ಗುರುವಿಗೇಕೆ ಹೆಚ್ಚು ಅನುಯಾಯಿಗಳು?

Update: 2021-09-11 19:30 GMT

ಗುರುವಿಗಿಂತ ದೊಡ್ಡವರು ಈ ಜಗತ್ತಿನಲ್ಲಿ ಯಾರೂ ಇಲ್ಲ. ಸದಾ ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿರುವ ಶಿಕ್ಷಕರು ವಿದ್ಯಾರ್ಥಿಗಳಿಗೆ ಹೆಚ್ಚು ಹೆಚ್ಚು ಆಪ್ತರಾಗುತ್ತಾರೆ. ಹೆಚ್ಚು ಹೆಚ್ಚು ಆಪ್ತರಾದಷ್ಟು ಗುರು ಶಿಷ್ಯರ ನಡುವೆ ಆಕರ್ಷಣೆ ಹೆಚ್ಚಾಗುತ್ತದೆ. ಅಂತಹ ಗುರುವಿಗೆ ಸಹಜವಾಗಿ ಅನಯಾಯಿಗಳು ಹೆಚ್ಚು. ಈ ಮಾತು ವಿದ್ಯಾಗುರುವಿಗೆ ಮಾತ್ರ ಅನ್ವಯಿಸುವುದಿಲ್ಲ. ನಮ್ಮ ಸೌರವ್ಯೆಹದ ಗುರುಗ್ರಹಕ್ಕೂ ಅನ್ವಯಿಸುತ್ತದೆ. ನಮ್ಮ ಸೌರವ್ಯೆಹದಲ್ಲಿ ಇತರ ಎಲ್ಲಾ ಗ್ರಹಗಳಿಗಿಂತ ಗುರು ಗ್ರಹವೇ ದೊಡ್ಡದು. ಸೂರ್ಯನ ಐದನೇ ಗ್ರಹವಾದ ಗುರುವು ಸೌರವ್ಯೆಹದ ಅತ್ಯಂತ ದೊಡ್ಡ ಗ್ರಹವಾಗಿದೆ. ಇದು ಸಮಭಾಜಕದಲ್ಲಿ 1,43,000 ಕಿ.ಮೀ. ಅಗಲವಿದೆ. ಸೂರ್ಯನಿಂದ ಸರಾಸರಿ 77.83 ಕೋಟಿ ಕಿ.ಮೀ. ದೂರದಲ್ಲಿದೆ. ಭೂಮಿಯಿಂದ ನೋಡಿದಾಗ ಶುಕ್ರನ ನಂತರ ರಾತ್ರಿ ಆಕಾಶದಲ್ಲಿ ಕಾಣುವ ಎರಡನೇ ಪ್ರಕಾಶಮಾನವಾದ ಗ್ರಹವಾಗಿದೆ.

