿಯಾದ ಡಾ.ಎಂ.ಎಂ.ಕಲಬುರ್ಗಿ ನೆನಪಾಗುತ್ತಾರೆ. ಅದೇ ರೀತಿ ಸೆಪ್ಟಂಬರ್ 5 ರಂದು ಗೌರಿ ಲಂಕೇಶ್ ಹತ್ಯೆಯ ಆ ದಿನ ಕಣ್ಣ ಮುಂದೆ ಬಂದು ನಿಲ್ಲುತ್ತದೆ. ಕಲಬುರ್ಗಿ ಅವರ ಹಂತಕರನ್ನು ಈವರೆಗೆ ಸೆರೆ ಹಿಡಿಯಲಾಗಿಲ್ಲ. ಸಿದ್ದರಾಮಯ್ಯ ಸರಕಾರವಿದ್ದಾಗ ಗೌರಿ ಕೊಲೆಗಡುಕರನ್ನು ಬಂಧಿಸಲಾಯಿತು. ಆದರೆ ವಿಚಾರಣೆ ಇನ್ನೂ ಮುಗಿದಿಲ್ಲ. ಇವರಿಬ್ಬರಿಗಿಂತ ಮುಂಚೆ ಹತ್ಯೆಯಾದ ನರೇಂದ್ರ ದಾಬೋಲ್ಕರ್ ಮತ್ತು ಗೋವಿಂದ ಪನ್ಸಾರೆ ಹಂತಕರನ್ನ್ನೂ ಇದುವರೆಗೂ ಹಿಡಿಯಲು ಸಾಧ್ಯವಾಗಿಲ್ಲ.

ಡಾ.ಕಲಬುರ್ಗಿ ಮತ್ತು ಗೌರಿ ಲಂಕೇಶ್‌ರ ಹಂತಕರು ಯಾರೆಂದು ಊಹೆ ಮಾಡಬೇಕಾಗಿಲ್ಲ. ಗೌರಿ ಹಂತಕರಂತೂ ಸಿಕ್ಕಿದ್ದಾರೆ. ದಾಬೋಲ್ಕರ್, ಪನ್ಸಾರೆ, ಕಲಬುರ್ಗಿ, ಗೌರಿ ಲಂಕೇಶ್ ಅವರನ್ನು ಹತ್ಯೆ ಮಾಡಿದವರ ಹಿಂದೆ ಒಂದು ಸಿದ್ಧಾಂತವಿದೆ.ಇದೇ ಸಿದ್ಧಾಂತದ ನಿಷ್ಠನಾದ ನಾಥೂರಾಮ್ ಗೋಡ್ಸೆ ಗಾಂಧೀಜಿ ಯನ್ನು ಹತ್ಯೆ ಮಾಡಿದ. ಈ ಸಿದ್ಧಾಂತದ ಸಮರ್ಥಕರು ಪ್ರಭುತ್ವದ ಸಕಲಾಂಗಗಳಲ್ಲಿ ನುಸುಳಿರುವುದು ಎಲ್ಲರಿಗೂ ತಿಳಿದ ಸಂಗತಿ.

