ಲಂಕೆ: ಕಿಚ್ಚು ಹಚ್ಚೆಂದಿತು ಲಂಕೆ!
ಅನ್ಯಾಯದ ವಿರುದ್ಧ ಸಿಡಿದು ಕಾನೂನನ್ನು ಎದುರು ಹಾಕಿಕೊಂಡು ಜೈಲು ಸೇರುವ ಹುಡುಗ ಜೈಲಿನಿಂದ ಹೊರಗೆ ಬರುವಾಗ ಯುವಕನಾಗಿರುತ್ತಾನೆ. ಆದರೆ ಹೊರಗಡೆ ಅನ್ಯಾಯ ಮಾತ್ರ ಹಾಗೆಯೇ ಮುಂದುವರಿದಿರುತ್ತದೆ. ಈ ಬಾರಿ ಇಡೀ ಅನ್ಯಾಯದ ಕೇಂದ್ರವನ್ನೇ ನಾಯಕ ಸುಟ್ಟು ಹಾಕಲೆಂದು ಪ್ರತಿ ಪ್ರೇಕ್ಷಕ ಬಯಸುತ್ತಾನೆ. ಅಷ್ಟರಲ್ಲಿ ಲಂಕೆ ಬೂದಿಯಾಗುತ್ತದೆ!
ಚಿತ್ರದಲ್ಲಿ ಲಂಕೆ ಎನ್ನುವ ಊರಿಲ್ಲ. ಹಾಗಾಗಿ ಚಿತ್ರಕ್ಕೂ ಪುರಾಣಕ್ಕೂ ಯಾವುದೇ ಸಂಬಂಧವಿಲ್ಲ. ಆದರೆ ನಾಯಕನ ಹೆಸರು ರಾಮ. ಪರಪ್ಪನ ಅಗ್ರಹಾರದಿಂದ ಹೊರಗೆ ಬರುವ ದೃಶ್ಯದ ಮೂಲಕ ಆತನನ್ನು ಪರಿಚಯಿಸಲಾಗುತ್ತದೆ. ಹಾಗಂತ ಹೊರಗೆ ಕಾದು ಸ್ವಾಗತಿಸುವ ಸಂಭ್ರಮದ ಬರುವಿಕೆ ಅದಾಗಿರುವುದಿಲ್ಲ. ಅದೇ ಕಾರಣದಿಂದಲೇ ನಾಯಕನ ಪಾತ್ರದ ಬಗ್ಗೆ ಒಂದು ಕುತೂಹಲ ಆರಂಭವಾಗುತ್ತದೆ.
ಚಿತ್ರದ ಮಧ್ಯಂತರದ ಬಳಿಕ ರಾಮನ ಹಿನ್ನೆಲೆಯನ್ನು ತೋರಿಸಲಾಗುತ್ತದೆ. ಅದುವರೆಗೆ ಆತನ ಸ್ನೇಹ, ಪ್ರೀತಿ, ಹೊಡೆದಾಟಗಳೊಂದಿಗೆ ಕತೆ ಮುಂದುವರಿದಿರುತ್ತದೆ. ಅಂದಹಾಗೆ ಇಲ್ಲಿ ಹೊಡೆದಾಟಕ್ಕೆ ಕಾರಣ ನಾಯಕಿಯ ಮನೆಯವರಲ್ಲ! ಆಕೆಯನ್ನು ಅಕ್ರಮವಾಗಿ ಇರಿಸಿಕೊಂಡು ದಂಧೆ ನಡೆಸಲೆತ್ನಿಸುವ ವೇಶ್ಯಾವಾಟಿಕೆಯ ತಂಡ. ಆ ತಂಡವನ್ನು ನಾಯಕ ಹೇಗೆ ಭೇದಿಸುತ್ತಾನೆ ಮತ್ತು ಅದನ್ನು ನಡೆಸುತ್ತಿರುವಾಕೆ ಕೂಡ ಹೇಗೆ ನಾಯಕನಿಗೆ ಸಂಬಂಧ ಪಟ್ಟವಳೇ ಆಗಿರುತ್ತಾಳೆ ಎನ್ನುವುದನ್ನು ದ್ವಿತೀಯಾರ್ಧದಲ್ಲಿ ತೋರಿಸಲಾಗಿದೆ. ತೀರ ಸರಳವಾಗಿ ಬಂದು ಅನಿರೀಕ್ಷಿತವಾಗಿ ಸಿಡಿದೇಳುವ ‘ಲೂಸ್ ಮಾದ’ ಇಮೇಜ್‌ನ ಚೆನ್ನಾಗಿಯೇ ಬಳಸಿಕೊಂಡಿರುವ ಕೀರ್ತಿ ನಿರ್ದೇಶಕರಿಗೆ ಸಲ್ಲುತ್ತದೆ. ಯೋಗಿ ಕೂಡ ಹಿಂದಿನ ಚಿತ್ರಗಳಿಗೆ ಹೋಲಿಸಿದರೆ ಒಂದು ಸುತ್ತು ದಪ್ಪಗಾಗಿರುವಂತೆ ಕಂಡರೂ ಕುಣಿತ, ಹೊಡೆದಾಟದ ದೃಶ್ಯಗಳಲ್ಲಿ ಯಾವುದೇ ಕೊರತೆಯಾಗದ ಹಾಗೆ ಎಂದಿನ ಹಾಗೆ ಅಭಿಮಾನಿಗಳನ್ನು ಖುಷಿ ಪಡಿಸಿದ್ದಾರೆ. ಜೋಡಿಯಾಗಿ ನಟಿಸಿರುವ ಕೃಷಿ ತಾಪಂಡಗಿಂತಲೂ ಕಾವ್ಯಾ ಶೆಟ್ಟಿಗೆ ನಟನೆ ಮತ್ತು ಗ್ಲಾಮರ್ ಪ್ರದರ್ಶನಕ್ಕೆ ಹೆಚ್ಚು ಅವಕಾಶ ದೊರಕಿದೆ. ಅದಕ್ಕೆ ಪಾತ್ರದಲ್ಲಿ ಇದ್ದಂತಹ ಎರಡು ವಿಭಿನ್ನ ಛಾಯೆಯೂ ಕಾರಣ ಎನ್ನಬಹುದು.
ಅಗಲಿ ಹೋದ ನಟ ಸಂಚಾರಿ ವಿಜಯ್ ಅವರ ಪಾತ್ರ ಕತೆಯ ಫ್ಲ್ಯಾಷ್‌ಬ್ಯಾಕ್‌ನಲ್ಲಿದೆ. ಅವರ ನಟನೆ ನೋಡುತ್ತಾ ಪ್ರೇಕ್ಷಕರು ನಿಜಕ್ಕೂ ಫ್ಲ್ಯಾಷ್‌ಬ್ಯಾಕ್‌ಗೆ ಹೋಗುವ ಸಾಧ್ಯತೆ ಹೆಚ್ಚು. ವಿಜಯ್‌ಗೆ ಜೋಡಿಯಾಗಿ ಏಸ್ತರ್ ನೊರೊನ್ಹಾ ನಟಿಸಿದ್ದಾರೆ. ಅವರಿಂದಲೂ ಗ್ಲಾಮರ್ ಬಳಸಿಕೊಳ್ಳಲು ನಿರ್ದೇಶಕರ ಚಿತ್ತ ಹರಿದಂತಿದೆ. ಇವೆಲ್ಲದರ ನಡುವೆ ಮಂಗಳಮುಖಿಯಾಗಿ ಶರತ್ ಲೋಹಿತಾಶ್ವ ಪ್ರದರ್ಶಿಸಿದ ಗ್ಲಾಮರ್ ಬಗ್ಗೆ ಉಲ್ಲೇಖಿಸಲೇಬೇಕು. ವೃತ್ತಿ ಬದುಕಿನಲ್ಲಿ ಒಂದು ವಿಭಿನ್ನ ಪಾತ್ರಕ್ಕೆ ಜೀವ ತುಂಬುವ ಅವಕಾಶ ಅವರಿಗೆ ಲಭಿಸಿದೆ. ಉಳಿದಂತೆ ಶೋಭರಾಜ್, ಸುಚೇಂದ್ರ ಪ್ರಸಾದ್, ಗಾಯತ್ರಿ ಜಯರಾಮ್, ಪ್ರಶಾಂತ್ ಸಿದ್ದಿ, ಡ್ಯಾನಿಯಲ್ ಕುಟ್ಟಪ್ಪ ಮೊದಲಾದವರು ತಮ್ಮ ಎಂದಿನ ಹುಮ್ಮಸ್ಸಿನ ನಟನೆಯಿಂದ ಚಿತ್ರಕ್ಕೆ ಶಕ್ತಿ ತುಂಬಿದ್ದಾರೆ. ಇದು ಒಂದು ನೈಜ ಘಟನೆಯನ್ನು ಆಧಾರವಾಗಿಸಿ ಮಾಡಿರುವಂತಹ ಚಿತ್ರ ಎಂದು ನಿರ್ದೇಶಕರು ಹೇಳಿದ್ದರೂ ಕತೆ ತೀರ ಸಿನಿಮೀಯವಾಗಿಯೇ ಇದೆ!