ರೋಮನ್ ಪೌರಾಣಿಕ ರಾಜನಾದ ಜುಪಿಟರ್‌ನ ಹೆಸರನ್ನು ಈ ಗ್ರಹಕ್ಕೆ ಇಡಲಾಗಿದೆ. ಗುರುಗ್ರಹವನ್ನು ಅನಿಲ ದೈತ್ಯ ಎಂದು ಕರೆಯಲಾಗುತ್ತದೆ. ಇದರ ವಾತಾವರಣವು ಸೂರ್ಯನಂತೆ ಹೆಚ್ಚಾಗಿ ಹೈಡ್ರೋಜನ್ ಮತ್ತು ಹೀಲಿಯಂ ಅನಿಲಗಳಿಂದ ಕೂಡಿದೆ. ಗ್ರಹವು ದಪ್ಪನಾದ ಕೆಂಪು, ಕಂದು, ಹಳದಿ ಮತ್ತು ಬಿಳಿ ಮೋಡಗಳಿಂದ ಆವೃತ್ತವಾಗಿದೆ. ಈ ಬಣ್ಣಬಣ್ಣದ ಮೋಡಗಳು ಗ್ರಹವು ಬಣ್ಣಬಣ್ಣದ ಪಟ್ಟೆ ಹೊಂದಿರುವಂತೆ ಕಾಣುತ್ತದೆ. ಗುರುವಿನ ಹೆಗ್ಗುರುತು ಎಂದರೆ ದೊಡ್ಡದಾದ ಕೆಂಪು ಕಲೆ. ಇದು ಹಣೆಯ ತಿಲಕವಿದ್ದಂತೆ. ಇದು ಶತಶತಮಾನಗಳಿಂದ ಬದಲಾಗದೇ ಹಾಗೆಯೇ ಉಳಿದಿದೆ. ಇದೊಂದು ಚಂಡಮಾರುತಗಳಿಂದ ಉಂಟಾದ ಅನಿಲಗಳ ಸುಳಿ. ವಿರುದ್ಧ ದಿಕ್ಕಿನ ಮಾರುತಗಳಿಂದ ಉಂಟಾದ ಸುಳಿ ಗ್ರಹದಲ್ಲಿ ಹಾಗೆಯೇ ಕಲೆಯಾಗಿ ಉಳಿದಿದೆ. ಈ ಸುಳಿಯಲ್ಲಿ ಈಗಲೂ ಅನಿಲಗಳ ಸುಳಿದಾಟ ನಡೆಯುತ್ತಲೇ ಇರುತ್ತದೆ. ಆದರೆ ಅದು ತುಂಬಾ ನಿಧಾನಗತಿಯಲ್ಲಿದೆ. ಗುರುಗ್ರಹವು ಮೂರು ಉಂಗುರಗಳನ್ನು ಹೊಂದಿದೆ. ಆದರೆ ಅವು ಕಣ್ಣಿಗೆ ಕಾಣಲಾರದಷ್ಟು ತೆಳುವಾಗಿವೆ. ವಾಯೇಜರ್-1 ಬಾಹ್ಯಾಕಾಶ ನೌಕೆಯು 1979ರಲ್ಲಿ ಗುರುಗ್ರಹದ ಉಂಗುರಗಳನ್ನು ಪತ್ತೆ ಹಚ್ಚಿತ್ತು. ಗುರುವಿನ ಉಂಗುರಗಳು ಹೆಚ್ಚಾಗಿ ಸಣ್ಣ ಧೂಳಿನ ಕಣಗಳಿಂದ ಮಾಡಲ್ಪಟ್ಟಿವೆ. ಗುರುಗ್ರಹ ವೇಗವಾಗಿ ತಿರುಗುತ್ತದೆ. ಗುರುವಿನ ಒಂದು ದಿನ ಕೇವಲ ಹತ್ತು ಗಂಟೆಗಳು. ಅಂದರೆ ಹತ್ತು ಗಂಟೆಯಲ್ಲಿ ಒಂದು ಸುತ್ತು ಹಾಕುತ್ತದೆ. ಗುರುವಿನ ಕಕ್ಷೆಯು ದೀರ್ಘ ಅಂಡಾಕಾರವಾಗಿದ್ದು ಸೂರ್ಯನನ್ನು ಒಂದು ಸುತ್ತು ಸುತ್ತಲು 12 ಭೂ ವರ್ಷಗಳು ಬೇಕಾಗುತ್ತದೆ. ಅಂದರೆ ಗುರುವಿನ ಒಂದು ವರ್ಷವು ಭೂಮಿಯ 12 ವರ್ಷಗಳಿಗೆ ಸಮ.