ಕರ್ನಾಟಕ ಕಂಡ ಹೆಸರಾಂತ ಸತ್ಯಶೋಧಕ ಶರಣ ಡಾ.ಎಂ.ಎಂ. ಕಲಬುರ್ಗಿ ಅವರು ಹಂತಕರ ಗುಂಡಿಗೆ ಬಲಿಯಾಗಿ ಕಳೆದ ಆಗಸ್ಟ್ 30ಕ್ಕೆ ಆರು ವರ್ಷಗಳಾದವು. ದಾಬೋಲ್ಕರ್, ಪನ್ಸಾರೆ ಅವರನ್ನು ಕೊಂದ ಗಾಯ ಇನ್ನೂ ಮಾಯ್ದಿರಲಿಲ್ಲ. ಧಾರವಾಡದಲ್ಲಿ ಇನ್ನೊಬ್ಬ ವಿಚಾರವಾದಿ ಸತ್ಯಶೋಧಕನನ್ನು ಗುಂಡಿಕ್ಕಿ ಕೊಂದರು. ಲಿಂಗಾಯತ ಎಂಬುದು ಪ್ರತ್ಯೇಕ ಧರ್ಮ ಅದು ಹಿಂದೂ ಧರ್ಮದ ಭಾಗವಲ್ಲ ಎಂದು ಡಾ. ಕಲಬುರ್ಗಿ ಅವರು ಖಚಿತ ಚಾರಿತ್ರಿಕ ದಾಖಲೆಗಳೊಂದಿಗೆ ಪ್ರತಿಪಾದಿಸುತ್ತಾ ಬಂದವರು. ದಾಬೋಲ್ಕರ್, ಪನ್ಸಾರೆ ಹಂತಕರನ್ನು ಹಿಡಿದಿದ್ದರೆ ಕಲಬುರ್ಗಿ ಹತ್ಯೆಯಾಗುತ್ತಿರಲಿಲ್ಲವೇನೊ. ಕಲಬುರ್ಗಿ ನಂತರ ಗೌರಿ ಲಂಕೇಶ್ ಹತ್ಯೆಯೂ ನಡೆಯಿತು. ಗೌರಿ ಹತ್ಯೆ ಆರೋಪಿಗಳು ಸಿಕ್ಕರು. ಅವರ ದೊಡ್ಡ ಜಾಲ ಇನ್ನೂ ಬಯಲಾಗಬೇಕಾಗಿದೆ.ಆದರೆ ಸಾರ್ವಜನಿಕರ ಸ್ಮರಣೆಗೆ ದೀರ್ಘಾಯುಷ್ಯವಿಲ್ಲ. ಏನೇ ಆಗಲಿ ಕಲಬುರ್ಗಿ ಅವರಂತಹ ಸತ್ಯಶೋಧಕನನ್ನು ಕರ್ನಾಟಕದ ಜನತೆ ಮರೆಯಬಾರದು. ಕಲಬುರ್ಗಿ ಅವರನ್ನು ಕೊಂದವರ ಜೀವ ವಿರೋಧಿ ಸಿದ್ಧಾಂತವನ್ನು ಸೋಲಿಸುವವರೆಗೆ ವಿರಮಿಸಬಾರದು.

ಡಾ.ಕಲಬುರ್ಗಿ ಅವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ವಚನ ಚಳವಳಿಯ ಇತಿಹಾಸದ ಮೇಲೆ ಬಸವಣ್ಣನವರ ಕಾಲ ಘಟ್ಟದ ಮೇಲೆ ತಮ್ಮ ಸಂಶೋಧನೆಯ ಮೂಲಕ ಹೊಸ ಬೆಳಕನ್ನು ಚೆಲ್ಲಿದರು. ಬಸವನಿಗಾಗಿ ಬಲಿದಾನವನ್ನೂ ಮಾಡಿದರು.

ಯಾವುದು ಆ ಕರಾಳ ಸಿದ್ಧಾಂತ? 12ನೇ ಶತಮಾನದಲ್ಲಿ ಕಲ್ಯಾಣದಿಂದ ಬಸವಣ್ಣನವರನ್ನು ಗಡಿಪಾರು ಮಾಡಿಸಿ ಮುಗಿಸಿದ ಜೀವ ವಿರೋಧಿ ಸಿದ್ಧಾಂತ ಅದು. ಸಕಲ ಜೀವಾತ್ಮರ ಲೇಸನ್ನು ಬಯಸಿದ ಬಸವಣ್ಣನವರ ಧರ್ಮ ಮಡಿ, ಮೈಲಿಗೆಯಾಗಿರಲಿಲ್ಲ. ದಯವೇ ಅವರ ಧರ್ಮದ ಮೂಲವಾಗಿತ್ತು. ಅಂತಲೇ ಅವರೆಷ್ಟು ಕೆಳಗಿಳಿದು ಬಂದರೆಂದರೆ ತನ್ನನ್ನು ತಾನು ಮಾದಾರ ಚೆನ್ನಯ್ಯನ ಮಗನೆಂದು ಕರೆದುಕೊಂಡರು. ಜಾತಿ ಸೂತಕದಿಂದ ಸಮಾಜವನ್ನು ಹೊರಗೆ ತರಲು ಮಧುವರಸನ ಮಗಳನ್ನು ಹರಳಯ್ಯನ ಮಗನಿಗೆ ಕೊಟ್ಟು ಮದುವೆ ಮಾಡಿಸಲು ಹೊರಟರು. ಇಂತಹ ಬಸವಣ್ಣನವರನ್ನು ಸಂಪ್ರದಾಯವಾದಿ ಮನುವಾದಿ ಶಕ್ತಿಗಳು ಚರಿತ್ರೆಯ ಪುಟಗಳಲ್ಲಿ ಮರೆ ಮಾಡಲು ಹೊರಟಾಗ ಅದನ್ನು ಬಯಲಿಗೆಳೆದು ಬಸವಣ್ಣನವರ ನೈಜ ಚರಿತ್ರೆಯನ್ನು ಜನತೆಯ ಮುಂದೆ ಬಿಚ್ಚಿಟ್ಟವರು ಡಾ.ಕಲಬುರ್ಗಿ ಅವರು.