ಎದುರು ಸಿಕ್ಕಾತ ಜೈಲಿನಿಂದ ಬಂದೆ ಎಂದರೂ ಆತನನ್ನು ಕೂಡಲೇ ಸ್ನೇಹಿತನಾಗಿಸಿಕೊಂಡು ನೇರ ತನ್ನ ಕೋಣೆಗೆ ಕರೆದೊಯ್ಯುವುದು; ಆತನಿಗೆ ತಾನು ತೆಗೆದಿಟ್ಟ ಹಣ ಪ್ರದರ್ಶಿಸುವ ದೃಶ್ಯಗಳು ಸೇರಿದಂತೆ ಲಾಜಿಕ್ ವರ್ಕೌಟ್ ಆಗದಿರುವ ಸಾಕಷ್ಟು ದೃಶ್ಯಗಳಿವೆ. ಅನಿವಾರ್ಯವಾಗಿ ವೇಶ್ಯಾವಾಟಿಕೆಗೆ ಕಾಲಿಟ್ಟು ಪಾಪಪ್ರಜ್ಞೆಯಲ್ಲಿರುವವಳು ಕನವರಿಸಬಾರದಂತಹ ಸಂಭಾಷಣೆಗಳೊಡನೆ ತೋರಿಸಿರುವುದನ್ನು ಕೂಡ ಆ ಪಟ್ಟಿಗೆ ಸೇರಿಸಬಹುದು. ಉಳಿದಂತೆ ಒಂದು ವೇಶ್ಯಾವಾಟಿಕೆ ದಂಧೆ ನಡೆಯುವಲ್ಲಿ ಇರಬಹುದಾದ ದ್ವಂದ್ವಾರ್ಥದ ಸಂಭಾಷಣೆಗಳು ಸಾಂದರ್ಭಿಕವಾಗಿ ಸೇರಿಕೊಂಡಿವೆ. ಜೊತೆಗೆ ಅಪರಾಧದ ಸನ್ನಿವೇಶಗಳು ಕೂಡ ಒಂದಷ್ಟು ವೈಭವೀಕರಣ ಪಡೆದ ಕಾರಣ ಸಿನೆಮಾ ವಯಸ್ಕರ ಚಿತ್ರದ ಪಟ್ಟಿ ಸೇರಿಕೊಂಡಿದೆ. ನಾಯಕನ ಕುರಿತಾದ ಬಿಲ್ಡಪ್ ಹಾಡು ಪಾತ್ರಕ್ಕೆ ಹೊಂದದೆ ಅರ್ಥಹೀನವೆನಿಸಿದರೂ ಕಾರ್ತಿಕ್ ಶರ್ಮ ಅವರ ಸಂಗೀತ, ರಮೇಶ್ ಬಾಬು ಅವರ ಛಾಯಾಗ್ರಹಣ ಮತ್ತು ನೃತ್ಯ ನಿರ್ದೇಶನ ಎಲ್ಲ ಹಾಡುಗಳನ್ನು, ಸನ್ನಿವೇಶಗಳನ್ನು ಉತ್ತಮಗೊಳಿಸಿದೆ.
ಒಟ್ಟಿನಲ್ಲಿ ಒಂದು ಕಮರ್ಷಿಯಲ್ ಚಿತ್ರದ ಎಲ್ಲ ರಸಭಾವಗಳನ್ನು ಒಟ್ಟಾಗಿ ಸ್ವೀಕರಿಸಲು ಕಾದು, ಚಿತ್ರಮಂದಿರಕ್ಕೆ ನುಗ್ಗಲು ನಿಂತವರ ಹುಚ್ಚಿನ ಅಂಕೆಗೆ ಕಿಚ್ಚಿಟ್ಟು ಸೆಳೆವ ಪ್ರಯತ್ನವನ್ನು ಲಂಕೆ ಮಾಡಿದೆ.
ತಾರಾಗಣ: ಯೋಗಿ, ಸಂಚಾರಿ ವಿಜಯ್, ಕಾವ್ಯಾ ಶೆಟ್ಟಿ, ಕೃಷಿ ತಾಪಂಡ, ಏಸ್ತರ್ ನೊರೊನ್ಹಾ ಮೊದಲಾದವರು.
ನಿರ್ದೇಶನ: ರಾಮ್ ಪ್ರಸಾದ್ ಎಂ. ಡಿ.
ನಿರ್ಮಾಣ: ಪಟೇಲ್ ಶ್ರೀನಿವಾಸ್, ಸುರೇಖಾ ರಾಮ್ ಪ್ರಸಾದ್