ಗುರುವಿನ ಮೋಡಗಳಲ್ಲಿನ ತಾಪಮಾನವು ಮೈನಸ್ 145 ಡಿಗ್ರಿ. ಗ್ರಹದ ಕೆಂದ್ರದ ತಾಪಮಾನವು ಹೆಚ್ಚು ಬಿಸಿಯಾಗಿರುತ್ತದೆ. ಕೋರ್ ತಾಪಮಾನವು ಸುಮಾರು 24,000 ಡಿಗ್ರಿ ಸೆಲ್ಸಿಯಸ್ ಇರುತ್ತದೆ. ಅದು ಸೂರ್ಯನ ಮೇಲ್ಮೈಗಿಂತ ಹೆಚ್ಚು ಬಿಸಿ ಹೊಂದಿದೆ. ಗುರುಗ್ರಹದ ಮೋಡಗಳ ಆಳದಲ್ಲಿ ದ್ರವ ಲೋಹೀಯ ಹೈಡ್ರೋಜನ್‌ನ ದೊಡ್ಡ ಸಾಗರವಿದೆ. ಭೂಮಿಯ ಮೇಲೆ ಹೈಡ್ರೋಜನ್ ಸಾಮಾನ್ಯವಾಗಿ ಅನಿಲ ರೂಪದಲ್ಲಿದೆ. ಆದರೆ ಗುರುವಿನ ವಾತಾವರಣದೊಳಗೆ ಒತ್ತಡ ಹೆಚ್ಚಾಗಿರುವುದರಿಂದ ಅನಿಲವು ದ್ರವವಾಗುತ್ತದೆ. ಗುರುಗ್ರಹ ತಿರುಗುವಾಗ ದ್ರವ ಲೋಹದ ಸಾಗರವು ಪ್ರಬಲವಾದ ಕಾಂತಕ್ಷೇತ್ರವನ್ನು ಉಂಟುಮಾಡುತ್ತದೆ. ಗುರುವಿನ ಕಾಂತಕ್ಷೇತ್ರವು ಭೂಮಿಯ ಕಾಂತಕ್ಷೇತ್ರಕ್ಕಿಂತ 20 ಪಟ್ಟು ಬಲವಾಗಿದೆ. ಗಾತ್ರ ಮತ್ತು ದ್ರವ್ಯರಾಶಿಯಲ್ಲಿ ಗುರುವನ್ನು ಮೀರಿಸುವ ಶಕ್ತಿ ಯಾವ ಗ್ರಹಕ್ಕೂ ಇಲ್ಲ. ನಮ್ಮ ಭೂಮಿಯ ದ್ರವ್ಯರಾಶಿಗಿಂತ 318 ಪಟ್ಟು ಹೆಚ್ಚು ದ್ರವ್ಯರಾಶಿ ಹೊಂದಿದೆ. ಅಂತೆಯೇ ಭೂಮಿಯ ವ್ಯಾಸಕ್ಕಿಂತ 11 ಪಟ್ಟು ದೊಡ್ಡದಾಗಿದೆ. ಗುರುಗ್ರಹವು ಭೂಮಿಯ ಪರಿಮಾಣಕ್ಕಿಂತ 1,300 ಪಟ್ಟು ಹೆಚ್ಚು ಪರಿಮಾಣ ಹೊಂದಿದೆ. ಅಂದರೆ 1,300 ಭೂಮಿಯನ್ನು ಗುರುಗ್ರಹದಲ್ಲಿ ತುಂಬಬಹುದು. ಸೌರಮಂಡಲದ ಗುರುಗ್ರಹ ಹೊರತುಪಡಿಸಿ, ಇತರ ಎಲ್ಲಾ ಗ್ರಹಗಳ ದ್ರವ್ಯರಾಶಿಯನ್ನು ಸೇರಿಸಿ ಒಂದು ಸೂಪರ್ ಗ್ರಹವನ್ನು ಸಂಯೋಜಿಸಿದರೂ ಸಹ ಗುರು ಅದಕ್ಕಿಂತ ಎರಡೂವರೆ ಪಟ್ಟು ದೊಡ್ಡವನಾಗುತ್ತಾನೆ. ಗಾತ್ರ ಮತ್ತು ದ್ರವ್ಯರಾಶಿಯಲ್ಲಿ ಮಾತ್ರ ಗುರು ದೊಡ್ಡವನಲ್ಲ. ಅನುಯಾಯಿಗಳನ್ನು ಹೊಂದಿದವರಲ್ಲಿ ಗುರುವನ್ನು ಮೀರಿಸುವವರು ಯಾರೂ ಇಲ್ಲ. ಅಂದರೆ ಸೌರವ್ಯೆಹದಲ್ಲಿಯೇ ಅತೀ ಹೆಚ್ಚು ನೈಸರ್ಗಿಕ ಉಪಗ್ರಹಗಳನ್ನು ಹೊಂದಿರುವುದು ಗುರು ಗ್ರಹ ಮಾತ್ರ.