ಹಾಗೇ ನೋಡಿದರೆ ನಾನು ಚಿಕ್ಕವನಾಗಿದ್ದಾಗ ಅಂದರೆ ಎಪ್ಪತ್ತರ ದಶಕದವರೆಗೆ ಬಸವಣ್ಣ ಅಂದರೆ ಮಣ್ಣೆತ್ತಿನ ಅಮವಾಸ್ಯೆಯಲ್ಲಿ ಪೂಜೆ ಮಾಡುವ ನಂದಿಯಾಗಿದ್ದ. ಎತ್ತುಗಳಿಗೆ ಜನರು ಬಸವಣ್ಣ ಎಂದು ಕರೆಯುತ್ತಾರೆ. ಬಸವಣ್ಣ ಎಂಬ ಒಬ್ಬ ಮಹಾಪುರುಷ ಈ ಜಗತ್ತಿನಲ್ಲಿ ಬದುಕಿದ್ದ ಎಂಬುದನ್ನು ಅಳಿಸಿ ಹಾಕಿದ್ದರು. ವೀರಶೈವ ಮಠಾಧೀಶರಿಗೂ ಬಸವಣ್ಣ ಬೇಕಾಗಿರಲಿಲ್ಲ. ಇಂತಹ ಸನ್ನಿವೇಶದಲ್ಲಿ ಬಸವಣ್ಣನವರನ್ನು ಮನೆ ಮನೆಗೆ ಕೊಂಡೊಯ್ದವರು ಬಿಜಾಪುರ ಜಿಲ್ಲೆಯ ಮನಗೂಳಿಯ ಶ್ರೀ ಲಿಂಗಾನಂದ ಸ್ವಾಮಿಗಳು ಮತ್ತು ಮಾತೆ ಮಹಾದೇವಿ ಅವರು. ಇವರು ಊರೂರು ಸುತ್ತಾಡಿ ಬಸವಣ್ಣನವರ ಮಹತ್ಕ್ರಾಂತಿಯ ಇತಿಹಾಸವನ್ನು ವಿವರಿಸಿದ ನಂತರ ಉಳಿದ ಸ್ವಾಮಿಗಳು ಹೇಳಲು ಶುರು ಮಾಡಿದರು.

ಬಸವಣ್ಣನವರು ಬದುಕಿನುದ್ದಕ್ಕೂ ಸ್ಥಾವರ ಸಂಸ್ಕೃತಿಯನ್ನು ವಿರೋಧಿಸುತ್ತಾ ಬಂದರು. ಆದರೆ ಈಗ ಅವರನ್ನೇ ಸ್ಥಾವರವಾಗಿಸುವ ಮಸಲತ್ತುಗಳು ನಡೆದಿವೆ. ಇಂತಹ ಸಂಕೀರ್ಣ ಕಾಲಘಟ್ಟದಲ್ಲಿ ಡಾ.ಕಲಬುರ್ಗಿ ಅವರು ಮತ್ತೆ ಮತ್ತೆ ನೆನಪಾಗುತ್ತಾರೆ.ಅವರ ಬಲಿದಾನ ವ್ಯರ್ಥವಾಗದಿರಲಿ ಬಸವಣ್ಣನವರ ವೈಚಾರಿಕ ಜ್ಯೋತಿ ಎಲ್ಲೆಡೆ ಬೆಳಕನ್ನು ನೀಡಲಿ.