ಈಗಿನ ಮಾಹಿತಿಯಂತೆ ಗುರು ಗ್ರಹಕ್ಕೆ 79 ಸ್ವಾಭಾವಿಕ ಉಪಗ್ರಹಗಳಿವೆ. 1610ರಲ್ಲಿ ಪ್ರಸಿದ್ಧ ಖಗೋಳ ಶಾಸ್ತ್ರಜ್ಞ ಗೆಲಿಲಿಯೋ ಗೆಲಿಲಿ ಗುರುಗ್ರಹದ ನಾಲ್ಕು ಉಪಗ್ರಹಗಳನ್ನು ಪತ್ತೆ ಹಚ್ಚಿದ್ದ. ಅಲ್ಲಿಂದ ಪ್ರಾರಂಭವಾದ ಗುರುವಿನ ಅನುಯಾಯಿಗಳ ಅನ್ವೇಷಣೆ ಈಗಲೂ ಮುಂದುವರಿದಿದೆ. ಖಗೋಳಶಾಸ್ತ್ರಜ್ಞರು ನಿರಂತರವಾಗಿ ಹೊಸ ಹೊಸ ಉಪಗ್ರಹಗಳನ್ನು ಪತ್ತೆ ಹಚ್ಚುತ್ತಲೇ ಇದ್ದಾರೆ. ಸೆಪ್ಟಂಬರ್ 2020ರಲ್ಲಿ ಬ್ರಿಟಿಷ್ ಕೊಲಂಬಿಯಾ ವಿಶ್ವವಿದ್ಯಾನಿಲಯದ ಖಗೋಳಶಾಸ್ತ್ರಜ್ಞರ ತಂಡವೊಂದು ಗುರುವಿನ ಉಪಗ್ರಹಗಳ ಸಮೀಕ್ಷಾ ಕಾರ್ಯದಲ್ಲಿ ತೊಡಗಿದೆ. ಈ ತಂಡದ ಪ್ರಾಥಮಿಕ ಸಮೀಕ್ಷೆಯ ಪ್ರಕಾರ ಗುರುಗ್ರಹಕ್ಕೆ 600ಕ್ಕೂ ಹೆಚ್ಚು ಸಣ್ಣ ಚಂದ್ರರು ಇರಬಹುದು ಎಂದು ತೀರ್ಮಾನಿಸಿದ್ದಾರೆ. ಈ ಉಪಗ್ರಹಗಳ ಕಕ್ಷೆಗಳ ಬಗ್ಗೆ ವಿಶ್ವಾಸಾರ್ಹವಾದ ಅಧ್ಯಯನ ಮಾಡಲು ಹೆಚ್ಚು ಸಮಯಾವಕಾಶ ಬೇಕಾಗುತ್ತದೆ ಎಂದು ತಂಡ ಹೇಳಿದೆ. ಇಂತಹ ಸಮೀಕ್ಷೆ ಹಾಗೂ ಅಧ್ಯಯನಗಳಿಂದ ಗುರುವಿನ ಅನುಯಾಯಿಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಉಳಿದ ಗ್ರಹಗಳಿಗಿಂತ ಗುರು ಗ್ರಹಕ್ಕೆ ಏಕೆ ಹೆಚ್ಚು ಉಪಗ್ರಹಗಳಿವೆ? ಎಂಬ ಪ್ರಶ್ನೆ ಕಾಡುವುದು ಸಹಜ. ಖಗೋಳ ಶಾಸ್ತ್ರಜ್ಞರು ನಮ್ಮ ಸೌರವ್ಯೆಹದಲ್ಲಿನ ಗ್ರಹಗಳನ್ನು ಒಳಗ್ರಹಗಳು ಮತ್ತು ಹೊರಗ್ರಹಗಳು ಎಂದು ಎರಡು ವರ್ಗಗಳಾಗಿ ವಿಂಗಡಿಸಿದ್ದಾರೆ. ಹೊರಗ್ರಹಗಳಾದ ಗುರು, ಶನಿ, ಯುರೇನಸ್, ನೆಪ್ಚೂನ್ ಎಲ್ಲವೂ ಅನಿಲ ದೈತ್ಯ ಗ್ರಹಗಳಾಗಿವೆ. ಗ್ರಹದಲ್ಲಿನ ಅನಿಲ ದೈತ್ಯತೆಯು ಹೆಚ್ಚು ಸ್ವಾಭಾವಿಕ ಉಪಗ್ರಹ ಹೊಂದಲು ಕಾರಣ ಎಂಬುದು ಖಗೋಳತಜ್ಞರ ಅಭಿಮತ.

ಐಸಾಕ್ ನ್ಯೂಟನ್ ಸಹ ಇದೇ ಅಭಿಪ್ರಾಯ ವ್ಯಕ್ತ ಪಡಿಸುತ್ತಾನೆ. ಒಂದು ವಸ್ತುವಿನ ದ್ರವ್ಯರಾಶಿ ಮತ್ತು ಅದರ ಗುರುತ್ವಾಕರ್ಷಣೆಯ ಬಲದ ನಡುವೆ ಸಕಾರಾತ್ಮಕ ಸಂಬಂಧವಿದೆ. ಅನಿಲ ದೈತ್ಯಗಳು ದೊಡ್ಡ ಗಾತ್ರ ಹೊಂದಿರುವುದರಿಂದ ಹೆಚ್ಚಿನ ಉಪಗ್ರಹಗಳನ್ನು ಆಕರ್ಷಿಸಲು ಸಮರ್ಥವಾಗಿವೆ ಎಂದು ನ್ಯೂಟನ್ ಹೇಳುತ್ತಾನೆ. ಗುರುಗ್ರಹ ಹೆಚ್ಚು ಉಪಗ್ರಹಗಳನ್ನು ಹೊಂದಲು ಇರುವ ಮೂಲ ಕಾರಣ ಎಂದರೆ ಗುರುಗ್ರಹದ ಗುರುತ್ವಾ ರ್ಷಣ ಬಲ. ಉಳಿದ ಎಲ್ಲಾ ಗ್ರಹಗಳಿಗಿಂತ ಗುರುಗ್ರಹ ಹೆಚ್ಚು ಗುರುತ್ವಾಕರ್ಷಣ ಬಲ ಹೊಂದಿದೆ. ಭೂಮಿಯ ಮೇಲಿನ ಗುರುತ್ವಾಕರ್ಷಣೆಗಿಂತ ಗುರುವಿನ ಮೇಲೆ ಗುರುತ್ವಾಕರ್ಷಣೆ ಹೆಚ್ಚು. ಭೂಮಿಯ ಮೇಲಿನ 100 ಪೌಂಡ್ ತೂಕದ ವಸ್ತು ಗುರುಗ್ರಹದಲ್ಲಿ 240 ಪೌಂಡ್ ತೂಗುತ್ತದೆ. ಹಾಗಾಗಿ ಭೂಮಿಯ ಗುರುತ್ವಾಕರ್ಷಣೆಗಿಂತ ಗುರುವಿನ ಗುರುತ್ವಾಕರ್ಷಣೆ 2.4 ಪಟ್ಟು ಹೆಚ್ಚು. ಗುರುವಿನಂತಹ ಗ್ರಹಗಳು ಹೆಚ್ಚು ಸ್ವಾಭಾವಿಕ ಉಪಗ್ರಹಗಳನ್ನು ಹೊಂದಲು ಗುರುತ್ವಾಕರ್ಷಣೆಯೊಂದೇ ಕಾರಣವಲ್ಲ ಎಂಬುದು ಇನ್ನೊಂದು ವಾದವಿದೆ. ನಮ್ಮ ಸೌರವ್ಯೆಹದಲ್ಲಿ ಅನಿಲ ದೈತ್ಯರು ತುಲನಾತ್ಮಕವಾಗಿ ಸೂರ್ಯನಿಂದ ದೂರದಲ್ಲಿದ್ದಾರೆ. ಇವುಗಳನ್ನು ಬಿಸಿಗುರುಗಳು ಎನ್ನುತ್ತಾರೆ. ಇಂತಹ ಬಿಸಿಗುರುಗಳು ಸ್ವಲ್ಪವೇ ಚಂದ್ರರನ್ನು ಹೊಂದಿರುತ್ತಾರೆ ಎಂದು ಫ್ರೆಂಚ್ ಖಗೋಳಶಾಸ್ತ್ರಜ್ಞ ಪಾಥಿ ನಮೋನಿಯಾ 2010ರಲ್ಲಿ ಹೇಳಿದ್ದರು. ಸೌರವ್ಯೆಹದ ದೂರದ ಭಾಗಗಳಲ್ಲಿ ಅನೇಕ ಹೊಸ ಗ್ರಹಗಳು ಹುಟ್ಟಿಕೊಳ್ಳುತ್ತವೆ ಮತ್ತು ಅವು ಸೂರ್ಯನೆಡೆಗೆ ಚಲಿಸತೊಡಗುತ್ತವೆ. ಹೀಗೆ ಸೂರ್ಯನೆಡೆಗೆ ಚಲಿಸುವಾಗ ಆಕಸ್ಮತ್ತಾಗಿ ಗುರುವಿನ ಆಕರ್ಷಣೆಗೆ ಒಳಪಟ್ಟು ಅಲ್ಲಿಯೇ ಸಿಕ್ಕಿಹಾಕಿಕೊಳ್ಳುತ್ತವೆ. ಸೂರ್ಯನಿಂದ ದೂರ ಇದ್ದಷ್ಟು ಸೂರ್ಯನ ಗುರುತ್ವಾಕರ್ಷಣೆ ಕಡಿಮೆಯಾಗುತ್ತದೆ. ಹಾಗಾಗಿ ಬಿಸಿಗುರುವಿನ ಆಸುಪಾಸು ಸುಳಿದಾಡುವ ಇನ್ನಿತರ ಹೊಸ ಗ್ರಹಗಳು ಗುರುವಿನ ಆಕರ್ಷಣೆಗೆ ಒಳಪಟ್ಟು ಆತನ ಅನುಯಾಯಿಗಳಾಗುತ್ತಾರೆ ಎಂದು ಪಾಥಿ ನಮೋನಿಯಾ ವಾದಿಸುತ್ತಾರೆ.