ಡಾ.ಕಲಬುರ್ಗಿ ಅವರನ್ನು ಹತ್ಯೆ ಮಾಡಿದ ಸಿದ್ಧಾಂತದ ಪ್ರತಿಪಾದಕರು ಇನ್ನೂ ಆರ್ಭಟಿಸುತ್ತಿದ್ದಾರೆ. ವಿಷಾದದ ಸಂಗತಿ ಅಂದರೆ ಬಸವಣ್ಣನವರ ಹೆಸರನ್ನು ಬಂಡವಾಳ ಮಾಡಿಕೊಂಡ ಅನೇಕರಿಗೆ ಈಗ ಕಲಬುರ್ಗಿ ಅವರ ನೆನಪಿಲ್ಲ. ಮನೆ ಮನೆಗಳಲ್ಲಿ ಸತ್ಯ ನಾರಾಯಣ ಪೂಜೆ ಮಾಡಿಸುತ್ತಾ ಲಿಂಗಾಯತ ಧರ್ಮಕ್ಕೆ ವ್ಯತಿರಿಕ್ತವಾಗಿ ನಡೆದುಕೊಳ್ಳುವ ಇಂತಹವರು ಅಯೋಧ್ಯೆಯ ರಾಮ ಮಂದಿರಕ್ಕೆ ನಿಧಿ ಸಂಗ್ರಹಿಸಿ ಕೊಡುತ್ತಾರೆ.

 ಡಾ.ಕಲಬುರ್ಗಿ ಅವರ ವಿದ್ಯಾರ್ಥಿ ನಾನಲ್ಲ. ಆದರೆ ಅವರ ಒಡನಾಟ ನನಗಿತ್ತು. ನಾನು ಸಂಯುಕ್ತ ಕರ್ನಾಟಕದಲ್ಲಿ ಕೆಲಸಕ್ಕೆ ಸೇರಿ ಹುಬ್ಬಳ್ಳಿಗೆ ಬಂದು ನೆಲೆಸಿದಾಗ ನಮ್ಮ ಸಂಬಂಧ ನಿಕಟವಾಯಿತು. ಮಾರ್ಗ್1 ಎಂಬ ಅವರ ಸಂಶೋಧನ ಗ್ರಂಥ ಪ್ರಕಟವಾದಾಗ ಸಾಂಪ್ರದಾಯವಾದಿಗಳಿಂದ ತೀವ್ರ ವಿರೋಧ ಎದುರಾಯಿತು. ಎಷ್ಟೇ ಒತ್ತಡ ಬಂದರೂ ಕಲಬುರ್ಗಿ ಅವರು ಮಣಿಯಲಿಲ್ಲ. ಆಗ ನಾವೆಲ್ಲ ಅವರ ಬೆಂಬಲಕ್ಕೆ ನಿಂತಿದ್ದೆವು. ಕೊನೆಗೆ ಒತ್ತಡ ಎಷ್ಟು ತೀವ್ರವಾಯಿತೆಂದರೆ ಕಲಬುರ್ಗಿ ಅವರು ರಾಜಿ ಸಂಧಾನಕ್ಕೆ ಒಪ್ಪಿಕೊಳ್ಳಲೇಬೇಕಾಯಿತು. ಅಂತಲೇ ಕಲಬುರ್ಗಿ ಅವರು ಆಗಾಗ ಭಾರತದಲ್ಲಿ ಸಂಶೋಧಕನೊಬ್ಬ ಶಿಲುಬೆಗೆ ಏರಲೇಬೇಕಾಗುತ್ತದೆ ಎಂದು ಹೇಳುತ್ತಿದ್ದರು.

ಕಲಬುರ್ಗಿ ಅವರು ತಮಗೆ ಸರಿ ಕಂಡದ್ದನ್ನು ಹೇಳಲು ಯಾವ ಮುಲಾಜನ್ನು ನೋಡುತ್ತಿರಲಿಲ್ಲ. ಸಂಶೋಧನೆ ಕ್ಷೇತ್ರದಲ್ಲಿ ಅಂಬೆಗಾಲನ್ನಿಡುವಾಗಲೇ ಪ್ರೊ.ಡಿ.ಎಲ್.ನರಸಿಂಹಾಚಾರ್ ಅವರ ಶಬ್ದಮಣಿ ದರ್ಪಣದ ಸಂಪಾದನೆಯನ್ನು ಪ್ರಶ್ನಿಸಿದರು. ಇದರ ಬಗ್ಗೆ ನರಸಿಂಹಾಚಾರ್ಯರು ಎಂದೂ ಕಲಬುರ್ಗಿ ಅವರ ಬಗ್ಗೆ ತಪ್ಪು ತಿಳಿದುಕೊಳ್ಳಲಿಲ್ಲ.