ಗುರುವಿನ ಉಪಗ್ರಹಗಳನ್ನು ಒಟ್ಟಾಗಿಸಿ ಜೋವಿಯನ್ ಚಂದ್ರ ಎಂದು ಕರೆಯಲಾಗುತ್ತದೆ. ಈ ಜೋವಿಯನ್ ಚಂದ್ರರಲ್ಲಿ ನಾಲ್ಕು ದೈತ್ಯ ಚಂದ್ರರಿದ್ದಾರೆ. ಈ ನಾಲ್ಕು ಚಂದ್ರಗಳಲ್ಲಿ ಮೂರು ನಮ್ಮ ಭೂಮಿಯ ಚಂದ್ರನಿ ಗಿಂತ ದೊಡ್ಡದಾಗಿವೆ. ಅದರಲ್ಲಿ ‘ಗ್ಯಾನಿಮಿಡ’ ಎಂಬ ಉಪಗ್ರಹವು ಇಡೀ ಸೌರವ್ಯೆಹದ ಅತ್ಯಂತ ದೊಡ್ಡ ಉಪಗ್ರಹ ಎನಿಸಿದೆ. ಗುರುಗ್ರಹದ ಉಪಗ್ರಹಗಳು ವೈವಿಧ್ಯಮಯ ವ್ಯಾಸ ಹೊಂದಿವೆ. ಕೆಲವು ಉಪಗ್ರಹಗಳನ್ನು ಸರಳ ದೂರದರ್ಶಕದಿಂದ ವೀಕ್ಷಿಸಬಹುದಾದಷ್ಟು ದೊಡ್ಡ ಗಾತ್ರದಲ್ಲಿವೆ. ಕೆಲವು ಉಪಗ್ರಹಗಳು ಸಂಯೋಜಿತ ದೂರದರ್ಶಕದಿಂದ ಮಾತ್ರ ನೋಡಬಹುದಾದಷ್ಟು ಚಿಕ್ಕ ಗಾತ್ರದಲ್ಲಿವೆ. ಗುರುಗ್ರಹದ ಕೆಲ ಉಪಗ್ರಹಗಳು ಉಂಗುರ ರಚನೆಯನ್ನು ಹೊಂದಿವೆ. ಇಲ್ಲಿನ ಉಂಗುರಗಳು ಬಹುತೇಕವಾಗಿ ಅನಿಲಗಳಿಂದ ಆವರಿಸಿವೆ. ಗುರುವಿನ ಕೆಲ ಉಪಗ್ರಹಗಳಲ್ಲಿ ಶುಷ್ಕಮಂಜು. ಜ್ವಾಲಾಮುಖಿ ಹಾಗೂ ನೀರಿನ ಅಂಶಗಳಿರುವುದು ಪತ್ತೆಯಾಗಿದೆ. ಬಹುತೇಕ ಹೊರಗಿನ ಉಪಗ್ರಹಗಳು ಕ್ಷುದ್ರಗಳಿಂದ ರೂಪುಗೊಂಡಿವೆ ಎಂದು ನಂಬಲಾಗಿದೆ. ಗುರುಗ್ರಹವು ಪ್ರಬಲ ಕಾಂತಕ್ಷೇತ್ರ ಹೊಂದಿದ್ದು, ಇದೂ ಸಹ ಹೆಚ್ಚು ಉಪಗ್ರಹಗಳನ್ನು ಹೊಂದಲು ಕಾರಣ ಎನ್ನಲಾಗುತ್ತದೆ.

ಗುರುಗ್ರಹದ ಪ್ರಬಲವಾದ ಕಾಂತ್ರಕ್ಷೇತ್ರವು ಅದರ ಹತ್ತಿರ ಹಾದು ಹೋಗುವ ಕ್ಷುದ್ರಗ್ರಹ ಅಥವಾ ಇನ್ನಿತರ ಆಕಾಶಕಾಯಗಳನ್ನು ತನ್ನೆಡೆಗೆ ಸುಲಭವಾಗಿ ಸೆಳೆದುಕೊಳ್ಳುತ್ತದೆ. ಈ ಸೆಳೆತದ ಬಂಧನಕ್ಕೆ ಸಿಲುಕಿದ ಕ್ಷುದ್ರಗ್ರಹ ಕ್ರಮೇಣವಾಗಿ ಅದರ ಅನುಯಾಯಿಯಾಗಿ ಅದರ ಸುತ್ತ ಸುತ್ತಲು ಆರಂಭಿಸುತ್ತದೆ. ಗುರುಗ್ರಹದ ಕಾಂತಕ್ಷೇತ್ರ ಪ್ರಬಲವಾಗಿರುವ ಕಾರಣ ದ್ರವ್ಯರಾಶಿಯೂ ಹೆಚ್ಚಾಗಿದೆ. ಇಂತಹ ಪ್ರಬಲವಾದ ಕಾಂತ್ರಕ್ಷೇತ್ರವನ್ನು ನಮ್ಮ ಭೂಮಿಯೂ ಹೊಂದಿದ್ದರೆ ಇನ್ನಷ್ಟು ಚಂದ್ರರು ಭೂಮಿಯನ್ನು ಸುತ್ತುವರಿಯುತ್ತಿದ್ದರು ಮತ್ತು ಭೂಮಿಯ ದ್ರವ್ಯರಾಶಿ ಇನ್ನಷ್ಟು ಹೆಚ್ಚಾಗಿರುತ್ತಿತ್ತು. ಗುರುಗ್ರಹದ ಉಪಗ್ರಹಗಳು ವೈವಿಧ್ಯಮಯ ಗಾತ್ರ ಹೊಂದಿರುವಂತೆ ಕಕ್ಷಾ ಅವಧಿ ಬೇರೆ ಬೇರೆಯಾಗಿದೆ. ಏಳು ಗಂಟೆಗಳಿಂದ ಸುಮಾರು ಮೂರು ಭೂ ವರ್ಷಗಳವರೆಗಿನ ಕಕ್ಷಾ ಅವಧಿಯನ್ನು ಹೊಂದಿವೆ. ಗುರುಗ್ರಹದ ಉಪಗ್ರಹಗಳು ಅನಿಯಮಿತ ಕಕ್ಷೆಯನ್ನು ಹೊಂದಿವೆ. ಕೆಲ ಹೊರಗಿನ ಉಪಗ್ರಹಗಳು ವಿರುದ್ಧ ದಿಕ್ಕಿನಲ್ಲಿ ಸುತ್ತುತ್ತವೆ. ಹೀಗಾಗಿ ಕೆಲವು ಅಸಾಮಾನ್ಯ ಲಕ್ಷಣಗಳುಳ್ಳ ಉಪಗ್ರಹಗಳಿವೆ. ಗುರುಗ್ರಹದ ಉಪಗ್ರಹಗಳು ತರಗತಿಯಲ್ಲಿ ವಿವಿಧ ಲಕ್ಷಣಗಳುಳ್ಳ ವಿದ್ಯಾರ್ಥಿಗಳಿದ್ದಂತೆ. ಎಲ್ಲಾ ವಿದ್ಯಾರ್ಥಿಗಳನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡು ಅವರಿಗೆ ಕಲಿಕೆಯನ್ನು ಮೂಡಿಸಲು ವಿದ್ಯಾಗುರು ಹೇಗೆ ಶ್ರಮಿಸುವನೋ, ಹಾಗೆ ವಿವಿಧ ದಿಕ್ಕಿನಲ್ಲಿ ಸುತ್ತುವ ವಿವಿಧ ಉಪಗ್ರಹಗಳೆಲ್ಲವನ್ನು ನಿಯಂತ್ರಿಸುವ ಗುರುಗ್ರಹ ನಿಜಕ್ಕೂ ದೊಡ್ಡವನಲ್ಲವೇ? ಗುರುವಿನ ಸಾಮರ್ಥ್ಯಕ್ಕೆ ತಕ್ಕಂತೆ ಅವನಿಗೆ ಅನುಯಾಯಿಗಳೂ ಸಹ ಹೆಚ್ಚಾಗಿರುವುದು ಸರಿಯಿದೆಯಲ್ಲವೇ?

Writer - ಆರ್. ಬಿ. ಗುರುಬಸವರಾಜ

contributor

Editor - ಆರ್. ಬಿ. ಗುರುಬಸವರಾಜ

contributor

Similar News