ಡಾ.ಕಲಬುರ್ಗಿ ಅವರು ಕನ್ನಡ ಸಾರಸ್ವತ ಲೋಕಕ್ಕೆ ನೀಡಿದ ಕೊಡುಗೆ ಅಮೂಲ್ಯವಾದುದು. ಭಾಷೆ, ಇತಿಹಾಸ, ನಾಮ ವಿಜ್ಞಾನ, ನಿಘಂಟು, ಹಸ್ತಪ್ರತಿ ಶಾಸ್ತ್ರ, ಶಾಸನ ಶಾಸ್ತ್ರ, ವಚನ ಸಾಹಿತ್ಯ ಹೀಗೆ ಹಲವಾರು ವಿಷಯಗಳ ಬಗ್ಗೆ ಅವರ ಸಾಧನೆ ಅಸಮಾನ್ಯವಾದುದು.

ಕಲಬುರ್ಗಿ ಅವರನ್ನು ಕಳೆದುಕೊಂಡ ಕರ್ನಾಟಕ ಅಂತಹ ಮಹಾನ್ ಸಂಶೋಧಕನ ಸ್ಥಾನವನ್ನು ತುಂಬಬೇಕಾದ ಇನ್ನೊಬ್ಬ ಸತ್ಯ ಶೋಧಕನಿಗಾಗಿ ಕಾಯಬೇಕಾಗಿದೆ.

ಲಿಂಗಾಯತ ಎಂಬುದು ಕನ್ನಡಿಗರು ಸೃಷ್ಟಿಸಿದ ಮೊದಲ ಧರ್ಮ ಎಂದು ಬಲವಾಗಿ ಪ್ರತಿಪಾದಿಸಿದ ಕಲಬುರ್ಗಿ ಅವರು ಲಿಂಗಾಯತ ಧರ್ಮವು ಉತ್ತರ ಭಾರತದಿಂದ ವಲಸೆ ಬಂದ ನಾಲ್ಕು ಧರ್ಮಗಳ ವಿರುದ್ಧ ಎಲ್ಲ ಸಮುದಾಯಗಳ ಕನ್ನಡಿಗರು ಕಟ್ಟಿಕೊಂಡ ಹೊಸ ಧರ್ಮ ಎಂಬುದನ್ನು ಪುರಾವೆ ಸಹಿತ ಪ್ರತಿಪಾದಿಸುತ್ತ್ತಾ ಬಂದರು.
 ಇನ್ನು ಗೌರಿ ಲಂಕೇಶ್ ಹತ್ಯೆ ಸುದ್ದಿ ಕೇಳಿದಾಗ ನನಗೆ ತಕ್ಷಣಕ್ಕೆ ನಂಬಲು ಆಗಲಿಲ್ಲ. ಅವಳಿಗೆ ವೈಯಕ್ತಿಕವಾಗಿ ಶತ್ರುಗಳಾರೂ ಇರಲಿಲ್ಲ. ಆದರೆ ತಂದೆಯಂತೆ ಸಂಘಪರಿವಾರದ ಕೋಮುವಾದವನ್ನು ವಿರೋಧಿಸುತ್ತಾ ಬಂದರು. ಅವರ ವಿರೋಧ ಬರವಣಿಗೆಗೆ ಮಾತ್ರ ಸೀಮಿತವಾಗಿರಲಿಲ್ಲ. ಬೀದಿಯಲ್ಲಿ ಬಂದು ಹೋರಾಟದ ಸಾಗರದ ಜೊತೆಗೆ ಒಂದಾಗುತ್ತಿದ್ದರು. ಬಾಬಾಬುಡಾನ್‌ಗಿರಿ ಪ್ರತಿಭಟನೆಯಲ್ಲಿ ಪ್ರತಿ ವರ್ಷ ಅವರೊಂದಿಗೆ ಭಾಗವಹಿಸಿದ ನೆನಪು ಮರುಕಳಿಸುತ್ತಲೇ ಇರುತ್ತದೆ.

ಗೌರಿ ಲಂಕೇಶ್‌ಗೆ ಸಾವು ಅನಿವಾರ್ಯವಾಗಿರಲಿಲ್ಲ. ದಿಲ್ಲಿಯ ಇಂಗ್ಲಿಷ್ ಪತ್ರಿಕೋದ್ಯಮದಲ್ಲಿದ್ದ ಅವರು ತಂದೆ ಲಂಕೇಶ್‌ರ ಸಾವಿನ ನಂತರ ಬೆಂಗಳೂರಿಗೆ ವಾಪಸ್ ಬಂದು ಲಂಕೇಶ್ ಪತ್ರಿಕೆಯ ಸಾರಥ್ಯ ವಹಿಸಿದರು. ತಂದೆ ವ್ಯಾವಹಾರಿಕವಾಗಿ ತುಂಬಾ ಲೆಕ್ಕಾಚಾರದವರಾಗಿದ್ದರು. ಹೀಗಾಗಿ ಪತ್ರಿಕೆ ಮಾಡಿ ಅವರು ಕೈ ಸುಟ್ಟುಕೊಳ್ಳಲಿಲ್ಲ. ಆದರೆ ಗೌರಿ ಜರ್ನಲಿಸ್ಟ್ ಜೊತೆಗೆ ಆ್ಯಕ್ಟಿವಿಸ್ಟ್ ಆದರು. ಸಾಲದಲ್ಲಿ ಪತ್ರಿಕೆ ನಡೆಸಿ ಅದರಲ್ಲೇ ಕೊನೆಯುಸಿರೆಳೆದರು. ಅವರನ್ನು ಉಳಿಸಿಕೊಳ್ಳಲು ಕರ್ನಾಟಕದ ಪ್ರಜಾಪ್ರಭುತ್ವವಾದಿ ಚಳವಳಿಗೆ ಸಾಧ್ಯವಾಗಲಿಲ್ಲ.

ಪ್ರಜಾಪ್ರಭುತ್ವವಾದಿ ಚಳವಳಿ ದುರ್ಬಲವಾದಾಗ ಫ್ಯಾಶಿಸ್ಟ್ ಶಕ್ತಿಗಳ ಕೈ ಮೇಲಾಗುತ್ತದೆ. ತಾರ್ಕಿಕ ಪ್ರಶ್ನೆಗಳಿಗೆ ಉತ್ತರ ನೀಡಲಾಗದ ಫ್ಯಾಶಿಸ್ಟ್ ಶಕ್ತಿಗಳು ಪ್ರಶ್ನಿಸುವ ವ್ಯಕ್ತಿಯನ್ನು ಕೊಂದು ಬಾಯಿ ಮುಚ್ಚಿಸಲು ಹೋಗುತ್ತಾರೆ. ಫ್ಯಾಶಿಸ್ಟ್ ಶಕ್ತಿಗಳ ಆರ್ಭಟ ಈಗ ಜೋರಾಗಿ ಕೇಳಿ ಬರುತ್ತಿರಬಹುದು. ಆದರೆ ಯಾವುದಕ್ಕೂ ಕೊನೆ ಎಂಬುದಿರುತ್ತದೆ. ಇವರ ಕೊನೆಗಾಲ ಸಮೀಪಿಸುತ್ತಿದೆ. ಇಂತಹ ಸನ್ನಿವೇಶದಲ್ಲಿ ಪ್ರಗತಿಪರರು, ಪ್ರಜಾಪ್ರಭುತ್ವವಾದಿ ಶಕ್ತಿಗಳು ಸಕಲರ ಏಳಿಗೆ ಬಯಸುವ ಅರ್ಥಪೂರ್ಣ ಪರ್ಯಾಯ ರೂಪಿಸಲು ಶ್ರಮಿಸಬೇಕಾಗಿದೆ.

Writer - ಸನತ್ ಕುಮಾರ್ ಬೆಳಗಲಿ

contributor

Editor - ಸನತ್ ಕುಮಾರ್ ಬೆಳಗಲಿ

contributor

Similar News